ಭಾಷೆಯ ಮೂಲಕ ಉಲ್ಲಂಘನೆ ಮತ್ತು ಪ್ರತಿಭಟನೆ- ಡಾ.ಸಿದ್ಧಲಿಂಗಯ್ಯ

(ದೇವನೂರ ಮಹಾದೇವ ಅವರ ಕುರಿತು ಡಾ.ಸಿದ್ಧಲಿಂಗಯ್ಯ ಅವರು ಬರೆದ ಈ ಲೇಖನವು, ಅಭಿನವ ಪ್ರಕಾಶನದಿಂದ 2013ರಲ್ಲಿ ಪ್ರಕಟವಾಗಿರುವ “ಯಾರ ಜಪ್ತಿಗೂ ಸಿಗದ ನವಿಲುಗಳು” ಪರಿಷ್ಕೃತ ಮುದ್ರಣದ ಕೃತಿಯಲ್ಲಿ ದಾಖಲಾಗಿದೆ)
ನನಗೆ ದೇವನೂರ ಮಹಾದೇವ ಅವರ ಪರಿಚಯವಾದದ್ದು ಪರೋಕ್ಷವಾಗಿ ಎಂ.ಜಿ.ರೋಡಿನ ಸೆಕೆಂಡ್ ಹಾಸ್ಟೆಲಿನಲ್ಲಿ. ಆಗ ನಾನು ಪಿಯುಸಿ ಓದುತ್ತಿದ್ದೆ. ನಮ್ಮ ಸೀನಿಯರ್ ಬಾನಂದೂರು ಕೆಂಪಯ್ಯನವರು ಆಗಾಗ ಭಾವಪೂರ್ಣವಾಗಿ ಜಾನಪದ ಗೀತೆಗಳನ್ನು ಹಾಡುತ್ತಿದ್ದರು. ಜೊತೆಗೆ ಕೊಳಲನ್ನೂ ನುಡಿಸುತ್ತಿದ್ದರು. ಒಮ್ಮೆ ಹೀಗೆಯೇ ಮಾತಿಗೆ ಮಧ್ಯೆ ಅವರು ‘ದೇವನೂರ ಮಹಾದೇವ ಅಂತ ಒಬ್ಬರು ಇದ್ದಾರೆ. ಅವರು ಅನೇಕ ಕವಿತೆಗಳನ್ನು ಬರೆದು ತಮ್ಮ ರೂಮಿನ ತುಂಬೆಲ್ಲಾ ಹರಿದುಹಾಕಿಬಿಟ್ಟಿದ್ದಾರೆ. ಯಾವಾಗಲೂ ಬೀಡಿ ಸೇದಿ ಸೇದಿ ಹೊಗೆಯ ಮಧ್ಯದ ಶಿವನಂತಿರುತ್ತಾರೆ’ ಎಂದಿದ್ದರು. ನನಗೆ ಮೊದಲಿನಿಂದಲೂ ಒಂದು ರೀತಿಯ ಬೆಹೂಮಿಯನ್ಗಳ ಕುರಿತಂತೆ ಆಸಕ್ತಿ. ಹಾಗೆಯೇ ದೇವನೂರ ಮಹಾದೇವ ಅವರ ಬಗೆಗೂ ಒಂದು ರೀತಿಯ ಕುತೂಹಲವಿತ್ತು. ಆದರೆ ಅವರನ್ನು ನೇರವಾಗಿ ನೋಡಿದಾಗ ಅವರು ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾರೆ ಎಂದೆನ್ನಿಸುವ ಬದಲು ಅವರೊಬ್ಬ ಮಾನವೀಯ ಅಂತಃಕರಣವುಳ್ಳ ವ್ಯಕ್ತಿ ಎನ್ನಿಸಿತು.
‘ಪ್ರತಿಯೊಬ್ಬರಲ್ಲಿಯೂ ಕೆಲವು ಒಳ್ಳೆಯ ಗುಣಗಳಿರುತ್ತವೆ. ಅವುಗಳನ್ನು ಗುರುತಿಸಿ ಬಳಕೆಗೆ ತರಬೇಕು. ಹೀಗಾದಾಗ ಎಲ್ಲರೂ ಒಳ್ಳೆಯವರೇ ಅಥವಾ ಒಳ್ಳೆಯವರಾಗುತ್ತಾರೆ’ ಎಂಬ ನಂಬಿಕೆ ಮಹಾದೇವ ಅವರದು. ಶಿಷ್ಟಾಚಾರಗಳನ್ನು ಉಲ್ಲಂಘಿಸಿದರೂ ಅದೂ ಯಾರಿಗೂ ನೋವಾಗಬಾರದು, ಅನ್ಯಾಯವಾಗಬಾರದು ಎಂದು ಯೋಚಿಸುವ ವ್ಯಕ್ತಿತ್ವ. ಆದರೆ ನನ್ನ ವಿಷಯದಲ್ಲಿ ಮೊದಲಿನಿಂದಲೂ ಹೀಗಾಗಲಿಲ್ಲ. ಯಾರನ್ನು ಕಂಡರೂ ಅವರ ಬಗೆಗೆ ಅನುಮಾನ. ಎಲ್ಲರ ಬಗೆಗೆ ಎಚ್ಚರದಿಂದಿರಬೇಕು ಎಂದುಕೊಳ್ಳುತ್ತಿದ್ದೆ. ಯಾರಾದರೂ ಒಳ್ಳೆಯ ಮಾತುಗಳನ್ನಾಡಿದರೂ ಅದರ ಹಿಂದೆ ಏನೋ ಕುತಂತ್ರವಿರಬೇಕೆಂದುಕೊಳ್ಳುತ್ತಿದ್ದೆ. ದಾರಿಯಲ್ಲಿ ಸಿಕ್ಕರೆ ಅವರಿಂದ ತಪ್ಪಿಸಿಕೊಳ್ಳುತ್ತಿದ್ದೆ. ಹೀಗಾಗಿ ನನ್ನ ಪ್ರಕಾರ ಎಲ್ಲರೂ ಮೋಸಗಾರರು, ಕೆಟ್ಟವರೆಂದು ನಂಬಿದ್ದೆ. ಯಾಕೆ ಹೀಗೆಂದು ನನಗೂ ಅರ್ಥವಾಗುವುದಿಲ್ಲ. ನಾನು ಬದುಕಿದ ವಾತಾವರಣ, ಅನುಭವ ಹೀಗೆ ಮಾಡಿರಬಹುದೇ? ಕಾಲಕ್ರಮೇಣ ನನ್ನಲ್ಲೂ ಬದಲಾವಣೆಗಳಾದವು. ಆದರೆ ಅವರಂತೆ ನಾನು ಎಲ್ಲರನ್ನೂ ಒಳ್ಳೆಯವರೆಂದು ಸಂಪೂರ್ಣವಾಗಿ ನಂಬುವುದಿಲ್ಲ. ಕೆಲವರು ಕೆಟ್ಟವರು ಅಥವಾ ಒಬ್ಬ ವ್ಯಕ್ತಿಯಲ್ಲಿಯೇ ಒಳ್ಳೆಯ ಮತ್ತು ಕೆಟ್ಟ ಗುಣಗಳಿರುತ್ತವೆ ಎಂದು ನಂಬಿರುವವ ನಾನು.
ಮಹಾದೇವ ಸಾಹಿತ್ಯದಲ್ಲಿ ಬಳಸಿರುವ ಭಾಷೆ ನನಗೆ ಶಿಷ್ಟಾಚಾರದ ಉಲ್ಲಂಘನೆ ಮತ್ತು ಪ್ರತಿಭಟನೆಯಾಗಿ ಕಾಣುತ್ತದೆ. ಯಾವ ಸಮಾಜವನ್ನು ಭಯಮೂಲದಿಂದ ಅನುಭವಿಸುತ್ತೇವೆಯೋ ಅಲ್ಲಿನ ನಡಾವಳಿಕೆಗಳು, ಗ್ರಹಿಕೆಗಳು, ಭಾಷೆ, ಸಾಹಿತ್ಯ ಮುಂತಾದ ಎಲ್ಲ ವಿಷಯಗಳ ಬಗೆಗೆ ಒಂದು ರೀತಿಯ ತಿರಸ್ಕಾರ ಮೂಡುವುದು ಸಹಜ. ತಾನೇ ತಾನಾಗಿ ಶೋಷಿತ ವರ್ಗ ಆಳುವ ವರ್ಗದ ಭಾಷೆಯನ್ನು ಅನುಕರಿಸುವ ಮೂಲಕ ಅದಕ್ಕೆ ವಿರುದ್ಧವಾದ ನೆಲೆಯಿಂದ ಆ ಅವಮಾನ, ಅನುಮಾನಗಳನ್ನು ವ್ಯಕ್ತಪಡಿಸುತ್ತಿರುತ್ತದೆ. ಭಾರತದಂತಹ ಹಲವಾರು ಜಾತಿ, ವರ್ಗ, ಧರ್ಮಗಳ ಸಂಕೀರ್ಣ ಸಮಾಜದಲ್ಲಿ ಭಾಷೆ ಎಂಬುದು ಕೂಡ ಶೋಷಣೆಯ ಪ್ರಬಲ ಅಸ್ತ್ರವಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಭಾಷೆಯ ಬಳಕೆ ಮತ್ತು ನುಡಿಗಟ್ಟುಗಳ ಆಧಾರದ ಮೇಲೆ ಆತನ ಜಾತಿಯನ್ನು ನಿರ್ಣಯಿಸುವ ಹಂತಕ್ಕೆ ಅದು ಹೋಗಿಬಿಡುತ್ತದೆ. ಉದಾ: ‘ಸ’ಕಾರ ಮತ್ತು ‘ಶ’ಕಾರಗಳ ಹಾಗೂ ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ಪ್ರಯೋಗಗಳು ಕನ್ನಡದಲ್ಲಿ (ದ್ರಾವಿಡಮೂಲ) ಇಲ್ಲವೇ ಇರಲಿಲ್ಲ. ಇವೆಲ್ಲಾ ಬಂದಿರುವುದು ಸಂಸ್ಕೃತದ ಪ್ರಭಾವದಿಂದಾಗಿ, ಭಾಷೆಯನ್ನು ಶ್ರೇಣೀಕರಿಸಿಕೊಳ್ಳುವ ಸಲುವಾಗಿ, ಒಂದು ಹಂತದಲ್ಲಿ ಇದು ಕೀಳರಿಮೆ ಮತ್ತು ಮೇಲರಿಮೆಗಳನ್ನು ತರುವುದಷ್ಟೇ ಅಲ್ಲ, ಹೇಳುವುದನ್ನೆಲ್ಲಾ ಕೇಳಲೇಬೇಕೆನ್ನುವ ಮನೋಧರ್ಮದ ಮೂಲಕ ಸಾಂಸ್ಕೃತಿಕ/ಬೌದ್ಧಿಕ ಗುಲಾಮಗಿರಿಯನ್ನು ಹೇರುವ ಅಸ್ತ್ರವಾಗಿಯೂ ಬಳಸಲ್ಪಡುತ್ತದೆ. ಹಾಗೆ ನೋಡಿದರೆ ದಲಿತರು ಸಂಸ್ಕೃತವನ್ನು ನಿರಾಕರಿಸುವುದು ಕೇವಲ ನೆನಪಿನಿಂದ ಮಾತ್ರ. ಅನೇಕ ಕಡೆ ಅದನ್ನು ಬಳಸುವುದು ಕೀಳರಿಮೆಯನ್ನು ಹೋಗಲಾಡಿಸಿಕೊಳ್ಳಲು. ಅಂತಹ ಸಂದರ್ಭಗಳಲ್ಲಿ ಇಂಗ್ಲಿಷ್ ಪ್ರೇಮವನ್ನು ಕಾಣುತ್ತೇವೆ. ಇವತ್ತು ದಲಿತರಿಗೇಕೆ, ಸಂಸ್ಕೃತ ಯಾರಿಗೂ ಬೇಕಿಲ್ಲ. ಭಾಷೆ ಎನ್ನುವುದು ಸಂವಹನದ ಮಾಧ್ಯಮವಲ್ಲವೇ? ಅದು ಸಂವಹನಕ್ಕೆ ತೊಡಕಾದರೆ? ನಾನೊಮ್ಮೆ ಥಾಯ್ಲಾಂಡ್ಗೆ ಹೋಗಿದ್ದಾಗ ಚಿಕನ್ ತಿನ್ನುವ ಮನಸ್ಸಾಯಿತು. ಅಲ್ಲಿನವರಿಗೆ ಇಂಗ್ಲಿಷ್ ಗೊತ್ತಿಲ್ಲ. ನನಗೆ ಥಾಯ್ ಬಾರದು. ನಾನು ಹೇಳಿದ್ದು ಅವನಿಗೆ ಅರ್ಥವಾಗದೆ ಕತ್ತೆಯದೊ, ನಾಯಿಯದೊ ಮಾಂಸ ತಂದಿಟ್ಟರೆ ಎಂದು ನಾನು ಕೋಳಿಯಂತೆ ಕೂಗಿ (ಅಲ್ಲಿ ಮತ್ತು ಇಲ್ಲಿಯ ಕೋಳಿಗಳು ಕೂಗುವುದು ಒಂದೇ ತರಹ ತಾನೇ?) ಹೇಳಬೇಕಾಯಿತು. ಇಂದು ಪ್ರಪಂಚದ ಭಾಷೆಯಾಗಿರುವ ಇಂಗ್ಲಿಷಿನ ಪ್ರಶ್ನೆ ಅಲ್ಲಿ ಏನಾಯಿತು?
ದೇವನೂರರು ರೂಢಿಯಲ್ಲಿದ್ದ ಭಾಷೆಯನ್ನು ನಿರಾಕರಿಸಿ ತನ್ನ ಸಮುದಾಯದ ಭಾಷೆಯಲ್ಲಿ ಅಲ್ಲಿನ ಸತ್ವವನ್ನು ಸಹಜವಾಗಿ ಬಳಸುವ ಮೂಲಕ ಆ ಭಾಷೆಗೂ ಮತ್ತು ಆ ಸಮುದಾಯಕ್ಕೂ ಒಂದು ರೀತಿ ಘನತೆಯನ್ನು ತಂದುಕೊಟ್ಟರು.
                                                                                                                           *
ನನ್ನ ಮತ್ತು ದೇವನೂರರ ಆಯ್ಕೆ ಮತ್ತು ತೀರ್ಮಾನಗಳ ಬಗೆಗೆ ಹೇಳುವುದಾದರೆ ಆಗ ನಾನು ತಳೆದ ತೀರ್ಮಾನಗಳು ಪ್ರತಿಕ್ರಿಯೆಗಳು ಬಹಳ ಸಹಜವಾಗಿತ್ತೆಂದು ಅನ್ನಿಸುತ್ತದೆ. ಹಾಗೊಂದು ವೇಳೆ ನಾನು ಹಾಗೆ ಪ್ರತಿಕ್ರಿಯಿಸದೇ ಸಂತನ ಹಾಗೆ ಮಾತನಾಡಿಬಿಟ್ಟಿದ್ದರೆ ಯಾರೂ ನನ್ನ ಮಾತನ್ನು ನಂಬುತ್ತಿರಲಿಲ್ಲ. ನಾವು ಕಾಣುತ್ತಿದ್ದ ಕಣ್ಣ ಮುಂದಿನ ಜಗತ್ತೆ ಆಗ ಅಷ್ಟು ಕ್ರೂರವಾಗಿತ್ತು. ಜೊತೆಗೆ ನಾನು ಹೋರಾಟಕ್ಕೆ ನೇರವಾಗಿ ಧುಮುಕಿದಾಗ ಹೋರಾಟದ ಶಕ್ತಿ ನನ್ನನ್ನು ಹಾಗೆ ಪ್ರತಿಕ್ರಿಯಿಸುವಂತೆ ಮಾಡಿರಬಹುದು. ಆದರೆ ದೇವನೂರರು ಮೊದಲಿನಿಂದಲೂ ಒಂದು ರೀತಿಯ ನಿರ್ಲಿಪ್ತತೆಯಿಂದಲೇ ಪ್ರತಿಕ್ರಿಯಿಸುತ್ತಿರುವುದನ್ನು ನಾವು ನೋಡಬಹುದು. ಈಗಲೂ ಯಾರಾದರೂ ಒಬ್ಬ ಯುವಕ ನಾನು ಆ ದಿನಗಳಲ್ಲಿ ಮಾತನಾಡಿದಂತೆ ಮಾತನಾಡುತ್ತಿದ್ದರೆ/ಪ್ರತಿಕ್ರಿಯಿಸುತ್ತಿದ್ದರೆ ಅದು ಸತ್ಯ ಎನ್ನಿಸುತ್ತದೆ. ಆದರೆ ಆ ಘಟ್ಟವನ್ನು ಮೀರಿ ಆತ ಬೆಳೆಯಬೇಕು.
ಗಾಂಧಿ, ಅಂಬೇಡ್ಕರ್ ಚಿಂತನೆಯ ಮಾದರಿಗಳಂತೆ ಇಂದಿನ ಮಾರುಕಟ್ಟೆಯ ಸಿದ್ಧಾಂತ ಕೂಡ ಹೆಚ್ಚು ಪ್ರಾಯೋಗಿಕವಾಗಿ ನಮ್ಮ ಮುಂದಿದೆ. ಅದೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ದಲಿತ ಚಳವಳಿಯನ್ನು ನೈತಿಕ ಪ್ರಶ್ನೆಯಾಗಿ ಕಟ್ಟಬೇಕು. ಅದು ಕೇವಲ ವರ್ಗ, ಜಾತಿ ಹೋರಾಟವಾಗದೆ ಎಲ್ಲ ವರ್ಗ, ವರ್ಣ, ಜಾತಿವಿಮೋಚನೆಯ ಹೋರಾಟವಾಗಬೇಕು. ಹೀಗಾಗದಿದ್ದಲ್ಲಿ ವರ್ಗ ವರ್ಗಗಳಲ್ಲಿಯೇ ಒಡಕುಗಳಾಗಿ ಬಡವರು, ಶ್ರಮಜೀವಿಗಳು ಹಂಚಿಹೋಗುವ ಸಾಧ್ಯತೆಗಳಿವೆ. ಎಲ್ಲರೂ ಸಮಾನವಾಗಿ ಬದುಕುವ ವಾತಾವರಣವನ್ನು ನಿರ್ಮಿಸಬೇಕು. ನಮ್ಮಲ್ಲಿ ಈ ನ್ಯಾಯ ಅನ್ಯಾಯಗಳ ಬಗೆಗೆ ಮಾತನಾಡಿದವರು, ಜಾತೀಯತೆಯ ಬಗೆಗೆ ಸೊಲ್ಲನ್ನೆತ್ತಿದವರು ಸಂತರು. ಆದರೆ ಅವರು ಹೋರಾಟಕ್ಕಿಳಿಯದ ಕಾರಣ ಅದು ಅಷ್ಟೊಂದು ನಿರೀಕ್ಷಿತ ಸ್ವರೂಪವನ್ನು ಪಡೆದುಕೊಳ್ಳಲಿಲ್ಲ. ಈ ಅಂಶವನ್ನು ನಾವು ಮರೆಯಬಾರದು. ಜಾತಿಯನ್ನು ನಾವು ರಾಜಕೀಯವಾಗಿ ನೋಡದೆ ಆಧ್ಯಾತ್ಮಿಕವಾದ ನೆಲೆಗಟ್ಟಿನಲ್ಲಿ, ಧಾರ್ಮಿಕ ಚೌಕಟ್ಟಿನಲ್ಲಿ ನೋಡಬೇಕು. ಆದರೆ ಅದರ ನಿರ್ಮೂಲನೆಗೆ ಸಾಮಾಜಿಕ ಕ್ರಿಯೆಯ ಅಗತ್ಯವೂ ಇದೆ. ಕೆಳವರ್ಗದ ಜನರು ಮಾತ್ರವೇ ದಲಿತ ಚಳವಳಿಯಲ್ಲಿ ಸೇರಿಕೊಳ್ಳಬೇಕೆಂದಿಲ್ಲ. ಎಲ್ಲ ದಮನಿತ ವರ್ಗಗಳೂ ಸೇರಿಕೊಂಡಾಗ ಅವರ ಬೆಂಬಲ ಮತ್ತು ಅನುಕಂಪಗಳು ದೊರೆತು ಸಂಘಟನೆ ಇನ್ನಷ್ಟು ಶಕ್ತಿಯುತವಾಗುತ್ತದೆ.
ಇಂದು ಬದಲಾವಣೆಗಳು ತುಂಬಾ ಶೀಘ್ರಗತಿಯಲ್ಲಾಗುತ್ತಿವೆ. ಅದನ್ನು ಗುರುತಿಸಿಕೊಳ್ಳದೇ ಹೋದದ್ದು ದಲಿತ ಚಳವಳಿಯ ಮಿತಿಯಾಯಿತೇನೋ ಎನ್ನಿಸುತ್ತದೆ. ಇವತ್ತು ಮಿಲಿಟೆಂಟ್ ಆಗಿ ಮಾತನಾಡುವ ನಾಯಕರು ಬಳಸುವ ಭಾಷೆ, ಪ್ರತಿಕ್ರಿಯೆಗಳು ಇಪ್ಪತ್ತು-ಮೂವತ್ತನೆಯ ದಶಕದ್ದಾಗಿರುತ್ತದೆ. ಅಂದರೆ ಅದರ ಬೆಳವಣಿಗೆ ಎಷ್ಟು ನಿಧಾನಗತಿಯದ್ದು ಎಂಬುದನ್ನಿಲ್ಲಿ ಗಮನಿಸಿ. ಶೋಷಣೆಯ ವಿಧಾನಗಳು ಕೂಡ ಬೇರೆ ಬೇರೆ ದಾರಿಗಳನ್ನು ಹಿಡಿದಿರುವಾಗ ಆ ವಿಧಾನಗಳಿಗೆ ವಿರುದ್ಧವಾದ ಪ್ರತಿಭಟನೆಯ ದಾರಿಗಳನ್ನು ಕಂಡುಕೊಳ್ಳಬೇಕು. ಜಾಗತೀಕರಣ ಎಂಬುದು ಈ ಹೊತ್ತು ದಲಿತರಿಗೆ ಮೊದಲ ಹೊಡೆತ. ಅದರ ಬಗೆಗೆ ಯಾರೂ ಸಮರ್ಥವಾಗಿ ವಿರೋಧಿಸುತ್ತಿಲ್ಲ.
ನನ್ನ ಸ್ನೇಹಿತರಲ್ಲಿ ಅನೇಕರು ನಾನಿನ್ನೂ ಬೀದಿಗಳಲ್ಲಿ ಹಿಂದಿನಂತೆ ಭಾಷಣಗಳನ್ನು ಮಾಡಬೇಕು. ಹಾಗೆಯೇ ಇರಬೇಕೆಂದು ಬಯಸುತ್ತಾರೆ. ಆದರೆ ನನಗೆ ಸಿಕ್ಕ ಅಧಿಕಾರ ಮತ್ತು ಅವಕಾಶಗಳಿಂದಾಗಿ ದಲಿತರ ಸಮಸ್ಯೆಗಳಿಗೆ ಬೇರೆಯದೇ ಸ್ವರೂಪ ದಕ್ಕಿದ್ದನ್ನು ಮರೆಯುತ್ತಾರೆ. ವಿಧಾನ ಮಂಡಲದ ಸದನದಲ್ಲಿಯೂ ದಲಿತರ ಹೋರಾಟ ಕೂಡ ತುಂಬಾ ಮುಖ್ಯವಾದದ್ದು. ಇಲ್ಲಿ ನಾನೆಷ್ಟು ಮಾಡಿದೆ, ಯಶಸ್ವಿಯಾದೆ ಎಂಬುದು ಮುಖ್ಯವಲ್ಲ. ಆದರೆ ಆ ಪ್ರಯತ್ನ ತುಂಬಾ ಮುಖ್ಯವಾದದ್ದು. ಒಂದು ಕಾನೂನಿನ ಮೂಲಕವೂ ದಲಿತರ ಸಮಸ್ಯೆ ಬಗೆಹರಿಯುವಂತಾದರೆ ಯಾಕೆ ನಮ್ಮ ಕಾಲನ್ನು ಹಿಂದೆಗೆಯಬೇಕು? ಅಂತಹ ಹೋರಾಟ ಕೂಡ ನನ್ನ ವ್ಯಕ್ತಿತ್ವಕ್ಕೆ ಬೇರೆಯದೇ ಅನುಭವವನ್ನು ತಂದುಕೊಟ್ಟಿದೆ. ಅದೇ ರೀತಿ ದೇವನೂರರೂ ಸಹ ದಲಿತ ಚಳವಳಿ ಮತ್ತು ಹೋರಾಟಕ್ಕೆ ಬೇರೆಯದೇ ಆದ ಸ್ವರೂಪ ಕೊಡಲು ಮೊದಲಿನಿಂದಲೂ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ.
ದಲಿತ ಚಳವಳಿಯ ಮುಂದಿನ ದಿನಗಳ ಸ್ವರೂಪವನ್ನು ಕಟ್ಟುವ ಜವಾಬ್ದಾರಿ ದೇವನೂರರೂ ಸೇರಿದಂತೆ ಮಾನವಿಯತೆಯನ್ನು ಗೌರವಿಸುವ ಎಲ್ಲರ ಮೇಲಿದೆ.