ಸಾರ್ವಜನಿಕ ಮತ್ತು ಖಾಸಗಿ: ದೇವನೂರ ಮಹಾದೇವರ ಮಾದರಿ – ಡಾ. ಎಚ್.ಎಸ್. ರಾಘವೇಂದ್ರರಾವ್


[17.4.2009ರ ಆಂದೋಲನ ಪತ್ರಿಕೆಯ ಹಾಡುಪಾಡು ಪುರವಣಿಗಾಗಿ ಡಾ.ಎಚ್.ಎಸ್.ರಾಘವೇಂದ್ರರಾವ್ ಅವರು ದೇವನೂರ ಮಹಾದೇವ ಅವರ ಬಗ್ಗೆ ಬರೆದ ಲೇಖನ ‘ಚಕ್ರವರ್ತಿಯ ಬಟ್ಟೆಗಳು’ ಎಂಬ ಲೇಖನಗಳ ಸಂಕಲನದಲ್ಲಿ ಸಂಗ್ರಹವಾಗಿದೆ.]
hsrcover
    ದೇವನೂರ ಮಹಾದೇವ, ಅನೇಕ ವರ್ಷಗಳಿಂದ, ಸೂರ್ಯನ ಮೇಲೆ ಬುಟ್ಟಿ ಕವುಚಿ ಹಾಕಿದಂತೆ ಬದುಕಿದ್ದಾರೆ. ಲೋಕಕ್ಕೆ ಬೆಳಕೂ ಬಂತು, ಸೂರ್ಯನ ಏಕಾಂತಕ್ಕೂ ಭಂಗವಿಲ್ಲ. ದೀಪದ ಮೇಲೆ ಬುಟ್ಟಿ ಮುಚ್ಚಿದರೆ, ಅದು ಆರಿ ಹೋಗಬಹುದು. ತನ್ನದೇ ಬೆಳಕಿರುವ ಸೂರ್ಯನಿಗೆ ಆ ಭಯವೂ ಇಲ್ಲ. ಬುದ್ಧಗುರು ಹೇಳಿದಂತೆ, ಅದು ‘ಒಳಗೆ ಉರಿಯುವ ಬೆಳಕು’. ಎಲ್ಲರ ಮುಂದೆ ಮೆರೆಯುವ ಹಂಬಲ, ಆ ಎಲ್ಲರ ನಿರೀಕ್ಷೆಯಂತೆ ಬದುಕಬೇಕೆನ್ನುವ ಆತಂಕ ಅಥವಾ ಹಾಗಿಲ್ಲದ ಬದುಕನ್ನು ಬಚ್ಚಿಟ್ಟುಕೊಳ್ಳುವ ಹುನ್ನಾರ, ಇಂತಹ ‘ನಾವು ತುಂಬಿದ ಲೋಕ’ದಲ್ಲಿ ಇವರು ಯಾಕೆ ಹೀಗಿದ್ದಾರೆ ಎಂಬ ಆಲೋಚನೆ ನನ್ನನ್ನು ಎಂದಿನಿಂದಲೂ ಕಾಡಿದೆ, ಅವರಿಗಾಗಿಯಲ್ಲ, ನನಗಾಗಿ.
   ‘ಸಂಬಂಜ ಅನ್ನೋದು ದೊಡ್ಡದು ಕಣಾ’ ಎಂದು ಹೇಳಿದ ಈ ಮನುಷ್ಯನಿಗೆ, ಖಾಸಗಿಯಾದ ಸಂಬಂಧಗಳಿಗೂ ಸಾರ್ವಜನಿಕವಾದ ಕಾಳಜಿಗಳಿಗೂ ಇರುವ ವ್ಯತ್ಯಾಸ ಚೆನ್ನಾಗಿ ಗೊತ್ತು. ನಮಗೆ ಎರಡೂ ಅಗತ್ಯವಾಗಿ ಬೇಕು. ಆದರೆ, ಅವೆರಡೂ ಒಂದೇ ಅಲ್ಲ. ಜಗತ್ತಿನ ಬಡವರೆಲ್ಲರ ಬಗ್ಗೆ ಕಣ್ಣೀರಿನ ಹೊಳೆಹರಿಸುವ ನಾವೆಲ್ಲರೂ, ನಮ್ಮ ಎದುರಿಗೇ ನಿಂತಿರುವ ಬಡವನು ಸೋಮಾರಿಯೆಂದೋ, ನಾಟಕ ಆಡುತ್ತಿರುವನೆಂದೋ ಟೀಕಿಸುತ್ತಿರುತ್ತೇವೆ, ಅದೇಕೋ ಲಂಕೇಶರ ‘ಕುರುಡು ಕಾಂಚಾಣ’ ಕಥೆಯ ನಾಯಕನ ನೆನಪು. ಖಾಸಗಿ ಆಗುವುದೆಂದರೆ, ‘ಸಂಬಂಜ’ಗಳ ಪವಿತ್ರತೆಯನ್ನು ಕಾಪಾಡಿಕೊಳ್ಳುವ ಉಪಾಯ. ಈ ಗುಟ್ಟು ನಮ್ಮ ಹೆಣ್ಣುಮಕ್ಕಳಿಗೆ ಗೊತ್ತು ಅಥವಾ ಗೊತ್ತಿತ್ತು. ಅದಕ್ಕೇ, ಅವರಿಗೆ, ಮನೆಗೆ ಬಂದವರ ಹೊಟ್ಟೆಯ ಮೇಲೆಯೇ ಕಣ್ಣು. ತಾಯಿಗೆ ಲೋಕವೆಲ್ಲ ತನ್ನದೇ ಮಕ್ಕಳು ಎಂಬ ತಹತಹ ಇದ್ದರೆ, ಗಂಡುಗಳಿಗೆ ತನ್ನ ಮಕ್ಕಳೂ ಲೋಕದ ಹಾಗೆಯೇ ಅನ್ಯರು ಎನ್ನುವ ಹಪಹಪಿ. ಇಲ್ಲಿಯೇ ಇನ್ನೊಂದು ಮಾತು. ತಾಯಿಯಂತಹ ಗಂಡುಗಳೂ ಇರುತ್ತಾರೆ. ಗಂಡುಗಳಂತಹ ಹೆಣ್ಣುಗಳೂ ಹುಟ್ಟಿಕೊಳ್ಳುತ್ತಿದ್ದಾರೆ. ನಾನು ಹೇಳುತ್ತಿರುವುದು ಗಂಡುತನ-ಹೆಣ್ಣುತನಗಳ ಬಗ್ಗೆ. ಈ ದೇವನೂರ ಮಹಾದೇವ ಈ ಹೆಣ್ಣುತನವನ್ನು, ರವಷ್ಟು ಜಾಸ್ತಿ ಪಡೆದುಬಂದಿರಬೇಕು ಎಂದು ನನ್ನ ಊಹೆ. ಹಾಗಾದಾಗ, ಮೇಲೆ ಬೀಳುವ ಆಕ್ರಮಣಶೀಲತೆ ಇರುವುದಿಲ್ಲ. ಮಾತಿನ ಬದಲು ಹಿಂಜರಿಕೆ, ಹಿಂಜಿರಿಕೆಯ ಜೊತೆಗೆ ಮೌನ ಇರುತ್ತದೆ. ‘ಮಾತಿನ ಮಲ್ಲಿಯರು’ ಎಂದು ಹೆಸರಾದ ಹೆಣ್ಣುಗಳಿಗೆ, ಅಂತರಂಗವನ್ನು ಬಚ್ಚಿಟ್ಟುಕೊಳ್ಳುವುದೇ ಅಭ್ಯಾಸವಲ್ಲವೇ? ಅವರಿಗೆ ಬೇರೆ ದಾರಿ ಇದೆಯೇ? ಸುಮ್ಮನೆ ಯೋಚನೆ ಮಾಡಿ ನೋಡಿ. ಮೈಸೂರಿನಲ್ಲಿರುವ ಹಳೆಯ ಹಿರಿಯರು ಮತ್ತು ಗೆಳೆಯರು, ಗತಿಸಿದ ಹೋರಾಟಗಾರ ಕೆ.ರಾಮದಾಸ್ ಅವರನ್ನು ಅಭಿಮಾನದಿಂದ ನೆನಪು ಮಾಡಿಕೊಳ್ಳುತ್ತಾರೆ. ಆದರೆ ಆ ರಾಮದಾಸರ ತಾಯಿಯ ಮಾತು ಬಂದರೆ, ಅವರೆಲ್ಲರ ಕಣ್ಣಂಚಿನಲ್ಲಿ ಹನಿಗಳು ಕಾಣಿಸಿಕೊಳ್ಳುತ್ತವೆ. ಒಂದು, ಅಪ್ಪಟ ಖಾಸಗೀ ಪ್ರೀತಿ.ಇನ್ನೊಂದು ಸಾರ್ವಜನಿಕವಾದ ಛಲ.
   ನಮಗೆ ಯಾವುದು ಬೇಕು? ಇವೆರಡೂ ಒಂದೇ ಆಗಬಹುದೇ? ಮ್ಯಾಕ್ಸಿಂಗಾರ್ಕಿಯ ‘ತಾಯಿ’ ಕಾದಂಬರಿಯ ಅಮ್ಮನನ್ನು ನೆನಪು ಮಾಡಿಕೊಳ್ಳಿ. ಮೊದಲು, ತನ್ನ ಮಗನ ತಾಯಿಯಾಗಿದ್ದವಳು, ಕ್ಷಣಕ್ಷಣಕೆ, ದಿನ ದಿನಕ್ಕೆ ಆ ಮಕ್ಕಳ ಗೆಳೆಯ ಗಳೆತಿಯರ ಕೊನೆಗೆ ತಾನು ಕಾಣದ ಕೇಳದ ರೈತರ, ಕಾರ್ಮಿಕರ ತಾಯಿಯಾಗಲು ಪ್ರಯತ್ನಿಸುತ್ತಾಳೆ. ಖಾಸಗಿ ಎಲ್ಲಿ ಮುಗಿಯುತ್ತದೆ? ಸಾರ್ವಜನಿಕ ಎಲ್ಲಿ ಮೊದಲಾಗುತ್ತದೆ? ಈ ಗುಟ್ಟು ಮಹಾದೇವರಿಗೂ ಗೊತ್ತೆಂದು ಕಾಣುತ್ತದೆ. ಅವುಗಳ ನಡುವಿನ ಗಡಿಗೆರೆಯನ್ನು ಕಾಪಾಡಿಕೊಳ್ಳುವ ತಂತಿಯ ಮೇಲಿನ ನಡಿಗೆಯೂ ಅವರಿಗೆ ಗೊತ್ತು. ಜಗತ್ಪ್ರಸಿದ್ಧವಾದ ಅವರ ಮೌನ ಮತ್ತು ಸೋಮಾರಿತನಗಳೂ ಈ ತಿಳಿವಳಿಕೆಯ ಭಾಗಗಳೇ ಇರಬೇಕು.
ನನಗೆ ನಿಮಗೆ, ಖಾಸಗಿಯಾಗಿರುವುದು ಸುಲಭ, ಯಾಕೆಂದರೆ, ನಮ್ಮ ನಡಾವಳಿಗಳು ಬಂಧು ಮಿತ್ರರ ಪರಿಧಿಯಾಚೆಗೆ ಹೋಗುವುದಿಲ್ಲ. ದೇವನೂರರ ಪಾಡು ಹಾಗಲ್ಲ. ಅವರನ್ನು, ಸಾವಿರ ಕ್ಯಾಂಡಲ್ ದೀಪದ ಕೆಳಗೆ ನಿಲ್ಲಿಸಲು, ಇಡೀ ಕರ್ನಾಟಕವೇ ಸಿದ್ಧವಾಗಿತ್ತು. ಹಗಲು ಮೆರವಣಿಗೆ ಮತ್ತು ಇರುಳು ದೀವಟಿಗೆಗಳ ನಡುವೆ ಮಹಾದೇವನೆಂಬ ಮನುಷ್ಯ ಕಳೆದುಹೋಗಿ, ಆ ಹೆಸರಿನ ‘ಲೇಖಕ’, ‘ಸಂಸ್ಕೃತಿಚಿಂತಕ’(?) ‘ಅನುಭಾವಿ’,(?) ‘ಸಂತ’(?) ಮಾತ್ರವೇ ಉಳಿಯುತ್ತಿದ್ದರು. ಆದರೆ, ಈ ಭರ್ಜರಿ ಪದಗಳೆಲ್ಲದರ ಎಳೆಗಳನ್ನೂ ಒಳಗಿಟ್ಟುಕೊಂಡು, ತಾನು ಅದೇನೂ ಅಲ್ಲವೇನೋ ಎನ್ನುವಂತೆ ಬದುಕಲು, ಅಹಂಕಾರಿಯಾಗದೇ ಬದುಕಲು, ಅವರಿಗೆ ಸಾಧ್ಯವಾಯಿತು.
   ಈ ಹಿಂಜರಿಕೆಯೇ, ಈ ಆತ್ಮಸಾಕ್ಷಿಯೇ ಅವರನ್ನು ಕಾಪಾಡಿಕೊಂಡಿರುವುದು. ಗಾಂಧೀಜಿಯವರ ಸತ್ಯಶೋಧನೆಯಲ್ಲಿ ಒಂದು ಘಟನೆ ಬರುತ್ತದೆ. ಗೆಳೆಯನೊಬ್ಬ ಅವರನ್ನು ವೇಶ್ಯೆಯ ಮನೆಗೆ ಕರೆದೊಯ್ಯುತ್ತಾನೆ. ಈ ‘ಅಬ್ಬೆಪಾರಿ’ ಭಯದಿಂದಲೇ, ಹಾಗೇ ಸುಮ್ಮನೆ ಹಿಂದಿರುಗುತ್ತಾರೆ. ‘ದುರ್ಬಲ್ ಕೇ ಬಲ್ ರಾಂ’ ಎಂದುಕೊಳ್ಳುತ್ತಾರೆ. ತನಗೆ ಇಷ್ಟವಾಗದ ಕೆಲಸವನ್ನು ಮಾಡವುದಿಲ್ಲ, ಎನ್ನಲು ಧೈರ್ಯಬೇಕು. ಈ ಮಹಾದೇವ, ಬಹಳ ಹಿಂದೆ ಸಿ.ಐ.ಐ.ಎಲ್.ನಲ್ಲಿ ಕೆಲಸ ಮಾಡುತ್ತಿದ್ದರಂತೆ. ಬೇಡ ಎನ್ನಿಸಿತು. ನನಗೂ ನ್ಯಾಯವಾಗುವುದಿಲ್ಲ, ಅದಕ್ಕೂ ನ್ಯಾಯವಾಗುವುದಿಲ್ಲ ಎನ್ನಿಸಿರಬೇಕು. ಸರಿ, ಆ ಕೆಲಸ ಬಿಟ್ಟರು. ಫಾರಂ ಮಾಡಿದರು. ಸುಮಿತ್ರಾ ಮೇಡಂ ಬರೆದಿರುವಂತೆ, ಬೆರಳು ಗಾತ್ರದ ಮೂಲಂಗಿ ಬೆಳೆದರು. ನಮ್ಮಂತಹ ಅನೇಕರು, ‘ಬೇಡ, ಬೇಡ’ ಎಂದು ಗೊಣಗುತ್ತಲೇ, ನಮ್ಮ ನಮ್ಮ ನರಕಗಳಲ್ಲಿ ಮೂವತ್ತು ನಲವತ್ತು ವರ್ಷ ಕಳೆದು ಬಿಡುತ್ತೇವೆ. ಇನ್ನೊಮ್ಮೆ ಹೇಳುತ್ತೇವೆ. ಬೇಡ ಎನ್ನುವುದಕ್ಕೂ ಧೈರ್ಯ ಬೇಕು. ಮಹಾದೇವರ ಕಥೆಯ ಪಾತ್ರಗಳೂ ಇಂತಹುವೇ. ‘ಗ್ರಸ್ತರು’ ಕಥೆಯ ನಾಯಕ, ಗೌಡರು ಕೊಡಿಸಿದ ಕೆಲಸ ಬಿಟ್ಟು, ಊರಿಗೆ ಹಿಂದಿರುಗುತ್ತಾನೆ. ಯಾಕೆ ಬಿಟ್ಟೆ ಎಂದು ತಾಯಿ ಕೇಳಿದರೆ, ಗೌಡರು ಕೇಳಿದರೆ, ‘ನಿಮಗೆ ಅರ್ಥವಾಗುವುದಿಲ್ಲ’ ಎನ್ನುತ್ತಾನೆ. ನಿಜ. ಯಶವಂತಚಿತ್ತಾಲರು ‘ಪುರುಷೋತ್ತಮ’ ಕಾದಂಬರಿಯಲ್ಲಿ ಹೇಳಿದಂತೆ, ಹಣ, ಆಸ್ತಿ, ಅಧಿಕಾರ ಬೇಡವೆಂದು ಹೇಳುವವನೇ ನಮ್ಮ ಕಾಲದ ನಿಜವಾದ ಹೀರೋ. ಆ ಅರ್ಥದಲ್ಲಿ ಈ ಮಹಾದೇವ ಮತ್ತು ನಮ್ಮ ಈ ಆಂದೋಲನದ, ಈ ಭಾನುವಾರದ ಪುರವಣಿಯ ಸಂಪಾದಕ ಮಹಾಶಯರು ನಿಜವಾದ ಹೀರೋಗಳು. ಇವರಿಬ್ಬರಿಗೂ ಇದು ಯಾವುದೂ ಹುಳಿ ದ್ರಾಕ್ಷಿಯಲ್ಲ. (ನಿಜವಾದ ವ್ಯಂಗ್ಯವೆಂದರೆ, ಇದನ್ನು ಬರೆಯುತ್ತಿರುವ ಈ ನಾನು, ಮುಪ್ಪಿನ ವಯಸ್ಸಿನಲ್ಲಿ, ಮಹಾದೇವ ಅಂದು ಬಿಟ್ಟ ಸಿ.ಐ.ಐ.ಎಲ್.ಗೆ ಸೇರಿಕೊಂಡು, ಏನೋ ಮಾಡುತ್ತಿದ್ದೇನೆ. ಅವರವರ ಹುಚ್ಚು ಅವರವರಿಗೆ ಪ್ರಿಯ.)
   ಮಹಾದೇವರ ಮೌನದ ಹಿಂದೆ ಇನ್ನೂ ಒಂದು ಪಟ್ಟು ಇದೆ. ಅದು ನಮ್ಮದೇ ಗೆಳೆಯರ ಮತ್ತು ಸಮಕಾಲೀನರ ಸ್ವಾರ್ಥ, ಕ್ರೌರ್ಯ ಹಾಗೂ ಸಣ್ಣತನಗಳ ಬಗ್ಗೆ ಮಾತನಾಡಬೇಕಾಗುವ ಇಕ್ಕಟ್ಟು. ‘ಅನ್ಯ’ವನ್ನು ಇಟ್ಟುಕೊಂಡು ಇಲ್ಲವೇ ಕಟ್ಟಿಕೊಂಡು ಮಾತನಾಡುವುದು ಸುಲಭ. ಮನೆಯೊಳಗಿನ ಬೆಂಕಿಯ ಬಗ್ಗೆ ಮೂಗುಬ್ಬಸವಷ್ಟೇ ಸಾಧ್ಯ. ಅಂತಹ ಮಹಾದೇವ ಕೂಡ ‘ರಾಜಕೀಯ ಪಕ್ಷ’ ಕಟ್ಟುವ ಮಾತನಾಡಿದರೆ, ಎಲ್ಲವೂ ನಿಜವಾಗಿಯೂ ಮಿತಿ ಮೀರಿದೆಯೆಂದೇ ಅರ್ಥ.
   ಇಷ್ಟೆಲ್ಲವನ್ನೂ ನಾನು ಮಹಾದೇವರನ್ನು ಅನೇಕ ವರ್ಷಗಳಿಂದ ಬಲ್ಲ ‘ಜಿಗ್ರಿ ದೋಸ್ತಿ’ನಂತೆ ಬರೆದಿದ್ದೇನೆ. ವಾಸ್ತವವಾಗಿ, ನಾನು-ಅವರು ಇದುವರೆಗೆ ಪರಸ್ಪರ ಹದಿನೈದು ಮಾತು ಆಡಿರಬಹುದು. ಅದರಲ್ಲೂ ನಾನು ಹನ್ನೆರಡಾದರೆ, ಅವರು ಮೂರು. ಈಗಲೂ ಇನ್ನೊಮ್ಮೆ ಭೇಟಿಯಾದಾಗ, ಮತ್ತೆ ಆಡುವುದು ಒಂದೊವರೆ ಮಾತೇ. ಆದರೆ ‘ಸಂಬಂಜ’ವನ್ನು ಕಟ್ಟಿಕೊಳ್ಳಲು, ಕಾಪಾಡಿಕೊಳ್ಳುವ ಮಾತು ಯಾಕೆ ಬೇಕು? ಅಂತಹ ಸಂಬಂಧ ಖಾಸಗಿಯೂ ಹೌದು, ಸಾರ್ವಜನಿಕವೂ ಹೌದು.