ದೇವನೂರರ “ಆರ್‌ಎಸ್ಎಸ್ ಆಳ ಮತ್ತು ಅಗಲ” ಪುಸ್ತಕದಲ್ಲಿನ ವಿಚಾರಗಳು ಮುಂಗೋಳಿಯ ಕರೆಯಂತಿವೆ-ಡಾ.ಎ.ಆರ್.ವಾಸವಿ

[ದೇವನೂರು ಮಹಾದೇವರವರ “ಆರ್‌ಎಸ್ಎಸ್ ಆಳ ಮತ್ತು ಅಗಲ” ಪುಸ್ತಕದ ಕುರಿತು ಡಾ.ಎ.ಆರ್.ವಾಸವಿಯವರು ‘ದಿ ಬುಕ್ ರಿವ್ಯೂ ಲಿಟರೆರಿ ಟ್ರಸ್ಟ್ ಮ್ಯಾಗಜಿನ್‌’ಗೆ ಬರೆದ ವಿಮರ್ಶೆಯನ್ನು ನಿಖಿಲ್ ಕೋಲ್ಪೆಯವರು ಕನ್ನಡಕ್ಕೆ ಅನುವಾದಿಸಿದ್ದು ಅದು 11 ಸೆಪ್ಟೆಂಬರ್ 2022ರ ‘ನಾನು ಗೌರಿ’ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ನಮ್ಮ ಮರು ಓದಿಗಾಗಿ ಇಲ್ಲಿದೆ.]

ನಾವು ನಮ್ಮ ರಾಷ್ಟ್ರೀಯ ಸಾರ್ವಜನಿಕ ಜೀವನದಲ್ಲೇ ಹೊಸ ತಳವನ್ನು ಮುಟ್ಟಿದ್ದೇವೆ: ಆರೆಸ್ಸೆಸ್ ಮತ್ತು ಬಿಜೆಪಿಯ ಸುಲಿಗೆಗಳ ಕುರಿತು ಹಲವಾರು ಲೇಖಕರು ತಮ್ಮ ಮೇಲೆ ಹೇರಿಕೊಂಡಿರುವ ಮೌನದಷ್ಟು ಆತಂಕಕಾರಿಯಾದುದು ಬೇರೆ ಇಲ್ಲವಾಗಿದೆ. ನಮ್ಮ ಪ್ರಜಾಪ್ರಭುತ್ವ ಮತ್ತು ಸಂಸ್ಕೃತಿಗಳ ಬಹುಮುಖಿ ಸವಕಳಿಗಳನ್ನು ಕುರಿತು ವಿಮರ್ಶಾತ್ಮವಾಗಿ ಬರೆಯುವವರು ಕೂಡಾ ತಮ್ಮ ವಿಚಾರಗಳನ್ನು ಒಪ್ಪುವವರಿಗಾಗಿ ಬರೆಯುತ್ತಾರೆ ಅಥವಾ ಶೈಕ್ಷಣಿಕ ಇಂಗ್ಲೀಷಿನ ಉದಾರವಾದಿ ಸಮಾಜ ವಿಜ್ಞಾನಗಳ ಭಾಷೆಯಲ್ಲಿ ಬರೆಯುತ್ತಾರೆ. ಇವೆಲ್ಲದರ ಹೊರತಾಗಿ ಸಮಾಜದ ದೊಡ್ಡ ಜನವಿಭಾಗವನ್ನು ತಲುಪುವ ಸಾಮರ್ಥ್ಯವು ಸಾಮೂಹಿಕವಾಗಿ ಸಮಾಜದ ಹೊಸ್ತಿಲಲ್ಲಿ ನಿಂತು, ಅದರ ವೈವಿಧ್ಯಮಯ ಸದಸ್ಯರಿಗೆ- ಅವರಿಗೆ ಅರ್ಥವಾಗುವಂತಾ ರೂಪಕಗಳು ಮತ್ತು ನುಡಿಗಟ್ಟುಗಳಲ್ಲಿ ದೇಶವು ಸಾಗುತ್ತಿರುವ ಕಳವಳಕಾರಿ ಹಾದಿಗಳ ಬಗ್ಗೆ, ಪ್ರಜಾಪ್ರಭುತ್ವ, ಬಹುತ್ವ, ಜಾತ್ಯತೀತತೆಯ ನಾಶದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಮತ್ತು ಒಟ್ಟಿನಲ್ಲಿ ಒಂದು ಸಾಮೂಹಿಕವಾದ ಸಂಯಮದಿಂದ ತಲಪುವ ಸಾಮರ್ಥ್ಯ ತೀರಾ ಸೀಮಿತವಾಗಿದೆ.

ದೇವನೂರು ಮಹಾದೇವರ ಕನ್ನಡ ಕಿರುಪುಸ್ತಕ “ಆರೆಸ್ಸೆಸ್:ಆಳ ಮತ್ತು ಅಗಲ” ಈ ಅತೀ ಮುಖ್ಯವಾದ ಮಿತಿಯನ್ನು ಮೀರಿ, ಅವರು ಆರೆಸ್ಸೆಸ್ ಕುರಿತು ಅರ್ಥವಾಗಬಲ್ಲಂತ ವಿಮರ್ಶೆಯನ್ನು ಮಾಡಲು, ಜಾನಪದದಿಂದ ಮತ್ತು ಗ್ರಾಮೀಣ ಸಂಸ್ಕೃತಿಯಿಂದ ಪಡೆದಂತಾ ರೂಪಕಗಳು, ದಂತಕತೆಗಳು ಮತ್ತು ನುಡಿಗಟ್ಟುಗಳನ್ನು ಬಳಸುತ್ತಾರೆ. ಈಗ ಸಾಮಾನ್ಯವಾಗಿಹೋಗಿರುವ ಬಿಜೆಪಿಯ ನಿರಂತರ ಉನ್ನತಿಯ ಮೋದಿ-ಶಾಗಳ ‘ಡಬಲ್ ಇಂಜಿನ್’ ಕಥಾನಕವನ್ನು ಮೀರಿ, ದೇವನೂರರು ಆರೆಸ್ಸೆಸ್ಸಿನ ಒಳಗನ್ನು (ಅಂತರಂಗ) ಬಹಿರಂಗಗೊಳಿಸಲು ಮತ್ತು ಅದು ವಾಸ್ತವವಾಗಿ ದೇಶದಲ್ಲಿ ‘ಸಂಪೂರ್ಣ ಸರ್ವಾಧಿಕಾರ’ದ ಬೆಳವಣಿಗೆಯ ಹಿಂದಿನ ‘ಪ್ರಾಣ’ವಾಗಿದೆ ಎಂದು ಕಾಣಿಸಲು ತನ್ನ ಜಾಗೃತ ದೃಷ್ಟಿ ಮತ್ತು ಸಾಹಿತ್ಯಕ ಕೌಶಲಗಳನ್ನು ಬಳಸುತ್ತಾರೆ. ಅದರ ಐತಿಹಾಸಿಕವಾದ ಜಾತಕವನ್ನು ವಿಮರ್ಶೆಗೆ ಒಳಪಡಿಸುತ್ತಾ, ಅದರ ಪ್ರಸ್ತುತ ಪರಿಣಾಮ ಮತ್ತು ಭವಿಷ್ಯದ ಸಾಧ್ಯತೆಗಳನ್ನು ಬೆಟ್ಟುಮಾಡಿ ತೋರಿಸುತ್ತಾ ದೇವನೂರು ಅವರು, ನಮ್ಮ ಸಮಾಜದಲ್ಲಿ ಆರೆಸ್ಸೆಸ್ ಹೊಂದಿರುವ ಪ್ರಭಾವದ ‘ಅಗಲ’ವನ್ನು ಅನಾವರಣಗೊಳಿಸುತ್ತಾರೆ.

ದೇಶದ ಅಡಿಪಾಯವನ್ನೇ ಹಿಡಿತದಲ್ಲಿ ಇಟ್ಟುಕೊಂಡಿರುವ ಆರೆಸ್ಸೆಸ್ಸಿನ ಬಹುವಿಧಾನಗಳನ್ನು ಬಿಡಿಸಿಡುವುದರ ಮೂಲಕ, ಅದು ತಲುಪಿರುವ ಅಪಾಯಕಾರಿ ‘ಆಳ’ವನ್ನು ಅವರು ವಿವರಿಸುತ್ತಾರೆ. ಈ ಕಿರುಪುಸ್ತಕವು ಅನೇಕ ಸಂಸ್ಥೆಗಳು ಏಕಕಾಲದಲ್ಲಿ ಸ್ಥಳೀಯವಾಗಿ ಪ್ರಕಟಿಸುವ ಮತ್ತು ಸಗಟು ಖರೀದಿಗೆ ರಿಯಾಯಿತಿ ನೀಡುವ ಪ್ರಕಾಶನ ವ್ಯವಸ್ಥೆಯಿಂದಾಗಿ ಮುದ್ರಣಗೊಂಡ ಮೊದಲ ತಿಂಗಳಲ್ಲೇ  ಒಂದು ಲಕ್ಷ, ಏಳು ಸಾವಿರ ಪ್ರತಿಗಳು ಮಾರಾಟವಾಗಿರುವುದು- ಜನರೊಂದಿಗೆ ಸಂವಹನ ನಡೆಸುವ ಮತ್ತು ನಮ್ಮ ರಾಷ್ಟ್ರೀಯ ಜೀವನದಲ್ಲಿ ‘ಗೊಂದಲ, ಅನುಮಾನ ಮತ್ತು ದ್ವೇಷ’ ಉಂಟುಮಾಡಿರುವ ಸಂಘಟನೆಯೊಂದರ ವ್ಯವಸ್ಥೆಯನ್ನು ಜನರೆದುರು ಬಿಚ್ಚಿಡುವ ಲೇಖಕರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಗ್ರಾಮೀಣ ಸಂಸ್ಕೃತಿಯಲ್ಲಿ ರೋಗ ಮತ್ತು ಸಾವಿನ ಪ್ರತಿರೂಪವಾದ ಮಹಾಮಾರಿಯನ್ನು ಓಡಿಸುವಂತೆಯೇ ಆರೆಸಸ್ಸನ್ನು ಓಡಿಸಬೇಕಾದ ಅಗತ್ಯವನ್ನು ವಿವರಿಸುತ್ತಾ ದೇವನೂರರು, ‘ಮಾಯಾವಿ’ಯಂತೆ ಅನೇಕಾನೇಕ ಅನಿರೀಕ್ಷಿತ ವೇಷಗಳನ್ನು ಧರಿಸಿಕೊಂಡು ಬರುವ ಈ ಸಂಘಟನೆಯ ಮುಖವಾಡಗಳನ್ನು ಕಳಚುತ್ತಾರೆ. ಅವರು ಕಾಣುತ್ತಿರುವುದು ‘ಘೋರ ದೃಶ್ಯ’ದ ಒಂದು ಚಿಕ್ಕ ನೋಟ ಮಾತ್ರ. ಈ ಘೋರ ದೃಶ್ಯ ಮತ್ತು ಅದರ ಪರಿಣಾಮಗಳ ಮೂಲವನ್ನು ಆರೆಸ್ಸೆಸ್ಸಿನ ‘ಗುರುಗಳು, ತತ್ವಜ್ಞಾನಿಗಳು ಮತ್ತು ಮಾರ್ಗದರ್ಶಕ’ರಾದ ಗೋಳ್ವಾಲ್ಕರ್ ಮತ್ತು ಸಾವರ್ಕರ್ ಅವರು ಈ ಸಂಘಟನೆಗೆ ಮತ್ತು ತಮ್ಮ ಕನಸಾದ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ವಿಧಿಸಿರುವ ಕೆಲವೊಂದು ಬುನಾದಿ ತತ್ವಗಳಲ್ಲಿಯೇ ಕಂಡುಕೊಳ್ಳುತ್ತಾರೆ.

ಚಾತುರ್ವಣ್ಯ್ರ ಮತ್ತು ಮನುಸ್ಮೃತಿಯ ಆರಾಧನೆ ಮತ್ತು ಸ್ವೀಕಾರದ ಮೂಲಕ ಆರೆಸ್ಸೆಸ್ಸಿನ ಸ್ಥಾಪಕರು ಹೇಗೆ ಜಾತಿವ್ಯವಸ್ಥೆಯನ್ನು ಬಲಪಡಿಸಿದ್ದಾರೆ, ಸಂವಿಧಾನವನ್ನು ತಿರಸ್ಕರಿಸಿದ್ದಾರೆ ಮತ್ತು ಕಲ್ಪಿತ ‘ಆರ್ಯ’ ಜನಾಂಗದ ಶ್ರೇಷ್ಟತೆಯನ್ನು ಪ್ರತಿಪಾದಿಸಿದ್ದಾರೆ ಎಂಬುದನ್ನು ದೇವನೂರರು ಎಳೆಎಳೆಯಾಗಿ ವಿವರಿಸಿದ್ದಾರೆ. ಈ ‘ವಿಷಬೀಜ’ವನ್ನು ಪಸರಿಸುತ್ತಾ, ಗೋಳ್ವಾಲ್ಕರ್ ಮತ್ತು ಸಾವರ್ಕರ್ ಅಂತವರು ಒಕ್ಕೂಟ ವ್ಯವಸ್ಥೆಯನ್ನು ಕಳಚಿಹಾಕಿ, ಆ ಮೂಲಕ ಪ್ರಾದೇಶಿಕ ರಾಜ್ಯಗಳ ಅಸ್ಮಿತೆಯನ್ನೇ ಇಲ್ಲವಾಗಿಸಲು ಉದ್ದೇಶಿಸಿದ್ದಾರೆ. ಪ್ರಾದೇಶಿಕ ಸಂಸ್ಕೃತಿಗಳನ್ನು ಮತ್ತು ಅವುಗಳ ಸಾಂವಿಧಾನಿಕ ಹಕ್ಕುಗಳನ್ನು ಬಗೆದೆಸೆಯುವುದರ ಮೂಲಕ ಆರೆಸ್ಸೆಸ್ ಕೇಂದ್ರೀಕೃತ ಅಧಿಕಾರವನ್ನು ಹೊಂದಲು ಬಯಸಿದೆ. ಗೋಳ್ವಾಲ್ಕರ್ ಮತ್ತು ಸಾವರ್ಕರ್ ಅವರಿಬ್ಬರೂ ಹಿಟ್ಲರನನ್ನು ಹೊಗಳುತ್ತಾ ಆತ ನಡೆಸಿದ ಯಹೂದಿಗಳ ಹತ್ಯಾಕಾಂಡವನ್ನು ‘ಜನಾಂಗೀಯ ಅಭಿಮಾನ’ವನ್ನು ಸ್ಥಾಪಿಸುವ ಕಾರ್ಯಕ್ರಮ ಎಂದು ಸ್ವಾಗತಿಸಿರುವುದನ್ನು ಟೀಕಿಸುತ್ತಾ ದೇವನೂರರು, ಹಿಂಸಾಚಾರವನ್ನು ಹೇಗೆ ಸ್ವೀಕಾರಾರ್ಹ ಮತ್ತು ನ್ಯಾಯಬದ್ಧಗೊಳಿಸಲಾಗುತ್ತಿದೆ ಎಂದು ಓದುಗರನ್ನು ಎಚ್ಚರಿಸುತ್ತಾರೆ. ‘ಆರೆಸೆಸ್ಸಿಗೆ ಬಹುತ್ವವೇ ವಿಘಟನೆ, ಒಂದು ವಿಷಬೀಜ ಎಂದು ಅರ್ಥ… ಸರ್ವಾಧಿಕಾರಿ ಸರಕಾರದ ಸ್ಥಾಪನೆಗೆ ಗೋಳ್ವಾಲ್ಕರ್ ನೀಡಿದ್ದ ಕರೆಯ ಅರ್ಥವು ಸಂವಿಧಾನವನ್ನು ಬದಲಿಸುವುದಾಗಿದೆ ಎಂದು ದೇವನೂರು ಗಮನಿಸುತ್ತಾರೆ. ‘ಅದು ಮಾತ್ರವೇ ಅಲ್ಲದೆ, ಸರ್ವಾಧಿಕಾರದ ಹಿಟ್ಲರನ ತತ್ವಗಳಿಗೆ  ಸಮನಾಗಿ ಗೋಳ್ವಾಲ್ಕರ್- ಒಂದು ಧ್ವಜ, ಒಂದು ರಾಷ್ಟ್ರೀಯ ಆಡಳಿತ, ಒಂದು ಜನಾಂಗ, ಒಬ್ಬ ನಾಯಕನ- ಕರೆನೀಡುತ್ತಾರೆ’. (ಪುಟ 15-16).

ಇವೆಲ್ಲವುಗಳ ಪರಿಣಾಮವೆಂದರೆ, ನಮ್ಮ ಸಮಕಾಲೀನ ಘಟ್ಟದಲ್ಲಿ ಈ ವಿಚಾರಗಳು ಮತ್ತು ತತ್ವಗಳನ್ನು ಆರೆಸ್ಸೆಸ್ಸಿನ ಹಲವಾರು ಕಾರ್ಯಕ್ರಮಗಳ ಮೂಲಕ ಸಾಧಿಸಲಾಗಿದೆ ಮತ್ತು ಈ ಆದೇಶಗಳಲ್ಲಿ ಆರೆಸ್ಸೆಸ್ ತನ್ನ ಸದಸ್ಯರಿಂದ ಬಯಸುವ ಪ್ರಶ್ನಾತೀತವಾದ ಕುರುಡು ವಿಧೇಯತೆಯು ಅದರ ಹಿಂಬಾಲಕರು ವಿವೇಚನಾ ಶಕ್ತಿಯನ್ನೇ ಕಳೆದುಕೊಂಡು ‘ದ್ವೇಷದ ಸಮರ’ ನಡೆಸುವ ಅಮಾನವೀಯ ರೋಬೋಟುಗಳಾಗುವಂತೆ ಮಾಡಿದೆ ಎಂದು ದೇವನೂರರು ವಿವರಿಸುತ್ತಾರೆ.

ಇವೆಲ್ಲವುಗಳ ಪರಿಣಾಮವಾಗಿ, ದೇವನೂರರು ಪಟ್ಟಿ ಮಾಡಿರುವಂತೆ ಏಕವ್ಯಕ್ತಿ ನಿಯಂತ್ರಿತ ರಾಜಕೀಯ ಪಕ್ಷ ರಾಜಕಾರಣ, ಕುಟುಂಬ ನಿಯಂತ್ರಿತ ಪಕ್ಷ ರಾಜಕಾರಣ ಮತ್ತು ಸಂವಿಧಾನೇತರ ಸಂಘ/ಸಂಘಟನೆ ನಿಯಂತ್ರಿತ ರಾಜಕಾರಣ ಹೊಂದಿರುವ ಬಹುತೇಕ ಪಕ್ಷಗಳು ತಮ್ಮನ್ನು ಆಯ್ಕೆ ಮಾಡಿದ ಪ್ರಜೆಗಳಿಗೆ ನಿಷ್ಟವಾಗಿರುವಲ್ಲಿ ವಿಫಲವಾಗಿವೆ. ಅದೇ ರೀತಿಯಲ್ಲಿ ದಲಿತರು ಮತ್ತು ಹಿಂದುಳಿದ ಜಾತಿಗಳವರು ಆರೆಸ್ಸೆಸ್ಸಿನ ಸಮ್ಮೋಹನಗೊಳಿಸುವ ಬೋನಿಗೆ ಬಿದ್ದು, ಆದರ ಕಾಲಾಳುಗಳಾಗುವುದಕ್ಕೆ ಕಾರಣಗಳನ್ನೂ ಆವರು ತೆರೆದಿಡುತ್ತಾರೆ. ಕಪ್ಪು ಹಣವನ್ನು ಹೊರತೆಗೆದು ನಾಗರಿಕರ ಬ್ಯಾಂಕ್ ಖಾತೆಗಳಿಗೆ ಹಾಕುವುದು, ರೈತರ ಆದಾಯವನ್ನು ಹೆಚ್ಚಿಸುವುದು, ಉದ್ಯೋಗಗಳನ್ನು ಸೃಷ್ಟಿಸುವುದು ಮುಂತಾದ ಸುಳ್ಳು ಭರವಸೆಗಳ ಮೂಲಕ ಅಧಿಕಾರದಲ್ಲಿ ಸ್ಥಾಪಿಸಲಾದ ಮೋದಿಯನ್ನು ತಮ್ಮ ‘ಉತ್ಸವ ಮೂರ್ತಿ’ಯನ್ನಾಗಿ ಬಳಸಿಕೊಂಡು, ‘ತೊಗಲು ಬೊಂಬೆ’ಗಳಾಗಿರುವ ದೊಡ್ಡ ಸಂಖ್ಯೆಯ ಸದಸ್ಯರನ್ನು ಬಳಸಿಕೊಂಡು ಆರೆಸ್ಸೆಸ್- ಹಿಂದೂತ್ವದ ತನ್ನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಪಾಕಿಸ್ತಾನವನ್ನು ಶಾಶ್ವತ ಶತ್ರು ಎಂದು ಬಿಂಬಿಸುವ ಮೂಲಕ, ಮುಸ್ಲಿಮರು ಮತ್ತು ಕ್ರೈಸ್ತರನ್ನು ಹಿಂದೂ ಸಂಸ್ಕೃತಿಗೆ ವಿರೋಧವಾಗಿದ್ದಾರೆಂದು ಗುರಿ ಮಾಡುವ ಮೂಲಕ, ಸಮುದಾಯಗಳ ನಡುವೆ ಉದ್ವಿಗ್ನತೆ ಮತ್ತು ಹಿಂಸಾಚಾರವನ್ನು ಉತ್ತೇಜಿಸುವ ಮೂಲಕ ದ್ವೇಷವು ಒಂದು ಪ್ರಬಲ ಕಥಾನಕವಾಗಿಬಿಟ್ಟಿದೆ.

ಮುಂದುವರಿಯುತ್ತಾ ದೇವನೂರರು- ಸಾರ್ವಜನಿಕ ಆಸ್ತಿಗಳನ್ನು ಖಾಸಗೀಕರಣಗೊಳಿಸುತ್ತಾ, ಸಾಲಗಳನ್ನು ಹೆಚ್ಚಿಸುತ್ತಾ, ನೋಟು ರದ್ದತಿಯಂತಹ ವಿನಾಶಕಾರಿ ಆರ್ಥಿಕ ಧೋರಣೆಗಳನ್ನು ಅನುಷ್ಟಾನಗೊಳಿಸುತ್ತಾ ಹೇಗೆ ಆರೆಸ್ಸೆಸ್-ಬಿಜೆಪಿ ಕೂಟವು ಭಾರತವನ್ನು ದಿವಾಳಿಗೊಳಿಸುತ್ತಿದೆ ಎಂದು ವಿವರಿಸುತ್ತಾ ಹೋಗುತ್ತಾರೆ. ಇದರ ಪರಿಣಾಮವು ‘ಭೀಕರ ಅಸಮಾನತೆ, ಅಸಮತೋಲನ’ಗಳಾಗಿದ್ದು, ಇದರಲ್ಲಿ ದೇಶವು ‘ಸೂತ್ರ ಕಿತ್ತ ಪಟದಂತೆ ಗೋತ ಹೊಡೆಯುತ್ತಾ ಹಾರಾಡುತ್ತಿದೆ. (ಪುಟ 37). ಇದೇ ಹೊತ್ತಿಗೆ ಆರೆಸ್ಸೆಸ್-ಬಿಜೆಪಿಯು ‘ದೇಶಪ್ರೇಮ ಜಪಿಸುತ್ತಾ’ ಬೇರೆಬೇರೆ ಕಾನೂನುಗಳನ್ನು ತರುತ್ತಿದೆ. ಕರ್ನಾಟಕದಲ್ಲಿ ಜನರ ಧಾರ್ಮಿಕ ಸ್ವಾತಂತ್ರ್ಯವನ್ನು, ಆ ಮೂಲಕ ಧಾರ್ಮಿಕ ಮತಗಳ ಬಹುತ್ವ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳ ಬಹುತ್ವವನ್ನು ಅಳಿಸಿ ಹಾಕುವ ಮತಾಂತರ ನಿಷೇಧ ಕಾಯಿದೆಯನ್ನು ತರುವುದೇ ಮುಂತಾದ ಕ್ರಮಗಳನ್ನು ತರಲಾಗಿರುವ ಬಗೆ ದೇವನೂರರು ಮುಂದೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. (ಪುಟ 50). ಇದೇ ಹೊತ್ತಿಗೆ ಶಾಲಾ ಪಠ್ಯಗಳನ್ನು ತಿರುಚುವುದು ಮತ್ತು ಐತಿಹಾಸಿಕ ಸತ್ಯಗಳನ್ನು ತಿರುಗಾಮುರುಗ ಮಾಡುವುದು ಮಾತ್ರವಲ್ಲದೇ, ಸಾವರ್ಕರ್ ಮತ್ತು ಗೋಡೈಯಂತವರನ್ನು ಆದರ್ಶ ಪ್ರತಿಮೆಗಳನ್ನಾಗಿ ಮಾಡುವ ಕೆಲಸವೂ ನಡೆದಿದೆ. ಇವೆಲ್ಲವುಗಳು ದೇಶದ ಮೇಲೆ ಬೀರುವ ಪ್ರತಿಕೂಲ ಪರಿಣಾಮಗಳನ್ನು ಗುರುತಿಸುತ್ತಲೇ ದೇವನೂರರು, ಮುಖ್ಯವಾಗಿ ದಲಿತರು ಮತ್ತು ಆದಿವಾಸಿಗಳು ಸೇರಿದಂತೆ ಅತ್ಯಂತ ಕಡೆಗಣಿಸಲಾದ ವರ್ಗಗಳ ಮೇಲೆ ಘೋರ ಪರಿಣಾಮಗಳನ್ನು ಉಂಟುಮಾಡುವ ನಡೆಗಳ ಕುರಿತು ಎಚ್ಚರಿಕೆ ನೀಡುತ್ತಾರೆ. ಆದಿವಾಸಿ/ಮೂಲನಿವಾಸಿ/ ಬುಡಕಟ್ಟುಗಳನ್ನು ವನವಾಸಿಗಳೆಂದು ಮರುನಾಮಕರಣ ಮಾಡುವ ಮೂಲಕ ಮೂಲನಿವಾಸಿಗಳಾಗಿ ಅವರ ಹಕ್ಕುಗಳನ್ನು ಅಲ್ಲಗೆಳೆಯುವುದು ಆರೆಸ್ಸೆಸ್ಸಿನ ಒಂದು ತಂತ್ರ ಎಂಬುದನ್ನು ದೇವನೂರರು ಗುರುತಿಸುತ್ತಾರೆ. ಆರೆಸ್ಸೆಸ್ ಮತ್ತು ಅದರ ಚೇಲಾಗಳು ‘ಅಬ್ಬರಿಸುತ್ತಾ ಇರುವಾಗಲೇ, ಭಾರತವು ‘ನರಳುವಂತೆ’ ಮಾಡುತ್ತಿರುವ ಇಂತಾ ಸಾಧ್ಯತೆಗಳಿಗೆ ಸವಾಲೆಸೆದು ಎದುರಿಸಲು ತುರ್ತು ಮತ್ತು ಸಾಮೂಹಿಕವಾದ ಕ್ರಿಯೆಗೆ ದೇವನೂರರು ಕರೆ ನೀಡುತ್ತಾರೆ.

‘ಈಗಲಾದರೂ ಸಮಾಜವು ಮುನ್ನಡೆಯಬೇಕೆಂದು ಬಯಸುವ ಎಲ್ಲಾ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ತಮ್ಮ ಸ್ವಂತ ಚಿಕ್ಕಪುಟ್ಟ ಮಿತಿಗಳನ್ನು ಮತ್ತು ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ, ಒಂದು ಹಲವು ತೊರೆಗಳು ಸೇರಿದ ನದಿಯಂತೆ ಗುರಿಯತ್ತ ನಡೆಯಬೇಕಾಗಿದೆ. ಮತ್ತು ಇದಕ್ಕಾಗಿ ಅವರು ತಾವಾಗಿಯೇ ತಮ್ಮ ಮೇಲುಗಾರಿಕೆ ಎಂಬ ರೋಗವನ್ನೂ ಬದಿಗೆ ಸರಿಸಬೇಕಾಗಿದೆ. ಜೊತೆಗೆ ಅಹಂಕಾರವನ್ನೂ ಕಿತ್ತೆಸೆಯಬೇಕು. ಗುರಿಯನ್ನು ತಲುಪುವುದಕ್ಕೆ ನೂರಾರು ಹಾದಿಗಳಿವೆ ಎಂಬುದನ್ನು ಅವರು ಅರ್ಥಮಾಡಿಕೊಂಡು ಸ್ವೀಕರಿಸಬೇಕು. ನಾಯಕತ್ವದ ಕರ್ಮಠತನವನ್ನು ನಿವಾರಿಸಬೇಕು. ತನ್ನ ಹಾದಿಯೇ, ಮತ್ತು ತನ್ನ ಸಂಘಟನೆಯೇ ಶ್ರೇಷ್ಟವೆಂದು ಹೇಳುವ ಸಣ್ಣತನಕ್ಕೆ ಬದಲಾಗಿ, ನಾವು ನಮ್ಮ ಭಾರತೀಯ ಸಂವಿಧಾನಕ್ಕೆ ಅದು ಪ್ರತಿಪಾದಿಸುವ ಮತ್ತು ಅದರ ಜೀವವೇ ಆಗಿರುವ ಅದು ಪ್ರತಿಪಾದಿಸುವ ಮತ್ತು ಅದರ ಜೀವವೇ ಆಗಿರುವ ಬಹುತ್ವವನ್ನು ರಕ್ಷಿಸುವ ಸಲುವಾಗಿ ಮತ್ತು ಒಂದು ಸಾಮೂಹಿವಾದ ವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಸಲುವಾಗಿ, ಮೇಲುಕೀಳಿನ ಯಾವುದೇ ಭಾವನೆಯಿಲ್ಲದೇ ಸರ್ವವನ್ನೂ ಒಳಗೊಳ್ಳುವ ಮತ್ತು ಭಾಗವಹಿಸುವಿಕೆಯಿಂದ ಒಡಗೂಡಿದ ಪ್ರಜಾಪ್ರಭುತ್ವವನ್ನು ರಕ್ಷಿಸುವ ಸಲುವಾಗಿ, ಮತ್ತು ಪ್ರೀತಿಯ, ಸಮಾನತೆಯ, ಸಹಬಾಳ್ವೆಯ, ಸಾಮರಸ್ಯದ ಮತ್ತು ಜೊತೆಗೂಡುವ ಮನೋಭಾವನ್ನು ರೂಢಿಸಿಕೊಳ್ಳಬೇಕು. ಸಮಾಜದಲ್ಲಿ ನ್ಯಾಯವನ್ನು ಜೀವಂತವಾಗಿ ಉಳಿಸಬೇಕು. ಪ್ರತಿಯೊಬ್ಬರೂ ಹೊಸ ಜೀವಂತಿಕೆಯನ್ನು ಪಡೆಯಲು ತಮ್ಮ ಸಮಾಜ ಮತ್ತು ಸಮುದಾಯದಲ್ಲಿ ಸಮಗ್ರವಾದ ಜೀವನವನ್ನು ನಡೆಸಲು ಶಕ್ತರಾಗಬೇಕು. ಹೊಸ ಸಾಮಾಜಿಕವಾದ ಹಾದಿಗಳನ್ನು ಕಂಡುಕೊಳ್ಳಬೇಕು’ ಎಂಬಂತಹ ಮಾತುಗಳನ್ನು ದೇವನೂರರು ಈ ಕಿರುಪುಸ್ತಕದಲ್ಲಿ ಹೇಳಿದ್ದಾರೆ. (ಪುಟ 61-62).

ಅವರು ಕೊನೆಯಲ್ಲಿ ಹೇಳಿರುವ ಮಾತುಗಳು ಮುಂಗೋಳಿಯ ಕರೆಯಂತಿವೆ. ದ್ವೇಷ, ಅಸಹನೆ ಮತ್ತು ಮೌಡ್ಯದ ಪಿಶಾಚಿಯನ್ನು ನಿಯಂತ್ರಿಸದೇ ಛೂ ಬಿಟ್ಟಾಗ ಅದು ‘ದ್ವೇಷ ಪಿಶಾಚಿ’ಯಾಗುವುದೇ ಅಲ್ಲದೆ, ಹಿಂಬಾಲಕರು ಮತ್ತು ನಮ್ಮೆಲ್ಲರ ಜೊತೆಗೆ, ಅದರ ಸೃಷ್ಟಿಕರ್ತನಾದ ‘ಪಿತಾಮಹ ಮಂತ್ರವಾದಿ’ಯನ್ನೇ ಬಲಿತೆಗೆದುಕೊಳ್ಳುತ್ತದೆ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇಂತಾ ಲೂಟಿಯನ್ನು ಎದುರಿಸಲು ‘ಜೊತೆಯಾಗಿ ನಡೆಯೋಣ’ ಎಂದು ಕರೆನೀಡುವ ಮೂಲಕ ಅವರು ತಮ್ಮ ಮಾತುಗಳನು ಮುಗಿಸುತ್ತಾರೆ.

ಆರೆಸ್ಸೆಸ್ಸಿನ ಬೆಳವಣಿಗೆಗಳನ್ನು ಕಾಣಿಸಿ ಇಂಗ್ಲೀಷಿನಲ್ಲಿ ಬಂದಿರುವ ಹಿಂದಿನ ಕೆಲವು ಬರವಣಿಗೆಗಳಿಗೆ ವ್ಯತಿರಿಕ್ತವಾಗಿ, ದೇವನೂರರ ಕಿರುಪುಸ್ತಕವು ಆರೆಸ್ಸೆಸ್ಸಿನ ಅಸ್ತಿತ್ವದ ಮಹತ್ವವನ್ನು ಬಹುಜನರ ಜೊತೆ ಸ್ಪಂದಿಸಿ, ಅರ್ಥಮಾಡಿಸಬಹುದಾದ ಒಂದು ಸಾಂಸ್ಕೃತಿಕವಾದ ಗ್ರಾಮೀಣ ನುಡಿಗಟ್ಟುಗಳ ಮೂಲಕ ಹಿಡಿದಿಡುತ್ತದೆ. ತಾತ್ವಿಕವಾದ ಸಿದ್ಧ ಪರಿಭಾಷೆಗಳನ್ನು ಮೀರಿದ್ದರೂ ಮೆಕ್ಸಿಕನ್ ತತ್ವಶಾಸ್ತ್ರಜ್ಞ ಅಂತೋನಿಯೋ ಗ್ರಾಮ್ಮಿ ಮಾಡಿದ್ದಂತೆ, ಹುಸಿ ಪ್ರಜ್ಞೆ ಮತ್ತು ದಬ್ಬಾಳಿಕೆಗಳು ಜನತೆಯ ಹಿತಾಸಕ್ತಿಗಳಿಗೆ ವಿರುದ್ಧವಾದ ಅನೈತಿಕ ಕಾರ್ಯಕ್ರಮಗಳಿಗೆ ಪೂರಕವಾಗಬಲ್ಲವು ಮತ್ತು ಸ್ವತಃ ಆ ಜನತೆಯೇ ಅವುಗಳನ್ನು ಹೇಗೆ ಬೆಂಬಲಿಸುತ್ತಾರೆ ಎಂಬುದನ್ನು ಎತ್ತಿ ತೋರಿಸಲು ಶಕ್ತರಾಗಿದ್ದಾರೆ. ಆರೆಸ್ಸೆಸ್ಸಿನ ತತ್ವಶಾಸ್ತ್ರ, ವ್ಯಕ್ತಿತ್ವ, ರಾಜಕೀಯ ಮತ್ತು ಸಾಂಸ್ಕೃತಿಕ ಕಾರ್ಯವ್ಯೂಹಗಳನ್ನು ಬೆಳೆಯುತ್ತಿರುವ ಸರ್ವಾಧಿಕಾರ, ದ್ವೇಷ, ಕೋಮುವಾದ, ದೇಶದ ಅಗಣಿತ ರೀತಿಯ ಹಿಂಸಾಚಾರಗಳ ಜೊತೆ ಜೋಡಿಸುವುದರಿಂದ ಈ ಕಿರುಪುಸ್ತಕವು ‘ಮಂತ್ರವಾದಿ ವಂಚಕ’ರು ಮತ್ತು ಅವರ ಕಣ್ಣುಗಟ್ಟಿನ ಕಥಾನಕಗಳ ವಿರುದ್ಧದ ಹೋರಾಟದಲ್ಲಿ ಒಂದು ಸಂಭಾವ್ಯ ಅಸ್ತ್ರವಾದೀತು. ಈ ಕಿರುಪುಸ್ತಕವನ್ನು ಚಿಕ್ಕದಾಗಿ ಚೊಕ್ಕದಾಗಿ ಇರಿಸಬೇಕಾದ ಅಗತ್ಯವೇ ಲೇಖಕರನ್ನು ಭೀಮಾ ಕೋರೆಗಾಂವ್-16 ಸೇರಿದಂತೆ ನೂರಾರು ಕಾರ್ಯಕರ್ತರನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿದ ಗಂಭೀರವಾದ ಉಲ್ಲಂಘನೆಗಳು ಮತ್ತು ನ್ಯಾಯದಾನ ವ್ಯವಸ್ಥೆಗಳ ದುರುಪಯೋಗಗಳ ಉಲ್ಲೇಖವನ್ನು ಮಾಡದಿರುವುದಕ್ಕೆ ಕಾರಣವಾಗಿರಬಹುದು. ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ ಮತ್ತು ಗೌರಿ ಲಂಕೇಶ್ ಕೊಲೆಗಳನ್ನು ಉಲ್ಲೇಖಿಸಲಾಗದೇ ಇರುವುದು ಬಹುಶಃ ಜನಸಾಮಾನ್ಯರ ಮೇಲೆ ಆರೆಸ್ಸೆಸ್ ಪ್ರಭಾವವನ್ನು ಉಂಟುಮಾಡುತ್ತಿರುವ ಹೆಚ್ಚು ಕೃತ್ರಿಮ ಮತ್ತು ಅಪಾಯಕಾರಿಯಾದ ವಿಧಾನಗಳ ಮೇಲೆ ಗಮನ ಕೇಂದ್ರೀಕರಿಸುವ ಕಾರ್ಯತಂತ್ರದ ಭಾಗವಾಗಿರಬಹುದು. ಆರೆಸ್ಸೆಸ್ ಉಂಟುಮಾಡುತ್ತಿರುವ ಪರಿಣಾಮಗಳನ್ನು ಅದರ ಎಲ್ಲಾ ಆಳ ಮತ್ತು ಅಗಲಗಳಲ್ಲಿ ಅನಾವರಣಗೊಳಿಸುವಂತಾ ಇಂತಾ ಬರವಣಿಗಳು ಭಾರತದ ಎಲ್ಲಾ ಭಾಷೆಗಳಲ್ಲಿ ಬರಬೇಕಾದ ಅಗತ್ಯವನ್ನು ದೇವನೂರರ ಈ ಕಿರುಪುಸ್ತಕವು ತೋರಿಸಿಕೊಟ್ಟಿದೆ. ಕರ್ನಾಟಕವು ದಕ್ಷಿಣ ಭಾರತದಲ್ಲಿ ಬಿಜೆಪಿಯು ಪ್ರವೇಶಿಸಲು ಹವಣಿಸುತ್ತಿರುವ ಹೆಬ್ಬಾಗಿಲು ಆಗಿರುವುದರಿಂದ ಮತ್ತು ಹೆಚ್ಚು ತೀವ್ರವಾದ ಹಿಂದೂತ್ವವು ರಾಜಕೀಯ ಮತ್ತು ಸಾರ್ವಜನಿಕ ಸಂಸ್ಕೃತಿಯನ್ನು ಮುನ್ನಡೆಸುತ್ತಿರುವ ಹೊತ್ತಿನಲ್ಲಿ, ಆರೆಸ್ಸೆಸ್-ಬಿಜೆಪಿ ನಾಗಾಲೋಟಕ್ಕೆ ಕಡಿವಾಣ ಹಾಕಬೇಕಾದ ಸಾಂಸ್ಕೃತಿಕ ಮತ್ತು ರಾಜಕೀಯ ಪ್ರತಿತಂತ್ರಗಳು ಬಹುಶಃ ಕರ್ನಾಟಕ ರಾಜ್ಯದಿಂದಲೇ ಹುಟ್ಟಿ ಬರಬೇಕಾದ ಅಗತ್ಯವಿದೆ.