ಅನಾಣ್ಯೀಕರಣದಿಂದಾಗಿ ಗಂಭೀರ ಉದ್ಯೋಗ ನಷ್ಟ-ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‍

amarthya

(ಜನವರಿ 17,2017ರ `ದ ಹಿಂದೂ’ ಇಂಗ್ಲಿಷ್ ದಿನಪತ್ರಿಕೆಯಲ್ಲಿ ಪ್ರಕಟವಾದ ನೋಬೆಲ್ ಪ್ರಶಸ್ತಿ ವಿಜೇತ, ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‍ರವರ ಸಂದರ್ಶನದ ಕನ್ನಡ ಅನುವಾದ ಹಾಸನದ 21.1.2017 ರ ಜನತಾಮಾಧ್ಯಮ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅನುವಾದಕರು : ಹೆಚ್.ಎ.ಕಿಶೋರ್ ಕುಮಾರ್, ಅಧ್ಯಕ್ಷರು, ಮಲೆನಾಡು ಜನಪರ ಹೋರಾಟ ಸಮಿತಿ, ಹಾಸನ )

ಪ್ರತಿ ಚಳಿಗಾಲದಲ್ಲಿ ಭೇಟಿ ನೀಡುವ ಶಾಂತಿನಿಕೇತನದ ಅವರ ಮನೆಯಲ್ಲಿ ಸುವೋಜಿತ್ ಬಾಗ್‍ಚೆ ಅವರ ಸಂದರ್ಶನ ನಡೆಸಿದ್ದರು. ಪ್ರೊ.ಸೇನ್‍ರವರು ನೋಟು ನಿಷೇಧದ ಉದ್ದೇಶ ಮತ್ತು ಪರಿಣಾಮಗಳ ಬಗ್ಗೆ ಮಾತನಾಡಿದರು.

ಪ್ರಶ್ನೆ : ನಾವು ಈಗಾಗಲೇ ನೋಟು ನಿಷೇಧದ ಪ್ರಥಮ ಪರಿಣಾಮಗಳಾದ ಬ್ಯಾಂಕು ಮುಂದಿನ ಉದ್ದನೆಯ ಸಾಲುಗಳು ಮತ್ತು ನೋಟಿನ ಕೊರತೆಯನ್ನು ನೋಡಿದ್ದೇವೆ. ಈಗ ನಾವು ಎರಡನೇ ಪರಿಣಾಮವನ್ನು ಅಸಂಘಟಿತ ವಲಯದ ಮೇಲಾದುದನ್ನು ಕಾಣುತ್ತಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆಲೂಗೆಡ್ಡೆ ಬಿತ್ತನೆ ಮೇಲೆ ಪರಿಣಾಮ ಬೀರಿದೆ ಮತ್ತು ಕೆಲವು ವ್ಯಾಪಾರಗಳು ಕುಸಿದು ಬೀಳುತ್ತಿವೆ. ಇದೆಲ್ಲದರ ಪರಿಣಾಮವೇನಾಗಬಹುದು?

ಅಮರ್ತ್ಯ ಸೇನ್ : ನೀವು ಎರಡನೆಯ ಪರಿಣಾಮವೆಂದು ಏನನ್ನು ಕರೆಯುತ್ತಿದ್ದೀರಿ? ಅದು ನಿಜವಾಗಿಯೂ ಆಶ್ಚರ್ಯಕರವಾದುದಲ್ಲ. ಏಕೆಂದರೆ ಹಣದ ಲಭ್ಯತೆಯು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಬಹಳ ದೊಡ್ಡ ಪಾತ್ರವನ್ನು ನಿರ್ವಹಿಸುತ್ತದೆ. ನಿರ್ದಿಷ್ಟವಾಗಿ ಸಣ್ಣ ವ್ಯಾಪಾರಗಳಲ್ಲಿ (ಉದಾ : ಕೃಷಿ) ಹಣವು ಆಗಾಗ ನಗದಿನ ರೂಪದಲ್ಲಿ ಬಳಸಲ್ಪಡುತ್ತದೆ. ಬಹಳ ದೀರ್ಘವಾದ ಸಮಯದ ನಂತರ ನಗದುರಹಿತ ವ್ಯವಹಾರವನ್ನು ಸಂಘಟನೆ ಮತ್ತು ತರಬೇತಿಯಿಂದ ನಿತ್ಯದ ಆಚರಣೆಗೆ ತರಲು ಸಾಧ್ಯವಾಗಬಹುದೇನೋ. ಆದರೆ ಅದು ಸಮಯವನ್ನು ತೆಗೆದುಕೊಳ್ಳುತ್ತದೆ. ತಕ್ಷಣ ಕಲಿಯುವಿಕೆ ಮತ್ತು ಸಾಂಸ್ಥೀಕರಣಗೊಳಿಸುವ ಊಹೆಯಿಂದ ತೆಗೆದುಕೊಳ್ಳಲಾಗುವ ತಕ್ಷಣದ ಕ್ರಮಗಳು, ಕಪ್ಪು ಹಣದ ಜೊತೆಗೆ ಯಾವುದೇ ಸಂಬಂಧವಿಲ್ಲದ ಬಹಳ ಜನರು ಕಷ್ಟಪಟ್ಟು ಗಳಿಸಲಾದ ಗಳಿಕೆಯ ಮೇಲೆ ಗಂಭೀರ ಅಪಾಯವನ್ನು ಉಂಟು ಮಾಡುತ್ತದೆ.
ನಾವೀಗ ನಗದೆಂದು ಕರೆಯುತ್ತಿರುವ ಬಹಳಷ್ಟು ನಿಜವಾಗಿಯೂ ಪ್ರಾಮಿಸ್ಸರಿ ನೋಟುಗಳು ಇದರ ಉಗಮ ಅಮೂಲ್ಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿಯ ಮೇಲೆ ಮಾತ್ರ ಅವಲಂಬಿತರಾಗಿದ್ದ ನಮ್ಮ ದೊಡ್ಡ ಮುನ್ನಡೆಯನ್ನು ಪ್ರತಿಫಲಿಸಿತು. ಪ್ರಾಮಿಸ್ಸರಿ ನೋಟುಗಳು ಕೈಗಾರಿಕಾ ಯೂರೋಪಿನ ಆರ್ಥಿಕ ಬೆನ್ನೆಲುಬನ್ನು ಕಟ್ಟುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದವು. 18 ಅಥವಾ 19ನೇ ಶತಮಾನದಲ್ಲೇನಾದರೂ ಬ್ರಿಟನ್ ದೇಶವು ತಕ್ಷಣ ಅನಾಣ್ಯೀಕರಣ ಮಾಡಿದಿದ್ದರೆ ಅದು ಬ್ರಿಟನ್‍ನ ಕೈಗಾರಿಕಾ ಬೆಳವಣಿಗೆಯನ್ನು ನಾಶ ಮಾಡಿ ಬಿಡುತ್ತಿತ್ತು. ಇನ್ನೂ ಅಭಿವೃದ್ಧಿ ಹೊಂದದ ಎಲೆಕ್ಟ್ರಾನಿಕ್ ಅಕೌಂಟುಗಳು ಮತ್ತು ವ್ಯವಹಾರಗಳಂತೆ ಆರ್ಥಿಕತೆಯ ದೊಡ್ಡ ಭಾಗಗಳು ಅದೇ ರೀತಿ ಗಾಯವಾಗುವಂತಹವು. ಬಹಳಷ್ಟು ಜನರಿಗೆ ಅದರಲ್ಲೂ ಬಡವರಿಗೆ ಎಲೆಕ್ಟ್ರಾನಿಕ್‍  ಪೇಮೆಂಟುಗಳು ಮತ್ತು ರಶೀದಿ ಗಳನ್ನು ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ಉಪಯೋಗಿಸುವುದರಲ್ಲಿ ಪರಿಣಿತಿ ಹೊಂದಲು ಕಷ್ಟವಾಗುತ್ತದೆ.
ಒಬ್ಬನು ಹಣ ಕಳೆದುಕೊಳ್ಳುವ ಸಾಧ್ಯತೆಯನ್ನು ತಡೆಗಟ್ಟುವುದು ಬಹಳ ಕಷ್ಟಕರ. ಅದರಲ್ಲೂ ಮೂಲಸೌಕರ್ಯಗಳ ಕೊರತೆ ಮತ್ತು ನಿಧಾನ ಕಲಿಯುವಿಕೆ ನಗದುರಹಿತ ವ್ಯವಹಾರವನ್ನು ನಡೆಸಲು ಇರುವ ಅಡಚಣೆಗಳು. ಗಲಿಬಿಲಿಗೊಳಿಸುವ ಪ್ರಶ್ನೆಯೆಂದರೆ, ಅನಾಣ್ಯೀಕರಣ ಮಾಡಿದ ಕೆಲವು ಜನರಿಗೆ ಇದೆಲ್ಲ ಆಗುತ್ತದೆಂದು ಏಕೆ ಮೊದಲೇ ಗೊತ್ತಾಗಲಿಲ್ಲ ಎಂಬುದು. ಆದರೆ ಇನ್ನೂ ಗಲಿಬಿಲಿಗೊಳಿಸುವ ಪ್ರಶ್ನೆ ಎಂದರೆ, ಅನಾಣ್ಯೀಕರಣದ  ಪ್ರೋತ್ಸಾಹಕರಿಗೆ ಒಂದು ಆರ್ಥಿಕ ಸಂಕಷ್ಟದ ಇಷ್ಟೆಲ್ಲಾ ಸಾಕ್ಷ್ಯಗಳು ಸಿಗುತ್ತಿದ್ದರೂ ಅದನ್ನು ಕಾಣದಷ್ಟು ಹೇಗೆ ಕುರುಡಾಗಿದ್ದಾರೆ ಎಂಬುದಾಗಿದೆ.
ಪ್ರಶ್ನೆ : ಶೇ.85ರಷ್ಟು ಹಣವನ್ನು ತಕ್ಷಣವೇ ಏಕೆ ಚಲಾವಣೆಯಿಂದ ಹಿಂದಕ್ಕೆ ಪಡೆಯಲಾಯಿತು?

ಅಮರ್ತ್ಯ ಸೇನ್: ಭಾರತ ಸರ್ಕಾರವು ತನ್ನ ಉದ್ದೇಶದಲ್ಲಿ ಗೊಂದಲದಲ್ಲಿ ಸಿಕ್ಕಿ ಬಿದ್ದಂತೆ ಭಾಸವಾಗುತ್ತಿದೆ. ಅನಾಣ್ಯೀಕರಣವು ಕಪ್ಪು ಹಣವನ್ನು ಹಿಡಿಯಲು ಮತ್ತು ತೊಲಗಿಸಲು ದಾರಿ ಮತ್ತು ನಗದುರಹಿತ ಆರ್ಥಿಕತೆಗೆ ದಾರಿ ಎಂಬಂತೆ ಎರಡೂ ರೀತಿಯಿಂದ ಕಾಣಲಾಯಿತು. ಸರ್ಕಾರದ ವಾಕ್ ಚಾತುರ್ಯದಿಂದ ನಿಧಾನವಾಗಿ ಮೊದಲನೆಯ ಉದ್ದೇಶದ ಬದಲಿಗೆ ಎರಡನೆಯ ಉದ್ದೇಶವನ್ನು ಸ್ಥಾಪಿಸಲಾಯಿತು. ಕಪ್ಪು ಹಣದ ಸಮಸ್ಯೆಗೆ ಅನಾಣ್ಯೀಕರಣವೂ ಬಹಳ ಸಣ್ಣ ಕೊಡುಗೆ ಕೊಟ್ಟಿತು. ಅದೂ ಸಮಾಜಕ್ಕೆ ದೊಡ್ಡ ನಷ್ಟದೊಂದಿಗೆ. ಇದಕ್ಕೆ ಕಾರಣ ಕಪ್ಪು ಹಣ ನಗದು ರೂಪದಲ್ಲಿ ಇರುವುದು ಕೇವಲ ಶೇ.6ರಷ್ಟು ಹೆಚ್ಚೆಂದರೆ ಶೇ.10ರಷ್ಟು. ಬಹಳ ಪ್ರಮಾಣದ ಕಪ್ಪು ಹಣ ಇರುವುದು ದುಬಾರಿ ಲೋಹ ರೂಪದಲ್ಲಿ ಮತ್ತು ಇತರೆ ಆಸ್ತಿ ರೂಪದಲ್ಲಿ ವಿದೇಶಿ ಖಾತೆಗಳಲ್ಲಿ. ಸಣ್ಣ ಮೊತ್ತದ ಕಪ್ಪು ಹಣವನ್ನು ಹಿಡಿಯಲು ಹೋಗಿದ್ದರಿಂದ (ಕೆಲಸಗಾರರ ಸಂಬಳ ಗಳಿಸುವಿಕೆ ; ವಹಿವಾಟು ನಡೆಸುವ ಸಣ್ಣ ವ್ಯಾಪಾರಗಾರರು ಅಥವಾ ಉತ್ಪಾದಕರು; ಸಣ್ಣ ಉಳಿತಾಯ ಮಾಡಿಕೊಂಡಿರುವ ಜನರು ಹಾಗೂ ಗೃಹಿಣಿಯರು) ಉಂಟಾದ ನಷ್ಟ ಮತ್ತು ಅವ್ಯವಸ್ಥೆ ಬಹಳ ದೊಡ್ಡದು. ತುಂಬ ದೊಡ್ಡ ಪ್ರಮಾಣದ ಉದ್ಯೋಗ ನಷ್ಟ ಉಂಟಾಗಿದೆ ಮತ್ತು ಅಖಿಲ ಭಾರತ ಉತ್ಪಾದಕರ ಸಂಘಟನೆಯ (ಆಲ್ ಇಂಡಿಯನ್ ಮ್ಯಾನುಫ್ಯಾಕ್ಚರರ್ಸ್ ಆರ್ಗನೈಜೇಷನ್) ಇತ್ತೀಚೆಗಿನ ವರದಿಗಳ ಪ್ರಕಾರ ಲಂಡನ್ ಫೈನಾನ್ಷಿಯರ್ ಟೈಮ್ಸ್ ಹೇಳಿರುವಂತೆ `ನರೇಂದ್ರ ಮೋದಿಯವರು ಶೇ.86ರಷ್ಟು ಬ್ಯಾಂಕ್ ನೋಟುಗಳನ್ನು ನಿಷೇಧಿಸಿದ 34 ದಿನಗಳಲ್ಲಿ ವ್ಯಾಪಾರದಲ್ಲಿ ಗಣನೀಯ ಕುಸಿತ ಉಂಟಾಗಿದೆ’ ಎಂದಿರುವಂತೆ ಈಗಾಗಲೇ ಗಂಭೀರ ಉದ್ಯೋಗ ನಷ್ಟಗಳು ಸಂಭವಿಸುತ್ತಿವೆ.
ಅನಾಣ್ಯೀಕರಣದಿಂದಾಗಿ ಕಪ್ಪು ಹಣದ ಸಮಸ್ಯೆ ಯನ್ನು ಬಗೆಹರಿಸಬಹುದು ಅಥವಾ ದೊಡ್ಡದಾಗಿ ತೆಗೆದುಹಾಕಬಹುದು ಎಂಬ ಸರ್ಕಾರದ ಅವಾಸ್ತವಿಕ ನಿರೀಕ್ಷೆಗಳು ಈಗ ಸರ್ಕಾರಕ್ಕೂ ಸಹ ಸ್ಪಷ್ಟವಾಗತೊಡಗಿದೆ. ಕಪ್ಪು ಹಣವನ್ನು ತೊಲಗಿಸುವ ಮೂಲ ಉದ್ದೇಶದಿಂದ ಮಾಡಲ್ಪಟ್ಟ ಅನಾಣ್ಯೀಕರಣವನ್ನು ಕ್ರಮೇಣ ನಗದು ರಹಿತ ಸಮಾಜ ನಿರ್ಮಿಸುವ ಉದ್ದೇಶಕ್ಕೆ ಮಾಡಲ್ಪಟ್ಟಿದ್ದೆಂದು ತಕ್ಷಣ ಬದಲಾಯಿಸಲಾಯಿತು. ಹೇಗಿದ್ದರೂ ಅಂತಹ ರಚನೆಯ ಬದಲಾವಣೆಗಾಗಿ ತುಂಬಾ ಸಮಯ ಬೇಕಾಗುತ್ತದೆ ಮತ್ತು ಕಪ್ಪು ಹಣವನ್ನು ಹಿಡಿಯುವ ಉದ್ದೇಶಕ್ಕಾಗಿ ವಿಧಿಸಲಾದ ಕಠಿಣ ಕ್ರಮಗಳು, ದಂಡಗಳು ನಿರ್ದಿಷ್ಟವಾಗಿ ಕೆಟ್ಟ ಹೊಂದಿಕೆಗಳು. ಪರಿಣಾಮವಾಗಿ ನಗದು ರಹಿತ ಸಮಾಜಕ್ಕೆ ಒಂದು ಕ್ರಮಬದ್ಧ ಬದಲಾವಣೆ ಆಗದೆ ಗೊಂದಲ ಮತ್ತು ವ್ಯಾಪಕ ನರಳುವಿಕೆಯ ಒಗ್ಗೂಡುವಿಕೆಯಾಯಿತು.
ಪ್ರಶ್ನೆ : ನೋಟು ನಿಷೇಧದ ಹಿಂದೆ ರಾಜಕೀಯ ಉದ್ದೇಶವಿದೆಯೆಂದು ನೀವು ಭಾವಿಸುತ್ತೀರಾ? ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಅದೂ ಒಂದು ಕಾರಣವಾಗಿರಬಹುದೇ?

ಅಮರ್ತ್ಯ ಸೇನ್ : ನನಗೆ ನಿಜವಾಗಿ ತಿಳಿದಿಲ್ಲ. ಯಾವುದೇ ಸರಿಯಾದ ಆರ್ಥಿಕ ತರ್ಕ ಸೂಕ್ಷ್ಮತೆ ಈ ರೀತಿ ಕೆಟ್ಟ ನೀತಿಗೆ ಕಾರಣವಾಗುತ್ತಿರಲಿಲ್ಲ. ಆಡಳಿತ ನಡೆಸುತ್ತಿರುವ ಪಕ್ಷಗಳು ಇದರಿಂದ ಪಡೆಯಬಹುದಾದ ರಾಜಕೀಯ ಲಾಭದ ಬಗ್ಗೆ ವಿವರಣೆಯನ್ನು ಜನರು ಪಡೆಯಬಯಸುವುದು ಸಹಜವಾದುದು. ತಾತ್ಕಾಲಿಕವಾಗಿಯಾದರೂ ಈ ನಿಲುವು ನಮ್ಮ ಪ್ರಧಾನಮಂತ್ರಿಗಳಿಗೆ ಭ್ರಷ್ಟಾಚಾರದ ವಿರುದ್ಧದ ದೊಡ್ಡ ಹೋರಾಟಗಾರನೆಂಬ ಹೆಸರನ್ನು ನಿಜವಾಗಿಯೂ ತಂದು ಕೊಟ್ಟಿದೆ. ಈ ನೀತಿಯು ಆ ನಿಟ್ಟಿನಲ್ಲಿ ಏನನ್ನಾದರೂ ಸಾಧಿಸಲು ಬಹಳ ಕಡಿಮೆ ಸಾಧನೆ ಮಾಡಿದ್ದರೂ ಸಹ.

ಪ್ರಶ್ನೆ : ಈ ಐವತ್ತು ದಿನಗಳ ಕಷ್ಟ ನಮ್ಮ ಆರ್ಥಿಕತೆಯಿಂದ ಕಪ್ಪು ಹಣವನ್ನು ಆಚೆ ತೆಗೆಯಲಾರದೇ?

ಅಮರ್ತ್ಯ ಸೇನ್ : ಅದು ಹೇಗೆ ಸಾಧ್ಯ? ಕೇವಲ ಸಣ್ಣ ಮೊತ್ತದ ಕಪ್ಪು ಹಣ ನಗದು ರೂಪದಲ್ಲಿದೆ . (ಸುಮಾರು ಶೇ.6ರಷ್ಟು ನಿಜವಾಗಿಯೂ ಶೇ.10ರ ಒಳಗೆ) ಶೇ.10 ರಷ್ಟಿರುವ ಕಪ್ಪು ಹಣವನ್ನು ತೆಗೆದು ಸ್ವಚ್ಛಗೊಳಿಸಿದರೆ ಇಡೀ ಆರ್ಥಿಕತೆಯನ್ನು ಹೇಗೆ ಸ್ವಚ್ಛಗೊಳಿಸಿದಂತಾಯ್ತು? ಆ ಶೇಕಡಾ ಹತ್ತು ಸಹ ಬಹು ದೊಡ್ಡ ಅತೀ ಅಂದಾಜು. ಕಪ್ಪು ಹಣ ದಂಧೆಕೋರರು ಅಧಿಕಾರಗಳ ತಡೆಗೋಡೆಗಳನ್ನು ಮೀರುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಆದರೆ ಸಾಮಾನ್ಯ ಪ್ರಾಮಾಣಿಕ ಜನರು ಇದ್ಯಾವುದೂ ತಿಳಿಯದೆ ಸುಮ್ಮನೆ ತೊಂದರೆಗೊಳಗಾಗುತ್ತಾರೆ ಅಥವಾ ಇದೆಲ್ಲಾ ತಿಳಿಯದಿರುವುದರಿಂದ ಅವರು ತಮ್ಮ ಹಣವನ್ನು ಸುಮ್ಮನೆ ಕಳೆದುಕೊಳ್ಳುತ್ತಾರೆ. ಏಕೆಂದರೆ ಅವರು ಅಧಿಕಾರಿಗಳ ತಡೆಗೋಡೆಗಳನ್ನು ಮೀರುವ ವಿದ್ಯೆಯಲ್ಲಿ ಪರಿಣಿತರಾಗಿರುವುದಿಲ್ಲ.

ಪ್ರಶ್ನೆ: ಇದೊಂದು ಕೆಟ್ಟ ನೀತಿ ಆಗಿದ್ದರೆ ಅನಾಣ್ಯೀಕರಣದ ವಿರುದ್ಧ ಇನ್ನೂ ಏಕೆ ಪ್ರತಿಭಟನೆಗಳಾಗಿಲ್ಲವೆಂದು ನೀವು ಯೋಚಿಸುತ್ತೀರಿ?

ಅಮರ್ತ್ಯ ಸೇನ್ : ಈ ಬುದ್ಧಿ ಇಲ್ಲದ ನಡೆಯ ಸುತ್ತಲೂ ಸರ್ಕಾರದ ಪ್ರಚಾರ ಬಹಳ ಪ್ರಬಲವಾದುದಾಗಿದೆ. ನೀವು ಇದರ ವಿರುದ್ಧವಾಗಿದ್ದರೆ ನೀವು ಕಪ್ಪು ಹಣದ ಪರವಾಗಿದ್ದೀರೆಂದು ತಿಳಿಯಬೇಕಾಗುತ್ತದೆಂದು ಜನರಿಗೆ ಪದೇ ಪದೇ ಹೇಳಲಾಗಿದೆ. ಇದೊಂದು ಹಾಸ್ಯಾಸ್ಪದ ತರ್ಕ. ಆದರೆ ಸಿದ್ಧ ಶೋಷಕ ರಾಜಕೀಯ ಘೋಷಣೆ. ಅನಾಣ್ಯೀಕರಣದಿಂದ ಉಂಟಾದ ಸ್ಥಿರವಾದ ಆರ್ಥಿಕ ಮುಗ್ಗಟ್ಟು ಗಟ್ಟಿಯಾದ ಅಂಕಿ ಅಂಶಗಳಿಂದ ಮತ್ತು ಜನರ ಗ್ರಹಿಸುವಿಕೆಯಿಂದಲೂ ನಿಧಾನವಾಗಿ ಸ್ಪಷ್ಟಗೊಳ್ಳುತ್ತಿದೆ.
ಘನತೆ ಮತ್ತು ಯಶಸ್ಸಿನ ಬಗೆಗಿನ ತಪ್ಪು ಗ್ರಹಿಕೆಯನ್ನು ವಿರೂಪಗೊಳಿಸಲಾದ ವಾಸ್ತವ ಮತ್ತು ಪ್ರಚಾರ ಕಾರ್ಯದ ಕೊನೆಯಿಲ್ಲದ ಪುನರಾವರ್ತನೆಯ ಮೂಲಕ ಎತ್ತಿ ಹಿಡಿಯಬಹುದು. ಕೊನೆಯದಾಗಿ ಸತ್ಯವೇ ಉಳಿಯಬಹುದು. ಆದರೆ ಸರ್ಕಾರವು ಸಾರ್ವಜನಿಕರ ದೊಡ್ಡ ಭಾಗದ ವಿಧೇಯತೆಯನ್ನು ಬಹಳ ಸಮಯದವರೆಗೆ ಉಳಿಸಿಕೊಳ್ಳಲು ಸಾಧ್ಯವಾಗಬಹುದು. ನಿಜವಾಗಲೂ ಉತ್ತರಪ್ರದೇಶದ ಚುನಾವಣೆವರೆಗೆ ಮತ್ತು ನಂತರವೂ ಸಹ.
1840ರಲ್ಲಿ ಘಟಿಸಿದ ಐರಿಷ್‍ನ ಭೀಕರ ಕ್ಷಾಮವನ್ನು ಇಲ್ಲಿ ನೆನಪಿಸಿಕೊಳ್ಳುವುದು ಲಾಭದಾಯಕವಾದುದು. ಲಂಡನ್‍ನಿಂದ ನಡೆಸಲಾಗುತ್ತಿದ್ದ ಸರ್ಕಾರದ ವಿರುದ್ಧ ಆ ಕೂಡಲೇ ಗಂಭೀರ ಪ್ರತಿಭಟನೆಗಳಾಗಿರಲಿಲ್ಲ. ಕೊನೆಗೆ ಅದು ಆಯಿತು. ಆದರೆ ಯಾವಾಗ ಆಯಿತೆಂದರೆ ಆಪಾದನೆಯನ್ನು ಅರ್ಥ ಮಾಡಿಕೊಂಡಾಗ ಅದು ದೊಡ್ಡ ದೀರ್ಘ ಕಾಲದ ಪರಿಣಾಮವನ್ನುಂಟು ಮಾಡಿತು. ಐರೀಷ್ ಜನರು ಲಂಡನ್‍ನಿಂದ ಆಡಳಿತ ನಡೆಸುತ್ತಿದ್ದ ಸರ್ಕಾರದ ಎಲ್ಲ ನಡೆಗಳನ್ನು ಆಳವಾಗಿ ಅನುಮಾನಿಸತೊಡಗಿದರು.