ಅಸಹಾಯಕರ ಕಣ್ಣೀರು ಒರೆಸಲಿ…

(10.1.2026 ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ- ಸುದೀರ್ಘ ಅವಧಿಯ ಮುಖ್ಯಮಂತ್ರಿ ಸಿದ್ದರಾಮಯ್ಯ-ಜನಕಲ್ಯಾಣಕ್ಕೆ ಗ್ಯಾರಂಟಿ, ಸರ್ಕಾರದ ಪ್ರಗತಿ ಪಥ- ಅಭಿಪ್ರಾಯ ಆಧಾರಿತ ವಿಶೇಷ ವರದಿಯಲ್ಲಿ ದೇವನೂರ ಮಹಾದೇವ ಅವರ ಅಭಿಪ್ರಾಯ..).
ಮುಖ್ಯಮಂತ್ರಿ ಸಿದ್ದರಾಮಯ್ಯನವರು 1970ರ ರಾಜಕಾರಣದ ಉತ್ಪನ್ನ. ಸಮಾಜವಾದ, ಸಮತಾವಾದ, ಸಾಮಾಜಿಕ ನ್ಯಾಯ, ಕಲ್ಯಾಣ ರಾಜ್ಯ ಇಂತವು ಆ ಕಾಲದಲ್ಲಿ ಸಹಜ ಪ್ರವಾಹವಾಗಿತ್ತು. ಈ ಪ್ರವಾಹದ ಜೊತೆಗೆ ಈಜುತ್ತಾ, ಆ ಕಾಲದಲ್ಲಿದ್ದ ಮುಖ್ಯಮಂತ್ರಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಉಳುವವನಿಗೇ ಭೂಮಿ, ಜೀತಮುಕ್ತ, ಋಣಮುಕ್ತ, ಹಿಂದುಳಿದವರಿಗೆ ಮೀಸಲಾತಿ, ಮಲಹೊರುವ ಪದ್ಧತಿ ನಿಷೇಧ, ಜೊತೆಗೆ ಅದುವರೆಗೆ ಪ್ರಾತಿನಿಧ್ಯವಿಲ್ಲದ ಸಮುದಾಯಗಳಿಗೆ ಶಾಸನ ಸಭೆಯಲ್ಲಿ ಪ್ರಾತಿನಿಧ್ಯ ಹೀಗೆ ಎದೆಗಾರಿಕೆಯ ಕೆಲಸಕಾರ್ಯಮಾಡಿ ದಕ್ಕಿಸಿಕೊಂಡರು. ಇವರಿಗೆ ಆ ಕಾಲವೂ ಪೂರಕವಾಗಿತ್ತು. ಈಗಲೂ, ತಮ್ಮ ಎದೆಯೊಳಗೆ 1970ರ ಸಮಾಜವಾದಿ ತುಡಿತವನ್ನು ಜೀವಂತವಾಗಿರಿಸಿಕೊಂಡಿರುವ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಪ್ರಗತಿಪರ ಕಲ್ಯಾಣ ಕಾರ್ಯಕ್ರಮಗಳಿಗೆ, ಜಾಗತೀಕರಣ, ಖಾಸಗೀಕರಣದ ಈ ಕಾಲ ಪೂರಕವಾಗಿಲ್ಲ. ಹಾಗಾಗಿ, ಪ್ರವಾಹದ ವಿರುದ್ಧ ಈಜಬೇಕು. ಇದಕ್ಕೆ ಅಪಾರ ಸತ್ವ, ಧೃಡಚಿತ್ತ ಬೇಕು.ಸಿದ್ದರಾಮಯ್ಯನವರಿಗೆ ಇದೆ ಅನಿಸುತ್ತದೆ. ಹಾಗಾಗಿ, ಗುತ್ತಿಗೆ ಕೆಲಸದಲ್ಲಿ ದಲಿತರು ಮತ್ತು ಹಿಂದುಳಿದವರಿಗೆ ಮೀಸಲಾತಿ, ಪಿಟಿಸಿಎಲ್ ಕಾಯ್ದೆ ಜಾರಿ, ಎಸ್‌ಸಿಪಿ, ಟಿಎಸ್‌ಪಿಯಲ್ಲಿ 7ಡಿ ರದ್ದು. ದೇವನಹಳ್ಳಿ ಡಿನೋಟಿಫಿಕೇಶನ್, ಒಳಮೀಸಲಾತಿ, ಗ್ಯಾರಂಟಿ ಯೋಜನೆ ಇಂತಹಾ ಮತ್ತಿತರ ಯೋಜನೆಗಳನ್ನು ಜಾರಿಗೊಳಿಸಿದರು. ಇಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಏನೇನೋ ರೆಕಾರ್ಡ್‌ಗಳನ್ನು ಮುರಿದರಂತೆ. ಆಯ್ತು, ಅವರು ಈಗ ಹಿಂದಿನಂತೆ ವಿಳಂಬ ಮಾಡದೆ, ಅಸಹಾಯಕರ ಕಣ್ಣೀರು ಒರೆಸುವತ್ತವೇಗವಾಗಿ ನಡೆಯಲಿ ಎಂದು ವಿನಂತಿಸುವೆ.
-ದೇವನೂರ ಮಹಾದೇವ, ಲೇಖಕ ಮತ್ತು ಹೋರಾಟಗಾರ