ವಿವಿಯಲ್ಲಿ ‘ಆರೆಸ್ಸೆಸ್ ಆಳ ಮತ್ತು ಅಗಲ” ಕೃತಿಯ ಸಂವಾದ

[ಜುಲೈ 20ರ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟಿತ ಸುದ್ದಿ]

ಬೆಂಗಳೂರು, ಜು.20: ಕರ್ನಾಟಕ ವಿದ್ಯಾರ್ಥಿ ಸಂಘಟನೆ ವತಿಯಿಂದ ದೇವನೂರ ಮಹಾದೇವ ಅವರು ಬರೆದಿರುವ ‘ಆರೆಸ್ಸೆಸ್ ಆಳ ಮತ್ತು ಅಗಲ’ ಪುಸ್ತಕದ ಕುರಿತು ಸಂವಾದ ಕಾರ್ಯಕ್ರಮವನ್ನು ಬುಧವಾರ ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿ ಮುಖಂಡ ಹಾಗೂ ವಿದ್ಯುನ್ಮಾನ ಮಾಧ್ಯಮ ವಿಭಾಗದ ವಿದ್ಯಾರ್ಥಿ ಮನೋಜ್ ಅಝಾದ್ ಮಾತನಾಡಿ, ‘ಇಂದು ಶಿಕ್ಷಣ ವ್ಯವಸ್ಥೆಯಲ್ಲಿ ಕೋಮುವಾದೀಕರಣವನ್ನು ರಾಜ್ಯ ಬಿಜೆಪಿ ಸರಕಾರವು ನೇರವಾಗಿ ಹೇರುತ್ತಿದೆ. ಕೇಂದ್ರ ಸರಕಾರವು ಎನ್‌ಇಪಿ ಅಡಿಯಲ್ಲಿ ಶಿಕ್ಷಣದ ವ್ಯಾಪರೀಕರಣದಲ್ಲಿ ತೊಡಗಿದೆ. ಒಟ್ಟಾರೆ ಬಿಜೆಪಿ ಸರಕಾರಗಳು ಒಗ್ಗೂಡಿ ಶಿಕ್ಷಣವನ್ನು ಕೇಸರೀಕರಣ ಮಾಡುತ್ತಿವೆ. ಈ ಫ್ಯಾಶಿಸಂ ಸರಕಾರಗಳ ಗುಟ್ಟನ್ನು ನಾವೆಲ್ಲರೂ ತಿಳಿದುಕೊಳ್ಳಬೇಕಾದರೆ, ಸಾಹಿತಿ ದೇವನೂರ ಮಹಾದೇವ ಅವರು ಬರೆದಿರುವ ‘ಆರೆಸ್ಸೆಸ್ ಆಳ ಮತ್ತು ಅಗಲ’ ಪುಸ್ತಕವನ್ನು ಓದಬೇಕು, ಪ್ರಜ್ಞಾವಂತ ವಿದ್ಯಾರ್ಥಿಗಳಾಗಿ ಬಿಜೆಪಿಯ ಹುನ್ನಾರವನ್ನು ಅರಿತು ವಿದ್ಯಾರ್ಥಿಗಳು ಒಗ್ಗೂಡಬೇಕಾಗಿದೆ ಎಂದರು.

ಒಂದೇ ಧರ್ಮ, ಒಂದೇ ಬಾವುಟ, ಘೋಷಣೆಯ ಮೂಲಕ ಆರೆಸ್ಸೆಸ್‌ ನ ಅಜೆಂಡಾವನ್ನು ವಿಫಲಗೊಳಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ. ಮನುಸ್ಮೃತಿಯನ್ನು ಸಂವಿಧಾನವನ್ನಾಗಿಸಬೇಕು ಎನ್ನುವ ಸಿದ್ಧಾಂತವನ್ನು ಹೊಂದಿರುವ ಆರೆಸ್ಸೆಸ್‌ನ ಇತ್ತೀಚಿನ ನಡವಳಿಕೆಗಳು ವಿದ್ಯಾರ್ಥಿ ಸಮುದಾಯವನ್ನೇ ಬೆಚ್ಚಿ ಬೀಳಿಸುತ್ತಿವೆ. ಇದರ ವಿರುದ್ಧ ವಿದ್ಯಾರ್ಥಿಗಳು ಒಗ್ಗೂಡದಿದ್ದರೆ, ಬಹುದೊಡ್ಡ ಅಪಾಯ ಎದುರಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಸಂವಾದದಲ್ಲಿ ವಿಶ್ವವಿದ್ಯಾನಿಲಯದ ಆರ್ಥಿಕ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸುಭಾಷ್ ಟಿ.ಎನ್, ರಾಜ್ಯಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಆದ ರಾಜೇಶ್ ಆರೆಸ್ಸೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ಉಚಿತವಾಗಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಹಂಚಲಾಯಿತು. ಪುಸ್ತಕವನ್ನು ಬೆಂಗಳೂರು ವಿವಿ ಸೇರಿದಂತೆ ಎಲ್ಲ ವಿವಿಗಳಲ್ಲಿಯೂ ಹಂಚಿ ವಿದ್ಯಾರ್ಥಿಗಳಿಗೆ ಆರೆಸ್ಸೆಸ್ ಅಜೆಂಡಾವನ್ನು ವಿಫಲಗೊಳಿಸಲಾಗುವುದು ಎಂದು ಸಂವಾದದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಘೋಷಿಸಿದರು.