ರೂಪ ಹಾಸನ ಅವರೊಂದಿಗೆ ಒಂದು ಸಂವಾದ -‘ಅರುಹು ಕುರುಹು’ ತ್ರೈ ಮಾಸಿಕದ ಮಹಿಳಾ ವಿಶೇಷ ಸಂಚಿಕೆಯಲ್ಲಿ

ಹೆಣ್ಣಿನ ಅಂತಃಶಕ್ತಿ ಎಲ್ಲಕ್ಕಿಂಥಾ ದೊಡ್ಡದು    

 

                                                                     Aruhu kuruhu

 ಸಂವಾದಕರು -ಭಾರತಿ ಬಿಜಾಪುರ, ಕೆಂಚಪ್ಪ  

[ರೂಪ ಹಾಸನ ಅವರು ಮೂಲತಃ ಕವಯಿತ್ರಿ. ಆದರೆ ಅವರ ಕಾರ್ಯಕ್ಷೇತ್ರ ಮಕ್ಕಳು ಮತ್ತು ಮಹಿಳೆಯರು. ಇವರು ಅವರೊಂದಿಗೆ ನಡೆಸಿರುವ ಸಂವಾದ, ಓದು, ಮತ್ತು ಒಡನಾಟಗಳಿಂದಾಗಿ, ಮಕ್ಕಳ ಜೊತೆಗೆ ಮತ್ತು  ಮಹಿಳೆಯರ ಜೊತೆಗೆ ಹೆಚ್ಚು ಕೆಲಸ ಮಾಡಿದರೆ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ನಂಬಿ ಕೆಲಸ ಮಾಡುತ್ತಿರುವವರು. ದೌರ್ಜನ್ಯಕ್ಕೊಳಗಾದ ಮಕ್ಕಳು, ಮಹಿಳೆಯರಿಗೆ ಸಾಂತ್ವನ ಹೇಳುವ ಕಾರಣಕ್ಕಾಗಿಯೇ ಕಳೆದ ೨೦ ವರ್ಷಗಳ ಹಿಂದೆ ಪ್ರೇರಣಾ ವಿಕಾಸ ವೇದಿಕೆ ಎನ್ನುವ ಸಂಸ್ಥೆಯನ್ನು ಕಟ್ಟಿ ನಡೆಸುತ್ತಿದ್ದಾರೆ. ಸಮಾನ ಶಾಲಾ ಶಿಕ್ಷಣ, ಮಹಿಳೆಯರ ಮೇಲಿನ ದೌರ್ಜನ್ಯ, ಮಕ್ಕಳ ಸಂಕಷ್ಟಗಳು, ಸಾಮಾಜಿಕ ಅಭಿವೃದ್ಧಿ ಇವರ ಆಸಕ್ತಿಯ ಕ್ಷೇತ್ರಗಳು..ಇವರ ಬರವಣಿಗೆ ಮತ್ತು ಹೋರಾಟದ ಮನೋಭಾವನೆಯನ್ನು ಪರಿಗಣಿಸಿದ ಕರ್ನಾಟಕ ಸರ್ಕಾರ ಸಾಹಿತ್ಯ ಅಕಾಡೆಮಿಗೆ ಮತ್ತು ಲೈಂಗಿಕ ಕಾರ್ಯಕರ್ತೆಯರ ಸಮಸ್ಯೆಗಳ ಕುರಿತಾದ ರಾಜ್ಯ ಮಟ್ಟದ ಅಧ್ಯಯನ ಸಮಿತಿಗೆ ಸದಸ್ಯರನ್ನಾಗಿ ನಿಯಮಿಸಿತ್ತು. -ಸಂಪಾದಕರು]

 

• ಮಹಿಳಾ ಸಬಲೀಕರಣದ ಹೆಸರಿನಲ್ಲಿ ಹೊಸ ಹೊಸ ಅಭಿವೃದ್ದಿ ಕಾರ್ಯಕ್ರಮಗಳು, ಯೋಜನೆಗಳು ಜಾರಿಗೊಳ್ಳುತ್ತಲೇ ಇದ್ದರೂ ಮಹಿಳೆ ಅಂಚಿನಲ್ಲಿಯೇ ನಿಲ್ಲುತ್ತಿದ್ದಾಳೆ ಯಾಕೆ?

ರೂಪ– ಪ್ರತಿ ಮಹಿಳೆಯ ಸಮಸ್ಯೆಯೂ ವಿಭಿನ್ನವಾಗಿರುವುದರಿಂದ ಒಂದೇ ತಕ್ಕಡಿಯಲ್ಲಿಟ್ಟು ಎಲ್ಲವನ್ನೂ ತೂಗುವುದು ಕಷ್ಟದ ಕೆಲಸ. ಶೋಷಿತ ಮಹಿಳೆಯರವರೆಗೆ ಹೋಗಿ ಅವರಿಗೆ ಯೋಜನೆಗಳನ್ನು ತಲುಪಿಸುವ ಕೆಲಸವನ್ನು ನಮ್ಮ ಆಡಳಿತಯಂತ್ರ ಮತ್ತು ಜನಪ್ರತಿನಿಧಿಗಳು ಸಮರ್ಪಕವಾಗಿ ಮಾಡುತ್ತಿಲ್ಲ. ಇಲಾಖೆಗಳ ಮಧ್ಯೆ ಪರಸ್ಪರ ಸಹಕಾರ, ಸಮನ್ವಯತೆ-ಅನ್ಯೋನ್ಯತೆ ಇಲ್ಲದಿರುವುದರಿಂದಲೂ ಅಸಹಾಯಕರು ಬಹಳಷ್ಟು ತೊಂದರೆಗೊಳಗಾಗುತ್ತಾರೆ. ತಮ್ಮದೇ ದೈನಂದಿನ ಜಂಜಾಟಗಳಲ್ಲಿ ಮುಳುಗಿರುವ ಹೆಚ್ಚಿನ ಮಹಿಳೆಯರಿಗೆ ಹೊಸ ಹೊಸ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವಷ್ಟು ವ್ಯವಧಾನ ಇರುವುದಿಲ್ಲ. ಹಲವರಿಗೆ ಸರ್ಕಾರದ ಯೋಜನೆಗಳ ಬಗ್ಗೆ, ಅದಿರುವ ಕುರಿತೇ ತಿಳಿದಿರುವುದಿಲ್ಲ. ಈ ಎರಡರ ಮಧ್ಯೆ ಒಂದು ಸಮರ್ಥವಾದ ಜಾಲವನ್ನು ರೂಪಿಸುವ ಕೆಲಸವೂ ಸಮಾಜದ ವಿವಿಧ ಅಂಗಗಳಿಂದ, ವಿಭಿನ್ನ ಘಟ್ಟಗಳಲ್ಲಿ, ಸಂಘಟನೆಗಳಿಂದಲಾಗಲೀ ನಡೆಯದಿರುವುದೇ ಅಸಹಾಯಕ ಮಹಿಳೆ ಇಂದಿಗೂ ಅಂಚಿನಲ್ಲಿಯೇ ಇರಲು ಮುಖ್ಯ ಕಾರಣ. ಯೋಜನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಸಮರ್ಪಕ ಪ್ರಚಾರದ ಕೊರತೆಯೂ ಮಹಿಳೆ ಅದರಿಂದ ದೂರವೇ ಉಳಿಯುವ ಸಮಸ್ಯೆಯನ್ನು ಹೆಚ್ಚಿಸಿವೆ. ಅದರಲ್ಲೂ ಗ್ರಾಮೀಣ ಮತ್ತು ಅಕ್ಷರ ಕಲಿಯದ ಹೆಣ್ಣುಮಕ್ಕಳನ್ನು ಹೆಚ್ಚಿನ ಯೋಜನೆಗಳು ತಲುಪುತ್ತಲೇ ಇಲ್ಲ. ಇನ್ನೊಂದು ಮುಖ್ಯ ಕಾರಣವೆಂದರೆ ಆರ್ಥಿಕ ಸಬಲತೆಯಿಲ್ಲದ ಮಹಿಳೆಯರು ಅಸಂಖ್ಯಾತರಿದ್ದಾರೆ. ಯೋಜನೆಗೆ ಗುರುತಿಸಿರುವ ಫಲಾನುಭವಿಗಳು ಒಂದು ಹಿಡಿಯಷ್ಟಿರುತ್ತಾರೆ. ಹೀಗಾಗಿ ಯೋಜನೆಯ ಸೌಲಭ್ಯ ಪಡೆಯಲು ಮುನ್ನುಗ್ಗುವ ಛಾತಿ ಇರುವ ಕೆಲವರಿಗೆ ಮಾತ್ರ ದಕ್ಕುತ್ತದೆ. ಹೀಗಾಗಿ ಯೋಜನೆಗಳ ಫಲಾನುಭವಿಗಳ ಪ್ರಮಾಣವನ್ನು ಹೆಚ್ಚಿಸಬೇಕು. ಹೆಚ್ಚಿನ ಮಹಿಳೆಯರಿಗೆ ಯೋಜನೆ ದೊರಕಿಸುವ ಗುರಿ ಹಾಕಿಕೊಳ್ಳಬೇಕು. ಎಷ್ಟೋ ಬಾರಿ ಯೋಜನೆಗಳು ಸಮರ್ಪಕವಾಗಿರುವುದಿಲ್ಲ. ನಿರ್ದಿಷ್ಟ ತರಬೇತಿ ಪಡೆದು, ಸಾಲದ, ಅನುದಾನದ ಹಣ ಕೈಗೆ ಬಂದಿದ್ದರೂ ಏಕಾಂಗಿಯಾಗಿ ವೃತ್ತಿ, ವ್ಯಾಪಾರ ನಡೆಸುವ, ನಿಭಾಯಿಸುವ ಚಾಕಚಕ್ಯತೆ ಇಲ್ಲದ ಮಹಿಳೆ, ಇದಕ್ಕೆ ಬೇಕಾದ ಸಾಮಾಜಿಕ-ಕೌಟುಂಬಿಕ ಪರಿಸರ ಮತ್ತು ಸರಿಯಾದ ಮಾರುಕಟ್ಟೆ ವ್ಯವಸ್ಥೆ ಹೊಂದಿಲ್ಲದೆ ಸೋಲನ್ನನುಭವಿಸುತ್ತಾರೆ.
ಬಹುತೇಕ ಅಭಿವೃದ್ಧಿ ಯೋಜನೆಯ ಫಲಾನುಭವಿಯಾಗಲು ಬೇಕಾಗುವ ದಾಖಲೆಗಳನ್ನು ಒದಗಿಸುವುದೇ ಮಹಿಳೆಯರಿಗೆ ಮುಖ್ಯ ತೊಂದರೆ. ಹೆಚ್ಚಿನ ದಾಖಲೆಗಳು ಅವಳ ಬಳಿ ಇರುವುದಿಲ್ಲ. ಒಂದು ಉದಾಹರಣೆಯೆಂದರೆ, ತಂದೆಯ ಅಥವಾ ಪತಿಯ ಮನೆಯ ರೇಷನ್‍ಕಾರ್ಡಿನಲ್ಲಿ ಇವಳ ಹೆಸರು ನಮೂದಾಗಿರುತ್ತದೆ. ಆದರೆ ಅವಳು ವಿವಿಧ ಕಾರಣಗಳಿಂದ ಅನಿವಾರ್ಯವಾಗಿ ಮನೆ ಬಿಟ್ಟು ಹೊರ ಬಂದಿರುತ್ತಾಳೆ. ಹೊಸದಾಗಿ ರೇಷನ್‍ಕಾರ್ಡು ಇವಳ ಹೆಸರಿನಲ್ಲಿ ಮಾಡಿಸಿಕೊಳ್ಳಲು, ಮೊದಲು ಅವಳ ಹೆಸರನ್ನು ಹಿಂದಿನ ರೇಷನ್‍ಕಾರ್ಡಿನಿಂದ ತೆಗೆಯಬೇಕು….. ಹೀಗೆ ಸಧ್ಯದ ನಿಯಮಾವಳಿ ಪ್ರಕಾರ ಅವಳದನ್ನು ಪಡೆಯಲು ಸಾಧ್ಯವೇ ಇಲ್ಲದಂತಾ ಸ್ಥಿತಿ ಈಗಿದೆ. ಎಲ್ಲವೂ ಸರಿಯಿದ್ದರೆ, ಅವುಗಳನ್ನು ಮಾಡಿಸಿಕೊಳ್ಳುವ ದಾರಿಗಳೂ ಅವಳಿಗೆ ಗೊತ್ತಿರುವುದಿಲ್ಲ. ಕಚೇರಿಯಿಂದ ಕಚೇರಿಗೆ ಓಡಾಡಿ ಅದನ್ನು ಮಾಡಿಸಿಕೊಳ್ಳುವ ಸಮಯ, ತಾಳ್ಮೆಯೂ ಅವಳಲ್ಲಿ ಇರುವುದಿಲ್ಲ. ಬ್ಯಾಂಕಿನಲ್ಲಿ ಸಾಲ ನೀಡಲು, ಹಲವು ಕಡೆಗಳಲ್ಲಿ ಷ್ಯೂರಿಟಿ ಕೇಳುತ್ತಾರೆ. ದೊಡ್ಡ ಪ್ರಮಾಣದ ಆದಾಯ ಮತ್ತು ಹಣ ಇರುವ ವ್ಯಕ್ತಿಗಳ ಪರಿಚಯವಿಲ್ಲದೇ ಬದುಕುತ್ತಿರುವ ಬಡ ಹೆಣ್ಣುಮಕ್ಕಳು ಇದನ್ನೆಲ್ಲಿಂದ ತಂದಾರು? ಆದರೆ ರಾಜ್ಯಾದ್ಯಂತ ಮಹಿಳೆಯರು ತಾವು ಪಡೆದ ಬ್ಯಾಂಕ್ ಸಾಲವನ್ನು ಅತ್ಯಂತ ಪ್ರಾಮಾಣಿಕವಾಗಿ ತೀರಿಸುತ್ತಿರುವುದಕ್ಕೆ ದಾಖಲೆಗಳಿವೆ.
ಯೋಜನೆಯ ಫಲಾನುಭವಿಯಾಗಲು ದೀರ್ಘ, ಕ್ಲಿಷ್ಟ ಮತ್ತು ಕಷ್ಟಕರವಾದ ಕಾರ್ಯ ವಿಧಾನವನ್ನು ಅನುಸರಿಸಬೇಕಾಗಿರುವುದೂ ಒಂದು ಅಡ್ಡಿ. ಈ ಪ್ರಕ್ರಿಯೆಯನ್ನು ಸರಳ ಮತ್ತು ಸುಲಭಗೊಳಿಸುವ ಕೆಲಸವನ್ನು ಸರ್ಕಾರ ತುರ್ತಾಗಿ ಮಾಡಬೇಕಿದೆ.

• ಮಹಿಳಾ ಸಬಲೀಕರಣ ಮತ್ತು ಮಹಿಳೆಯ ಹಕ್ಕುಗಳ ಕುರಿತು ಹೆಚ್ಚು ಚರ್ಚೆ ನಡೆಯುವಾಗಲೇ ಅವರ ಮೇಲೆ ದೌರ್ಜನ್ಯ ಮತ್ತು ಹಿಂಸೆ ಹೆಚ್ಚಾಗುತ್ತಿದೆ ಯಾಕೆ?

ರೂಪ– ಇದಕ್ಕೆ ಹಲವು ಕಾರಣಗಳಿವೆ. ಮಹಿಳೆ ಬದಲಾಗುವಷ್ಟು, ಆಧುನಿಕತೆಗೆ ತೆರೆದುಕೊಳ್ಳುವಷ್ಟು ವೇಗವಾಗಿ ನಮ್ಮ ಪುರುಷ ಮನಸ್ಸುಗಳು ಬದಲಾಗದಿರುವುದು. ಪರಂಪರಾಗತ ಪುರುಷ ಕೇಂದ್ರಿತ ಸಮಾಜದ ಸಂಪ್ರದಾಯ, ಧಾರ್ಮಿಕ ಆಚರಣೆ, ಲಿಂಗ ಅಸಮಾನತೆ, ಮಹಿಳೆಯಾದ ಕಾರಣಕ್ಕೇ ಸೃಷ್ಟಿಯಾಗುವ ಚೌಕಟ್ಟನ್ನು ಪ್ರಶ್ನಿಸುವ, ಸಾಮಾಜಿಕ ಸಂಸ್ಥೆಗಳ ಚೌಕಟ್ಟನ್ನು ಧಿಕ್ಕರಿಸಿ ಆಚೆ ಹೋಗಲು ಪ್ರಯತ್ನಿಸುವ ಹೆಣ್ಣನ್ನು ಮತ್ತೆ ಚೌಕಟ್ಟಿನೊಳಗೇ ಇರಿಸುವಾಗ ಉಂಟಾಗುವ ಘರ್ಷಣೆ ಅವಳ ಮೇಲೆ ಇನ್ನಷ್ಟು ದೌರ್ಜನ್ಯ ಮತ್ತು ಹಿಂಸೆಗೆ ಎಡೆಮಾಡಿಕೊಡುತ್ತಿದೆ. ಮಾನವ ನಾಗರೀಕನಾದಷ್ಟೂ, ಆಧುನಿಕನಾದಷ್ಟೂ ಸಂಗಾತಿಯಾಗಿರುವ ಹೆಣ್ಣಿನ ಕುರಿತು ಸೂಕ್ಷ್ಮತೆಯನ್ನೂ, ಅಂತಃಕರಣವನ್ನೂ, ಸಮಾನತೆಯ ಪರಿಕಲ್ಪನೆಗಳನ್ನು ರೂಢಿಸಿಕೊಳ್ಳಬೇಕಿತ್ತು. ಆದರೆ ಹಾಗಾಗದೇ ಪ್ರತಿಸ್ಪರ್ಧಿಯ ನೆಲೆಯಲ್ಲಿ ಅವಳನ್ನು ನೋಡುತ್ತಿರುವುದು ಮತ್ತು ಅತ್ಯಂತ ಅನಾಗರೀಕವಾಗಿ ಅವಳೊಂದಿಗೆ ವ್ಯವಹರಿಸುತ್ತಿರುವುದು ಆತಂಕಕಾರಿಯಾಗಿದೆ. ಮನುಷ್ಯನ ಪ್ರಾಣಿಜನ್ಯ ಸ್ವಭಾವವನ್ನು ಉದ್ದೇಶಪೂರ್ವಕವಾಗಿ ಪಳಗಿಸಿ, ಉದಾರವೂ, ವಿನಮ್ರವೂ ಆದ ಮಾದರಿಗಳನ್ನು ಇಂದು ನಾವು ಅಳವಡಿಸಿಕೊಳ್ಳದಿದ್ದರೆ, ಮುಂದಿನ ದಿನಗಳು ಹೆಣ್ಣಿಗೆ ಇನ್ನಷ್ಟು ಆತಂಕಕಾರಿಯಾಗಲಿವೆ. ಪುರುಷನ ಮನಸ್ಸಿನಲ್ಲಿ ಹೆಣ್ಣಿನ ಬಗೆಗೆ ಆಳವಾಗಿ ಬೇರೂರಿರುವ ಯಜಮಾನ್ಯ ಸ್ವಭಾವದ ಬದಲಾಗಿ ಸಹೃದಯತೆಯನ್ನು ತರುವ ನಿಟ್ಟಿನಲ್ಲೇ ಹೆಚ್ಚು ಕೆಲಸಗಳಾಗಬೇಕಿವೆ ಎನ್ನಿಸುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನಗಳಾಗಿರುವುದು ಕಡಿಮೆ.
ಇಂದು ಮಹಿಳೆ ದಿಟ್ಟವಾಗಿ ತನಗೆ ಸಂವಿಧಾನಾತ್ಮಕವಾಗಿ, ನ್ಯಾಯಯುತವಾಗಿ ಸಲ್ಲಬೇಕಾದ ಹಕ್ಕುಗಳನ್ನು, ಸಮಾನತೆಯನ್ನು ಕೇಳುತ್ತಿದ್ದಾಳೇ, ಪುರುಷನಷ್ಟೇ ಅನಿಯಂತ್ರಿತವಾಗಿ ಸಮಾಜದೊಳಗೆ ಬೆರೆಯುತ್ತಿದ್ದಾಳೆ ಎಂಬುದೇ ಅನೇಕ ಸಂಪ್ರದಾಯಸ್ಥ ಮನಸುಗಳಿಗೆ ಸಹಿಸದ ವಿಚಾರವಾಗಿ ಅವಳ ಮೇಲೆ ದೌರ್ಜನ್ಯವೆಸಗುತ್ತಾರೆ. ಭಾರತದಲ್ಲಿ ಹೆಣ್ಣಿನ ಬಗೆಗಿರುವ ಧಾರ್ಮಿಕ ಕಟ್ಟುಪಾಡುಗಳಿಂದ ಕಳಚಿಕೊಂಡು ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಅತ್ಯಂತ ಕಷ್ಟದ ಕೆಲಸ. ಹೆಣ್ಣೆಂದರೆ ಹೀಗೇ ಇರಬೇಕು, ಹೀಗೇ ಮಾಡಬೇಕು, ಹೀಗೇ ಯೋಚಿಸಬೇಕು, ಮಾತಾಡಬೇಕು, ಬರೆಯಬೇಕು…..ಎಂಬೆಲ್ಲಾ ಪುರುಷ ಸ್ಥಾಪಿತ ಧೋರಣೆಗಳನ್ನು ದಾಟಿ ಹೆಣ್ಣು ತನ್ನ ಅಸ್ಮಿತೆಯನ್ನು ಛಾಪಿಸುವುದಕ್ಕೆ ಬಹು ದೀರ್ಘ ಹಾದಿಯನ್ನು ಸವೆಸಬೇಕಿದೆ. ಈ ಹಾದಿಯಲ್ಲಿ ಹಲವು ಸಂಘರ್ಷವಿರುತ್ತದೆ. ಮತ್ತೆ ಮತ್ತೆ ಅವಳನ್ನು ಮೇಲೇಳದಂತೆ ಘಾಸಿಗೊಳಿಸಲಾಗುತ್ತದೆ. ಹೊರಗಿನ ಹೆಣ್ಣುಮಕ್ಕಳು ಸಾಮಾಜಿಕವಾಗಿ ತೊಡಗಿಕೊಂಡಿರುವುದು ಕಂಡಾಗ ಸಂಭ್ರಮಿಸುವ ಪುರುಷರೂ ತಮ್ಮದೇ ಮನೆಯ ಹೆಣ್ಣುಮಗಳು ಹಾಗೆ ಹೊರಗೆ ಮುಕ್ತವಾಗಿ ತೊಡಗಿಕೊಳ್ಳಲು ಬೇಕಾದ ಅವಕಾಶ ಅಥವಾ ಸಂದರ್ಭಗಳು ದೊರೆಯದಂತೆ ನೋಡಿಕೊಳ್ಳುವುದೂ, ನಿರಾಕರಿಸುವುದೂ ಇದೆ. ಆದರೆ ಇದನ್ನೆಲ್ಲಾ ಮೀರುವ, ಮೆಟ್ಟಿ ನಿಲ್ಲುವ ದಾರಿಯಲ್ಲಿರುವ ಹೆಣ್ಣಿನ ಅಂತಃಶಕ್ತಿ ಎಲ್ಲಕ್ಕಿಂಥಾ ದೊಡ್ಡದೆಂದು ನಾನು ಭಾವಿಸಿದ್ದೇನೆ.
ಜಾಗತೀಕರಣದ ಮುಕ್ತ ಆರ್ಥಿಕ ನೀತಿಗಳು ಹೆಣ್ಣನ್ನು ಮಾರಾಟದ ಸರಕನ್ನಾಗಿಸುತ್ತಿರುವುದು ಹೆಣ್ಣಿನ ಶೋಷಣೆಯ ಇನ್ನೊಂದು ಮುಖ್ಯ ಕಾರಣ. ಅವಳನ್ನೊಂದು ಭೋಗದ ವಸ್ತುವೆಂಬಂತೆ ರೂಪಿಸುತ್ತಿರುವ ಮಾರುಕಟ್ಟೆ ವ್ಯವಸ್ಥೆ, ಮಾಧ್ಯಮಗಳ ಹುನ್ನಾರಗಳು, ಈ ಭ್ರಮಾಮಿಥ್ಯವನ್ನು ನಂಬಿ ಅದರ ಹಿಂದೆ ವಿವೇಚನೆಯಿಲ್ಲದೇ ಓಡುತ್ತಿರುವ ಕೆಲವು ಹೆಣ್ಣುಮಕ್ಕಳು ಅವಸರದ ಹಣ ಗಳಿಕೆ, ಹೆಸರು, ಕೀರ್ತಿ, ಪ್ರತಿಷ್ಠೆಗಳಿಸುವ ರೋಚಕವಾದ ದಾರಿಯಲ್ಲಿ ವೇಗವಾಗಿ ಸಾಗುವಾಗ ಮತ್ತೆ ಮತ್ತೆ ಊಹೆಗೂ ನಿಲುಕದಂತಹಾ ದೌರ್ಜನ್ಯಗಳಿಗೆ ತುತ್ತಾಗುತ್ತಾರೆ.
ಹೆಣ್ಣನ್ನು ಭ್ರೂಣದಲ್ಲೇ ಹತ್ಯೆ ಮಾಡಿ ಬಿಸಾಡುತ್ತಿರುವ ಲಾಭಕೋರ ಲೆಕ್ಕಾಚಾರದ ಸಮಾಜ ಇಂದು ಲಿಂಗಾನುಪಾತದ ನೆಲೆಯಲ್ಲಿ ಹೆಣ್ಣಿನ ತೀವ್ರ ಕೊರತೆಯನ್ನು ಅನುಭವಿಸುವ ಹಂತಕ್ಕೆ ಬಂದು ನಿಂತಿದೆ. ಈ ಅಸಮಾನತೆಯೂ ಹೆಣ್ಣಿನ ಮೇಲಿನ ದೌರ್ಜನ್ಯ ಹೆಚ್ಚಳಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿದೆ. ಹೆಚ್ಚುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಹೆಣ್ಣುಮಕ್ಕಳ ಸಾಗಾಣಿಕೆ ಮತ್ತು ಅಕ್ರಮ ಮಾರಾಟ, ಎಗ್ಗಿಲ್ಲದೇ ನಡೆಯುತ್ತಿರುವ ವೇಶ್ಯಾವಾಟಿಕೆ…..ಇವೆಲ್ಲಕ್ಕೆ ಹೆಣ್ಣಿನ ಕೊರತೆಯೂ ಮುಖ್ಯ ಕಾರಣವೆಂದು ಸಮಾಜವಿಜ್ಞಾನಿಗಳು ಗುರುತಿಸುತ್ತಾರೆ.
ಎಲ್ಲಕ್ಕಿಂತಾ ಮುಖ್ಯವಾಗಿ ಸಮಾಜ ಮತ್ತು ಇದುವರೆಗಿನ ಯಾವುದೇ ಸರ್ಕಾರಗಳು ಹೆಣ್ಣಿನ ಬಾಲ್ಯವಿವಾಹವನ್ನು ಗಂಭೀರ ವಿಷಯವಾಗಿ ಪರಿಗಣಿಸಿಯೇ ಇಲ್ಲ. ಈಗಲೂ ನಮ್ಮ ದೇಶ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಶೇಕಡಾ 50ಕ್ಕಿಂತಾ ಹೆಚ್ಚಿನ ವಿವಾಹಗಳು ಬಾಲ್ಯವಿವಾಹಗಳೇ ಆಗಿವೆ. ಆ ಮೂಲಕ ಹೆಣ್ಣು ಏಕ ಕಾಲಕ್ಕೆ ತನ್ನ ಶೈಕ್ಷಣಿಕ ಹಕ್ಕು, ಆಯ್ಕೆಯ ಹಕ್ಕು, ಆಸ್ತಿಯ ಹಕ್ಕು, ತನ್ನಿಷ್ಟದಂತೆ ಬದುಕುವ ಹಕ್ಕು…… ಹೀಗೆ ಅನೇಕ ಹಕ್ಕುಗಳನ್ನು ಕಳೆದುಕೊಳ್ಳುತ್ತಾಳೆ ಎಂಬುದು ನಿರ್ವಿವಾದ. ಇಂತಹಾ ಮದುವೆಯಾದ ಕೆಲ ವರ್ಷಗಳಲ್ಲೇ ಒಂದೋ ಗಂಡ ಇವಳನ್ನ ಬಿಟ್ಟು ಹೋಗಿರುತ್ತಾನೆ, ಅಥವಾ ಬೇರೆಯವಳನ್ನು ಮದುವೆಯಾಗಿರುತ್ತಾನೆ, ಇಲ್ಲವೇ ಸತ್ತಿರುತ್ತಾನೆ ಇಲ್ಲವೇ ಕುಡುಕನಾಗಿ ಇವಳ ಬದುಕಿಗೇ ಕಂಟಕನಾಗಿರುತ್ತಾನೆ. ಅಷ್ಟರಲ್ಲಾಗಲೇ ಇವಳಿಗೆ 3-4 ಮಕ್ಕಳಾಗಿ ಕುಟುಂಬವನ್ನು ಸಾಕುವ ಸಲುವಾಗಿ ಮಹಿಳೆ ವಂಚನೆಗೆ ಒಳಗಾಗುತ್ತಾಳೆ. ಅನೇಕ ತಪ್ಪು ಹಾದಿಯನ್ನು ತುಳಿಯಬೇಕಾಗುವಂತಹ, ಬೀದಿಗೆ ಬೀಳಬೇಕಾಗುವಂತಹ ಸಂದರ್ಭದಲ್ಲಿ ಊಹೆಗೂ ನಿಲುಕದಂತಹ ರೀತಿಗಳಲ್ಲಿ ದೌರ್ಜನ್ಯಕ್ಕೆ, ಹಿಂಸೆಗೆ ಗುರಿಯಾಗುತ್ತಾಳೆ.
ಅತ್ಯಾಚಾರಕ್ಕೊಳಗಾದ ಹೆಣ್ಣನ್ನು ಅತ್ಯಾಚಾರಿಗೇ ಮದುವೆ ಮಾಡುವಂತಾ ಒಂದು ಕೆಟ್ಟ ಮನಸ್ಥಿತಿಯೂ ನಮ್ಮಲ್ಲಿದೆ. ಅವಳ ಪಾಲಿಗೆ ಇದೆಷ್ಟು ಭೀಕರ ಎಂದು ಯೋಚಿಸಬೇಕು. ಇಂತಹ ಪ್ರಯತ್ನವನ್ನು ಬಿಟ್ಟು ಅವಳ ತಪ್ಪೇ ಇಲ್ಲದೇ ನಡೆದ ದುರ್ಘಟನೆಯಿಂದ ಹೊರ ಬಂದು ಮತ್ತೆ ಮುಖ್ಯವಾಹಿನಿಯಲ್ಲಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅವಳಿಗೆ ಬಲ ತುಂಬುವಂತಾ ವ್ಯವಸ್ಥೆ ನಿರ್ಮಾಣವಾಗಬೇಕು.
ಇವುಗಳೆಲ್ಲವನ್ನು ಮುಖ್ಯವಾಹಿನಿಯ ಸಮಸ್ಯೆಗಳಾಗಿ ತೆಗೆದುಕೊಂಡು ಇದರ ತಳಮಟ್ಟದ ನಿರ್ಮೂಲನೆಗಾಗಿ ನಾವು ಕಾರ್ಯಪ್ರವರ್ತರಾಗದಿದ್ದರೆ ಮಹಿಳೆಯ ಸಬಲೀಕರಣ, ಹಕ್ಕಿನ ಕುರಿತು ಎಷ್ಟೇ ಹೊಸ ರೀತಿಯಲ್ಲಿ ಚರ್ಚೆಗಳಾದರೂ ಪರಿಸ್ಥಿತಿ ಬದಲಾಗಲು ಸಾಧ್ಯವಿಲ್ಲ.

• ಸಮಕಾಲೀನ ಅಭಿವೃದ್ಧಿಗೂ ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕ್ಕೂ ಇರುವ ಸಂಬಂಧವನ್ನು ನೀವು ಹೇಗೆ ಗುರುತಿಸುವಿರಿ?

ರೂಪ– ಸಮಕಾಲೀನ ಅಭಿವೃದ್ಧಿ ಪರಿಕಲ್ಪನೆ ಕೂಡ ಇಂದಿಗೂ ಮಹಿಳೆ ಮತ್ತು ಮಕ್ಕಳ ಕೇಂದ್ರಿತವಾಗಿ ಯೋಚಿಸುತ್ತಿಲ್ಲ. ವಿವಿಧ ಕ್ಷೇತ್ರಗಳ ಅಭಿವೃದ್ಧಿಯಂತೆಯೇ ಹೆಣ್ಣನ್ನು ಒಂದು ವರ್ಗವಾಗಿ ನೋಡದೇ ಅವಳನ್ನೂ ಮಕ್ಕಳನ್ನೂ ಮಾನವ ಸಂಪತ್ತಾಗಿ ಪರಿಗಣಿಸಿದಾಗ ಮತ್ತು ಅಂತಃಕರಣದ ನೆಲೆಯಲ್ಲಿ ಗ್ರಹಿಸಿದಾಗ ಮಾತ್ರ ಅಭಿವೃದ್ಧಿಯ ಪರಿಕಲ್ಪನೆಗಳು ಬದಲಾಗಿ ಅವರನ್ನೂ ಸಮಾಜ ನಿರ್ಮಾಣದ ಕ್ರಿಯೆಯಲ್ಲಿ ಒಳಗೊಳ್ಳುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಈಗಿನ ಅಭಿವೃದ್ಧಿ ಯೋಜನೆಗಳು ಮಹಿಳೆ ಮತ್ತು ಮಕ್ಕಳಿಗೆ ಏನೋ ಒಂದಷ್ಟು ಬಜೆಟ್‍ನಲ್ಲಿ ಎತ್ತಿಟ್ಟು ನೀಡಿ ಉಪಕಾರ ಮಾಡುತ್ತಿರುವ ಉದಾರವಾದಿ ನೆಲೆಯಿಂದ ಸೃಷ್ಟಿಯಾಗುತ್ತಿವೆಯೇ ಹೊರತು ಅದು ಅವರ ಹಕ್ಕು ಎಂದಾಗಲೀ, ಸಮಾನವಾದ ಅವಕಾಶ ಮತ್ತು ಸಾಧ್ಯತೆಗಳ ವಿಸ್ತಾರಕ್ಕೆ ಪೂರಕವೆಂಬಂತೆ ರೂಪಿತವಾಗುತ್ತಿಲ್ಲ. ಈ ಅಸಮರ್ಪಕ ಮತ್ತು ಅಸಂವಿಧಾನಿಕ ದೃಷ್ಟಿಕೋನದ ಮೂಲಕವೇ ಮಹಿಳೆ ಮತ್ತು ಮಕ್ಕಳು ಇಂದಿಗೂ ಅಸಹಾಯಕ ನೆಲೆಯಲ್ಲಿ ನಿಂತು ಮತ್ತೆ ಮತ್ತೆ ಕೈಯೊಡ್ಡುವ ಸ್ಥಿತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರನ್ನು ಸ್ವಾಭಿಮಾನಿ ನೆಲೆಯಲ್ಲಿ ರೂಪಿಸಲು ನಮ್ಮ ಅಭಿವೃದ್ಧಿಯ ಪರಿಕಲ್ಪನೆಯೇ ಬದಲಾಗಬೇಕಿದೆ.
ಹೆಣ್ಣುಮಕ್ಕಳ ಶಿಕ್ಷಣವನ್ನು ಸರ್ಕಾರಗಳು ಇನ್ನೂ ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಿದೆ. ವಿವಿಧ ಕಾರಣಗಳಿಗಾಗಿ ಶಾಲೆ ಸೇರದಿರುವ, ಬಿಟ್ಟಿರುವ ಹೆಣ್ಣುಮಕ್ಕಳ ಸಮಸ್ಯೆಯನ್ನು ಪ್ರತ್ಯೇಕವಾಗಿಯೇ ಅಧ್ಯಯನ ಮಾಡಿ ಅವರೆಲ್ಲರಿಗೆ ಮೂಲಭೂತ ಶಿಕ್ಷಣದ ಜೊತೆಗೆ ವೃತ್ತಿಶಿಕ್ಷಣ ತರಭೇತಿಯನ್ನೂ ನೀಡಿ ಸ್ವಾವಲಂಬಿಗಳಾಗಿಸಬೇಕಿದೆ. ಇಲ್ಲದಿದ್ದಾಗ ಅಭಿವೃದ್ಧಿ ಏಕಮುಖೀ ಪ್ರಕ್ರಿಯೆಯಾಗಿ ಮಾತ್ರ ಉಳಿಯುತ್ತದೆ. ಅಂಚಿನಲ್ಲಿರುವ ಹೆಣ್ಣುಮಕ್ಕಳು ಈ ವ್ಯಾಖ್ಯೆಯಡಿ ಬರಲು ಸಾಧ್ಯವೇ ಆಗುವುದಿಲ್ಲ.
ಮಹಿಳೆ ಮತ್ತು ಮಕ್ಕಳ ಶೋಷಣೆ ಇಂದು ಹೆಚ್ಚು ಸೂಕ್ಷ್ಮವೂ ಸಂಕೀರ್ಣವೂ ಆಗಿದೆ. ಅದು ಬಹಿರಂಗವಾಗಿ ನಡೆಯುವುದಕ್ಕಿಂತಾ ಕಣ್ಣಿಗೆ ಕಾಣದಂತೆ ನಡೆಯುತ್ತದೆ. ನಿಜವಾದ ಶತ್ರು ಯಾರು ಎಂದು ಅರಿಯದೇ ಹೋರಾಟ ಮಾಡುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹೀಗಾಗಿ ನಿರೀಕ್ಷಿತ ವೇಗದಲ್ಲಿ ನಾವು ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ ಪುರುಷನ ಮದ್ಯಪಾನದ ಚಟದಿಂದ ಮಹಿಳೆ ಮತ್ತವಳ ಕುಟುಂಬ ತೀವ್ರತೆರನಾದ ದೌರ್ಜನ್ಯಕ್ಕೆ ಈಡಾಗುತ್ತದೆ. ಅಬಕಾರಿ ಆದಾಯವನ್ನು ಮೂಲ ಅಭಿವೃದ್ಧಿಯ ಬಂಡವಾಳವಾಗಿಸಿಕೊಂಡಿರುವ ನಮ್ಮ ಪ್ರಭುತ್ವಕ್ಕೆ ಇದು ಮುಖ್ಯ ವಿಷಯವೆನ್ನಿಸುವುದೇ ಇಲ್ಲ. ಕುಟುಂಬದ ಇಂತಹ ವ್ಯಸನದ ಗಂಡಸಿನೊಂದಿಗೆ ಪ್ರತಿನಿತ್ಯ ಹೊಡೆದಾಡಿ ಬದುಕು ಕಟ್ಟಿಕೊಳ್ಳುವುದರಲ್ಲಿಯೇ ಮಹಿಳೆಯ ಆಯುಷ್ಯ ಕಳೆಯುತ್ತದೆ. ಹೀಗೆ ಪ್ರತಿ ಮಹಿಳೆ ಮತ್ತು ಪ್ರತಿ ಮಗುವಿನ ಸಮಸ್ಯೆ ವಿಭಿನ್ನವಾದುದರಿಂದ ನಾವು ಅವರನ್ನು ‘ಇಡಿಯಾಗಿ’[As a whole] ತೂಗಿ  ನೋಡುವ ಪರಿಕಲ್ಪನೆಯಲ್ಲೇ, ಒಟ್ಟಾಗಿ ಸಮಸ್ಯೆಗೆ ಪರಿಹಾರವನ್ನು ಘೋಷಿಸುವ ವಿಧಾನದಲ್ಲೇ ದೋಷವಿದೆಯೆಂದು ನಾನು ಭಾವಿಸುತ್ತೇನೆ.
ವೈವಾಹಿಕ ಮತ್ತು ಕೌಟುಂಬಿಕ ವ್ಯವಸ್ಥೆ ಅವಳನ್ನು ಹೆಚ್ಚು ಅಧೀನಳನ್ನಾಗಿಯೂ, ಪರಾವಲಂಬಿಯನ್ನಾಗಿಯೂ, ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ದಿಟ್ಟತೆಯನ್ನು ಬೆಳೆಸದಂತೆಯೂ ಇರುವುದರಿಂದ ನಮ್ಮ ಅಭಿವೃದ್ಧಿ ಪರಿಕಲ್ಪನೆಯೇ ಮುಕ್ಕಾಗಿರುವಂತದ್ದಾಗಿದೆ. ಇದಕ್ಕೆ ಇನ್ನೊಂದು ಉದಾಹರಣೆಯೆಂದರೆ ಮೊನ್ನೆಯ ನಮ್ಮ ಜನಗಣತಿಯು ಗೃಹಿಣಿಯರನ್ನು ಅನುತ್ಪಾದಕರು ಎಂದು ದಾಖಲಿಸಿದೆ! ಇದನ್ನು ಯಾವ ರೀತಿ ನೋಡುತ್ತೀರಿ? ಭವಿಷ್ಯದ ಸಂತಾನದ ತಾಯಿಯನ್ನು ಅನುತ್ಪಾದಕಳೆಂದು ಗುರುತಿಸುವುದಾದರೆ, ಮಾನವ ಸಂಪತ್ತನ್ನು, ಆ ಹಿನ್ನೆಲೆಯಲ್ಲಿ ಅಭಿವೃದ್ಧಿಯನ್ನು ಸರ್ಕಾರಗಳು ಹೇಗೆ ಪರಿಗಣಿಸುತ್ತಿವೆ?
ಮೂಲಭೂತ ಅವಶ್ಯಕತೆಗಳಾದ ನೀರು, ಉರುವಲು, ಶೌಚಾಲಯಗಳ ಸಮರ್ಪಕ ಪೂರೈಕೆ ಇಂದಿಗೂ ಸರಿಯಾಗಿ ಆಗಿಲ್ಲವಾದ್ದರಿಂದ ಅದರಲ್ಲೂ ಗ್ರಾಮೀಣ ಮಹಿಳೆ ನೀರು, ಉರುವಲನ್ನು ಸಂಗ್ರಹಿಸಲೆಂದೇ ಮೈಲಿಗಟ್ಟಲೇ ನಡೆದು, ದಿನಗಟ್ಟಲೆ ಸಮಯವನ್ನೂ ಅದಕ್ಕಾಗಿ ಮೀಸಲಿಡಬೇಕಾದಂತಾ ಪರಿಸ್ಥಿತಿ ಇರುವುದರಿಂದ, ಅದು ಅವಳ ಶಿಕ್ಷಣ, ಯಾವುದೇ ರೀತಿಯ ಆರ್ಥಿಕ ಚಟುವಟಿಕೆ, ಕೌಶಲ್ಯ ತರಬೇತಿಯಲ್ಲಿ ತೊಡಗಿಕೊಳ್ಳದಂತೆ ಮಾಡಿ ಅವಳ ವ್ಯಕ್ತಿತ್ವವನ್ನೂ ಅಭಿವೃದ್ದಿಯನ್ನೂ ಮೊಟಕುಗೊಳಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕವಾಗಿಲ್ಲದ ಶಾಲೆಗಳು, ರಸ್ತೆಗಳು, ಆರೋಗ್ಯ ಕೇಂದ್ರಗಳು, ಮಾರುಕಟ್ಟೆ ವ್ಯವಸ್ಥೆ….. ಎಲ್ಲವೂ ಮಹಿಳೆ ಪರೋಕ್ಷವಾಗಿ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಅಂಚಿನಲ್ಲಿಯೇ ಉಳಿಯುವಂತೆ ಮಾಡುತ್ತವೆ.
ಹೀಗಾಗೇ ಈ ಎಲ್ಲಾ ಸಂದರ್ಭದಲ್ಲಿಯೂ ಮಹಿಳೆ ತನಗೇ ಅರಿವಿಲ್ಲದೇ ಎಲ್ಲ ಕ್ಷೇತ್ರಗಳಲ್ಲಿಯೂ ಶೋಷಣೆಗೆ ಈಡಾಗುತ್ತಾಳೆ. ಮಹಿಳೆಯನ್ನು ಶತಮಾನಗಳಿಂದ ಭೂಮಿ, ಮನೆ, ಹೊಲ-ಗದ್ದೆಗಳ ಸ್ಥಿರಾಸ್ತಿಯಿಂದ ವಂಚಿಸುತ್ತಾ ಬಂದಿರುವುದು, ಸಮಾನ ಆಸ್ತಿ ಹಕ್ಕು ದೊರೆಯದಿರುವುದು, ಮಹಿಳೆಗೆ ಸಂಬಂಧಿಸಿದ ಹಲವಾರು ಪರಂಪರಾಗತ ಮೂಢ ನಂಬಿಕೆಗಳು, ಆಚರಣೆಗಳು, ಸಂಪ್ರದಾಯಗಳು ಮುಂದುವರೆದಿರುವುದು, ರಾಜಕೀಯದಲ್ಲಿ ಸಮಾನ ಅವಕಾಶಗಳು ದೊರೆಯದಿರುವುದು, ದೇಶದ ಪ್ರಗತಿಯ ನೀತಿ-ನಿಯಮಾವಳಿಗಳನ್ನು ರೂಪಿಸುವಲ್ಲಿ ಹೆಣ್ಣನ್ನು ಸಮಾನವಾಗಿ ಒಳಗೊಳ್ಳದಿರುವುದು, ಇಂದಿಗೂ ಮನೆಯ ಹೆಚ್ಚಿನ ಜವಾಬ್ದಾರಿ ಮಹಿಳೆಯದೇ ಆಗಿರುವುದು, ಸಾಮಾಜಿಕ ತೊಡಗುವಿಕೆಗಿಂತ ಕೌಟುಂಬಿಕ ಹಿತವನ್ನೇ ಪರಮೋಚ್ಚವಾಗಿ ಪರಿಗಣಿಸಬೇಕೆಂದು ನಿರ್ಧರಿಸಿರುವ ನಮ್ಮ ಕೌಟುಂಬಿಕ ಮೌಲ್ಯಗಳು, ಹೆಣ್ಣಿನ ಸುರಕ್ಷತೆಗೆ ಬೇಕಾದ ಸಮರ್ಪಕ ವ್ಯವಸ್ಥೆಗಳಿಲ್ಲದಿರುವುದು……ಹೀಗೇ….ಇವು ಸಮಾಜದ ಒಟ್ಟು ಅಭಿವೃದ್ಧಿ ಪರಿಕಲ್ಪನೆಯಿಂದ ಮಹಿಳೆ ದೂರವೇ ಉಳಿಯುವಂತೆ ಮಾಡಿವೆ. ಮೂಲ ಬೇರಿಗೆ ಚಿಕಿತ್ಸೆ ನೀಡದೆ ಮೇಲಿನ ಚಿಗುರನ್ನು ಸವರುವುದರಿಂದ ಯಥಾಸ್ಥಿತಿ ಹಾಗೆಯೇ ಮುಂದುವರೆಯುತ್ತದೆ.

ಮಹಿಳೆ ಮತ್ತು ಮಕ್ಕಳ ಮಾರಾಟ ಜಾಲಗಳು ಇತ್ತೀಚೆಗೆ ಹೆಚ್ಚು ಪ್ರಬಲವಾಗುತ್ತಿವೆ ಯಾಕೆ? ಇದನ್ನು ತಡೆಯಲು ತಕ್ಷಣವೇ (ಕಾನೂನಾತ್ಮಕವಾಗಿ, ನಾಗರಿಕ ಸಮಾಜವಾಗಿ) ನಾವು ತೆಗೆದು ಕೊಳ್ಳಬೇಕಾದ ಕ್ರಮಗಳು ಯಾವುವು? ಕುಟುಂಬಗಳ, ಶಾಲೆಗಳ ಇತ್ಯಾದಿ ಸಾಮಾಜಿಕ ಸಂಸ್ಥೆಗಳ ಜೊತೆ ಹೇಗೆ ಮತ್ತು ಯಾವ ಕೆಲಸಗಳನ್ನು ಮಾಡಬೇಕು?

ರೂಪ– ನಾನು ಮೊದಲೇ ಹೇಳಿದಂತೆ ಜಾಗತೀಕರಣದ ಕಬಂಧ ಬಾಹುಗಳು ವಿಸ್ತರಿಸುತ್ತಾ ಹೋದಂತೆ ಹೆಣ್ಣನ್ನು ದೇಹ ಕೇಂದ್ರಿತವಾಗಿ ನೋಡುವ ಪ್ರಕ್ರಿಯೆ ವ್ಯಾಪಕವಾಗುತ್ತಾ ಸಾಗಿದೆ. ಹಿಂದೆ ಮನೆಯೊಳಗೆ ಇದ್ದ ಹೆಣ್ಣಿನ ದಮನದ ಮಾದರಿಗಳು ಇಂದು ಬೀದಿಯಲ್ಲಿ ದೊಡ್ಡ ಕ್ಯಾನ್ವಾಸ್ ಪಡೆದುಕೊಂಡು ನಾಚಿಕೆಯೇ ಇಲ್ಲದೇ ನಡೆಯುವ ಹಂತಕ್ಕೆ ರೂಪಾಂತರವಾಗಿದೆ. ಹೀಗಾಗಿ ಅವಳನ್ನು ಬಳಸಿಕೊಳ್ಳಲು ಬೇಕಾದ ವಿಸ್ತ್ರತ ಮಾರ್ಗಗಳನ್ನೂ ದುಷ್ಟಶಕ್ತಿಗಳು ಕಂಡುಕೊಳ್ಳುತ್ತಿವೆ. ಆಧುನಿಕ ತಂತ್ರಜ್ಞಾನವೂ ಇದಕ್ಕೆ ವೇಗವರ್ಧಕವಾಗಿ ಕೆಲಸ ಮಾಡುತ್ತಿದೆ. ಒಂದೆಡೆ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುವ, ಬಡವರು ಮತ್ತಷ್ಟು ಬಡವರಾಗುತ್ತಾ ಸಾಗಿರುವ ನಮ್ಮ ಅಭಿವೃದ್ಧಿಯ ಪರಿಕಲ್ಪನೆಗಳಿಂದಾಗಿ ವೇಗವಾಗಿ ಬೀದಿಗೆ ಬೀಳುತ್ತಿರುವ ಬಡ ಮಹಿಳೆ ಮತ್ತು ಮಕ್ಕಳು ಬದುಕುಳಿಯಲಿಕ್ಕಾಗಿ ಕೆಲವೊಮ್ಮೆ ತಾವಾಗಿಯೇ, ಹಲವು ಬಾರಿ ವ್ಯವಸ್ಥಿತ ಹುನ್ನಾರದ ಮೂಲಕ ಇಂತಹ ದುಷ್ಟ ಜಾಲಕ್ಕೆ ಬೀಳುತ್ತಿದ್ದಾರೆ. ಕೆಲವೊಮ್ಮೆ ಸರ್ಕಾರದ ಕಾಂಡೋಂ ವಿತರಣೆಯ ಸಾಂಸ್ಥಿಕ ವ್ಯವಸ್ಥೆಯ ಮೂಲಕವೇ ಮಹಿಳೆ ಮತ್ತು ಮಕ್ಕಳು ಮಾರಾಟ ಜಾಲದೊಳಗೆ ಸುಲಭವಾಗಿ ಬೀಳುತ್ತಿದ್ದಾರೆ.
ಪೊಲೀಸ್ ವ್ಯವಸ್ಥೆಯೂ ಇಂತಹ ಮಹಿಳೆ ಮತ್ತು ಮಕ್ಕಳ ನಾಪತ್ತೆ ಅಥವಾ ಕಣ್ಮರೆ ಪ್ರಕರಣಗಳನ್ನು ಎರಡನೇ ಅಥವಾ ಮೂರನೇ ಹಂತದ ಆಧ್ಯತೆಯಾಗಿ ತೆಗೆದುಕೊಳ್ಳುವುದರಿಂದ ಮತ್ತು ಮೂಲ ಮಾರಾಟ ಜಾಲವನ್ನು ಬೇಧಿಸದೇ ತಕ್ಷಣಕ್ಕೆ ಕಣ್ಮರೆಯಾದವರನ್ನು ಮಾತ್ರ ಹುಡುಕಿ ಕೈ ತೊಳೆದುಕೊಳ್ಳುತ್ತಿರುವುದರಿಂದ ಅಪರಾಧಿಗಳು ಹೊರಗೇ ಉಳಿದು ತಮ್ಮ ಜಾಲ ವಿಸ್ತರಿಸಲು, ಎಗ್ಗಿಲ್ಲದೇ ಈ ಕೆಲಸವನ್ನು ಮುಂದುವರಿಸಲು ಸಹಾಯಕವಾಗಿದೆ. ಹಿಂದೆ ಕಣ್ಣಿಗೆ ಕಾಣುವಂತೆ ನಡೆಯುತ್ತಿದ್ದ ಈ ಮಾರಾಟ ಜಾಲಗಳು ಈಗ ಭೂಗತವಾಗಿ ಮತ್ತು ಮಾಫಿಯಾ ಆಗಿ ಬೆಳೆದು ನಿಂತಿದೆ. ಪೊಲೀಸ್ ಇಲಾಖೆಯಲ್ಲಿರುವ ಅಕ್ರಮ ಮಾನವ ಸಾಗಾಣಿಕೆ ಮತ್ತು ಮಾರಾಟ ತಡೆ ಸಮಿತಿಯು ಎಲ್ಲಿಯೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
ಪೊಲೀಸ್ ಇಲಾಖೆಯ ಅಂತರ್ ಜಿಲ್ಲಾ ಮತ್ತು ಅಂತರ್ ರಾಜ್ಯ ನೆಟ್‍ವರ್ಕ್‍ಗಳನ್ನು ಬಲಪಡಿಸಿಕೊಂಡು, ಪ್ರಕರಣ ದಾಖಲಾದ ತಕ್ಷಣ ಕಾರ್ಯಪ್ರವರ್ತರಾದರೆ ಇಡೀ ಮಾರಾಟ ಜಾಲವನ್ನು ಬೇಧಿಸಲು ಸಾಧ್ಯವಿದೆ. ಪ್ರತಿ ಜಿಲ್ಲೆಯಿಂದ ವರ್ಷವೊಂದಕ್ಕೆ 50-60 ಹೆಣ್ಣುಮಕ್ಕಳು ಶಾಶ್ವತವಾಗಿ, ಪತ್ತೆಯಾಗದಂತೆ ಕಣ್ಮರೆಯಾಗುತ್ತಿದ್ದಾರೆ ಎಂದರೆ ಪೊಲೀಸ್ ವ್ಯವಸ್ಥೆಯ ಮೇಲೆಯೇ ಅನುಮಾನ ಮೂಡುತ್ತದೆ. ಮಾರಾಟ ಜಾಲಗಳು ಪೊಲೀಸರ ಅರಿವಿಗೇ ಬರದಂತೆ ಕಾರ್ಯನಿರ್ವಹಿಸುವುದು ಹೇಗೆ ಸಾಧ್ಯ? ಒಂದೋ ಅವರಿಗೆ ಇವೆಲ್ಲಾ ಅರಿವಿದ್ದೂ ಯಾವುದೇ ಕ್ರಮ ಕೈಗೊಳ್ಳುತ್ತಿಲ. ಇಲ್ಲಾ ಇವರ ಸಹಕಾರದಿಂದಲೇ, ಸಾಗಾಣಿಕೆ ಮತ್ತು ಮಾರಾಟ ಜಾಲಗಳು ನಿರ್ವಿಘ್ನವಾಗಿ ಕಾರ್ಯ ನಿರ್ವಹಿಸುತ್ತಿವೆ. ಆದ್ದರಿಂದ ಹೆಣ್ಣಿನ ಈ ಕಾಣೆಯ ಕುರಿತು ಗಂಭೀರ ಕ್ರಮ ಕೈಗೊಳ್ಳಲು ಪೊಲೀಸ್ ವ್ಯವಸ್ಥೆ ಸಮರ್ಪಕ ಯೋಜನೆಗಳನ್ನು ರೂಪಿಸಬೇಕು. ಪೊಲೀಸ್ ಠಾಣೆಗಳಲ್ಲಿ ಅಪರಾಧಕ್ಕೆ ಸಮರ್ಪಕವಾದ ಸೆಕ್ಷನ್‍ಗಳನ್ನು ಹಾಕುವಂತೆ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಬೇಕು. ಘಾಸಿಗೊಳಗಾದ ನೊಂದ ಮಹಿಳೆ ಮಕ್ಕಳು ನಿರ್ಬಿಢೆಯಿಂದ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸುವಂತಾಗಬೇಕು. ಜೊತೆಗೆ ನೊಂದ ಮಹಿಳೆಯರಿಗೆ ಕಾನೂನಿನ ಎಲ್ಲಾ ಪ್ರಕ್ರಿಯೆಯ ಕೆಳಗೆ ತಕ್ಷಣವೇ ನೀಡಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕೆ ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು ಬೆಂಬಲವಾಗಿ ನಿಲ್ಲಬೇಕು. ಗಟ್ಟಿ ಸಾಕ್ಷಿಗಳನ್ನು ಮುಂದಿಡಬೇಕು. ಈಗಿರುವ ಕಾನೂನನ್ನು ಸರಿಯಾಗಿ ಮತ್ತು ತುರ್ತಾಗಿ ಅನುಷ್ಠಾನಗೊಳಿಸಲು ಪ್ರತ್ಯೇಕ ಮಹಿಳಾ ಪೊಲೀಸ್ ಠಾಣೆಗಳು,   ಮಹಿಳಾ ನ್ಯಾಯಾಲಯಗಳು, ತ್ವರಿತಗತಿಯ ನ್ಯಾಯಾಲಯಗಳು ತಕ್ಷಣವೇ ರೂಪುಗೊಳ್ಳಬೇಕು. ಆಗ ಮಾತ್ರ ವಿಳಂಬಗತಿಯ ನ್ಯಾಯ ವ್ಯವಸ್ಥೆಯಲ್ಲಿನ ಪ್ರಕ್ರಿಯೆಯಿಂದ ಆಗುವ ಎಲ್ಲಾ ಅನಾಹುತಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಗುತ್ತದೆ.
ಮಹಿಳೆ ಮತ್ತು ಮಕ್ಕಳ ಮಾರಾಟ ಜಾಲದ ಕುರಿತು ಎಲ್ಲೆಡೆ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಗ್ರಾಮಪಂಚಾಯಿತಿ ಹಂತಗಳಲ್ಲಿ ರೂಪಿತವಾಗಿ, ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದ್ದ ‘ಮಹಿಳಾ ಕಾವಲು ಪಡೆ’ಗಳು ಈಗ ನಿಷ್ಕ್ರಿಯವಾಗಿವೆ. ಅಥವಾ ಈ ಕಾವಲು ಪಡೆಯ ನಿಜವಾದ ಉದ್ದೇಶದ ಅರಿವೇ ಅವುಗಳಿಗಿಲ್ಲ. ತುರ್ತಾಗಿ ಅವುಗಳಿಗೆ ಸರಿಯಾದ ತರಬೇತಿ ನೀಡಿ ಜಾಗೃತಗೊಳಿಸಿ ಪ್ರತಿ ಹಳ್ಳಿಗಳಲ್ಲಿ ಕಣ್ಗಾವಲು ಸಮಿತಿಗಳನ್ನು ರೂಪಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಮಹಿಳಾ ಮತ್ತು ಮಕ್ಕಳ ಸಹಾಯವಾಣಿಗಳು, ತಕ್ಷಣದಲ್ಲಿ, ಚುರುಕಾಗಿ ಮತ್ತು ಪತ್ತೆದಾರಿಕೆಯಲ್ಲಿ ಪಳಗಿಸಿದಂತೆಯೂ ಕೆಲಸ ಮಾಡಬೇಕು. ಪ್ರತಿ ಮಹಿಳೆ ಮತ್ತು ಮಗು ಸ್ವಯಂ ಜಾಗೃತವಾಗಿರುವಂತೆ ಅವರಿಗೆ ಎಲ್ಲ ರೀತಿಯ ತರಬೇತಿ ನೀಡಬೇಕು. ಶಾಲೆಗಳಲ್ಲಿ, ಗ್ರಾಮಸಭೆಗಳಲ್ಲಿ, ಮಾರಾಟ ಜಾಲದ ಕುರಿತು ಎಚ್ಚರಿಕೆ ನೀಡಬೇಕು.
ಪ್ರತಿ ಹೆಣ್ಣುಮಗು ಕನಿಷ್ಠ 18 ವರ್ಷದವರೆಗೆ ಕಡ್ಡಾಯವಾಗಿ ಶಾಲೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಶಾಲೆಯಲ್ಲಿ ಇರುವಷ್ಟು ಸಮಯ ಅವಳು ಸುರಕ್ಷಿತವಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಅದು ಅವಳು ಒಂದು ಹಂತದ ವಿದ್ಯಾಭ್ಯಾಸವನ್ನು ಪಡೆಯಲು ಸಹಕಾರಿಯಾದರೆ, ಇನ್ನೊಂದು ರೀತಿಯಲ್ಲಿ ಅವಳನ್ನು ಬಾಲ್ಯವಿವಾಹದಿಂದ ತಪ್ಪಿಸುತ್ತದೆ. ಶಾಲೆಯಲ್ಲಿ ಇರುವವರೆಗೂ ಅವಳು ಸುರಕ್ಷಿತವಾಗಿ ಇರುವ ವಾತಾವರಣ ಇರುವುದರಿಂದ, ಶಾಲೆಯಿಂದ ಹೊರಗಿರುವ ಹೆಣ್ಣುಮಕ್ಕಳಿಗಿಂತಾ ಇವರು ಸಾಗಾಣಿಕೆಗೆ, ಅಥವಾ ಹೊರಗಿನ ಆಕರ್ಷಣೆಗೆ, ಜಾಲಕ್ಕೆ ಒಳಗಾಗುವುದು ಕಡಿಮೆ.
ಮುಖ್ಯವಾಗಿ, ಹೆಣ್ಣಿನ ಕುರಿತ ಪುರುಷ ದೃಷ್ಟಿಕೋನವನ್ನು ಸಕಾರಾತ್ಮಕವಾಗಿ ಬದಲಿಸಲು ತಳ ಹಂತದಿಂದ ಪ್ರಯತ್ನಿಸುವುದು ಅತ್ಯಂತ ಅವಶ್ಯಕವಾಗಿದೆ. ಇದಕ್ಕಾಗಿ ಪ್ರೌಢಶಾಲಾ ಹಂತದಿಂದಲೇ ಲಿಂಗ ಸಮಾನತೆಯ ಅಧ್ಯಾಯ ಮತ್ತು ಲೈಂಗಿಕ ಶಿಕ್ಷಣಗಳು ಪಠ್ಯದ ಭಾಗವಾಗಬೇಕು. ಆ ಮೂಲಕ ಮನಸ್ಸು ಮತ್ತು ದೇಹದ ಅಂತರ್ ಸಂಬಂಧಗಳನ್ನು ತಿಳಿಹೇಳಬೇಕಿದೆ. ಸಂಬಂಧಗಳಲ್ಲಿನ ಬದ್ಧತೆಯನ್ನೂ ವ್ಯಕ್ತಿಗತವಾಗಿ ರೂಢಿಸಬೇಕು. ಆಗ ಹೆಣ್ಣು ವಂಚನೆಗೊಳಗಾಗುವುದು ಕಡಿಮೆಯಾಗುತ್ತದೆ. ಹೆಣ್ಣನ್ನು ದೇಹ ಮಾತ್ರವಾಗಿ ಗುರುತಿಸದೇ, ಅವಳನ್ನೊಂದು ವ್ಯಕ್ತಿಯಾಗಿ/ಜೀವವಾಗಿ ಗೌರವಿಸುವ ತಿಳಿವು ಮತ್ತು ವಿವೇಕವನ್ನು ಈ ಮೂಲಕ ಮಾಡಬೇಕು. ಲೈಂಗಿಕ ಬದುಕಿನ ನೈತಿಕ ಜವಾಬ್ದಾರಿಯನ್ನು ಮನಮುಟ್ಟುವಂತೆ ತಿಳಿ ಹೇಳುವ ಅವಶ್ಯಕತೆ ಖಂಡಿತಾ ದೊಡ್ಡದಾದುದು. ಮುಖ್ಯವಾಗಿ ಪ್ರತಿ ಮನೆಯಲ್ಲಿ ಎಲ್ಲಾ ಸದಸ್ಯರೂ ಸಮಾನವೆಂಬ ಭಾವ ಬರುವಂತೆ ವಾತಾವರಣ ರೂಪಿಸಬೇಕು. ಮಕ್ಕಳಿಗೆ ಚಿಕ್ಕಂದಿನಲ್ಲೇ ಗಂಡು-ಹೆಣ್ಣು ಬೇಧ ಮಾಡದೇ ಎಲ್ಲ ಕೆಲಸಗಳ ಸಮಾನ ಹಂಚಿಕೆಯ ತತ್ವವನ್ನು ರೂಢಿಸಬೇಕು. ದೈಹಿಕ ಕಾಮನೆಗಳನ್ನು ಪಳಗಿಸುವ ಮಾನಸಿಕ ತರಬೇತಿಯನ್ನು ಕಡ್ಡಾಯವಾಗಿ ಪ್ರೌಢಶಾಲೆ, ಕಾಲೇಜು ಹಂತದ ಪಠ್ಯದಲ್ಲಿ ಅಳವಡಿಸಬೇಕು.
ಅವ್ಯಾಹತವಾಗಿ ನಡೆಯುತ್ತಿರುವ ಹೆಣ್ಣುಭ್ರೂಣ ಹತ್ಯೆಯನ್ನು ನಿರ್ಬಂಧಿಸಲು ಲೋಕಾಯುಕ್ತ ಮಾದರಿಯಲ್ಲಿ ‘ಸ್ಕ್ವಾಡ್’ಗಳನ್ನು ರೂಪಿಸಿ, ಅವು ನಿರಂತರವಾಗಿ ಸ್ಕ್ಯಾನಿಂಗ್ ಸೆಂಟರ್‍ಗಳ ಮೇಲೆ ದಾಳಿ ಮಾಡುವ ಅಧಿಕಾರವನ್ನು ನೀಡಬೇಕು. ಮೊನ್ನೆಯಷ್ಟೇ ಸುಪ್ರೀಂ ಕೋರ್ಟ್ ನಿರ್ದೇಶಿಸಿದಂತೆ ಭ್ರೂಣಲಿಂಗ ಪತ್ತೆಯ ಜಾಹೀರಾತು ನೀಡುವ ಎಲ್ಲಾ ಇಂಟರ್ನೆಟ್ ಹುಡುಕು ತಾಣಗಳು ಮತ್ತು ಅಂತರ್ಜಾಲ ತಾಣಗಳನ್ನು ನಿರ್ಬಂಧಿಸಬೇಕು. ತನ್ಮೂಲಕ ಹೆಣ್ಣುಭ್ರೂಣ ಹತ್ಯೆಗೆ ಶಾಶ್ವತ ತಡೆಯೊಡ್ಡಲು ಪ್ರಯತ್ನಿಸಬೇಕು. ಅಸಮಾನ ಲಿಂಗಾನುಪಾತ ಹೀಗೇ ಮುಂದುವರೆದರೆ ಹೆಣ್ಣು ಕುಲಕ್ಕೆ ಉಳಿಗಾಲವೇ ಇಲ್ಲದಂತಾದೀತು.
ನಮ್ಮ ದೃಶ್ಯಮಾಧ್ಯಮಗಳು ಹೆಣ್ಣನ್ನು ಅಶ್ಲೀಲವಾಗಿ ಪ್ರದರ್ಶಿಸದಂತೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಲು ಒತ್ತಡ ತರಬೇಕು. ಅಶ್ಲೀಲ ಅಂತರ್ಜಾಲ ತಾಣಗಳು ಸುಲಭವಾಗಿ ಎಲ್ಲ ವಯಸ್ಸಿನವರಿಗೂ ಸಿಗುವುದನ್ನು ಮೊದಲು ತಪ್ಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಒಟ್ಟಾರೆ ಮಾಧ್ಯಮಗಳಲ್ಲಿ ಹೆಣ್ಣನ್ನು ಅಗೌರವಯುತವಾಗಿ ನಡೆಸಿಕೊಳ್ಳದಂತೆ ಬಿಗಿ ಕಾನೂನು ಕ್ರಮಗಳನ್ನು ರೂಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು.
ಹೀಗೆ ಹಲವು ಕೋನಗಳಿಂದ ಪ್ರಯತ್ನಗಳು ನಡೆದಾಗ ಮಾತ್ರ ಇಂತಹ ದುಷ್ಕೃತ್ಯಗಳಿಗೆ ಹೆಣ್ಣು ಒಳಗಾಗುವುದನ್ನು, ತನ್ಮೂಲಕ ದೌರ್ಜನ್ಯಕ್ಕೆ, ಶೋಷಣೆಗೆ ಒಳಗಾಗುವುದನ್ನು ತಪ್ಪಿಸಬಹುದಷ್ಟೇ.

• ಮಹಿಳಾ ಸಬಲೀಕರಣ, ಮಹಿಳೆಯ ಮೇಲಿನ ದೌರ್ಜನ್ಯ ಮತ್ತು ಮಹಿಳಾ ಹಕ್ಕುಗಳನ್ನು ಕುರಿತು ಮಹಿಳಾ ಚಳುವಳಿಗಳು ಮತ್ತು ಮಹಿಳಾವಾದಗಳು ಏನು ಮಾಡಿವೆ? ಮುಂದೇನು ಮಾಡಬೇಕು?

ರೂಪ– ಸುಮಾರು ಎಪ್ಪತ್ತರ ದಶಕದಲ್ಲಿ ಜಾಗೃತಗೊಂಡ ಮಹಿಳಾ ಚಳವಳಿ ಮತ್ತು ಮಹಿಳಾವಾದ ಒಟ್ಟು ಸಮಾಜದಲ್ಲಿ ಮಹಿಳಾಪರವಾದ ಅಭಿಪ್ರಾಯ ರೂಪಿಸುವಲ್ಲಿ ಪ್ರಯತ್ನಿಸುತ್ತಾ ಬಂದಿವೆ. ಮಹಿಳಾ ಸಬಲೀಕರಣ, ಸಮಾನತೆ, ಎಲ್ಲ ರೀತಿಯ ಆಯ್ಕೆಯ ಹಕ್ಕುಗಳನ್ನುಳ್ಳ ಸಮಾಜ ನಿರ್ಮಾಣದ ಆಶಾವಾದದಿಂದ ಕಾರ್ಯ ನಿರ್ವಹಿಸುತ್ತಾ ಬಂದಿವೆ. ಶಿಕ್ಷಣ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಇಂದು ಮಹಿಳೆಯರು ಈ ಪ್ರಮಾಣದಲ್ಲಿ ದಾಖಲಾಗುತ್ತಿರುವುದಕ್ಕೆ ಮಹಿಳಾ ಚಳವಳಿಗಳು ರೂಪಿಸಿದ ಹೋರಾಟದ ಪಾತ್ರವಿದೆ. ಆರ್ಥಿಕ ಸ್ವಾವಲಂಬನೆಯಿಂದ ನಿಜವಾದ ಸಬಲೀಕರಣ, ಎಂಬ ಧ್ಯೇಯದೊಂದಿಗೆ ನಡೆದ ಚಳವಳಿಗಳು ಕೊಂಚಮಟ್ಟಿಗೆ ಯಶಸ್ವಿಯಾಗಿವೆ. ರಾಜಕೀಯದ ತಳಹಂತದ ಸಂಸ್ಥೆಗಳಲ್ಲಿ ಮಹಿಳೆಗೆ ಸಮಾನ ಅವಕಾಶಗಳು ಸಾಧ್ಯವಾಗಿದ್ದೂ ಚಳವಳಿಗಳ ಫಲವೇ ಆಗಿದೆ.
ಆದರೆ ನನಗೆನಿಸುವಂತೆ ಮಹಿಳಾವಾದ ಇನ್ನೂ ಹೆಚ್ಚಾಗಿ ನಮ್ಮ ಬೌದ್ಧಿಕ ಹಂತದಲ್ಲಿಯೇ ಬೀಜ ರೂಪದಲ್ಲಿದೆ. ಅದಿನ್ನೂ ನೆಲಕ್ಕೆ ಊರಿಕೊಂಡು ಚಿಗುರೊಡೆಯಬೇಕಿದೆ. ಮಹಿಳಾವಾದ ಹಾಗೂ ಮಹಿಳಾ ಚಳವಳಿಯ ಆಶಯಗಳು ನಗರ ಕೇಂದ್ರಿತವಾಗಿ, ಆರ್ಥಿಕ ಸ್ವಾವಲಂಬನೆಯ ಮಧ್ಯಮವರ್ಗದ ದೃಷ್ಟಿಕೋನದಿಂದ ನೋಡಿದಾಗ ಮಾತ್ರ ಹೆಚ್ಚು ಸಫಲವಾದಂತೆ ಕಾಣುತ್ತವೆ. ಗ್ರಾಮೀಣ ಪ್ರದೇಶದ, ಅನಕ್ಷರಸ್ಥ, ಬಡ ಕುಟುಂಬದ ಹೆಣ್ಣುಮಕ್ಕಳ ಸಮಸ್ಯೆಗಳು ತೀರಾ ಭಿನ್ನವಾದುದರಿಂದ ಅವರನ್ನು ಕೇಂದ್ರೀಕರಿಸಿ, ತಳಮಟ್ಟದ ವಿಭಿನ್ನ ಸಮಸ್ಯೆಗಳನ್ನೊಳಗೊಂಡು ವಿಶಾಲ ನೆಲೆಯಲ್ಲಿ ಇಂದು ಮಹಿಳಾ ಚಳವಳಿ ಪುನರ್ ಆವಿರ್ಭವಿಸಬೇಕಾದ ಅನಿವಾರ್ಯತೆಯಿದೆ. ಆದರೆ ಅವರನ್ನು ಸಂಘಟಿಸುವುದು ತೀರಾ ಕಷ್ಟದ ಕೆಲಸವಾಗಿದೆ.
ಸಮಸ್ಯೆ ಉಂಟಾದಾಗ ಅದಕ್ಕಾಗಿ ಸಂಘಟಿತವಾಗಿ ಪ್ರತಿಕ್ರಿಯಾತ್ಮಕವಾಗಿ ಹೋರಾಡುವುದು ಇಂದು ನಾವು ಕಾಣುತ್ತಿರುವ ಒಂದು ಮಾದರಿ. ಆದರೆ ಮೂಲ ಸಮಸ್ಯೆಗಳನ್ನು ಎದುರಿಸಲು ನಿರಂತರವಾದ ರಚನಾತ್ಮಕ ಮತ್ತು ಕ್ರಿಯಾತ್ಮಕ ಹೋರಾಟವೊಂದನ್ನು ರೂಪಿಸುವ ಹೊಣೆಗಾರಿಕೆ ಮತ್ತು ಅದನ್ನು ಕಾರ್ಯಗತಗೊಳಿಸಲು ಸಮರ್ಥ ಕ್ಷೇತ್ರಕಾರ್ಯ ಮಾಡಿ ತಲುಪಿಸುವ ಜವಾಬ್ದಾರಿ ಇಂದು ನಮ್ಮ ಮೇಲಿದೆ.
ಮೊದಲನೆಯದಾಗಿ, ರಾಜ್ಯಾದ್ಯಂತ ಮಹಿಳಾ ಹೋರಾಟಗಾರರ, ಸಾಮಾಜಿಕ ಕಾರ್ಯಕರ್ತರ ಮತ್ತು ಸಂಘಟನೆಗಳ ಒಂದು ಸಮರ್ಥವಾದ ನೆಟ್‍ವರ್ಕ್ ರೂಪಿಸಿಕೊಂಡು ಸಮಸ್ಯೆಗೆ ತಕ್ಷಣದಲ್ಲಿ ಮುಖಾಮುಖಿಯಾಗಬೇಕು. ಎರಡನೆಯದಾಗಿ, ಮಹಿಳೆಯ ಮೂಲಮಟ್ಟದ ಜ್ವಲಂತ ಸಮಸ್ಯೆಗಳಿಗೆ ತುರ್ತಾಗಿ ಸರ್ಕಾರದ ವತಿಯಿಂದ, ವಿವಿಧ ಇಲಾಖೆಗಳಿಂದ ಆಗಬೇಕಾದ ಕಾರ್ಯಯೋಜನೆಯನ್ನು ಸಿದ್ಧಪಡಿಸಿ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಸರ್ಕಾರದ ನೀತಿ-ನಿಯಮಗಳ ನಿರೂಪಣೆಯಲ್ಲಿ, ಅಭಿವೃದ್ಧಿ ಯೋಜನೆಗಳಲ್ಲಿ, ಅದರ ಜಾರಿಯಲ್ಲಿ ಗುಣಾತ್ಮಕ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಮಹಿಳೆ ಮತ್ತು ಮಕ್ಕಳ ಕೇಂದ್ರಿತವಾದ ಲಿಂಗ ಸಂವೇದಿ ಬಜೆಟ್ ರೂಪುಗೊಳಿಸಲು ಒತ್ತಡ ಹೇರಬೇಕು. ಎಲ್ಲ ಕ್ಷೇತ್ರಗಳಲ್ಲೂ ಮೀಸಲಾತಿಯನ್ನು ಖಾತ್ರಿಗೊಳಿಸಬೇಕು. ಮೂರನೆಯದಾಗಿ, ಜನ ಸಮುದಾಯದಲ್ಲಿ ಮಹಿಳಾ ಸಮಾನತೆ, ಸಮಾನ ಪಾಲ್ಗೊಳ್ಳುವಿಕೆ ಮತ್ತು ಅವರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ನಿರಂತರವಾಗಿ ಪ್ರಯತ್ನಿಸಬೇಕು. ನಾಲ್ಕನೆಯದಾಗಿ ಬಾಲ್ಯವಿವಾಹ, ಹೆಣ್ಣುಭ್ರೂಣಹತ್ಯೆ, ಮಹಿಳಾ ನಿರುದ್ಯೋಗ, ಬಾಲಕಾರ್ಮಿಕತೆ, ವರದಕ್ಷಿಣೆ ಪದ್ಧತಿ, ಅತ್ಯಾಚಾರ, ಹೆಣ್ಣುಮಕ್ಕಳ ಸಾಗಾಣಿಕೆ ಮತ್ತು ಮಾರಾಟ, ವೇಶ್ಯಾವಾಟಿಕೆ ಮುಂತಾದ ಹೆಣ್ಣುಮಕ್ಕಳನ್ನು ಕಾಡುತ್ತಿರುವ ತೀವ್ರಗತಿಯ ಸಮಸ್ಯೆಗಳ ಕುರಿತು ನಿರಂತರವಾಗಿ ಅರಿವು ಮೂಡಿಸಿ, ಮುಖ್ಯವಾಹಿನಿಯಲ್ಲಿ ಚರ್ಚೆಯಾಗುವಂತೆ, ಕಾರ್ಯಕ್ರಮಗಳನ್ನು ರೂಪಿಸಬೇಕು. ಐದನೆಯದಾಗಿ, ಅತ್ಯಾಚಾರ, ಬಾಲ್ಯವಿವಾಹ, ಮಾರಾಟ ಅಥವಾ ಸಾಗಾಣಿಕೆಯಿಂದ ನೊಂದ ಹೆಣ್ಣುಮಕ್ಕಳಿಗೆ ತಕ್ಷಣದಲ್ಲಿ ಕ್ರಮಬದ್ಧ ಸಂಪೂರ್ಣ ಮತ್ತು ಸಮರ್ಥ ಪುನರ್ವಸತಿ ಕಲ್ಪಿಸುವಂತೆ ಹಾಗೂ ಕಾನೂನಾತ್ಮಕ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸಬೇಕು. ಆರನೆಯದಾಗಿ, ಸರ್ಕಾರದ ಹಲವು ಯೋಜನೆಗಳು ಅಂಚಿನಲ್ಲಿರುವ, ಶೋಷಿತ ಹೆಣ್ಣುಮಕ್ಕಳನ್ನು ತಲುಪುತ್ತಲೇ ಇಲ್ಲ. ಹೀಗಾಗಿ ಅವುಗಳನ್ನು ಅವರ ಬಳಿಗೇ ತೆಗೆದುಕೊಂಡು ಹೋಗುವಂತೆ ಅಧಿಕಾರಯಂತ್ರಕ್ಕೆ ಒತ್ತಡ ಹೇರಿ, ಯೋಜನೆಗಳ ಸಮರ್ಪಕ ಜಾರಿಗೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಕೊನೆಯದಾಗಿ, ಮಹಿಳೆಗೆ ದೊರಕಬೇಕಾದ ಸಮಾನ ಸ್ಥಿರಾಸ್ತಿಯನ್ನೊಳಗೊಂಡ ಆಸ್ತಿಯ ಹಕ್ಕು, ರಾಜಕೀಯ ಭಾಗವಹಿಸುವಿಕೆಯ ಹಕ್ಕು, ಎಲ್ಲ ಘಟ್ಟದ ಆಯ್ಕೆಯ ಹಕ್ಕು, ವಿವಾಹ ಮತ್ತು ವಿಚ್ಛೇದನದ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯಗಳು ಕಾಗದದಲ್ಲಿ ಮಾತ್ರ ಉಳಿಯದೇ, ಸಾಕಾರವಾಗುವ ನೆಲೆಯಲ್ಲಿ ಸಮರ್ಪಕ ಕಾರ್ಯಯೋಜನೆ, ಅನುಷ್ಠಾನ, ರಚನಾತ್ಮಕ ಕೆಲಸಗಳು ಎಲ್ಲೆಡೆ ಆಗಬೇಕು.

• ಲೈಂಗಿಕ ಶೋಷಿತ ಮಹಿಳೆ[ವೇಶ್ಯಾವಾಟಿಕೆಗೆ ಬಿದ್ದವರು] ಮತ್ತು ಹೆಣ್ಣು ಮಕ್ಕಳನ್ನು ನಾವು ಹೇಗೆ ನೋಡಿಕೊಳ್ಳಬೇಕು/ನಡೆಸಿಕೊಳ್ಳಬೇಕು? ಅವರ ದೀರ್ಘಕಾಲಿನ ಪುನರ್ ವಸತಿಗೆ ನಿಮ್ಮ ಪ್ರಕಾರ ಇರುವ ಮಾರ್ಗಗಳು ಯಾವುವು?

ರೂಪ– ಲೈಂಗಿಕ ಶೋಷಿತ ಹೆಣ್ಣುಮಕ್ಕಳು ಯಾರೂ ತಾವಾಗಿಯೇ ಇಷ್ಟಪಟ್ಟು ಈ ದಂಧೆಗೆ ಬಂದಿರುವುದಿಲ್ಲ ಎಂಬುದನ್ನು ನಾವು ಮೊದಲು ಮನಗಾಣಬೇಕು. ಹಸಿವು ನೀಗಿಸಲು ಒಂದು ವೃತ್ತಿ, ಕೌಟುಂಭಿಕ ಬೆಂಬಲ, ಇರಲು ಒಂದು ನೆರಳು ಇಲ್ಲದ ಈ ಸಮಾಜದಲ್ಲಿ ಅಸಹಾಯಕ ಸ್ಥಿತಿಗೆ ತಳ್ಳಲ್ಪಟ್ಟು ಈ ರೋಗಗ್ರಸ್ಥ ಸಮಾಜ ನಿರ್ಮಾಣಗೊಳ್ಳುತ್ತಿದೆ ಎಂದು ನಾವು ಅರಿತುಕೊಳ್ಳಬೇಕಾಗಿದೆ. ಇಲ್ಲಿ ನಿಂತು ನಾವು ಸಮಸ್ಯೆಗೆ ಮುಖಾಮುಖಿಯಾಗಬೇಕಾಗಿದೆ. ಈ ದಂಧೆಗೆ ಬಿದ್ದಿರುವ 90% ಹೆಣ್ಣುಮಕ್ಕಳು ಬಾಲ್ಯವಿವಾಹವಾದವರು, 30% ಅತ್ಯಾಚಾರಕ್ಕೊಳಗಾಗಿ ಸರಿಯಾದ ಪುನರ್ವಸತಿಯಾಗಿಲ್ಲದವರು ಹಾಗೂ ಮಿಕ್ಕವರು ಸಾಗಾಣಿಕೆಗೆ ಮತ್ತು ಮಾರಾಟಕ್ಕೊಳಗಾದವರು. ಕೆಲವೊಮ್ಮೆ ಸಾಗಾಣಿಕೆ ಮತ್ತು ಮಾರಾಟದಿಂದ ತಪ್ಪಿಸಿಕೊಂಡು ಬಂದಿದ್ದರೂ ಸಮಾಜದಿಂದ ಸರಿಯಾದ ಗೌರವ, ಸುರಕ್ಷತೆ, ಪುನರ್ವಸತಿ ಸಿಗದವರು ಅನಿವಾರ್ಯವಾಗಿ ಈ ದಂಧೆಗೆ ಬೀಳುತ್ತಾರೆ. ಆದ್ದರಿಂದಲೇ ನಮ್ಮ ನ್ಯಾಯಾಸ್ಥಾನಗಳು ನೀಡಿರುವ ಯಾವುದೇ ತೀರ್ಪು ಇದನ್ನು ‘ವೃತ್ತಿ’ ಎಂದು ಪರಿಗಣಿಸಿಲ್ಲ. ಬದಲಿಗೆ ಅದನ್ನು ‘ಲೈಂಗಿಕಜೀತ’ವೆಂದು ಪ್ರತಿಪಾದಿಸಿವೆ! ವೇಶ್ಯಾವಾಟಿಕೆಯಲ್ಲಿ ಅನಿವಾರ್ಯವಾಗಿ ತೊಡಗುವ ಮಹಿಳೆ-ಮಕ್ಕಳ ಪರವಾಗಿಯೇ ಶಾಸನ ಮತ್ತು ಕಾನೂನುಗಳು ರೂಪಿತವಾಗಿವೆ. ಆದರೆ ಇದನ್ನು ವಾಣಿಜ್ಯೀಕರಣಗೊಳಿಸುವ ಚಟುವಟಿಕೆಯಲ್ಲಿ ತೊಡಗಿರುವ ಪುರುಷ-ಮಹಿಳೆ ಇಬ್ಬರನ್ನೂ ಅಪರಾಧಿಗಳೆಂದು ಪರಿಗಣಿಸಿದೆ. ನಮ್ಮ ಕಾಳಜಿ ಇರಬೇಕಾದ್ದೂ ಬಡತನ, ಅನಕ್ಷರತೆ, ಕೌಶಲ್ಯಗಳಿಲ್ಲದೇ ನಿರುದ್ಯೋಗಕ್ಕೆ ಒಳಗಾಗಿ, ಪ್ರೀತಿ-ಕೆಲಸದ ಆಕರ್ಷಣೆಯಿಂದ ಮೋಸಕ್ಕೆ ಒಳಗಾಗಿ, ಇನ್ನಿತರೇ ದಾರುಣ ಕೌಟುಂಬಿಕ ಕಾರಣಕ್ಕೆ, ಜಾತಿಯ ಕಾರಣಕ್ಕೆ ಅಂಚಿಗೆ ಒತ್ತರಿಸಲ್ಪಟ್ಟು ವೇಶ್ಯಾವಾಟಿಕೆಯೆಂಬ ಜಾಲದೊಳಗೆ ಬಿದ್ದಿರುವ, ಬೀಳುತ್ತಿರುವ ಮಕ್ಕಳು ಮತ್ತು ಮಹಿಳೆಯರ ಕುರಿತಾದದ್ದು ಮಾತ್ರವೇ ಆಗಿದ್ದಾಗ ಈ ಸಮಸ್ಯೆಯನ್ನು ಆಳವಾಗಿ ಅಭ್ಯಸಿಸಿ ಆರ್ಥಿಕ-ಸಾಮಾಜಿಕ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಶೋಕಿಗಾಗಿ, ಮೋಜಿಗಾಗಿ, ವೈಭವೋಪೇತ ಜೀವನದ ಆಕರ್ಷಣೆಗಾಗಿ, ಸುಲಭದ ಹಣ ಗಳಿಕೆಗಾಗಿ, ವೈಯಕ್ತಿಕ ಸಂತೋಷಕ್ಕಾಗಿ ಕೆಲವರು ತಾವಾಗಿಯೇ ಈ ದಂಧೆಯನ್ನು ಆಯ್ದುಕೊಳ್ಳುತ್ತಿದ್ದಾರೆ. ಅದು ಬೇರೆಯದೇ ಆಯಾಮದ ಚರ್ಚೆ. ಆ ಆಯ್ಕೆಯ ಕುರಿತು ನಾನಿಲ್ಲಿ ಮಾತನಾಡುವುದಿಲ್ಲ.
‘ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೆ ಅದು ಬಾಣಲೆಯಿಂದ ಬೆಂಕಿಗೆ ಬಿದ್ದಂತೆ! ಮನಸ್ಸನ್ನ ಕೊಂದುಕೊಂಡು, ದುಡ್ಡುಕೊಟ್ಟವರೊಂದಿಗೆ, ಅವರ ಮರ್ಜಿಗೆ ತಕ್ಕಂತೆ ದಿನವೂ ಸುಖ ನೀಡಬೇಕೆಂದರೆ ಸಂತೋಷದ ಕೆಲಸನಾ? ನಾವೇನು ಯಂತ್ರಗಳ? ಮನುಷ್ಯರಲ್ಲವಾ? ಹೊಟ್ಟೆ ತುಂಬುವಷ್ಟು ದುಡಿದು ಹಣ ಸಂಪಾದಿಸಲು ಬೇರೆ ವ್ಯವಸ್ಥೆ ಮಾಡಿಕೊಟ್ಟರೆ ಬಡತನದ ಕಾರಣಕ್ಕೆ ಇಲ್ಲಿಗೆ ಬಂದಿರುವ ಹೆಚ್ಚಿನವರು ವೇಶ್ಯಾವಾಟಿಕೆ ಬಿಡುತ್ತೇವೆ’ ಎನ್ನುತ್ತಾರೆ ಈ ಲೈಂಗಿಕ ಜೀತಕ್ಕೆ ಬಿದ್ದಿರುವ ಹೆಚ್ಚಿನ ಹೆಣ್ಣುಮಕ್ಕಳು. ಸದ್ಯ ವೇಶ್ಯಾವಾಟಿಕೆಯಲ್ಲಿರುವ, ನಿತ್ಯ ನೂಕಲ್ಪಡುತ್ತಿರುವವರಲ್ಲಿ ಶೇಕಡ 40 ಅಪ್ರಾಪ್ತ ಹೆಣ್ಣುಮಕ್ಕಳೇ! ಊರಿನ ಗಲ್ಲಿ ಗಲ್ಲಿಗಳಲ್ಲಿರುವ ಇವರನ್ನು ರಕ್ಷಿಸುವವರಾರು? ಈ ಅಸಹಾಯಕ ಮಕ್ಕಳ ಸಂಕಟದ ಮೊರೆ ಏಕೆ ಯಾರ ಕಿವಿಗೂ ಬೀಳುತ್ತಿಲ್ಲ? ನಮ್ಮ ಮಕ್ಕಳೇ ಈ ರೀತಿಯ ನರಕದಲ್ಲಿ ಬಿದ್ದಿದ್ದರೆ ಅವರನ್ನು ಹೇಗೆ ನೋಡಬಹುದೋ, ನಡೆಸಿಕೊಳ್ಳಬಹುದೋ, ಅವರನ್ನು ತಕ್ಷಣದಲ್ಲಿ ಹೊರತೆಗೆಯಲು ಪ್ರಯತ್ನಿಸಬಹುದೋ ಹಾಗೆಯೇ ಇವರೆಲ್ಲರನ್ನೂ ನೋಡಲು ಬಯಸುತ್ತೇನೆ.
ಲೈಂಗಿಕಜೀತಕ್ಕೆ ಬಿದ್ದ ಶೇಕಡ 70ಗಿಂತಾ ಹೆಚ್ಚಿನವರು ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವ ತಳಸಮುದಾಯದವರು ಮತ್ತು ಹಿಂದುಳಿದ ಜಾತಿ-ಮತ, ವರ್ಗದವರೆಂಬುದು ಅಧ್ಯಯನದಿಂದ ತಿಳಿಯುತ್ತದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಅಂಚಿಗೆ ಒತ್ತರಿಸಲ್ಪಟ್ಟಿರುವ ಇವರು ಈ ಪ್ರಮಾಣದಲ್ಲಿ ಲೈಂಗಿಕಜೀತಕ್ಕೆ ಬಿದ್ದಿರುವುದಕ್ಕೆ ಕಾರಣ ನಮ್ಮ ಸರ್ಕಾರಗಳು ಈ ಹೆಣ್ಣುಮಕ್ಕಳಿಗೆ ಆರ್ಥಿಕ ಭದ್ರತೆಯಿರುವ ಸೂಕ್ತ ಉದ್ಯೋಗವನ್ನು ಇದುವರೆಗೆ ಕೊಟ್ಟೇ ಇಲ್ಲದಿರುವುದು. ಈ ನೆಲೆಯಿಂದ ನೋಡಿದಾಗ ಹೆಚ್ಚಿನವರು ಬಯಸುತ್ತಿರುವ ಸಮರ್ಪಕ ಪುನರ್ವಸತಿಯನ್ನು ಮೊದಲಿಗೆ ನೀಡಬೇಕಾದ್ದು ಸರ್ಕಾರದ ಮತ್ತು ಸಮಾಜದ ಕರ್ತವ್ಯವಾಗಿದೆ.
ಪುನರ್ವಸತಿ ಸಾರಾಸಗಟಾಗಿ ಎಲ್ಲರಿಗೂ ಒಂದೇ ರೀತಿಯದಾಗಿ ಮಾಡಲು ಸಾಧ್ಯವಿಲ್ಲ. ಅವರವರ ಆಸಕ್ತಿ, ಅನುಭವ, ಕೌಶಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸ್ಥಳೀಯ ಬೆಳೆ, ಅನುಕೂಲತೆ, ಮಾರುಕಟ್ಟೆ, ಕಚ್ಚಾ ಸಾಮಗ್ರಿಗಳ ಪೂರೈಕೆ, ನಿಗದಿತ ಆದಾಯದ ಖಾತ್ರಿ, ಪೂರಕ ತರಬೇತಿ, ಇನ್ನಿತರ ಸಾಧ್ಯತೆಗಳನ್ನು ನೋಡಿಕೊಂಡು ಇದನ್ನು ನಿರ್ಧರಿಸಬೇಕು. ಪ್ರತಿ ಗ್ರಾಮಪಂಚಾಯಿತಿಗೆ ಒಂದರಂತಾದರೂ ಗೃಹಕೈಗಾರಿಕೆ ಅಥವಾ ಗುಡಿಕೈಗಾರಿಕೆಯ ಕಿರು ಉತ್ಪನ್ನಗಳ ಘಟಕವನ್ನು ಸರ್ಕಾರವೇ ಸ್ಥಾಪಿಸಿ ಸಹಕಾರಿ ತತ್ವದ ಆಧಾರದಲ್ಲಿ ಅದನ್ನು ಮುಂದುವರೆಸಲು ಬಿಡಬೇಕು. ಹೈನುಗಾರಿಕೆ, ಜೇನುಸಾಗಣೆ, ರೇಷ್ಮೆ-ಖಾದಿ ನೂಲಿನ ಘಟಕ, ಟೈಲರಿಂಗ್, ತರಕಾರಿ, ಸೊಪ್ಪು, ಹಣ್ಣು-ಹೂವಿನ ಮಾರಾಟ, ತಿಂಡಿ-ತೀರ್ಥದ ತಯಾರಿ ಮತ್ತು ಮಾರಾಟ….. ಹೀಗೆ ಹತ್ತು ಹಲವು ವಿಧದಲ್ಲಿ ದುಡಿಯುವ ಸಾಧ್ಯತೆಗಳಿವೆ. ಆಗ ಸ್ವಯಂ ಆರ್ಥಿಕ ಸ್ವಾವಲಂಬನೆಯಾಗಿ ವಲಸೆಯೂ ತಪ್ಪುತ್ತದೆ. ಇದ್ದ ಸ್ಥಳದಲ್ಲಿಯೇ ಕೈತುಂಬಾ ದುಡಿಯುವ ಅವಕಾಶ ಮತ್ತು ಅನುಕೂಲ ಸಿಕ್ಕರೆ ಬಡತನದ ಕಾರಣಕ್ಕಾಗಿ ಈ ದಂಧೆಗೆ ಬೀಳುವವರ ಪ್ರಮಾಣ ಗಣನೀಯವಾಗಿ ತಪ್ಪುತ್ತದೆ. ಇದರ ಜೊತೆಗೇ ಅವರಿಗೆ ಇರಲು ಮನೆ ಮತ್ತು ದುಡಿಯಲು ಭೂಮಿಯನ್ನೂ ಕಡ್ಡಾಯವಾಗಿ ನೀಡಿದರೆ ಮಾತ್ರ ಶಾಶ್ವತ ಪುನರ್ವಸತಿ ಸಾಧ್ಯವಾಗುತ್ತದೆ. ಅದು ಬಿಟ್ಟು ಪುನರ್ವಸತಿಯ ಹೆಸರಿನಲ್ಲಿ ಅವರಿಗೆ ಒಂದಿಷ್ಟು ಹಣ ನೀಡಿ ಕಳಿಸಿದರೆ ಯಾವ ಪ್ರಯೋಜನವೂ ಆಗುವುದಿಲ್ಲ.
ಲೈಂಗಿಕ ದಂಧೆಗಾಗಿ ಅತ್ಯಾಚಾರಕ್ಕೆ, ಸಾಗಾಣಿಕೆ ಮತ್ತು ಮಾರಾಟಕ್ಕೆ ಒಳಗಾಗಿ ವಾಪಸಾದ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳಿಗೆ ಬೇರೆಯದೇ ರೀತಿಯ ಪುನರ್ವಸತಿ ಅವಶ್ಯಕತೆಯಿದೆ. ಮೊದಲನೆಯದಾಗಿ ಅವರಿಗೆ ಸಮರ್ಪಕವಾದ ಆಪ್ತಸಮಾಲೋಚನೆ ನೀಡಿ ಅವರನ್ನು ವೇದನೆಯಿಂದ ಹೊರತರಬೇಕು. ನಂತರ, ಮುಖ್ಯವಾಗಿ ಅವರಿಗೆ, ಅವರ ಸಾಮರ್ಥ್ಯ  ಮತ್ತು ಇಷ್ಟಕ್ಕೆ ತಕ್ಕಷ್ಟು ವಿದ್ಯಾಭ್ಯಾಸವನ್ನು ನೀಡಬೇಕು. ಆ ನಂತರ ಅವರು ಬಯಸಿದರೆ ಕಂಪ್ಯೂಟರ್, ಯಾವುದೇ ನೃತ್ಯ, ಕಲೆ, ಅಭಿನಯ, ನರ್ಸಿಂಗ್….. ಹೀಗೆ ಅವರು ಬಯಸುವ ವೃತ್ತಿ ಅಥವಾ ಪ್ರತಿಭಾ ತರಬೇತಿ ಪಡೆದು ತಮ್ಮ ಕಾಲ ಮೇಲೆ ನಿಲ್ಲುವವರೆಗೂ ವಸತಿಯುತ ಆಧಾರ ನೀಡಿ ಮತ್ತೆ ಅವರು ಆ ಜಾಲಕ್ಕೆ ಬೀಳದಂತೆ ಎಚ್ಚರಿಕೆಯಿಂದ ಕಾಯಬೇಕು. ಇದಕ್ಕೆ ಈಗಿರುವ ಸರ್ಕಾರಿ ವ್ಯವಸ್ಥೆ ಯಾವುದಕ್ಕೂ ಸಾಲುವುದಿಲ್ಲ ಮತ್ತು ಸಮರ್ಪಕವಾಗಿಲ್ಲ. ಆದ್ದರಿಂದ ಸಮರ್ಥ ಮತ್ತು ಸಮರ್ಪಕವಾದ ತಾಯಿಯ ಮಡಿಲಿನಷ್ಟು ಸುರಕ್ಷಿತವಾದ ಮತ್ತು ಬೆಂಬಲವಾಗಿರುವ ಪುನರ್ವಸತಿ ಕೇಂದ್ರಗಳನ್ನು ಪ್ರತಿ ಜಿಲ್ಲೆಯಲ್ಲಿ ರೂಪಿಸಬೇಕು. ಹೀಗಾದಾಗ ಮಾತ್ರ ಅವರನ್ನು ಮತ್ತೆ ಮುಖ್ಯವಾಹಿನಿಗೆ ಕರೆತರಲು, ಅವರ ವ್ಯಕ್ತಿತ್ವ ರೂಪಿಸಲು ಸಾಧ್ಯವಾಗುತ್ತದೆ.
ಎಲ್ಲಕ್ಕಿಂತಾ ಮುಖ್ಯವಾಗಿ ಸಮಾಜ ಇವರನ್ನು ನೋಡುವ ದೃಷ್ಟಿಕೋನದಲ್ಲಿ ಬದಲಾವಣೆಯಾಗಬೇಕು. ಅವರನ್ನು ಅಂತಃಕರಣದಿಂದ, ಮಾನವೀಯ ದೃಷ್ಟಿಕೋನದಿಂದ ನೋಡಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಅವಶ್ಯಕತೆ ಹೆಚ್ಚಿದೆ. ಈ ದಂಧೆಗೆ ಬಿದ್ದಿರುವ ಕೆಲವು ಹೆಣ್ಣುಮಕ್ಕಳು, ಹೆಚ್.ಐ.ವಿ ಅಥವಾ ಇನ್ನಾವುದೇ ಲೈಂಗಿಕ ರೋಗಗಳಿಗೆ ತುತ್ತಾಗಿರಬಹುದು. ಅವರನ್ನು ಅಸ್ಪೃಶ್ಯರಂತೆ ಕಾಣದೇ ಗೌರವಯುತವಾಗಿ ನಡೆಸಿಕೊಳ್ಳುವ, ಬದುಕು ಕಟ್ಟಿಕೊಡುವ ಕೆಲಸವಾಗಬೇಕು. ಇವರ ಕಾಯಿಲೆಗಳನ್ನು ಗೌಪ್ಯವಾಗಿಟ್ಟು, ಚಿಕಿತ್ಸೆ ಕೊಡಿಸಬೇಕು. ಅವಳು ಪುನರ್ವಸತಿ ಹೊಂದಿ ತನ್ನ ಕಾಲ ಮೇಲೆ ನಿಲ್ಲವಂತಾಗಲು ಬೇಕಿರುವ ಸಂಪೂರ್ಣ ಪೂರಕ ವಾತಾವರಣವನ್ನು ನಿರ್ಮಿಸಿಕೊಡಬೇಕು.
ಹೆಣ್ಣುಮಕ್ಕಳಿಗೆ ಅವರಿರುವ ಸ್ಥಳಗಳಲ್ಲಿಯೇ ಆರ್ಥಿಕ ಸ್ವಾವಲಂಬನೆಗಾಗಿ ಉದ್ಯೋಗಗಳನ್ನು ನೀಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಹಾಗೇ ಹದಿಹರೆಯದ ಹೆಣ್ಣುಮಕ್ಕಳಿಗೂ ತಾವು ಇರುವ ಮತ್ತು ಲಭ್ಯವಿರುವ ಪರಿಸರದಲ್ಲೇ ಕ್ರಿಯಾಶೀಲವಾಗಿ ಯಾವುದಾದರೂ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಜಾಗೃತಿ ನೀಡಬೇಕು.

• ವೇಶ್ಯಾವಾಟಿಕೆಯಲ್ಲಿ ಬಿದ್ದ ಹೆಣ್ಣುಮಕ್ಕಳ ಕುರಿತು ನಮ್ಮ ನ್ಯಾಯಾಲಯಗಳ ನಿಲುವು ಹೇಗಿದೆ?

ರೂಪ– 2-3 ದಶಕಗಳಿಂದ ವೇಶ್ಯಾವಾಟಿಕೆ ಕುರಿತ ಸುಪ್ರೀಮ್ ಕೋರ್ಟ್‍ನಿಂದ ಬಂದ ತೀರ್ಪುಗಳೆಲ್ಲವೂ ಇದು ನಾಗರೀಕತೆಯ ದೇಹದ ಮೇಲಿರುವ ವ್ರಣವೆಂದೇ ಆತಂಕಿಸಿವೆ. ‘ಬಾಲೆಯರು, ಹೆಣ್ಣುಮಕ್ಕಳನ್ನು ಈ ರೀತಿಯ ಜೀತಕ್ಕೆ ಬಲವಂತದಿಂದಲೋ, ಪ್ರಚೋದಿಸಿಯೋ, ಆರ್ಥಿಕ ಸಂಕಷ್ಟದ ಕಾರಣಕ್ಕೋ ತಳ್ಳುವ ಮೂಲಕ ಅವರನ್ನು ನಿರಂತರ ಅತ್ಯಾಚಾರಕ್ಕೆ ಗುರಿಮಾಡಿದಂತಾಗುತ್ತದೆ. ತನ್ಮೂಲಕ ಹಿಂಸೆ ನೀಡಿ ಅವರ ದೇಹವನ್ನು ಘಾಸಿಗೊಳಿಸಲಾಗುತ್ತದೆ ಮತ್ತು ರೋಗಗಳು ಹರಡುತ್ತವೆ. ಇದನ್ನು ಯಾವುದೇ ಕಾರಣಕ್ಕೂ ಕ್ಷಮಿಸಲಾಗದು’ ಎನ್ನುತ್ತಾ, ಕೆಲವು ಮಾರ್ಗದರ್ಶಿ ಸೂತ್ರಗಳನ್ನೂ ಕೊಟ್ಟಿತ್ತು. ಅವು
1. ವೇಶ್ಯಾವಾಟಿಕೆಯ ನಿಯಂತ್ರಣ ಮತ್ತು ನಿರ್ಮೂಲನೆಗೆ ಬೇರೆಯದೇ ಆದ ಸಮಿತಿಯೊಂದನ್ನು ನೇಮಿಸಬೇಕು. ಇದರಲ್ಲಿ ಸಮಾಜಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ, ಕಾನೂನು ಇಲಾಖೆಯ ಕಾರ್ಯದರ್ಶಿ, ಸಮಾಜವಿಜ್ಞಾನಿಗಳು, ಅಪರಾಧಶಾಸ್ತ್ರಜ್ಞರು, ಮನಃಶಾಸ್ತ್ರಜ್ಞರು, ಮಹಿಳಾ ಸಂಘಟನೆಯ ಮುಖ್ಯಸ್ಥರು, ಮಕ್ಕಳ ಕಲ್ಯಾಣ ಸಮಿತಿ, ಸಾಮಾಜಿಕ ಸ್ವಯಂಸೇವಾ ಸಂಘಟನೆಗಳ ಮುಖ್ಯಸ್ಥರು ಮುಂತಾದ ಪ್ರಮುಖರು ಇರಬೇಕು.
2. ಈ ಸಮಿತಿ ನೀಡುವ ಎಲ್ಲಾ ಶಿಫಾರಸ್ಸುಗಳನ್ನೂ ಚಾಚೂ ತಪ್ಪದೇ ಅನುಷ್ಠಾನಗೊಳಿಸಬೇಕು.
3. ಬಡತನ, ನಿರುದ್ಯೋಗದ ಕಾರಣಕ್ಕೆ ಅನಿವಾರ್ಯವಾಗಿ ವೇಶ್ಯಾವಾಟಿಕೆಗಿಳಿಯುತ್ತಿರುವವರಿಗಾಗಿ ಪರಿಣಾಮಕಾರಿ ಪುನರ್ವಸತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಈ ಕೆಲಸದಿಂದ ದೊರೆಯುತ್ತಿದ್ದಕ್ಕಿಂತಾ ಹೆಚ್ಚಿನ ಆರ್ಥಿಕ ಅನುಕೂಲಕ್ಕೆ ಯೋಜನೆಗಳನ್ನು ರೂಪಿಸಬೇಕು.
4. ಈ ಅಪರಾಧವನ್ನು ಗಂಭೀರವಾಗಿ ಪರಿಗಣಿಸಿ ಅದರ ನಿಗ್ರಹಕ್ಕೆ, ತಲೆಹಿಡುಕರ, ಮಧ್ಯವರ್ತಿಗಳ, ವೇಶ್ಯಾಗೃಹಗಳನ್ನು ನಡೆಸುತ್ತಿರುವವರ ವಿರುದ್ಧ ಕಾನೂನು ಅನುಷ್ಠಾನದ ಎಲ್ಲಾ ಅಧಿಕಾರಶಾಹಿಯೂ ತಕ್ಷಣದ ಮತ್ತು ಸಶಕ್ತ ಕ್ರಮಗಳನ್ನು ಕೈಗೊಳ್ಳಬೇಕು.
5. ಮಕ್ಕಳನ್ನು ಮತ್ತು ಅಪ್ರಾಪ್ತರನ್ನು ಬಳಸಿಕೊಳ್ಳುವ ವೇಶ್ಯಾವಾಟಿಕೆ ಸಂಪೂರ್ಣ ನಿರ್ಮೂಲನೆಯಾಗಬೇಕು.
6. ಸಾಮಾಜಿಕ ಕಲ್ಯಾಣ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಈ ಲೈಂಗಿಕಜೀತದ ಸುಳಿಗೆ ಸಿಕ್ಕ ಅಪ್ರಾಪ್ತ ಮಕ್ಕಳನ್ನು ರಕ್ಷಿಸಿ, ಅವರಿಗೆ ಆರೈಕೆ, ಪೋಷಣೆ, ರಕ್ಷಣೆ, ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಳ್ಳಬೇಕು
7. ಸಾಕಷ್ಟು ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಬೇಕು. ಅಲ್ಲಿ ವೈದ್ಯರು, ಮನೋವೈದ್ಯರು, ಸಾಮಾಜಿಕ ಕಾರ್ಯಕರ್ತರು ಇವರೊಂದಿಗೆ ಒಡನಾಡಬೇಕು.
8. ಈ ಸಂಬಂಧ ಇರುವ ಕಾನೂನು, ವೇಶ್ಯಾವಾಟಿಕೆಯ ಅಪರಾಧೀಕರಣವನ್ನು ನಿರೂಪಿಸಲು ಸಾಕ್ಷೀಕರಿಸಲು ಶಕ್ತವಾಗಿಲ್ಲದ್ದರಿಂದ ಅದಕ್ಕೆ ತಿದ್ದುಪಡಿ ತರಬೇಕು. ಅವಶ್ಯಕವೆನಿಸಿದರೆ ಹೊಸ ಕಾನೂನು ರೂಪಿಸಬೇಕು.
9. ಜೋಗಿಣಿ, ದೇವದಾಸಿ, ಬಸವಿ ಪದ್ಧತಿಗಳ ಬೇರುಮಟ್ಟದ ನಿರ್ಮೂಲನೆಗೆ ಕ್ರಮಕೈಗೊಳ್ಳಬೇಕು.
10. ವೇಶ್ಯಾವಾಟಿಕೆಯ ಜಾಲಕ್ಕೆ ಬಿದ್ದವರ ಮಕ್ಕಳು ಈ ಜಾಲಕ್ಕೆ ಬೀಳದಂತೆ ಎಚ್ಚರಿಕೆ ಮತ್ತು ಜಾಗೃತೆವಹಿಸುವುದು ಮತ್ತು ಯೋಜನೆ ರೂಪಿಸಬೇಕು. ಅವರನ್ನು ಇಂತಹಾ ಪರಿಸರದಿಂದ ದೂರ ಮಾಡಬೇಕು.
ಈ ಎಲ್ಲಾ ಮಾರ್ಗದರ್ಶಿ ಸೂತ್ರಗಳನ್ನು ಸರ್ಕಾರ, ಸಮಾಜ ಚಾಚೂ ತಪ್ಪದೇ ಅಳವಡಿಸಿಕೊಂಡು, ಅನುಷ್ಠಾನಕ್ಕೆ ತರುವಂತಾದರೆ ಅವರನ್ನು ಈ ಕೂಪದಿಂದ ಹೊರ ತೆಗೆಯುವ ಮತ್ತು ಗೌರವಿಸುವ, ಇದಕ್ಕಿಂತಾ ದೊಡ್ಡ ಕೆಲಸ ಮತ್ತೊಂದಿಲ್ಲ ಎಂದು ಭಾವಿಸುವೆ.