“ಸಂಘ ಪರಿವಾರದ ಬಿಜೆಪಿ ಡಬಲ್ ಇಂಜಿನ್ ಸರ್ಕಾರವನ್ನು ಗುಜರಿಗೆ ಹಾಕಬೇಕಾಗಿದೆ” – ದೇವನೂರ ಮಹಾದೇವ

(ಬೆಂಗಳೂರಿನಲ್ಲಿ “ಎದ್ದೇಳು ಕರ್ನಾಟಕ” ನಾಗರೀಕ ಅಭಿಯಾನ 25.4.2023ರಂದು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಅಕ್ಷರ ರೂಪ)
ಮತದಾರರು ಇಂದು ಹೆಚ್ಚು ಜಾಗೃತರಾಗಿದ್ದಾರೆ. ಹಿಂದಿನ ಯಾವ ಚುನಾವಣೆಯಲ್ಲೂ ನಾನು ಇಷ್ಟೊಂದು ಮತದಾರರ ಜಾಗೃತ ಪ್ರಜ್ಞೆಯನ್ನು ಕಂಡಿಲ್ಲ. ಮತಯಾಚಿಸಿ ಬಂದ ಅಭ್ಯರ್ಥಿಗಳಿಗೆ ಮತದಾರರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ಸ್ಪರ್ಧಿಗಳಿಗೆ ಬೆವರಿಳಿಸುತ್ತಿದ್ದಾರೆ. ನೋಡಿ, ಈ ‘ಡಬಲ್ ಎಂಜಿನ್ ಸರ್ಕಾರ’ ಎಂಬ ಮಾತನ್ನು ಬಿಜೆಪಿಯ ಚಿಕ್ಕವರಿಂದ ದೊಡ್ಡನಾಯಕರವರೆಗೂ ಹೇಳಿ ಹೇಳಿ ಈಗ ಕರ್ನಾಟಕದ ಜನತೆಯ ಕಿವಿ ತೂತಾಗಿಬಿಟ್ಟಿರಬಹುದು. ಕೇಂದ್ರದಲ್ಲೂ ರಾಜ್ಯದಲ್ಲೂ ಒಂದೇ ಪಕ್ಷದ ಡಬಲ್ ಎಂಜಿನ್ ಸರ್ಕಾರ ಇದ್ದರೆ ಮಾತ್ರ ಅಭಿವೃದ್ಧಿ ಎನ್ನುವ ಮಾತು ಪ್ರಜಾಪ್ರಭುತ್ವ ಜನತಂತ್ರ ವ್ಯವಸ್ಥೆಗೆ ಅಡ್ಡಗಾಲು. ಒಕ್ಕೂಟ ವ್ಯವಸ್ಥೆಯ ಬುಡ ಅಲ್ಲಾಡಿಸಿದಂತಾಗುವುದಿಲ್ಲವೇ? ಹೀಗೆಲ್ಲಾ ನಾನು ತಲೆ ಕೆಡಿಸಿಕೊಂಡಿದ್ದೆ.
ಆದರೆ ಮೊನ್ನೆ ತಾನೇ, ಚುನಾವಣಾ ಸಮೀಕ್ಷೆ ನಡೆಸುತ್ತಿದ್ದ ಟಿವಿ ಚಾನೆಲ್ಗೆ ನಮ್ಮ ಹಳ್ಳಿಗಾಡಿನ ವ್ಯಕ್ತಿಯೊಬ್ಬ ಕೇಳುತ್ತಾನೆ –‘ಡಬಲ್ ಎಂಜಿನ್ ಸರ್ಕಾರ ಅಂತಾರೆ! ಕಾಂಗ್ರೆಸ್ ಸರ್ಕಾರ ಇದ್ದಾಗ 10 ಕೆ.ಜಿ ಅಕ್ಕಿ ಕೊಡ್ತಾ ಇತ್ತು. ಬಿಜೆಪಿಯ ಈ ಡಬಲ್ ಎಂಜಿನ್ ಸರ್ಕಾರ 20 ಕೆ.ಜಿ ಕೊಡಬೇಕಿತ್ತು ತಾನೇ?’. ಜನ ಸಮುದಾಯದ ಒಡಲ ಸಂಕಟದ ನುಡಿಗಳು ಇಂದಿನ ಭ್ರಮಾತ್ಮಕ ಅಭಿವೃದ್ಧಿಗೆ ಮುಖಾಮುಖಿಯಾಗಿವೆ. ಇದೇ ರೀತಿ ಇನ್ನೊಂದು. ಇದೂ ಕೂಡ ಹಳ್ಳಿಗಾಡಿನ ಮಹಿಳೆಯ ಮಾತು – ‘ಈ ಗ್ಯಾಸ್ ಬರೋಕು ಮೊದಲು ನಾವು ಅಷ್ಟೋ ಇಷ್ಟು ಸೌದೆ ತಂದು ಅಡಿಗೆ ಮಾಡ್ಕೊತ್ತಿದ್ದೋ, ಆಗ ಹೊಗೆಗೆ ಕಣ್ಣಲ್ಲಿ ನೀರು ಬರುತ್ತಿತ್ತು. ಈಗ ಗ್ಯಾಸ್ ಬೆಲೆ ಏರಿಕೆಯಾಗಿ ಕಣ್ಣಲ್ಲಿ ರಕ್ತ ಬರ್ತಾ ಇದೆ’ – ಇಂತಹ ಕರುಳ ನುಡಿಗಳು ಕರ್ನಾಟಕದ ಉದ್ದಗಲಕ್ಕೂ ಆಕ್ರಂದನ ಮಾಡುತ್ತಿವೆ. ಹೀಗೆಲ್ಲಾ ಇರುವ ಜನಸಮುದಾಯದ ಕರುಳ ನುಡಿಗಳನ್ನು ತಳಪಾಯ ಮಾಡಿಕೊಂಡು ನಾಡು ಕಟ್ಟಬೇಕಾಗಿದೆ. ಈ ಡಬಲ್ ಇಂಜಿನ್ ಸರ್ಕಾರ ಮಾಡಿದ್ದೇನು? ಬೆಲೆ ಏರಿಕೆ ಅಭಿವೃದ್ಧಿ, ನಿರುದ್ಯೋಗದ ಏರಿಕೆ ಅಭಿವೃದ್ಧಿ, ಬಡತನದ ಏರಿಕೆ ಅಭಿವೃದ್ಧಿ, ಬಡವ ಬಲ್ಲಿದರ ನಡುವೆ ಅಂತರ ಏರಿಕೆ ಅಭಿವೃದ್ಧಿ – ಹೀಗೆ ಸಾಗುತ್ತಿದೆ, ಈ ಸಂಘಪರಿವಾರದ ಬಿಜೆಪಿ ಸರ್ಕಾರದ ಅಭಿವೃದ್ಧಿಯ ದುರಂತ ಕಥೆ.
ಇನ್ನೊಂದು ಕಡೆ ಈ ಬಿಜೆಪಿ ಸರ್ಕಾರ ಬಾಯಿ ಬಿಟ್ಟರೆ ಕಾಂಗ್ರೆಸ್ ಏನು ಮಾಡಿತು ಅಂತ ಲೇವಡಿ ಮಾಡುತ್ತಿರುತ್ತದೆ. ಆದರೆ ನಿಜ ಏನು? ಈ ಬಿಜೆಪಿ ಸರ್ಕಾರ, ಈ ಹಿಂದೆ ಕಾಂಗ್ರೆಸ್ ಮಾಡಿದ್ದ ಸಾರ್ವಜನಿಕ ಆಸ್ತಿಪಾಸ್ತಿ ಸಂಪತ್ತನ್ನು ತನ್ನಾಪ್ತ ಖಾಸಗಿಯವರಿಗೆ ಮಾರಿಕೊಂಡು ಹಾಗೋ ಹೀಗೋ ಸರ್ಕಾರ ನಡೆಸುತ್ತಿದೆ. ಆದರೆ ಈ ಬಿಜೆಪಿ ಸರ್ಕಾರ ಯಾವುದೇ ಸಂಕೋಚ ನಾಚಿಕೆ ಇಲ್ಲದೆ ‘ದಡ್ಡನಿಗೆ ಧೈರ್ಯ ಹೆಚ್ಚು’ ಎಂಬಂತೆ ಮುನ್ನುಗ್ಗಿ ದಾಳಿ ಮಾಡುವುದನ್ನು ಮಾತ್ರ ಕಲಿತಿದೆ.
ಆಯ್ತು ಈ ಡಬಲ್ ಇಂಜಿನ್ ಸರ್ಕಾರದಲ್ಲಿ ಕಾಣುವುದಾದರೂ ಏನು? ಒಂದು ಇಂಜಿನ್ನಲ್ಲಿ ದ್ವೇಷ ತುಂಬಿಕೊಂಡಿದೆ. ಇನ್ನೊಂದು ಇಂಜಿನ್ ನುಂಗುವುದನ್ನು ಮಾಡುತ್ತಿದೆ. ಇಂಜಿನ್ ಜೋರಾಗಿ ಸದ್ದು ಮಾಡುತ್ತಿದೆ. ಅದು ಚಲಿಸುತ್ತಲೇ ಇಲ್ಲ. ಅಥವಾ ಹಿಂದಕ್ಕೆ ಚಲಿಸುತ್ತಿದೆ. ಅದು ಮಾಡುವ ಸದ್ದಿಗೆ ಕೆಲವರು ಜೈ ಜೈ ಅನ್ನುತ್ತಿದ್ದಾರೆ. ಈಗ ನಾವು ಏನು ಮಾಡಬೇಕು? ಮೊದಲು ಅದನ್ನು ಗುಜರಿಗೆ ಹಾಕಬೇಕಾಗಿದೆ. ಅದಕ್ಕೆ ನಾವು- ಅಂದರೆ ನಾಗರೀಕ ಸಮಾಜ ಹಾಗೂ ಸಮಾಜಮುಖಿ ವ್ಯಕ್ತಿ/ಸಂಘಟನೆಗಳು, ನಮ್ಮ ಜನರ ಒಡಲಾಳದ ದನಿಗೆ ಸೊಲ್ಲು ಹಾಕಬೇಕಾಗಿದೆ.
ಇತ್ತೀಚೆಗೆ, ವರುಣಾ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಪ್ರತಾಪ ಸಿಂಹ ಅವರಿಗೆ ಒಂದಿಷ್ಟು ತರುಣರು ಮುತ್ತಿಗೆ ಹಾಕಿ – ‘ನೀವು, ನಿಮ್ಮ ನಾಯಕರು ನಮ್ಮ ಸಂವಿಧಾನವನ್ನೇ ಬದಲಾಯಿಸ್ತೀವಿ ಅಂತೀರಿ. ಯಾಕೆ ನಾವು ನಿಮಗೆ ಓಟು ಕೊಡಬೇಕು?’ ಅಂತ ಹಿಗ್ಗಾಮುಗ್ಗಾ ಕೇಳಿದಾಗ, ಆ ಠೇಂಕಾರದ, ಉಡಾಫೆಯ ಸಂಸದರ ಬಾಯಿ ಬಂದ್ ಆಗಿತ್ತು. ನಾನು ನಿನ್ನೆ ತಾನೇ ವರುಣಾ ಕ್ಷೇತ್ರಕ್ಕೆ ಒಂದು ರೌಂಡ್ ಹೋಗಿದ್ದೆ. ಅಲ್ಲೆ ಸಿಕ್ಕಿದ ಕೆಲವು ಹುಡುಗರಿಗೆ ‘ಏನಪ್ಪಾ, ಸಂಸದನಿಗೇನೆ ಕುತ್ತಿಗೆ ಪಟ್ಟಿ ಹಿಡಿದುಕೊಂಡವರಂತೆ ಕೇಳಿದ್ದು ಸರಿನಾ?’ – ಸ್ವಲ್ಪ ಚಿತಾವಣೆ ಮಾಡಿದೆ. ಅಲ್ಲಿದ್ದ ಒಬ್ಬ ಹುಡುಗ ಹೇಳಿದ – “ನಮ್ಮ ಸಂವಿಧಾನ ಬದಲಾವಣೆ ಮಾಡಿ ಅವರ ‘ಮನುಧರ್ಮಶಾಸ್ತ್ರ’ ಮತ್ತೆ ತರಬೇಕು ಅಂತ ಇದ್ದಾರೆ. ಹಾಗಾದರೆ ಈ ಹಿಂದೆ ಶೂದ್ರರು ಅಂದರೆ ಸೇವಕರಾಗಿದ್ದ ಒಕ್ಕಲಿಗರು, ಲಿಂಗಾಯಿತರು ಮತ್ತೆ ಅವರಿಗೆ ಸೇವಕರಾಗಬೇಕಾ? ತಳಸಮುದಾಯಗಳು ಮತ್ತೆ ಕಾಲಾಳುಗಳಾಗಬೇಕಾ? ಈಗೀಗ ಊರೊಳಕ್ಕೆ ಬರುತ್ತಿರುವ ಅಸ್ಪೃಶ್ಯರು ಮತ್ತೆ ಊರಾಚೆನೇ ಇರಬೇಕಾ? ಹಳ್ಳಿ ಮಕ್ಕಳ ಸ್ಕಾಲರ್ಶಿಪ್ ಕಿತ್ತುಕೊಳ್ಳುವ ಬಿಜೆಪಿ ಸರ್ಕಾರದ ಉದ್ದೇಶವಾದರೂ ಏನು?” ಹೀಗೆ ಮುಂದುವರೆದಿತ್ತು ಆ ಹುಡುಗನ ಆಕ್ರೋಶದ ಮಾತುಗಳು. ನನಗೆ ಅಬ್ಬಾಡೆ ಅನ್ನಿಸಿತು! ನಾನು ಮಾತಾಡಲಿಲ್ಲ. ಆ ಹುಡುಗನಿಗೆ ಒಂದು ಹಗ್ ಮಾಡಿದೆ.
ಬಹುಶಃ ಎದ್ದೇಳು ಕರ್ನಾಟಕ ಮಾಡಬಹುದಾದದ್ದು ಇಷ್ಟೇ ಅನ್ನಿಸುತ್ತದೆ- ಜನಸಮುದಾಯದ ಒಡಲಾಳದ ನುಡಿಗಳಿಗೆ ಅಪ್ಪುಗೆ ಹಾಗೂ ಮೆಚ್ಚುಗೆಯ ಒಂದು ಮುಗುಳ್ನಗೆ. ನೆನಪಿಟ್ಟುಕೊಳ್ಳಬೇಕು -ಎದ್ದೇಳು ಕರ್ನಾಟಕ ಯಾರದೂ ಅಲ್ಲ; ಎಲ್ಲರದು. ಎಲ್ಲೇ, ಯಾರೇ ತಾವೇ ಮಾಡಿಕೊಳ್ಳಬಹುದು. ಸಮುದಾಯದ ಎಚ್ಚರ ಮತ್ತು ವಿವೇಕವನ್ನು ವ್ಯಾಪಕಗೊಳಿಸಲು ಎದ್ದೇಳು ಕರ್ನಾಟಕ ವೇಗವರ್ಧಕದಂತೆ ಕೆಲಸ ಮಾಡುತ್ತದೆ. ಈಗ, ಮಂಗಳೂರಿನ ಕಡೆಯ ಒಂದು ಸುದ್ದಿ ಓದಿದೆ. ಅಲ್ಲಿನ ಮತದಾರರು, ಬಿಜೆಪಿ ಅಭ್ಯರ್ಥಿಗಳಿಗೆ -‘ನಮ್ಮ ಅಕೌಂಟಿಗೆ 15 ಲಕ್ಷ ರೂಪಾಯಿ ಇನ್ನೂ ಬಂದಿಲ್ಲ, ಅಕೌಂಟ್ಗೆ ಹಣ ಹಾಕಿ’ ಎಂದು ಕೇಳುತ್ತಿದ್ದಾರೆ ಅನ್ನುವುದೇ ಆ ಸುದ್ದಿ! ಜನ ಮರೆತು ಬಿಡುತ್ತಾರೆ ಅಂತಾರೆ. ಆದರೆ ಜನ ಮರೆತಿಲ್ಲ, ಪ್ರಶ್ನಿಸುತ್ತಿದ್ದಾರೆ. ಇದನ್ನು ಎಲ್ಲೆಡೆ ಹಬ್ಬಿಸಲು ಎದ್ದೇಳು ಕರ್ನಾಟಕ ಕ್ರಿಯಾಶೀಲವಾಗಬೇಕಾಗಿದೆ. ಹೀಗೇ ಅನೇಕ ಮತದಾರರು, ರಾಜ್ಯದಿಂದ ಕೇಂದ್ರಕ್ಕೆ ಹೋಗುವ ತೆರಿಗೆ ಎಷ್ಟು, ಕೇಂದ್ರದಿಂದ ರಾಜ್ಯಕ್ಕೆ ಬರುವ ತೆರಿಗೆ ಪಾಲು ಎಷ್ಟು ಎಂದು ಕುಪಿತರಾಗಿ ಪ್ರಶ್ನಿಸುತ್ತಿದ್ದಾರೆ -ಇಂತಹ ಇನ್ನೆಷ್ಟೋ ಸಮುದಾಯದ ವಿವೇಕ, ವಿವೇಚನೆಗಳಿಗೆ ಪ್ರಜ್ಞಾವಂತ ವ್ಯಕ್ತಿ ಸಂಘಟನೆಗಳು ಜೊತೆಗೂಡಬೇಕಾಗಿದೆ.
ಆಮೇಲೆ ನಮ್ಮ ಮತ ಯಾರಿಗೆ? ಈ ಸಂದಿಗ್ಧದ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಎದ್ದೇಳು ಕರ್ನಾಟಕ ತನ್ನ ಕರೆಯಲ್ಲಿ ಸ್ಪಷ್ಟವಾಗಿ ಹೇಳಿದೆ: “ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎಂಬುದಕ್ಕಿಂತ ಈ ಸುಲಿಗೆ ಸರ್ಕಾರ ಮೊದಲು ಸೋಲಬೇಕು. ಆಮೇಲೆ ಗೆದ್ದವರ ಜೊತೆ ಜನಹಿತದ ಮರುಸ್ಥಾಪನೆಗಾಗಿ ಗುದ್ದಾಡಬೇಕು. ಇದೇ ಪ್ರಜಾಪ್ರಭುತ್ವ ಉಳಿಸಿಕೊಳ್ಳುವ ಪ್ರಕ್ರಿಯೆ. ಹಾಗೆ ಇನ್ನೊಂದು ಸಂದಿಗ್ಧ- ಹಾಗಾದರೆ ಯಾವ ಪಕ್ಷಕ್ಕೆ ಮತ ನೀಡಬೇಕು? ಭಾರತ್ ಜೋಡೋ ಯಾತ್ರೆಯ ನಂತರ ಕಾಂಗ್ರೆಸ್ ಮರುಹುಟ್ಟು ಪಡೆದಂತೆ ಕಾಣಿಸುತ್ತಿದೆ. ಈ ಸಂಕಷ್ಟದ ಸನ್ನಿವೇಶದಲ್ಲಿ ಬಹುತೇಕ ಕಾಂಗ್ರೆಸ್ ಪಕ್ಷಕ್ಕೇನೇ ಮತ ನೀಡಬೇಕಾಗಿದೆ. ಪ್ರಗತಿಪರ ಪಕ್ಷಗಳು ಎಲ್ಲಿ ಸ್ಪರ್ಧೆ ನೀಡುತ್ತಿವೆ ಎಂದು ಖಚಿತ ಭರವಸೆ ಇರುತ್ತದೋ ಅಲ್ಲಿ ನಾಕಾರು ಕಡೆ ಅದನ್ನು ಬೆಂಬಲಿಸಬೇಕಾಗಿದೆ. ಮತ್ತೊಂದು ಸಂದಿಗ್ಧ- ಕಾಂಗ್ರೆಸ್ ಮೂರನೆ ಸ್ಥಾನದಲ್ಲಿ ಇರುವ ಕಡೆ? ಜೆಡಿಎಸ್ ಎಲ್ಲೆಲ್ಲಿ ಬಿಜೆಪಿಯ ನೇರಸ್ಪರ್ಧಿಯಾಗಿರುತ್ತದೋ ಅದನ್ನು ಖಚಿತ ಪಡಿಸಿಕೊಂಡು, ಅಲ್ಲಿ ಜೆಡಿಎಸ್ಗೆ ಮತ ನೀಡಬೇಕಾಗಿಬರಬಹುದು. ಒಟ್ಟಿನಲ್ಲಿ, ಸಂಘಪರಿವಾರದ ಬಿಜೆಪಿ ಸೋಲಬೇಕು. ಈ ದುಷ್ಟಶಕ್ತಿಯ ಹಲ್ಲು ಉಗುರು ಕಿತ್ತು ಅದರ ಜೀವವನ್ನೂ ಉಳಿಸಬೇಕು. ಅಂದರೆ ಸಂಘ ಪರಿವಾರ ಬಿಜೆಪಿಯನ್ನೂ ಮಾನವೀಯ ಮಾಡಬೇಕು. ಇದು ನಾಗರೀಕ ಸಮಾಜದ ಹೆಗಲ ಮೇಲಿರುವ ಹೊಣೆಗಾರಿಕೆ.