ಸಂಬಂಜ ಅನ್ನೋದು ದೊಡ್ಡದು ಕನಾ….

[“ದೇಮ 75ರ ಸಂಭ್ರಮ”ದ ಪ್ರಯುಕ್ತ 10.6.2023ರ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ  *ಬಾಲಕೃಷ್ಣ ಮದ್ದೂರು ಅವರು ಬರೆದ ಬರಹ ]
(ದೇವನೂರು ಮಹಾದೇವ ಕನ್ನಡದ ಸೊಗಡಿನ ಬರಹಗಾರ. ಸಾರಸ್ವತ ಲೋಕದ ಸಾಕ್ಷಿಪ್ರಜ್ಞೆ ಹಾಗು ಅಪ್ಪಟ ಕನ್ನಡಿಗ ಇವರ ಬರಹಗಳಲ್ಲಿ ನೆಲದ ಮಣ್ಣಿನ ಉಸಿರಾಟವನ್ನು ಕಿವಿಗೊಟ್ಟು ಆಲಿಸುವ ಲಯದ ಗುಣವಿದೆ. ಮಾನವೀಯ ಸಂಬಂಧಗಳಿಗೆ ದೇವನೂರು ಸದಾ ಒತ್ತು ಕೊಡುತ್ತಾರೆ. ತಳಸಮುದಾಯದಲ್ಲಿ ಹಾಸುಹೊಕ್ಕಾಗಿರುವ ಈ ಗುಣದ ಶ್ರೇಷ್ಠತೆಯನ್ನು ಇವರ ಎಲ್ಲಾ ಕೃತಿಗಳೂ ಎತ್ತಿ ತೋರುತ್ತವೆ. ಕುಸುಮಬಾಲೆ ಕೃತಿಯಲ್ಲಿ ಚನ್ನನ ಅಪ್ಪ ಹೇಳುವ “ಸಂಬಂಜ ಅನ್ನೋದು ದೊಡ್ಡದು ಕನಾ…!” ಎಂಬ ಮಾತು ಇದಕ್ಕೆ ಉದಾಹರಣೆ. ಈ ಕೃತಿಯನ್ನು ಓದುವುದೊಂದು ಸೊಗಸಿನ ಅನುಭವ. ಅಂದ ಹಾಗೆ ಇದೇ ಜೂನ್ 10ಕ್ಕೆ ದೇವನೂರು ಮಹಾದೇವ 75ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಇವರಿಗೆ ಸಂಬಂಧಿಸಿದ ಕೆಲವು ವಿಶೇಷ ಸಂಗತಿಗಳನ್ನು ಇಲ್ಲಿ ಕಲೆ ಹಾಕಲಾಗಿದೆ….ಬಾಲಕೃಷ್ಣ ಮದ್ದೂರು)
ಈಗಿನ ಹಣ ಹೆಂಡ ತೋಳ್ಬಲದ ರಾಜಕೀಯವನ್ನು ದೇವನೂರು ಮಹಾದೇವ ಭೂಗತ ಜಗತ್ ರಾಜಕೀಯ ಎಂದು ಬಣ್ಣಿಸುತ್ತಾರೆ. ತಳಪಾಯದ ರಾಜಕಾರಣವನ್ನು ತಳಪಾಯ ಮಾಡಿಕೊಂಡೇ ಈಗಿನ ದಮನಕಾರಿ ರಾಜಕೀಯಕ್ಕೆ ನಾವು ಮುಖಾಮುಖಿಯಾಗಬೇಕು. ಈ ರಾಜಕಾರಣಕ್ಕೊಂದು ಹೊಸ ನಡಿಗೆ ಬೇಕು ಎಂದೂ ಪ್ರತಿಪಾದಿಸುತ್ತಾರೆ. ಮಹಾದೇವ ಪರ್ಯಾಯ ರಾಜಕಾರಣಕ್ಕೆ ಒಲವು ತೋರಿದವರು. ಸರ್ವೋದಯ ಕರ್ನಾಟಕ, ಸ್ವರಾಜ್ ಇಂಡಿಯಾ ಆಂದೋಲನದ ಮೂಲಕ ಎಲ್ಲರನ್ನೂ ಒಳಗೊಳ್ಳುವ ರಾಜಕೀಯದ ಹೊಸ ಆಶಯಗಳನ್ನು ಬಿತ್ತಲು ಹೊರಟವರು. ಇವರ ಈ ಪರ್ಯಾಯ ರಾಜಕಾರಣದ ಒಳನೋಟದಲ್ಲಿ ರೈತರ ಸಂತೃಪ್ತತೆ, ಜಾತಿವರ್ಗ ರಹಿತ ಸಮಾಜ, ಎಲ್ಲರಿಗೂ ಅವಕಾಶ, ಸಂಪತ್ತಿನ ಹಂಚಿಕೆ, ಸರ್ವಾಧಿಕಾರವಿಲ್ಲದ ಮಾತೃಹೃದಯಿ ಆಡಳಿತದ ಪರಿಕಲ್ಪನೆಯಿದೆ.
ಅದು ಗದ್ಯವಲ್ಲ ಪದ್ಯ
ಮಹಾದೇವ ಬರವಣಿಗೆಯ ಶೈಲಿ ವಿಶೇಷವಾದುದು. ತನ್ನ ಸುತ್ತಲಿನ ಕನ್ನಡದ ಮಾತುಗಳನ್ನೇ ಇವರು ಅಕ್ಷರಕ್ಕಿಳಿಸಿದ್ದಾರೆ. ನಂಜನಗೂಡಿನ ಸೊಗಡಿನ ಭಾಷೆಯಲ್ಲಿ ಕೃತಿಗಳಿವೆ. ಕನ್ನಡ ಮೊದಲೇ ನಾದ ರೂಪಕ ಭಾಷೆ. ಇದರಲ್ಲಿ ಲಯ ತುಂಬಿಕೊಂಡಿದೆ. ತಳಸಮುದಾಯವಾದ ದಲಿತರ ಹೃದಯ ತಟ್ಟುವ ಶೈಲಿಯ ಮಹಾದೇವ ಅವರ ಕನ್ನಡದ್ದಂತೂ ವಿರಾಟ್ ರೂಪ. ಸರಳ ಪಂಪಭಾರತ ರಚಿಸಿದ್ದ ಪ್ರೊ. ಎಲ್.ಬಸವರಾಜು ಮಹಾದೇವ ಅವರ ಕುಸುಮಬಾಲೆ ಹಾಗೂ ಒಡಲಾಳ ಕೃತಿಗಳ ಗೇಯತೆಗೆ ಮರುಳಾಗಿ ಇವುಗಳಿಗೆ ಲಯಕಾರ ವಿನ್ಯಾಸ ಮಾಡಿದ್ದಾರೆ. ಇವನ್ನು ಓದಬಹುದು, ಹಾಡಿಯೂ ಅನುಭವಿಸಬಹುದು.
ಅವರ ಬರವಣಿಗೆ ಶೈಲಿಯನ್ನು ಹಲವರು ಆಡಿಕೊಂಡದ್ದುಂಟು. ಕುಸುಮಬಾಲೆಯನ್ನು ಕನ್ನಡಕ್ಕೆ ಅನುವಾದಿಸಬೇಕೆಂದು ಲೇವಡಿ ಮಾಡಿದವರೂ ಇದ್ದಾರೆ. ತಳಮಟ್ಟದ ಕನ್ನಡದ ಅರಿವಿದ್ದವರು ಇದನ್ನು ಅನುಭವಿಸಿ ಆನಂದಿಸಿದರೆ, ಚೇಷ್ಟೆಗಾಗಿ ವಿಮರ್ಶೆ ಮಾಡಿದವರು ಕೃತಿಗೆ ಸಿಕ್ಕ ಮಾನ್ಯತೆ ಕಂಡು ಬೆರಗಾಗಿದ್ದೂ ಉಂಟು. ದೇವನೂರರ ಈ ವಿಶೇಷತೆಯನ್ನು ಹಲವರು ಅನುಸರಿಸಲೆತ್ನಿಸಿದರೂ ಇದರಲ್ಲಿ ಯಶಸ್ಸು ಕಾಣಲಿಲ್ಲ.
ಆ‌ರ್ ಎಸ್‌ಎಸ್‌ನ ಕತೆ
ದೇವನೂರು ಮಹಾದೇವ ಇತ್ತೀಚೆಗೆ ಕಿರು ಹೊತ್ತಗೆಯೊಂದನ್ನು ಬರೆದಿದ್ದಾರೆ. “ಆರ್‌ಎಸ್‌ಎಸ್ ಆಳ ಮತ್ತು ಅಗಲ” ಎಂಬ ಹೆಸರಿನ ಈ ಚಿಕ್ಕ ಪುಸ್ತಕ ದೇಶದಾದ್ಯಂತ ಸುದ್ದಿಯಾಗಿತ್ತು. ಅತ್ಯಂತ ಕಡಿಮೆ ಅವಧಿಯಲ್ಲಿ ಲಕ್ಷಾಂತರ ಪ್ರತಿಗಳು ಮಾರಾಟವಾಗಿ ದಾಖಲೆಯಾಯ್ತು ಹಲವಾರು ಭಾಷೆಗಳಲ್ಲಿ ಪ್ರಕಟವಾದ ಈ ಕೃತಿಯಲ್ಲಿನ ಅಂಶಗಳನ್ನು ಅಲ್ಲಗಳೆಯಲು ಇದುವರೆಗೂ ಸಾಧ್ಯವಾಗಿಲ್ಲ! ಕೃತಿಯಲ್ಲಿ ದಾಖಲಿಸಿರುವ ಅಂಶಗಳಿಗೆ ಆಧಾರ ಗ್ರಂಥಗಳ ಮಾಹಿತಿಯನ್ನೂ ಮಹಾದೇವ ಒದಗಿಸಿದ್ದರಿಂದ ಇದಕ್ಕೊಂದು ಅಥೆಂಟಿಕ್ ರೂಪ ಸಿಕ್ಕಿತ್ತು. ಇವರು ಆರ್‌ಎಸ್‌ಎಸ್‌ ಸೇರಿದ್ದು, ಮುಸಲ್ಮಾನರ ಮನೆಗಳ ಮೇಲೆ ದಾಳಿ ಮಾಡಿದ್ದು, ಲಾಕಪ್ಪಲ್ಲಿ ಒದೆತಿಂದ ಪ್ರಸಂಗದ ಪೂರ್ಣ ವಿವರ ಮಹದೇವ ಅವರ ಕುರಿತು ಹೊರಬಂದಿರುವ “ಸಂತೆಯೊಳಗಣ ಸಂತ” ಎಂಬ ಕೃತಿಯಲ್ಲಿದೆ.
ಸಂಪರ್ಕವಿಲ್ಲದವನೇ ಪತ್ರಕರ್ತ
ಮಹಾದೇವ ಅವರಿಗೆ ಪತ್ರಿಕೋದ್ಯಮದ ಬಗ್ಗೆ ವಿಶೇಷ ಆಸಕ್ತಿ, ಮೈಸೂರಿನ ಆಂದೋಲನ ಪತ್ರಿಕೆಯ ಸಂಪಾದಕರಾಗಿದ್ದ ದಿವಂಗತ ರಾಜಶೇಖರ ಕೋಟಿ ಇವರಿಗೆ ಮೆಚ್ಚಿನ ಗೆಳೆಯ, ಪತ್ರಿಕೋದ್ಯಮದ ಧಾವಂತ ಮತ್ತು ಪತ್ರಕರ್ತರ ಸಂಪರ್ಕ ಇತ್ಯಾದಿಗಳನ್ನು ಅವರು ವಿಶೇಷ ಆಸಕ್ತಿಯಿಂದ ಗಮನಿಸುತ್ತಿರುತ್ತಾರೆ. ಒಂದು ಸಂದರ್ಭದಲ್ಲಿ ಅವರು ಹೀಗೆ ಹೇಳಿದ್ದರು- ‘ಎಲ್ಲಾ ಸಂಪರ್ಕ ಇದ್ದುಕೊಂಡು ಬರೆಯುವುದು ದೊಡ್ಡ ವಿಷಯವಲ್ಲ, ಯಾರ ಸಂಪರ್ಕವೂ ಇಲ್ಲದೇ ಎಲ್ಲರೂ ಓದುವಂತಹದ್ದನ್ನು ಬರೆಯುವುದು ದೊಡ್ಡ ವಿಷಯ. ಸಂಪರ್ಕವಿಲ್ಲದೆಯೂ ಉತ್ತಮ ಪತ್ರಕರ್ತನಾಗಬಹುದು”.
ಹಿಂದು ಒಂದು ಸಾಧ್ಯವೇ
ಅವರದು ಸೌಮ್ಯ ಭಾವ, ಮಾತು ಬಹಳ ಮೃದು. ಚೀಟಿಯೊಂದರಲ್ಲಿ ಬರೆದುಕೊಂಡಿದ್ದನ್ನು ನೋಡುತ್ತಾ ಮೈಕ್ ಮುಂದೆ ನಿಂತು ಸೊಗಡಿನೊಂದಿಗೆ ಮಾತನಾಡುತ್ತಾರೆ. ಇವರಾಡುವ ಮಾತಿನ ಶಬ್ದಗಳಿಗೆ ತೂಕ ಬಹಳ. ಹಾಗೇ ಈ ಶಬ್ದ -ಪದಗಳು ಮನಸ್ಸಿಗೆ ಇರಿಯುವ ವಿಶೇಷ ಗುಣವನ್ನೂ ಹೊಂದಿರುತ್ತವೆ. ಇವರ ಮಾತಿನ ಕೆಲ ಶಬ್ದಗಳು ಪ್ರಶ್ನೆಗಳ ರೂಪ ತಾಳಿ ಕೇಳುಗರನ್ನು ಪದೇ ಪದೇ ಕಾಡುತ್ತವೆ. ತಪ್ಪಿತಸ್ಥ ಅಪರಾಧಿ ಭಾವವನ್ನೂ ಹುಟ್ಟುಹಾಕುತ್ತವೆ.
ದಲಿತರ ಸ್ಥಿತಿಗತಿಗಳನ್ನು ಗಮನಿಸುತ್ತಾ ಮಹಾದೇವ ಹೇಳುವ ಈ ಮಾತುಗಳು ಅರ್ಥಪೂರ್ಣ- “ನಮಗೆ (ದಲಿತರು) ಈ ಮೀಸಲಾತಿ ಸಹವಾಸವೇ ಬೇಡ. ಬಡತನ ಹೇಗೂ ರೂಢಿಯಾಗಿ ಹೋಗಿದೆ. ಎಲ್ಲರೊಂದಿಗೆ ಒಂದಾದರೆ ಸಾಕೆನಿಸುತ್ತದೆ. ನಾವೆಲ್ಲಾ ಹಿಂದು ನಾವೆಲ್ಲಾ ಒಂದು ಎನ್ನುವ ನೀವು (ಹಿಂದೂ ನಾಯಕರು) ನಿಮ್ಮ ನುಡಿಯನ್ನು ನಡೆಯಲ್ಲಿ ಜಾರಿಗೆ ತನ್ನಿ. ಹಿಂದುಗಳನ್ನು ಒಂದು ಮಾಡಲು ಸ್ವಜಾತಿ ಮದುವೆ ಕಾನೂನುಬಾಹಿರವೆಂದು ಘೋಷಿಸುತ್ತೇವೆನ್ನಿ. ಆ‌ರ್ ಎಸ್‌ಎಸ್‌ ಸಹ ಇದನ್ನು ಪ್ರಚಾರ ಮಾಡಬೇಕು. ಜಾತಿ ಈಗ ಕುಲಕ್ಕಿಳಿದಿದೆ. ಸ್ವಾಮೀಜಿಗಳು ಸ್ವಜಾತಿ ಮದುವೆ ಧರ್ಮ ನಿಷಿದ್ಧ ಎಂದು ಮನೆಮನೆಗೂ ಹೋಗಿ ಮನವೊಲಿಸಿದರೆ ಆಗ ಹಿಂದೂ ಒಂದು ಎನ್ನುವುದು ಒಂದು ಧರ್ಮವಾಗುತ್ತದೆ”.
ದಕ್ಕಿದ ಖ್ಯಾತಿ ಅಪಾರ
ಕೆಲವರು ದೇವನೂರು ಬರೆದದ್ದು ಕಡಿಮೆ ಎನ್ನುತ್ತಾರೆ. ಆದರೆ ದಶಕ ದಶಕಗಳ ಹಿಂದೆ ಅವರು ಬರೆದಿದ್ದು ಈಗಲೂ ಚರ್ಚೆಯ ವಸ್ತುವಾಗಿದೆ. ಇವರ ಕೃತಿಗಳ ಕುರಿತಾಗಿಯೇ ಹಲವು ಪುಸ್ತಕಗಳು ಬಂದಿವೆ. ದೊಡ್ಡ ವಿಮರ್ಶಕರೆಲ್ಲಾ ದೇವನೂರು ಸಾಹಿತ್ಯದ ಸತ್ತ್ವದ ಬಗ್ಗೆ ಅವರ ಅರಿವಿಗೆ ನಿಲುಕಿದಂಥ ತರಾವರಿ ವ್ಯಾಖ್ಯಾನಗಳನ್ನು ಮುಂದಿಟ್ಟಿದ್ದಾರೆ. ದಲಿತತ್ತ್ವ ದೇವನೂರರ ಸಾಹಿತ್ಯದ ಒಳನೋಟ, ಇದರ ಮೂಲಕ ಇವರು ದೇಶದಾದ್ಯಂತ ಚರ್ಚೆಯ ವಸ್ತುವಾದರು. ದ್ಯಾವನೂರು, ಒಡಲಾಳ, ಕುಸುಮಬಾಲೆ, ಎದೆಗೆ ಬಿದ್ದ ಅಕ್ಷರ, ಆರ್‌ಎಸ್‌ಎಸ್‌ ಆಳ ಮತ್ತು ಅಗಲ, ಈಗ ಭಾರತ ಮಾತನಾಡುತ್ತಿದೆ ಇವರ ಪ್ರಸಿದ್ಧ ಕೃತಿಗಳು.
ನಿರಾಕರಿಸಲೂ ಶಕ್ತಿ ಬೇಕು.
ದೇವನೂರರನ್ನು ಹಲವು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ. ಇವುಗಳಲ್ಲಿ ಸ್ವೀಕರಿಸಿದ್ದಕ್ಕಿಂತ ನಿರಾಕರಿಸಿದ್ದೇ ಹೆಚ್ಚು. ನಿರಾಕರಿಸಲೂ ಸಹ ಶಕ್ತಿ ಬೇಕು ಎನ್ನುವುದಕ್ಕೆ ಮಹಾದೇವ ಉದಾಹರಣೆ. ಪ್ರಸಿದ್ಧ ಬರಹಗಾರನಾಗಿ ದೊಡ್ಡ ರಾಜಕಾರಣಿಗಳನ್ನು ಬಲ್ಲವರಾಗಿ, ನಾಡಿನ ಬೌದ್ಧಿಕ ಚಳವಳಿಯ ಮೆದುಳು ಮತ್ತು ಬೆನ್ನೆಲುಬಾಗಿ ಮಹಾದೇವ ಸಮಾಜದಲ್ಲಿ ದೊಡ್ಡ ಹುದ್ದೆ ಹೊಂದಬಹುದಾಗಿತ್ತು. ದೊಡ್ಡ ಪ್ರಮಾಣದಲ್ಲಿ ಗುರುತಿಸಿಕೊಳ್ಳಬಹುದಾಗಿತ್ತು. ಆದರಿವರು ಇದ್ದ ಕೆಲಸಕ್ಕೂ ರಾಜೀನಾಮೆ ನೀಡಿ, ಒಂದಷ್ಟು ಭೂಮಿಯಲ್ಲಿ ರಾಸಾಯನಿಕವಿಲ್ಲದೇ ಉತ್ತು ಬಿತ್ತು ಧಾನ್ಯ- ಹಣ್ಣು ಬೆಳೆಯುವ ಕೃಷಿಕರಾಗಿ ಸರಳ ಬದುಕು ಸಾಗಿಸುತ್ತಿದ್ದಾರೆ. ಇವರು ನಿರಾಕರಿಸಿದ ಹಲವು ಪ್ರಶಸ್ತಿ ಪುರಸ್ಕಾರಗಳ ಪಟ್ಟಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯೂ ಇದೆ. ಹತ್ತಾರು ಲಕ್ಷ ನಗದು ಹಣವನ್ನೊಳಗೊಂಡ ದೊಡ್ಡ ಪ್ರಶಸ್ತಿಗಳೂ ಸೇರಿವೆ ಎನ್ನುವುದು ಉಲ್ಲೇಖಾರ್ಹ.