ಕನ್ನಡಿಗರ ಆತ್ಮಸಾಕ್ಷಿ: ದೇವನೂರ ಮಹಾದೇವ-ಎನ್.ಎಸ್.ಶ್ರೀಧರ ಮೂರ್ತಿ

[ಕುವೆಂಪು ಅವರು ಪ್ರತಿಪಾದಿಸಿದ ವ್ಶೆಜ್ಞಾನಿಕ ದೃಷ್ಟಿಕೋನ ಮತ್ತು ವೈಚಾರಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ಒಂದು ರೀತಿಯಲ್ಲಿ ಕುವೆಂಪು ಅವರ ಆಶೋತ್ತರಗಳ ಮೂರ್ತರೂಪದಂತೆಯೇ ಬದುಕುತ್ತಿರುವ ಮತ್ತು ಬರೆಯುತ್ತಿರುವ ಅಪರೂಪದ [‘ಅನಿಕೇತನ ಪ್ರತಿಭೆ’, ನಾಡಿನ ಸಾಕ್ಷಿಪ್ರಜ್ಞೆ, ಅಂತಃಕರಣದ ಪ್ರತಿರೂಪ ಶ್ರೀ ದೇವನೂರ ಮಹಾದೇವ ಅವರಿಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ- 2016 ದೊರೆಯುತ್ತಿರುವ ಈ ಅವಿಸ್ಮರಣೀಯ ಸಂದರ್ಭಕ್ಕಾಗಿ ಮೈಸೂರಿನ ‘ಆಂದೋಲನ’ ಪತ್ರಿಕೆಯಲ್ಲಿ 29.12.2016 ಪ್ರಕಟವಾದ ವಿಶೇಷ ಲೇಖನ.]

Devanur for screen-1

 

ಬರವಣಿಗೆಯನ್ನು ಎಂದಿಗೂ ಅಭಿವ್ಯಕ್ತಿಯ ಪ್ರಧಾನ ಕೇಂದ್ರವಾಗಿಸಿ ಕೊಳ್ಳದೆ ಕೂಡ ಪ್ರಮುಖ ಬರಹಗಾರರು ಎನ್ನಿಸಿಕೊಂಡವರು ಯಾರಾದರೂ ಇದ್ದರೆ ಕನ್ನಡದ ಮಟ್ಟಿಗೆ ಮಾತ್ರವಲ್ಲ ವಿಶ್ವದ ಪಟ್ಟಿಯಲ್ಲೂ ದೇವನೂರ ಮಹಾದೇವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಮಾರುಕಟ್ಟೆ ಸಂಸ್ಕೃತಿ ತಂದಿರುವ ಪ್ರಚಾರದ ಹಪಹಪಿ, ಸಮಗ್ರಗಳ ಭರಾಟೆ, ಅಧಿಕಾರ ಕೇಂದ್ರಗಳ ತುಡಿತ ಇದೆಲ್ಲವನ್ನೂ ಮೀರಿ ಅವರು ತಮ್ಮ ವಿಚಾರಗಳನ್ನು ಮುಕ್ತವಾಗಿ ಉಳಿಸಿಕೊಂಡು ಬಂದಿದ್ದಾರೆ. ಸೃಜನಾತ್ಮಕ ಬರವಣಿಗೆಯಿಂದ ಆರಂಭವಾದ ಅವರ ಅಭಿವ್ಯಕ್ತಿ ವೈಚಾರಿಕ ನೆಲೆಯನ್ನು ಪಡೆದರೂ ಚಳುವಳಿ ಅವರ ಮೂಲ ಸ್ಪಂದನ. ಅದು ರಾಜಕೀಯ ನೆಲೆಯನ್ನು ಪಡೆದರೂ ಕಾಳಜಿ ಮಾತ್ರ ಅಪ್ಪಟ ಈ ಮಣ್ಣಿನದು. ’ಕುಸುಮ ಬಾಲೆ’ ಅಕಾಡಮಿಕ್ ಲೋಕದ ತುಂಬೆಲ್ಲಾ ಪುಂಖಾನುಪುಂಖ ವಿಮರ್ಶೆಯನ್ನು ಕಂಡರೂ ದೇವನೂರರು ಅದರ ವ್ಯಾಮೋಹಕ್ಕೆ ಒಳಗಾಗಲಿಲ್ಲ. ಬಹುತೇಕ ಬರಹಗಾರರು ಮಾಡುವಂತೆ ಅದರ ನೆರಳಿನಂತಹ ಕೃತಿಗಳನ್ನು ಸೃಷ್ಟಿಸಲು ಹೋಗಲಿಲ್ಲ.  ನಾನ್ ಅಕಾಡಮಿಕ್ ನೆಲೆಯಲ್ಲೇ ಸಾಗಿದ ಕನ್ನಡದ ಇನ್ನೊಬ್ಬ ಪ್ರಮುಖ ಬರಹಗಾರ ಪೂರ್ಣಚಂದ್ರ ತೇಜಸ್ವಿ ಮೌನದಲ್ಲೇ ಬದುಕನ್ನು ನಿಲ್ಲಿಸಿಕೊಂಡು ವ್ಯಾಪಕವಾಗಿ ಅಕ್ಷರಗಳ ಮೂಲಕ ಮಾತನಾಡಿದರು. ಇದಕ್ಕೆ ವಿರುದ್ದವಾಗಿ ದೇವನೂರರು ಅಕ್ಷರಗಳ ಹಂಗನ್ನು ತೊರೆದು ಸಮುದಾಯದ ನಡುವೆ ನಿಂತರು. ದೇವನೂರರ ಬರವಣಿಗೆಯನ್ನು ನೋಡಿದಾಗ ಇನ್ನೂ ಯೋಚಿಸುತ್ತಿರುವ ಮನಸ್ಥಿತಿಯೇ ಕಾಣುತ್ತದೆ. ಎಲ್ಲಿಯೂ ಸಿದ್ದಾಂತ ರೂಪಿ ಚಿಂತನೆಗಳನ್ನು ಅವರು ತೂರಿ ಬಿಡುವುದಿಲ್ಲ. ತಳಮಳ ಮತ್ತು ವಿಷಾದಗಳನ್ನ  ಬೇರೆ ಬೇರೆ ಸಾಧ್ಯತೆಗಳನ್ನು ಬಳಸಿ ನಿರಂತರವಾಗಿ ಸಂವಹನ ಕ್ರಮಕ್ಕೆ ಒಗ್ಗಿಸಲು ಪ್ರಯತ್ನಿಸುತ್ತಲೇ ಬಂದಿದ್ದಾರೆ.

ವಿವರಣೆ, ವಿಶ್ಲೇಷಣೆ, ಸಂಯೋಜನೆ, ಪ್ರತಿಪಾದನೆ ಹೀಗೆ ಸೃಜನಾತ್ಮಕವಾಗಿ ಅಭಿವ್ಯಕ್ತಿಗೊಳ್ಳುವ ಮಾದರಿಗಳನ್ನು ಬಿಟ್ಟು ದೇವನೂರರು ತಮ್ಮ ವಿಚಾರಗಳನ್ನು ನೇರವಾಗಿಯೇ ಓದುಗರಿಗೆ ತಲುಪಿಸಲು ಪ್ರಯತ್ನಿಸುತ್ತಾರೆ. ಹೇಗೆ ಹೇಳಬೇಕು ಎನ್ನುವುದಕ್ಕಿಂತ ಏನನ್ನು ಹೇಳಬೇಕು ಎನ್ನುವುದು ಅವರನ್ನು ಕಾಡಿದೆ. ’ಎದೆಗೆ ಬಿದ್ದ ಅಕ್ಷರ’ ಕೃತಿಯ ಎಲ್ಲಾ ಬರಹಗಳಲ್ಲಿಯೂ ಈ ಗುಣವನ್ನು ಖಚಿತವಾಗಿಯೇ ಗುರುತಿಸಬಹುದು. ಇದರಿಂದ ಕೆಲವು ಕಡೆ ಸಲಹೆಯ ಕಡೆಗೆ ಇನ್ನು ಕೆಲವು ಕಡೆ ಉಪದೇಶದ ಕಡೆ ಇನ್ನೂ ಕೆಲವು ಕಡೆ ಘೋಷಣೆಯ ಕಡೆಗೂ ಅವರ ಬರಹಗಳು ವಾಲುತ್ತವೆ. ಆದರೆ ಇವು ಹೊರ ಸ್ವರೂಪಕ್ಕೆ ಸಂಬಂಧಿಸಿದ ಅಂಶಗಳೇ ಹೊರತು ಕ್ರಿಯಾಶೀಲತೆಯದಲ್ಲ. ಗಮನಿಸಲೇ ಬೇಕಾದ ಸಂಗತಿ ಎಂದರೆ ದೇವನೂರರ ಬರವಣಿಗೆಗೂ,  ಕ್ರಿಯಾಶೀಲತೆಗೂ,  ವೈಚಾರಿಕತೆಗೂ ದೊಡ್ಡ ಪ್ರಮಾಣದ ವ್ಯತ್ಯಾಸಗಳಿಲ್ಲ. ಅವರ ಬರಹಗಳಲ್ಲಿ ಕೂಡ ಕಾಣುವುದು ಚಳುವಳಿಗಾರನೇ. ದೇವನೂರರಲ್ಲಿ ಎಂದಿಗೂ ಸ್ವಕೀಯ ನೆಲೆಗಳು ಸಿಕ್ಕುವುದಿಲ್ಲ. ಅವರು ಗ್ರಹಿಸುತ್ತಿರುವುದೆಲ್ಲವೂ ಸಾಮಾಜಿಕ ನೆಲೆಯಲ್ಲಿಯೇ. ಗಾಂಧಿ, ಅಂಬೇಡ್ಕರರನ್ನು ಒಳಮನೆಯಲ್ಲಿಟ್ಟು ಬುದ್ದನನ್ನು ಹೊರಮನೆಯಲ್ಲಿ ಇಟ್ಟು ಸಮಕಾಲೀನ ಸಮಸ್ಯೆಗಳಿಗೆ ಎದುರಾಗುವಂತಹ ಮನಸ್ಥಿತಿ ಇಲ್ಲಿನದು. ಹೀಗಾಗಿ ಇಲ್ಲಿ ಒಳಗೆ-ಹೊರಗೆ, ಇತಿಹಾಸ-ವರ್ತಮಾನ, ವೈಚಾರಿಕತೆ-ಸಾಮಾಜಿಕತೆ ಎನ್ನುವ ದ್ವಂದ್ವಗಳಿಲ್ಲ. ದೇವನೂರರ ಬರಹಗಳು ಇಡೀ ಕರ್ನಾಟಕದ ’ಆತ್ಮಸಾಕ್ಷಿ’ಯಾಗಿ ಬಿಡುವುದು ಈ ಕಾರಣಕ್ಕೆ.

 

ಹಾಗೆ ನೋಡಿದರೆ ಇಂತಹದೊಂದು ಮನಸ್ಥಿತಿಯ ನೆಲೆ ’ಒಡಲಾಳ’ದಲ್ಲಿಯೇ ಕಾಣಿಸಿಕೊಳ್ಳುತ್ತದೆ. ಈ ಕಥಾನಕದ ಸ್ವರೂಪವೇ ನಮ್ಮ ಆತ್ಮಸಾಕ್ಷಿಗೆ ಸವಾಲನ್ನು ಎಸೆಯುವಂತಹದು. ಬೆಂಕಿಯ ಸುತ್ತ ಕುಳಿತು ಕಡಲೆಕಾಯಿ ತಿನ್ನುತ್ತಿರುವ ಕುಟುಂಬದ ಜಾಗದಲ್ಲಿ ಸಮಸ್ತ ಕರ್ನಾಟಕದ ಶೋಷಿತ ವರ್ಗವನ್ನು ಕಲ್ಪಿಸಿಕೊಂಡರೆ ಈ ಅಂಶ ಇನ್ನಷ್ಟು ಸ್ಪಷ್ಟವಾಗುತ್ತದೆ. ಗೌರಿ ಚಿತ್ರಿಸಿದ ನವಿಲು ಕುಣಿಯುವಾಗ, ಸಾಕವ್ವ ’ಮೂರನೇಕ್ಲಾಸ್’ ಶಿವೂಗೆ ಕಥೆ ಹೇಳುವಾಗ, ಪೋಲೀಸ್ ಕಾನ್ಸ್‌ಟೇಬಲ್ ರೇವಣ್ಣನನ್ನು ಕಂಡು ಹರಿಜನ ಹೆಂಗಸರು ನಗುವಾಗ ನಮ್ಮನ್ನು ಕಾಡುವುದು ಆತ್ಮಸಾಕ್ಷಿಯೇ. ಸಾಕವ್ವನ ಒಡಲಾಳದಲ್ಲಿ ದಲಿತ ಪ್ರಪಂಚದ ಒಡಲಾಳದ ಬೇನೆ ಮಡುಗಟ್ಟಿದೆ. ಬೆಳವಣಿಗೆಯನ್ನು ಕಳೆದು ಕೊಂಡ ರೋಗಿಷ್ಟ ಬಾಲಕ ’ದುಪಟಿ ಕಮೀಷನರ್’ ವ್ಯವಸ್ಥೆಯ ಪ್ರತಿಬಿಂಬವೇ ಆಗಿದ್ದಾನೆ. ಮೂರನೇ ಕ್ಲಾಸಿನ ಶಿವೂ ಕಣ್ಣಿಂದ ಸಾಕವ್ವನನ್ನು ದೇವನೂರರು ಚಿತ್ರಿಸುವುದರಿಂದ ಈ ಆತ್ಮಸಾಕ್ಷಿಯ ನೆಲೆಗೆ ಎಪಿಕ್‌ಟಚ್ ಸಿಕ್ಕಿದೆ. ದೈನಂದಿನ ಇಕ್ಕಟ್ಟಿನಲ್ಲೇ ಸಮುದಾಯದ ನೆಲೆ ಇಲ್ಲಿ ಮೂಡುತ್ತದೆ. ಜಗಳಗಂಟಿತನ, ಜಿಪುಣತನ, ಸಣ್ಣತನಗಳೆಲ್ಲವೂ ಇದರ ಬೇರೆ ಬೇರೆ ನೆಲೆಗಳಾಗಿಯೇ ಕಾಣಿಸಿಕೊಳ್ಳುತ್ತವೆ. ಯಮಧರ್ಮನ ಬಳಿ ಅವಳು ಕೇಳುವವರ ’ಅದ್ಕ ನಾನು, ನೋಡು ಸ್ವಾಮಿ.. ನನ್ನ ಮೊಮ್ಗೂಸು ನರಲೋಕದಲಿ ರಾಜ್ ಭಾರ ಮಾಡುವಂಥ ವರಕೊಡು ಅಷ್ಟು ಸಾಕು ಅಂತೀನಿ’. ಇದು ಆತ್ಮಸಾಕ್ಷಿಯ ಕರೆಗೆ ಸಮುದಾಯ ಒಲಿಯ ಬೇಕನ್ನುವ ಸ್ಪಷ್ಟ ಹಂಬಲವಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನಿರಾಕರಿಸುವ ಗಟ್ಟಿತನ ಅವರಿಗೆ ಲಭಿಸಿದ್ದೇ  ಇಂತಹ ನಿಖರ ಆತ್ಮಸಾಕ್ಷಿಯಿಂದ. ಅಧಿಕಾರ ಕೇಂದ್ರದಿಂದ ಸದಾ ದೂರ ನಿಂತು ಸಮುದಾಯವನ್ನು ಜಾಗೃತಗೊಳಿಸುವ ದೇವನೂರರ ಚಿಂತನೆಗಳ ಮೂಲ ಸೆಲೆಯನ್ನು ’ಒಡಲಾಳ’ದಲ್ಲಿಯೇ ಹೀಗೆ ಗುರುತಿಸಬಹುದು.

 

’ದ್ಯಾವನೂರು’ ಕಥೆಗಳಲ್ಲಿ ಆತ್ಮಸಾಕ್ಷಿ ವರ್ಣನೆಗಳ ಮೂಲಕ ಅಭಿವ್ಯಕ್ತಗೊಂಡರೆ ’ಒಡಲಾಳ’ದಲ್ಲಿ ಸಾಧ್ಯತೆಗಳ ಮೂಲಕ ಬೆಳವಣಿಗೆಯನ್ನು ಕಾಣುತ್ತದೆ. ಸಾಕವ್ವನಲ್ಲಿ ’ಇರುವು’ ಕಂಡರೆ ಪುಟ್ಟಗೌರಿಯಲ್ಲಿ ’ಮರೆವು’ ಮತ್ತು ಶಿವೂನ ವಿದ್ಯಾಭ್ಯಾಸದಲ್ಲಿ ’ಅರಿವು’ ಗೋಚರಿಸುತ್ತದೆ. ಇದರ ಜೊತೆಗೆ ಗುರುಸಿದ್ದೂನ ಪ್ರತಿಭಟನೆಯ ಹೊರಚಾಚಿನ ದಾರಿ ಕೂಡ ಇದೆ. ಇದು ’ಕುಸುಮ ಬಾಲೆ’ಯಲ್ಲಿ ಇನ್ನಷ್ಟು ದಟ್ಟವಾಗಿ ತನ್ನ ಬೆಳವಣಿಗೆಯನ್ನು ಕಂಡುಕೊಂಡಿದೆ. ಇದನ್ನು ದಲಿತ ಪುರಾಣವೆಂದು ಅನೇಕ ವಿಮರ್ಶಕರು ಈಗಾಗಲೇ ಗುರುತಿಸಿದ್ದಾರೆ. ಪುರಾಣವೆನ್ನುವಲ್ಲಿ ವಿರಾಟ್‌ ಕಥಾಬಂಧದ ಸಾಧ್ಯತೆಯ ಗ್ರಹಿಕೆ ಇದೆ. ’ಕುಸುಮ ಬಾಲೆ’ ಈ ಅರ್ಥದಲ್ಲಿ ಪುರಾಣ  ಅಲ್ಲವೇ ಅಲ್ಲ ಏಕೆಂದರೆ ಇಲ್ಲಿ ವಿವರಗಳು ದಟ್ಟವಾಗಿ ಬರುವುದಿರಲಿ ಭೂತ-ವರ್ತಮಾನದ ಕಾಲ ಚೌಕಟ್ಟು ಕೂಡ ಇದಕ್ಕೆ ಇಲ್ಲ. ಜೊತೆಗೆ ಇಲ್ಲೊಬ್ಬ ಅದೃಶ್ಯ, ಸರ್ವಂತರ್ಯಾಮಿ ನಿರೂಪಕನಿದ್ದಾನೆ. ಇದರ ಹೊರತು ಪಡಿಸಿ ನಿರೂಪಣೆ ಜೀವರಹಿತ ಮಾಧ್ಯಮಗಳ ಮೂಲಕವೂ ಕಥೆ ಮುಂದುವರೆಯುತ್ತದೆ. ಮಂಚವೊಂದು ಜೀವಾತ್ಮಕ್ಕೆ ಕಥೆ ಹೇಳುತ್ತದೆ. ಇದನ್ನು ಶಿಷ್ಟ ಮಾದರಿಯ ಪುರಾಣದ ನೆಲೆಯಲ್ಲಿ ನಿಲ್ಲಿಸುವುದು ಈ ಕಾರಣದಿಂದಲೇ ಅಸಾಧ್ಯ. ಎಲ್ಲೆಲ್ಲೂ ಹರಡಿ ಹೋಗಿರುವ ಕಥೆಯನ್ನು ಜೋಡಿಸಿಟ್ಟರೂ ದೊರಕುವುದು ’ಆತ್ಮಸಾಕ್ಷಿ’ಯ ಮಾತುಗಳೇ. ಇದನ್ನು ಈ ನೆಲೆಯಲ್ಲಿ ದಲಿತರ ’ಆತ್ಮಸಾಕ್ಷಿ’ಯ ದಾಖಲೆ ಎಂದು ಬೇಕಾದರೂ ಕರೆಯಬಹುದು. ಒಂದು ಜನಾಂಗದ ಅಭಿವ್ಯಕ್ತಿಯಾಗಿ ಅದರ ಎಲ್ಲಾ ನೆನಪುಗಳನ್ನು ಒಂದೇ ಕೇಂದ್ರದಲ್ಲಿ ದಾಖಲಿಸುವ ಪ್ರಯತ್ನ ಇಲ್ಲಿ ಕಾಣಿಸುತ್ತದೆ. ಹೀಗಾಗಿ ವ್ಯಕ್ತಿಗಳಿಂದ ವ್ಯಕ್ತಿಗಳ ನಡುವಿನ ವಿವರಗಳಲ್ಲಿ ಒಂದು ಮಾದರಿಯ ಸಲೀಸಾದ ಚಲನೆ ಇದೆ. ಎಲ್ಲಿಯೂ ಬಿರುಕು ಕಾಣಿಸುವುದಿಲ್ಲ. ಕುರಿಯಯ್ಯನ ನನ್ನಿಯಿಂದ ದಲಿತ ಸಂಘರ್ಷ ಸಮಿತಿಯ ಭಾಷಣದವರೆಗೆ ಇಲ್ಲಿ ಆತ್ಮಸಾಕ್ಷಿಯ ಮಾತುಗಳು ಬೇರೆ ಬೇರೆ ಸ್ವರೂಪದಲ್ಲಿ ಬಂದಿವೆ. ಹೀಗಿದ್ದರೂ ಅವೆಲ್ಲಕ್ಕೂಗಟ್ಟಿಯಾದ ಸಾವಯವ ಸಂಬಂಧವಿದೆ. ಕುಸುಮ ಬಾಲೆಯಲ್ಲಿ ’ಆತ್ಮಸಾಕ್ಷಿ’ ಎನ್ನುವ ಪರಿಕಲ್ಪನೆಯ ತಾತ್ವಿಕ ಚೌಕಟ್ಟನ್ನೇ ಮುರಿದು ದೇಹಭಾಷೆಗೂ ಅದನ್ನು ದೇವನೂರರು ತಂದು ನಿಲ್ಲಿಸಿರುವುದು ಇನ್ನೊಂದು ಕೌತುಕದ ಸಂಗತಿ. ಮೇಲು ಜಾತಿಗೆ ಸೇರಿದ ಮಧ್ವಾಚಾರ್ಯ, ಬಸಪ್ಪ, ಸೋಮಿ, ಸಿದ್ಧೂರ ಇವರಲ್ಲಿ ಈ ಬಗ್ಗೆ ಅಪಾರ ಅಸಹನೆ ವ್ಯಕ್ತವಾದರೂ ದಲಿತರು ಈ ಸಂಬಂಧಗಳಿಗೆ ಪ್ರತಿಕ್ರಿಯಿಸುವ ರೀತಿ ವಿಭಿನ್ನಾಗಿದೆ. ಇಲ್ಲಿನ ತೂರಮ್ಮ ತನ್ನ ಮಗಳ ಅನೈತಿಕ ಸಂಬಂಧದ ಅನಿವಾರ್ಯತೆಯನ್ನು ಅರ್ಥ ಮಾಡಿಕೊಂಡು ಬೆಂಬಲಿಸುತ್ತಾಳೆ. ಅಷ್ಟೇ ಅಲ್ಲ ಈ ಸಂಬಂಧದಿಂದ ಹುಟ್ಟಿದ ಮಗುವನ್ನು ರಕ್ಷಿಸುತ್ತಾಳೆ. ಚೆನ್ನ ಮತ್ತು ಕುಸುಮಬಾಲೆಯ ಸಂಬಂಧದ ಕುರಿತಾಗಿ ಜೋತಮ್ಮನವರ ಪ್ರತಿಕ್ರಿಯೆ ಕೂಡ ಇಂತಹದೇ. ಸ್ವತ: ಕುಸುಮಬಾಲೆಯ ಅಜ್ಜ ಯಾಡೇಗೌಡ ಕೂಡ ಇಂತಹ ಸಂಬಂಧದಿಂದಲೇ ಜನಿಸಿದವನು. ’ಕುಸುಮಬಾಲೆ’ಯಲ್ಲಿ ಕುರಿಮಯ್ಯ ಸಾವಿರಾರು ವರ್ಷಗಳ ಹಿಂದಿನ ಗಂಡು ಹೆಣ್ಣಿನ ನೆನಪುಗಳನ್ನು ಒಂದು ಕಾಣ್ಕೆ ಎನ್ನುವಂತೆ ವಿವರಿಸುತ್ತಾನೆ.
’ಅವರ ಒಳ್ಗ ಆಗುವುದರ ಆರ‍್ತಮಾನದ ಅರಿವು ಅವ್ರಿಗಿಯ ಅರಿವಾಗ್ತಾ ಇರಲ್ಲ. ಅದ್ರೂವ ಅವರ ರಗ್ತಕ?
ರಗ್ತಕ ತಲತಲಾಂತರದ ನೆಪ್ಪಿರ‍್ತದ.. ತಿಳ್ಕಳ್ರೀ..ಅವರು ಸುಮ್ನಿದ್ರೂ ಅವರ ರಗ್ತ  ಸುಮ್ನಿದ್ದುದಾ’

 

ನಾನು ’ಆತ್ಮಸಾಕ್ಷಿ’ ಎಂದು ಕರೆಯುತ್ತಿರುವುದು ಇದನ್ನೇ.

 

ದೇವನೂರರ ಮೇಲೆ ಪ್ರಭಾವವನ್ನು ಬೀರಿದ ಕುವೆಂಪು, ಗಾಂಧಿ, ರಾಮ ಮನೋಹರ ಲೋಹಿಯಾ ಅವರುಗಳು ಕೂಡ ’ಆತ್ಮಸಾಕ್ಷಿ’ಯ ಪರಿಕಲ್ಪನೆಯನ್ನು ಬಳಸಿಕೊಂಡವರೇ. ಆದರೆ ಅವರೆಲ್ಲರೂ  ಅದರ ಅಧ್ಯಾತ್ಮಿಕ, ವೈಚಾರಿಕ ನೆಲೆಗಳಿಗೆ ಗಮನ ನೀಡುತ್ತಾರೆ. ದೇವನೂರರಿಗೆ ಮುಖ್ಯವಾಗುವುದು ಸಾಮಾಜಿಕ ನೆಲೆಗಟ್ಟು. ಇಲ್ಲಿ ಕೂಡ ಕುವೆಂಪು ಸಾಕಷ್ಟು ಪ್ರಮಾಣದ ಸಾಹಿತ್ಯವನ್ನು ಅದರಲ್ಲೂ ಮಹಾಕಾವ್ಯ, ಕಾದಂಬರಿಯಿಂದ ಹಿಡಿದು ವೈಚಾರಿಕ ಬರವಣಿಗೆಯವರೆಗೂ ಎಲ್ಲವನ್ನೂ ಅಭಿವ್ಯಕ್ತಿಸಿದ್ದರಿಂದ ಪರಿಕಲ್ಪನೆ ಸ್ಪಷ್ಟವಾಗಿದೆ. ಆದರೆ ಅವರೆಂದೂ ಚಳುವಳಿಗಳಲ್ಲಿ ಗುರುತಿಸಿಕೊಂಡವರಲ್ಲ. ಗಾಂಧಿ ಮತ್ತು ಲೋಹಿಯಾ ವಿಭಿನ್ನ ಘಟ್ಟದ ರಾಜಕೀಯದಲ್ಲಿ ನಾಯಕತ್ವ ವಹಿಸಿಕೊಂಡವರು. ಅವರ ಬರಹಗಳೆಲ್ಲವೂ ಈ ಹೋರಟದ ಅಂಗವಾಗಿಯೇ ಬಂದಂತವು. ಈ ಬಹಿರಂಗ ಮತ್ತು ಅಂತರಂಗದ ಲಿಂಕ್ ಆಗಿ ದೇವನೂರ ಮಹಾದೇವ ಅವರ ಬದುಕು ಮತ್ತು ಬರಹಗಳನ್ನು ಗುರುತಿಸಬಹುದು. ಕಳೆದ ನಾಲ್ಕು ದಶಕಗಳಲ್ಲಿ ದಲಿತ ಚಳುವಳಿಯ ಪ್ರತ್ಯೇಕತೆ ಅಳಿಯುತ್ತಾ ಸಾಮಾಜಿಕ ಚಳುವಳಿಯ ವಿಸ್ತಾರದಲ್ಲಿ ಸೇರಿ ಹೋಗುತ್ತಿದೆ. ಆರಂಭದ ಆಕ್ರೋಶ ಹೀಗೆ ದೇವನೂರರು ಪ್ರತಿಪಾದಿಸುತ್ತಾ ಬಂದ ’ಆತ್ಮಸಾಕ್ಷಿ’ಯ ಕಡೆಗೆ ತಿರುಗುತ್ತಿದೆ. ದಲಿತರು ತಮ್ಮ ಪ್ರತ್ಯೇಕತೆಯನ್ನು ಉಳಿಸಿಕೊಂಡು ಬರಬೇಕೋ ಅಥವಾ ಇತರ ಜನಾಂಗದೊಡನೆ ಸಂಬಂಧ ಇಟ್ಕೊಂಡು ಬಾಳಬೇಕೋ ಎನ್ನುವ ತಾತ್ವಿಕ ಪ್ರಶ್ನೆ ದೇವನೂರರನ್ನು ನಿರಂತರವಾಗಿ ಕಾಡುತ್ತಲೇ ಬಂದಿದೆ. ಸುಧಾರಣಾವಾದಿ ಚಳುವಳಿಗಳು ನಿರ್ಮಿಸುವ ಡಯಲೆಕ್ಟಿಕ್ ಆದ ಮಾದರಿಯ ಸಂಕೀರ್ಣತೆಯನ್ನು ಗ್ರಹಿಸಿದಾಗ ಮಾತ್ರ ನಮಗೆ ಸಮಗ್ರತೆಯ ಚಿತ್ರಣ ದೊರಕುವುದು ಸಾಧ್ಯ. ದೇವನೂರರ ಚಿಂತನೆಗಳನ್ನೂ ಇದೇ ನೆಲೆಯಲ್ಲಿಯೇ ನೋಡಬಹುದು.

 

ಇದರ ಜೊತೆಗೆ ದೇವನೂರರ ಕುರಿತು ಗಮನಿಸಲೇ ಬೇಕಾದ ಸಂಗತಿ ಅವರ ಬರಹದಲ್ಲಿನ ತುಂಟತನ ಮತ್ತು ಹಾಸ್ಯ ಪ್ರಜ್ಞೆ. ಸರ್ವೋದಯ ಕರ್ನಾಟಕದ ಕುರಿತ ಚಿಂತನೆಗಳನ್ನು ಅವರು ಆದರ್ಶ, ವಿಷಾದ, ಪ್ರಯೋಗದ ಸೀಮಿತತೆ ಹೀಗೆ ಹಲವು ವೈಚಾರಿಕ ಮಾದರಿಗಳ ಮೂಲಕ ಹೇಳುವಾಗಲೂ ತಿಳಿಹಾಸ್ಯದ ಮೂಲಕ ಮನವನ್ನು ಮುಟ್ಟುತ್ತಾರೆ. ಇದು ವೈಚಾರಿಕ ಬರಹವನ್ನು ಓದುವ ಕ್ರಮದಲ್ಲಿ ನಿಲ್ಲದೆ ನಮ್ಮ ’ಆತ್ಮಸಾಕ್ಷಿ’ಯನ್ನು ಕೆಣಕುತ್ತದೆ. ’ರಾಜಕೀಯ ಆಟದ ಮೈದಾನದಲ್ಲಿ ಒಳನುಗ್ಗಿ ಆಡಲು ಧೈರ‍್ಯವಿಲ್ಲದೆ, ಹೊರ ಹೋಗಲೂ ಮನಸ್ಸಿಲ್ಲದೆ, ಆಡುವ ಆಟಗಾರರಿಗೆ ಚಂಡನ್ನು ಎತ್ತಿಕೊಡುವ ಹುಡುಗರಂತೆ ನಮ್ಮ ಸ್ಥಿತಿಯಾಗಿತ್ತು’ ಎನ್ನುವ ಮಾತು ಎಲ್ಲ ಕನ್ನಡಿಗರ ವಿಷಾದ ಮತ್ತು ಅಸಹಾಯಕತೆಯನ್ನು ಬಿಂಬಿಸುತ್ತದೆ. ದೇವನೂರು ಮಹಾದೇವ ಅವರು ’ಕನ್ನಡಿಗರ ಆತ್ಮಸಾಕ್ಷಿ’ಯಾಗುವುದು ಈ ಕಾರಣದಿಂದಲೇ.