ಬನವಾಸಿಯ ವನವಾಸಿ ನವಿಲು ದಾರಿಯ ನವ್ವಾಲೆ- ಆರ್. ನಿರ್ಮಲಾ

[ದೇವನೂರ ಮಹಾದೇವ ಅವರ ಬದುಕು, ಬರಹ ಕುರಿತು- ಅಭಿನವ ಪ್ರಕಾಶನದ  ‘ಯಾರ ಜಪ್ತಿಗೂ ಸಿಗದ ನವಿಲುಗಳು’ ಪುಸ್ತಕ ( ಸಂ: ಪಿ. ಚಂದ್ರಿಕಾ. ಮೊದಲ ಮುದ್ರಣ 1999,)ದಲ್ಲಿ ದಾಖಲಾದ ಆರ್.ನಿರ್ಮಲಾ ಅವರ ಲೇಖನ ]
ಹೊಳಪಿನೊಂದು ಜೋಡಿಕಣ್ಣು, ಬಲಗೈ ಬೆರಳ ಮಧ್ಯೆ ಆಗಷ್ಟೇ ತುದಿಗೆಂಪಾದ ವಿಲ್ಸ್ ಸಿಗರೇಟು, ಘಾಟು. ಸಿಗರೇಟು ತುದಿಗೆ ಹೊಗೆ ಹೊತ್ತಿಸಿದ ಪುಟ್ಟ ಪಪ್ಪಿಯನ್ನು ಅಲುಗಾಡಿಸುತ್ತಾ ಕಡ್ಡಿಯಿದ್ದಾವೆ ಎಂಬ ಅರಿವಿನಿಂದ ಅಂಗಿಯ ಜೇಬಿಗಿಳಿಸುವ ಎಡಗೈ. ಆ ದೊಡ್ಡ ಉಬ್ಬಿದ ದೊಗಲೆ ಅಂಗಿ ಜೇಬಿನೊಳಗೆ ಏನೆಲ್ಲಾ ಅಡಗಿದೆಯೋ, ವಿಲ್ಸ್ ಮಾತ್ರ ಸದಾ ಇದ್ದೇ ಇರುತ್ತದೆ. ಇಸ್ತಿç ಕಾಣದ ಉಡುಪು. ಅರ್ಧತೋಳಿನ ಶರಟು, ತುಂಬುತೋಳಿನದಾದರೂ ಮೊಳಕೈವರೆಗೆ ಮಡಚಿಕೊಂಡಿರುವುದೇ ರೂಢಿ. ಶರಟಿನ ಮೇಲು ಗುಂಡಿಗಳನ್ನು ಹಾಕಿ ಕೊಂಡಿರಲೇಬೇಕೆಂದೇನಿಲ್ಲ. ಮಾಸಲು ಬಣ್ಣದ ಪ್ಯಾಂಟು. ಕಪ್ಪು ಎಂದೇ ಹೇಳಬೇಕಾದ ಕಡ್ಡಿಯಂತಹ ತೆಳುನೀಳ ದೇಹ. ಪ್ರೀತಿಯ ಅಮ್ಮ ಅಜ್ಜಿಯರಾದರೆ ಕಪ್ಪು ಕಸ್ತೂರಿ ಎಂದಾರು. ತಲೆ ತುಂಬಾ ಎರ್ರಾಬಿರ್ರಿ ಚೆದುರಿ ಮಿರುಗುವ ದಟ್ಟ ಕಪ್ಪು ಗುಂಗುರು ಕೂದಲು. ಈ ಕೂದಲಿಗೆ ಐವತ್ತಾಗಿರಬಹುದೆಂದು ಗುಟ್ಟು ಬಿಟ್ಟುಕೊಡುವ ಹಾಗೆ, ಕ್ರಾಪು ಕಾಣದ ಕ್ಷೌರ ಕಾಣದ ಗಡ್ಡ ಮೀಸೆಯಲ್ಲೂ ಅಲ್ಲಲ್ಲಿ ಇಷ್ಟಿಷ್ಟು ಮಾಸಲು ಬಿಳಿಗೂದಲು. ಕಪ್ಪು ಬಿಳುಪಿನ ಮಿಶ್ರಣ. ಉಡುತೊಡುವ ಬಗ್ಗೆ ಶಿಸ್ತುಗಾರನಲ್ಲದ, ವೇದಿಕೆಗಳ ಮೇಲೂ ಹೀಗೇ ಇರುವ ಈ ವ್ಯಕ್ತಿಯಲ್ಲಿ ನನ್ನನ್ನು ಬೆರಗುಗೊಳಿಸಿದ್ದು, ಅಂತಃಕರಣವೇ ಅಕ್ಷರವಾಗುವ ಬಗೆ.
ದೇವನೂರರ ಬಗ್ಗೆ ಬರೆಯಹೊರಟಾಗ ಕಣ್ಣ ಮುಂದೆ ಬಂದ ಆಪ್ತ ಚಿತ್ರವಿದು. ಇಂಥ ವ್ಯಕ್ತಿಯನ್ನು ಒಂದು ಲೇಖನದ ವಸ್ತು ಮಾಡಿ ಬರೆಯಬಹುದೇ? ಬರಹದ ಒರಟುತನಕ್ಕೆ ಸಿಗದ ಏನೋ ಒಂದು ಮಾರ್ದವತೆ ಅವರಲ್ಲಿದೆ. ಅದನ್ನು ಮುಟ್ಟಿ ಅಕ್ಷರ ಚೌಕಟ್ಟಿನೊಳಗೆ ತೆರೆದಿಡಲು ಹೇಗೆ ಸಾಧ್ಯ? ಬರೆಯಲಾರೆನೆಂದರೆ ಮಾತಿಗೆ ಎಟುಕದೇ ಉಳಿಯುವ ನವಿರು ಅಕ್ಕರೆಗೆ ಅಪಚಾರ.
ದೇವನೂರರ ಸಾಹಿತ್ಯದ ಬಗ್ಗೆ ಬರೆವ, ಚರ್ಚಿಸುವ, ನಿರ್ದೇಶಿಸುವ, ರಂಗರೂಪ- ಕ್ಕಿಳಿಸುವ ಸಮರ್ಥರು ಅನೇಕರಿದ್ದಾರೆ. ದಲಿತ ಸಂಘರ್ಷ ಸಮಿತಿ, ಸುದ್ದಿ ಸಂಗಾತಿ, ಕುಸುಮಬಾಲೆಯ ಕೃತಿವಾಚನ, ದೃಶ್ಯ ಸಾಧ್ಯತೆಗಳ ಬಗ್ಗೆ ತಿಳುವಳಿಕೆ ನನಗಿಲ್ಲ. ಸುಮ್ಮನೆ ದೇವನೂರರ ಬಗ್ಗೆ ಬರೆದುಬಿಡುವಾ ಎಂದೊಪ್ಪಿಕೊಂಡೆ. ಇದು ಎಷ್ಟು ಕಷ್ಟದ ಕೆಲಸ ಎಂಬುದು ಬರಹಕ್ಕೆ ತೊಡಗಿದಾಗ ಬಿಳಿಹಾಳೆಗಳು ತಿಳಿಸಿಕೊಟ್ಟವು. ದೇವನೂರರ ವ್ಯಕ್ತಿತ್ವ-ಬರವಣಿಗೆ, ಕನ್ನಡ ಸಾಹಿತ್ಯ ಹಾಗೂ ಜನಪರ ಚಳವಳಿಗಳು ಬಿಡಿಬಿಡಿಯಾಗಿ ನೋಡಲು ಸಾಧ್ಯವಿಲ್ಲವೆಂಬುವಷ್ಟರಮಟ್ಟಿಗೆ ಬೆರೆತುಹೋಗಿವೆ. ಕೊಟ್ಟ ಮಾತಿಗೆ ತಪ್ಪದ ಪುಣ್ಯಕೋಟಿಯ ಹಾಗೆ, ನನಗೆ ಚಂದ ಕಂಡ ಮಗ್ಗುಲನ್ನು ಅಕ್ಷರಕ್ಕಿಳಿಸುವ ಪ್ರಯತ್ನ ಮಾಡುತ್ತೇನೆ.
*
ನಮ್ಮೆರಡು ಕುಟುಂಬಗಳಲ್ಲಿರುವ ಆತ್ಮೀಯತೆಗೆ, ದೇವನೂರರನ್ನು ನಾನು ದೇವನೂರು; ಮಹಾದೇವ ಇತ್ಯಾದಿಯಾಗಿ ಬರೆಯುವುದು, ಬೇಕಿಲ್ಲದ ದೂರವನ್ನು ನಡುವೆ ತಂದಿಟ್ಟಂತಾಗುತ್ತದೆ. ದೇವನೂರ ಮಹಾದೇವ ನಮ್ಮ ಪಾಲಿಗೆ `ಮಾದೇವ’. ಮಗಳು ಸ್ನೇಹಾಳ `ಮಾದೇವ್ ಮಾಮ’.
ಮಾದೇವ ಮೊದಲು ಕಣ್ಣಿಗೆ ಕಂಡಿದ್ದು `ದ್ಯಾವನೂರು’ ಪುಸ್ತಕದ ಮುಖಪುಟದ ಚಿತ್ರವಾಗಿ, ಎಪ್ಪತ್ತರ ದಶಕದ ಆದಿಯಲ್ಲಿ. ಮುದ್ರಣದ ಪ್ರಕ್ರಿಯೆಯನ್ನು ದಾಟಿ ಬಂದ ಮೇಲೂ, ಬದುಕಿನೆಲ್ಲ ಸತ್ಯವನ್ನು ಹೀರಿಕೊಳ್ಳಬೇಕೆಂಬ ಹಂಬಲ ಕಂಗಳಲ್ಲಿ ತುಂಬಿಕೊAಡಿತ್ತು. ಈ ವ್ಯಕ್ತಿ ಎಂದಾದರೂ ಸಾಹಿತ್ಯದ ಸಭೆ ಸಮಾರಂಭ ಗೋಷ್ಠಿಗಳಲ್ಲಿ ಕಾಣಸಿಗಬಹುದೇ ಎಂದುಕೊಂಡಿದ್ದೂ ಉಂಟು.
ಮೈಸೂರಿನ ವಿಚಾರವಾದಿ ಕೆ. ರಾಮದಾಸರ ಮಡದಿಯಾದ ಮೇಲೆ ಮನೆಯಲ್ಲೇ ಮಾದೇವ ಅವರ ಭೇಟಿಯಾಯಿತು. ಅರ್ಧ ಕಪ್ ಟೀ ಕೊಡುವ ಅವಕಾಶವೂ ಸಿಕ್ಕಿತು. ಅಂತಃಕರಣವನ್ನು ಅಕ್ಷರವನ್ನಾಗಿಸುವ ಬರಹಗಾರನಾಗಿ ಸಮಾಧಾನಚಿತ್ತದ ವ್ಯಕ್ತಿಯಾಗಿ ಮನೆಗೆ ಹತ್ತಿರದವರಾಗಿದ್ದಾರೆ- ಮಾದೇವ.
ಮಾದೇವ ಆಗಾಗ, ಮನಸ್ಸು ಬಂದಾಗ, ನೆನೆಸಿಕೊಂಡಾಗ, ಹೊತ್ತುಗೊತ್ತಿನ ಪರಿವೆಯಿಲ್ಲದೆ ನಮ್ಮ ಮನೆಗೆ ಬಂದುಬಿಡುತ್ತಾರೆ. ಅಕ್ಕರೆಯಿರುವಲ್ಲಿ ಗಡಿಯಾರಕ್ಕೇನು ಕೆಲಸ? ಕಾಲ ಅನಂತವಾದುದು, ಅಖಂಡವಾಗಿ ನಮ್ಮೊಂದಿಗಿದೆ, ಇರುತ್ತದೆ ಎಂಬ ನಂಬಿಕೆಯಿರುವವರಂತೆ ವರ್ತಿಸುವ ಮಾದೇವ ಅವರನ್ನು ಅನೇಕ ಸಲ ತಮಾಷೆ ಮಾಡಿದ್ದೇನೆ; `ನೀವು ಗಡಿಯಾರ ನೋಡುತ್ತೀರೋ ಕಾಲವನ್ನು ಗುರುತಿಸಲು ಸೂರ್ಯ ಚಂದ್ರರನ್ನು ಮಾತ್ರ ನೋಡುತ್ತೀರೋ’; ಮಾದೇವ ಈ ಅರ್ಥದಲ್ಲಿ ಕಾಲಾತೀತ. ಒಮ್ಮೆ ಬೆಳಗಿನ ಮಬ್ಬಿನಲ್ಲಿ ತೆರೆದ ಮುಂಬಾಗಿಲುದ್ದಕ್ಕೆ ಬಂದು ನಿಂತಾಗ ನನಗೆ ಸೋಜಿಗ. `ಮಾದೇವನಿಗೆ ಬೆಳಗಾಯಿತೆಂದ ಮೇಲೆ ಈಗೆಷ್ಟು ಗಂಟೆ?’ ಗೋಡೆಯ ಗಡಿಯಾರ ಗಂಟೆಯಿನ್ನೂ ಆರು ಎನ್ನುತ್ತಾ ಟಿಕ್ ಟಿಕ್ ಮುನ್ನಡೆಯುತ್ತಿತ್ತು. ಅಪ್ರಯತ್ನವಾಗಿ ಪ್ರಶ್ನೆ ಚಿಮ್ಮಿತು. `ಏನಿಷ್ಟು ಬೆಳಗ್ಗೆ ತಮ್ಮ ಧರ್ಮದರ್ಶನ?’ ಅಮಾಯಕ ಉತ್ತರ, `ಕ್ರಾಫ್ ಮಾಡಿಸಿಕೋಬೇಕಿತ್ತು ಮೇಡಂ. ಬೆಳಗ್ಗೆ ಬೇಗೆದ್ದು ಬಂದೆ’. ಹೌದು ಕಂಗಳಲ್ಲಿನ್ನೂ ನಿದ್ದೆ ಮಂಪರಿತ್ತು. ಕೈಯಲ್ಲೊಂದು ಉರಿವ ವಿಲ್ಸ್ ಇತ್ತು. ಗುಂಗುರು ದಟ್ಟ ಕೂದಲಲ್ಲಿ ಇನ್ನೊಂದು ಕೈಯಾಡುತ್ತಿತ್ತು. ಪಕ್ಕನೆ ನಗೆ ತಡೆಯಲಾರದೆ ಹೇಳಿಬಿಟ್ಟೆ- `ನಮ್ಮನೆ ಕಣ್ರಿ ಇದು ಕ್ಷೌರದಂಗಡಿ ಅಲ್ಲ.’ ನಿದ್ದೆಗಣ್ಣಲ್ಲಿ ತಪ್ಪು ಮಾಡಿದ ಹುಡುಗನಂತೆ ಭುಜ ಕುಗ್ಗಿಸಿ ಒಳಬಂದ ಮಾದೇವನ ಹೆಜ್ಜೆಗಳಲ್ಲಿ ವಿನಯವಿತ್ತು. ಕಂಗಳಲ್ಲಿ ಗಲಿಬಿಲಿಯನ್ನು ಅಡಗಿಸುವ ಪ್ರಯತ್ನವಿತ್ತು. `ಬೆಳಗಿನ ಥಂಡಿಗೆ ಅರ್ಧ ಕಪ್ ಬಿಸಿಬಿಸಿ ಹಬೆಯಾಡುವ ಟೀ ಬೇಕಿತ್ತು.’ ಇಂತಹ ಸಹಜ ನಡವಳಿಕೆಯ ಮಾದೇವ ಇಷ್ಟವಾಗುವ ವ್ಯಕ್ತಿ. ಆದ್ದರಿಂದಲೇ ಸಭೆ ಸಮಾರಂಭಗಳಲ್ಲಿ ತಡವಾಗಿ ಹೋದರೂ ಜನ ಮಾದೇವನಿಗೆ ಕಾಯುತ್ತಾರೆ.
ಇಲ್ಲೊಂದು ಅಡ್ಡಕತೆಯನ್ನು ಹೇಳಿಬಿಡುತ್ತೇನೆ. ನಮ್ಮ ರಸ್ತೆಯಾಚೆಗೆ ಒಂದು ಕ್ಷೌರದಂಗಡಿ ಇದೆ. ಸ್ನೇಹಿತರು, ಪರಿಚಿತರು ಅಲ್ಲಿ ಹಾಜರಿ ಹಾಕಿ ಇಲ್ಲಿಗೆ ಬಂದು ಬಿಡುವುದುಂಟು. ಕುರ್ಚಿ ಖಾಲಿಯಾದೊಡನೆ ಅಂಗಡಿ ಹುಡುಗ ಬಂದು ಕರೆಯುತ್ತಾನೆ. ಅಲ್ಲಿಯವರೆಗೆ ನಮ್ಮ ಮನೆ `ಚಾರ್ವಾಕ’ದಲ್ಲಿ ದೇಶದ ಸುದ್ದಿಯೆಲ್ಲಾ ಚರ್ಚೆಗೆ ಬಂದಿರುತ್ತದೆ. ಕೆಲವರು ಕೆಲವೊಮ್ಮೆ `ಇನ್ನಷ್ಟು ಹೊತ್ತು ಬಿಟ್ಟು ಬಾ’ ಎಂದು ಅಂಗಡಿ ಹುಡುಗನನ್ನು ವಾಪಾಸು ಕಳಿಸುವುದೂ ಉಂಟು. ಆತ ಹೇಗೂ ಮತ್ತೆ ಬಂದೇ ಬರುತ್ತಾನೆಂಬ ನಂಬಿಕೆ. ಅಂಗಡಿಯಾತ ಗಿರಾಕಿಯನ್ನು ಕಳೆದುಕೊಳ್ಳುವುದಿಲ್ಲ. ಹೀಗೇ ಎಷ್ಟು ಹೊತ್ತಿನಲ್ಲಾದರೂ ಬರಬಹುದೆಂಬ ವಿಶ್ವಾಸವಿಟ್ಟು ಬಂದವರನ್ನು `ಬನ್ನಿ’ ಎನ್ನದಿದ್ದರೆ ಹೇಗೆ? ಮನೆ ಬಾಗಿಲಿಗೆ ಬಂದವರನ್ನು ಮೆಲುಮಾತುಗಳಲ್ಲಿ ಬರಮಾಡಿಕೊಳ್ಳಬೇಕಾದುದು ಗೃಹಸ್ಥ ಧರ್ಮವಲ್ಲವೇ? ಅಂಥ ಹೊತ್ತಿನಲ್ಲಿ ಬಸವಣ್ಣನವರ ಒಂದು ವಚನವನ್ನು ನೆನಪು ಮಾಡಿಕೊಳ್ಳುತ್ತೇನೆ-
ಏನಿ ಬಂದಿರಿ ಹದುಳವಿದ್ದಿರೆ ಎಂದಡೆ
ನಿಮ್ಮ ಮೈಸಿರಿ ಹಾರಿಹೋಹುದೇ?
ಕುಳ್ಳಿರೆಂದಡೆ ನೆಲ ಕುಳಿಹೋಹುದೇ?
ಒಡನೆ ನುಡಿದರೆ ಸಿರಹೊಟ್ಟೆಯೊಡೆವುದೆ?
ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದೊಡೆ
ಮೂಗ ಕೊಯ್ವದ ಮಾಬನೇ ಕೂಡಲ ಸಂಗಮದೇವಯ್ಯ
ಮಾದೇವ ಮತ್ತು ನಮ್ಮ ಮನೆಯ ಸಂಪರ್ಕ, ಜಾತಿಯಿಂದ ಜಡಗಟ್ಟಿದ ಸಮಾಜದ ಕ್ರೌರ್ಯವೊಂದನ್ನು, ಹೊರಹಾಕಿದ ಪ್ರಸಂಗವೊಂದನ್ನಿಲ್ಲಿ ದಾಖಲು ಮಾಡಬೇಕೆನಿಸಿದೆ. ನಮ್ಮ ಮನೆಗೊಬ್ಬಳು ಮನೆಗೆಲಸದಾಕೆ ಬರುತ್ತಿದ್ದಳು. ಗಂಡ ಕುಡುಕ, ಕಂಡಾಪಟ್ಟೆ ಹೊಡೆಯುತ್ತಿದ್ದ. ಶಾಲೆ ಕಲಿಯುತ್ತಿದ್ದ ಎರಡು ಮುದ್ದಾದ ಗಂಡು ಮಕ್ಕಳು. ರೇಷನ್ ಕಾರ್ಡಿಲ್ಲದೆ ಅಕ್ಕಿ ಸೀಮೆಎಣ್ಣೆ ಸಕ್ಕರೆಗೆ ಪರದಾಡುತ್ತಿದ್ದಳು. `ಅಯ್ಯೋ ಪಾಪ’ ಎನಿಸಿ, ಕಾಲೇಜಿನ ಪಕ್ಕದಲ್ಲೇ ಇರುವ ರೇಷನ್ ಆಫೀಸಿಗೆ ಅಲೆದಾಡಿ ಸ್ನೇಹಿತರನೇಕರ ಸಹಕಾರದಿಂದ ಹೊಸ ರೇಷನ್ ಕಾರ್ಡ್ ಮಾಡಿಸಿಕೊಟ್ಟೆ. ಅಂದೂ ಮಾದೇವ ಬೆಳಗು ಮುಂಚೆಯೇ ಮನೆಗೆ ಬಂದಿದ್ದರು. ಆಕೆ ಹಿತ್ತಲಲ್ಲಿ ಕೇಳಿದಳು- `ಇವರು ದ್ಯಾವನೂರು ಮಾದೇವಪ್ಪನವರಲ್ಲವಾ?’ ಹೌದು, ಎಂದವಳು ಮರೆತುಬಿಟ್ಟೆ. ನಿತ್ಯ ನಮ್ಮ ಮನೆಯ ಕಾಫಿಯನ್ನು ಚಪ್ಪರಿಸುತ್ತಿದ್ದ ಮನೆಗೆಲಸದಾಕೆ ಕಾಫಿ ನಿರಾಕರಿಸತೊಡಗಿದಳು. ಏನೇನೋ ಸಬೂಬು ಹೇಳಿದಳು. ಗದರಿಸಿ ಕೇಳಿದಾಗ `ಮಾದೇವಪ್ಪವ್ರು ಮನೆ ಒಳಿಕ್ಕೇ ಬರ್ತಾರಲ್ಲ’ ಎಂದಳು. ಬೆಂಕಿ ಪೊಟ್ಟಣ ಹುಡುಕಿಕೊಂಡು ಅಡುಗೆಮನೆಯೊಳಗೂ ಬರುವ ಸಲಿಗೆ ಮಾದೇವನಿಗುಂಟು. ಅದಕ್ಕಾಗಿ ಕೆಲಸದಾಕೆಗೆ ನಮ್ಮ ಮನೆಯ ಒಂದು ಗುಟುಕು ನೀರೂ ಬೇಡವಾಯಿತು. ಶತಮಾನಗಳ ಕಾಲದಿಂದ ನಡೆದುಬಂದ ಜಾಡ್ಯವನ್ನು ತೊಡೆಯುವುದು ಹೇಗೆ?
ದಲಿತರ ಮತಾಂತರ ಕುರಿತ ಒಂದು ವಿಚಾರಸಂಕಿರಣ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ನಡೆದಿತ್ತು. ಮೀನಾಕ್ಷಿಪುರಂ ಅಥವಾ ಬೆಲ್ಚಿ ಘಟನೆಯು ನಡೆದ ಹೊಸದರಲ್ಲಿರಬೇಕು. ಸಭೆಯಲ್ಲಿದ್ದ ಹುಡುಗನೊಬ್ಬ ಹೇಳಿದ- `ದಲಿತರಿಗೆ ಮೀಸಲಾತಿ ಕೊಟ್ಟಿದ್ದೇ ತಪ್ಪು. ಬಡವರೆಲ್ಲರಿಗೆ ಕೊಡಬೇಕು.’ ವೇದಿಕೆಯ ಮೇಲಂದು ಮಾದೇವ ಅವರ ಮಡದಿಯೂ ಇದ್ದರು. ಅವರು ಥಟ್ಟನೆ ಹೇಳಿದ್ದಿಷ್ಟು- `ಬಡತನದ ಸಂಕಟ ನಿನಗೆ ಗೊತ್ತಿರಬಹುದು. ಅಸ್ಪೃಶ್ಯತೆಯ ನೋವು ನಿನಗೆ ಗೊತ್ತಾ?’ ಆ ಸಾಲು ಎಷ್ಟೋ ಸಲ ನನ್ನೊಳಗನ್ನು ಕಲಕಿದೆ. ನನ್ನ ನೆನಪಿನ ಶಕ್ತಿ ಇರುವತನಕ ನನ್ನನ್ನು ಕಾಡುತ್ತಲೇ ಇರುತ್ತದೆ.
ಇಂಥ ಬದುಕಿನ ನಡುವೆ ಎಳವೆಯಿಂದಲೇ ಬಿಟ್ಟ ಕಣ್ಣುಗಳಿಂದ ಸುತ್ತ ನೋಡುತ್ತಾ ಅದಷ್ಟನ್ನೂ ಎದೆಯೊಳಕ್ಕೆ ಎಳೆದುಕೊಳ್ಳುತ್ತಾ ಉಂಡ ನೋವಿಗೆ ಮನ ಕಹಿಯಾಗದೆ, ಪಡೆದ ಪ್ರೀತಿಗೆ ಎದೆ ಹಿಗ್ಗಿ ಮಾದೇವ ಬರಹಗಾರನಾಗಿ ರೂಪುಗೊಂಡದ್ದು ಕನ್ನಡ ಸಾಹಿತ್ಯಕ್ಕೊದಗಿದ ಒಂದು ಹೊಸ ಆಯಾಮ. ಅಂದಿನ ಮೈಸೂರಿನ ಸಾಂಸ್ಕೃತಿಕ ಸಾಹಿತ್ಯಿಕ ವಾತಾವರಣವೂ ಸೂಕ್ಷ್ಮ ಸಂವೇದನೆಯ ಮೌನಿ ಮಾದೇವನನ್ನು ಗಟ್ಟಿ ಬರಹಗಾರನನ್ನಾಗಿಸಲು ಸಹಕರಿಸಿರಬೇಕು. ರಾಮದಾಸ್ ಆಗಾಗ ಜ್ಞಾಪಿಸಿಕೊಳ್ಳುತ್ತಾರೆ- `ಜಾತಿ ವಿನಾಶ ಸಮ್ಮೇಳನ, ಬರಹಗಾರರ ಒಕ್ಕೂಟ, ಸಮಾಜವಾದಿ ಚಟುವಟಿಕೆಗಳ ಸಂದರ್ಭಗಳಲ್ಲಿ ಮಾದೇವ ಸಂಕೋಚದಿಂದ ಕುಳಿತಿರುತ್ತಿದ್ದರು.’
ನಮ್ಮ ಮನೆಗೆ ಮಾದೇವ ಅವರ ಹೊಕ್ಕು ಬಳಕೆ ಕಾಲು ಶತಮಾನಕ್ಕೂ ಹಿಂದಿನದು. ಕೆಲ ದಿನಗಳು ಮನೆಯಲ್ಲೇ ಇದ್ದು ರಾಮದಾಸ್ರ ಅಮ್ಮ ಮಂಜಮ್ಮನವರ ಕೈಯಡುಗೆ ಉಂಡು ಅವರ ಮಮತೆಯನ್ನೂ ಪಡೆದ ಹಲವರಲ್ಲಿ ಮಾದೇವ ಸಹ ಸೇರಿದ್ದಾರೆ. ಮಾದೇವನನ್ನು ಕೇಳಿಕೊಂಡು ಚಾರ್ವಾಕಕ್ಕೆ ದೂರವಾಣಿ ಕರೆ ಬಂದರೆ, ಬಿಸಿಲು ಮಳೆಯನ್ನು ಲೆಕ್ಕಿಸದೆ ಮನೆತನಕ ನಡೆದು ಹೋಗಿ ಸುದ್ದಿಕೊಡುವ ಕಾಳಜಿ ಮಂಜಮ್ಮನವರಿಗಿತ್ತು. ಹೋಳಿಗೆ ಮಾಡಿದಾಗಲೆಲ್ಲಾ ನೆನಪಿಸಿಕೊಳ್ಳುತ್ತಿದ್ದರು. ನೆನೆದವರ ಮನದಲ್ಲಿ ಎಂಬಂತೆ ಮಾದೇವ ಬಂದುಬಿಟ್ಟರೆ ಖುಷಿ. ಪ್ರೀತಿಯಿಂದ ಎರಡೂ ಕೈಯೊಡ್ಡಿ ಪಡೆದುಕೊಂಡು ಸಿಹಿ ರುಚಿಯನ್ನೊಮ್ಮೆ ಮೂಗರಳಿಸಿ ಸವಿಯುವ ಮಾದೇವನನ್ನು ಅಮ್ಮ ಅಕ್ಕರೆಯಿಂದ ನೋಡುತ್ತಿದ್ದರೆ ನನಗೆ ಒಮ್ಮೆಲೇ `ಒಡಲಾಳ’ದ ಸಾಕವ್ವ, `ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಐತ ಒಟ್ಟಿಗೆ ನೆನಪಾಗುತ್ತಾರೆ. ಸಾಕವ್ವ ಮಾದೇವನ ಸೃಷ್ಟಿಯೋ, ಮಾದೇವನಂತಹ ಬರಹಗಾರನನ್ನು ಸೃಷ್ಟಿಸಿದ್ದೇ ಸಾಕವ್ವನಂತಹ ಗಟ್ಟಿ ಪ್ರೀತಿಯುಳ್ಳ ತಾಯಂದಿರೋ! ಅಂತೂ ಒಂದೊಂದು ಸರಳ ನಡವಳಿಕೆಯ ಒಳಗೂ ಇಂಥದೇ ಎಂದು ಸ್ಪಷ್ಟವಾಗಿ ಹೇಳಲಾಗದ ಒಂದು `ಮಾದೇವತನ’ದ ಮಾರ್ದವತೆ ತುಂಬಿರುತ್ತದೆ.
ಮನೆಗೆ ಹತ್ತಿರವಾದವರ ಅಭಿರುಚಿಗಳ ಬಗ್ಗೆ ಸಹಜ ಆಸಕ್ತಿ ಇರುವಂತೆ ನನಗೆ ಮಾದೇವ ಅವರ ಕೈಬರಹದ ಬಗ್ಗೆಯೂ ಒಂದು ಕುತೂಹಲ. ಬಿಡಿಬಿಡಿಯಾದ ಸ್ಫುಟವಾದ ನೇರ ಲಂಬರೇಖೆಗಳAತೆ ಕಾಣುವ ಅಕ್ಷರಗಳು ಮಾದೇವನದು. ಸಹಿ ಕೂಡಾ, ತುದಿಮೊದಲಲ್ಲಿ ಒಂದೊಂದು ಅಕ್ಷರ ಕಂಡೂ ಕಾಣದಂತೆ ಕರಗಿರುವ, ಎಡದಿಂದ ಬಲಕ್ಕೆ ಕೊಂಚ ಮೇಲೆದ್ದ ಅಡ್ಡ ಸರಳರೇಖೆ. ಅದರೊಳಗೂ ಒಂದು ದೇವನೂರುತನವಿದೆ. ಸಹಿತಜ್ಞರು ಈ ಬಗ್ಗೆ ಏನು ಹೇಳುತ್ತಾರೋ ಸುಮ್ಮನೆ ಒಂದು ಕುತೂಹಲ ನನ್ನದು. ಸಹಿಯಲ್ಲಿ ಹೆಸರು ಪೂರ್ತಿ ಕಾಣುವಂತಿದ್ದರೆ ಸಂಕೋಚವೇ?
ಎಷ್ಟು ಹೊತ್ತಿನಲ್ಲಿ ಟೀ ಕೊಟ್ಟರೂ ಬೇಕು. ಆದರೆ `ಈಗ್ಯಾಕೆ ಮೇಡಂ?’ ಎನ್ನುವ ಸಂಕೋಚ. ಸಂಕೋಚ ಮಾದೇವನ ವ್ಯಕ್ತಿತ್ವದ ಒಂದು ಮುಖ್ಯ ಅಂಶ. ಸಂಕೋಚದೊಳಗೆ ಅನೇಕ ಸರಳ ಆಸೆಗಳು ಆಸೆಗಳಾಗಿಯೇ ಉಳಿದುಬಿಡುತ್ತವೆ. ಒಂದು ಸೊಗಸಾದ ಅಪತ್ರಿಕಾ ಪ್ರಸಂಗವನ್ನಿಲ್ಲಿ ಹೇಳುತ್ತೇನೆ. ಕನ್ನಡ ಮಹಾಕವಿಯೊಬ್ಬರಿಗೆ ಕನ್ನಡ ಕಾಗುಣಿತ ಹೇಳಿಕೊಡುವ ಸಂದರ್ಭ. ಕಾವೇರಿ ಚಳವಳಿಯ ಆರಂಭದ ದಿನಗಳವು. ಒಂದು ಪತ್ರಿಕಾ ಹೇಳಿಕೆಗೆ ಕುವೆಂಪು ಅವರ ಸಹಿ ಪಡೆಯಲೆಂದು ರಾಮದಾಸ್, ಪುಸ್ತಕ ಪ್ರಕಾಶನದ ಶ್ರೀರಾಮ್, ವಿಮರ್ಶಕ ಜಿ. ಎಚ್. ನಾಯಕ್, ಮಾದೇವ, ದೇವನೂರು ಶಂಕರ್ ಉದಯರವಿಗೆ ಹೋಗಿದ್ದರು. ಆಗಲೇ ಕಾಲ ಕುವೆಂಪು ಅವರನ್ನು ಹಣ್ಣು ಮಾಡತೊಡಗಿತ್ತು. ಚಿಂತನೆ ಮತ್ತು ಬುದ್ಧಿಶಕ್ತಿ ಪ್ರಖರವಾಗಿದ್ದರೂ ಕೈ ನಡುಗುತ್ತಿತ್ತು. ತಾರಿಣಿಯವರು `ಅಣ್ಣ’ನ ಕೈಹಿಡಿದು ಸಹಿಯನ್ನು ಅಭ್ಯಾಸ ಮಾಡಿಸಲೆಂದು ತಾಲೀಮು ನಡೆಸಿದ್ದರು. ಅದೊಂದು ಔಷಧಿ ಚೀಟಿಯ ಖಾಲಿ ಹಿಂಬದಿ. `ಅಣ್ಣ ಇಲ್ಲಿ ಹೀಗೆ ಕ ಗೆ ಕೊಂಬು ಕೊಡಬೇಕು’ ಯುಗದ ಮಹಾಕವಿಯ ಕೈಹಿಡಿದು ಮಗಳು ಅಕ್ಷರ ತಿದ್ದಿಸುವ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗುವ ಭಾಗ್ಯ ಎಷ್ಟು ಜನಕ್ಕೆ ಸಿಕ್ಕಬಹುದು? `ಆ ಚೀಟಿ ನನಗೆ ಸಿಕ್ಕಿದ್ದರೆ ಒಪ್ಪವಾಗಿ ಇಟ್ಟುಕೊಳ್ಳುತ್ತೇನೆ’ ಎಂಬುದು ಮಾದೇವನ ಮೂಕ ಹಂಬಲ. ಆ ಚೀಟಿ ಎಲ್ಲಿದೆಯೆಂದು ಉದಯರವಿಗೂ ಗೊತ್ತಿಲ್ಲವೇನೋ. ಮಾದೇವ ಅವರ ಇಂಥ ಆಸೆಗಳಲ್ಲಿ ಮುಗ್ಧ ಬೆರಗಿದೆ. ಮಹತ್ತಾದದ್ದರ ಸಾನಿಧ್ಯದಲ್ಲಿಯೇ ಸಹಜ ನಡೆಯುವ ಬದುಕಿನ ಸಣ್ಣ ಸರಳ ಸಂಗತಿಗಳನ್ನು ಗಮನಿಸುವ ಬರಹಗಾರನ ಒಳತುಡಿತವಿದೆ.
ಚಂದಮಾಮದ ಕಥೆಗಳು ಕೊಡುವ ಸರಳ ಉಲ್ಲಾಸಕ್ಕೆ ಮಾದೇವ ಮಾರು ಹೋಗಿದ್ದಾರೆ. ಗೋಕುಲ ವಾರಪತ್ರಿಕೆಯ ಬಾಲ ಬರಹಗಾರನಾಗಿದ್ದ ಮಾದೇವ ನಾಡಿನ ಒಬ್ಬ ಚಿಂತಕನಾಗಿ ಮಹತ್ವದ ಲೇಖಕನಾಗಿ ಬೆಳೆದಿದ್ದರೂ ಮಕ್ಕಳ ಕಥೆಗಳ ಸ್ವಾರಸ್ಯವನ್ನು ಸವಿಯುವ ಮುಗ್ಧತೆಯನ್ನು ಉಳಿಸಿಕೊಂಡಿರುವ `ಈ ಪರಿಯ ಸೊಬಗು’ ನನಗಂತೂ ಇಷ್ಟ. ಹಾಗೆಯೇ ವೈಯಕ್ತಿಕ ಬದುಕಿನ ಸ್ವಾರಸ್ಯ ಕ್ಷಣಗಳ ಸ್ವಾನುಭವ ನಿರೂಪಣೆಯ ಬರಹಗಳೂ ಮಾದೇವನ ಆಸಕ್ತಿಯ ವಸ್ತುವೇ ಆಗಿದೆ.
ಕುವೆಂಪುನಗರದ ರಸ್ತೆಗಳಿಗೆ ಅವರ ತತ್ವಸಿದ್ಧಾಂತಗಳ, ಕವನ ಸಂಕಲನಗಳ ಹೆಸರಿಟ್ಟಾಗ ಮಾದೇವ ಅವರ ಮನೆಯಿರುವ ರಸ್ತೆ `ನವಿಲು ರಸ್ತೆ’ ಎಂದಾಯಿತು. ಗರಿಬಿಚ್ಚಿ ಕುಣಿವ ನವಿಲಿನಂತೆಯೇ ಸಂಭ್ರಮಿಸಿ ತಮ್ಮ ಪ್ರಕಾಶನಕ್ಕೆ `ನವ್ವಾಲೆ ಪ್ರಕಾಶನ’ ಎಂದೇ ಹೆಸರಿಟ್ಟುಕೊಂಡರು.
ನವಿಲು ತನ್ನಿಚ್ಛೆ ಬಂದಾಗ ಲಾಸ್ಯವಾಡುವಂತೆ, ಅಕ್ಷರ ಧ್ಯಾನಕ್ಕೆ ಈತ ತೊಡಗುವುದು, ಹೊರಗಿನ ಒತ್ತಡಕ್ಕಲ್ಲ; ಮನದಾಳದ ತೀವ್ರ ತುಡಿತಕ್ಕೆ ಮಾತ್ರ. ರಾಶಿ ರಾಶಿ ಬರೆದು ಹಾಕಬೇಕೆಂಬ ಬಯಕೆ ಕಿಂಚಿತ್ತೂ ಇಲ್ಲ. ಏನು ಬರೀತಿದೀರಿ ಎಂದು ಆಗಾಗ ಕೇಳುತ್ತೇನೆ- `ಎಳೆ ಸಿಕ್ಕಾಗ ಬರೆಯುತ್ತೇನೆ. ಇನ್ನೂ ಎಳೆ ಸಿಕ್ಕಿಲ್ಲ’ ಎಂಬ ಉತ್ತರವೇ ಸಿಗುತ್ತದೆ. ಆದ್ದರಿಂದಲೇ ಬರೆದುದ್ದರಲ್ಲಿ ಬಹುಪಾಲು, ಗಟ್ಟಿ ಅನುಭವದ ಆಳವನ್ನು ಒಳಗೊಂಡಿದೆ. ಸಾಹಿತ್ಯಿಕ ಸಿದ್ಧಿ, ಇತಿಮಿತಿಗಳೇನೇ ಇರಲಿ, ಪ್ರಾಮಾಣಿಕ ಅಕ್ಷರ ಕಾಯಕ ಮಾದೇವನದು ಎಂಬುದೇ ನನಗೆ ಇಷ್ಟವಾದ ಸಂಗತಿ.
ಈ ಪ್ರಾಮಾಣಿಕತೆಯೇ ತಿಂಗಳು ತಿಂಗಳು ಸಂಬಳ ತರುತ್ತಿದ್ದ ಕೇಂದ್ರೀಯ ಭಾಷಾ ಸಂಸ್ಥಾನದ ಕೆಲಸವನ್ನು ನಿರುಮ್ಮಳವಾಗಿ ಬಿಡುವಂತೆ ಪ್ರೇರಣೆ ಕೊಟ್ಟಿರಬೇಕು. ಅನೇಕ ಬಾರಿ ಕೆಣಕಿ ಕೇಳಿದ್ದೇನೆ. ಸರ್ಕಾರಿ ನೌಕರಿಯನ್ನು ಬಿಟ್ಟಿದ್ದಕ್ಕೆ ಒಂದು ದಿನವೂ ಪರಿತಪಿಸಿಲ್ಲ. ತನಗೆ ಒಗ್ಗದಿದ್ದಾಗ ನಿಶ್ಚಿಂತವಾಗಿ ಹಿಂದಕ್ಕೆ ನಡದುಬಿಡುವ ರೀತಿ ಅವರ ವ್ಯಕ್ತಿತ್ವದಲ್ಲೇ ಸೇರಿಹೋಗಿದೆ. ಘರ್ಷಣೆಗಿಳಿಯದೆ ಪ್ರತಿಭಟಿಸದೇ ನಿಧಾನವಾಗಿ ಹಿಂಜರಿದುಬಿಡುತ್ತಾರೆ. ಅಥವಾ ಹಿಂಜರಿಯುವಿಕೆಯೇ ಪ್ರತಿಭಟನೆಯ ಒಂದು ರೀತಿ ಇದ್ದರೂ ಇರಬಹುದು. `ಗಾಂಧಿ’ ಚಲನಚಿತ್ರವನ್ನು ತನ್ನ ಜನಾಂಗ ಬಹಿಷ್ಕರಿಸಿದಾಗ, ವ್ಯಕ್ತಿಗತ ಅನಿಸಿಕೆಗೆ ಬೆಲೆ ಕೊಟ್ಟು ಗಾಂಧಿ ಸಿನೆಮಾ ನೋಡಿದ್ದನ್ನು ಮಾದೇವ ಒಂದು ಕಡೆ ನಿರೂಪಿಸಿದ್ದಾರೆ. ಗಾಂಧಿ ಅಂಬೇಡ್ಕರ್ ಚಿಂತನೆಗಳನ್ನು ಬೆಸೆಯಲು ಅವರು ಯಾವತ್ತೂ ಮುಂದಿರುತ್ತಾರೆ.
ಒಮ್ಮೆ ಕೇಳಿದೆ- ಹಂಪಿ ವಿಶ್ವವಿದ್ಯಾಲಯಕ್ಕೆ ಹೋಗಿಬಂದಿರಲ್ಲ, ಅಲ್ಲಿ ಏನು ಮಾಡಿದಿರಿ? `ಶೂನ್ಯ ಸಂಪಾದನೆಯ ಬಗ್ಗೆ ಅಲ್ಲಮನ ಬಗ್ಗೆ ಬರೀಬೇಕು ಮೇಡಂ’, `ಯಾವಾಗ ಬರೆಯುತ್ತೀರಿ?’ `ಗೊತ್ತಿಲ್ಲ ಮೇಡಂ’. ಹೌದು, ಮಾದೇವ ಈ ಅರ್ಥದಲ್ಲೂ ಕಾಲಾತೀತರು. ಕಾಲಕ್ಕೆ ಕಟ್ಟುಬಿದ್ದು ಬರೆಯುವುದು ಅವರ ಜಾಯಮಾನವಲ್ಲ. ಮೊನ್ನೆ ಮತ್ತೊಮ್ಮೆ ಕೇಳಿದೆ, `ಅಂಜುತ್ತಾ ಅಲ್ಲಮನಿಗೆ’ ಎಂದಷ್ಟೇ ಹೇಳಿ ಎಂದಿನ ನಗೆ ಚೆಲ್ಲಿದರು. ಬರಹದ ಕ್ರಿಯೆಯ ತೀವ್ರ ತೊಳಲಾಟಕ್ಕೆ ಇನ್ನು ಸಿದ್ಧವಿಲ್ಲದ ಮನಃಸ್ಥಿತಿ ಅದು. ಆದ್ದರಿಂದಲೇ ಮಾದೇವ ಬರೆದದ್ದು ಪುಟಸಂಖ್ಯೆಯ ದೃಷ್ಟಿಯಿಂದ ತುಂಬಾ ಕಡಿಮೆ. ತಮ್ಮ ಸಮಗ್ರ ಕೃತಿಗಳ ನೆನಕೆಯಲ್ಲಿ (ಜೂನ್ ೧೯೯೨) ಅವರೇ ಹೇಳಿರುವಂತೆ ಬರೆದದ್ದು ಬರೀ ಒಂದು ನೂರ ಅರವತ್ತೊಂಬತ್ತು ಪುಟ.
ಪುಟ ತುಂಬಿಸುವ ಹೆಬ್ಬಯಕೆಯಿಲ್ಲದ ಮಾದೇವನಿಗೆ ಬರಹ ಒಂದು ತರಹದ ಏಕಾಂತ ಧ್ಯಾನ. ಬರೆಯುವುದೇ ಒಂದು ಬಗೆಯ ತಲ್ಲಣ. ಬದುಕನ್ನು ಬಿಚ್ಚಿಡಬೇಕೆಂಬ, ಮಾನವ ಪ್ರೀತಿಯಿಂದ ಅದನ್ನು ಅಕ್ಷರಕ್ಕಿಳಿಸಬೇಕೆಂಬ ತೀವ್ರ ತುಡಿತ ಕಾಡುವುದರಿಂದಲೇ ಬರಹದಲ್ಲಿ ವಿವರಣೆ ಇರುವುದಿಲ್ಲ. ಮೌಲಿಕ ಚಿಂತನೆಯ ಗಟ್ಟಿ ಬೀಜವೊಂದು ಹುದುಗಿರುತ್ತದೆ. ಎಡಗೈ-ಬಲಗೈಯವರನ್ನು ಒಂದುಗೂಡಿಸಬೇಕೆAಬ ಕಾಳಜಿಯಿಂದ ಮೂಡಿಬಂದ ಪುಟ್ಟ ಬರಹವನ್ನು ಓದಿದಾಗ ಮೈ ಝುಂ ಎಂದಿತು. ವಿಚಾರ ಸಂಕಿರಣದ ಭಾಷಣವೊಂದರ ಪೂರ್ವಸಿದ್ಧತೆಯಾಗಿ ಮೂಡಿದ ಬರಹವದು. ಆ ಬರಹದ ಕರಡು ರೂಪವನ್ನು ಓದಲೆಂದು ತಂದುಕೊಟ್ಟು, ಒಂದೊಂದು ಪದದ ಬಗ್ಗೆ ವಹಿಸಿದ ಎಚ್ಚರ, ಎದೆಯೊಳಕ್ಕೆ ದೊಡ್ಡ ಉಸಿರೆಳೆದುಕೊಂಡು ಚಿಂತಾಮಗ್ನನಾಗಿ ಕುಳಿತ ಭಂಗಿ, ಸುಕ್ಕುಗಟ್ಟಿಸಿದ ಹಣೆಯ ಮೇಲೆ ಬೆರಳಾಡಿಸಿ ಕಣ್ಣು ಮುಚ್ಚಿ ರೆಪ್ಪೆ ಬಿಗಿಹಿಡಿದ ರೀತಿ ಇಂದಿಗೂ ಕಣ್ಣು ಮುಂದೆ ನಿಂತಿದೆ. ಮಾದೇವ ಅಕ್ಷರವನ್ನೆಂದೂ ಲಘುವಾಗಿ ಕಂಡಿಲ್ಲ. ಮಾದೇವ ಹೆಚ್ಚು ಪುಟಗಳನ್ನು ತುಂಬಿಸಲು ಯಾವತ್ತೂ ಪ್ರಯತ್ನಿಸಿಲ್ಲ.
ಯಾವುದೇ ಬರಹ ಬರೆಯುವತನಕ ಖಾಸಗಿಯಾಗಿರುತ್ತದೆ. ವೈಯಕ್ತಿಕ ಆಗಿರುತ್ತದೆ. ಬರೆದು ಹೊಡೆದು ತಿದ್ದಿ ತೀಡಿ ಹಾಗೂ ಮನಸ್ಸಿಗೆ ಹಿಡಿಸದಿದ್ದರೆ ಸುಮ್ಮನೆ ಪಕ್ಕಕ್ಕಿಟ್ಟುಬಿಡಬಹುದು. ಕೆಲವೊಮ್ಮೆ ಬರಹಕ್ಕೆತ್ತಿಕೊಂಡ ವಿಷಯ ತನ್ನಷ್ಟಕ್ಕೆ ತಾನೇ ಅಕ್ಷರ ರೂಪ ಪಡೆದು ಬರಹಗಾರನಿಗೆ ಬಿಡುಗಡೆಯ ಭಾವವನ್ನು ಕೊಟ್ಟುಬಿಡಬಹುದು. ಖುಷಿ ಬಂದರೆ ಇನ್ನೊಬ್ಬರ ಕಣ್ಣಿಗೆ, ಕಿವಿಗೆ ಹಾಕಬಹುದು. ಈ ಸ್ವಾತಂತ್ರö್ಯ ವೇದಿಕೆಯ ಮೇಲಿನ ಮಾತುಗಳಿಗಿಲ್ಲವಲ್ಲ. ಸಭೆಯಲ್ಲಿ ಆಡುವ ಮಾತು ಆ ಕ್ಷಣವೇ ಕೇಳುಗರ ಕಿವಿ ತುಂಬುತ್ತದೆ. ಸಭೆಯಲ್ಲಿ ತಾನು ಆಡಿದ ಮಾತು ಸಂಪೂರ್ಣವಾಗಿ ಸರಿಯಾಗಿ ಸಂವಹನವಾಯಿತೋ ಇಲ್ಲವೋ ಎಂಬ ತಳಮಳ ಮಾದೇವ ಅವರನ್ನು ಕಾಡುತ್ತಲೇ ಇರುತ್ತದೆ. ಅವರ ಭಾಷಣಗಳ ಕೇಳುಗಳಾಗಿ ಸಭೆಯೊಳಗಿದ್ದ ಎಲ್ಲ ಸಂದರ್ಭಗಳಲ್ಲೂ `ಮಾತನಾಡಿದ್ದು ಸರಿಯಾಗಿತ್ತಾ ಮೇಡಂ’ ಎಂದು ಕೇಳಿದ್ದಾರೆ. ಹೀಗೆ ಭಾಷಣವೆಂದರೆ ಚಡಪಡಿಸುವ ಮಾದೇವ ಅವರನ್ನು ಹತ್ತಿರದಿಂದ ಕಂಡಾಗ ಜನ ಏಕೆ ಭಾಷಣಕ್ಕೆ ಕರೆಯುತ್ತಾರೋ, ಮಾದೇವ ಏಕೆ ಒಪ್ಪುತ್ತಾರೋ ಎನಿಸುತ್ತದೆ. ಆದರೆ ಭಾಷಣವೆಂದು ಆಡುವ ಕೆಲವೇ ನಿಮಿಷಗಳ ಮಾತುಗಳಲ್ಲಿ ಒಂದು ಮೌಲಿಕ ಚಿಂತನೆ, ಸಂಬಂಧಿಸಿದ ವಿಷಯಕ್ಕೆ ಒಂದು ಹೊಸ ಮಗ್ಗಲಿನ ಆಲೋಚನೆ ಇರುತ್ತದೆ. ಕೆಲವೊಮ್ಮೆ ಸಭೆಯ ಆಶಯಕ್ಕೆ ಹೊಂದದ ಮಾತುಗಳನ್ನು ಅನಗತ್ಯ ಪ್ರಾಮಾಣಿಕತೆಯಿಂದ ಹೇಳಿಬಿಡುವುದೂ ಉಂಟು. ಚದುರಂಗರ `ಹೆಜ್ಜಾಲ’ ಕೃತಿ ಬಿಡುಗಡೆಯ ಸಭೆಯಲ್ಲಿ `ನಾನು ಪುಸ್ತಕವನ್ನೇ ಓದಿಲ್ಲ’ ಎಂದು ಹೇಳಿಬಿಟ್ಟಿದ್ದನ್ನು ಅರಗಿಸಿಕೊಳ್ಳುವುದು ತೀರಾ ಕಷ್ಟವಾಗುತ್ತದೆ. ಪುಸ್ತಕದ ಬಿಡುಗಡೆಗೆ ಒಪ್ಪಿಕೊಂಡ ಮೇಲೆ ಓದಬೇಕಾಗಿತ್ತು. ಓದದಿದ್ದರೂ ಅದನ್ನು ಹೇಳಬೇಕಾದ ಅಗತ್ಯ ಇರಲಿಲ್ಲ. ಅದು ಆ ಸಂದರ್ಭದಲ್ಲಿ ಆಡುವ ಮಾತಲ್ಲ. ಭಾಷಣಕ್ಕೆ ಒಪ್ಪಿ ಒದ್ದಾಡುವ ಚಡಪಡಿಕೆ ಏನೇ ಇರಲಿ ಸಾಹಿತ್ಯಿಕವಾಗಿ ಮುಖ್ಯವಾಗಿರುವ ಮಾದೇವ ಜನಕ್ಕೆ ಬೇಕು. ಅವರ ಉಪಸ್ಥಿತಿಗೆ ಒಂದು ತೂಕವಿರುತ್ತದೆ.
ಲಂಕೇಶ್ ಪತ್ರಿಕೆಯ ಸಂದರ್ಶನಕ್ಕೆಂದು ಕೇಳಿದಾಗ `ಮಾತು ಕಷ್ಟ ಮೇಡಂ. ಕೆಲವು ಪ್ರಶ್ನೆಗಳನ್ನು ಬರೆದಿಟ್ಟುಬಿಡಿ, ಮನೆಯಿಂದಲೇ ಉತ್ತರ ಬರೆದು ತಂದು ಕೊಟ್ಟುಬಿಡುತ್ತೇನೆ’ ಎಂದು ಹೇಳಿದ್ದು ನೆನಪಾಗುತ್ತದೆ. ಶಾಲಾ ಬಾಲಕನ ಹೋಂವರ್ಕ್ನಂತೆ ಬರೆದುಕೊಟ್ಟ ಆ ಸಂದರ್ಶನದಲ್ಲೂ ಪ್ರಶ್ನೆಗಳೇ ಉದ್ದ. ಉತ್ತರ ಗಿಡ್ಡ. ಆದರೂ ಕೆಲವು ಮುಖ್ಯ ಸಂಗತಿಗಳಿಗೆ ಸಂಬಂಧಪಟ್ಟಂತೆ ಹಲವು ದಿನಗಳ ಕಾಲ, ರಾಮದಾಸ್ ಮತ್ತು ಮಾದೇವ ಸಮಾನಾಂತರ ರೇಖೆಗಳಲ್ಲಿ ಚರ್ಚೆ ನಡೆಸಿದ್ದುಂಟು. ತಮ್ಮ ತಮ್ಮ ನಿಲುವಿಗೇ ಅಂಟಿಕೊಂಡ ಇಬ್ಬರ ಚರ್ಚೆ ಕೊನೆಗೊಳ್ಳುತ್ತಿದ್ದುದು ಚದುರಂಗದಾಟದ ಮೌನದಲ್ಲಿ.
ರಾಮದಾಸರ ನಿಷ್ಠುರ ಖಂಡಿತವಾದಕ್ಕೆ ಮಾದೇವ ಅವರ ಹಿಂಜರಿಕೆ ಮಾರ್ದವತೆ ಮುಖಾಮುಖಿಯಾದ ಸಂದರ್ಭಗಳೆಷ್ಟೋ. ತಾತ್ವಿಕ ನಿಲುವುಗಳು ಹೊಂದಿಕೆಯಾದರೂ ಕಾರ್ಯ ನಿರ್ವಹಣೆಯ ರೀತಿಯಲ್ಲಿ ಭಿನ್ನಾಭಿಪ್ರಾಯಗಳು ಬೆಳೆದು ಪರಸ್ಪರ ತದ್ವಿರುದ್ಧ ಅಂಚಿನಲ್ಲಿ ನಿಂತ ಅನೇಕ ಸಂದರ್ಭಗಳಿಗೆ ನಾನು ಮೂಕ ಸಾಕ್ಷಿಯಾಗುಳಿದಿದ್ದೇನೆ. ವಿಶೇಷತೆ ಏನಪ್ಪಾ ಎಂದರೆ ಇಬ್ಬರೂ ತಮ್ಮ ತಮ್ಮ ಸ್ವಾರ್ಥಕ್ಕೆ ದನಿಯೇರಿಸಿಲ್ಲ. ಮನುಷ್ಯರ ನಡುವಿನ ಪ್ರೀತಿಗೆ ಬೆಲೆ ಕೊಡುವುದರಿಂದ ಎಲ್ಲ ಭಿನ್ನಾಭಿಪ್ರಾಯಗಳ ನಡುವೆಯೂ ಸ್ನೇಹ ಸೌಹಾರ್ದ ಗಟ್ಟಿಯಾಗುಳಿದಿದೆ. ಇದು `ಚಾರ್ವಾಕ’ದ ಒಂದು ಅರ್ಥಪೂರ್ಣ ಲಾಭ ಎಂದು ಸಂತಸಪಟ್ಟಿದ್ದೇನೆ.
ಒಂದರ್ಥದಲ್ಲಿ ನಾನೂ ಮಾದೇವ ಸಹಾಧ್ಯಾಯಿಗಳೂ, ಪರಸ್ಪರರಿಗೆ ವಿದ್ಯಾರ್ಥಿಗಳೂ ಆಗಿದ್ದೇವೆ. ಚಂದಕಂಡ ಪುಸ್ತಕಗಳನ್ನು ಒಬ್ಬರಿಗೊಬ್ಬರು ಪರಿಚಯಿಸಿದ್ದೇವೆ. ಹಳಗನ್ನಡ ಹೊಸಗನ್ನಡದ ಕೃತಿಗಳನ್ನು ಕುರಿತು ವಿಚಾರ ವಿನಿಮಯ ಮಾಡಿದ್ದೇವೆ. ಅಕ್ಕ-ಅಲ್ಲಮ-ಬಸವರ ವಚನಸಾಹಿತ್ಯ ನಮಗೆ ಸಮಾನ ಆಸಕ್ತಿಯ ಆಪ್ತ ವಿಷಯ. ಬಸವಣ್ಣ ಬರಿಯ ಅಕ್ಷರಗಳಲ್ಲಿ ವಚನ ಕಟ್ಟಲಿಲ್ಲ. ಅಂತಃಕರಣವೇ ತಂಪಾಗಿ ಸೇರಿಕೊಂಡಿರುವ ಬಸವಣ್ಣನವರ ಒಂದು ವಚನದ ಸಾಲು- `ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ’ ಇಂಥ ಮನುಷ್ಯ ಪ್ರೀತಿಯ ಗುಂಗು ಇದ್ದಲ್ಲಿ ಇರುವಲ್ಲಿ ಸಲಿಗೆಯ ಮಾತುಗಳು ಸಲ್ಲುತ್ತವೆ. ಎಂಥ ಭಿನ್ನಾಭಿಪ್ರಾಯಗಳು ಬಂದರೂ ಮಾದೇವ `ನಮ್ಮವ’ ಎಂದೆನಿಸುತ್ತಾರೆ. ಹೀಗಾಗಿ ಓದುಗರು ಇಲ್ಲಿನ ಏಕವಚನ ಬಹುವಚನದ ಕಲಬೆರಕೆಯನ್ನು ಮನ್ನಿಸಬೇಕು.
*
ಮಾದೇವ ಮೈಸೂರಿಗೆ ಸಮೀಪದ ಜಮೀನಿನಲ್ಲಿ ವ್ಯವಸಾಯದಲ್ಲಿ ತೊಡಗಿದ್ದಾರೆ. ಅಪ್ಪಿತಪ್ಪಿ ಕೂಡಾ ಜಮೀನು ಎಂಬ ಮಾತು ಬಾಯಿಂದ ಬರುವುದಿಲ್ಲ. ಅದು ಅವರ `ಭೂಮಿ’. ಮಾದೇವನಿಗೆ ಸದಾ ಭೂಮಿಯದೇ ಗುಂಗು. ಭೂಮಿಗಿಟ್ಟ ಹೆಸರು `ಬನವಾಸಿ’. `ಇದೊಂಥರಾ ವನವಾಸ ಮೇಡಂ’ ಎಂದು ನಗೆ ಚೆಲ್ಲುವಾಗ ವ್ಯವಸಾಯದ ಕಷ್ಟನಷ್ಟಗಳಿಗಿಂತ ಹೆಚ್ಚಾಗಿ ಬನವಾಸಿಯ ಮೇಲಿನ ಅಭಿಮಾನ ತುಂಬಿರುತ್ತದೆ.
ಮನೆಯಿಂದ ಬನವಾಸಿಗೆ ಓಡಾಡಲು ಒಂದು ಲೂನಾ ಇದೆ. ಅದರ ಸವಾರಿ ವೈಖರಿಯನ್ನೊಂದಷ್ಟು ಹೇಳುವ ಚಪಲ ನನಗೆ. ರಸ್ತೆಯಲ್ಲಿ ವಾಹನವೇರಿ ಹೋಗುವಾಗ ಆತ್ಮೀಯರ ವಾಹನ ಕಂಡರೆ ರಾಮದಾಸ್, ಗಲಿಬಿಲಿಗೊಳಿಸುವ ತುಂಟತನಕ್ಕಿಳಿಯುತ್ತಾರೆ. ತೀರಾ ಹತ್ತಿರಕ್ಕೆ ವಾಹನ ತಂದು, ಒಂದೇ ಸಮನೆ ಹಾರ್ನ್ ಮಾಡುತ್ತಾ ದಾರಿ ಬಿಟ್ಟರೂ ದಾಟಿ ಹೋಗದೆ ಕಾಡುವುದುಂಟು. ಮಾದೇವ ಅವರ ಲೂನಾ ಸೈಕಲ್ಗಿಂತ ವೇಗವಾಗೇನೂ ಹೋಗುವುದಿಲ್ಲ. ಅದು ವಾಹನ ದೋಷ ಖಂಡಿತಾ ಅಲ್ಲ. ಮಾದೇವ ಅವರೇ ಹೇಳುವಂತೆ- ಹಿಂದೆ ಕೂರಲೂ ಧೈರ್ಯ ಬೇಕು. ಎಷ್ಟೇ ಹಾರ್ನ್ ಮಾಡಿದರೂ ಕನ್ನಡಿಯೊಳಗಿನಿಂದ ಹಿಂದೆ ಬರುವ ವಾಹನವನ್ನು ಗಮನಿಸಿದರೆ ಕೇಳಿ, ಕತ್ತು ತಿರುಗಿಸಿಯೊ ಅಥವಾ ಅರ್ಧ ಹೊರಳಿಯೋ ಹಿಂದೆ ನೋಡುತ್ತಾರೆ ಹೊರತು, ಕನ್ನಡಿಯ ಉಪಯೋಗ ಮಾಡುವುದಿಲ್ಲ. ಕನ್ನಡಿ ಚೌಕಟ್ಟುಗಳನ್ನು ನಿರಾಕರಿಸುವ ತುಂಬುನೋಟ ಮಾದೇವ ಅವರದಿರಬಹುದಲ್ಲವೇ? ಇದು ನನ್ನ ಕಲ್ಪನೆಯ ಲಹರಿ ಎನ್ನಿ ಪರವಾಗಿಲ್ಲ.
ಮಡದಿ ಸುಮಿತ್ರಾಬಾಯಿ, ಮಾನಸಗಂಗೋತ್ರಿಯ ಲಲಿತಕಲೆಗಳ ಕಾಲೇಜಿನ ಪ್ರಾಂಶುಪಾಲರು. ಕಿರಿಯ ಮಗಳು ಮಿತಾ ದೇವನೂರು ಕವಿಯಿತ್ರಿ. ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿ. ಮಾದೇವ ಅವರಿಗೂ ಪ್ರಕೃತಿ ಚಿಕಿತ್ಸೆ ಆಕ್ಯುಪ್ರಶರ್ ಆಯುರ್ವೇದ ಪದ್ಧತಿಗಳಲ್ಲಿ ಆಸಕ್ತಿ. ಹಾಗೂ ಪ್ರಯೋಗ ಮಾಡುವ ಹುಮ್ಮಸ್ಸು. ಹಿರಿಯ ಮಗಳು ಉಜ್ವಲ ಇಂಜಿನಿಯರಿಂಗ್ ಪದವೀಧರೆ, ಆಕೆ ವೆಂಕಟೇಶ್ ಅವರ ಪತ್ನಿ ಚೊಚ್ಚಲು ಬಾಣಂತಿ- ಹೀಗೆ ನಮ್ಮ ಮಾದೇವ ಈಗ ಅಜ್ಜ ಆಗಿದ್ದಾರೆ.
ಮಾದೇವ ಮೊನ್ನೆ ಬರುತ್ತಿದ್ದಂತೆ, ಸ್ನೇಹಾ `ಮಾಮ, ಅಜ್ಜ ಆಗಿಬಿಟ್ಟಿರಿ’ ಎಂದಳು. ತಾನು ಅಜ್ಜ ಆದದ್ದೇನು ತನಗಿಂತ ಚಿಕ್ಕವಯಸ್ಸಿನವರೂ ಹೇಗೆ ಹೇಗೆ ಅಜ್ಜ ಆಗಿರಬಹುದೆಂದು ಲೆಕ್ಕ ಹಾಕಿದ ರೀತಿ ಕೂಡಾ ತನ್ನ ವಯಸ್ಸಿನ ಬಗ್ಗೆ ಕಟ್ಟುಕತೆ ಕಟ್ಟುವ ಸೊಗಡಿನಿಂದ ಕೂಡಿತ್ತು. ಏನಾದರೂ ಕಪ್ಪು ಕೂದಲು ಬೆಳ್ಳಗಾಗ ಹೊರಟಿರುವ ಈ ಹೊತ್ತಿನಲ್ಲಿ ಈ ಮನ್ನಣೆ ಸಿಕ್ಕರೆ ಸಂತೋಷವೇ ಅಲ್ಲವೇ? ಮೊಮ್ಮಗುವನ್ನು ನೋಡುವ ಕಣ್ಣಿಗೆ ಹೊಸ ಹೊಳಪು ಬರುತ್ತದೆ; ಜೋಲಿಯೊಳಗಿನ ಪುಟ್ಟ ಜೀವ ಅಂತಃಕರಣವನ್ನು ಸೆಳೆದುಕೊಳ್ಳುತ್ತದೆ. ಅಕ್ಷರ ಲೋಕಕ್ಕೆ ಕಾಲಿಟ್ಟಿರದ ಮುಗ್ಧ ಮಗು ಕಾಣಬಲ್ಲವರ ಬದುಕಿಗೆ ಎಷ್ಟೊಂದು ಮಾರ್ದವತೆಯನ್ನು ತುಂಬಿಬಿಡುತ್ತದೆ!
[ನಿರ್ಮಲಾ ಹಳಗನ್ನಡ ಮತ್ತು ಹೊಸಗನ್ನಡ ಸಾಹಿತ್ಯದಲ್ಲಿ ಸಮಾನ ಪರಿಶ್ರಮ ಇದ್ದ ಕನ್ನಡ ಅಧ್ಯಾಪಕಿಯಾಗಿದ್ದರು. ಅವರ ಚಲ್ ಮೇರಿ ಲೂನಾ ಪ್ರಬಂಧ ಸಂಕಲನವನ್ನು ಅಭಿನವ ಪ್ರಕಟಿಸಿತ್ತು. ಅದಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ ಕೂಡ ಲಭಿಸಿತ್ತು. ಮೊಮ್ಮಗು `ಕಣ್ಣ’ನ ಜೊತೆ ಆಡುತ್ತಾಡುತ್ತಲೇ ಈ ನವ್ವಾಲೆ ಗರಿಬಿಚ್ಚಿ ಕುಣಿಯಲಿ, `ಬನವಾಸಿ’ಯ ವನವಾಸಿ ಹೊಸ ಕೃತಿಗಳನ್ನು ಹೊರತರಲಿ ಎಂದು ಎದೆಯಾಳದಿಂದ ಹಾರೈಸುತ್ತೇನೆ.-ಸಂಪಾದಕರು]