ಲಕ್ಷ ಪ್ರತಿ ದಾಟಿದ ‘ಆರ್‌ಎಸ್‌ಎಸ್: ಆಳ ಮತ್ತು ಅಗಲ’

[28.7.2022 ಆಂದೋಲನ ಆನ್ ಲೈನ್ ಪತ್ರಿಕಾ ವರದಿ]
ನಾಳೆಗೆ ತಿಂಗಳು ಪೂರೈಸಲಿದ್ದು ದೇಮ ಕೃತಿ; ಇಂಗ್ಲಿಷ್, ಹಿಂದಿ, ಮರಾಠಿ, ತಮಿಳು, ತೆಲುಗು ಭಾಷೆಯಲ್ಲಿ ಪ್ರಕಟಣೆಗೆ ಸಿದ್ಧತೆ
ಮೈಸೂರು: ದೇಶದಾದ್ಯಂತ ಹೊಸ ಚರ್ಚೆಗೆ ನಾಂದಿ ಹಾಡಿದ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ‘ಆರ್‌ಎಸ್‌ಎಸ್: ಆಳ ಮತ್ತು ಅಗಲ’ ಕೃತಿಯು ಬಿಡುಗಡೆಯಾಗಿ ಜು.೨೯ಕ್ಕೆ (ನಾಳೆ) ತಿಂಗಳು ಪೂರೈಸಿದ್ದು, ನಾಡಿನ ಹತ್ತಾರು ಪ್ರಕಾಶನಗಳು ಸೇರಿ ಲಕ್ಷ ಪ್ರತಿಗಳನ್ನು ಮುದ್ರಿಸಿ ಜನರಿಗೆ ಹಂಚಿ ಹೊಸ ದಾಖಲೆ ಸೃಷ್ಟಿಸಿವೆ.
ಕಳೆದ ಜೂ.೨೯ರಂದು ‘ಆರ್‌ಎಸ್‌ಎಸ್: ಆಳ ಮತ್ತು ಅಗಲ’ ಕೃತಿ ಪ್ರಕಟಣೆಗೆ ಸಿದ್ಧವಾಗಿದೆ ಎಂಬುದಾಗಿ ಘೋಷಿಸಿ, ಜೂ.೩೦ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾಗುತ್ತಿದ್ದಂತೆ ನಾಲ್ಕಾರು ಪ್ರಕಾಶನಗಳು ಮುದ್ರಿಸುವ ಹೊಣೆ ಹೊತ್ತಿದ್ದವು. ಬಳಿಕ ಸಹೃದಯಿ ಓದುಗರಿಂದ ಬೇಡಿಕೆ ಬರುತ್ತಿದ್ದಂತೆ ಹತ್ತಾರು ಪ್ರಕಾಶನಗಳು ಮುದ್ರಿಸಲು ಮುಂದೆ ಬಂದವು. ಕೆಲವು ಸಂದರ್ಭಗಳಲ್ಲಿ ಮುದ್ರಿಸಿ ಆರ್ಡರ್ ಪೂರೈಸುವುದೇ ಕಷ್ಟವಾಗಿತ್ತು ಎನ್ನುತ್ತಾರೆ ಪ್ರಕಾಶಕರು.
ಕನ್ನಡ ಆವೃತ್ತಿಗೆ ಲಕ್ಷ ಪ್ರತಿಗಳ ದಾಖಲೆ ಬರೆಯುತ್ತಿರುವ ಈ ಹೊತ್ತಿನಲ್ಲಿ ಇಂಗ್ಲಿಷ್, ಹಿಂದಿ, ಮರಾಠಿ, ತಮಿಳು, ತೆಲುಗು ಭಾಷೆಗಳಲ್ಲೂ ಕೃತಿ ಪ್ರಕಟಿಸಲು ಪ್ರಕಾಶಕರು ಅಂತಿಮ ತಯಾರಿ ನಡೆಸಿದ್ದು, ಇನ್ನೊಂದು ವಾರದಲ್ಲಿ ಆ ಪುಸ್ತಕಗಳೂ ಲಭ್ಯವಿರಲಿವೆ. ಪ್ರಕಾಶನಗಳ ಜತೆಗೆ ಆನ್‌ಲೈನ್ ಮಾರುಕಟ್ಟೆಯ ದೈತ್ಯರೆನಿಸಿದ ಫ್ಲಿಕ್‌ಕಾರ್ಟ್, ಅಮೆಜಾನ್‌ನಲ್ಲೂ ದೇಮ ಅವರ ಕೃತಿ ಭರ್ಜರಿ ಮಾರಾಟವಾಗುತ್ತಿದೆ. ‘ಆರ್‌ಎಸ್‌ಎಸ್: ಆಳ ಮತ್ತು ಅಗಲ’ ಕೃತಿ ಪ್ರಸರಣೆಯನ್ನು ಸಾವಿರಾರು ಜನ ಸೇರಿಕೊಂಡು ಮಾಡುತ್ತಿದ್ದು, ಇದೊಂದು ‘ಆಂದೋಲನ’ನವಾಗಿ ಮಾರ್ಪಟ್ಟಿದೆ. ಈ ಕೃತಿಯನ್ನು ಜನರಿಗೆ ತಲುಪಿಸುವ ಹಿನ್ನೆಲೆಯಲ್ಲಿ ಸಾವಿರಾರು ಮನಸ್ಸುಗಳು ಕೆಲಸ ಮಾಡುತ್ತಿವೆ.
ಇದುವರೆಗೆ ಕೃತಿ ಪ್ರಕಟಿಸಿದ ಪ್ರಕಾಶನಗಳು….
ಅಭಿರುಚಿ ಪ್ರಕಾಶನ ಮೈಸೂರು, ಗೌರಿ ಮೀಡಿಯಾ ಟ್ರಸ್ಟ್, ನಡೆನುಡಿ ಚಿಕ್ಕನಾಯಕನಹಳ್ಳಿ, ಜನಸ್ಪಂದನ ಟ್ರಸ್ಟ್ ತಿಪಟೂರು, ಮಾನವ ಬಂಧುತ್ವ ವೇದಿಕೆ, ಭಾರತೀಯ ಪರಿವರ್ತನ ಸಂಘ, ಕ್ರಿಯಾ ಪ್ರಕಾಶನ, ನೀಲಿಹೆಜ್ಜೆ, ನವ ಕರ್ನಾಟಕ, ಪ್ರಜ್ಞಾವಂತ ಭಾರತ, ಸಂಕಥನ ಮಂಡ್ಯ, ಲಡಾಯಿ ಪ್ರಕಾಶನ, ಗದಗ ಓದು ವಿನಿಮಯ ಬಳಗ, ಆದಿಮ ಪ್ರಕಾಶನ, ಕೊಡುಗು ಜನಾಂದೋಲನ ಪ್ರಗತಿಪರ ವೇದಿಕೆ, ನಯನ ಪ್ರಕಾಶನ, ಡಾ.ಭೀಮ್ ಟ್ರಸ್ಟ್ ಫಾರ್ ಡೆವಲಪ್ಮೆಂಟ್, ಸಂಚಲನ, ಶ್ಯಾಮ್ ಪ್ರಕಾಶನ ಏಕಾಂತಗಿರಿ ಟ್ರಸ್ಟ್ ದಾವಣಗೆರೆ, ಡಾ.ಬಿ.ಆರ್.ಅಂಬೇರ್ಡ್ಕ ಸಂಘ ವಿಜಯನಗರ, ಪತ್ರಕರ್ತರ ಬಳಗ ದೊಡ್ಡಬಳ್ಳಾಪುರ, ಯಶ್ವಂತ ಪ್ರಕಾಶನ ಕಲ್ಬುರ್ಗಿ, ರಾಮಮನೋಹರ ಲೋಹಿಯಾ ವಿದ್ಯಾಲಯ, ಶಾಂತವೇರಿ ಗೋಪಾಲಗೌಡ ಪ್ರಕಾಶನ ಶಿವಮೊಗ್ಗ, ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ(ರಿ) ಮಾನಸ ಗಂಗೋತ್ರಿ ಮೈಸೂರು, ಬಾಲಾಜಿ ಪಬ್ಲೀಕೇಷನ್, ಜೈ ಭೀಮ್ ಹಿತರಕ್ಷಣ ವೇದಿಕೆ, ಚಿಂತನಾ ಚಿತ್ತಾರ, ಋತುಮಾನ, ಲಕ್ಷ್ಮಿ ಮುದ್ರಣಾಲಯ, ದಿ ಪ್ರಿಂಟ್ ಪಾಯಿಂಟ್, ವಾಗರ್ಥ, ರುಹಾನಿ ತುರುವನೂರು….