ಕುಸುಮಬಾಲೆ ‘ಅವರವರಗ ತಿಳಿದ ರೀತೀಲೀ…’: ಡಾ.ರವಿಕುಮಾರ್ ನೀಹ

[ದೇವನೂರ ಮಹಾದೇವ ಅವರ ಕುಸುಮಬಾಲೆ ಕುರಿತು, ಡಾ.ರವಿಕುಮಾರ್ ನೀಹ ಅವರ ಬರಹ 25.9.2022ರ ಕನ್ನಡ ಒನ್ ನ್ಯೂಸ್ ನ ಅವರ ‘ಕಾಲಕಾರುಣ್ಯ’ ಅಂಕಣದಲ್ಲಿ ಪ್ರಕಟವಾಗಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ.
https://www.kannadaonenews.com/single-post/kusumabale-avaravaraga-tilida-ritili-dr-ravikumar-niha-avara-ankana/6736/main_menu?fbclid=IwAR1Sh7L8QYMPzhrqc8raiGS4mHKn2nA0TK5XwaVNQJBnCOHbzaWBsJRTIbI ]
                                                                           
ಕುಸುಮಿ ಈಗ ಹತ್ತತ್ತಿರ ನಲವತ್ತರ ತುಂಬು ಪ್ರಾಯದ ಬಾಲೆ. ಚರ್ಚೆಗಳು ಹದಿನಾರರ ಬಾಲೆಯಷ್ಟು ರೋಮ್ಯಾಂಟಿಕ್. ಕಥನಾತಂತ್ರದಿಂದ ಹಿಡಿದು, ಕುರಿಯಯ್ಯನ ನನ್ನಿಯಂಥ ಘಟನೆಗಳವರೆಗೆ ಚರ್ಚೆ ನಡೆಯುತ್ತಲೇ ಇವೆ. ಕುಸುಮಬಾಲೆ ಜಾನಪದ ಕಾವ್ಯವೇ? ಕಾವ್ಯದ ರೀತಿಯ ಕಥನವೇ? ಇವೆರಡನ್ನು ಒಳಗೊಂಡದ್ದೇ ಅಥವಾ ಆಧುನಿಕ ಕಥನಾತಂತ್ರವೇ? ಹೀಗೆ ಹಲವು ಪ್ರಶ್ನೆಗಳು ಈ ಕಿರು ಕಾದಂಬರಿಯ ಮೇಲೆ ಹುಟ್ಟಿವೆ. ಇಂಥ ಕಥನಾತಂತ್ರ ರಚನೆಯ ಹಿಂದೆ ಇರುವ ಸಾಂಸ್ಕೃತಿಕ ಒತ್ತಡಗಳು ಯಾವ ಸ್ವರೂಪದವು?
ನಾನು ಎಂ.ಎ, ಓದುತ್ತಿದ್ದಾಗ ಕುಸುಮಬಾಲೆ ಪಠ್ಯವಾಗಿತ್ತು. ಅದನ್ನು ಆ ಭಾಗದವರೊಬ್ಬರು ಪಾಠ ಮಾಡುತ್ತಿದ್ದರು. ಅವರಿಗೆ ಕಷ್ಟವಾಗುವ ಭಾಗಗಳನ್ನು ಎಗುರಿಸಿ, ಅಲ್ಲಲ್ಲಿ ಓದಿ ಅಂತೂ ಮುಗೀತು ಅನ್ನಿಸಿದ್ದರು. ನಾವು ಗೆಳೆಯರೆಲ್ಲ ನಮಗಿಟ್ಟ ಎಲ್ಲ ಕಾದಂಬರಿಗಳನ್ನು ಓದಿ ಮುಗಿಸಿದ್ದೆವು. ಹಾಗೇಯೇ ಕುಸುಮಬಾಲೆಯನ್ನು ಒಂದೇ ಉಸಿರಿಗೆ ಓದಿದ್ದೆವು. ಪ್ರೊ.ಕೀ.ರಂ.ನಾಗರಾಜ್ ಅವರು ನಮಗೆ ಕಾವ್ಯವೀಮಾಂಸೆ, ವಿಮರ್ಶೆ ಮತ್ತು ಭಾಷಾವಿಜ್ಞಾನವನ್ನು ಬೋಧಿಸುತ್ತಿದ್ದರು. ಅವರು ಪಾಠ ಮಾಡುತ್ತ ‘ಕುಸುಮಬಾಲೆ’ ನನಗೆ ಅರ್ಥನೇ ಆಗಿಲ್ಲ’ ಎಂದಿದ್ದರು. ಆಗ ಅರ್ಥ ಅಂದರೆ ಏನು ಎಂದು ಗೊತ್ತಿರದ ನಮಗೆ ಕುಸುಮಬಾಲೆ ಪರೀಕ್ಷಾದೃಷ್ಟಿಯಿಂದ  ಅರ್ಥವಾಗಿಬಿಟ್ಟಿತು. ಆಗ ಕೀರಂಗಿಂತಲೂ ನಮಗೆ ಕುಸುಮಬಾಲೆ ಅರ್ಥವಾಗಿದೆ ಎಂದು ಬೀಗಿದ್ದು ಇನ್ನು ನೆನಪಿದೆ. ಎಂ.ಎ., ಮುಗಿದ ಮೇಲೆ ಕುಸುಮಬಾಲೆಯನ್ನು ಓದಲು ಆರಂಭಿಸಿದೆ. ಯಾಕೋ ಕಷ್ಟ ಆಗ್ತಿದೆ ಅನ್ನಿಸ್ತು. ಅದರ ಜತೆಗೆ ಅದನ್ನು ಎಂ.ಎ., ವಿದ್ಯಾರ್ಥಿಗಳಿಗೆ ಪಠ್ಯವಾಗಿ ಬೋಧಿಸಬೇಕಾಗಿತ್ತು. ಆಗ ಕೆಲವು ಪ್ರಯೋಗಗಳನ್ನು ಮಾಡ್ತಾ ಹೋದೆ.
ಗೆಳೆಯರೊಬ್ಬರು ‘ಕುಸುಮಬಾಲೆ ನಮಗೆ ಅರ್ಥ ಆಗಲ್ಲ. ಯಾರಾದರೂ ಹಳ್ಳಿಯ ಹಿರಿಯರ ಮುಂದೆ ಓದಿ ನೋಡು’ ಅಂದಿದ್ದರು. ಅದನ್ನು ನನ್ನ ಕೇರಿಯ ಪುಟ್ಟಜ್ಜಿ ಮುಂದೆ ಓದಿದೆ. ಅಥವಾ ಓದುವ ಪ್ರಯತ್ನ ಮಾಡಿದೆ ಅನುಸ್ತದೆ. ಅದನ್ನು ಕೇಳಿದ ಪುಟ್ಟಜ್ಜಿ ‘ಮಗಾ ಇದೇನು ನಮ್ಮ ಕತೆ ಇದ್ದಂಗೆ ಅದೇ. ಬಾಳ ಕಷ್ಟದ ಕತೆ ಕಣಪ್ಪ’ ಅಂದಿದ್ದರು. ನನಗೆ ಆಶ್ಚರ್ಯವಾಯಿತು. ಅಕ್ಷರಬಾರದ ಈ ಅಜ್ಜಿಗೆ ಅರ್ಥವಾಗ್ತಿದೆ ನನಗೇಕೆ ಅರ್ಥ ಆಗ್ತಿಲ್ಲ ಎನ್ನುವ ಪ್ರಶ್ನೆಯ ಮೂಲಕ ಮತ್ತೊಮ್ಮೆ ಪಟ್ಟಿಡಿದು ಓದಲು ಆರಂಭಿಸಿದೆ. ಸುಮಾರು ಐದು ವರ್ಷ ಕುಸುಮಬಾಲೆಯನ್ನು ಬೋಧಿಸಿದ್ದೇನೆ ಪ್ರತಿವರ್ಷವೂ ಇನ್ನಷ್ಟು ಅರ್ಥವಾಗಬೇಕು, ಇನ್ನಷ್ಟು ಚನ್ನಾಗಿ ಮಾಡಬಹುದಿತ್ತು ಎಂಬ ಅತೃಪ್ತಿಯಲ್ಲಿಯೇ ವರ್ಷ ಮುಗಿಯುತ್ತಿತ್ತು. ಇದು ಪ್ರತಿಬಾರಿ ಕುಸುಮಬಾಲೆ ಓದಿದಾಗ ಮೂಡುವ ಭಾವ. ಆದರೆ ಅರ್ಥವಾಗಿದೆಯೇ ಎಂಬುದಕ್ಕೆ ಈಗಲೂ ನನ್ನಲ್ಲಿ ಉತ್ತರವಿಲ್ಲ. ಆದರೆ ವಿಶಿಷ್ಟ ಅನುಭವ ಇದರಿಂದ ದೊರಕಿದೆ ಎಂದಷ್ಟೇ ಹೇಳಬಹುದು.
ತಲೆಮಾರಿನ ಅರಿವು, ವರ್ತಮಾನದ ತುರ್ತು ಭವಿಷ್ಯತ್‍ನ ನಿರೀಕ್ಷೆ ಇವುಗಳೆಲ್ಲದರ ಮಿಳಿತ ಕುಸುಮಬಾಲೆ. ಹಾಗಾಗಿ ಇದಕ್ಕೆ ಹಲವು ತೆರೆದ ಬಾಗಿಲುಗಳಿವೆ. ಒಂದರಿಂದ ಒಳಪ್ರವೇಶಿಸಿದರೆ ಮತ್ತೆ ಆ ಬಾಗಿಲಿನಿಂದಲೇ ಹಿಂತಿರುಗುತ್ತೇವೆಂಬ ಖಚಿತವಿಲ್ಲ. ಒಳಹೋದರೆ ಹೊರಬರಲು ದಾರಿಕಾಣದೆ ಚಕ್ರವ್ಯೂಹವಾಗಬಹುದು. ದೇಹವನ್ನೆಲ್ಲಾ ಸುತ್ತಿಕೊಳ್ಳುವ ಅನಕೊಂಡ ಆಗಬಹುದು. ಇಷ್ಟಾದರೂ ಇದರ ಅನುಭವ ಮತ್ತೆ ಮತ್ತೆ ಕನವರಿಸುವ, ಕಾಡುವ ರೀತಿಯದು. ಇಡೀ ಕಥನಾತಂತ್ರವೇ ಹೇಳು ಕೇಳುವ ಸಂಪ್ರದಾಯದ್ದು. ಇಲ್ಲಿ ಎದುರಿಗೆ ಜಾನಪದ ಕಥನವನ್ನು ಕೇಳುವ ಕೇಳುಗರಿದ್ದಾರೆ. ಅಂದರೆ ಇಡೀ ಕಥನ ಕೇಳುಗರನ್ನು ಕೇಂದ್ರದಲ್ಲಿರಿಸಿಕೊಂಡಿದೆ; ಓದುಗರನ್ನಲ್ಲ. ಇದು ಕಾದಂಬರಿಯ ಆರಂಭದಲ್ಲೇ ತಿಳಿಯುತ್ತದೆ. ಕೇಳುಗರನ್ನು ಕಥನದ ಒಳಕ್ಕೆ ಇಳಿಸುವ ಜಾನಪದ ತಂತ್ರ ಸ್ವಯಂ ನಿರ್ಮಿತವಾಗಿದೆ.
ಕುಸುಮಬಾಲೆಯ ಅರಿವು :
ಇಡೀ ಕಾದಂಬರಿ ಅರಿವಿನ ಮೇಲೆ ನಿಂತಿದೆ. ಅರಿವು ಬೆಳಕು ಹೌದು, ಎಚ್ಚರ ಪ್ರಜ್ಞೆಯೂ ಹೌದು. ಅದು ಈ ಕಾದಂಬರಿಯಲ್ಲಿ ಪ್ರತಿ ಬಳಕೆಯಲ್ಲೂ ಹೊಸ ಅರ್ಥಗಳನ್ನು ಹುಟ್ಟಿಸುತ್ತದೆ. ದೇವನೂರರು ಇಡೀ ತಮ್ಮ ಬರಹದ ಮೂಲಕ ಹುಡುಕುವ ಮೌಲ್ಯ ಇದೇ ಆಗಿದೆ. ಪ್ರತಿ ಬರಹದಲ್ಲೂ ಅವರನ್ನು ತೀವ್ರವಾಗಿ ಕಾಡುವುದು ಈ ಅರಿವೇ. ಅರಿವಿನ ಹುಡುಕಾಟ ನಡೆಸುವ ಕುಸುಮಬಾಲೆಯಲ್ಲಿ ಅರಿವು ಅನೇಕ ಬಾರಿ ಬಂದಿದೆ.
    ಕುಸುಮ ಮತ್ತು ಹೊಲಾರ ಚೆನ್ನರ ನಡುವಿನ ಗುಪ್ತ ಸಂಬಂಧವು ಕುಸುಮಳಿಗಾದ ಮಗುವಿನಿಂದಾಗಿ ಬಯಲಾಗಿ ಅರಿವಾಗದೋಪಾದಿಯಲ್ಲಿ ಚೆನ್ನನ ಕೊಲೆಯಾಗುವುದು- ಆರಂಭದ ..ಹೀಗೆ ಭಾಗದಲ್ಲಿ.
    ಚೆನ್ನನ ಕೊಲೆ ಅರಿಯದ ಬಳಗವು ಕಾಯುವುದು ಚೆನ್ನನ ಬರುವಿಗಾಗಿ- ಆರಂಭದ ..ಹೀಗೆ ಭಾಗದಲ್ಲಿ.
    ಪರ್ಸಾದನು ಏಳ್ಜನ ಗಂಡುಮಕ್ಕಳ ಮ್ಯಾಲ ಒಬ್ಬಳು ಮಗಳಾಗಿ ಕುಸುಮಾಳು ಹುಟ್ಟೀ ಇನ್ನು ಮಕ್ಕಮರಿ ಸಾಕು ಎಂದಿರುವಾಗ ಅರಿವುಗ ಬಾರದೆ ಹುಟ್ಟಿಬುಟ್ಟಿದ್ದನು -ಪು.5
    ಆ ಕಾಲ ನನ್ಮಗನು ಅವನ ಟೇಮುಗೆ ಅವನು ಕರಾರುವಾಕ್ಕಾಗಿ ಅರುವಾಗದೋಪಾದಿಯಲಿ ತನ್ನ ಗೆರ್ವ ಎಳೆದು ಡೂಟಿ ಮುಗಿಸಿದನು -ಪು. 27
    ಸಾಕಷ್ಟು ಸ್ಯಾಲಭಾಗ್ಯ ಪಡ್ದು ನೇಮನಿಷ್ಠಗ ಹೆಸುರಾದ ಮ್ಯಾಗಲಕೇರಿ ಯಮ್ಕಗಳ ಇದು ಯಾತರ ಕೆಲ್ಸ ಅಂಬುದ ಅರುವಾಗಿಸದೆ ದಿಕ್ಕೆಡಿಸಿದ್ದನು- ಪು.38
    ಆಗ ಆ ಮೂಳಾಲೂ ಜೀವಾವು ಚಂಚಾರ ಕೈಗೊಂಡೂ ಮುಂದೇನು ತಿಂಬುವುದೋ ಮುಂದೇನೂ ಅರಿವಾದಿರಲಾಗ ಆ ಸರಿಲವು ತನ್ನ ಅರಿವ ಕಳ್ದುಕೊಂಡೂ. ಕಳ್ದುಕೊಂಡ ಆ ಸರೀಲವು ಒಕ್ಕಡ ವಾಲ್ಕಂಡು ಬಿತ್ತು. ಪು. 48
    ಭಗವತಿಯ ಮಾಟವಾದ ಬೆರಳಾಡಿ ತಂದೆಯ ಹರಿದ ಬಿಳಿಬಟ್ಟೆಯ ಹರಕು ಅರಿವಾಗದಂತಿರಲು ಬೆಳ್ಳಗೆ ತತ್ತರಿಸೋ ನಗೂಲಿ ಆ ಅರಳೀಮರದ ಕೆಳೂಗ ಅವರೂ ನಿಂತಿದ್ದರು.- ಪು. 49
    ಕೇಳಿ. ಅವರ ಒಳ್ಗ ಆಗುವುದರ ಅರ್ತಮಾನದ ಅರಿವು ಅವ್ರಿಗಿಯ ಅರಿವಾಗ್ತ ಇರಲ್ಲ. -ಪು. 62
ಈ ಮೇಲಿನ ‘ಅರಿವು’ ಪದಗಳು ಮತ್ತೆ ಮತ್ತೆ ಬಳಕೆಯಾಗುವುದು ಕೇವಲ ಚಾತುರ್ಯಕ್ಕಲ್ಲ. ಯಾವುದು ಈ ಸಮಾಜದಿಂದ ಕಾಣೆಯಾಗಿದೆ ಅದರ ಹುಡುಕಾಟ ಮತ್ತು ಅರಿವಿನ ಮೌಲ್ಯವನ್ನು ತಿಳಿಯಪಡಿಸುವುದು ಇವರ ಒಟ್ಟಾರೆ ಬರಹದ ಮೂಲ ಆಶಯ. ಅದನ್ನೆ ಇಲ್ಲಿ ವಿಸ್ತೃತವಾಗಿ ಬಳಸಿದ್ದಾರೆ. ‘ಅರಿವು’ ಇದರ ಮೂಲಕ ಕಾದಂಬರಿಯನ್ನು ನೋಡಿದರೆ ಮೂರು ರೀತಿಯಲ್ಲಿ ಮೂರು ತಲೆಮಾರಿನ ಬದುಕಿನ ಆಲೋಚನಾ ಕ್ರಮವನ್ನು ಕುಸುಮಬಾಲೆ ಒಳಗಿಟ್ಟುಕೊಂಡಿದೆ. ಅರಿವಿನ ಕ್ರಿಯೆಯ ಮೂಲಕ ಕಾದಂಬರಿಕಾರರು ತಲುಪಿಸುವ ಎಚ್ಚರ ವಿಶಿಷ್ಟದ್ದು. ಅದು ಈ ರೀತಿಯದ್ದು.
    ಅರಿವಿನ ಪೂರ್ವ ಸ್ಥಿತಿ
    ಅರಿವಿನ ಸ್ಥಿತಿ
    ಅರಿವಿನ ನಂತರದ ಸ್ಥಿತಿ
‘ಅರಿವಿನ ಪೂರ್ವ ಸ್ಥಿತಿ’ಯಲ್ಲಿ ಎಲ್ಲವು ಗೊತ್ತಿಲ್ಲದಂತೆ ವರ್ತಿಸುವ ಅಥವಾ ಅವ್ಯಾವು ಮುಖ್ಯವಲ್ಲದಂತೆ ಇರುವ ಉದಾರಗುಣವನ್ನು ಪಡೆದುಕೊಂಡಿವೆ. ಜೋತಮ್ಮರ ಪ್ರಸಂಗ ಇದರ ಅತ್ಯುತ್ತಮ ಪ್ರತಿನಿಧಿ. ಅಂದರೆ ನಾಗರಿಕತೆ ಎಂಬ ಮುಖೇಡಿತನದ ಯಾವುದೇ ಕಟ್ಟುಪಾಡುಗಳಿಲ್ಲದೇ ಬದುಕನ್ನು ಸಹಜವೆಂಬಂತೆ ಸ್ವೀಕರಿಸುವ ಮನಸ್ಸಿನ ಅಭಿವ್ಯಕ್ತಿ ಎನ್ನಬಹುದು. ಕುಸುಮ-ಚೆನ್ನರಿಗೆ ಹುಟ್ಟಿದ ಕೂಸನ್ನು ಒಪ್ಪಿಕೊಳ್ಳುವ ಜೋತಮ್ಮದಿರ ಉದಾರವಾದೀ ನಿಲುವು. ಇಲ್ಲಿ ಮುಖ್ಯವಾದ ಚರ್ಚೆಗಳನ್ನು ಕಾದಂಬರಿ ಹುಟ್ಟಿಸುತ್ತದೆ. ಯಾಕೆಂದರೆ ಕುಸುಮ-ಚೆನ್ನರ ಸಂಬಂಧವನ್ನು ಕುರಿತು ಮಾತನಾಡುವುದು ಇದೇ ಜೋತಮ್ಮಂದಿರೇ. ಹಾಗೇಯೇ ಮಾನ್ಯತೆಯನ್ನು ನೀಡುವವರೂ ಅವರೇ ಆಗಿದ್ದಾರೆ. ಆರಂಭದಲ್ಲಿ ದೊಡ್ಡೋರ ಹಟ್ಟೀ ಜೋತ್ಯಮ್ಮ ಕುಸುಮಿ ಚೆನ್ನರ ಸಂಬಂಧ ಮುಖ್ಯವಲ್ಲವೆಂದು ಭಾವಿಸಿದಾಗ ತೊರಾರ ಹಟ್ಟಿ ಜೋತಮ್ಮ ಕುಸುಮ-ಚೆನ್ನರ ಸಂಬಂಧವನ್ನು ಕುರಿತು ಮುಖ್ಯವಾದ ವಿಚಾರವೆಂಬಂತೆ ಮಂಡಿಸುತ್ತಾಳೆ. ಆಗ ಹಾರೊರ ಮನೆಯ ಜೋತಮ್ಮ “ಐ ಎಲ್ರೂ ಮಾಡೋ ಯಥಾರ್ಥನೆ ಹೇಳ್ತಳ. ಏನ್ ವಿಚಾರ್ವ ಅದು?” ಎಂಬಷ್ಟು ಮಾನವೀಯವೂ ಉದಾರವಾಗಿರುವುದನ್ನು ಗಮನಿಸಬಹುದು.
ಹಾಗೆಯೇ ಅಕ್ಕಮಾದೇವಮ್ಮಳ ಬದುಕು ಮತ್ತು ಆಕೆಯ ದಿಟ್ಟತನ ಅರಿವಿನ ಪೂರ್ವಸ್ಥಿತಿಯೇ ಆಗಿದೆ. ಯಾಕೆಂದರೆ ಆಕೆಯನ್ನು ಭಾವನವರಾದ ಬಸಪ್ಪಸೋಮಿಯರ ನಡುವೆ ನಡೆಯುವ ಹಕ್ಕಿನ ಸಂದರ್ಭದಲ್ಲಿ ಅವಳ ಮೇಲೆ ಮಾಡುವ ಆರೋಪವನ್ನು ಅಕ್ಕಮಾದೇವಮ್ಮ ಉಗ್ರವಾಗಿ ನಿರಾಕರಿಸುತ್ತಾಳೆ. ಮತ್ತು ಅದನ್ನು ಸಾಬೀತು ಪಡಿಸುವಂತೆ ಆಗ್ರಹಿಸುತ್ತಾಳೆ. ಆ ಮೂಲಕ ಸಂಪ್ರದಾಯನಿಷ್ಟ ಮೌಲ್ಯಗಳಿಗೆ ಪ್ರತಿರೋಧ ಒಡ್ಡುತ್ತಾಳೆ. ಅಂದರೆ ಎಲ್ಲ ಅರಿವಿದ್ದು ಇಲ್ಲದಂತೆ ವರ್ತಿಸುವ ಅಥವಾ ಅದು ಮುಖ್ಯವಲ್ಲವೆಂಬ ಮನೋಭಾವವಿದೆ. ಇವೆಲ್ಲದವುಕ್ಕಿಂತ ಬದುಕು ಮುಖ್ಯವಾಗಿದೆ. ತನ್ನ ಕೂಸೂ ರಾಜಸೇಕರ ಮೂರ್ತೂ ಬದುಕನ್ನು ಹಸನಾಗಿಸುವುದು ಆಕೆಯ ಮುಂದಿರುವುದು. ಹೀಗಾಗಿ ಆಕೆ ಜ್ಯೋತಮ್ಮರ ಜೀವಂತ ರೂಪವಾಗಿ ಕಾಣುತ್ತಾಳೆ. ಮತ್ತೆ ಕಷ್ಟದಲ್ಲಿ ನೊಂದಿದ್ದ ಅಕ್ಕಮಹಾದೇವಮ್ಮ ಸಾವಿನಲ್ಲಿ ನೆಗ್ತ ಸಾಯುವುದು. ಇಂಥ ಕಡೆ ಕುಸುಮಬಾಲೆ ಮಾನವೀಯ ನೆಲೆಗಳನ್ನು ಹುಡುಕುತ್ತದೆ. ಅರಿವಿನ ಪೂರ್ವ ಸ್ಥಿತಿ ಹೇಗೆ ಯಾವುದೇ ಕಟ್ಟುಪಾಡಿಲ್ಲದೆ  ಸಹಜವಾಗಿ ಸ್ವೀಕರಿಸುತ್ತಿತ್ತು ಎಂಬುದರ ಅಂಶವನ್ನು ಈ ನೆಲೆಯಲ್ಲಿ ನೋಡಬಹುದು.
‘ಅರಿವಿನ ಸ್ಥಿತಿ’ ಯಲ್ಲಿ ಬಿಡುಗಡೆಗೆ ಹಂಬಲಿಸುವ, ತನ್ನ ಮನೋ ಇಚ್ಚೆಗಳನ್ನು ಪೂರೈಸಿಕೊಳ್ಳುವ ತವಕವನ್ನು ಕಾಣಬಹುದು. ಹಾಗಾಗಿ ಅಕ್ಕಮಹಾದೇವಮ್ಮ ತನ್ನ ತಾಯ್ತನಕ್ಕಾಗಿ ಮತ್ತು ಆಸ್ತಿಗಾಗಿ ಜೀತಗಾರನನ್ನು ಕೂಡುವುದು ತಪ್ಪೇನಿಸುವುದಿಲ್ಲ. ಅದು ಅಲ್ಲಿಗೆ ಮುಗಿಯುವುದಿಲ್ಲ. ಸಿಕ್ಕ ಮಗುವನ್ನು ತನ್ನದೆಂಬಂತೆ ಭಾವಿಸಿ ಬೆಳಸುವುದು, ಮಲ್ಲಾಜಮ್ಮ ಯಾಡನಿಗ ‘ಸಾಕ್ಷಾತ್ ಅಕ್ಕಮಾದೇವಮ್ಮನ ರೂಪ್ವ ಹೊತ್ಕಂಡು ಹುಟ್ಟೀ ಈ ಹಟ್ಟೀ ಸೇರ್ದವಳೂ’ ಆಗಿ ಕಾಣುವುದು. ಅನಾಥ ಅಮಾಸನನ್ನು ಕುರಿಯಯ್ಯ ಯಾವುದೇ ಪ್ರತಿಪಲಾಕ್ಷೆಯಿಲ್ಲದೆ ಸಾಕುವುದು.. ಇತ್ಯಾದಿಗಳು ಇದರ ಮುಂದುವರಿಕೆಯಾಗಿಯೇ ಬಂದಿವೆ. ಈ ಅರಿವು ತಳ ಸಮುದಾಯಗಳಲ್ಲಿ ಪಾಸಿಟಿವ್ ಆದ ಮನೋಧರ್ಮಗಳನ್ನು ಹುಟ್ಟಿಸುತ್ತವೆ, ಅಥವಾ ದಮನಕ್ಕೆ ದೌರ್ಜನ್ಯಕ್ಕೆ ಒಳಗಾದವರ ಬದುಕಿನಲ್ಲಿ ಜೀವನಪ್ರೇಮದ ಸುಳಿಗಳು ಗೋಚರಿಸುವುದನ್ನು ನೋಡಬಹುದು. ತನ್ನನ್ನು ಕಂಡುಕೊಳ್ಳುವ ಕ್ರಮದಂತೆ ಇದು ಕಾಣುತ್ತದೆ. ಹೀಗಾಗಿ ಇಂಥ ಸಂದರ್ಭದಲ್ಲಿ ಅರಿವು ಗುಪ್ತವಾಗಿಯೇ ಪ್ರವಹಿಸುತ್ತಿರುತ್ತದೆ. ಅದರ ಪ್ರಕಟ ಕೆಲವೊಮ್ಮೆ ಆಗುವುದೇ ಇಲ್ಲ. ಆದರೆ ತನ್ನ ಇರುವಿಕೆಯನ್ನು ಜೀವಂತವಾಗಿಸಿಕೊಂಡಿರುತ್ತದೆ. ಮುಂಗಾಣ್ಕೆಯಾಗಿಯೂ ಹೊಮ್ಮಬಹುದು. ಅದು ‘I want to be in my house’ ಆಗಿರಬಹುದು, ಮರ್ದಲ್ಲಾಡುವ ಕೂಸನ್ನು ಕಾಣುವ ಪರ್ಸಾದನ ನೋಟಕ್ರಮಗಳಲ್ಲೆಲ್ಲಾ ಇಂಥವು ಜರುಗುತ್ತಿರುತ್ತವೆ. ಕೆಲವೊಮ್ಮೆ ಬಿಡುಗಡೆಯೂ ಆಗಿ ಪರಿವರ್ತನೆಯಾಗಬಹುದು. ಆದರೆ ಅದು ಪಲಾಯನವಲ್ಲ.  ಚೆನ್ನ ಹಟ್ಟಿ ಕೇರಿಯ ಜೀವನಕ್ರಮಗಳನ್ನು ಟೀಕಿಸುವುದರಲ್ಲೂ, ಅವನೇ ಸ್ವತಃ ತನ್ನ ಗುರು ಮಧ್ವಚಾರ್ಯರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲನಾಗುವುದು, ಕೊನೆಗೆ ಇಡೀ ಹಟ್ಟಿಯಿಂದ ಬಿಡುಗಡೆ ಬಯಸಿ ಯಶಸ್ವಿಯಾಗುವುದು ಇವೆಲ್ಲ ಅರಿವಿನ ಮೂಲಕವೇ ನಡೆಯುತ್ತಿರುತ್ತದೆ.
‘ಅರಿವಿನ ನಂತರದ ಸ್ಥಿತಿ’ಯಲ್ಲಿ ಕಾದಂಬರಿ ಎರಡು ರೀತಿಯ ಬದುಕಿನ ಕ್ರಮಗಳನ್ನು ಬಿಚ್ಚಿಡುತ್ತದೆ. ಅರಿವು ಬಂದರೆ ಮಾನವರ ಬಿಡುಗಡೆ ಎಂದೇ ಭಾವಿಸಲಾಗುತ್ತದೆ. ಆದರೆ ಆ ಅರಿವು ಕೆಲವೊಮ್ಮೆ ಸಾಂಸ್ಕೃತಿಕ ಯಜಮಾನಿಕೆಗಳನ್ನು ಸ್ಥಿರಗೊಳಿಸುವ, ಗಟ್ಟಿಗೊಳಿಸುವ ಕ್ರಿಯೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಅರಿವಿನ ಅಭಿವ್ಯಕ್ತಿಯೂ/ ಆಲೋಚನೆಯೂ ಒಂದು ಸಮುದಾಯಕ್ಕೂ ಮತ್ತೊಂದು ಸಮುದಾಯಕ್ಕೂ ವ್ಯತ್ಯಾಸವಿದೆ. ಹೊಲರ ಕೇರಿಯಲ್ಲಿ ಅರಿವು ಉಂಟಾದಾಗ ನೀಡುವ ಪ್ರತಿಕ್ರಿಯೆ, ಮೇಲ್ಜಾತಿಯವರು ನೀಡುವ ಪ್ರತಿಕ್ರಿಯೆ ಪರಸ್ಪರ ಭಿನ್ನ. ದಿಲ್ದಾರನಾದ ಕಿಟ್ಟಯ್ಯನಿಂದ ಕೂಸು ಸಾಧ್ಯವಿಲ್ಲ ಅನ್ನಿಸಿದಾಗ ಕೆಂಪಿ ಮಗು ಪಡೆಯುವ ಸಂದರ್ಭವನ್ನು ಕಾದಂಬರಿ ಹೀಗೆ ವರ್ಣಿಸುತ್ತದೆ.
… ಒಂಜಿನ, ಕೆಂಪೀಯು ಅಪ್ಪನ ಮನಲಿ ಇರುವುದು
ಹೆಚ್ಚಾಗ್ತ ಆಗ ರಾತ್ರಿನಗ ಪೋಣೀಲಿ ಗಾಳಿ ಪಿಸುಗುಟ್ಟಿದಂತಾಗುವುದು
ಅಮೇಕಾಮೇಕ ಅದು ಹಟ್ಟಿ ಒಳಗೂ ಸದ್ದು ಸುಳುವಾಗುವುದೇ ಮುಂತಾದ್ದು
ಮುಪ್ಪಾದರೂ ಕಣ್ಣುಕಿವಿ ಹಲ್ಲು ಗಟ್ಟಿಗಿದ್ದ ತೂರಮ್ಮನು ಒಂಜಿನ, ಆ ಕಡ ಭಾಗದಲ್ಲಿರೋ
ವಾರಗಿತ್ತಿ ಮಗಳಾದ ಈರಿಯು ತನ್ನ ಹೈದನನ್ನು ದೇವರ ಸನ್ನಿಧಿಗ ಕರ್ಕಂಡು
ಹೋಗಿರೋ ಆ ಸರಿಯಾದ ಟೇಮು ಸಿಕ್ಕಿಸಿಕೊಂಡು ತೂರಮ್ಮನು, ಎಡಗೈಲಿ ಮಗಳ
ಮುಂದಲ್ವ ಹಿಡ್ಕಂಡೂ ಬಲಗೈಲಿ ಈಚಲ ಇಡಗಲ ಹಿಡ್ಕಂಡು, ಬಗ್ಗಿದ ಬೆನ್ನ ಇನ್ನೂ
ಬಗ್ಗಿಸಿ, ಕಪ್ಪು ಹಚ್ಸಿದ್ದ ಕಪ್ಪುಹಲ್ಲೂನ ನೊರಗುಟ್ಸಿ “ಯಾನಮ್ಮಿ? ಯಾನ ಇದು ನಿನ್
ಮಾಯಾ ಮಂಗಾಟ? ಚಾಲು ಚಲಾಕು?” ಅಂತ ಗುದ್ದಿದಳು.
ಮಗಳು ಮೊಕ್ವ ಸೆರುಗಲ್ಲಿ ಮುಚ್ಕಂಡು ಅಲುಬಿದಳು. ಆ ಬಿಗಿ ಬಿಡದ ತೂರಮ್ಮನು
ಎಡಮುಷ್ಟಿಯಲ್ಲಿ ಹಿಡಿದಿದ್ದ ಮಗಳ ಮುಂದಲ್ವ ಚಿಗಿಸಿ ಮೇಲೆತ್ತಿ “ಯಾರ್ ಮುಂದ್ಯ
ಆಡ್ತಾ ಇರೋದು ನೀನೂ? ಅದೇನ್ ನಿನ್ ಹೊಟ್ಟ ಒಳ್ಗ ಮಡಿಕ್ಕಂಡಿದ್ದೀಯೋ ಅದ
ಕಕ್ಕು ಅದಾ” ಅಂದಳು.
… ಹೀಗೆ ಮಗಳು ಮೊಕ್ವ ಮುಚ್ಕಂಡು ಸೊರಗುಡ್ತಾ, ಅವ್ವ ಹಿಡುತ ಬುಡದಿರಲು
ಹೀಗೆ…
ಇದು ಹೀಗಾಗ್ತ ಕೊನಗ ಕೆಂಪಿಯು ಸೋತು ಸುಣ್ಣವಾಗಿ ಸೊರಗುಡ್ತ- “ಅದ
ಯಾನ ಅಂತ ನಾ ಹೆಳ್ಳವ್ವ? ಅದ ನಾ ಯಾಗ ಅಂತ ಹೇಳ್ಳಿ? ನಾ ತಂದಂಥ ಫಲ್ವ
ನಾ ಯಾಗ್ ಹೇಳ್ಳಿ ಹೇಳು. ನಾ ಸತ್ತಾಗ ಸೊರ್ಗಕ್ಕ ಸೇರ್ಕಳ್ಲಿ ನಂ ಅವ್ವ ಅಂತ
ಹಿಂಡಕೂಳಾಕಾಕ ಒಂದು ಗಂಡ್ಗೂಸು ಆಗೋದು ಬ್ಯಾಡ ಬೇಕಾರ ನಂಗ. ಬೆನ್ನುಜ್ಜಿ
ಕೊಡಾಕ ಅಂತ ಒಂದು ಹೆಣ್ಣುಗೂಸು ಅಂತಾರೂ ಆಗದು ಬ್ಯಾಡವವ್ವ
ನಂಗಾ…?” ಅಂದಳು. ಈ ಬಾಣವು ಬಂದು ತೂರಮ್ಮನ ಎಡಗೈಗ ನಾಟಲು ಮಗಳ
ಮುಂದಲ ಜುಟ್ಟುಬುಟ್ಟು, ಅಲ್ಲಿಂದ ಬಲಗಯ್ಗ ನಾಟಲು ಹಿಡ್ದ ಹಿಡುಗಲ ಬುಟ್ಟು,
ಅಲ್ಲಿಂದ ಜೀವಕ್ಕೆ ನಾಟಲು ತೂರಮ್ಮ ಕುಸ್ದಳು.
ಅತ್ತ ಮೊಕ್ವ ಎತ್ತದ ಮಗಳು ಸೊರಗುಟ್ಟುತ್ತರಲು, ಇತ್ತ ಚೆಲ್ಲೆಸೆದಂತೆ ಕೂತ
ತೂರಮ್ಮನು ತನ್ನ ದೇಹಕ್ಕೆ ಸೂಲು ಕೂಡ್ಸಿ, ನಡುಗೋ ಪರಾಣ್ಕ ಮಾತಿಟ್ಟು “ ಅದ್ಯಾನ
ಇರಾದು ವಸಿ ಬುಡ್ಸಿ ಹೇಳವ್ವ ತಾಯಿ” ಅಂದಳು. ಸೊರಗುಟ್ಟುವುದಕ್ಕೆ ಕೆಂಪೀಯ ಮಾತು
ಸೇರ್ಸಿ “ ನೀನು ಹೇಳೂ ಅಂತಂದ್ರ ಅದ ನಾ ಹೆಂಗೇಳಲವ್ವಾ? ಅದ ಯಾವ
ಬಾಯಿಂದ ಹೇಳ್ಲಿ? ಕೋಳಿ ಕೆದ್ಕಂಗಾ ಕೆದ್ಕವನ್ಗ ನನ್ ಕಟ್‍ಬುಟ್ಟೋ… ಮಕ್ಕಳ ಫಲ್ವ
ಊರ್ಜಿತ್ವಾ ನಾ ಹೆಂಗ್ ಕಾಣ್ಲಿ? ನಾ ಹೇಗ್ ಕಾಣ್ಲಿ?” ಅಂತ
ಸೊರಗುಟ್ಟತೊಡಗಿದಳು.
ಅಹಾ! ಎಂಥ ಘೋರ ಅನ್ನಾಯವು ತಾನು ಹೆತ್ತಂಥ ಕುಡಿಗ ತನ್ನ ಕಯ್ಯಾರ
ಆಯ್ತಲ್ಲಾ ಅಂತ ಆಗಲೀಗ ತೂರಮ್ಮನ ಕೇಳಿಸೋ ಕಿವಿಯೂ ಕೇಳಿಸದಂತಾಯ್ತು.
ಕಾಣಿಸೋ ಕಣ್ಣು ಕಾಣಿಸದಂತಾಯ್ತು. -ಪು.18
ಎಂದಾಗ ತೂರಮ್ಮಳಿಗೆ ತನ್ನ ಕಂದನ ಮಾತುಗಳಿಂದ ಉಂಟಾಗುವ ಅರಿವು ಎಲ್ಲವನ್ನು ಮೀರಿದ ಸ್ಥಿತಿ. ಅದಕ್ಕಾಗಿ ಆಕೆ ಪರಿತಪಿಸುವ ಪರಿ ಕಣ್ಣು ಮತ್ತು ಕಿವಿಗಳು ತಮ್ಮ ಕ್ರಿಯೆಯನ್ನೇ ಮರೆಯುತ್ತವೆ. ಅಂದರೆ ಅವು ತಮ್ಮ ಕಾಯಕವನ್ನೆ ಮರೆತವೆಂದು ಅರ್ಥವಲ್ಲ. ಈ ಸಮಾಜದ ಒಪ್ಪಿತ ಮೌಲ್ಯಗಳನ್ನು ನಿರಾಕರಿಸುವ ಧೈರ್ಯವನ್ನು ತೋರುವ ಅಭಿವ್ಯಕ್ತಿಯಾಗಿ ಕಾಣುತ್ತವೆ. ಮುಂದುವರೆದು ಹೊಲಾರ ತೂರಮ್ಮ ಮಗಳ ಈ ಸಂಬಂಧವನ್ನು ಹೆಣ್ಣಾಗಿ ಮತ್ತು ತಾಯಿಯಾಗಿ ಕ್ಷಮಿಸುತ್ತಾಳೆ. ಮಗಳು ಹೇಳಿಕೊಳ್ಳುವ ತಾಯ್ತನದ ಪ್ರಶ್ನೆಗಳು ತಾಯಿ ತೂರಮ್ಮಳಲ್ಲಿ ಅರಿವಿನ ಬೇರೆ ನೆಲೆಯನ್ನು ಯೋಚಿಸುವಂತೆ ಮಾಡುತ್ತದೆ. ಸಾಂಪ್ರದಾಯಿಕ ಕೌಟುಂಬಿಕ ಮೌಲ್ಯವನ್ನು ನಿರಾಕರಿಸುವ ತಾಯಿಯಾಗಿ ತೂರಮ್ಮ ಕಾಣುತ್ತಾಳೆ. ಹೀಗಾಗಿ ಅರಿವು ಹೊಸ ಪ್ರಜ್ಞೆಯನ್ನು ಹುಟ್ಟಿಸುತ್ತದೆ. ಮಾನವೀಯತೆಯ ಹಂಬಲದಂಥ ಪ್ರಜ್ಞೆ ತೂರಮ್ಮಳನ್ನು ನಿಯಂತ್ರಿಸುತ್ತದೆ. ಆದರೆ ಇದು ಮೇಲ್ಜಾತಿಗಳಲ್ಲಿ ಸಂಭವಿಸುವುದಿಲ್ಲ. ಕುಸುಮ ಹೊಲಾರ ಚೆನ್ನನ ಜತೆಯಿದ್ದಾಳೆ ಎಂಬ ಸುದ್ಧಿಯೇ ಸಹಿಸಲಾಗದೆ ಗಂಡ ಕೂಸನ್ನು ನೋಡದೆಯೇ ಹಿಂತಿರುಗುತ್ತಾನೆ. ತಂದೆ ತನ್ನ ಕೂಸು ಮತ್ತು ಕೂಸಿನ ಕೂಸನ್ನು ಮಯ್ದುಂಬಿಕೊಂಡರೂ ಚೆನ್ನನ ಇರುವನ್ನು ಸಹಿಸಿಕೊಳ್ಳುವುದಿಲ್ಲ. ಪರಿಣಾಮವಾಗಿ ಕಾದಂಬರಿಯ ಪ್ರಮುಖ ಕ್ರಿಯೆ ನಡೆದುಹೋಗುತ್ತದೆ.
ಅರಿವಿನ ನಂತರದ ಸ್ಥಿತಿಯಲ್ಲಿ ಸಾವಿನ ಪ್ರಮುಖ ನೆಲೆಗಳನ್ನು ಈ ಕಾದಂಬರಿಯಲ್ಲಿ ಚಿತ್ರಿಸುತ್ತದೆ. ಸಾವು ಕೆಳಜಾತಿ ಮತ್ತು ಮೇಲ್ಜಾತಿಗಳೆರಡರಲ್ಲೂ ಸಂಭವಿಸುತ್ತದೆ. ಪ್ರಜ್ಞಾಪೂರ್ವಕವಾಗಿ ನಡೆಯುವ ಘಟನೆಗಳು ಸಾವಿನ ಭಿನ್ನ ಆಯಾಮವನ್ನು ವಿವರಿಸುತ್ತವೆ. ಎರಡು ಜಾತಿಗಳಲ್ಲೂ ಸಾವು ಮತ್ತೊಂದರ ಜೀವದ ಉಳಿವಿಗಾಗಿ ಜರುಗುತ್ತಿರುತ್ತದೆ. ಜೀತಗಾರನ ಸಾವಿನ ಮುಖೇನ ಯಾಡನ ಬೆಳವಣಿಗೆ, ಚೆನ್ನನ ಸಾವು ಕುಸುಮಳ ಕೂಸಿನ ಜೀವಂತಿಕೆಗೆ ಕಾರಣವಾಗಿ ನಿಲ್ಲುವುದು.. ಇತ್ಯಾದಿಗಳನ್ನು ನೋಡಬಹುದು. ಆದರೆ ಕೆಳಜಾತಿಯವರು ತಮ್ಮ ಕೂಸಿನ ಉಳಿವಿಗಾಗಿ ಬಲಿಯನ್ನೇ ಅಪೇಕ್ಷಿಸಬಹುದು ಆದರೆ ನರಬಲಿಯನ್ನಲ್ಲ ಎಂಬುದನ್ನು ಕಾದಂಬರಿ ತಲಾತಲಾಂತರದ ಸತ್ಯವನ್ನು ಹುಡುಕಲೆತ್ನಿಸುತ್ತದೆ.
‘….ಆ ಚಣದಲವಳು,
ಒಳ್ಳೆ ಗಳುಗಾಲಿ ಹಿಡ್ದು ಆ ಜೀವಾಡುತ್ತಿದ್ದ ಆತಹುಳ್ವಾ ತತರಪಿತರನ
ನೆಲ್ಕ ಇಟ್ಟು ಎಡಗೈ ಹೆಬ್ಬೆಟ್ಟನ್ನು ಅದರ ಸರೀಲದ ಮ್ಯಾಗಿಟ್ಟು
ಅದುಮ್ತ ಚಿಮುಕೀ ಆ ಸರೀಲದಿಂದ ಆ ಅದರ ಜೀವ್ವ ತಗುದೂ-
‘ಈ ಜೀವ್ವೇ ಆ ಜೀವಕ ನಡೀ’ ಅಂತಂತ ಮೂರ್ಸಲ
ತನ್ನ ಸರೀಲದ ಒಂದು ಮನಸ್ಸುಮಾಡೀ ಅದ
ಒಂದು ದುಡದಲ್ಲಿ ನಿಲ್ಸೀ ತನ್ನ ಕಪ್ಪುಹಲ್ಲುಗಳ ಬಿಗಿಲಿ
‘ಈ ಜೀವ್ವೇ ಆ ಜೀವಕ ನಡೀ’ ಅಂತಂತ ಮೂರ್ಸಲ
ಅಂತ…..(ಪು.54)
ಹೀಗೆ ತೂರಮ್ಮ ಸಣ್ಣ ಹುಳದ ಮೂಲಕ ಕೆಂಪಿಗೆ ಹುಟ್ಟಿರುವ ಮಾಂಸಮುದ್ದೆಗೆ ಜೀವಸ್ಪುರಣ ತುಂಬುತ್ತಾಳೆ. ಆ ಮೂಲಕ ಸಲಹುವ ತಾಯಿಯಾಗಿ ಲೋಕತಾಯಿಯಾಗುತ್ತಾಳೆ. ಆದರೆ ಮೇಲ್ಜಾತಿಯವರ ಸಂತಾನ ಫಲವು ಊರ್ಜಿತವಾಗಲು ಕೆಳಜಾತಿಯವರ ಜೀವಹತ್ಯೆಯನ್ನು ಬಯಸುತ್ತವೆ. ಅದು ಚೆನ್ನನಂಥವನು, ಹಟ್ಟಿ ಜೀತಗಾರನಂಥವರು ಬಲಿಯಾಗುವುದರಲ್ಲಿ ಗುರುತಿಸಬಹುದು. ಇಲ್ಲಿ ಬಹಳ ಮಹತ್ವದ ವ್ಯತ್ಯಾಸವಿದೆ. ಚೆನ್ನನ ಜೀವಹತ್ಯೆ ಮೇಲ್ಜಾತಿಯವರ ಸಂತಾನಫಲದ ಸದೃಡತೆಯಾಗುತ್ತದೆ. ಅದು ಮನುಷ್ಯರಕ್ತ (ನರಬಲಿ)ವನ್ನು ಈ ಮೇಲ್ಜಾತಿ ಬಯಸುತ್ತದೆ. ಯಾಕೆಂದರೆ ಅವರಿಗೆ ‘ಅರಿವು’ ಎಂದರೆ ಸ್ಥಾನಮಾನ, ಅಂತಸ್ತು. ಅದು ಪಲ್ಲಟಗೊಳ್ಳದೆ ಹಾಗೇ ಇರಬೇಕು ಎಂಬ ನಿಲುವು. ಹಾಗಾಗಿ ತನ್ನ ಸ್ಥಾನಮಾನಕ್ಕೆ ದಕ್ಕೆಯಾದರೆ, ಅದನ್ನು ಮಾಡಿದವರನ್ನು ಗುಪ್ತವಾಗಿ ದಮನ ಮಾಡಲಾಗುತ್ತದೆ. ಇಲ್ಲಿ ಚೆನ್ನ ಈ ರೀತಿಯ ಕಣ್ಣಿಗೆ ಗುರಿಯಾಗಿ ಬಲಿಪಶುವಾಗುತ್ತಾನೆ. ಆದರೆ ಈ ಕೃತ್ಯ ಯಾರಿಗೂ ಗೊತ್ತಾಗುವುದಿಲ್ಲ. ಲೇಖಕರು ಆ ಮೂಲಕ ಪರಂಪರೆಯಿಂದ ನಡೆದುಕೊಂಡು ಬಂದಿರುವ ಹುನ್ನಾರಗಳನ್ನು ಬಿಚ್ಚಿಡುತ್ತಾರೆ.
ಕುಸುಮಬಾಲೆ ಸಂಬುಂಜಗಳು ಜಾತಿಯಾಚೆಗೂ ನಿಲ್ಲುವ ಅದಮ್ಯ ಚೈತನ್ಯವನ್ನು ಪಡೆದಿವೆ. ಇದು ಜೀತಗಾರ ಅಕ್ಕಮಾದೇವಮ್ಮನಿಂದ ಹಿಡಿದು ಸೋಮಪ್ಪ-ಮುಲ್ಲಾಜಮ್ಮನನ್ನು ಒಳಗೊಂಡಂತೆ ಇತ್ತೀಚೆಗೆ ಕುಸುಮ-ಚೆನ್ನ, ಈರಿ-ಕಿಟ್ಟಪ್ಪನವರೆಗೂ ಹಬ್ಬಿದೆ. ಈ ಸಂಬಂಧಗಳು ಅನೈತಿಕ ಎಂದು ಪರಿಭಾವಿಸುವ ರೀತಿಯಲ್ಲಿಲ್ಲ. ಜಾತಿಯಾಚೆಗೂ ನಿಲ್ಲುವ ಅದಮ್ಯ ಪ್ರೀತಿ ಇಂಥ ಸಂಬಂಧಗಳ ಹಿಂದಿನ ಪ್ರೇರಣೆಯಾಗಿದೆ. ಇಡೀ ಪಾತ್ರಗಳಾಗಿ ಕಾಣಿಸಿಕೊಳ್ಳುವ ಕುಸುಮ-ಚೆನ್ನರ ರೀತಿಯ ಸಂಬಂಧಗಳು ಕೆಳಜಾತಿಗಳಲ್ಲೂ ಮುಂದುವರಿಯುತ್ತಿವೆ. ಆದರೆ ಕೆಳಜಾತಿಯಲ್ಲಿ ನಡೆಯುವ ಇಂಥ ಸಂಬಂಧಗಳಿಂದ ಚೆನ್ನನಂತೆ ಯಾವ ವ್ಯಕ್ತಿಯ ಹತ್ಯೆ ನಡೆಯುವುದಿಲ್ಲ. ಕೆಂಪಿಯ ಕೂಸಿನ ಹುಟ್ಟಿಗೆ ಕಾರಣವಾದ ತಂದೆ ಯಾರು ಎಂಬ ಪ್ರಶ್ನೆ ನಂತರ ನಡೆಯಬಹುದಾದ ಸಂಘರ್ಷಗಳು ಇಲ್ಲಿ ಮುಖ್ಯವಾಗುವುದೇ ಇಲ್ಲ. ಇಲ್ಲಿ ಎಲ್ಲ ಅರಿವಿದ್ದೂ ಸಲಹುವ ತಾಯಿ ತೂರಮ್ಮ ಇದ್ದಾಳೆ. ಆದರೆ ಕುಸುಮಳ ಕುಟುಂಬ ಕುಸುಮ-ಚೆನ್ನರ ಸಂಬಂಧ ತನಗೇನು ಅರಿವಿಲ್ಲವೆಂಬಂತೆ ವರ್ತಿಸುತ್ತದೆ. ಅರಿವಿಲ್ಲದಂತೆ ಇದ್ದು, ಊರಿಗೆ ಅರಿವಾಗದಂತೆ ಚೆನ್ನನ ಕೊಲೆ ನಡೆಸುತ್ತದೆ. ಕೆಳಜಾತಿ ಸಂಸ್ಕೃತಿಗಳು ಸಂಬಂಧಗಳ ಬೆಸೆಯುವಿಕೆಗೆ ಹಾತೊರೆದರೆ, ಮೇಲ್ಜಾತಿಗಳು ಸಂಬಂಧಗಳನ್ನು ಕಡಿಯುವ, ವ್ಯವಹಾರಿಕವಾಗಿ ಆಲೋಚಿಸುವ ಮನೋಧರ್ಮವನ್ನು ಪ್ರಕಟಪಡಿಸುತ್ತವೆ.
ಚೆನ್ನನ ಕೊಲೆಯಿಂದ ಕುಸುಮ ಮಾನಸಿಕವಾಗಿ ಅಸ್ವಸ್ಥವಾಗುವ, ಚೆನ್ನನ ಸಾವಿನಿಂದ ಹಟ್ಟಿ ಯಥಾಪ್ರಕಾರ ನಡೆಯುವ, ಆದರೆ ಚೆನ್ನನ ಬಗೆಗೆ ಹಲವು ಭವ್ಯ ಕತೆಗಳು ನಿರ್ಮಾಣವಾಗುವ ಇವುಗಳೆಲ್ಲ ಇನ್ನೊಂದು ನೆಲೆಯ ಓದನ್ನು ಒತ್ತಾಯಿಸುತ್ತದೆ. ಅಸ್ವಸ್ಥಳಾದ ಕುಸುಮಿ ಆಡುವ ಮಾತೇ ಇಲ್ಲಿ ಮುಖ್ಯವೆನಿಸುತ್ತದೆ. ‘‘I want to be in my house’ ಈ ಮಾತಿನ ಹಿಂದೆ ಇರುವ ಒತ್ತಡಗಳು ಏನು ಎಂಬುದು. ಜಾಗತಿಕ ಭಾಷೆ ದೇಸಿ ಭಾಷೆಗಳನ್ನು ನುಂಗಿಕೊಂಡು ಏಕರೂಪಿ ಭಾಷೆಯಾಗುವ ರೀತಿಯನ್ನು ಈ ಪ್ರಸಂಗ ಮುನ್ಸೂಚನೆಯಾಗಿ ನೀಡುತ್ತಿರಬಹುದು.
 ಹಿಂದೆ ಯಾಡ ತನ್ನ ಚಾಣಾಕ್ಷತೆಯಿಂದ ಊರಿನ ಮುಖಂಡನಾಗಿ ಬೆಳೆದ ರೀತಿಯಂತೆ ಈಗಲೂ ಅದೇ ಸ್ವಭಾವದ ಗಾರಸಿದ್ಮಾವ ಇದ್ದಾನೆ. ಇಲ್ಲಿನ ಗಾರಸಿದ್ಮಾವ ಮತ್ತು ಅವನ ವೈಖರಿ ಕಾದಂಬರಿಗೆ ಇನ್ನೊಂದು ಆಯಾಮವನ್ನು ತರುತ್ತದೆ. ಗಾರಸಿದ್ಮಾವ ಮತ್ತು ಸಂಘಟನಾ ನಾಯಕರ ಮುಖಾಮುಖಿ ಬಹಳ ಮಹತ್ವದ ಪ್ರಶ್ನೆಗಳನ್ನು ಎತ್ತುತ್ತದೆ. ಗಾರಸಿದ್ಮಾವ ತನ್ನ ಜಾಣತನ, ತನ್ನ ಅನುಭವದಿಂದ ಎಂಥ ಕ್ಲಿಷ್ಟ ಸಂದರ್ಭದಲ್ಲೂ ಪಾರಾಗಬಲ್ಲ… ಈ ತರದ ಜಾಣ್ಮೆ ಉದ್ದಕ್ಕೂ ಹುಂಬ ರೀತಿಯಂತೆ ಕಂಡರೂ ಅದರಾಚೆಗೆ ಬದುಕಿನ ನಿರ್ವಹಣೆ ಮುಖ್ಯವೆನಿಸುತ್ತದೆ. ಗಾರಸಿದ್ಮಾವನ ಆಲೋಚನಾ ಕ್ರಿಯೆ ದಸಂಸ ನಾಯಕರಿಗಿಂತ ತುಂಬಾ ಪ್ರಾಕ್ಟೀಕಲ್ ಆದುದು. ಅವರ ಯಾವ ದೃಷ್ಟಿಕೋನ, ಅಳತೆಗೋಲಿಗೂ ಗಾರಸಿದ್ಮಾವ ದಕ್ಕುವುದೇ ಇಲ್ಲ. ಅಂಬೇಡ್ಕರ್ ಪೋಟೋಗೆ ಕಾಯಿ ಒಡೆಯುವುದು, ‘ರಾತ್ರಿ ನೀವು ಮಾತಾಡಿದ್ದು ನನಗೆ ತಲಬುಡ ಅರ್ತಾ ಆಗ್ಲಿಲ್ಲ’, ಬೀಡಿ ಸೇದಬ್ಯಾಡಿ ಅಂತ ಸಿಕರೋಟ ನೀಡುವುದು, ಹದಿನಾರು ಎಳನೀರು ಕುಡಿದು ಅರಗಿಸಿಕೊಳ್ಳುವ ಭಂಡ. ಆರಂಭದಲ್ಲಿ ಕಳ್ಳನ ರೀತಿಯಲ್ಲಿ ಕಾಣಿಸಿಕೊಳ್ಳುವ ಗಾರಸಿದ್ಮಾವ ನಂತರದಲ್ಲಿ ಇಡೀ ಕಾದಂಬರಿಯನ್ನು ಆವರಿಸಿಕೊಳ್ಳುತ್ತಾನೆ. ನಡವಳಿಕೆಗಳಿಂದ ಸಮಾಜದ ಸ್ಥಾಪಿತ ನಂಬಿಕೆಗಳನ್ನೇ ಬುಡಮೇಲು ಮಾಡುತ್ತಾನೆ. ಆ ಮೂಲಕ ಜೀವನದ ಭಿನ್ನ ನೆಲೆಯನ್ನು ಓದುಗರ ಮುಂದಿಡುತ್ತಾನೆ.
ಕುಸುಮಬಾಲೆಯ ಅರಿವಿನ ಸಾಹಿತ್ಯ ತತ್ವ :
ಕುಸುಮಬಾಲೆ ಇಡೀ ಸಂಸ್ಕೃತಿಯ ನೆನಪಿನ ಗುಕ್ಕು. ಅಂದರೆ ಸಂಸ್ಕೃತಿ ಕಥನ. ಸಂಸ್ಕøತಿಯು ತನ್ನ ಮೂಲ ಸೆಳೆತ, ಸಂಘರ್ಷಗಳನ್ನು ಒಮ್ಮೆಲೆ ಬಿಚ್ಚಿಡುವುದಕ್ಕೆ ತೊಡಗಿರುವುದರಿಂದ ಇದಕ್ಕೆ ಪರಂಪರೆ, ತಲೆಮಾರು, ವರ್ತಮಾನ, ಭವಿಷ್ಯಗಳ ಸಂಘರ್ಷವಿದೆ. ಇದರೊಳಗಿನ ಸಾಹಿತ್ಯ ತತ್ವವೇ ಭಿನ್ನ. ಆ ಕಾದಂಬರಿಯೇ ಸೂಚಿಸುವಂತೆ ‘ಅವರವರಗ ತಿಳಿದ ರೀತೀಲೀ…. ಅವರವರುಗ ತಿಳಿದ ರೀತೀಲಿ ನಡೆಯೂತಲಿರುವಾಗ… (ಪು.36)’ ಎಂಬ ಹೊಸ ಸಾಹಿತ್ಯ ತತ್ವವನ್ನು ಹುಟ್ಟಿ ಹಾಕಿ ಇರುವ ಮಾದರಿಗಳನ್ನು ನಿರಾಕರಿಸಿದೆ. ಕೃತಿ ನೀಡುವ ಅರಿವಿನೊಳಗೆ ತಿಳಿಯಬೇಕೆ ಹೊರತು ಹೊರಗಿನವುಗಳಿಂದ ಹಾಯಬೇಡಿ ಎಂಬ ಎಚ್ಚರಗಳನ್ನು ನೀಡುತ್ತದೆ. ಇದು ಬದುಕಿನ ತತ್ವ ಮತ್ತು ಡೆಮಾಕ್ರಟಿಕ್ ನೆಲೆ. ನಾವು ಅನುಭವದ ಮೂಲಕ ಕಂಡುಕೊಂಡ ಬದುಕು ಅದರಿಂದಲೇ ಕುಸುಮಬಾಲೆಯನ್ನು ನೋಡಬೇಕೆಂಬ ನಿಲುವನ್ನು ಈ ಕಾದಂಬರಿಯ ಸಾಹಿತ್ಯ ತತ್ವ ಪ್ರತಿಪಾದಿಸುತ್ತದೆ.
ಕೊನೆಯಾಗದ ಅರಿವು :
ಚಿ: ಸೂರ್ಯನಿಲ್ಲದೆ ಹೊಲೆಯನ ನೆರಳು ಸೊಂಕದೆ
ಬದುಕಿದೆನಲ್ಲಾ.. ಪು.51
ಇಡೀ ಕಾದಂಬರಿ ಆಶಯವೇ ಇದಾಗಿದೆ. ಹೊಲೆಯನ ಸೋಂಕಿಲ್ಲದೆ ಮೇಲ್ಜಾತಿಗಳು ಶುದ್ಧವಾಗುವುದಿಲ್ಲ. ಅದಕ್ಕಾಗಿ ಕಾಲಕಾಲಕ್ಕೆ ಸಂಕರಗಳು ನಡೆಯುತ್ತಿರುತ್ತವೆ. ಅಥವಾ ಮೇಲ್ಜಾತಿಗಳು ಕೆಳಜಾತಿಗಳ ಸಂಕರದಿಂದಲೇ ಶಕ್ತಿಯನ್ನು ಫಲವತ್ತತೆಯನ್ನು ಪಡೆಯುತ್ತಿರುತ್ತವೆ. ತಮ್ಮ ಜೀವಂತಿಕೆಯನ್ನು ರಿಪ್ರೆಶ್ ಮಾಡಿಕೊಳ್ಳುತ್ತಿರುತ್ತವೆ. ಅಮೆರಿಕಾದಂಥ ರಾಷ್ಟ್ರ ಕರಿಯ ಬಿಳಿಯ ಸಂಕರದ ಒಬಾಮನನ್ನು ಅಧ್ಯಕ್ಷನನ್ನಾಗಿ ಆರಿಸಿಕೊಂಡಿದ್ದು ಇಂಥ ಕಾರಣಕ್ಕಾಗಿ. ಅಮೆರಿಕಾ ಆ ಮೂಲಕ ತಮ್ಮ ಶಕ್ತಿಯನ್ನು ಪುನರ್ ಪಡೆಯುವ ದಾರಿಯನ್ನು ಕಂಡುಕೊಂಡಿದೆ. ಇದು ಕನ್ನಡದ ಜನಸಮುದಾಯದಲ್ಲಿ ಜರುಗಬೇಕೆಂಬ ಆಶಯವನ್ನು ಕುಸುಮಬಾಲೆ ಒಳಗೊಂಡಿದೆ. ಯಾವ ಸಮುದಾಯಗಳು ಪರಂಪರೆಯಿಂದ ದಮನಕ್ಕೆ ಒಳಗಾಗಿವೆ. ಮತ್ತು ಯಾವ ಸಮುದಾಯಗಳು ಲಾಗಾಯ್ತಿನಿಂದ ಯಜಮಾನಿಕೆಯನ್ನು ಪ್ರತಿಪಾದಿಸುತ್ತಿವೆ ಅವುಗಳ ನಡುವೆ ಮಾನವೀಯ ಸಂಕರಗೊಳ್ಳಬೇಕಾಗಿದೆ. ಅದನ್ನೇ ಲೇಖಕರು ಆಶಿಸಿದ್ದಾರೆ.
ಕನ್ನಡ ಚಿಂತನ ವಲಯದಲ್ಲಿ ಜರುಗಿದ ಬ್ರಾಹಣ ಮತ್ತು ಶೂದ್ರ ಚರ್ಚೆಯ ನೆಲೆಯನ್ನು ಇಲ್ಲಿ ವಿಸ್ತರಿಸಲಾಗಿದೆ. ಡಾ. ಯು ಆರ್ ಅನಂತಮೂರ್ತಿಯವರು ‘ಸಾಹಿತ್ಯದಲ್ಲಿ ಬ್ರಾಹ್ಮಣ ಮತ್ತು ಶೂದ್ರ’ ಎಂಬ ಲೇಖನದಲ್ಲಿ ಇದನ್ನೇ ಸೂಚಿಸುತ್ತಾರೆ. ‘ಬರಿಯ ಶೂದ್ರ ಪ್ರಜ್ಞೆಯಿಂದ ಜಾನಪದ ಸಾಹಿತ್ಯ ಸೃಷ್ಟಿಯಾಗುತ್ತದೆ; ಬರಿಯ ಬ್ರಾಹ್ಮಣ ಪ್ರಜ್ಞೆಯಿಂದ ನಿರ್ವೀಯವಾದ, ನಯನಾಜೂಕಿನ, ಸ್ನಾಯುಶಕ್ತಿಹೀನವಾದ ಸಾಹಿತ್ಯ ಹೊರಬರುತ್ತದೆ. ಆದರೆ ಇವೆರಡೂ ಕೂಡಿದಾಗ ಮಾತ್ರ ಅಖಂಡ ಸಾಹಿತ್ಯ ಸಾಧ್ಯವಾಗುತ್ತದೆ’ ಇದೇ ಈ ಕಾದಂಬರಿಯಲ್ಲಿ ಮಾನವೀಯತೆಯ ಹುಡುಕಾಟದ ದಾರಿಯಾಗಿ, ಮೇಲ್ಜಾತಿ ಕೆಳಜಾತಿಗಳ ಸಂಕರವನ್ನು ಸೂಚ್ಯವಾಗಿ ಮಂಡಿಸುತ್ತದೆ.