ಗೋಡೆಗೆ ಹೊಡೆದ ಮೊಳೆಗಳು ಮತ್ತು ಎಡವಲು ಬೇಕಿರುವ ಪಾದಗಳು-ಟಿ.ಕೆ.ದಯಾನಂದ

[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕುರಿತು ಲೇಖಕರಾದ ಟಿ.ಕೆ.ದಯಾನಂದ ಅವರು ಬರೆದ ಈ ಲೇಖನವು, ಅಭಿನವ ಪ್ರಕಾಶನದಿಂದ 2013ರಲ್ಲಿ ಪ್ರಕಟವಾಗಿರುವ “ಯಾರ ಜಪ್ತಿಗೂ ಸಿಗದ ನವಿಲುಗಳು” ಪರಿಷ್ಕೃತ ಮುದ್ರಣದಲ್ಲಿ ದಾಖಲಾಗಿದೆ]

‘ಕಾಲಿಗೆ ತೊಡಕುವ ಹುಲ್ಲನ್ನು ತಿನ್ನಲೊಲ್ಲದ ಜಿಂಕೆ ಬಳಗವು ಹುಲಿಯ ಹುಡುಕಿ ಹೊರಟಿವೆ. ತಪ್ಪಿಸಿಕೊಂಡು ಓಡುವ ಜಿಂಕೆಯೇ ಬೇಕಂತೆ ವ್ಯಾಘ್ರಕ್ಕೆ, ಈ ಜಗದಲ್ಲಿ ಹಸಿವೊಂದೇ ಎಲ್ಲವನ್ನೂ ಮಾಡುತ್ತಿಲ್ಲ’ -ವೀರಣ್ಣ ಮಡಿವಾಳರ

ಗೆಳೆಯ ಮಡಿವಾಳರ ಇತ್ತೀಚೆಗಿನ ಕವಿತೆಯೊಂದರ ಮೇಲಿನ ಸಾಲು ಹೇಳಬೇಕೆನ್ನಿಸಿದ ಎಲ್ಲವನ್ನೂ ಒಂದು ನಿಗೂಢ ಪೆಟ್ಟಿಗೆಯೊಳಗಿಟ್ಟು ಅದನ್ನು ತೆರೆಯುವವರ ಗ್ರಾಹ್ಯತೆಗೆ ದಕ್ಕಿದ್ದಷ್ಟನ್ನೇ ಪಡೆಯುವಂತಹ ಅರ್ಥವಂತಿಕೆಯನ್ನು ಅವಿತಿಟ್ಟುಕೊಂಡಿವೆ. ಇವತ್ತಿನ ದಲಿತ ಸಮುದಾಯದ ಸಮಕಾಲೀನತೆಯು, ಜಿಂಕೆಗಳು ವ್ಯಾಘ್ರಗಳನ್ನು ಹುಡುಕಿ ಹೊರಟ ಆತ್ಮಹತ್ಯಾತ್ಮಕ ಚಲನೆಗಳ ಕಾಲುದಾರಿಯಲ್ಲಿ ತನ್ನದೇ ಸಾವನ್ನು ಹುಡುಕಿಕೊಳ್ಳುತ್ತಿರುವ ವಿಷಪೂರಿತ ಹೊತ್ತಲ್ಲಿ ದೇವನೂರ ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ದ ಹಾಳೆಗಳು ನಮ್ಮ ಬೆರಳುಗಳಲ್ಲಿ ಪುಟ ತಿರುವಿಸಿಕೊಳ್ಳುತ್ತಿವೆ. ಕಂಡ ಕಂಡ ಕದವನ್ನೇಕೆ ಬಡಿಯುತ್ತೀಯೆ?
ನಿನ್ನೊಳಗಿನ ಕದವ ತಟ್ಟು ತೆರೆದುಕೊಂಡ ಕದದಾಚೆಗೆ ನಿನ್ನದೇ ಹೆಣ ಬಿದ್ದಿರಬಹುದು, ಎನ್ನುವ ರೂಮಿಯ ಪದಗಳಂತೆ ಮಹಾದೇವರ ಈ ಪುಸ್ತಕ ನಮ್ಮೊಳಗೆ ಸಾಯುತ್ತಿರುವ, ಈಗಾಗಲೇ ಸತ್ತು ಬಿದ್ದಿರಬಹುದಾದ ಮನುಷ್ಯತ್ವದ ಹೆಣಗಳನ್ನು ಮೊದಲ ಬಾರಿಗೆ ಮುಟ್ಟಿ ಮುಟ್ಟಿ ನೋಡಲು ನಮ್ಮೊಳಗೆ ಆಸೆ ಹುಟ್ಟಿಸುವಂತಹ ಬರವಣಿಗೆ.

ಮೂರಡಿಯ ಹಗ್ಗಕ್ಕೆ ಕಟ್ಟಿಹಾಕಿಕೊಂಡು ಇದ್ದಲ್ಲಿ ತಿರುಗುತ್ತ ತನ್ನ ಹೆಜ್ಜೆಗಳ ಮೂಲಕ ತನ್ನ ಸುತ್ತಲೂ ಗೀರು ವೃತ್ತವನ್ನೆಳೆದುಕೊಂಡು ಅದೇ ಆವರ್ತದೊಳಗೆ ತನ್ನ ಜಗತ್ತು ಕಂಡುಕೊಳ್ಳುತ್ತಿರುವ ಈ ಹೊತ್ತಿನ ವರ್ತಮಾನಕ್ಕೆ ಈ ಬಗೆಯ ಹೆಜ್ಜೆಗಳನ್ನು ಬರೆಯುವ ಕಟ್ಟುಗಳನ್ನು ಬಿಚ್ಚುವ ಪ್ರಯತ್ನವಾಗಿಯೂ ‘ಎದೆಗೆ ಬಿದ್ದ ಅಕ್ಷರ’ವು ಯುವ ಮನಸ್ಸುಗಳಿಗೆ ಕಾಣುವುದು ಆಶ್ಚರ್ಯವಲ್ಲ. ಬದಲಾಗಿ ತಮ್ಮದೇ ಸವಕಲು ಚರಿತ್ರೆಯ ಗೆಬರು ಗಾಯಗಳನ್ನು ಪದೇ ಪದೇ ನೆಕ್ಕಿಕೊಂಡು ಸುಖಪಡುವುದರಲ್ಲಷ್ಟೇ ಮೊದಲು ಎಚ್ಚೆತ್ತ ಹಳೆಯ ತಲೆಮಾರು ತಲ್ಲೀನವಾಗಿರಬಹುದೆ ಎಂಬ ನಮ್ಮ ಭ್ರಮನಿರಸನದ ತಲೆಯನ್ನು ಮರುಪರೀಕ್ಷೆಗೆ ಒಳಪಡಿಸುವ ಯತ್ನವಾಗಿಯೂ “ಎದೆಗೆ ಬಿದ್ದ ಅಕ್ಷರ” ಕಂಡಿದೆ. ತನ್ನ ಬೋಡು ಬೆತ್ತಲು ಪಾದಕ್ಕೆ ತಿವಿದುಕೊಂಡ ಮುಳ್ಳನ್ನು ಕಿತ್ತೆಸೆದು ತನ್ನ ಪಾಡಿಗೆ ತಾನು ನಡೆಯಬಹುದಾಗಿದ್ದ ಜೀವವೊಂದು, ತೆಗೆದ ಮುಳ್ಳನ್ನು ನಮಗೂ ತೋರಿಸುತ್ತ ಇದೋ ಈ ಮುಳ್ಳಿಗೆ ತಿವಿದುಕೊಳ್ಳಲು ಬೆತ್ತಲು ಪಾದವೇ ಏಕೆ ಬೇಕಾಯ್ತು? ಯಾಕಾಗಿ ಅದು ಸಕಾರಣವಿಲ್ಲದೆ ಏಕೆ ಚೂಪುತುದಿ ಪಡೆದಿದೆ, ಬೆತ್ತಲು ಪಾದ ಮತ್ತು ತಿವಿಯುವ ಮುಳ್ಳು ಎರಡೂ ಏತಕ್ಕಾಗಿ ಒಂದೇ ರಸ್ತೆಯಲ್ಲಿ ಸಂಧಿಸಿಬಿಟ್ಟವು ಎಂದು ಕಾರ್ಯಕಾರಣ ಸಂಬಂಧಗಳನ್ನು ವಿವರಿಸುವ ಕೈಪಿಡಿಯಾಗಿಯೂ ‘ಎದೆಗೆ ಬಿದ್ದ ಅಕ್ಷರ’ ನನಗೆ ಕಾಣುತ್ತದೆ.

ಆದಿಮ ಪರಂಪರೆಯ ದಲಿತ ಜಗತ್ತು ಕೆಲವೇ ದಶಕಗಳ ಹಿಂದೆ ಕಟ್ಟೊಡೆದು ನಿಂತಿದ್ದು, ವರ್ಷಗಳ ಕಾಲ ಅಕ್ಷರಗಳ ಕೊಳ್ಳಿಯ ಬೆಳಕಿನಲ್ಲಿ ತನಗೆದುರು ನಿಂತ ಎಲ್ಲದರ ಕುತ್ತಿಗೆ ಪಟ್ಟಿ ಹಿಡಿದದ್ದು, ಸಂಘದ ಮನೆ ಕಟ್ಟಿಕೊಂಡು ಚಳವಳಿಯ ಬಸುರೊಳಗೆ ಬದಲಿಕೆಗಳನ್ನು ಹೆತ್ತಿದ್ದು… ಹೀಗೆ ಇಡೀ ಒಂದು ಪರಂಪರೆಯ ಚಲನೆಯು ಒಂದಷ್ಟೇ ವರ್ಷಗಳ ಹಿಂದಷ್ಟೆ ಮಿದುಳ ತುಂಬ ಹಾವಸೆ ಬೆಳೆದಂತೆ ತನ್ನ ಮೈಯನ್ನು ತಾನೇ ಬಿಗಿದುಕೊಂಡು ನಿಂತಲ್ಲಿಂದ ಹಿಂದಿಂದಕ್ಕೆ ನಡೆಯಲಾರಂಭಿಸಿದ ಉಲ್ಟಾಚಲನೆಯ ವಿವರಗಳು ಎಲ್ಲರಿಗೂ ತಿಳಿದವುಗಳೇ ಆಗಿದ್ದವು. ಈ ಎರಡು ಬಗೆಯ ಚಲನೆಗಳ ನಡುವೆ ಯಾರಿಗೂ ಸಿಗದೆ ತಪ್ಪಿಸಿಕೊಂಡು ಹೋಗಿದ್ದ ಕುರುಡು ನವಿಲಿನ ಆತ್ಮಶೋಧ ‘ಎದೆಗೆ ಬಿದ್ದ ಅಕ್ಷರ’ 323 ಬಿಡಿ ಬರಹಗಳ ಮೂಲಕ ದೇವನೂರರ ಆತ್ಮಚರಿತ್ರೆಯ ಪುಟ್ಟ ಭಾಗದಂತೆಯೂ ಮತ್ತು ಈ ದೇಶ ಮತ್ತು ನೆಲವು ಆಯಾಯ ಕಾಲಘಟ್ಟಗಳ ಹೊತ್ತಿನಲ್ಲಿ ತಮ್ಮಗಳ ಎದೆಯ ಮೇಲೆ ತುಳಿಸಿಕೊಂಡ ಜಾತಿ, ಕಮ್ಯುನಲಿಸಂ, ಅಸಮಾನತೆ, ಪ್ರತಿರೋಧ ಮತ್ತು ದಬ್ಬಾಳಿಕೆಗಳ ಬೂಟುಕಾಲಿನ ಗುರುತುಗಳ ಗೊಂಚಲಿನಂತೆಯೂ ರೂಪುಗೊಂಡಿದೆ.

ಈ ಹೊತ್ತಿನ ತಲೆಮಾರಿಗೆ ರೇಜಿಗೆ ಹುಟ್ಟಿಸಿಬಿಟ್ಟಿಸಿರುವ ಹಳತರ ಮೆಲುಕು, ಹೋರಾಟದ ನೆನಪು, ಒಂದುಗೂಡುವ ಹಂಬಲಗಳ ಪುನರಾವರ್ತನೆಯ ಅದದೇ ಮಾತುಗಳಿಂದ ದೂರವೇ ಉಳಿಯುವ ದೇವನೂರರ ಹೊಸಬಣ್ಣದ ಆಶ್ರಯಗಳು, ಹಂಬಲಗಳು ಸಮಕಾಲೀನ ಪೌರಕಾರ್ಮಿಕರ, ಮಲದ ಗುಂಡಿಗಿಳಿಯುವ ಜೀವಗಳ ದೊಡ್ಡತನಗಳನ್ನು ಗುರ್ತಿಸುವಷ್ಟು ಸಶಕ್ತ ಕಣ್ಣುಗಳು. ಇವು ಅಪರೂಪದ್ದರಲ್ಲಿ ಅಪರೂಪವಾದವು. ಈ ಕಣ್ಣುಗಳು ಇಥಿಯೋಪಿಯದ ಹಸಿವಿನ ಬಾಯನ್ನೂ, ಮೇಲುಹುಚ್ಚು ರೋಗವನ್ನು ಗುಣಪಡಿಸಲು ತನ್ನನ್ನು ತಾನು ರೋಗಿಯೆಂದುಕೊಂಡಿರುವ ವೈದ್ಯನನ್ನೂ ನೋಡುವ ಪರಿಯೇ ಹೊಸತು. ಕಾಂಟೆಸ್ಸಾ ಕಾರಿನೊಳಗೆ ಅವಿತು ಕುಳಿತಿರುವ ವಚನಗಳನ್ನು ಬೀದಿಗೆಳೆದು ನಿಲ್ಲಿಸಬೇಕೆನ್ನುವ ತುಡಿತದೊಳಗೆ ವರ್ತಮಾನದ ಗಾಯಗಳಿಗೆ ತಕ್ಕಷ್ಟು ಮುಲಾಮು ತೋರಿಸುವ ಗುಣವನ್ನೂ ದಕ್ಕಿಸಿಕೊಂಡಿರುವ ಇಲ್ಲಿನ ಬಹಳಷ್ಟು ಬಿಡಿ ಬರಹಗಳು ಕೆಲವು ಕಡೆ ಅಪ್ಪಟ ಹಸಿಕಥೆಗಳಂತೆಯೇ ಮಾಂಸ ರಕ್ತವನ್ನು ತುಂಬಿಕೊಂಡುಬಿಟ್ಟಿವೆಯಲ್ಲ ಅನಿಸಿಬಿಡುತ್ತವೆ. ಅದೇ ಸಮಯಕ್ಕೆ ಇವಕ್ಕೆ ಕಥೆಯ ಚೌಕಟ್ಟಿನ ಬಟ್ಟೆಯನ್ನು ಹೊದಿಸಿದ್ದರೆ ದೇವನೂರರ ಗಂಟೇನು ಹೋಗುತ್ತಿತ್ತು ಎಂದು ವಿಪರೀತ ಆಸೆಯೂ ಆಗುತ್ತದೆ. ಗರ್ಭದೊಳಗಿನ ಕೂಸು ತಾಯಿ ಮಾತಿಗೆ ಸ್ಪಂದಿಸುವಂತೆ ಆಗತಾನೇ ಹುಟ್ಟಿದ ಕಾವ್ಯದೊಳಗೂ ಜೀವವಾಡಬಹುದೇ? ಈ ಥರದ ಒಂದು ಸಾಲಿನ ಕಾವ್ಯವೂ ಇದೇ ಬಗೆಯ ಇನ್ನೊಂದೆರಡು ಸಾಲು ಇದು ಹರಿಯಬಾರದಿತ್ತೇ ಅನ್ನೋ ಆಸೆಯನ್ನು ಹುಟ್ಟಿಸುತ್ತದೆ.

ಪ್ರಸ್ತುತ ದಲಿತ ಸಾಹಿತ್ಯ, ಚಿಂತನೆ, ಬರಹ, ಚಳವಳಿ ಇತ್ಯಾದಿಯೆಲ್ಲವೂ ವ್ಯವಸ್ಥೆಯ ಸುತ್ತಿಗೆಯು ಸಿಮೆಂಟು ಗೋಡೆಗೆ ಹೊಡೆದ ಮೊಳೆಗಳಂತೆ ತಟಸ್ಥಗೊಳ್ಳುತ್ತಿರುವ ವೇಳೆಯಲ್ಲಿ ಎದುರಿಗೆ ಗುಡ್ಡೆ ಬಿದ್ದಿರುವ ಕಲ್ಲುಗಳನ್ನು ಎಡವುತ್ತ ಎಡವುತ್ತಲೇ ನೆಲದ ಭಾಷೆಯನ್ನು ಮತ್ತೊಮ್ಮೆ ಹೊಸದಾಗಿ ಕಲಿಯಲು ದೇವನೂರರು ನಮಗೆಲ್ಲರಿಗೂ ಬರೆದಿರಬಹುದಾದ ರಹಸ್ಯಪತ್ರದಂತೆಯೂ ‘ಎದೆಗೆ ಬಿದ್ದ ಅಕ್ಷರ’ ನನಗೆ ಕಂಡು ಬೆಚ್ಚಿಬಿದ್ದಿದ್ದೇನೆ. ಇತಿ ಮತ್ತು ಮಿತಿ ಎರಡರ ಬೇಲಿಯೊಳಗೂ ತುಯ್ಯುವ ಇಲ್ಲಿನ ಕೆಲವು ಭಾಗಗಳು ಕೆಲವೊಂದು ಕೊರತೆಯನ್ನೂ ಸಹ ಕಾಣದಂತೆ ಬಚ್ಚಿಟ್ಟುಕೊಂಡಿರುವುದುಂಟು. ಶ್ರಮಿಕ ದಲಿತರಿಗೆ ಮಾತ್ರ ಸಂಬಂಧಿಸಿದಂತೆ ಹಿಂದೆ ವಿಸಿಬಲಿಟಿಯನ್ನು ಉಳಿಸಿಕೊಂಡಿದ್ದ ವ್ಯವಸ್ಥೆಯ ದಬ್ಬಾಳಿಕೆಗಳ ಸ್ವರೂಪ ಮತ್ತು ಅವು ಇವತ್ತು ಪಡೆದುಕೊಂಡಿರುವ ಇನ್ವಿಸಿಬಲ್ ದೇಹ ಮತ್ತದರ ನಾಜೂಕು ಪಿತೂರಿಗಳನ್ನು ಮುಖಾಮುಖಿಗೊಳ್ಳಲು ಬೇಕಿರುವ ಆಧುನಿಕ ತಂತ್ರ-ಪರಿಕರಗಳ ಬಗ್ಗೆ “ಎದೆಗೆ ಬಿದ್ದ ಅಕ್ಷರ”ದೊಳಗೆ ಉಲ್ಲೇಖವಿಲ್ಲ. ಆವತ್ತಿನ ದಾಸನಪುರದ ಚಿಕ್ಕತಿಮ್ಮಯ್ಯನೆಂಬ ನನ್ನಣ್ಣ ದಲಿತನ ಜಾಗದಲ್ಲಿ ಸರ್ಕಾರಿ ಸಾಲ ಯೋಜನೆಗಳ ಫಲಾನುಭವಿಗಳಾಗಲು ಅಧಿಕಾರಿಯೊಬ್ಬನಿಗೆ ಮೈಹಾಸಬೇಕಿರುವ ದಲಿತ ಯುವತಿಯರಿದ್ದಾರೆ. ಮುಟ್ಟಾದ ಸೀರೆಲಂಗ ಒಗೆಯುತ್ತಿದ್ದ ಅಮಾಸನ ಜಾಗದಲ್ಲಿ ಅವನಂಥದೇ ಸಾವಿರ ಅಮಾಸರು ಮಲದ ಗುಂಡಿಗಳೊಳಗೆ ಇಳಿದು ಅದೇ ಮಲದ್ರವದೊಳಗೆ ತಮ್ಮ ದೇಹಗಳನ್ನೂ ಜೀವಸಮೇತ ಹೂತು ಹಾಕಿಕೊಳ್ಳುತ್ತಿದ್ದಾರೆ. ಒಂದು ಸಕ್ಕಿಂಗ್ ಮೆಷಿನ್‌ಗೆ 25 ಲಕ್ಷದಂತೆ ನೂರಾರು ಮೆಷಿನ್ ಖರೀದಿಸುವ ತಾಕತ್ತಿರುವ ಸರ್ಕಾರಕ್ಕೆ, ಗುತ್ತಿಗೆ ಕಾರ್ಮಿಕರ ಸಂಬಳ ಹೆಚ್ಚಿಸಲು ಆರ್ಥಿಕ ಸಮಸ್ಯೆ ಕಾಣಿಸಿಬಿಡುತ್ತದೆ. ಬೀದಿ ಹೋರಾಟಗಳು, ಚಳವಳಿಗಳ ಮೂಲಕ ಜಗತ್ತನ್ನು ನೋಡಿದ ನಮ್ಮದೇ ತಲೆಮಾರಿನ ಕಲಿತ ಹುಡುಗ ಹುಡುಗಿಯರು ತಮ್ಮ ಸಂವೇದನೆಗಳನ್ನು ಕೂಡಿಸಿ ಕಣ್ಣಿಗೆ ಕಂಡ ಅನ್ಯಾಯಗಳ ಬಗ್ಗೆ ಪತ್ರಿಕೆಗಳಿಗೊಂದು ಓದುಗರ ಪತ್ರವನ್ನೂ ಬರೆಯದಷ್ಟು ವಿಸ್ಮೃತಿಯನ್ನು ಹೊಕ್ಕಿರುವುದು ಗಾಬರಿ ಹುಟ್ಟಿಸುವ ವಿಷಯವೇ. ಹೋರಾಟದ ದಿನಗಳಲ್ಲಿ ರಸ್ತೆ ರಸ್ತೆಗಳಲ್ಲಿಯೇ ಕುಳಿತು ಇಂಕು ಮುಗಿಯಲಿದ್ದ ರೀಫಿಲ್ಲಿನಲ್ಲಿ ಬರೆದ ಜೀವದ ಹಾಡುಗಳು ಇವತ್ತು ಕೆಸೆಟ್ಟು ಸಾಹಿತ್ಯದೊಳಗೆ ಮಾತ್ರ ಕೈಕಟ್ಟಿ ಕುಳಿತಿವೆ. ಒಂದು ಸಾವಿಗೆ ಹತ್ತು ಹಾಡು ಹುಟ್ಟುತ್ತಿದ್ದ ದಿನಗಳು ಸವೆದು “ದಿನಾ ಸಾಯೋರಿಗೆ ಬರೆಯೋರ್ ಯಾರು?” ಅನ್ನುವಂತಹ ದಿನಗಳು ಹುಟ್ಟಿಬಿಟ್ಟಿವೆ. ಹಾಗಾಗಿ ಕಂಬಾಲಪಲ್ಲಿ, ನಾಗಮಾರಪಲ್ಲಿ, ಖೈರ್ಲಾಂಜಿಯ ಹತ್ಯಾಕಾಂಡಗಳಾದಾಗ, ಕಡಕೋಳದ ದಲಿತರಿಗೆ ಕೆರೆ ನೀರು ಮುಟ್ಟದಂತೆ ಬಹಿಷ್ಕಾರ ಹಾಕಿದಾಗ, ಮರ್ಯಾದಾ ಹತ್ಯೆಗಳು ತಿಂಗಳಿಗೊಂದು ನಡೆಯುತ್ತಿರುವಾಗ, ಒಂದೂವರೆ ವರ್ಷಕ್ಕೆ 28 ದಲಿತರು ಮಲದ ಗುಂಡಿಯೊಳಗೆ ಜೀವ ಬಿಟ್ಟಾಗ… ಒಂದೂ ಹಾಡು ತೊಟ್ಟಿಲು ಕಾಣುತ್ತಿಲ್ಲ. ಹಾಡುಗಳೂ ಅವಸಾನಗೊಂಡಿರುವ ಜೀವವಿಲ್ಲದ ಸಂವೇದನೆಯೂ ನಾಪತ್ತೆಯಾದ ಸಮಕಾಲೀನತೆ ಇವತ್ತಿನದು. ಇವುಗಳನ್ನು ತಡವರಿಸಿಕೊಂಡಾದರೂ ಸರಿಯೇ ತಿರುಗುತ್ತರ ಕೊಡಲು ಸ್ಟ್ರಾಟೆರ್ಜಿಗಳು ಮತ್ತು ವಿಧಾನಗಳ ಬೆಳಕು ಇವತ್ತಿನ ತಲೆಮಾರಿಗೆ ಬೇಕು. ಹಳೆಯದ್ದನ್ನೇ ಕನವರಿಸುವ ಶಿಬಿರಗಳು, ಸಮಾರಂಭಗಳು, ಸಂವಾದಗಳ ಯಾವ ಮಾತುಗಳಲ್ಲೂ ಬೆಳಕು ಕಾಣಿಸುತ್ತಿಲ್ಲವಾಗಿ ಹೊಸ ಆಲೋಚನೆಗಳು ಮತ್ತು ಇವತ್ತಿನ ಬಿಕ್ಕಟ್ಟುಗಳನ್ನು ಎದುರಿಸಲು ಬೇಕಿರುವ ಹೊಸತೇ ಆದ ತಂತ್ರೋಪಾಯಗಳನ್ನು ಕಂಡುಕೊಳ್ಳುವ ಆಸೆ ನಮ್ಮದು. ಇವತ್ತಿನ ವರ್ತಮಾನದ ಬಿಕ್ಕಟ್ಟುಗಳ ಬಗ್ಗೆ ಇದೇ ತರಹದ ನೂರಾರು ಸಾಮುದಾಯಿಕ ಬಿರುಕುಗಳು ದಿನಕ್ಕೊಂದರಂತೆ ಬಿರಿದುಕೊಳ್ಳುತ್ತಿರುವ ಇವುಗಳನ್ನು ಎದುರುಗೊಳ್ಳುವ ಮತ್ತು ನಮ್ಮನ್ನು ನಾವು ಕಟ್ಟಿಕೊಳ್ಳಲು ಬೇಕಿರುವ ಹೊಸ ಸ್ಟ್ರಾಟೆರ್ಜಿಗಳನ್ನು ದೇವನೂರರ ಪುಸ್ತಕ ಹೊಸ ತಲೆಮಾರಿಗೆ ಕಟ್ಟಿಕೊಟ್ಟಿದ್ದರೆ ಅದರ ಒಳಗೊಳ್ಳುವ ಹರಿವು ಸಂಪೂರ್ಣವಾಗುತ್ತಿತ್ತೇನೋ ಅನಿಸುತ್ತದೆ. ಇದನ್ನೊಂದು ಕೊರತೆಯಾಗಿ, ಕಾಣದೆ ಮುಂದೊಂದು ದಿನ ಈ ಖಾಲಿಯಿರುವ ಹಳ್ಳವನ್ನು ತುಂಬಲಿಕ್ಕೆಂದೇ ಮಹಾದೇವರು ಮತ್ತೊಂದು ಕೊಡಪಾನ ಹೊತ್ತುಕೊಂಡು ಬರುತ್ತಾರೆಂದು ನಿರೀಕ್ಷಿಸುವುದು ನಮ್ಮ ಆಶಯ.