ಸಮಾನತೆಗಾಗಿ ಓಟ- ದೇವನೂರ ಮಹಾದೇವ

(ಮೈಸೂರಿನ ಭಾರತೀಯ ಪರಿವರ್ತನ ಸಂಘವು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ 14.4.2022ರ ಮುಂಜಾನೆ ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಬಳಿ ಆಯೋಜಿಸಿದ್ದ  “ಸಮಾನತೆಗಾಗಿ ಓಟ”ಕ್ಕೆ ಚಾಲನೆ ನೀಡಿದ ದೇವನೂರ ಮಹಾದೇವ ಅವರ ಮಾತುಗಳ ಅಕ್ಷರ ರೂಪ]


ಇಂದು ಅಂಬೇಡ್ಕರ್‍ ರವರ ಹುಟ್ಟಿದ ದಿನ. ಈ ನೆನಪಿಗಾಗಿ ‘ಸಮಾನತೆಗಾಗಿ ಓಟ’ ನಡೆಯುತ್ತಿದೆ. ಅದಕ್ಕೆ ಚಾಲನೆ ಕೊಡಲು ಬಂದಿದ್ದೇನೆ. ನೋಡುವುದಕ್ಕೆ ಮಾಜಿ ಆಟಗಾರ, ಹಾಲಿ ಕೋಚ್‍ನಂತೆ ಡ್ರೆಸ್‍ಕೋಡ್‍ನಲ್ಲೇನೋ ಬಂದಿದ್ದೇನೆ. ಕ್ಷಮೆ ಇರಲಿ. ನಾನು ಎಂದೂ ಓಡಿದವನು ಅಲ್ಲ. ನಿಮ್ಮ ಹಿಂದೆ ಹಿಂದೆಯಾದರೂ ಓಡುವ ಚೈತನ್ಯವೂ ಈಗ ನನಗಿಲ್ಲ. ಓಡುತ್ತಿರುವ ಎಳೆಯರ ಬೆನ್ನು ತಟ್ಟಲು ಬಂದಿದ್ದೇನೆ. ಯಾಕೆಂದರೆ, ನೀವು ಇಂದು ಓಡುತ್ತಿರುವುದು, ಸಮಾನತೆಗಾಗಿ ಓಟ.
ಸಮಾನತೆಗಾಗಿ ಓಡುತ್ತಿರುವ ಎಳೆಯ ಸ್ನೇಹಿತರೇ, ಇಂದು ನೀವು ತುಂಬಾ ವೇಗವಾಗಿ ಓಡಬೇಕಾಗಿದೆ. ಯಾಕೆಂದರೆ ಅಸಮಾನತೆ ಇಂದು ಎಂದೂ ಇಲ್ಲದಷ್ಟು ಹುಚ್ಚು ಕುದುರೆಯಂತೆ ಓಡುತ್ತಿದೆ. ಇದಾಗಲೇ ಅದು ತುಂಬ ದೂರ ಓಡಿದೆ. ಈ ದೇಶಕ್ಕೆ ದಿಕ್ಕು ತೋರಿಸುತ್ತಿರುವ ಚಿಂತಕ, ಹೋರಾಟಗಾರ ಯೋಗೇಂದ್ರ ಯಾದವ್ ಮೊನ್ನೆ ಮೊನ್ನೆ ತಾನೇ ಮೈಸೂರಿಗೆ ಬಂದಿದ್ದರು. ಅವರು ಮಾತಾಡುತ್ತ ಒಂದು ನುಡಿಗಟ್ಟು ಹೇಳಿದ್ದರು:

“ಭಾರತದ ಪ್ರಧಾನಿ ಮೋದಿಯವರ ಬಾಯಲ್ಲಿ
ಸೀತಾಪತಿ, ಅಂದರೆ –ರಾಮ.
ಭಾರತದ ಪ್ರಧಾನಿ ಮೋದಿಯವರ ಹೃದಯದಲ್ಲಿ
ನೀತಾಪತಿ, ಅಂದರೆ -ಅಂಬಾನಿ”

ಭಾರತದ ಪ್ರಧಾನಿ ಮೋದಿಯವರ ಹೃದಯದಲ್ಲಿರುವ ಅಂಬಾನಿ ಲಕ್ಷಾಂತರ ಕೋಟಿಗಳ ಒಡೆಯ. ಭಾರತದಲ್ಲಿ ಇರುವ ಇಂತಹ ನೂರಾರು ಬಿಲಿನಿಯರ್ ಕುಟುಂಬಗಳ ಸಂಪತ್ತು ಒಟ್ಟಾದರೆ ಅದು ದೇಶದ ಒಟ್ಟು ಸಂಪತ್ತಿನ ಅರ್ಧ ಭಾಗದಷ್ಟು ಆಗುತ್ತದಂತೆ. ಬಡವರ ಸಂಖ್ಯೆ ದಿನದಿನವೂ ಹೆಚ್ಚುತ್ತಿದೆ. ಇಷ್ಟೊಂದು ಅಸಮಾನತೆ ಇಂದು ದೇಶದಲ್ಲಿದೆ. ಈ ಅಸಮಾನತೆಯ ಹುಚ್ಚು ಕುದುರೆಯನ್ನು ದ್ವೇಷ ಅಸಹನೆಯ ಕೋಮುವಾದದ ಹೆಂಡ ಕುಡಿದ ಜಾಕಿ ಓಡಿಸುತ್ತಿದ್ದಾನೆ. ಅಸಮಾನತೆಯ ಹುಚ್ಚು ಕುದುರೆ ಹುಚ್ಚೆದ್ದು ಓಡುತ್ತಿದೆ. ಅದರಿಂದ ಕಚ್ಚಿಸಿಕೊಳ್ಳದೆ ನೀವು ಎಚ್ಚರವಹಿಸಿ ಓಡಬೇಕಾಗಿದೆ. ನೀವು ಎಳೆಯರಾದ್ದರಿಂದ ನೀವು ಗೆಲ್ಲುತ್ತೀರಿ ಎಂಬ ನಂಬಿಕೆ ನನಗಿದೆ. ನೀವು ಗೆಲ್ಲಲೇ ಬೇಕು.