ಸವಾಲನ್ನು ಸ್ವೀಕರಿಸದೇ ಹೋದ ಸಾಹಿತ್ಯ ಪರಿಷತ್ತು- ಜಿ.ಪಿ.ಬಸವರಾಜು

[ದೇವನೂರ ಮಹಾದೇವ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಸಕಾರಣಗಳಿಂದ ನಿರಾಕರಿಸಿದ ಸಂದರ್ಭದಲ್ಲಿ ಜಿ.ಪಿ.ಬಸವರಾಜು ಅವರು ತಮ್ಮ ಸಂಯುಕ್ತ ಕರ್ನಾಟಕದ ಅಂಕಣದಲ್ಲಿ 18.1.2015ರಂದು ಈ ಲೇಖನವನ್ನು ಪ್ರಕಟಿಸಿದ್ದು, 19.1.2015ರ ಅವಧಿ ಅಂತರ್ಜಾಲ ತಾಣದಲ್ಲಿ ಇದು ಮರು ಪ್ರಕಟಗೊಂಡಿದೆ.]

ದೇವನೂರು ಮಹಾದೇವ ಒಂದು ಸಣ್ಣ ಬಿರುಗಾಳಿಯನ್ನು ಎಬ್ಬಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಾಗಿದ್ದರೆ, ಈ ಬಿರುಗಾಳಿ ಬಹುದೊಡ್ಡ ಚಂಡಮಾರುತವಾಗಿ ಇಡೀ ನಾಡನ್ನು ಆವರಿಸಿಬಿಡುವ ಸಾಧ್ಯತೆ ಇತ್ತು. ಈ ಚಂಡಮಾರುತ ಕನ್ನಡ ನಾಡಿನ ಆಶೋತ್ತರಗಳನ್ನು ಹೊತ್ತು ದೆಹಲಿಯತ್ತ ಬೀಸಬಹುದಾಗಿತ್ತು. ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಭಾರತೀಯ ಜನತಾ ಪಕ್ಷದ ಸರ್ಕಾರ ಬೆಚ್ಚಿಬಿದ್ದು ರಾಜ್ಯ ಭಾಷೆಗಳನ್ನು, ಸಣ್ಣ ಸಣ್ಣ ತಾಯಿನುಡಿಗಳನ್ನು ಹೊಸ ಬೆಳಕಿನಲ್ಲಿ ನೋಡುವ ಸಾಧ್ಯತೆ ಇತ್ತು.

ಸಂವಿಧಾನದಲ್ಲಿ 22 ಭಾಷೆಗಳನ್ನು ಮಾನ್ಯಮಾಡಿರುವ ನಮ್ಮ ಒಕ್ಕೂಟ ವ್ಯವಸ್ಥೆ ಸಮಾನತೆಯನ್ನು ತಾತ್ವಿಕವಾಗಿ ಒಪ್ಪಿಕೊಂಡಿದ್ದರೂ, ಆಚರಣೆಯಲ್ಲಿ ಈ ಸಮಾನತೆ ಇನ್ನೂ ಸಾಧ್ಯವಾಗಿಲ್ಲ. ರಾಜ್ಯಗಳಿಗಿರುವ ಅಧಿಕಾರ ಇನ್ನೂ ಪೂರ್ಣವಾಗಿ ರಾಜ್ಯಗಳಿಗೆ ದಕ್ಕಿಲ್ಲ. ಎಲ್ಲ ಭಾಷೆಗಳು, ಸಂಸ್ಕೃತಿಗಳು, ಜನ ಸಮುದಾಯಗಳು ಸಮಾನವೆಂದು ಹೇಳಿದರೂ ಇನ್ನೂ ಕೆಲವು ಭಾಷೆಗಳ, ಸಂಸ್ಕೃತಿಗಳ ಆಟಾಟೋಪವನ್ನು ತಗ್ಗಿಸಲು ಸಾಧ್ಯವಾಗಿಲ್ಲ. ಇದಕ್ಕೆ ರಾಜಕೀಯ ವ್ಯವಸ್ಥೆಯ ಜೊತೆಗೆ ನಮ್ಮ ಸಾಮಾಜಿಕ, ಆರ್ಥಿಕ ವ್ಯವಸ್ಥೆಗಳೂ ಕಾರಣವಾಗಿರಬಹುದು. ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ನಮಗಿರುವ ಗೊಂದಲವೂ ತನ್ನ ಕೊಡುಗೆಯನ್ನು ನೀಡಿರಬಹುದು. ನಮ್ಮ ಶಿಕ್ಷಣ ವ್ಯವಸ್ಥೆ ಇನ್ನೂ ನೇರವಾದ ದಾರಿಯಲ್ಲಿ ಸ್ಪಷ್ಟ ಗುರಿಯತ್ತ ಸಾಗದೆ ಇರುವುದಕ್ಕೆ ಇದೆಲ್ಲವೂ ಕಾರಣವಾಗಿರಬಹುದು.

ಭಾಷಾವಾರು ಪ್ರಾಂತ್ಯಗಳ ನಿರ್ಮಾಣವಾದ ನಂತರ ಪ್ರತಿರಾಜ್ಯದಲ್ಲಿ ಆಯಾ ಪ್ರಾದೇಶಿಕ ಭಾಷೆ, ಪರಿಸರ ಭಾಷೆಯಾಗಿ ಎಲ್ಲ ವ್ಯವಹಾರಗಳಿಗೆ ಒದಗಿಬರಬೇಕಾಗಿತ್ತು. ಶಿಕ್ಷಣ, ಆಡಳಿತ, ನ್ಯಾಯಾಂಗ ವ್ಯವಸ್ಥೆ ಹೀಗೆ ಎಲ್ಲ ರಂಗಗಳಲ್ಲೂ ರಾಜ್ಯ ಭಾಷೆ ಪ್ರಾಧಾನ್ಯತೆಯನ್ನು ಪಡೆದುಕೊಂಡಿದ್ದರೆ, ರಾಜ್ಯಗಳ ವಿಕಾಸ ನಿಜವಾದ ಅರ್ಥದಲ್ಲಿ ಸಾಧ್ಯವಾಗುತ್ತಿತ್ತು. ವಿಕಾಸವೆಂದರೆ ಕೇವಲ ಆರ್ಥಿಕ ವಿದ್ಯಮಾನಗಳಿಗೆ ಸೀಮಿತವಾಗಬೇಕಾಗಿಲ್ಲ; ಅದು ಎಲ್ಲ ವಿದ್ಯಮಾನಗಳಿಗೂ ಹಬ್ಬಿಕೊಳ್ಳಬೇಕು. ಜನ ತಮ್ಮ ಭಾಷೆಯಲ್ಲಿ ಸುಲಭವಾಗಿ ತಿಳಿಯಲು, ವ್ಯವಹರಿಸಲು ಸಾಧ್ಯವಾಗಬೇಕು.

ಹಾಸನದಲ್ಲಿ ನಡೆಯಲಿರುವ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೀಠವನ್ನು ಅಲಂಕರಿಸಿ, ಮೈಸೂರು ಪೇಟವನ್ನು ಧರಿಸಿ ಮೆರವಣಿಗೆ ಮಾಡಿಸಿಕೊಳ್ಳಬೇಕಾಗಿದ್ದ ದೇವನೂರು- ಈ ರಮ್ಯ, ಅಲಂಕಾರಿಕತೆಯನ್ನು ನಯವಾಗಿ ನಿರಾಕರಿಸಿದ್ದಾರೆ. ಇಂಥ ಸಮ್ಮೇಳನಗಳ ಸಾರ್ಥಕತೆ ಯಾವುದರಿಂದ ಸಾಧ್ಯ ಎಂಬುದನ್ನು ಚಿಂತಿಸಿ ಸ್ಪಷ್ಟವಾದ ಮಾತುಗಳನ್ನು ಆಡಿದ್ದಾರೆ. ಪರಿಷತ್ತು ಈ ಮಾತುಗಳನ್ನು ಕೇವಲ ಸಾಹಿತಿಯೊಬ್ಬರ ಹೇಳಿಕೆಯಾಗಿ ಮಾತ್ರ ನೋಡಬಾರದಿತ್ತು. ಕನ್ನಡ ನಾಡಿನ ಬದುಕನ್ನು, ಜನರ ಸ್ಥಿತಿಗತಿಗಳನ್ನು ಸರಿಪಡಿಸುವ ದಿಕ್ಕಿನಲ್ಲಿ, ಮೊದಲಿನಿಂದಲೂ ಗಂಭೀರವಾಗಿ ಚಿಂತಿಸುತ್ತ, ಮಾತನಾಡುತ್ತ, ಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತ ಬಂದಿರುವ ಮಹಾದೇವ, ಕನ್ನಡ ನಾಡಿನ ಮಕ್ಕಳ ಶಿಕ್ಷಣದ ವಿಚಾರದಲ್ಲಿ ತಲೆಕೆಡಿಸಿಕೊಂಡು, ನಿಜವಾಗಿಯೂ ಇಲ್ಲಿ ಆಗಬೇಕಾಗಿರುವುದೇನು ಎಂಬುದನ್ನು ಕಂಡುಕೊಂಡು ಆಡಿರುವ ಮಾತುಗಳು ಪರಿಷತ್ತಿನ ಕಣ್ಣು ತೆರೆಸಬೇಕಾಗಿತ್ತು.

ಮಹಾದೇವ ಇವತ್ತಿನ ಸಮಾಜದ ಸುಡುಬೆಂಕಿಯ ಒಡಲಲ್ಲಿ ನಿಂತು ಮಾತನಾಡಿದ್ದಾರೆ. ದಿಕ್ಕೆಟ್ಟ ಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳು ಒಂದು ತುದಿಯಲ್ಲಿದ್ದರೆ, ಶಿಕ್ಷಣವನ್ನು ವ್ಯಾಪಾರವಾಗಿ ಮಾಡಿಕೊಂಡು ಸಂಪತ್ತಿನ ಕೋಟೆಗಳನ್ನು ಕಟ್ಟುತ್ತಿರುವ ಖಾಸಗೀ ಶಿಕ್ಷಣ ಸಂಸ್ಥೆಗಳ ವಿದ್ಯಾಕೇಂದ್ರಗಳು ಇನ್ನೊಂದು ತುದಿಯಲ್ಲಿವೆ. ಇವುಗಳ ಮಧ್ಯೆ ಮಕ್ಕಳು ಪ್ರಯೋಗ ಪಶುಗಳಾಗಿ ಬಲಿಯಾಗುತ್ತಿವೆ. ಉಡುಗೆ, ತೊಡುಗೆ, ವಾಹನ, ಇಂಗ್ಲಿಷ್ ಮಾಧ್ಯಮದ ತೋರುಗಾಣಿಕೆ ಇತ್ಯಾದಿಗಳ ಆಕರ್ಷಣೆಯಲ್ಲಿ ಒಂದು ವರ್ಗದ ಮಕ್ಕಳು; ಹೇಗಾದರೂ ಸರಿ, ಶಾಲೆಯ ಮುಖವನ್ನು ನೋಡಿದರೆ ಸಾಕು ಎಂದು ಅರೆಹೊಟ್ಟೆಯಲ್ಲಿ ಶಾಲೆಗೆ ಬರುವ ಇನ್ನೊಂದು ವರ್ಗದ ಮಕ್ಕಳು. ಮಕ್ಕಳು ಹೇಗೆ ಕಲಿಯುತ್ತಿದ್ದಾರೆ, ಏನು ಕಲಿಯುತ್ತಿದ್ದಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದ ಒಟ್ಟು ವ್ಯವಸ್ಥೆಯ ಭಾಗವಾಗಿ ಎಲ್ಲ ಮಕ್ಕಳೂ ಅನಾಥರಾದಂತೆಯೂ ಕಾಣಿಸುತ್ತಿದ್ದಾರೆ.

ಮಹಾದೇವ ಈ ನಾಡಿನ ಎಲ್ಲ ಮಕ್ಕಳ ಬಗ್ಗೆ ಚಿಂತಿಸಿದ್ದಾರೆ. ಮಕ್ಕಳು, ವಿಶೇಷವಾಗಿ ಪ್ರಾಥಮಿಕ ಹಂತದ ಮಕ್ಕಳು ಕಲಿಯಬೇಕಾದದ್ದು ಯಾವ ಭಾಷೆಯಲ್ಲಿ? ಅಂದರೆ ಅವರ ಶಿಕ್ಷಣ ಮಾಧ್ಯಮಕ್ಕೆ ಒದಗಿಬರಬೇಕಾದ ಭಾಷೆ ಯಾವುದು ಎಂದು ಅವರು ತಡಕಾಡಿದ್ದಾರೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಆಯಾ ರಾಷ್ಟçದ ತಾಯಿನುಡಿಯೇ ಎಳೆಯ ಕಂದಮ್ಮಗಳ ಕಲಿಯುವ ಭಾಷಾ ಮಾಧ್ಯಮವಾಗಿದೆ ಎಂಬುದನ್ನು ಅವರು ಗಮನಿಸಿದ್ದಾರೆ. ಜಗತ್ತಿನ ಶ್ರೇಷ್ಠ ಚಿಂತಕರು, ಶಿಕ್ಷಣ ಕ್ಷೇತ್ರದ ತಜ್ಞರು, ಮನೋವಿಜ್ಞಾನಿಗಳು, ಭಾಷಾ ವಿಜ್ಞಾನಿಗಳು ಹೇಳಿರುವುದೆಲ್ಲ ಇದೇ ಸಂಗತಿಯನ್ನು. ತನ್ನ ತಾಯಿನುಡಿಯಲ್ಲಿ ಮಗು ಕಲಿಯಲು ಆರಂಭಿಸಿದರೆ ಅದು ನಿಜವಾದ ಕಲಿಕೆಯಾಗುತ್ತದೆ. ವಿಷಯ ಗ್ರಹಣ ಹಗುರವಾಗುವುದು ತಾಯಿನುಡಿಯಲ್ಲಿ ತಿಳಿಸಿಕೊಟ್ಟಾಗಲೇ. ಗಾಂಧೀಜಿಯವರೂ ಇದನ್ನೇ ಹೇಳಿದ್ದರು. ಆದರೆ ಅದು ನಮ್ಮ ರಾಷ್ಟçದಲ್ಲಿ ಈವರೆಗೂ ಸಾಧ್ಯವಾಗಿಲ್ಲ. ಇಂಗ್ಲಿಷ್ ಬಗೆಗಿರುವ ತೀವ್ರ ವ್ಯಮೋಹ ಮತ್ತು ಅದು ಆರ್ಥಿಕ ಜಗತ್ತಿನೊಂದಿಗೆ ಇಟ್ಟುಕೊಂಡಿರುವ ಲಾಭದಾಯಕ ಸಂಬಂಧ ಕಾರಣವಾಗಿ ಇವತ್ತು ನಮ್ಮ ಜನ ಇಂಗ್ಲಿಷನ್ನು ಬೆನ್ನು ಹತ್ತಿದ್ದಾರೆ. ಇಂಗ್ಲಿಷನ್ನು ಒಂದು ಭಾಷೆಯಾಗಿ ಯಾರೂ ಕಲಿಯಬಹುದು; ಅದರ ಎಲ್ಲ ಲಾಭಗಳನ್ನೂ ಪಡೆದುಕೊಳ್ಳಬಹುದು. ಆದರೆ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಬೋಧಿಸುವ ಭಾಷಾ ಮಾಧ್ಯಮಕ್ಕೆ ಇಂಗ್ಲಿಷ್ ಭಾಷೆಯೇ ಯಾಕೆ ಬೇಕು?

ಮಹಾದೇವ ಇನ್ನೊಂದು ದಿಕ್ಕಿನಲ್ಲಿಯೂ ಚಿಂತಿಸಿದ್ದಾರೆ. ಇವತ್ತು ಹೆಚ್ಚುತ್ತಿರುವ ಖಾಸಗೀ ಶಾಲೆಗಳ ಹಾವಳಿಯ ಮೇಲೆ ನಿಯಂತ್ರಣ ತರುವುದು ಹೇಗೆ? ಇದಕ್ಕೆ ಅನೇಕ ಸೂಚನೆಗಳನ್ನು ಅವರು ನೀಡಿದ್ದಾರೆ. ಖಾಸಗೀ ಶಾಲೆಗಳ ಪ್ರವೇಶ ಆ ಶಾಲೆಯ ಆಡಳಿತವರ್ಗದ ಕೈಯಲ್ಲಿ ಮಾತ್ರ ಇರಬಾರದು. ಆ ಪ್ರದೇಶದ ಶಿಕ್ಷಣ ಅಧಿಕಾರಿ, ಅಲ್ಲಿನ ಜನಪ್ರತಿನಿಧಿಗಳು ಹೀಗೆ ಸಂಬಂಧಿಸಿದವರ ನಿಯಂತ್ರಣದಲ್ಲಿದ್ದರೆ ಪ್ರವೇಶಕ್ಕಾಗಿ ಇರುವ ವಂತಿಕೆ ಹಾವಳಿಯನ್ನು ತಡೆಯಬಹುದು ಎಂದೂ ಮಹಾದೇವ ಸೂಚಿಸುತ್ತಾರೆ. ಇನ್ನೊಂದು ಮುಖ್ಯ ಅಂಶವನ್ನೂ ಅವರು ಸೂಚಿಸುತ್ತಾರೆ. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಶೇ ೫೧ರಷ್ಟು ಮಕ್ಕಳು ಅಲ್ಪಸಂಖ್ಯಾತರ ಮಕ್ಕಳೇ ಇರಬೇಕೆಂಬ ನಿಯಮ ತರುವುದು ಅಗತ್ಯ. ನಿಧಾನಕ್ಕೆ ಯೋಚಿಸಿ ನೋಡಿದರೆ ಈ ಕೊನೆಯ ಅಂಶದಲ್ಲಿರುವ ಸಂಗತಿಗಳು ಅರ್ಥವಾಗುತ್ತವೆ.

ಮಹಾದೇವ ಅವರ ಮಾತುಗಳನ್ನು ಕೇಂದ್ರವಾಗಿಟ್ಟುಕೊಂಡು ಇಡೀ ಕನ್ನಡ ನಾಡು ಒಂದು ರಾಜಕೀಯ ಒತ್ತಡವನ್ನು ಹೇರುವುದು ಸಾಧ್ಯವಾದರೆ ಅದು ತಾಯಿನುಡಿಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡಬೇಕೆಂಬ ಚಳವಳಿಗೆ ಹೊಸ ಶಕ್ತಿಯನ್ನು ತುಂಬಬಹುದು. ಅಂಥ ಚಳವಳಿ ನಿಜವಾದ ಬದಲಾವಣೆಯನ್ನು ತರುತ್ತದೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಇಂಥ ಚಿಂತನೆಯ, ಅದರ ಫಲವಾದ ಚಳವಳಿಯ ನಾಯಕತ್ವವನ್ನು ವಹಿಸಬೇಕೆಂದು ಮಹಾದೇವ ಅಪೇಕ್ಷಿಸುತ್ತಾರೆ.

ಇದೊಂದು ಮಹತ್ವದ ಅವಕಾಶ; ಬಹುದೊಡ್ಡ ಸವಾಲು. ಈ ಸವಾಲನ್ನು ಪರಿಷತ್ತು ಅಂಗೀಕರಿಸಬೇಕಾಗಿತ್ತು. ಮೂರ್ನಾಲ್ಕು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಜಾತ್ರೆಯಂಥ ಸಮ್ಮೇಳನವನ್ನು ಪ್ರತಿವರ್ಷ ಮಾಡಿಕೊಂಡು, ಅಧ್ಯಕ್ಷರನ್ನು ಅಲಂಕಾರದ ಬೊಂಬೆಯಂತೆ ‘ರಾಜಬೀದಿ’ಗಳಲ್ಲಿ ಮೆರವಣಿಗೆ ಮಾಡುವ ಪ್ರಹಸನವನ್ನು ಒಂದು ವರ್ಷದ ಮಟ್ಟಿಗಾದರೂ ಕೈಬಿಡಬಹುದಾಗಿತ್ತು. ಕನ್ನಡ ಪರ ಚಿಂತನೆಯನ್ನು ತಾನೂ ಬೆಂಬಲಿಸುತ್ತೇನೆ; ಅರ್ಥಪೂರ್ಣ ಹೋರಾಟದ ಮುಂದಾಳತ್ವವನ್ನು ವಹಿಸುತ್ತೇನೆ ಎಂಬ ಜಾಣ್ಮೆಯನ್ನು ಪರಿಷತ್ತು ತೋರಿಸಬಹುದಿತ್ತು. ಮಹಾದೇವ ಒದಗಿಸಿಕೊಟ್ಟ ಸುವರ್ಣಾವಕಾಶವನ್ನು ಕಡೆಗಣಿಸಿ ಪರಿಷತ್ತು ಕೋಡಂಗಿಯಂತಾಗಿದೆ.

ಲಕ್ಷಾಂತರ ಜನ ಸೇರಿದರು, ಊಟ ಅದ್ಭುತವಾಗಿತ್ತು, ವಸತಿ ಮತ್ತಿತರ ಸೌಕರ್ಯಗಳಲ್ಲಿ ಅಚ್ಚುಕಟ್ಟುತನವಿತ್ತು ಇತ್ಯಾದಿ ಹಾಡಿದ್ದೇ ಹಾಡುವ ಜಾಡನ್ನು ಬಿಟ್ಟು ಒಂದು ಸಮ್ಮೇಳನದ ಬದಲು ಒಂದು ಚಳವಳಿಯನ್ನು ಮುಂದುವರಿಸುವ ಪ್ರಬುದ್ಧತೆಯನ್ನು ಪರಿಷತ್ತು ತೋರಿಸಲಿಲ್ಲ. ಈಗ ಎಂದಿನಂತೆ ಸರ್ಕಾರದ ಮುಂದೆ ಜೋಳಿಗೆಯನ್ನು ಹಿಡಿಯುತ್ತ, ಮಠಗಳು, ಧರ್ಮಾಧೀಶರ ಮುಂದೆ ಡೊಗ್ಗು ಸಲಾಮು ಹಾಕುತ್ತ, ರಾಜಕಾರಣಿಗಳ ಮರ್ಜಿಯಲ್ಲಿ ಜಾತ್ರೆಯನ್ನು ನಡೆಸುವ ‘ಮಹಾನ್’ ಕಾರ್ಯಕ್ಕೆ ಪರಿಷತ್ತು ತನ್ನನ್ನು ಒಪ್ಪಿಸಿಕೊಂಡಿದೆ.

ನೂರು ವರ್ಷಗಳ ಇತಿಹಾಸವಿರುವ ಪರಿಷತ್ತು ಕನ್ನಡ ನಾಡಿನ ಅನೇಕ ಮುಖ್ಯ ಘಟ್ಟಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಉಳಿದುಕೊಂಡು ಬಂದಿದೆ. ಅದು ಚಾರಿತ್ರಕ ಸಂದರ್ಭಗಳಲ್ಲಿ ನೀಡಿರುವ ಕೊಡುಗೆಯನ್ನೂ ಕಡೆಗಣಿಸುವಂತಿಲ್ಲ. ಈ ಪರಿಷತ್ತು ದಣಿದಿದೆ, ಕ್ರಿಯಾಶೀಲ ಶಕ್ತಿಯನ್ನು ಕಳೆದುಕೊಂಡಿದೆ, ಅದನ್ನು ವಿಸರ್ಜಿಸಿ, ಹೊಸ ಪರಿಷತ್ತನ್ನು ಕಟ್ಟೋಣ ಎಂದವರಿದ್ದಾರೆ. ಕವಿ ಗೋಪಾಲಕೃಷ್ಣ ಅಡಿಗರು ದಶಕಗಳ ಹಿಂದೆ ಇಂಥ ಮಾತನ್ನು ಆಡಿದ್ದರು. ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿಕೊಂಡದ್ದೇ ಪರಿಷತ್ತಿನ ಸಾಂಸ್ಥಿಕ ಜಡತ್ವವನ್ನು ವಿರೋಧಿಸಿಯೇ. ಲಂಕೇಶರಂತೂ ಈ ಪರಿಷತ್ತನ್ನು ಅನೇಕ ಸಂದರ್ಭಗಳಲ್ಲಿ ಕಟುವಾಗಿ ಟೀಕಿಸಿದರು. ಇವರೆಲ್ಲರ ಕೋಪಕ್ಕೆ ಕಾರಣ ಪರಷತ್ತಿನ ಜಡತ್ವ. ಅದನ್ನು ಎಂದೂ ಪರಿಷತ್ತು ಗಂಭೀರವಾಗಿ ತೆಗೆದುಕೊಂಡಂತೆ ಕಾಣಿಸಲಿಲ್ಲ; ಪರಿಷತ್ತನ್ನು ಹೊಸ ಆಶಯದಲ್ಲಿ ಮತ್ತೆ ಕಟ್ಟಲಿಲ್ಲ. ಹೀಗಾಗಿಯೇ ಪರಿಷತ್ತು ವಾರ್ಷಿಕ ಜಾತ್ರೆಯ ಮಟ್ಟಕ್ಕೇ ನಿಂತಿರುವುದು.

ಈಗ ಮಹಾದೇವ, ಪರಿಷತ್ತನ್ನು ವಿಸರ್ಜಿಸುವ ಮಾತನ್ನು ಆಡಿಲ್ಲ; ಹೊಸ ಪರಿಷತ್ತನ್ನು ಕಟ್ಟುವ ಮಾತನ್ನೂ ಅವರು ಹೇಳಿಲ್ಲ. ಪರಿಷತ್ತು ನಡೆಯಬೇಕಾದ ದಿಕ್ಕನ್ನು ಸೂಚಿಸಿದ್ದಾರೆ. ಇದನ್ನು ಪರಿಷತ್ತು ಅರಿಯಲಿಲ್ಲ ಎಂಬುದು ಎಲ್ಲ ಕನ್ನಡಿಗರ ನೋವಿನ ವಿಚಾರ.