ಸಂಬಂಜ ದೊಡ್ಡದೆಂದ ಮಹಾದೇವ

 [ದೇವನೂರ ಮಹಾದೇವ ಅವರ ಸಾಹಿತ್ಯ ಕುರಿತು 2013ರಲ್ಲಿ ಅಭಿನವ ಪ್ರಕಾಶನದಿಂದ ಪರಿಷ್ಕೃತಗೊಂಡು ಪ್ರಕಟವಾದ ‘ಯಾರ ಜಪ್ತಿಗೂ ಸಿಗದ ನವಿಲುಗಳು’ ಸಂಕಲನ ಕುರಿತು 10.11.2013 ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ಬಂದ ಪರಿಚಯ, ಬರೆದವರು-ವಿಶ್ವನಾಥ್]

ಸಮಕಾಲೀನ ಕನ್ನಡದ ಹಿರಿಯ ಸಾಹಿತಿ ಮತ್ತು ಚಿಂತಕ ದೇವನೂರ ಮಹಾದೇವ ಅವರ ವ್ಯಕ್ತಿತ್ವ ಮತ್ತು ಕೃತಿಗಳ ಮೌಲ್ಯವನ್ನು ಕಡೆದಿಡುವ ಪ್ರಯತ್ನವಾಗಿ ಪಿ.ಚಂದ್ರಿಕಾ ಅವರು ‘ಯಾರ ಜಪ್ತಿಗೂ ಸಿಗದ ನವಿಲುಗಳು’ ಎಂಬ ಲೇಖನಗಳ ಸಂಕಲನವನ್ನು ಸಂಪಾದಿಸಿದ್ದಾರೆ. ಮಹಾ ಮೌನಿಯಾಗಿ ಹೊರಗೆ ಕಾಣುವ ಆದರೆ ಒಳಗೆಲ್ಲೋ ತುಂಬಾ ತುಂಟತನವನ್ನು ಉಳಿಸಿಕೊಂಡಿರುವ ಮಹಾದೇವ ಅವರ ಬಗ್ಗೆ ಅನೇಕರು ಇಲ್ಲಿ ಪ್ರೀತಿ ತುಂಬಿದ ಮಾತುಗಳನ್ನು ಬರೆದಿದ್ದಾರೆ. ಹಲವರಿಗೆ ಇದುವರೆಗೆ ಅಪರಿಚಿತವಾದ ಮುಖಗಳ ದರ್ಶನ ಇಲ್ಲಿ ಆಗುತ್ತದೆ.

 

ತಮ್ಮ ಬರೆಹದ ಬಗ್ಗೆ ದೇವನೂರ ಅವರು ಎರಡು ಉಪಮೆಗಳ ಹೇಳಲು ಯತ್ನಿಸಿದ್ದಾರೆ. ನಾನೊಬ್ಬ ಬರಹಗಾರ ಎಂದುಕೊಂಡಾಗ ನನಗೆ ಎರಡು ಕಥೆಗಳು ಮನಸ್ಸಿಗೆ ಬರುತ್ತವೆ. ಒಂದು ಕ್ರಿಸ್ತ ಪೂರ್ವದಲ್ಲಿದ್ದ ಆದಿನಾಥನೆಂಬ ಜೈನ ದೊರೆಯದ್ದು. ಆತ ಒಂದು ಬೆಳಗ್ಗೆ ಎದ್ದು ನೋಡುತ್ತಾನೆ. ಆತನ ತಲೆಯ ಒಂದು ಕೂದಲು ನರೆತಿದೆ. ಅವನಿಗೆ ತಕ್ಷಣವೇ ಬದುಕಿನ ಕ್ಷಣಿಕತೆ, ಹುಟ್ಟು ಸಾವು ಎಲ್ಲದರ ದರ್ಶನವಾಯಿತು. ಅವನು ರಾಜ್ಯ, ಕೋಶ ಎಲ್ಲ ಬಿಟ್ಟು ತಪಸ್ಸು ಮಾಡಲು ಕಾಡಿಗೆ ಹೊರಟುಹೋದ. ಇನ್ನೊಂದು, ಸುಮಾರು ನನ್ನ ಥರದ ಮನುಷ್ಯನಿಗೆ ಸಂಬಂಧಿಸಿದ್ದು. ಅವನು ಒಂದು ದಿನ ನದಿಯೊಂದರಲ್ಲಿ ನೀರು ಕುಡಿಯುತ್ತಿದ್ದಾಗ ಅವನ ಬೊಗಸೆಯಲ್ಲಿ ಒಂದು ಉದ್ದನೆಯ ಕೂದಲು ಕಂಡಿತು. ತಕ್ಷಣ ಅವನ ಕಣ್ಣಮುಂದೆ ಒಬ್ಬ ಸುಂದರ ಹೆಣ್ಣಿನ ರೂಪ ಮೂಡಿತು. ಈ ಕೂದಲೇ ಇಷ್ಟೊಂದು ಮೋಹಕವಾಗಿರುವಾಗ ಈ ಕೂದಲನ್ನು ಪಡೆದ ಹೆಣ್ಣು ಇನ್ನೆಷ್ಟು ಚೆಲುವೆಯಾಗಿರಬೇಕು ಎಂದು ಯೋಚಿಸಿದ. ಅವನು ಆ ಹೆಣ್ಣನ್ನು ಹುಡುಕಿ ಅವಳ ಒಲವನ್ನು ಗಳಿಸಲು ಹೆಣಗತೊಡಗಿದ. ನನ್ನ ಬರವಣಿಗೆ ಈ ಎರಡರ ಮಧ್ಯೆ ಇರುವಂತಹದು.

 

 ಒಂದು ವಿರಕ್ತಿಯಾದರೆ ಇನ್ನೊಂದು ಅನುರಕ್ತಿ. ಇವೆರಡರ ನಡುವೆ ಜೀವನ ಸತ್ಯವನ್ನು ಹುಡುಕಾಡಿದ ದೇವನೂರ ಅವರಿಗೆ ಸಿಕ್ಕಿದ್ದು ಏನು ಎಂಬ ಇತರರ ಹುಡುಕಾಟವೇ ಈ ಕೃತಿ.

 

 ದೇವನೂರ ಮಹಾದೇವರ ಬಗ್ಗೆ ಲಂಕೇಶರು ಬರೆದದ್ದು ಹೀಗೆ: ‘ನಾನು ಕಳೆದ ಇಪ್ಪತ್ತೈದು ವರ್ಷದಿಂದ ಬಲ್ಲಂತೆ ದೇವನೂರ ಮಹಾದೇವ ಸೋಮಾರಿತನದ, ಡೋಲಾಯಮಾನದ, ಹಿಂಜರಿಕೆಯ ವ್ಯಕ್ತಿ; ಇದೆಲ್ಲದರ ಆಳದಲ್ಲಿ ಹರಿತವಾದ ಸೂಕ್ಷ್ಮ ಮನಸ್ಸಿನ ನ್ಯಾಯವಂತ ಮನುಷ್ಯ ಕೂಡ. ಇವೆರಡೂ ಗುಂಪಿನ ಗುಣಗಳನ್ನು ಮೀರಿದ್ದು ಅವರ ಸಹಜ ಪ್ರೀತಿ ಮತ್ತು ಜೀವನ ಪ್ರೇಮ. ಸಾಹಿತಿಯಾದವನು ಎಲ್ಲರಂತೆ ನೋಡಬಯಸುತ್ತಾನೆ. ಮನುಷ್ಯ, ಮರ, ಪ್ರಾಣಿ, ಆಕಾಶ, ಮಣ್ಣು ಇವೆಲ್ಲದರ ಖಚಿತ ಗುಣ ಮತ್ತು ಗಾತ್ರ ಅವನಿಗೆ ತಿಳಿಯುವುದೇ ಹೀಗೆ. ಆದರೆ ಎಲ್ಲರಂತೆ ನೋಡುತ್ತಿರುವಾಗಲೇ ಅವನಿಗೆ ವಿಶೇಷವಾದದ್ದು ಕಾಣುತ್ತದೆ. ಅದು ವಿಶೇಷವಾದದ್ದು ಎಂಬ ವಿಶ್ವಾಸ ಅವನಲ್ಲಿದ್ದರೆ ಮಾತ್ರ ಅವನು ಅದನ್ನು ಆದಷ್ಟೂ ಸಮರ್ಪಕವಾಗಿ ಹೇಳುವ ವಿಧಾನಗಳನ್ನು ಕಂಡುಕೊಳ್ಳುತ್ತಾನೆ. ಪ್ರೀತಿ, ಔದಾರ್ಯವಿಲ್ಲದಿದ್ದರೆ ತನ್ನ ಬಗ್ಗೆ ನಿಷ್ಠುರತೆ ಮತ್ತು ಇತರರ ಬಗ್ಗೆ ಸಹಾನುಭೂತಿ ಇಲ್ಲದಿದ್ದರೆ ಜೀವನದ ಬಾಗಿಲು ಲೇಖಕನಿಗೆ ತೆರೆಯುವುದೇ ಇಲ್ಲ.’

 

ದೇವನೂರ ಅವರನ್ನು ಒಂದು ನಿಮಿತ್ತವಾಗಿಟ್ಟುಕೊಂಡು ಸಾಹಿತಿಯ ಕೆಲವು ಗುಣವಿಶೇಷಗಳನ್ನು ಲಂಕೇಶರು ಇಲ್ಲಿ ಹೇಳಿದ್ದಾರೆ. ದೇವನೂರರ ಕತೆಗಳ ಬಗ್ಗೆ ಲಂಕೇಶರು ಬರೆದ ಇಲ್ಲಿಯ ವಿಮರ್ಶೆ ಅವರ ಶ್ರೇಷ್ಠ ಗದ್ಯಕ್ಕೆ ಒಂದು ಉದಾಹರಣೆಯಾಗಿದೆ. ಮಹಾದೇವರ ಬಗ್ಗೆ ಲಂಕೇಶರು ಬರೆದ ಇನ್ನೊಂದು ಮಾತು, ‘ಮಹಾದೇವರ ಎಲ್ಲ ಕತೆಗಳನ್ನು ಓದುತ್ತಾ ಹೋದಂತೆ ಅವರು ಬದುಕಿನ ಬಾಗಿಲು ತೆರೆಯಲು ಬಳಸುವ ಅನುಮಾನದ, ಯಾರನ್ನೂ ಕೂಡಲೇ ತಿರಸ್ಕರಿಸದ ಒಳ್ಳೆಯತನದ ನಿಲುವು ಗೊತ್ತಾಗುತ್ತಾ ಹೋಗುತ್ತದೆ…’

 

ಹೀಗೆ, ಲಂಕೇಶರಂತೆ ಅನಂತಮೂರ್ತಿಯವರೂ, ‘ದೇವನೂರರ ಒಡಲಾಳದ ಭಾಷಾ ಪ್ರಯೋಗ ಕಥನಕ್ರಮಗಳಿಗೆ ಅಪೂರ್ವ ಶೋಭೆ ಉಂಟಾಗುವುದು ಲೇಖಕನಿಗೆ ಬರೆಯುವ ಕ್ರಿಯೆಯೇ ನೈತಿಕ ಕ್ರಮವೂ ಆಗಿದೆ ಎಂದು ನಮಗೆ ಅನ್ನಿಸುವುದರಿಂದ. ಇರುವುದನ್ನು ಇದ್ದಂತೆಯೇ ಸ್ವೀಕರಿಸುವ ಪ್ರಕ್ರಿಯೆಯಲ್ಲಿ ಪ್ರೀತಿ ಹುಟ್ಟುವುದು, ಹೀಗೆ ಪ್ರೀತಿಗೆ ಪಾತ್ರರಾದ ಜನಗಳು ಶೋಭಾಯಮಾನರಾಗುವುದು ಒಡಲಾಳದ ಕ್ಷುಲ್ಲಕವೆನ್ನಿಸಬಹುದಾಗಿದ್ದ ದೈನಿಕ ಜಗಳ ಮತ್ತು ಚೌರ್ಯದ ಕಥೆಯಲ್ಲಿ ಸಾಧ್ಯವಾಗಿದೆ…. ಲೇಖಕರು ಈ ಪಾತ್ರಗಳ ಬಗ್ಗೆ ಅನುಭವಿಸುವ ಪ್ರೀತಿ ನಮ್ಮದೂ ಆಗುತ್ತದೆ. ಅವರೂ ನಾವೂ ಒಂದಾಗುತ್ತೇವೆ, ಕರುಣೆಯಲ್ಲಲ್ಲ, ತಾದಾತ್ಮ್ಯದಲ್ಲಿ. ಹೊಟ್ಟೆಪಾಡಿನ ರಿಕ್ತವಾದ ಅರ್ಥವ್ಯವಸ್ಥೆಯಲ್ಲಿ ಹೇಗೋ ಬದುಕುವ, ಕದ್ದಾದರೂ ಬಾಳುವ ಉಪಾಯಗಾರರಾದ ದಲಿತರು ಮಾನವ ಅದಮ್ಯ ಚೈತನ್ಯಕ್ಕೆ ಉದಾಹರಣೆಗಳಾಗುತ್ತಾರೆ.’ ಎಂಬುದನ್ನು ಹೆಕ್ಕಿ ಹೇಳಿದ್ದಾರೆ.

 

 ‘ಮಹಾದೇವರ ಒಟ್ಟು ನಿಲುವು ಒಂದು ಸಾಂಸ್ಕೃತಿಕ ಜಗತ್ತನ್ನು ಒಳಗೊಳ್ಳುತ್ತಾ ಅದರಾಚೆಗೂ ಬೆಳೆಯುತ್ತದೆ. ಬರೀ ದಲಿತ ಜಗತ್ತಿನ ಅನಾವರಣ ಮಾತ್ರವಲ್ಲ, ಸಾಮಾಜಿಕ ಸಂಬಂಧದ ನೆಲೆಗಳಲ್ಲಿ ಇತರ ಜಾತಿ-ವರ್ಗಗಳ ನಡುವಣ ಸಂವಾದವೊಂದು ಅವರ ಕೃತಿಗಳಲ್ಲಿ (ಅದರಲ್ಲೂ ಕುಸುಮಬಾಲೆ ಕಾದಂಬರಿಯಲ್ಲಿ) ನಡೆದಿದೆ. ಆದ್ದರಿಂದಲೇ ಮಹಾದೇವರ ಬರಹಗಳಲ್ಲಿ ಕಾಣಿಸಿಕೊಳ್ಳುವ ಹಾಸ್ಯ ವಿಡಂಬನೆಯ ಹಿಂದೆ ಲೇವಡಿ ಕಾಣುವುದಿಲ್ಲ ಸಮಯೋಚಿತ ಚಿಂತನೆಯ ಮೂಲಕವೇ ಅದನ್ನು ಅವರು ಕಟ್ಟಿಕೊಡುತ್ತಾರೆ.’ ಎಂದು ಸಂಪಾದಕಿ ಪಿ. ಚಂದ್ರಿಕಾ ಹೇಳಿದ್ದಾರೆ. ಲಕ್ಷ್ಮೀಶ ತೋಳ್ಪಾಡಿಯವರು ದೇವನೂರು ಕನ್ನಡದ ಕುಟುಂಬ ವತ್ಸಲ ಎಂಬ ಮಾತನ್ನು ಹೇಳಿದ್ದಾರೆ. ಕುಸುಮಬಾಲೆಗೆ ತಮ್ಮ ಅಭಿಪ್ರಾಯ ನೀಡಿರುವ ಜಿ.ಎಚ್. ನಾಯಕರು, ‘… ಕಾದಂಬರಿಯೊಳಗಿನ ವಿವರಗಳನ್ನು ಹಿಡಿದಿಡುವ ಕೇಂದ್ರ ಮೊದಲ ಓದಿಗೆ ದಕ್ಕಲಿಲ್ಲ ಅಥವಾ ನಮ್ಮ ವಿಮರ್ಶೆಯ ಮಾನದಂಡಗಳನ್ನೇ ಮರುಪರಿಶೀಲಿಸಬೇಕೋ ಏನೋ?’ ಎಂಬ ಮಾತನ್ನು ಹೇಳಿದ್ದಾರೆ. ದೇವನೂರರ ಹುಟ್ಟುಗುಣದ ಬಗ್ಗೆ ಬರೆಯುವ ರಾಜಶೇಖರ ಕೋಟಿಯವರು, ದೇವನೂರ ಮಹಾದೇವ ಅವರು ತೊಂದರೆಯಲ್ಲಿದ್ದವರಿಗೆ, ಅಸಹಾಯಕರಿಗೆ ತಮ್ಮ ಬಳಿ ಇದ್ದುದನ್ನೆಲ್ಲ ಕೊಟ್ಟಿದ್ದನ್ನು ಬೇಕಾದಷ್ಟು ಸಲ ನೋಡಿದ್ದೇನೆ. ಒಮ್ಮೊಮ್ಮೆ ತಮ್ಮ ಬಳಿ ಹಣ ಇಲ್ಲದಿದ್ದಾಗ ಸ್ನೇಹಿತರಿಂದ ಸಂಗ್ರಹಿಸಿಕೊಡುವುದಕ್ಕೆ ಮುಂದಾಗುತ್ತಿದ್ದುದನ್ನೂ ಸಹ ನೋಡಿದ್ದೇನೆ. ದೇವನೂರರ ಇಂಥಾ ಸ್ವಭಾವ ಅವರ ಹುಟ್ಟು ಗುಣವಾಗಿದೆ ಎಂಬುದನ್ನು ದಾಖಲಿಸಿದ್ದಾರೆ.  ಮಹಾದೇವರ ದೃಷ್ಟಿಯಲ್ಲಿ ‘ಸಂಬಂಜ ಅನ್ನೋದು ದೊಡ್ಡದು ಕನಾ.’ ಈ ಸಂಬಂಜವನ್ನು ಅವರು ಎಷ್ಟೊಂದು ನವಿರಾಗಿ ಕಾಪಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇಲ್ಲಿ ಸಂಕಲನಗೊಂಡಿರುವ ಲೇಖನಗಳೇ ಪುರಾವೆ.

 

ಕೃತಿ: ಯಾರ ಜಪ್ತಿಗೂ ಸಿಗದ ನವಿಲುಗಳು,
ಪ್ರಕಾರ: ಸಂಪಾದನೆ,
ಏಕೆ ಓದಬೇಕು?: ದೇವನೂರರನ್ನು ಅರಿಯಲು,
ಪ್ರ: ಅಭಿನವ, ಬೆಂಗಳೂರು,
ಪುಟಗಳು 476 ಬೆಲೆ ರು. 300