ದೇ.ಮ. ಕುರಿತು ಕೆಲ ವಿಚಾರಗಳು-ಕೆ.ರಾಜಶೇಖರ ಕೋಟಿ

[ಆಂದೋಲನ ಪತ್ರಿಕಾ ಸಂಪಾದಕರಾದ ಕೆ.ರಾಜಶೇಖರ ಕೋಟಿಯವರು ತಮ್ಮ ಪತ್ರಿಕೆಯಲ್ಲಿ ಬರೆಯುತ್ತಿದ್ದ “ಇದ್ದದ್ದು ಇದ್ಹಾಂಗ”- ಅಂಕಣದಲ್ಲಿ ಜೂನ್ 2013ರಲ್ಲಿ ದೇವನೂರರ ಬಗ್ಗೆ ಬರೆದ ಲೇಖನ ನಮ್ಮ ಮರು ಓದಿಗಾಗಿ…]

 

ಪ್ರಿಯ ಓದುಗರೆ,
ಜೂನ್‌ 7ರಂದು ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದವರು ವಿಸ್ಮಯ ಫೌಂಡೇಶನ್ ಮತ್ತು ಗ್ರಾಮೀಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ: ಕಾಲದ ಕನ್ನಡಿ’ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣ ಹಾಗೂ ಮುಕ್ತ ಸಂವಾದದ ಸಮಗ್ರ ವರದಿಯನ್ನು ಜೂನ್ 8ರ ಪತ್ರಿಕೆಯಲ್ಲಿ ನೀವು ಓದಿರಲು ಸಾಕು. ನಿಜ ಹೇಳಬೇಕೆಂದರೆ, ಈ ಕಾರ್ಯಕ್ರಮದಲ್ಲಿ ನಾನು ಕೂಡ ಪಾಲ್ಗೊಳ್ಳಬೇಕಿದ್ದಿತು. ಒಂದು ತಿಂಗಳು ಮೊದಲೇ ಡಾ.ನರೇಂದ್ರಕುಮಾರ್ ಹಾಗೂ ಡಾ.ಹಾಲತಿ ಸೋಮಶೇಖರ್ ಅವರು ನನ್ನನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದರು. ನಾನು ಕೂಡ ಅತ್ಯಂತ ಸಂತೋಷದಿಂದಲೇ ಒಪ್ಪಿಕೊಂಡಿದ್ದೆ. 1972ರ ಸುಮಾರಿಗೆ ಪಂಚಯವಾಗಿ, ಆನಂತರ 1974ರಿಂದ ನಿಕಟ ಸಂಪರ್ಕಕ್ಕೆ ಬಂದು ತೀರಾ ಹತ್ತಿರದಿಂದ ದೇವನೂರ ಮಹಾದೇವ ಅವರ ಬದುಕು, ಬರಹ, ಸಿದ್ಧಾಂತ, ಹೋರಾಟವನ್ನು ಕಾಣುತ್ತ ಬಂದಿರುವ ನಾನು ಅವರ ಬಗೆಗಿನ ಅನಿಸಿಕೆಯನ್ನು ಅವತ್ತು ಹಂಚಿಕೊಳ್ಳಲು ಉತ್ಸುಕನಾಗಿದ್ದ. ಆದರೆ, ಹಠಾತ್ತನೇ ನನ್ನ ಆರೋಗ್ಯ ಕೆಟ್ಟು ಆಸ್ಪತ್ರೆ ಸೇರಬೇಕಾಗಿ ಬಂದ ಕಾರಣದಿಂದ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲೇ ಇಲ್ಲ. ಹೀಗಾಗಿ, ಅವತ್ತು ನಾನು ಏನು ಮಾತನಾಡಬೇಕೆಂದು ಅಂದುಕೊಂಡಿದ್ದೆನೋ ಅಥವಾ ಏನು ಮಾತನಾಡಬಹುದಿತ್ತೋ ಆ ಪೈಕಿ ಕೆಲವು ವಿಚಾರ ಗಳನ್ನು ಹಾಗೂ ಸ೦ಗತಿಗಳನ್ನು ಇಲ್ಲಿ ನಿಮ್ಮೊಂದಿಗೆ ಹ೦ಚಿಕೊಳ್ಳುತ್ತಿದ್ದೇನೆ. ಧ್ವನಿವರ್ಧಕದ ಮುಂದೆ ನಿಂತು ಮಾತನಾಡುವಾಗ ಸಹಜವಾಗಿ, ಯಾವ ಮುಚ್ಚುಮರೆಯಿಲ್ಲದೆ ನಿರರ್ಗಳವಾಗಿ, ಸಮಗ್ರವಾಗಿ ಹೊರಹೊಮ್ಮುವ ವಿಚಾರಗಳು, ಬರೆಯುವ ಸಂದರ್ಭದಲ್ಲಿ ತಡೆ ತಡೆದು, ತೂಕ ಮಾಡಿ, ಮತ್ತೆ ಮತ್ತೆ ಯೋಚನೆ ಮಾಡಿ, ಒಂದಿಷ್ಟು ಉತ್ಪ್ರೇಕ್ಷೆಗೂ ಅವಕಾಶವಾಗುವಂತೆ ಬರುವ ಕಾರಣದಿಂದ, ಇಂದು ನಾನೇನಾಗಿದ್ದೇನೆಯೋ, ನನ್ನ (ನಿಮ್ಮದೂ ಹೌದು) ಪತ್ರಿಕೆ ಏನಾಗಿದೆಯೋ ಇದರ ಹಿಂದೆ ದೇವನೂರ ಮಹಾದೇವರ ಪ್ರೇರಣೆ, ಪ್ರೋತ್ಸಾಹ, ಬೆಂಬಲ, ಒತ್ತಾಸೆ ಕುರಿತಂತೆ ಮಾತ್ರ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ.

ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಲೋಹಿಯಾ, ಜೆ.ಪಿ. ಪ್ರಣೀತ ಸಮಾನತೆಯ ಸಮಾಜದ ಸಿದ್ಧಾಂತದಿಂದ ಆಕರ್ಷಿತನಾಗಿ 1972ರಲ್ಲಿ ಆಂದೋಲನವನ್ನು ವಾರಪತ್ರಿಕೆಯಾಗಿ ಧಾರವಾಡದಲ್ಲಿ ಆರಂಭಿಸಿದ್ದ ನಾನು 1974ರಲ್ಲಿ ಆಕಸ್ಮಿಕವಾಗಿ, ಕಾರಣಾಂತರಗಳಿಂದ ಅಲ್ಪ ಕಾಲಾವಧಿಗೆಂದು ಜೆ.ಪಿ. ಚಳವಳಿಗೆ ಪೂರಕವಾಗಿ ಮೈಸೂರಿಗೆ ಕರೆಯಿಸಲ್ಪಟ್ಟು ಸಮಾಜವಾದಿ ಗೆಳೆಯರ ಸಹಕಾರದಿಂದ ಪತ್ರಿಕೆಯನ್ನು ಮುಂದುವರಿಸಿಕೊಂಡು ಹೊರಟಿದ್ದೆ. ಆ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿ ಜೆ.ಪಿ. ಚಳವಳಿ ನಿ೦ತು ಬಿಟ್ಟಿತು. ನಾನು ಪತ್ರಿಕೆಯನ್ನು ನಿಲ್ಲಿಸಬೇಕಾಗಿ ಬಂತು. ನಿಲ್ಲಿಸಿ ಅಬ್ಬೇಪಾರಿಯಾಗಿಬಿಟ್ಟೆ, ಇಲ್ಲಿದ್ದು ಇನ್ನೇನು ಮಾಡುವುದು? ಧಾರವಾಡಕ್ಕೆ ವಾಪಾಸು ಹೋಗಬೇಕೆಂದಾಗ- ಹಠ ಮಾಡಿ, ಒತ್ತಾಯದಿಂದ ನನ್ನನ್ನು ಮೈಸೂರಿನಲ್ಲಿ ಉಳಿಸಿಕೊಂಡವರೇ ದೇವನೂರರು. ಕೆಲಸವಿಲ್ಲದೆ ತಾವೇ ಲಾಟರಿ ಹೊಡೆಯುತ್ತಿದ್ದರೂ, ಅವರಿವರಿಂದ ಕಾಡಿ, ಬೇಡಿ ದಿನವೂ ಒಂದಿಷ್ಟು ಪುಡಿಗಾಸು ಹೊಂದಿಸಿ ನನ್ನ ಊಟ ತಿಂಡಿಗೆ ವ್ಯವಸ್ಥೆ ಮಾಡುತ್ತಿದ್ದರು. ಮಹಾದೇವ ಏನಾದರೂ ನನ್ನ ಬಳಿ ಬರದಿದ್ದ ದಿನ ಉಪವಾಸವೇ ನನಗೆ ಗತಿ. ಒಂದು ದಿನ ಆಲನಹಳ್ಳಿ ಕೃಷ್ಣ ಅವರು ದೇವನೂರರನ್ನು ಕರೆದುಕೊಂಡು
ಒಂದು ಬ್ಯಾಂಕಿನಲ್ಲಿ ಎರಡು ಸಾವಿರ ರೂಪಾಯಿ ಸಾಲ ಕೊಡಿಸಿದರು. ಆಗ ನಾನೂ ಜೊತೆಗಿದ್ದೆ. ಆಗ ದೇವನೂರರು ಏನು ಮಾಡಿದರು ಗೊತ್ತೇ? ಉಪವಾಸ ವನವಾಸ ರೂಢಿಯಾಗಿದ್ದ ನನಗೆ ಒಂದು ನೂರು ರೂಪಾಯಿ ಕೊಟ್ಟು, ‘ಕೋಟಿ, ಇವತ್ತು ಹೊಟ್ಟೆ ತುಂಬಾ ಊಟ ಮಾಡಿಬಿಡಿ’ ಎಂದರು. ಇಂತಹ ತಾಯಿ ಕರುಳು ಅವರದಾಗಿತ್ತು. ಕೆಲವು ದಿನಗಳ ನಂತರ ಒಬ್ಬೊಬ್ಬ ಗೆಳೆಯರಿಂದಲೂ ಐವತ್ತೋ ನೂರೋ ಚಂದಾ ಸಂಗ್ರಹಿಸಿ ಒಂದು ಸಣ್ಣ, ಕಾಲಿನಿಂದ ತುಳಿಯುವ ಮುದ್ರಣ ಯಂತ್ರ ಹಾಗೂ ಅಚ್ಚುಮೊಳೆಗಳ ಕೆಲವು ಕೇಸುಗಳನ್ನು ನನಗೆ ಖರೀದಿಸಿ ಕೊಟ್ಟು, ಆಂದೋಲನ ಮಾತ್ರವಲ್ಲ, ಅದರ ಜೊತೆ ಪಂಚಮ ಪತ್ರಿಕೆಯನ್ನು ಸಹ ನಾವೇ ಮೊಳೆ ಜೋಡಿಸಿ, ನಾವೇ ಮುದ್ರಿಸಿ ಆನಂತರ ನಮ್ಮೊಂದಿಗೆ ತಾವೂ ಬೀದಿಗಳಲ್ಲಿ, ವೃತ್ತಗಳಲ್ಲಿ ನಿಂತು ಮಾರಲು ಸಹ ಹೆಗಲು ಜೋಡಿಸಿದರು.

ನೀವು ಇತಿಹಾಸದ ಪಾಠಗಳಲ್ಲಿ ಓದಿರಬಹುದು, ಅರಸರು, ಪೇಶ್ವಾಯಿಗಳು, ಸುಲ್ತಾನರು, ಶ್ರೀಮಂತರು, ಮೇಲ್ವರ್ಗದವರು, ಮೇಲು ಜಾತಿಯವರು ದುರ್ಬಲರಿಗೆ, ಬಡವರಿಗೆ, ದಲಿತರಿಗೆ, ಶೋಷಿತರಿಗೆ ನೆರವು ಮಾಡಿ, ಆಸರೆ ನೀಡಿ ಅವರ ಏಳ್ಗೆಗೆ ಕಾರಣವಾಗಿರುವ ಉದಾಹರಣೆಗಳುಂಟು. ಆದರೆ ನನ್ನ ವಿಷಯದಲ್ಲಿ ಇದು ತದ್ವಿರುದ್ಧ.
ಹುಟ್ಟಿನಿಂದ ದಲಿತನಲ್ಲದ ನನ್ನನ್ನು ಒಬ್ಬ ದಲಿತ ಮಹಾದೇವ ಸಾಕಿ ಸಲಹಿ, ಬದುಕು ರೂಪಿಸಿಕೊಟ್ಟು ವೈಯಕ್ತಿಕವಾಗಿ ಹಾಗೂ ಪತ್ರಿಕೆಯ ದೃಷ್ಟಿಯಿಂದಲೂ ಸಮಾಜಕ್ಕೆ ಇರುವ ಇತಿಮಿತಿಯಲ್ಲೇ ಒಳ್ಳೆಯದನ್ನು ಮಾಡಲು ಕಾರಣೀಭೂತರಾಗಿದ್ದಾರೆ. ಇವತ್ತು ನಾನು ಹಾಗೂ ಪತ್ರಿಕೆ ಸಮಾನತೆಯ ಸಮಾಜದ ನಿಟ್ಟಿನಲ್ಲಿ, ಜಾತಿ-ಮತ-ಧರ್ಮದ ಮೌಢ್ಯದ ಹಂಗಿಲ್ಲದೆ ನಿರ್ಭಿಡೆಯಿಂದ, ನಿಸ್ಸಂಕೋಚದಿಂದ, ಎದೆಗಾರಿಕೆಯಿಂದ ಏನನ್ನಾದರೂ ಮಾಡಲು ಸಾಧ್ಯವಾಗಿದ್ದರೆ, ಶೋಷಿತರ, ತುಳಿತಕ್ಕೊಳಗಾದವರ ಧ್ವನಿಯಾಗಲು ಸಾಧ್ಯವಾಗಿದ್ದರೆ ಅದಕ್ಕೆ ದೇವನೂರರೇ ಮೂಲ ಪ್ರೇರಣೆ. ಸಮಾನತೆಯ ಹರಿಕಾರರಾದ ಬುದ್ಧ, ಬಸವ, ಗಾಂಧಿ ಲೋಹಿಯಾ, ಅಂಬೇಡ್ಕರರ ಅನುಯಾಯಿ ನಾನು. ಇವತ್ತು ಬಸವಣ್ಣನವರ ನಿಜವಾದ ಅನುಯಾಯಿಗಳು ನನ್ನನ್ನು ಎಷ್ಟು ಒಪ್ಪಿಕೊಳ್ಳುತ್ತಾರೊ, ಸಮಾನತೆಗಾಗಿ, ಸ್ವಾಭಿಮಾನಕ್ಕಾಗಿ ಆಶಿಸುತ್ತಿರುವ ದಲಿತ ಬಂಧುಗಳೂ ನನ್ನನ್ನು ತಮ್ಮವನೆಂದು ಒಪ್ಪಿಕೊಂಡಿರುವುದು ನನ್ನ ಬದುಕಿನ ಸಾರ್ಥಕ್ಯವೇ ಸರಿ. ಇದಕ್ಕೆ ದೇವನೂರರೇ ಪ್ರೇರಣೆ ಎಂದು ಮತ್ತೆ ಮತ್ತೆ ಸಾರಿ ಹೇಳುತ್ತೇನೆ.

ಇವತ್ತು ದೇವನೂರರು, ‘ಮನುಜ ಸಮಾಜದ ಹರಿಕಾರ’, ‘ಗಾಂಧಿ, ಅಂಬೇಡ್ಕರ್, ಲೋಹಿಯಾರ ಸಮ್ಮಿಲನ’, ‘ಸಮ ಸಮಾಜ ನಿರ್ಮಾಣಕ್ಕೆ ಮುಂದಿನ ದಾರಿ ಯಾವುದು, ಮುಂದಿನ ಗುರಿ ಏನು?’ ಎಂಬ ಪ್ರಶ್ನೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಬಲ್ಲ ಮಹಾ ತಾಯಿ’… ಇತ್ಯಾದಿ ಏನಾಗಿದ್ದರೂ ಇದು ಹಠಾತ್ತನೇ ಆಗಿದ್ದುದಲ್ಲ. 1970ರ ದಶಕದಿಂದಲೇ ಬುದ್ಧ, ಬಸವ, ಗಾಂಧಿ, ಲೋಹಿಯಾ, ಅಂಬೇಡ್ಕರ್‌ರು ಅವರ ಎದೆಯಾಳದಲ್ಲಿ ನೆಲೆಸತೊಡಗಿದ್ದರು. ಅವತ್ತು ದೇವನೂರರು ‘ನರಬಂಡಾಯ’ ಎಂಬ ಪತ್ರಿಕೆ ತರುತ್ತಿದ್ದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆಗ ಜಾತಿ ಗಲಭೆಗಳು ನಡೆಯತೊಡಗಿದ್ದವು. ಯಾರೊ ಒಬ್ಬ ಮೇಲ್ಜಾತಿಯ ವಿದ್ಯಾರ್ಥಿ ಮುಖಂಡ, ‘ಈ ದಲಿತರನ್ನು ಕತ್ತರಿಸಿ ಹಾಕಬೇಕು’ ಎಂದು ಅಬ್ಬರಿಸಿದ್ದ. ಆಗ ದೇವನೂರರು ಏನು ಮಾಡಿದರು ಗೊತ್ತೇ? ಒಂದು ಚಾಕು ತೆಗೆದುಕೊಂಡು ಸೀದಾ ಆ ಮುಖಂಡನ ಬಳಿ ಹೋಗಿ, ‘ಇದೋ ಈ ಚಾಕು ತೆಗೆದುಕೋ, ನನ್ನನ್ನು ಇರಿದು ಸಾಯಿಸಿಬಿಡು” ಎಂದಾಗ ಆ ಮುಖಂಡ ಅಪ್ರತಿಭನಾಗಿ ತಲೆ ತಗ್ಗಿಸಿ ಬಿಟ್ಟ, ಗಲಭೆಗಳೂ ಶಮನಗೊಂಡವು. ಹೀಗೆ ದೇವನೂರರು ಆ ವಯಸ್ಸಿನಿಂದಲೇ ಮಹಾತ್ಮರ ಗುಣಗಳನ್ನು ಮೈಗೂಡಿಸಿಕೊಂಡು ಇಂದಿಗೂ ಆ ನಿಟ್ಟಿನಲ್ಲಿ ನಡೆಯುತ್ತಿದ್ದಾರೆ. ಅವರ ಹೆಜ್ಜೆಗಳು ದಾಪುಗಾಲಿನ ಹೆಜ್ಜೆಗಳಾಗಲೆಂದು ಆಶಿಸುತ್ತೇನೆ.