“ನಿನ್ನ ಹ್ಯಾಪಿ ಬರ್ತಡೇ ಯಾಕೆ ಇಲ್ಲ?”

(ಪ್ರೊ.ಕೆ.ಸುಮಿತ್ರಾಬಾಯಿಯವರ ಬಾಳ ಕಥನ “ಸೂಲಾಡಿ ಬಂದೋ ತಿರುತಿರುಗೀ” ಕೃತಿಯು, 2018ರಲ್ಲಿ ಮೈಸೂರಿನ ಅಭಿರುಚಿ ಪ್ರಕಾಶನದಿಂದ ಮುದ್ರಣಗೊಂಡಿದ್ದು, ಅದರ “ಈಗ” ಎಂಬ ಅಧ್ಯಾಯದಿಂದ ಆಯ್ದ ಕಿರು ಟಿಪ್ಪಣಿ ನಮ್ಮ ಓದಿಗಾಗಿ…)
ರುಹಾನಿ ಹುಟ್ಟುಹಬ್ಬದ ಸಂದರ್ಭ. ಅವಳ ತಲೆಯಲ್ಲಿ ತಾತನಿಗೆ ಯಾಕೆ ಹುಟ್ಟಿದ ಹಬ್ಬ ಇಲ್ಲ ಎಂಬ ಪ್ರಶ್ನೆ!
ನಾವೆಲ್ಲರೂ ಹುಟ್ಟಿದ ಹಬ್ಬ ಆಚರಿಸಿಕೊಳ್ಳದಿದ್ದರೂ ಹ್ಯಾಪಿ ಬರ್ತಡೇ ಹೇಳಿಕೊಳ್ಳುತ್ತಿದ್ದೆವು.
ಆದರೆ ದೇಮಾಗೆ ಇದುವರೆಗೂ ಯಾರು ಹೇಳಿಲ್ಲ.
ರುಹಾನಿ ತಡೆದುಕೊಳ್ಳಲಾಗದೆ ತಾತನ್ನ ಕೇಳಿದಳು:
‘ನಿನ್ನ ಹ್ಯಾಪಿ ಬರ್ತಡೇ ಯಾಕೆ ಇಲ್ಲ?’
‘ನಾನು ಹುಟ್ಟಿದ ತಾರೀಖು, ಇಸವಿ ಗೊತ್ತಿಲ್ಲ ಕಂದಾ’
ರುಹಾನಿ ಪೆಚ್ಚಾದಳು. ಆಮೇಲೆ-
‘ಒಂದು ಐಡಿಯಾ!’
‘ಏನು?’
‘ಇನ್ನು ಮುಂದೆ ನನ್ನ ಹ್ಯಾಪಿ ಬರ್ತಡೇ ದಿನವೇ ನಿನ್ನ ಬರ್ತಡೇ ಓಕೆ?’
‘ಓಕೆ!’
ಆಟದಲ್ಲಿ ಗೆದ್ದವರಂತೆ ಇಬ್ಬರೂ ಪರಸ್ಪರ ಅಂಗೈ ತಟ್ಟಿ ಸಂಭ್ರಮಿಸಿದರು. ಅಂತೂ ದೇಮಾ ಮೊಮ್ಮಗಳಿಂದ ಹುಟ್ಟಿದ ದಿನ ಕಂಡನು!