ದೇವರ ಮೌಲ್ಯಮಾಪನ: ರಂಗಕ್ಕಿಳಿಯಲಿ ಕಥನ -ದೊಡ್ಡಿಶೇಖರ ಮದ್ದೂರು

(ದೇವನೂರ ಮಹಾದೇವ ಅವರ 2024 ಜನವರಿ 20ರಂದು ಪ್ರಜಾವಾಣಿಯಲ್ಲಿ ಪ್ರಕಟಿತ ವಿಶ್ಲೇಷಣೆ ಬರಹಕ್ಕೆ ವಾಚಕರವಾಣಿ ಪ್ರತಿಕ್ರಿಯೆ)
‘ಮೊಳಗಲಿ ನ್ಯಾಯದ ಗಂಟೆ’ ಎಂಬ ದೇವನೂರ ಮಹಾದೇವ ಅವರ ಲೇಖನ (ಪ್ರ.ವಾ., ಜ. 20) ವರ್ತಮಾನ ಭಾರತದ ಸನ್ನಿವೇಶಕ್ಕೆ ತೀವ್ರವಾಗಿ ಪ್ರತಿಸ್ಪಂದಿಸಿದೆ. ಆದಿವಾಸಿ ಜನಪದರ ಮೌಲ್ಯಪ್ರಜ್ಞೆಯ ಔಚಿತ್ಯವನ್ನು ಎತ್ತಿಹಿಡಿಯುತ್ತಾ, ಸಮಕಾಲೀನ ರಾಜಕೀಯವನ್ನೂ ಹಾಗೆಯೇ ಮೌಲ್ಯಮಾಪನ ಮಾಡಬೇಕಾದ ಜರೂರನ್ನು ಲೇಖನ ಮಂಡಿಸುತ್ತದೆ. ಆದರೆ ದೇವನೂರ ಅವರಶಕ್ತಿ ಅಥವಾ ವೈಶಿಷ್ಟ್ಯ ಎಂದರೆ, ರೂಪಕಾತ್ಮಕವಾದ ಕಥನ ಪ್ರತಿಭೆ. ಈ ಲೇಖನದಲ್ಲಿಯೂ ಆದಿವಾಸಿಗಳ ದೇವರ ಮೌಲ್ಯಮಾಪನದ ಕತೆಯನ್ನು ವರ್ತಮಾನದ ವಿವೇಕದ ಬೆಳಕೆಂಬ ನಂಬಿಕೆಯ ಹಿನ್ನೆಲೆಯಲ್ಲಿ ಅದನ್ನು ರೂಪಕ ಮಾಡಿ ಅವರು ಹೇಳಿದ್ದಾರೆ. ದೇವರ ಹೆಸರಿನಲ್ಲಿ ರಾಜಕಾರಣ ವಿಜೃಂಭಿಸುತ್ತಿರುವ ಸಂದರ್ಭದಲ್ಲಿ ದೇವನೂರ ಅವರು ದೇವರ ಮೌಲ್ಯಮಾಪನದ ಕತೆ ಹೇಳುವುದು ಅತ್ಯಂತ ಮಾರ್ಮಿಕವಾಗಿದೆ. ಆದರೆ ಹೀಗೆ ರೂಪಕದಲ್ಲಿ ಹೇಳುವ ದೇವರ ಮೌಲ್ಯಮಾಪನದ ಕತೆಯು ಸಾಮಾನ್ಯರು ಗ್ರಹಿಸುವುದಕ್ಕೆ ಸುಲಭವಾಗಿದೆಯೇ? ರೂಪಕದ ಭಾಷೆಯು ಸಂವೇದನಾಶೀಲ ಓದುಗರಿಗೆ ಅರ್ಥವಾಗುತ್ತದೆಯೇ ಹೊರತು, ಶ್ರೀಸಾಮಾನ್ಯರಿಗೆ ಈ ಗ್ರಹಿಕೆ ಕಷ್ಟಸಾಧ್ಯ ಎನಿಸುತ್ತದೆ. ಜೊತೆಗೆ ‘ದೇವರ ಮೌಲ್ಯಮಾಪನ ಪ್ರಜ್ಞೆ’ಯ ಕತೆಯನ್ನು ಸಾಮಾನ್ಯರು ರೂಪಕವಾಗಿ ಪರಿಭಾವಿಸುವ ಬದಲು, ವಾಚ್ಯವಾಗಿಯೇ ಗ್ರಹಿಸಬಹುದು. ಅದರಿಂದ ಉಲ್ಟಾ ಪರಿಣಾಮವಾದರೂ ಅಚ್ಚರಿಪಡಬೇಕಿಲ್ಲ. ಯಾಕೆಂದರೆ, ಕೊರೊನಾ ಸಂದರ್ಭದಲ್ಲಿ ಆಳುವ ನಾಯಕರು ಗಂಟೆ, ಜಾಗಟೆ ಬಾರಿಸಿ, ಧೂಪ, ದೀಪ ಉರಿಸಿ ಎಂದರೆ, ಅದನ್ನು ಚಾಚೂ ತಪ್ಪದೆ ಅನುಕರಿಸಿದವರಲ್ಲಿ, ಹಾಗೆ ಮಾಡಿದರೆ ರೋಗ ಗುಣವಾಗುತ್ತದೆಯೇ ಎಂಬ ಸಣ್ಣ ವೈಚಾರಿಕ ಪ್ರಶ್ನೆಯೂ ಹುಟ್ಟಿರಲಿಲ್ಲ.
ಆದ್ದರಿಂದ ದೇವನೂರ ಅವರ ಈ ದೇವರ ಮೌಲ್ಯಮಾಪನ ರೂಪಕದ ಕತೆಯನ್ನು, ಸಾಂಸ್ಕೃತಿಕವಾಗಿ ಎಚ್ಚರವಿರುವ, ಸಮಕಾಲೀನ ತಲ್ಲಣಕ್ಕೆ ತೀವ್ರವಾಗಿ ಮಿಡಿಯುವ, ಸೃಜನಶೀಲ ಮನಸ್ಸುಳ್ಳ ಯಾರಾದರೂ ನಾಟಕವಾಗಿಸಿದರೆ ಉಪಯುಕ್ತವಾಗುತ್ತದೆ. ಈ ನಾಟಕವು ದೇವರ ಮೌಲ್ಯಮಾಪನ ಮಾಡುವ ಆದಿವಾಸಿ ಜನರ ಕಥನವನ್ನು ಹಾಗೂ ಆ ವಿವೇಕವನ್ನು ವರ್ತಮಾನದ ರಾಜಕೀಯ ಮೌಲ್ಯಮಾಪನಕ್ಕೆ ಅನ್ವಯಿಸುವ ರೀತಿಯನ್ನು ದೃಶ್ಯೀಕರಿಸಬೇಕಾಗುತ್ತದೆ. ಇಂತಹ ನಾಟಕವನ್ನು ಜನರಿಗೆ ಬೀದಿನಾಟಕದಂತೆ ಪ್ರದರ್ಶನ ಮಾಡಿದರೆ, ಕೊಂಚ ಜನಜಾಗೃತಿಯಾದರೂ ಉಂಟಾಗಬಹುದು ಎನಿಸುತ್ತದೆ.