ಚೌಕಟ್ಟು ಮೀರಿದ ನೆಲೆ- ಎಂ.ಎಸ್.ಆಶಾದೇವಿ

(“ಎದೆಗೆ ಬಿದ್ದ ಅಕ್ಷರ” ಕುರಿತು ಮಾರ್ಚ್ 2013ರ ಸಂವಾದ ಪತ್ರಿಕೆಯಲ್ಲಿ ಎಂ.ಎಸ್.ಆಶಾದೇವಿಯವರ ಬರಹ)

ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ದ ಬಗ್ಗೆ ಮಾತನಾಡುವುದೆಂದರೆ ನಮ್ಮಿಡೀ ಸಮುದಾಯವು ತನ್ನನ್ನು ಪುನ‌ರ್ ಸೃಷ್ಟಿಸಿಕೊಳ್ಳಲು ನಡೆಸುತ್ತಿರುವ ಪ್ರಕ್ರಿಯೆಯ ಆತ್ಮಸಂಕಟದ ಬಗ್ಗೆ ಮಾತನಾಡುವುದೆಂದೇ. ಈ ಆತ್ಮಸಂಕಟದ ಮತ್ತು ಹುಟ್ಟು- ಸಾವಿನ ತೀವ್ರತೆಯ ಪ್ರಕ್ರಿಯೆಯು ತನ್ನ ವರ್ಗವನ್ನು ಮೀರಿ ಇತರರನ್ನು ವರ್ಗ ಸಂಘರ್ಷದ ಅಥವಾ ಶೋಷಕ ಅಥವಾ ಶೋಷಿತರ ನಡುವಿನ ಹೋರಾಟ ಎನ್ನುವ ಚೌಕಟ್ಟನ್ನು ಮೀರಿದ ನೆಲೆಯಲ್ಲಿ ತಟ್ಟುತ್ತದೆ. ಈ ಮೀರುವಿಕೆಯನ್ನು ರೂಪಿಸಿರುವ ಅಂಶಗಳೇ ತುಂಬ ಮಹತ್ವದವು. ದೇವನೂರರ ಬರವಣಿಗೆಯನ್ನು ಅವರ ವ್ಯಕ್ತಿತ್ವವನ್ನೂ ಸಮಕಾಲೀನ ಕರ್ನಾಟಕದ ನಿರ್ಣಾಯಕ ದಿಕ್ಕೂಚಿಗಳಲ್ಲೊಂದಾಗಿಸಿರುವುದು ಈ ಅಂಶಗಳೇ.

ಯಾವ ವರ್ಗ ನಿರ್ದಿಷ್ಟ ಹೋರಾಟಗಳೂ ಆರಂಭಗಾಗುವ ಅರಿವಿನ ಹಿಂಸೆಯಿಂದಲೇ ಶುರುವಾದ ದೇವನೂರರ ಪ್ರಯತ್ನಗಳು ಈ ಹಿಂಸೆಯನ್ನು ಸಮುದಾಯದ ಸಂವೇದನೆಯ ಅಂಶವಾಗಿಸುವಲ್ಲಿ ನಿರಂತರವಾಗಿ ನಡೆಸಿದ ಪ್ರಯತ್ನ ಪ್ರಯೋಗಗಳು ಮತ್ತು ಅದರಿಂದ ಮೂಡಿಸಲು ಸಾಧ್ಯವಾದ ಚಲನೆಗಳು ಕನ್ನಡ ಜಗತ್ತಿನ ಮೇಲೆ ಬೀರಿರುವ ಪರಿಣಾಮ ದೃಗ್ಗೋಚರವೂ ಹೌದು, ಅಗೋಚರವೂ ಹೌದು. ಅನ್ಯಾಯವು ಅನ್ಯಾಯವಾಗಿ ಕಾಣದ, ಅವಮಾನವು ಅವಮಾನವಾಗಿ ಕಾಣದೆ ಬದುಕಿನ ದಾರಿಯೇ ಇದಿರಬೇಕು ಎಂದು ಕಣ್ಕಟ್ಟು ಮಾಡುವ ಸಮುದಾಯದಲ್ಲಿ ಅವಮಾನವನ್ನು ಅವಮಾನಕ್ಕೆ ಒಳಗಾಗುವವರು ಗುರುತಿಸುವುದೂ, ಅದಕ್ಕೆ ಕಾರಣರಾದವರಿಗೆ ಅದರ ಅರಿವು ಮೂಡಿಸುವುದೂ ಏಕಕಾಲಕ್ಕೆ ಸಾಧ್ಯವಾಗುವುದು ಆತ್ಯಂತಿಕ ಸವಾಲು.

ಅದು ಕಾಲ ದೇಶ ಬದ್ಧವಾದ, ಐತಿಹಾಸಿಕ ಮಹತ್ವದ ಸಾಮಾಜಿಕ, ರಾಜಕೀಯ ಪ್ರಶ್ನೆ ಮಾತ್ರವಲ್ಲ; ಅದು ‘ಮಾನವರ ಪ್ರಶ್ನೆ’ ಎನ್ನುವ ವಿಸ್ತಾರದಲ್ಲೂ, ಅನಿವಾರ್ಯತೆಯಲ್ಲೂ, ಮೂಲಭೂತತೆಯಲ್ಲೂ ದೇವನೂರ ನೋಡುತ್ತಾರೆ ಮತ್ತು ಅದನ್ನು ಸಂದೇಹಾತೀತವಾದ ವಿಶ್ವಾಸದಲ್ಲಿ ಮುಂದಿಡುತ್ತಾರೆ. ಮನುಷ್ಯನ ಅಂದಿನ ಅಗತ್ಯದ ತಲ್ಲಣದ ಗುಣ- ಸ್ವಭಾವಗಳಿರುವುದರಿಂದಲೇ ದೇವನೂರರ ಮಾತು ಮತ್ತು ಬರವಣಿಗೆಗೆ ಅಪಾರವಾದ ಶಕ್ತಿ ದಕ್ಕಿದೆ. ಆಯ್ಕೆಯ ಮತ್ತು ಆದ್ಯತೆಯ ಆಚೆಗೆ ದೇವನೂರರ ದೃಷ್ಟಿಕೋನಗಳನ್ನು ಚರ್ಚಿಸಬೇಕಿರುವುದು ಈ ಕಾರಣಕ್ಕಾಗಿ, ನಮ್ಮ ಕಾಲದ ಬಗ್ಗೆ, ನಮ್ಮ ನಮ್ಮ ಬದುಕಗಳ ಬಗ್ಗೆ ಯೋಚಿಸುವಾಗಲೂ ಈ ದೃಷ್ಟಿಕೋನವನ್ನು ಕಡೆಗಣಿಸಲಾಗಿಲ್ಲ ಎನ್ನುವ ಅಂಶವೇ ಇದರ ಮಹತ್ವವನ್ನು ಹೇಳುತ್ತದೆ ಎನಿಸುತ್ತದೆ ನನಗೆ. ಇವರ ಎಷ್ಟೋ ವಿಷಯಗಳ ಬಗ್ಗೆ ನಮಗೆ ಭಿನ್ನಾಭಿಪ್ರಾಯಗಳು, ಒಪ್ಪಲು ಸಾಧ್ಯವೇ ಆಗದ ನಿಲುವುಗಳು ಇದಾಗಲೂ ಇದನ್ನು ಪಕ್ಷಕ್ಕೆ ಸರಿಸಲಾಗುವುದಿಲ್ಲ.

ಪ್ರಾತಿನಿಧಿಕವಾಗಿ ‘ಕೊನೆಯದಾಗಿ ಗಾಯತ್ರಿ ಮಂತ್ರ’ ಮತ್ತು ‘ನಾನು ಗಾಂಧಿ ಚಿತ್ರ ನೋಡಿದೆ’ ಅಥವಾ ‘ಆಕಾಶಕ್ಕೆ ಎರಡು ಗೇಣು ಕಮ್ಮಿ’ ಲೇಖನಗಳನ್ನು ನೋಡೋಣ. ಅನಂತಮೂರ್ತಿಯವರಿಗೆ ಅವರ ತೀವ್ರ ಅನಾರೋಗ್ಯದ ಗಳಿಗೆಯಲ್ಲಿ ದೇವನೂರರಿಗೆ ಗಾಯತ್ರಿ ಮಂತ್ರವನ್ನು ಹೇಳಿದಂತೆ ಬೋಧೆಯಾದದ್ದಕ್ಕೆ ದೇವನೂರರ ಪ್ರತಿಕ್ರಿಯೆ: ‘ಸರ್, ಇದು ಮಾಮೂಲು ನಡಿಗೆ, ಅರೆಪ್ರಜ್ಞಾವಸ್ಥೆಯಲ್ಲಾದರೂ ನಾನು ನಿಮಗೆ ಗಾಯತ್ರಿ ಮಂತ್ರ  ಹೇಳಿಕೊಟ್ಟಂತೆ ಬೋಧೆಯಾಗಿದ್ದರೆ ಭಾರತದ ಮನಸ್ಸಿಗೆ ಚಲನೆ ಬರುತ್ತಿತ್ತಲ್ಲವೆ?’ – ಇದು ಒಂದು ‘ರೆ’ ಜಗತ್ತಿನ ಅಥವಾ ರಮ್ಯ – ಭಾವುಕ ಅನಿಸಿಕೆ ಮಾತ್ರವಲ್ಲ. ಅಂತಿಮವಾಗಿ ಇದು ಎಂದಾದರೂ ಘಟಿಸದೇ ಹೋದರೆ, ಯಾವ ಚಲನೆಯು ಈ ಎಲ್ಲ ಹೋರಾಟದ ಮೂಲ ಗುರಿಯಾಗಿದೆಯೋ ಅದು ಘಟಿಸದೇ ಹೋಗಬಹುದಾದದ್ದನ್ನೂ ಇದು ಸೂಚಿಸುತ್ತದೆ. ಅವರು ಮತ್ತು ನಾವು, ನಾನು ಮತ್ತು ಅವರು ಅಥವಾ ನಾವೆಲ್ಲರೂ ಅನ್ನುವ ಸಾಧ್ಯತೆಗಳಲ್ಲಿ ‘ನಾವೆಲ್ಲರೂ’ ಅನ್ನುವುದನ್ನು ದೇವನೂರು ಆರಿಸಿಕೊಳ್ಳುತ್ತಿರುವ ಹಾಗೆ ಕಾಣಿಸುತ್ತದೆ. “ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ’ ಎನ್ನುವ ಆಶಯ ಲೇಖನವೂ ಇದನ್ನೇ ಪ್ರತಿಪಾದಿಸುತ್ತಿರುವಂತೆ ಕಾಣಿಸುತ್ತದೆ.

ಈ ಅಂಶ ಗಾಂಧಿ ಚಿತ್ರ ಮತ್ತು ವ್ಯಕ್ತಿತ್ವವನ್ನು ಕುರಿತ ದೇವನೂರರ ಚಿಂತನೆಯಲ್ಲಿ ಮತ್ತಷ್ಟು ಸ್ಪಷ್ಟವಾಗುತ್ತದೆ. ಗಾಂಧಿ ಮಹಾತ್ಮನಾದದ್ದನ್ನು ಗುರುತಿಸುವುದೆಂದರೆ ಅವನು “ಮಾನವ”ನಾಗಿದ್ದನ್ನು ಗುರುತಿಸುವುದು ಎನ್ನುತ್ತಲೇ ಇಂಥ ಮಾನವನೂ ಅಸ್ಪೃಶ್ಯನಾಗಲು ಮುಂದಿನ ಜನ್ಮವನ್ನು ಆರಿಸಿಕೊಳ್ಳುವುದನ್ನು ಮೂಲವಾಗಿಟ್ಟುಕೊಂಡು ಅವರ ವ್ಯಕ್ತಿತ್ವದ ಮಿತಿಯನ್ನು ಮಾತ್ರವಲ್ಲ ಇಡೀ ಹೋರಾಟದ ಸವಾಲಿನ ಕಷ್ಟಗಳನ್ನೂ ಸೂಚಿಸುತ್ತಾರೆ ಅನಿಸುತ್ತದೆ. ಅಸ್ಪೃಶ್ಯತೆಯನ್ನು ಕಳೆದುಕೊಳ್ಳುವ ಮತ್ತು ಮೀರುವ ಎರಡೂ ಕ್ರಿಯೆಗಳನ್ನು ದೇವನೂರರು ಸಮಾನವಾಗಿ ನೋಡುತ್ತಾರೆ. ಎಂತಲೇ ನಮಗಿನ್ನೂ ಸ್ವಾತಂತ್ರ್ಯ ಬಂದಿಲ್ಲ ಎಂದು ಅವರಿಗೆ ಅನಿಸುವುದು. ‘ನಮ್ಮ ಇರುವಿಕೆಯನ್ನು ಸಹಿಸದಿರುವ ಸವರ್ಣೀಯ ಜನಸ್ತೋಮವ ಗೆಲ್ಲುತ್ತಾ, ಅದರ ಮನ ವಶ ಮಾಡಿಕೊಳ್ಳುತ್ತಾ ನಾವು ನಮ್ಮ ವಿಮೋಚನೆಯ ಕಡೆಗೆ ನಡೆಯಬೇಕಾಗಿದೆ’ ಎನ್ನುವ ವಾಸ್ತವದ ದರ್ಶನದಲ್ಲಿ ವ್ಯಗ್ರತೆಯನ್ನು ಮೀರಿದ ಸಂಯಮ ಮತ್ತು ಬದ್ಧತೆಗಳೆರಡೂ ಕಾಣುತ್ತವೆ.