‘ಒಡಲಾಳ’ ದಲಿತ ಬದುಕಿನ ಸಾಂಸ್ಕೃತಿಕ ದಾಖಲೆ – ಸದಾಶಿವ ಎಣ್ಣೆಹೊಳೆ

[ಸದಾಶಿವ ಎಣ್ಣೆಹೊಳೆಯವರು ‘ಒಡಲಾಳ’ ಕೃತಿಯ ಕುರಿತು ಬರೆದ ವಿಮರ್ಶೆ ಪ್ರೊ.ಅರವಿಂದ ಮಾಲಗತ್ತಿಯವರು ಕರ್ನಾಟಕ ಸಾಹಿತ್ಯಅಕಾಡೆಮಿ : ಸಾಹಿತ್ಯ ವಿಮರ್ಶೆ– 1985 ಕ್ಕಾಗಿ ಸಂಕಲಿಸಿರುವ ಕೃತಿಯಲ್ಲಿದೆ. ]
sadashiva

 

‘ದ್ಯಾವನೂರು’ ಕಥಾ ಸಂಕಲನದ ಮೂಲಕ ಸಣ್ಣಕಥಾ ಕ್ಷೇತ್ರಕ್ಕೆ ಹೊಸ ಆಯಾಮವನ್ನು ತಂದುಕೊಟ್ಟು ಸಾಹಿತ್ಯಾಸಕ್ತರೆಲ್ಲರೂ ಕಣ್ಣರಳಿಸುವಂತೆ ಮಾಡಿದ ಬರೆಹಗಾರ ಶ್ರೀ ದೇವನೂರ ಮಹಾದೇವ. ಪ್ರಕಟಿಸಿದ ಒಂದೇ ಕೃತಿಯಿಂದ ಹೀಗೆ ಜನಮನವನ್ನು ಸೂರೆಗೊಂಡು ದಿನವೊಪ್ಪತ್ತಿನಲ್ಲಿ ಸಮರ್ಥ ಬರಹಗಾರ ಎನ್ನಿಸಿಕೊಂಡ ಸಾಹಿತಿಗಳು ಕನ್ನಡದಲ್ಲಿ ಬಹಳ ವಿರಳ. ಇಚಿಥ ಅಪರೂಪದ ಸಾಲಿಗೆ ಸೇರಿದವರು ಶ್ರೀ ದೇವನೂರ ಮಹಾದೇವ. ಅದುವರೆಗೆ ಶೂದ್ರಾತಿ ಶೂದ್ರರೆನಿಸಿಕೊಂಡ ದಲಿತರ ಬದುಕು-ಬವಣೆಗಳನ್ನು ಇಷ್ಟು ಸಮರ್ಪಕವಾಗಿ ಅಭಿವ್ಯಕ್ತಿಸಿದ ಉದಾಹರಣೆ ಮತ್ತೊಂದಿರಲಿಲ್ಲ. ಈ ಹಿಂದೆ ಇಂಥ ಪ್ರಯತ್ನಗಳು ನಡೆದಿದ್ದಾಗ್ಯೂ ಅವೆಲ್ಲ ಕೇವಲ ಸಹಾನುಭೂತಿ ಪರವಾದ ಅನುಕಂಪದಿಂದ ಕೂಡಿದ, ಮೇಲ್ನೋಟದ ಬರಹಗಳಾಗಿದ್ದವೇ ಹೊರತು ಅಂತರಂಗದ ಶೋಧನೆ ಅಥವಾ ಆತ್ಮಕಥನಗಳಾಗಿರಲಿಲ್ಲ. ಅದು ಒಬ್ಬ ಶಕ್ತ ದಲಿತ ಬರಹಗಾರನಿಂದ ಮಾತ್ರವೇ ಸಾಧ್ಯವಿದ್ದ ಸಂದರ್ಭದಲ್ಲಿ ಆ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಮಹಾದೇವ ಅವರದು. ದಲಿತರಾಗಿ ಹುಟ್ಟಿ, ದಲಿತರ ಸಂಕಟ ಬೇನೆಗಳನ್ನು ತುಂಬ ಹತ್ತಿರದಿಂದ ಬಲ್ಲವರಾಗಿದ್ದ ಮಹಾದೇವ ಅವರು, ಅವರ ಬದುಕಿನ ಕಠೋರ ಸತ್ಯವನ್ನು ತುಂಬ ಸಮರ್ಥವಾಗಿ ಅನಾವರಣ ಮಾಡಿದರು.

 

‘ದ್ಯಾವನೂರು’ ಸಂಕಲನದ ನಂತರ ಮೂಡಿ ಬಂದದ್ದು ‘ಒಡಲಾಳ’ ಕಿರುಕಾದಂಬರಿ ಅಥವಾ ನೀಳ್ಗತೆ. ಇದು ಪ್ರಾರಂಭಕ್ಕೆ ಜನಪ್ರಿಯ ದೈನಿಕವೊಂದರ ವಿಶೇಷಾಂಕದಲ್ಲಿ ಪ್ರಕಟಗೊಂಡ, ನಂತರ ಪುಸ್ತಕ ರೂಪದಲ್ಲಿ ಪ್ರಕಾಶಕ್ಕೆ ಬಂತು.ಇದು ದಲಿತ ಕುಟುಂಬವೊಂದರ ಬದುಕಿನ ಕಥೆ ಹಾಗೂ ವ್ಯಥೆ ಕೂಡ.

 

ದೇವರಿಗೆ ಬಿಟ್ಟ ಹುಂಜದ ಕಳುವಿನೊಂದಿಗೆ ಪ್ರಾರಂಭವಾಗುವ ಇಲ್ಲಿನಕಥೆ ಮತ್ತೊಂದು ಹುಂಜವನ್ನು ಕಳೆದುಕೊಳ್ಳುವುದರೊಂದಿಗೆ ಮುಕ್ತಾಯವಾಗುತ್ತದೆ. ‘ಒಡಲಾಳ’ದ ಕೇಂದ್ರ ವ್ಯಕ್ತಿ ಸಾಕವ್ವ ಜೀವನದ ಸಂಧ್ಯಾ ಸಮಯದಲ್ಲಿ ನಿಂತಿರುವವಳು. ಹುಂಜದ ಕಳುವು ಆಕೆಗೆ ಒಂದು ಸಣ್ಣ ಸಂಗತಿಯಲ್ಲ. ಅದೂ ದೇವರಿಗೆಂದು ಬಿಟ್ಟ ಹುಂಜವಾದ್ದರಿಂದ ಸಾಕವ್ವ ತನ್ನ ಜೀವನಕ್ಕೆ ಆಘಾತವಾದಂತೆ ಚಡಪಡಿಸುತ್ತಾಳೆ : “ನನ್ನ ಕೋಳಿ ತಿಂದವರ ಮನೆ ಮಣ್ಣಾಗ್ಲೊ” ಎಂದು ನಟಿಕೆ ಮುರಿದು ಶಪಿಸುವಲ್ಲಿ ಅವಳ ಅಂತರಂಗದ ತೀವ್ರವಾದ ನೋವು ಅಭಿವ್ಯಕ್ತವಾಗುತ್ತದೆ. ಕುಟುಂಬದ ಮಿಕ್ಕವರು ತನ್ನ ಸಂಕಟದಲ್ಲಿ ಪಾಲ್ಗೊಳ್ಳುವ ಬದಲು ನಿರ್ಲಿಪ್ತರಾಗಿರುವುದನ್ನು ಕಂಡು ಆಕೆಗೆ ಸಿಟ್ಟು. ತನ್ನ ಮಗ ಸಣ್ಣಯ್ಯನ ಮಾತೊಂದರಿಂದ ಕ್ರುದ್ಧಳಾದ ಸಾಕವ್ವ ಈ ಗುಡಿಸಲಿನ ಸಮಸ್ತ ಆಸ್ತಿಗೂ ತಾನೇ ವಾರಸುದಾರಳು ಎಂಬುದನ್ನು ತಾನು ಹೆಂಗ್ಸಾದ್ರೂ ಕಚ್ಚೆ ಕಟಗೊಂಡು ಗೇದಿರುವುದನ್ನು ಮಗನಿಗೆ  ಗಟ್ಟಿಯಾದ ಧ್ವನಿಯಲ್ಲಿ ಹೇಳುತ್ತಾಳೆ. ದುಡಿಯಲಾರದ ಷಂಡರು  ಎಂದು ಹೀಗಳೆದು ‘ಕೆರ್ಗೆ ಬೀಳು’ ಎಂದು ಉಗಿಯುತ್ತಾಳೆ.

 

ಕಾಳಣ್ಣ ಕದ್ದುತಂದ ಕಡಲೆಕಾಯಿ ಮುಂದಿನ ಕಥೆಯ ದಿಕ್ಕನ್ನೇ ಬದಲಿಸಿ ಹೊಸ ತಿರುವನ್ನು ನೀಡುತ್ತದೆ. ಕುಟುಂಬದ ಎಲ್ಲರ ಅಸಮಾಧಾನವೂ ಆ ಗಳಿಗೆಯಲ್ಲಿ ವ್ಮರೆಯಾಗಿ ಕಡಲೆಕಾಯಿ ಗುಡ್ಡವನ್ನು ಕರಗಿಸುವುದರಲ್ಲಿ ಅವರು ಒಂದಾಗುತ್ತಾರೆ. ಕಳ್ಳನ ತಪಾಸಣೆಗೆಂದು ಬಂದ ಪೇದೆಗಳು ಇಡೀ ಹಟ್ಟಿಯನ್ನೆಲ್ಲ ಚೂರೂ ಬಿಡದಂತೆ ಜಾಲಾಡಿದರೂ ಯಾವ ಸುಳಿವೂ ಸಿಕ್ಕುವುದಿಲ್ಲ. ಯಾಕೆಂದರೆ ಒಬ್ಬೊಬ್ಬರ ಹೊಟ್ಟೆಗೂ ಅಷ್ಟಿಷ್ಟು ಸೇರಿ, ಬೆಂಕಿಗಾಹುತಿಯಾಗಿತ್ತು. ಪೇದೆಗಳ ತಪಾಸಣೆಯ ಸಂದರ್ಭದಲ್ಲಿ ಹಟ್ಟಿಯ ಒಂದೊಂದು ವಿವರಗಳನ್ನೂ ಚಿತ್ರಿಸಿರುವ ಬಗೆಯಂತೂ ಅತ್ಯದ್ಭುತ. ದಲಿತರ ಬದುಕಿನ ಸಾಂಸ್ಕೃತಿಕ ದಾಖಲೆಯಾಗಿ ಪರಿಣಮಿಸಿ ಒಟ್ಟು ನೋಟದ ಅರಿವು ತಂದು ಕೊಡುವುದರಲ್ಲಿ ಯಶಸ್ವಿಯಾಗಿದೆ. ಇಷ್ಟಾದರೂ ಮುದುಕಿಗೆ ಕಳುವಾದ ಕೋಳಿಯದೇ ಚಿಂತೆ. ಪೇದೆಗಳು ತನಗೆ ಸಹಾಯ ಮಾಡಬಹುದೆಂದು “ನನ್ನ ಕೋಳಿ ಹುಂಜ ಮೊನ್ನೆ ಜಿನ ಚಂದ ಗಾಣವಾಗಿ ಹಟ್ಟಿ ಬುಡ್ತು ನನ್ನೊಡ್ಯ. ಇನ್ನೊವಿ ಹಟ್ಟಿ ಮುಟ್ಟಿಲ್ಲ ನನ್ನಪ್ಪ” ಎಂದು ಬಿನ್ನವಿಸಿಕೊಳ್ಳುತ್ತಾಳೆ. ಮುದುಕಿಯ ಮಾತಿಗೆ ನಕ್ಕ ಪೋಲಿಸ “ಕಳೆದು ಹೋದ ಹುಂಜ ಯಾವ ರೀತಿ ಇತ್ತು” ಎನ್ನುತ್ತಾನೆ. ಸಾಕವ್ವ ಮತ್ತೊಂದನ್ನು ತಂದು ತೋರಿಸಿ “ಅದೂನು ಇದ್ರ ಜತೇದೆ ಬುದ್ಧಿ” ಎನ್ನುತ್ತಾಳೆ. ಭರ್ಜರಿಯಾಗಿದ್ದ ಹುಂಜವನ್ನು ಕಂಡ ಪೇದೆಗಳು “ಇದನ್ನ ಅದ ಹುಡುಕ್ಕೊಂಡು ಬರಾಕೆ ಕಳಿಸ್ತೀವಿ” ಎಂದು ಹೇಳಿ ಅದರ ಕಾಲಿಗೆ ಹಗ್ಗ ಬಿಗಿದು ಜೀಪಿಗೆ ಹಾಕಿಕೊಂಡು ಧೂಳೆಬ್ಬಿಸಿ ಹೋಗುತ್ತಾರೆ. ಎಂಥ ಕ್ರೌರ್ಯ !

 

ಇದು ಸ್ಥೂಲ  ಕತೆಯಾದರೂ ಇದರ ಅಂತರಂಗದಲ್ಲಿ ಪಡಿ ಮೂಡಿರುವ ದಲಿತರ ಬದುಕಿನ ದುರಂತ ಕೃತಿಯ ಉದ್ದಕ್ಕೂ ಕೆನೆಗಟ್ಟಿರುವುದನ್ನು ಕಾಣಬಹುದು. ದುಡಿಯುತ್ತೇನೆಂದರೂ ಕೂಲಿ ಸಿಗದ ನೋವಿನ ಬೇಗುದಿ, ಉಳ್ಳವರ ದುರಾಡಳಿತ, ಪೋಲಿಸರ ದೌರ್ಜನ್ಯ, ವ್ಯವಸ್ಥೆಯ ವಿರುದ್ಧ ಸೊಲ್ಲೆತ್ತಲು ಸಾಧ್ಯವಾಗದ ಅಸಾಮಥ್ರ್ಯತೆ ‘ಒಡಲಾಳ’ದಲ್ಲಿ ಮೂರ್ತರೂಪ ತಾಳಿ ನಮ್ಮ ಮುಂದೆ ಸಾಕಾರವಾಗುತ್ತದೆ. ಮುಖ್ಯ ಪಾತ್ರದ ಜತೆಗೆ ಕಾಳಣ್ಣ, ಚಲುವಮ್ಮ, ಗೌರಮ್ಮ, ಗುರುಸಿದ್ದು, ಶಿವು, ದುಪ್ಟಿಕಮೀಷನರು ಹೀಗೆ ವಿಭಿನ್ನ ಬಗೆಯ ಪಾತ್ರಗಳ ಪ್ರಪಂಚದಲ್ಲಿ ಹರಡಿಕೊಂಡಿರುವ ‘ಒಡಲಾಳ’ ದಲಿತರ ಬದುಕಿನ ಒಂದು ಜ್ವಲಂತ ಸತ್ಯವಾಗಿ ಮೂಡಿ ಬಂದಿದೆ. ದಲಿತ ಕುಟುಂಬವೊಂದರ ಒಳಜೀವನ ಇಷ್ಟು ಸಮರ್ಥವಾಗಿ ಹಿಂದೆಂದೂ ಸಾಹಿತ್ಯದಲ್ಲಿ ಒಡಮೂಡಿಲ್ಲ. ಕಲ್ಕತ್ತದ ಭಾರತೀಯ ಭಾಷಾ ಪರಿಷತ್ತು ಶ್ರೇಷ್ಠ ಕೃತಿಗಳಿಗೆ ನೀಡುವ ಮನ್ನಣೆ ಈ ಬಾರಿ ‘ಒಡಲಾಳ’ಕ್ಕೆ ಸಂದಿರುವುದು ಅದರ ಹಿರಿಮೆಯನ್ನು ಮತ್ತೂ ಹೆಚ್ಚಿಸಿದೆ.