ದೇವನೂರರ “ಆರ್ ಎಸ್ ಎಸ್ ಆಳ ಮತ್ತು ಅಗಲ” ಕೃತಿ ಕುರಿತು-ಚಿಂತಕರು, ವಿಮರ್ಶಕರ ಅಭಿಪ್ರಾಯ

[“ಆರ್ ಎಸ್ ಎಸ್ ಆಳ ಮತ್ತು ಅಗಲ” ಕೃತಿ ಕುರಿತು-ಚಿಂತಕರು, ವಿಮರ್ಶಕರ, ಬರಹಗಾರರ ಅಭಿಪ್ರಾಯಗಳು]
ರಹಮತ್ ತರಿಕೆರೆಯವರ ಕಿರು ಟಿಪ್ಪಣಿ….
“ದೇವನೂರರ ಪುಸ್ತಕವನ್ನು ಒಂದೇ ಗುಕ್ಕಿನಲ್ಲಿ ಓದಿದೆ. ಬಳಿಕ, ಇದು ಯಾಕೆ ಹೀಗೆ ಬಿರುಗಾಳಿಯಂತೆ ಮಾರಾಟವಾಗುತ್ತಿದೆ ಮತ್ತು ಓದುಗೊಳ್ಳುತ್ತಿದೆ; ಗೆಳೆಯರೊಬ್ಬರು ಹೇಳಿದಂತೆ ಚಳುವಳಿಯ ರೂಪಧಾರಣೆ ಮಾಡುತ್ತಿದೆ ಎಂದು ಆಲೋಚಿಸಿದೆ. ತಕ್ಷಣಕ್ಕೆ ಹೊಳೆದ ಕಾರಣಗಳೆಂದರೆ: ಸಂಘಪರಿವಾರದ ಕೋರ್ ಚಿಂತನೆಗಳನ್ನು ಆಯ್ದು ಸಂಗ್ರಹಿಸಿರುವುದು; ಅವನ್ನು ನಮ್ಮ ಉರಿವ ಸಮಕಾಲೀನ ಬದುಕಿನ ವಿವಿಧ ಅವಸ್ಥೆಗಳಿಗೆ ಲಗತ್ತಿಸಿ ವಿಶ್ಲೇಷಿಸಿರುವುದು; ಆ ಮೂಲಕ ಪರ್ಯಾಯವಾಗಿ ಕಟ್ಟಿಕೊಳ್ಳಬೇಕಾದ ನಮ್ಮ ಬಾಳುವೆಯನ್ನು, ಅರ್ಥಾತ್ ಕರ್ನಾಟಕ ಅಥವಾ ಭಾರತದ ಕನಸನ್ನು ಮಂಡಿಸಿರುವುದು; ಹಾಗೂ ಇದೆಲ್ಲವನ್ನು ಸರಳವಾದ ಮನಮುಟ್ಟುವ ಶೈಲಿಯಲ್ಲಿ ನಿರೂಪಿಸಿರುವುದು.
ಒಬ್ಬ ಸೃಜನಶೀಲ ಲೇಖಕ, ತನ್ನ ರಾಜಕೀಯ ಪ್ರಜ್ಞೆಯಿಂದಲೂ ನಾಡಿನ ಕಳಕಳಿಯಿಂದಲೂ ಸಾಂಸ್ಕೃತಿಕ ಹೊಣೆಗಾರಿಕೆ ನಿಭಾಯಿಸುವುದು ಎಂದರೆ ಇದುವೇ. ಕುವೆಂಪು ಇಂತಹುದೇ ಚಾರಿತ್ರಿಕ ಹೊಣೆಗಾರಿಕೆಯಲ್ಲಿ ಮಾಡಿದ `ಆತ್ಮಶ್ರೀಗಾಗಿ ನಿರಂಕುಶತಮತಿಗಳಾಗಿ’ ಭಾಷಣವನ್ನಿದು ನೆನಪಿಸುತ್ತಿದೆ.”
 ಸಂವರ್ತ ಸಾಹಿಲ್ ಟಿಪ್ಪಣಿ…
ದೇವನೂರು ತಮ್ಮ ಪುಸ್ತಕವನ್ನು ಗಂಭೀರವಾದ ಅಕಾಡೆಮಿಕ್ ದಾಟಿಯಲ್ಲಿ ಬರೆದಿದ್ದರೆ ಸಂಘಪರಿವಾರದ ಜನರಿಗೆ ಅಂಥಾ ಸಮಸ್ಯೆ ಆಗುತ್ತಿರಲಿಲ್ಲ. ಸಂಜೆ ಹೊತ್ತು ಮನೆಯಂಗಳದಲ್ಲಿ ಮೈಕಾಸಿಕೊಳ್ಳಲು ಬೆಂಕಿ ಮಾಡಿಕೊಂಡು ಕೂತು ನೆಲಗಡಲೆ ತಿನ್ನುತ್ತಾ, ಸುತ್ತಲಿರುವ ಮಂದಿಯ ಕಣ್ಣಲ್ಲಿ ಕಣ್ಣಿಟ್ಟು, ಆಗೊಮ್ಮೆ ಈಗೊಮ್ಮೆ ಹೆಗಲ ಮೇಲೆ ಕೈಯಿಟ್ಟು ಮಾತನಾಡುವ ದನಿಯಲ್ಲಿ ಬರೆದದ್ದು ಸಂಘಪರಿವಾರದ ಮಂದಿಗಾಗಿರುವ ಉರಿಗೆ ಮುಖ್ಯ ಕಾರಣ.
ಆರ್.ಎಸ್.ಎಸ್.: ಆಳ ಮತ್ತು ಅಗಲ, ಕೃತಿಯಲ್ಲಿ ಸಂಘಪರಿವಾರ ಹೇಗೆ ಮುಸ್ಲಿಂ ದ್ವೇಷಿ ಮತ್ತು ಅವರ ನಿರ್ನಾಮವೇ ಇವರ ಧ್ಯೇಯೋದ್ದೇಶ ಎಂದು ಬರೆದಿದ್ದರೆ ಸಹ ಸಂಘಪರಿವಾರದ ಮಂದಿಗೆ ಸಮಸ್ಯೆ ಆಗುತ್ತಿರಲಿಲ್ಲ. ಬಹುಷಃ ಅದನ್ನು ತಮಗೆ ಸಿಕ್ಕಿದ ಪುಗ್ಸಟೆ ಪ್ರಚಾರ ಎಂದೇ ಇಷ್ಟ ಪಡುತ್ತಿದ್ದರು; ಯಾಕೆಂದರೆ ಅವರ ಮುಸ್ಲಿಂ ದ್ವೇಷಕ್ಕೆ ಜನಸಮೂಹದಲ್ಲಿ ಅಥವಾ ಹಿಂದೂ ಸಮಾಜದಲ್ಲಿ ಸಿಕ್ಕಿರುವ ಅಕ್ಸೆಪ್ಟೆನ್ಸ್. ಆದರೆ ಸದ್ಯ ಸಂಘಪರಿವಾರಕ್ಕೆ ಕಷ್ಟ ತಂದಿರುವುದು- ದೇವನೂರು ಇವರ ಮುಸ್ಲಿಂ ದ್ವೇಷವಕ್ಕಿಂತ ಹೆಚ್ಚಾಗಿ ಇವರು ಆಳದಲ್ಲಿ ಹೇಗೆ ಕೆಳಜಾತಿಯ ಜನರ ಏಳ್ಗೆಯ ವಿರೋಧಿಗಳು ಮತ್ತು ಹೇಗೆ ಮೇಲ್ಜಾತಿಯ ಯಜಮಾನ್ಯವೇ ಇವರ ಗುರಿ ಎಂಬುದನ್ನು ತೋರಿಸಿದ್ದು.
ದೇ.ಮ. ಅವರು ಇನ್ನೊಂದು ಮಾತು ಸೇರಿಸಬಹುದಿತ್ತೇನೋ ಅಂತ ಅನ್ನಿಸುತ್ತಿದೆ. ಅದೇನೆಂದರೆ ಆರ್.ಎಸ್.ಎಸ್. ಮಂದಿ ತಮ್ಮ ಭಾಷಣದಲ್ಲಿ, ಬರವಣಿಗೆಯಲ್ಲಿ ಸಂದರ್ಭಕ್ಕನುಗುಣವಾಗಿ ಮಾತು ಬದಲಾಯಿಸುವುದು. (ಇವರುಗಳ ವೇಷಧಾರಣೆ ಕುರಿತು ಹೇಳುವಾಗ ಬಹುಶಃ ಈ ಮಾತಿನ ಸರ್ಕಸ್ ಅನ್ನು ಸಹ ದೇ.ಮ. ಅವರು ಸೂಚಿಸುತ್ತಿದ್ದಿರಬಹುದು) “ಭಾರತದಲ್ಲಿ ಹುಟ್ಟಿದವರೆಲ್ಲರೂ ಹಿಂದುಗಳೆ” ಅಂತ ಒಮ್ಮೆ ಹೇಳುವುದು, “ಅನ್ಯಧರ್ಮೀಯರು ಇಲ್ಲಿನ ಸಂಸ್ಕೃತಿಗೆ ಹೊಂದಿಕೊಂಡು ಬದುಕಬೇಕು” ಅಂತ ಇನ್ನೊಮ್ಮೆ ಹೇಳುವುದು. ಹೀಗೆ. ಇದು ಒಂದು ಕಾರ್ಯತಂತ್ರವೇ. ಈಗ ಗೋಲ್ವಾಲ್ಕರ್ ಹೀಗೆ ಹೇಳಿದ್ದರು ಎಂದು ಹೇಳಿದರೆ, ತಕ್ಷಣಕ್ಕೆ ಸಂಘಪರಿವಾರದ ವಾಕ್ಭಯೋತ್ಪಾದಕರು “ಅವರು ಹೇಳಿದ್ದು ಹಾಗಲ್ಲ, ಹೀಗೆ…” ಎಂದು ಇನ್ನೇನನ್ನೋ ಕೋಟ್ ಮಾಡುತ್ತಾರೆ.
ಆರ್.ಎಸ್.ಎಸ್. ಮತ್ತು ಅದರ ಪ್ರತಿಪಾಧಕರು ಏನು ಹೇಳಿದ್ದಾರೆ ಎಂಬುದು ಮುಖ್ಯವಲ್ಲ ಎಂದೇನಲ್ಲ. ಆದರೆ ಅವರೇನು ಮಾಡಿದ್ದಾರೆ ಎಂಬುವುದು ನಿಜವಾಗಿಯೂ ಅವರ ನಿಜವನ್ನು ಬಯಲೊಗೊಳಿಸುವಂತದ್ದು. ಈ ಕೆಲಸವನ್ನು ದೇವನೂರು ಅವರ ಪುಸ್ತಕ ಸಂಪೂರ್ಣವಾಗಿ ಅಲ್ಲದಿದ್ದರೂ ಸಮರ್ಥವಾಗಿಯೇ ಮಾಡುತ್ತದೆ. ಅದಕ್ಕೆ ಸಂಘಪರಿವಾರದ ಮಂದಿ ಹೆದರಿರುವುದು. ಮತ್ತು ಅದಕ್ಕೆ, ದೇವನೂರು ಮಹಾದೇವ ಅವರ ಪುಸ್ತಕಕ್ಕೆ ಪ್ರತಿಕ್ರಿಯೆ ನೀಡುತ್ತಿರುವವವರು ಸಹ ದೇವನೂರು ಹೇಳಿದ್ದು ಸುಳ್ಳು, ಕೋಟ್ ಮಾಡಿದ್ದು ಸುಳ್ಳು/ ಅರ್ಧ-ಸತ್ಯ ಎಂದೆಲ್ಲ ಹೇಳುತ್ತಾ ಲಾಗ ಹಾಕುತ್ತಿರುವುದು. ತಮ್ಮ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಅಥವಾ ಮುಚ್ಚಿಕೊಳ್ಳಲು ಅವರಿಂದ ಆಗುತ್ತಿಲ್ಲ. ದಾರಿ ತಪ್ಪಿಸಲು ಮಾತಿನಲ್ಲಿ ಸಿಕ್ಕಿಹಾಕಿಸಲು ನೋಡುತ್ತಿದ್ದಾರೆ.
ದೇವನೂರು ಅವರ ಪುಸ್ತಕ ಏನು ಹೇಳಿತು ಅನ್ನುವಷ್ಟೇ ಮುಖ್ಯ, ನಮಗೇನು ಕಲಿಸಿತು, ನಮಗೆ ಯಾವ ದಾರಿ ತೋರಿಸಿತು ಎನ್ನುವುದು- ಅಂತ ಅನ್ನಿಸುತ್ತಿದೆ. ಥ್ಯಾಂಕ್ಸ್ ದೇವನೂರು ಸರ್.
ನಾಗರಾಜಶೆಟ್ಟಿ ಅವರ ಬರಹ
ಪುರಾತನ ವಾಸನೆಯ ಬಾವಿ
“…………ಶಂಕರಾಚಾರ್ಯರು ಭಾಷ್ಯವನ್ನು ಬರೆದು ಗೀತೆಯನ್ನು ಪ್ರಸಿದ್ಧ ಮಾಡುವುದಕ್ಕೆ ಮುಂಚೆ ಜನರಿಗೆ ಗೀತೆಯ ವಿಷಯವೇ ಹೆಚ್ಚಾಗಿ ಗೊತ್ತಿರಲಿಲ್ಲ.ಅದಕ್ಕಿಂತಲೂ (ಶಂಕರಾಚಾರ್ಯರಿಗಿಂತಲೂ)ಮುಂಚೆ ಗೀತೆಯ ಮೇಲೆ ಬೋಧಾಯನ ವೃತ್ತಿ ಎಂಬುವುದೊಂದು ಇತ್ತು ಎಂದು ಅನೇಕರ ಅಭಿಪ್ರಾಯವಾಗಿದೆ…ಆದರೆ ಬೋಧಾಯನರು ವೇದಾಂತ ಸೂತ್ರಗಳ ಮೆಲೆ ಬರೆದ ಭಾಷ್ಯವು,ನಾನು ಭರತಖಂಡವನ್ನೆಲ್ಲಾ ಸಂಚಾರ ಮಾಡುವಾಗ ಎಲ್ಲೂ ಸಿಕ್ಕಿಲಿಲ್ಲ…ವೇದಾಂತ ಸೂತ್ರಗಳ ಮೇಲೆ ಬರೆದರೆಂದು ಪ್ರಖ್ಯಾತಿ ಪಡೆದ (ಪುರಾತನ) ಬೋಧಾಯನ ಭಾಷ್ಯವೇ ಅನುಮಾನಾಸ್ಪದ ಕಾರ್ಗತ್ತಲಿನಲ್ಲಿ ಹುದುಗಿರುವಾಗ ಗೀತೆಯ ಮೇಲೆ ಬೋಧಾಯನ ಭಾಷ್ಯವಿತ್ತು ಎಂಬುದನ್ನು ದೃಢಪಡಿಸಲು ಸಾಧ್ಯವೇ ಇಲ್ಲ.ಕೆಲವರು ಶಂಕರಾಚಾರ್ಯರೇ ಗೀತೆಯ ಕರ್ತೃವೆಂದೂ ಅದನ್ನು ಅವರು ಮಹಾಭಾರತದಲ್ಲಿ ಸೇರ್ಪಡೆ ಮಾಡಿದರೆಂದೂ ಹೇಳುತ್ತಾರೆ “
ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿಯನ್ನು ಹಲವು ವರ್ಷಗಳ ಹಿಂದೆ ಓದಿದ್ದೆನಾದರೂ ವಿವೇಕಾನಂದರ ಈ ಮಾತುಗಳು ಮನಸ್ಸಲ್ಲಿ ಅಚ್ಚೊತ್ತಿರಲಿಲ್ಲ.ಇದು ಮಾತ್ರವಲ್ಲ,ದೇವನೂರರು ಉಲ್ಲೇಖಿಸಿದ ಹಲವು ಮಾತುಗಳನ್ನು ಅಲ್ಲಲ್ಲಿ ಓದಿದ್ದರೂ ನೆನಪಲ್ಲಿ ಉಳಿದಿದ್ದು ಕಡಿಮೆ.ದೇವನೂರ ಮಹಾದೇವರ ಆರ್| ಎಸ್| ಎಸ್| ಆಳ ಮತ್ತು ಅಗಲ ಓದಿದ ಮೇಲೆ ಅವೆಲ್ಲ ನೆನಪಾಗಿ ಮನಸ್ಸಿಗೆ ನಾಟಿತು.
ಆರ್ ಎಸ್ ಎಸ್ ಕುರಿತಾದ ಪುಸ್ತಕಗಳು ಹಲವಾರಿವೆ.ಅವನ್ನು ಓದಿದವರಿಗೆ, ಆರ್ ಎಸ್ ಎಸ್ ನ ಚಟುವಟಿಕೆಗಳ ಅರಿವಿದ್ದವರಿಗೆ ಆರ್ ಎಸ್ ಎಸ್ ಎಂದರೇನು ಎನ್ನುವುದು ಗೊತ್ತು.ಅದರಲ್ಲಿ ಇರುವವರಿಗೂ,ಗುಪ್ತ ಮೋಹ ಇರುವವರಿಗೂ ಆರ್ ಎಸ್ ಎಸ್ ತಿಳಿದಿಲ್ಲ ಎಂದರೆ ಆತ್ಮವಂಚನೆಯಷ್ಟೇ.ಆ ಸಂಘಟನೆಯಲ್ಲಿದ್ದು ಹೊರಬಂದವರ ಪುಸ್ತಕಗಳು,ಹೇಳಿಕೆಗಳೂ ಇದನ್ನು ಸ್ಪಷ್ಟ ಪಡಿಸುತ್ತವೆ.
ಕೆಲವು ವರ್ಷಗಳ ಹಿಂದೆ ಆರ್ ಎಸ್ ಎಸ್ ಎಂದರೆ ನಾಚಿಕೊಳ್ಳುವ ಪರಿಸ್ಥಿತಿಯಿತ್ತು.ಅದರಲ್ಲಿ ಇರುವವರೂ ನೇರವಾಗಿ ಹೇಳಿಕೊಳ್ಳಲು ನಾಚಿಕೊಳ್ಳುತ್ತಿದ್ದರು.ಇತ್ತೀಚಿನ ದಿನಗಳಲ್ಲಿ ಅದು ಬದಲಾಗಿ,ತಿಳಿದವರೂ ಮಾತನಾಡುತ್ತಿಲ್ಲ.ಆರ್ ಎಸ್ ಎಸ್ ಒಂದು ಗುಮ್ಮನಂತಾಗಿದೆ.ದೇವನೂರ ಈ ಹಿಂಜರಿಕೆಯನ್ನು ಹೊಡೆದು ಹಾಕಿದ್ದಾರೆ.ಇದು ಈ ಕಿರು ಪುಸ್ತಕದ ಶಕ್ತಿ.
ದೇವನೂರರಲ್ಲದೆ ಬೇರೆ ಯಾರಾದರೂ ಬರೆದಿದ್ದರೆ ಈ ಕಿರು ಹೊತ್ತಿಗೆಗೆ ಸಿಕ್ಕಂತ ಸ್ಪಂದನ ಸಿಗುತ್ತಿತ್ತೇ?
ಸ್ವಾತಂತ್ಯ ಚಳುವಳಿಯಲ್ಲಿ ಗಾಂಧಿಗಿಂತ ನಿಪುಣರು,ಬುದ್ಧಿವಂತರು ಅನೇಕರಿದ್ದರು.ಆದರೆ ಗಾಂಧಿಯ ಸರಳ ವ್ಯಕ್ತಿತ್ವ,ನೈತಿಕ ಶಕ್ತಿ ಜನರನ್ನು ಸೆಳೆಯಿತು.ದೇವನೂರರನ್ನು ನಾಡು ಬಲ್ಲುದು.ಈ ಪುಸ್ತಕದ ಅಕ್ಷರ,ಅಕ್ಷರದ ಹಿಂದೆ ಅವರ ವ್ಯಕ್ತಿತ್ವವಿದೆ.ಅದರಿಂದ ಸಂಘಿಗಳು ವಿಲವಿಲ ಒದ್ದಾಡುತ್ತಿದ್ದಾರೆ.ಏಕೆಂದರೆ ನೈತಿಕತೆಗೂ ಅವರಿಗೂ ಮಾರು ದೂರ.
ರಾಜಾರಾಂ ತಲ್ಲೂರ್ ಅವರ ಟಿಪ್ಪಣಿ……
“ಕಥನೀ ಔರ್ ಕರನೀ” ಗಳ ನಡುವಿನ ಗ್ಯಾಪ್ ಸೂಚ್ಯಂಕ
– – – – – – – – –
“ಆರೆಸ್ಸೆಸ್ ಆಳ ಮತ್ತು ಅಗಲ” ಓದಿ ಮುಗಿಸಿದೆ.
ನನಗೆ ತಕ್ಷಣ ನೆನಪಾದದ್ದು ಹಿರಣ್ಯಕಷಿಪು ಕಥೆ.
ಹಗಲೂ ಅಲ್ಲ ರಾತ್ರಿಯೂ ಅಲ್ಲ, ಒಳಗೂ ಅಲ್ಲ ಹೊರಗೂ ಅಲ್ಲ, ಕೈಯೂ ಅಲ್ಲ ಆಯುಧವೂ ಅಲ್ಲ, ಮನುಷ್ಯನೂ ಅಲ್ಲ ಪ್ರಾಣಿಯೂ ಅಲ್ಲ… ಹಾಗಾದಲ್ಲಿ ಮಾತ್ರ ತನಗೆ ಮರಣ ಎಂಬ ವರ ಪಡೆದ ಹಿರಣ್ಯಕಷಿಪು ಕಡೆಗೆ ನರಸಿಂಹಾವತಾರದ ಮೂಲಕ ಅಂತ್ಯ ಕಾಣುತ್ತಾನೆ.
ಇಂತಹದೇ ಒಂದು “ಬ್ಲ್ಯಾಕ್ ಅಂಡ್ ವೈಟ್” ನಡುವಿನ “ಗ್ರೇ ಏರಿಯಾ”ವನ್ನು ಬಲಪಂಥೀಯ ವ್ಯವಸ್ಥೆ ತನ್ನ ಆಡೊಂಬಲ ಮಾಡಿಕೊಂಡಿದೆ. ಅದು ಬಹಳ ಪ್ರ್ಯಾಕ್ಟಿಕಲ್ ಎಂಬುದನ್ನು ಅದು ಸಾಧಿಸಿನೋಡಿಕೊಂಡಿದೆ. ಸಂವಿಧಾನವನ್ನು “ಇನ್ ಲೆಟರ್” ಪಾಲಿಸಿದಂತೆ ತೋರಿಸುತ್ತಾ ಅದರ “ಸ್ಪಿರಿಟ್‌” ಅನ್ನು ಕಡೆಗಣಿಸುವ; ತಾತ್ವಿಕವಾಗಿ “ಹಿಂದೂ ಒಂದು” ಎನ್ನುತ್ತಲೇ ಪ್ರಾಕ್ಟಿಕಲ್ ಆಗಿ ಎಲ್ಲರಿಗೂ ಅವರವರ ಜಾಗ ತೋರಿಸುವ; ವಂಶಪಾರಂಪರ್ಯ-ಭ್ರಷ್ಟಾಚಾರಗಳಿಗೆ ಬೈಯುತ್ತಲೇ ಅದನ್ನೇ ಆಚರಿಸಿ ಬೆಳೆಯುವ; ಶೀಲದ ಮಾತನಾಡುತ್ತಲೇ ಅದರ ಕೆಸರಿನಲ್ಲೇ ಮುಳುಗಿ ಅರಳುವ; ಜ್ಞಾನದ ಮಾತನಾಡುತ್ತಲೇ ಅದನ್ನು ಜನಮಾನಸದಿಂದಲೇ ಕಿತ್ತುಹಾಕುವ ಕೆಲಸಗಳಲ್ಲಿ ತೊಡಗಿಕೊಳ್ಳುವ; ಏಕತೆಯ ಮಾತನಾಡುತ್ತಲೇ ವಿಚ್ಛಿದ್ರತೆಯ ಕೃತ್ಯಗಳಲ್ಲಿ ತೊಡಗುವ; ಸತ್ಯದ ಆರಾಧನೆ ಮಾಡುತ್ತಲೇ ಸುಳ್ಳುಗಳನ್ನು ಬಿತ್ತುವ ಮೂಲಕ ಆಳುವ ಕೆಲಸ ನಡೆದಿದೆ. ತಾನು “ಅಮರ” ಎಂಬ ವರ ಪಡೆದ ಹಮ್ಮು ಈಗೀಗ ಎದ್ದು ಕಾಣಿಸತೊಡಗಿದೆ. “ಇನ್ನು 40ವರ್ಷ ನಾವೇ” ಎಂಬ ಸ್ವರ ಪ್ರಜಾತಂತ್ರ ವ್ಯವಸ್ಥೆಯೊಳಗೆ ಬಹಿರಂಗವಾಗಿ ಹೊರಹೊಮ್ಮಿದೆ ಎಂಬುದೇ ಈ ಹಮ್ಮನ್ನು ತೋರಿಸುತ್ತಿದೆ.
ಇಂತಹದೊಂದು ರಕ್ಕಸ ಬೆಳವಣಿಗೆಯಿಂದ ಪ್ರಜಾತಂತ್ರದ ರಕ್ಷಣೆಗೆ “ನರಸಿಂಹಾವತಾರ” ಅಗತ್ಯ ಇತ್ತು.
ಯಕ್ಷಗಾನದಲ್ಲಿ/ಸಿನಿಮಾದಲ್ಲಿ ಹಿರಣ್ಯಕಷಿಪು ಪಾತ್ರಧಾರಿ “ನಿನ್ನ ಹರಿ ಈ ಕಂಬದೊಳಗಿದ್ದಾನೆಯೇ” ಎಂದ ಶೈಲಿಯಲ್ಲೇ “ಮಾದೇವ ಮೈಕು ಬಿಟ್ಟು ಪೆನ್ನು ಹಿಡಿಯಲಿ” ಎಂದು ಅಪ್ಪಣೆ ಕೊಡಿಸಿದ ಬೆನ್ನಿಗೇ ಮಹಾದೇವ ಅವರು ಪೆನ್ನು ಹಿಡಿದು ಪ್ರತ್ಯಕ್ಷರಾಗಿದ್ದಾರೆ! (ಇದು ಬಹಳ ಸಿನಿಕ ಮಾತು ಅಂತ ಗೊತ್ತಿದೆ ಆದರೂ ಬೆಳ್ಳಂಬೆಳಗ್ಗೆ ನನಗೆ ಹಾಗನ್ನಿಸಿತಪ್ಪ! )
“ಆರೆಸ್ಸೆಸ್ ಆಳ ಮತ್ತು ಅಗಲ” ಪುಸ್ತಕ ಆ ಸಂಘಟನೆಯ ಕಥನೀ ಮತ್ತು ಕರನೀಗಳ ನಡುವಿನ ಗ್ಯಾಪ್‌ಅನ್ನು ಇಂಚಿಂಚಾಗಿ ಬಿಚ್ಚಿ ತೋರಿಸುತ್ತಿದೆ. ಆ ಕಾರಣಕ್ಕಾಗಿಯೇ ಆ ಪುಸ್ತಕದ ಪರ ಮತ್ತು ವಿರುದ್ಧವಾಗಿ ಗಟ್ಟಿ ಧ್ವನಿಗಳು ಏಳತೊಡಗಿವೆ. ಈ ಧ್ವನಿಗಳು ಮಹಾದೇವ ಅವರು ಎತ್ತಿರುವ ಮಹತ್ವದ ಪ್ರಶ್ನೆಗಳನ್ನು ಚರ್ಚೆಯ ನಿಕಷಕ್ಕೊಳಪಡಿಸದೆ ಬದಿಗೆ ಸರಿಸದಿರಲಿ ಎಂಬುದು ನನ್ನ ತಕ್ಷಣದ ಕಳಕಳಿ. ಮಹದೇವ ಅವರು ಎತ್ತಿದ ಪ್ರಶ್ನೆಗಳು ಆ ಪರಿವಾರದ “ಕಥನೀ”ಯಲ್ಲೇ ಇರುವ ಸಮಸ್ಯೆಗಳ ಕುರಿತಾದದ್ದು. ಇನ್ನು ಅದರ “ಕರನೀ”ಗಳ ಕಡೆ ಬಂದರೆ, ಈಗ ಬರೆದಿರುವ ಪುಸ್ತಕದ ನೂರು ಪಟ್ಟು ದೊಡ್ಡ ಉದ್ಗ್ರಂಥ ಬರೆಯುವಷ್ಟು ಸರಕುಗಳು ಸುಲಭ ಲಭ್ಯ. (ಅಂದಹಾಗೆ, ಈ ಕಥನೀ ಮತ್ತು ಕರನೀಗಳ ನಡುವಿನ ಗ್ಯಾಪ್ ಬಗ್ಗೆ ಮೊದಲ ಸಾರ್ವಜನಿಕ ಚರ್ಚೆ ಎತ್ತಿದ್ದು ಸ್ವತಃ ಅಟಲ್ ಬಿಹಾರೀ ವಾಜಪೇಯಿ ಅವರು ಎಂಬುದು ನನ್ನ ನೆನಪು!)
ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿರುವ ಈ ಹೊತ್ತಿನಲ್ಲಿ, ದೇಶದ ಸಾರ್ವಜನಿಕ ಬದುಕಿನ ಮೇಲೆ ದಟ್ಟ ಪರಿಣಾಮ ಬೀರತೊಡಗಿರುವ ಈ ಸಂಗತಿಗಳ ಬಗ್ಗೆ ಬಹಿರಂಗ ಸಂವಾದ ಆರಂಭಿಸುವ ಮೂಲಕ ಮಹಾದೇವ ಅವರು ತಾವು ಯಾಕೆ ಈವತ್ತಿನ ಬಲುಮುಖ್ಯ “ಪಬ್ಲಿಕ್ ಇಂಟಲೆಕ್ಚುವಲ್” ಎಂಬುದನ್ನು ಸಾಬೀತುಪಡಿಸಿದ್ದಾರೆ. ಆರಂಭಗೊಂಡಿರುವ ಈ ಸಂವಾದ ಬರೀ ಗದ್ದಲ ಎಬ್ಬಿಸಿ ಸೋಷಿಯಲ್ ಮೀಡಿಯಾದ ಬರ್ಮುಡಾ ಟ್ರಯಾಂಗಲ್ಲಿನಲ್ಲಿ ಶಾಶ್ವತವಾಗಿ ಮುಳುಗಿಹೋಗದಿರಲಿ. ಇದನ್ನು ಸರಿದಾರಿಯಲ್ಲಿ ತುದಿ ಮುಟ್ಟಿಸಬೇಕಾದದ್ದು ನಾಡಿನ ಎಲ್ಲರ ಕರ್ತವ್ಯ ಎಂದು ನಾನು ಭಾವಿಸಿದ್ದೇನೆ.
ಡಾ.ವಿ.ಲಕ್ಷ್ಮೀನಾರಾಯಣ ಅವರ ಬರಹ…
“ದ್ವೇಷವು ತನ್ನನ್ನು ಸೃಷ್ಟಿ ಮಾಡಿದವನನ್ನೇ ನಾಶ ಮಾಡುತ್ತದೆ”
ಇಂದು ದೇವನೂರು ಮಹಾದೇವ ಅವರ ಕಿರು ಪುಸ್ತಕ “ ಆರ್ ಎಸ್ ಎಸ್ – ಆಳ ಮತ್ತು ಅಗಲ”, ಕರ್ನಾಟಕಾದ್ಯಂತ ವೈಚಾರಿಕ ಅಲೆಯನ್ನೇ ಎಬ್ಬಿಸಿದೆ. ಇದು ತನ್ನ ವಿಶಿಷ್ಟ ವಿಶ್ಲೇಷಣೆಯಿಂದ ಬಿಜೆಪಿ- ಆರ್ ಎಸ್ ಎಸ್ ನ ವಿರುದ್ಧ ಪ್ರತಿರೋಧವನ್ನು ಕಟ್ಟಲು ಕಾರ್ಯಕರ್ತರು ಮತ್ತು ಜನತೆಗೆ ಕರೆ ನೀಡುತ್ತಿದೆ . ಹಾಲಿ ಕರ್ನಾಟಕದಲ್ಲಿ ಹಿಂದುತ್ವ ಶಕ್ತಿಗಳ ಆಕ್ರಮಣಕಾರಿ ಅಲೆ ತನ್ನ ಪರಾಕಾಷ್ಠೆ ಯಲ್ಲಿ ಇದೆ. ಅದು ಹಿಜಾಬ್, ಅಜಾನ್, ಪಠ್ಯ ಪುಸ್ತಕಗಳು ಮುಂತಾಗಿ ಅನೇಕ ವಿಷಯಗಳನ್ನು ಎತ್ತಿಕೊಂಡು ಸತತ ಮುಸ್ಲಿಂ ವಿರೋಧಿ ದ್ವೇಷದ ಕೆಲಸಗಳನ್ನು ಮಾಡುತ್ತಿದೆ. ಇತ್ತೀಚಿಗೆ ಕರ್ನಾಟಕ ಸರ್ಕಾರ ಒಂದು ಸುಗ್ರೀವಾಜ್ಞೆ , ”ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆ ಮಸೂದೆ 2022”, ಎಂಬ ಹೆಸರಿನಲ್ಲಿ ತಂದಿದೆ. ಇದರಲ್ಲಿ ಧರ್ಮ ಪರಿವರ್ತನೆ ಯನ್ನು ಒಂದು ಶಿಕ್ಷಾರ್ಹ ಅಪರಾಧವನ್ನಾಗಿ ಪರಿಗಣಿಸಲಾಗಿದೆ. ಒಟ್ಟಾರೆ ಕರ್ನಾಟಕವು ಹಿಂದುತ್ವ ರಾಜಕೀಯದ ಪ್ರಯೋಗ ಶಾಲೆಯಾಗಿದೆ.
ದೇವನೂರು ಮಹದೇವ ( ದೇ ಮ ) ಅತ್ಯಂತ ಗಮನಾರ್ಹ ದಲಿತ ಲೇಖಕ ಆಗಿದ್ದು, 7೦ ರ ದಶಕದಲ್ಲಿ ಹೊರಹೊಮ್ಮಿದ ತಲೆಮಾರಿನವರಾಗಿದ್ದಾರೆ. ದಲಿತರ ಅರಿವಿನ ಆಸ್ಫೋಟದಿಂದ ಹೊರಹೊಮ್ಮಿದ ದಲಿತ ಸಂಘರ್ಷ ಸಂಮಿತಿಯ ಸಂಸ್ಥಾಪಕರಲ್ಲಿ ಒಬ್ಬರು. ಹಾಲಿ ಅವರು ಸ್ವರಾಜ್ ಪಕ್ಷದ ಕರ್ನಾಟಕ ಶಾಖೆಯ ಗೌರವಾಧ್ಯಕ್ಷರಾಗಿದ್ದಾರೆ. ಅವರಿಗೆ ಪದ್ಮಶ್ರೀ ಸನ್ಮಾನವನ್ನು ಕೇಂದ್ರ ಸರ್ಕಾರವು ನೀಡಿದೆ. ಅವರು ಕರ್ನಾಟಕದ ಸಾಕ್ಷಿ ಪ್ರಜ್ಞೆ . ಅವರ ಹಾಲಿ ಕಿರು ಹೊತ್ತಿಗೆಯನ್ನು ಈ ಸಂಧರ್ಭದಲ್ಲಿಯೇ ನೋಡಬೇಕು.
ಈ ಕಿರು ಹೊತ್ತಿಗೆ ಪುಟ್ಟದಾಗಿದ್ದು, 64 ಪುಟಗಳನ್ನು ಹೊಂದಿದ್ದು , ಅಂಗೈಯಲ್ಲಿ ಹಿಡಿಯಬಹುದಾಗಿದೆ. ದೇ ಮ ಅವರ ಈ ಹೊತ್ತಿಗೆಯ ವಿಚಾರಗಳನ್ನು ಸರಳವಾಗಿ ಹೇಳಲು ಇಲ್ಲಿ ಪ್ರಯತ್ನಿಸಲಾಗಿದೆ. ದೇ ಮ ಅವರು ತಮ್ಮ ಕೃತಿಯ ಉದ್ದೇಶ : ಆರ ಎಸ್ ಎಸ್ ಅನ್ನು ವಿಶ್ಲೇಷುವುದು ಮತ್ತು ಒಟ್ಟಾರೆ ಜನರನ್ನು ಎಚ್ಚರಿಸುವುದಾಗಿದೆ. ಇದನ್ನು ಅವರು ಆರ್ ಎಸ್ ಎಸ್ ನ ನೆಲೆ ಹಾಗೂ ಆತ್ಮವನ್ನು ನೋಡಲು ಪ್ರಾರಂಭಿಸುತ್ತಾರೆ. ಅವರು ಮುಖ್ಯವಾಗಿ ವಿ.ಡಿ.ಸಾವರ್ಕರ್, ಗುರೂಜಿ ಗೋಲ್ವಾಲ್ಕರ್ ಅವರ ಕೃತಿಗಳನ್ನು ಗಮನಿಸುತ್ತಾರೆ ಮತ್ತು ಅವರ ಪ್ರಕಾರ ಹೆಡ್ಗೆವಾರ್ ಆರ್ ಎಸ್ ಎಸ್ ನ ಸಿದ್ದಾಂತದ ಚಿಲುಮೆ.
ಗುರು ಗೋಲ್ವಾಲ್ಕರ್ ಅವರ ಪ್ರಕಾರ ಹಿಂದೂ ಸಮಾಜ ದೇವರ “ ವಿರಾಟ “ ಸ್ವರೂಪ. ಅದನ್ನು ಋಗ್ವೇದದ ಪುರುಷ ಸೂಕ್ತದಲ್ಲಿ ಉಲ್ಲೇಖಿಸಲಾಗಿದೆ. ಗುರೂಜಿ ಗೊಲ್ವಾಲ್ವಕರ್ ಪ್ರಕಾರ ಭಾರತದ ಸಂವಿಧಾನ “ ಮನು ಸ್ಮೃತಿ” ಆಗಬೇಕು. ಇದನ್ನು ಪ್ರಪ್ರಥಮವಾಗಿ ವಿ.ಡಿ. ಸಾವರ್ಕರ್ ಪ್ರತಿಪಾದಿಸಿದ್ದರು. ಅಂಬೇಡ್ಕರ್ ಅವರ ಸಂವಿಧಾನವನ್ನು ಎಲ್ಲೆಡೆಯಿಂದ ಚಿಂದಿ ಚಿಂದಿ ಗಳಿಂದ ಆರಿಸಿ ತಂದು ತೇಪೆ ಹಾಕಲಾಗಿದೆ. ಇನ್ನೂ ಒಕ್ಕೂಟ ವ್ಯವಸ್ಥೆಯು ಬಹಳ ಶಿಥಿಲವಾಗಿದ್ದು, ಅದನ್ನು ಏಕೀಕೃತ unitary ಪ್ರಭುತ್ವವನ್ನಾಗಿ ಮಾಡಬೇಕು. ಆರ್ ಎಸ್ ಎಸ್ ನ ಸ್ಪೂರ್ತಿಯ ನೆಲೆ: ಒಂದೇ ಬಾವುಟ, ಒಬ್ಬನೇ ನಾಯಕ , ಒಂದೇ ಸಿದ್ದಾಂತ. ಗುರೂಜಿ ಪ್ರಕಾರ ಜರ್ಮನಿಯ ಜನಾ೦ಗೀಯ ವಾದವು “ ಜನಾಂಗೀಯ ಹೆಮ್ಮೆ” ಯ ಆಧರ್ಶ.
ಗೋಲ್ವಾಳ್ಕರ್ ಕೃತಿ, ಚಿಂತನ ಗಂಗಾ, ಮೂರು ಪ್ರಮುಖ ವಿಚಾರಗಳನ್ನು ಹೊಂದಿದೆ. ಮೊದಲನೆಯದಾಗಿ: ಋಗ್ವೇದದ ಪುರುಷ ಸೂಕ್ತ , ದೇವರ ಅವತಾರ ಮತ್ತು ಭಗದ್ಗೀತೆಯ ಪ್ರಚಾರ . ಎರಡನೆಯದಾಗಿ , ಚಾತುರ್ವರ್ಣ ವನ್ನು ಉಳಿಸಿಕೊಳ್ಳುವುದು ಮತ್ತು ಅಂಬೇಡ್ಕರ್ ಅವರ ಸಂವಿಧಾನವನ್ನು ತಿರಸ್ಕರಿಸುವುದು. ಈ ಮೂಲಕ ದೇಶದ ಒಕ್ಕೊಟ ವ್ಯವಸ್ಥೆಯನ್ನು ನಾಶ ಮಾಡುವು ವುದು. ಸಂಸ್ಕೃತವನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಲು ಹಿಂದಿಯನ್ನು ಉತ್ತೇಜಿಸುವುದು. ಮೂರನೆಯದಾಗಿ ಆರ್ಯನ್ ಸರ್ವೋಚ್ಚತೆಯನ್ನು ವೈಭವೀಕರಿಸುವುದು. ಜಾತಿ ಮತ್ತು ಪಂಥಗಳನ್ನು ಹಿಂದೂ ವಾದದಲ್ಲಿ ಅರಗಿಸಿ ಕೊಳ್ಳುವುದು. ಮುಸಲ್ಮಾನರು ಮತ್ತು ಕ್ರೈಸ್ತರು ಬ್ರಾಹ್ಮಣೇತರರು ಮತ್ತು ಹಿಂದೂ ಧರ್ಮದ ಚೌಕಟ್ಟಿನಲ್ಲಿ ಬರುವುದಿಲ್ಲ.
ದೇಮ ಅವರು,..’ ಆರ್ ಎಸ್ ಎಸ್, ಟಿಪ್ಪು ಸುಲ್ತಾನನ ಬಗ್ಗೆ ಸುಳ್ಳುಗಳನ್ನು ಹಬ್ಬಿಸುತ್ತಾ, ಆತನು ಹಿಂದೂಗಳ ವಿರೋಧಿ ಎಂದು ಬಣ್ಣಿಸುತ್ತಿದೆ. ಆರ್ ಎಸ್ ಎಸ್ ಈ ದೇಶದಲ್ಲಿ ಗೃಹ ಯುದ್ದ ವನ್ನು ಆಶಿಸುತ್ತದೆ’ ಎನ್ನುತ್ತಾರೆ..ಇಂತಹ ಪರಿಸ್ಥಿತಿಯಲ್ಲಿ ಬಹುಸಂಖ್ಯಾತ ಹಿಂದೂಗಳು ಮಾತನಾಡಬೇಕೆಂದು ಕರೆ ನೀಡುತ್ತಾರೆ. ಬಿಜೆಪಿ- ಆರ್ ಎಸ್ ಎಸ್ ಕೇಂದ್ರ ಸರಕಾರ ಮತ್ತು ಅನೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಅನೇಕ ವರ್ಷಗಳಲ್ಲಿ ಹಿಂದೆ 1977 ರಲ್ಲಿ ಜನತಾ ಪಕ್ಷದೊಳಗೆ ಇವರು ನುಸಿಳಿಕೊಂಡರು. ಆಗ ಅವರು ತಮ್ಮ ದ್ವಿಸದಸ್ಯತ್ವವನ್ನು ಬಿಡುವುದಾಗಿ ಆಶ್ವಾಸನೆ ನೀಡಿದ್ದರು. ನಂತರದಲ್ಲಿ ಅವರ ವ್ಯಾಪಕತೆ ಹೆಚ್ಚಿತು. ಅವರು ಪಾಕಿಸ್ತಾನ ವನ್ನು ಶಾಶ್ವತ ಶತ್ರು ಎಂದು ಬಿಂಬಿಸುತ್ತಾ ಸ್ಥಳೀಯ ಮುಸಲ್ಮಾನರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಇದರಿಂದ ಅವರು ಬಹುತ್ವದ ಭಾರತವನ್ನು ಛಿದ್ರಗೊಳಿಸುತ್ತಿದ್ದಾರೆ ನರೇಂದ್ರ ಮೋದಿ ಸರ್ಕಾರ ಅನೇಕ ಆಶ್ವಾಸನೆಗಳನ್ನು ನೀಡಿತ್ತು. ಆದರೆ ಅದು ಅದರ ಬಹುಪಾಲನ್ನು ಈಡೇರಿಸಿಲ್ಲ. ನೋಟಿನ ಅಮಾನ್ಯೀಕರಣದಿಂದಾಗಿ ಜನತೆಗೆ ಕಡು ಕಷ್ಟ ಉಂಟಾಯಿತು . ಮುಖ್ಯವಾದ ಕೈಗಾರಿಕಾ ರಂಗಗಳ ನ್ನು ಖಾಸಗೀಕರಣ ಮಾಡುವುದು ಮತ್ತು ಏರುತ್ತಿರುವ ಬೆಲೆ ಏರಿಕೆಗಳು ಮಾತ್ರವೇ ಮೋದಿ ಸರ್ಕಾರದ ಸಾಧನೆಗಳು,. ಇಂತಹವರನ್ನು ಆಯ್ಕೆ ಮಾಡಿದ್ದಕ್ಕೆ ಜನತೆ ವಿಷಾದಿಸುತ್ತಿದ್ದಾರೆ.
ಭಾರತದ ಕೇಂದ್ರ ಸರ್ಕಾರವು ಅಧಿಕಾರದಲ್ಲಿದ್ದರೂ, ಕೆಲವೇ ಕೈಗಾರಿಕಾ ಕುಟುಂಬಗಳು ಭಾರತ ದೇಶವನ್ನೇ ಸಂವಿಧಾನದ ಹೊರತಾಗಿ ಹತೋಟಿ ಮಾಡುತ್ತಿವೆ. ಸರ್ಕಾರದ ಎಲ್ಲಾ ನೀತಿಗಳನ್ನು ಆರ್ ಎಸ್ ಎಸ್ ನಿರ್ಧರಿಸುತ್ತದೆ. ಮೋದಿ ಉತ್ಸವ ಮೂರ್ತಿ ಮಾತ್ರ. ಮೋದಿ ಅವರು ತಮ್ಮ ವಾಕ್ಝರಿಯಿಂದ ಹಾಲಿ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಬಲ್ಲರು. ಮೋದಿಗೆ ನಿಜವಾದ ಅಧಿಕಾರ ಇದ್ದರೆ ಅನೇಕ ಮೂಲಭೂತ ಸಮಸ್ಯೆ ಯೆಗಳನ್ನು ಬಗೆಹರಿಸಬಹುದಾಗಿತ್ತು. ಕರೋನ ಕಾಲದಲ್ಲಿ ಜನತೆ ಬಹಳ ಸಂಕಷ್ಟಕ್ಕೆ ಈಡಾದರು. ಆದರೆ ಈ ಸಮಯದಲ್ಲಿ ಅದಾನೀ – ಅಂಬಾನಿಯವರ ಸಂಪತ್ತು ಅಗಾಧವಾಗಿ ವೃದ್ಧಿಸಿತು. ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ. ಮನುಸ್ಮೃತಿಯನ್ನು ಜಾರಿಗೊಳಿಸಲು ಆರ್ ಎಸ್ ಎಸ್ ಎಲ್ಲಾ ಕುತಂತ್ರಗಳನ್ನು ಮಾಡುತ್ತಿದೆ. ಅವರು ದೇಶದ ಒಕ್ಕೂಟ ವ್ಯವಸ್ಥೆ ಯ ವಿರೋಧಿಗಳು. ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣ ಬದಲಾಯಿಸಲು ಹೊರಟಿದ್ದಾರೆ. ಒಂದು ಬಾಷೆ, ಒಂದೇ ಧರ್ಮದ ಆಧಿಪತ್ಯ ಮತ್ತು ಒಂದೇ ನಾಯಕ ಎಂಬುದೇ ಆರ್ ಎಸ್ ಎಸ್ ನ ರಣ ನೀತಿ.
ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದು ಕೊಟ್ಟ ವಿ.ಡಿ. ಸಾವರ್ಕರ್ ನನ್ನು “ ವೀರ” ಎಂದು ಬಿಂಬಿಸಲಾಗುತ್ತಿದೆ. ಅವರು ಆರ್ಯನ್ ಜನಾಂಗದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತಿದ್ದಾರೆ, ಹಾಲಿ ನಡೆಯುತ್ತಿರುವ ಖಾಸಗೀಕರಣದ ಭರಾಟೆಯಲ್ಲಿ ಶೂದ್ರರು ನಿರುದ್ಯೋಗಕ್ಕೆ ಈಡಾಗುತ್ತಿದ್ದಾರೆ. ದಲಿತರು ಮತ್ತು ಮಹಿಳೆಯರು ಸೇರಿದಂತೆ ಎಲ್ಲ ಜನತೆಯ ಹಕ್ಕುಗಳ ಜತೆ ಆಟವಾಡುತ್ತಿದ್ದಾರೆ. ಕೊನೆಯದಾಗಿ ದೇಮ ಈಗ ನಾವೇನು ಮಾಡಬೇಕು ಎಂಬುದನ್ನೂ ಸೂಚಿಸಿದ್ದಾರೆ. ಇಡೀ ಆರ್ ಎಸ್ ಎಸ್ ಸಂತಾನ ಸತತವಾಗಿ ದುಡಿಯುತ್ತಿದ್ದಾರೆ, ಅವರಲ್ಲಿ ಯಾವುದೇ ಒಡಕಿಲ್ಲ. ಇದರ ಮರ್ಮ ಅವರ ಭೂತ ಕಾಲದ ಹಿನ್ನಡೆಯ ನಂಬಿಕೆಗಳು (retrograde beleifs in the past). ಅವೇನೆಂದರೆ: ಚಾತುರ್ವರ್ಣ , ಮನು ಧರ್ಮ ಶಾಸ್ತ್ರ ,ಆರ್ಯನ್ ಶ್ರೇಷ್ಠ ತಳಿ , ಭಾರತ ಸಂವಿಧಾನದ ಧ್ವಂಸ ಮಾತ್ರ.. ಈ ನಂಬಿಕೆಗಳು ಆರ್ ಎಸ್ ಎಸ್ ನ ಉಸಿರಾಟಕ್ಕೆ ಕಸಿ ಮಾಡುತ್ತದೆ, ಅದಕ್ಕಾಗಿ ಅದು ವಿವೇಚನಾಶಕ್ತಿಯನ್ನ ನಾಶ ಮಾಡುತ್ತದೆ. ಇವುಗಳಿಂದಾಗಿ ಮೇಲಿನಿಂದ ಬರುವ ಅಪ್ಪಣೆಗಳನ್ನು ಕಾರ್ಯಕರ್ತರು ಸಮ್ಮೋಹನಕ್ಕೆ ಒಳಗಾದಂತೆ ಜಾರಿ ಮಾಡುತ್ತಾರೆ.
ಇಂತಹ ಸಂಧರ್ಭದಲ್ಲಿ ಸಮಾಜವನ್ನು ಮುನ್ನಡೆಸುವವರಿಗೆ ಹೆಚ್ಚಿನ ಜವಾಬ್ದಾರೀ ಇರುತ್ತದೆ. ಇಂದಿನ ತುರ್ತು ಏನೆಂದರೆ, ಭೂತಕಾಲದ ಚಾತುರ್ವರ್ಣವನ್ನು ಪ್ರತಿಪಾದಿಸುವ ಈ ಹಿನ್ನಡೆ ಗುಂಪುಗಳ ನಾನಾ ವೇಷಗಳನ್ನು ಕಳೆಚಿ ಸಮಾಜದ ಮುಂದೆ ಇಡಬೇಕಾಗುತ್ತದೆ. ವಿವಿಧ ಧಾರೆಗಳು ಒಂದಾಗಿ ಹೊಳೆಯಾಗಿ ಹರಿಯಬೇಕಾಗಿದೆ. ವಿನಯಪೂರಿತವಾಗಿ ಶಠತ್ವವನ್ನು ಬಿಡಬೇಕಾಗಿದೆ. ಬಹುತ್ವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಉಳಿಸಿ ಕೊಳ್ಳಬೇಕಾಗಿದೆ. ನಾವು ಎಚ್ಚರಗೊಳ್ಳಬೇಕಾಗಿದೆ. ಆರ್ ಎಸ ಎಸ ನ ಕೂಗುಮಾರಿಗಳ ಗುಂಪು ನಮ್ಮ ಮನೆಗೆ ಬಂದಾಗ ಅದಕ್ಕೆ ಓ ಗೊಡದೆ “ ನಾಳೆ ಬಾ” ಎಂದು ಬರೆದಿಡಬೇಕು. ಬಿ ಜೆ ಪಿ ವಿರೋಧಿ ಶಕ್ತಿಗಳು ವಿನಯವಂತರಾಗಿ, ತಮ್ಮ ಸ್ವಯಂ ಶ್ರೇಷ್ಠತೆಯ ಅಹಂ ಬಿಡಬೇಕು. ಈ ಪ್ರಕ್ರಿಯೆಯಲ್ಲಿ ಬಿಜೆಪಿ ಯನ್ನು ವಿರೋಧಿಸುವ ಸಂಯುಕ್ತ ರಂಗವೊಂದು ರಚನೆ ಆಗಬೇಕು. ಒಂದು ಮಾತನ್ನು ನೆನಪಿನಲ್ಲಿ ಇಟ್ಟಿಕೊಳ್ಳಬೇಕು, ಅದೇನೆಂದರೆ -” ದ್ವೇಷ ಅಂತಿಮವಾಗಿ ಅದನ್ನು ಸೃಷ್ಟಿಸಿದವನನ್ನೇ ನಾಶ ಮಾಡುತ್ತದೆ.”
ದೇ ಮ ಅವರು ಈ ಕೃತಿಯಲ್ಲಿ ಯಾವುದೇ ಉಪದೇಶ ಮಾಡುತ್ತಿಲ್ಲ, ಬದಲಾಗಿ ತಮ್ಮ ಮನದಾಳದ ಮಾತನ್ನು ಹಂಚಿ ಕೊಳ್ಳುತ್ತಿದ್ದಾರೆ. ಅತ್ಯಂತ ಸರಳ ಭಾಷೆಯಲ್ಲಿ ಮುಂದೆ ಆಗಬೇಕಾದ್ದು ಏನೆಂದು ತಿಳಿಸುತ್ತಿದ್ದಾರೆ. ಅವರ ಸಾಹಿತ್ಯ ರಚನೆಯ ಪರಿಯೇ ಈ ರೀತಿಯದ್ದು. ಸಾಹಿತಿ ಮತ್ತು ರಾಜಕೀಯ ಕಾರ್ಯಕರ್ತರಾಗಿ ಹೇಳಬೇಕಾದ್ದನ್ನು ಹೇಳಿದ್ದಾರೆ.
ಸಂಚಾಲಕರು
ಆಖಿಲ ಭಾರತ ಪ್ರಜಾ ವೇದಿಕೆ. AIPF
# 5598. 5 ನೆಯ ಕ್ರಾಸ್ ವಿಜಯನಗರ ಎರಡನೆಯ ಹಂತ.
ಮೈಸೂರು -570017