ಹಾಸನ ರೈಲ್ವೆ ಸ್ಟೇಷನ್ 1956-ಪ್ರೊ.ಕೆ.ಸುಮಿತ್ರಾಬಾಯಿ

[ಪ್ರೊ.ಕೆ.ಸುಮಿತ್ರಾಬಾಯಿಯವರು ಬರೆದಿರುವ ಬಾಳ ಕಥನ “ಸೂಲಾಡಿ ಬಂದೋ ತಿರುತಿರುಗಿ” ಮೈಸೂರಿನ ಅಭಿರುಚಿ ಪ್ರಕಾಶನದಿಂದ 2018ರಲ್ಲಿ ಪ್ರಕಟಗೊಂಡಿದ್ದು, ಅದರ ಒಂದು ಭಾಗ ಹಾಸನದ ಅವರ ಬಾಲ್ಯದ ನೆನಪುಗಳಿಗೆ ಸಂಬಂಧಿಸಿದ್ದು, ಅದು 22.6.2018ರ ಜನತಾಮಾಧ್ಯಮ ಪತ್ರಿಕೆಯಲ್ಲಿ ಪ್ರಕಟವಾಗಿದ್ದು…. ನಮ್ಮ ಓದಿಗಾಗಿ ಇಲ್ಲಿದೆ]

ನನಗೆ ವಿವಿಧ ಪ್ರದೇಶಗಳ ಜನಗಳ ಉಡುಗೆ ತೊಡುಗೆಗಳನ್ನು ಕನ್ನಡ ಭಾಷೆಯ ಪ್ರಾದೇಶಿಕ ಸೊಗಡನ್ನು ಆಲಿಸುವ ಪ್ರವೃತ್ತಿ ಶುರುವಾಗಿದ್ದು 1956ರಲ್ಲಿ ಆಗ ನಾನು 6ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದೆ. ಬೇಸಿಗೆಯ ರಜೆಗೆ ಅಪ್ಪನ ಜೊತೆ ಹಾಸನಕ್ಕೆ ಹೋಗಿದ್ದೆ. ಅಲ್ಲಿ ಅಪ್ಪ ರೈಲ್ವೆ ಸ್ಟೇಷನ್ ಮಾಸ್ಟರ್. ಅವರೊಬ್ಬರೇ ಕ್ವಾಟ್ರಸ್‍ನಲ್ಲಿದ್ದರು.

ಈ ಊರಿಗೆ ಹೋದ ಮರುದಿನ ಬೆಳಗ್ಗೆ ನಾವಿದ್ದ ಮನೆಯ ಮುಂದೆ ಹೆಂಗಸರು ಮಕ್ಕಳ ಗಲಾಟೆ ಕೇಳಿಸಿ ಕುತೂಹಲದಿಂದ ಬಾಗಿಲನ್ನು ತೆಗೆದು ಹೊರಬಂದು ನೋಡಿದರೆ, ಒಂದಿಷ್ಟು ಜನ ಹೆಂಗಸರು, ಗಂಡಸರು ಸಾಲಾಗಿ ತಂತಮ್ಮ ಮಕ್ಕಳನ್ನು ತಮ್ಮ ಹೆಗಲ ಮೇಲೆ ಹೊತ್ತು ನಿಂತಿದ್ದರು. ಜನರನ್ನು ಹೊತ್ತ ರೈಲು ಗಾಡಿ ಶಿಳ್ಳೆ ಹಾಕುತ್ತಾ ಕಂಬಿಗಳ ಮೇಲೆ ಉರುಳುತ್ತಾ ಬಂದಾಗ ಮತ್ತು ಹೋಗುವಾಗ ಅವರೆಲ್ಲ ಕೇಕೆ ಹಾಕ್ಕೊಂಡು ನೋಡುತ್ತಿದ್ದರು. ಮರುದಿನವೂ ಇದೇ ಬಗೆಯಲ್ಲಿ ಅವರು ರೈಲು ನೋಡಲು ಬಂದು ನಿಂತಿರುವುದನ್ನು ಕಂಡೆ. ಅವರು ನಾ ಕಂಡಿರುವ ಯಾವುದೇ ಪಟ್ಟಣ ಅಥವಾ ಹಳ್ಳಿಯವರಂತೆ ಇರಲಿಲ್ಲ. ಹೆಂಗಸರು ತಲೆ ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಿ ನುಣ್ಣಗೆ ಬಾಚಿ ಕಿವಿಯ ಹತ್ತಿರಕ್ಕೆ ಕೂದಲನ್ನು ತಂದು ಗಂಟು ಹಾಕಿ ತುರುಬು ಕಟ್ಟಿದ್ದರು. ಬೆಳಗಿನ ಬಿಸಿಲಿಗೆ ಅವರ ತಲೆ ಮಿರಮಿರನೆ ಮಿಂಚುತ್ತಿತ್ತು. ಸೀರೆಯ ಸೆರಗನ್ನು ಎರಡೂ ಭುಜಗಳ ಕೆಳಗೆ ಮುಂದೆಯಿಂದ ತಂದು ಬೆನ್ನಿನ ಮೇಲೆತ್ತಿ ಬಲಭುಜದ ಕಡೆ ಸೆರಗಿನ ತುದಿಯನ್ನು ಮುಂದಿನಿಂದ ಸೀರೆಯ ಅಂಚನ್ನೆತ್ತಿ ಗಂಟು ಹಾಕಿದ್ದರು. ಅವರು ರವಿಕೆಯನ್ನೇ ತೊಟ್ಟಿರಲಿಲ್ಲ! ಕುತ್ತಿಗೆಗೆ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಕಲರ್-ಕಲರ್ ಮಣಿಗಳ ಸರಗಳನ್ನು ಧರಿಸಿದ್ದರು. ಕೈಗೆ ಕಡಗದ ರೀತಿಯಿರುವ ಬಿಳಿ ಲೋಹದ ಬಳೆಗಳನ್ನು ತೊಟ್ಟಿದ್ದರು. ಕಿವಿಗೆ ಮೂಗಿಗೆ ಮುರಾವ್ಲು, ಹತ್ತಕಡಕಿನಂತಿದ್ದ ಒಡವೆಗಳನ್ನು ಹಾಕ್ಕೊಂಡಿದ್ದರು. ಬಂದಿದ್ದ ರೈಲು ನಿರ್ಗಮಿಸಿದ ಮೇಲೆ ಆ ಜನರೂ ನಿಂತಿದ್ದ ಸಾಲಿನಿಂದ ಚೆದುರಿ ಗುಂಪಾಗಿ ನಿರ್ಗಮಿಸುತ್ತಿದ್ದರು.

ಅವರು ಸಿನಿಮಾ ನೋಡಲು ಬಂದವರಂತೆ ಸಜ್ಜಾಗಿ ಬಂದು ಆಶ್ಚರ್ಯದಿಂದ ರೈಲು ನೋಡಲು ಕಾರಣವೇನೆಂದು ಹೊಳೆಯಲಿಲ್ಲ. ಅಪ್ಪ ಡ್ಯೂಟಿಯಿಂದ ಬಂದ ಕೂಡ್ಲೆ ಪ್ರಶ್ನೆಗಳ ಸುರಿಮಳೆಗೆರೆದೆ. ಅವರು ಹಾಲಕ್ಕಿಗೌಡರೆಂದೂ ತುಂಬಾ ಹಿಂದುಳಿದರಾದ ಅವರಿಗೆ ಪಟ್ಟಣದ ನಾಗರೀಕತೆಯು ತಿಳಿಯದೆಂದೂ ದಟ್ಟ ಕಾಡುಗಳಲ್ಲಿ ವಾಸ ಮಾಡ್ತಾರೆ ಎಂದು ಅಪ್ಪ ತಿಳಿಸಿದರು. ನಮ್ಮೂರ ಹತ್ತಿರದ ಹಳ್ಳಿಯವರಿಗಿಂತಲೂ ಅತ್ತತ್ತಲಾಗಿರುವವರೂ ಇದ್ದಾರೆ ಅನ್ನಿಸಿತು. ಆದರೂ ನನ್ನನ್ನು ಅವರು ಧರಿಸಿದ್ದ ಉಡುಗೆ ತೊಡುಗೆಗಳು, ಅವರಾಡುತ್ತಿದ್ದ ಮಾತುಗಳು ಹಾಗೂ ಅವರು ಕುಣಿದು ಕುಪ್ಪಳಿಸುತ್ತಿದ್ದ ರೀತಿ ಹೆಚ್ಚು ಆಕರ್ಷಿಸಿತ್ತು.

ಜೊತೆಗೆ ಹಾಸನ ಎಂದಕೂಡಲೆ ದನಗಳ ಜಾತ್ರೆ ನನ್ನ ಕಣ್ಮುಂದೆ ತೇಲಿದಂತಾಗಿ ಮನಸ್ಸು ಹಿಂದಕ್ಕೆ ಚಲಿಸಿ ನಿಧಾನಕ್ಕೆ ದನಗಳ ಜಾತ್ರೆಯನ್ನು ಈಗಲೂ ಸುತ್ತು ಹಾಕುವೆನು. ಅದುವರೆಗೆ ಎಂದೂ ನಾನು ಅಷ್ಟು ದೊಡ್ಡ ದನಗಳ ಜಾತ್ರೆಯನ್ನು ಕಂಡಿರಲಿಲ್ಲ. ಆ ರಾಸುಗಳ ಸೌಂದರ್ಯವನ್ನು ಎಷ್ಟು ಬಣ್ಣಿಸಿದರೂ ಸಾಲದು. ಒಂದು ವಾರಕಾಲ ನಾವಿದ್ದ ಮನೆಯ ಪಕ್ಕದಲ್ಲೆ ವಿವಿಧ ತಳಿಗಳ ಹಸು, ಕಡಸು, ಹೋರಿಗಳು, ಎತ್ತುಗಳನ್ನು ಕಟ್ಟಿದ್ದರು. ಬೆಳಗ್ಗೆಯಿಂದ ಸಂಜೆಯವರೆಗೆ ಈ ರಾಸುಗಳ ಅವಲೋಕನ ನನ್ನ ನಿತ್ಯದ ಕಾಯಕವಾಯಿತು. ಒಂದು ಜೊತೆ ಎತ್ತುಗಳ ರೂಪ ಇಂದಿಗೂ ನನ್ನ ಕಣ್ಣೊಳಗೆ ಉಳಿದಿದೆ. ಅಂತಹ ಜೋಡೆತ್ತುಗಳನ್ನು ಇದುವರೆಗೂ ನಾನು ನೋಡೇ ಇಲ್ಲ. ರೂಪಾಯಿ ಬಣ್ಣದ ಆ ಜೋಡಿ ಎತ್ತುಗಳು ದೂರಕ್ಕೆ ಮರಿಯಾನೆಗಳೇನೊ ಎಂಬಂತೆ ಇದ್ದವು. ಜಾತ್ರೆಗೆ ಬಂದವರೆಲ್ಲರೂ ಈ ಜೋಡಿಯನ್ನು ನೋಡಲು ಗುಂಪುಗುಂಪಾಗಿ ಬಂದು ನಿಲ್ಲುತ್ತಿದ್ದರು. ಜಾತ್ರೆ ಮುಗಿಯುವ ಹೊತ್ತಿಗೆ ಬಂದಿದ್ದ ರಾಸುಗಳು ಮುಕ್ಕಾಲು ಪಾಲು ಮಾರಾಟವಾಗಿಹೋಗಿದ್ದವು. ಆದರೆ ಈ ಮನ ಸೆಳೆಯುವ ಜೋಡಿಯನ್ನು ಯಾರೂ ಕೊಳ್ಳಲಿಲ್ಲ! ಬಹುಶಃ ಇವುಗಳ ಬೆಲೆ ತುಂಬಾ ಇರಬಹುದೆಂದು ಅಂದಾಜಿಸಿ, ಅಪ್ಪನನ್ನು ಅವುಗಳ ಬೆಲೆ ಕೇಳಿದೆ. ಒಂದು ಕಟ್ಟೆ ನೋಟಂತೆ (100/-) ಎಂದರು. ಆಮೇಲೆ ಅವುಗಳನ್ನೆಲ್ಲಿ ಸಾಕಲು ಸಾಧ್ಯ, ಅವುಗಳಿಂದ ಗದ್ದೆ ಉಳುಮೆ ಮಾಡಿಸಲು ಮನಸ್ಸಾಗುವುದಿಲ್ಲ, ಅದ್ಕೇ ಜನ ಹಿಂದೇಟಾಕ್ತಾರೆ ಎಂದರು. ಆ ಜೋಡಿಗೆ ಒಂದು ನೂರು ರೂಪಾಯಿ ಯಾವ ರೀತಿಯಲ್ಲೂ ಸಾಟಿಯೇ ಅಲ್ಲ ಎಂದು ನನಗನ್ನಿಸಿತು. ಮಾರನೆಯ ದಿನ ಮಧ್ಯಾಹ್ನ ಕಿಟಕಿಯಿಂದ ಇಣುಕಿ ನೋಡಿದೆ- ಅವುಗಳಿದ್ದ ಜಾಗ ಖಾಲಿಯಾಗಿತ್ತು. ಯಾರೋ ಕೊಂಡಿರಬೇಕೆಂದು ಊಹಿಸಿದೆ. ಆಮೇಲೆ ಆ ಜಾತ್ರೆ ಕಳೆಯೇ ಮಂಗಮಾಯವಾಗಿಬಿಟ್ಟಿತು!