ಊರ ನುಡಿ ಜೀವಂತ   -ಅಪೂರ್ವ ಡಿ’ಸಿಲ್ವ

[ದೇವನೂರ ಮಹಾದೇವ ಅವರ ಕುರಿತು, ಲೇಖಕರಾದ ಅಪೂರ್ವ ಡಿ’ಸಿಲ್ವಾ ಅವರು ಬರೆದ ಒಂದು ಕವಿತೆ… ಊರ ನುಡಿ ಜೀವಂತ] 
ನನ್ನೂರ ಜನಪದರ
ನುಡಿಗಟ್ಟಿಗೆ ಸಾಹಿತ್ಯದ ಗಂಧ
ಈ ಮಣ್ಣ ಗಂಧ
ನನ್ನ ಪಾತ್ರೆ ಅಂಗಡಿಯ
ಮೊಗಸಾಲೆಯಲ್ಲೆ ಪಸರಿಸಿ
ಅಜ್ಜಿಯ ಸುಕ್ಕಲ್ಲಿ,ಹಳೆ ಸೆರಗ
ಘಮಲಲ್ಲಿ ಒಡಲಾಳದ ಸಾಕವ್ವನ
ಕಂಡಿದ್ದರೆ ಅಚ್ಚರಿ ಇಲ್ಲ..
ಬೆಟ್ಟದ ಮ್ಯಾಲ ಮಾದೇವಂಗೂ
ದ್ಯಾವನೂರಿನ ನರಬಂಡಾಯಕ್ಕೂ
ಸಾಮ್ಯತೆ ಇಲ್ಲ!ಸಾಮ್ಯತೆ ಕಂಡಿದ್ದಾದರೂ
ಮತ್ತೆ ಅದೇ ಬೆಟ್ಟದ ಮಾದೇವನ ಭಕ್ತರ
ಮಾತುಗಳ ಮೋಡಿಯಲ್ಲಿ ;ಅದು
ರೂಪತಳೆದು ಬಹುರೂಪವಾಗುವ ಕುಸುಮಬಾಲೆಯಲ್ಲಿ..
ಅಪ್ಪ ಎಳೆಯ ನನ್ನನ್ನು ಗಾಂಧಿ
ನಡಿಗೆಯಲ್ಲೆ ಎಳೆದು ತೋರಿದ್ದು
ಗಾಂಧಿ ಚಿತ್ರವನ್ನ;ಆಮೇಲೆ ಗಾಂಧಿ
ಜೀವ ತಳೆದದ್ದು “ಗಾಂಧಿ ಚಿತ್ರ ನೋಡಿದೆ
ಆಕಾಶಕ್ಕೆ ಮೂರೇ ಗೇಣು” ಎಂಬ
ಪದಗಳಲ್ಲ ಅಂತರಂಗದ ಜ್ಯೋತಿಯಲ್ಲಿ!
ಬೆಸೆದದ್ದು ಕೇವಲ ಗಾಂಧಿ -ಅಂಬೇಡ್ಕರರನ್ನಲ್ಲ
ಗಂಡಭೇರುಂಡದ ಒಂದೇ ದೇಹವನ್ನು!
ನನಗಂತು ಇರುವ ಒಂದೇ ವಿಮರ್ಶೆಯೆಂದರೆ
ಕುವೆಂಪು ತಾತನ ಹಸಿರ ಮಡಿಲು
ದ್ಯಾಮ ಮಾಮನಲ್ಲಿ ಎರಡೇ ಮರದಲ್ಲಿ
ಮುಗಿದು ಬಿಡುತ್ತಲ್ಲಾ ಎಂದು..
ಆಗ ಮಾದೇವ ನೋ ಮೈಂಡ್ ಬುದ್ದನೊಳಗೆ,
ಮನೆಮಂಚಮ್ಮನ ಕತಾ ಯೋಳುವ
ಮುಂಚೆ ಪುಟ್ಟಗಿಡಕ್ಕೆ ನೀರೆರೆದು ಉದ್ಗಾಟಿಸಿಬಿಡುವರು..
ಅಪ್ಪ ಆಗ ಸೈಕಲ್ ಕ್ಯಾರಿಯರ್ ಮೇಲೆ
ಧರೆಗೆ  ದೊಡ್ಡವರ ಕೂರಿಸಿ ದ‌ಸಂಸದ
ಭಾಷಣಗಳಿಗೆ ಹಳ್ಳಿ ಒಡಲಿಗೆ ಹೋಗುವಾಗಿನ
ರೂಪಕವ ಹೇಳುವಾಗ ಅಮಾಸ ದಿಗ್ಗನೆ
ಎದ್ದು ಕತ್ತಲೆಯೇ ಅಲುಗುವಂಥ ರೂಪಕವ
ನನ್ನೊಳಗೂ ಬಿತ್ತಿ ಗಿಡವಾಗಿಸಿದ ಥರವ
ನಾ ಏನೆಂದು ಬಣ್ಣಿಸಲಿ
ಈಗ ಸ್ವರಾಜ್ ಇಂಡಿಯಾದೊಳಗೆ
ಭಾರತ್ ಜೋಡೋಗೆ ಇಳಿವಯಸ್ಸಿನ
ತಡವರಿಸುವ ಮಾತುಗಳಲ್ಲಿ
‘ಸರ್ವಾಧಿಕಾರವ ವಿರೋಧಿಸುವವರು ಕೈ ಎತ್ತಿ’
ಎಂದು ಕಾಲೇಜು ಐಕ್ಲಿಗೆ ಹೇಳುವಾಗ
ಆ ನಂಜಿನ ಆಳ ಅಗಲವ ಅಕ್ಷರದಲ್ಲಿ
ಕಟ್ಟಿ ಇಡುವಾಗ ಕನ್ನಡಮ್ಮನ ಸೂಲು
ನನ್ನೊಳಗೂ ಮೂಡಿದ್ದು ಸುಳ್ಳಲ್ಲ
ಬಂದಿತ್ತು ದಿನ ಬುದ್ದ ಧ್ಯಾನಕೇಂದ್ರದಲ್ಲಿ
ಈ ಕವಿತೆ ಬರೆಯುತ್ತಿರುವ ಜೀವ
ಅಂತರ್ ಧರ್ಮಿಯ ವಿವಾಹದಲ್ಲಿ
ಅರ್ಧನಾರೀಶ್ವರನಾಗಿ ಮಂತ್ರಮಾಂಗಲ್ಯವ
ಪಠಿಸುವಾಗ,ಜೊತೆಗಿದ್ದೇನೆ ಎಂದು ಹೇಳಲು
ಬಂದ ತಂದೆ ,ಮಗಳು ಮಿತಾ,
ಅಲ್ಲಿ  ಜೋಡಿಯಾಗಿ ನಾನು
ಅರ್ಧಾಂಗಿ ಮಂಜುಳ ಭೂಮಿ ಆಕಾಶಗಳ
ಸಾಕ್ಷಿಯಾಗಿ ಪ್ರೀತಿಯೊಂದೆ ಧರ್ಮ ಎಂದು
ಹೇಳುವ ನುಡಿಗಟ್ಟಿಗೆ ಸದಾ ಸಾಕ್ಷಿಯಾಗಿರುವ
ಆ ಪರಂಜ್ಯೋತಿಯ ಬೆಳಕಿಗೆ
ಶರಣು ಶರಣಾರ್ಥಿ..