‘ಕುಸುಮಬಾಲೆ’ ಕುರಿತು -ಡಿ.ಎಸ್‌.ನಾಗಭೂಷಣ 

[1989ರಲ್ಲಿ ‘ಕುಸುಮಬಾಲೆ’ ಪ್ರಕಟವಾದಾಗ ಡಿ.ಎಸ್.ನಾಗಭೂಷಣ  ಅವರು ದೇವನೂರ ಮಹಾದೇವ ಅವರಿಗೆ ಬರೆದ ಪತ್ರ. 2013ರಲ್ಲಿ  ಡಿ.ಎಸ್.ನಾಗಭೂಷಣ ಅವರ ಈವರೆಗಿನ ಸಾಹಿತ್ಯ ವಿಮರ್ಶೆಗಳ ಸಂಗ್ರಹವಾದ ‘ರೂಪರೂಪಗಳನು ದಾಟಿ’ ಕೃತಿಯಲ್ಲಿ ದಾಖಲಾಗಿದೆ. ಹುಡುಕಿ ನಮ್ಮ ಬನವಾಸಿಗೆ ಕಳಿಸಿದ ಉಪನ್ಯಾಸಕರಾದ ಶ್ರೀಧರ.ಆರ್ ಅವರಿಗೆ ಧನ್ಯವಾದಗಳು. ]
ಪ್ರೀತಿಯ ಮಹಾದೇವ,
‘ಕುಸುಮಬಾಲೆ’ ತಲುಪಿದೆ. ಓದಿದೆ. ಮತ್ತೊಮ್ಮೆ ಓದಿದೆ. ಕಲ್ಲೂ ನೀರೂ ಕರಗುವ ಹೊತ್ತಿನಲ್ಲಿ ಮಾತ್ರ ಕರಗುವ ಕತೆ ಇದು. ನನ್ನೊಳಗೊಂದಿಷ್ಟು ಕರಗಿತು. ನೀನು ಬಹಳ ದೂರ ಜಿಗಿದಿರುವೆ. ಆದರೆ, ಜಿಗಿದಿರುವುದು ಕಾಣಿಸುತ್ತದೆ. ಇದೇ ಈ ಕತೆಯ ದೌರ್ಬಲ್ಯ ಎಂಬುದು ನನ್ನ ಸದ್ಯದ ಅನಿಸಿಕೆ. ಒಂದು ಭಾಷೆಯನ್ನು ನಾಶ ಮಾಡುವ ಮತ್ತು ಅದರ ಪಾಳಿನಲ್ಲೇ ಹೊಸ ಭಾಷೆಯನ್ನು ಕಟ್ಟುವ ನಿನ್ನ ಪ್ರಯತ್ನ ಮಗುವಿನ ಪ್ರಯತ್ನದಷ್ಟೇ ಮುದ್ದುಮುದ್ದಾಗಿದೆ. ಮತ್ತು ಮೊದ್ದುಮೊದ್ದಾಗಿಯೂ ಇದೆ.
ಕತೆಯ ಕಾಲಾಂತರ ತುಂಬ ದೊಡ್ಡದು. ಕಾಲವನ್ನು ಹಿಂಜಿ ನೋಡುವ ನಿನ್ನ ಕಲೆಗಾರಿಕೆಯಿಂದಾಗಿ ಇದು ಇನ್ನಷ್ಟು ದೊಡ್ಡದಾಗಿ ಗೋಚರವಾಗುತ್ತದೆ. ಆದುದರಿಂದ ಕತೆ ಹಾಳುಬಿದ್ದ ಊರೊಂದನ್ನು ಆಕಾಶದಿಂದ  ನೋಡಿದಂತೆನಿಸುತ್ತದೆ- ಎಲ್ಲವೂ ಬಿಡಿಬಿಡಿಯಾದ ಆಕಾರಗಳಂತೆ, ಸಂಕೇತಗಳಂತೆ. ಓದುಗನೂ ನಿನ್ನಷ್ಟೇ ಕಲೆಗಾರ ಮತ್ತು ಯೋಗಿಯಾಗದ ಹೊರತು ಅದು ಊರೆಂಬುದೇ ಗೊತ್ತಾಗುವುದಿಲ್ಲ.
ಸದ್ಯಕ್ಕೆ ಇಷ್ಟು ಸಾಕು
ನಿನ್ನ 
-ಡಿ.ಎಸ್‌. ನಾಗಭೂಷಣ