ರಾಗಿ ಮುದ್ದೆ, ಸೊಪ್ಪಿನ ಸಾರಿಗಾಗಿ ದಲಿತ ವಿದ್ಯಾರ್ಥಿ ಒಕ್ಕೂಟದ ಆಂದೋಲನ

( ಮೈಸೂರಿನ ದಲಿತ ವಿದ್ಯಾರ್ಥಿ ಒಕ್ಕೂಟದ ಪರವಾಗಿ ದೇವನೂರ ಮಹಾದೇವ ಅವರು 1983 ರಲ್ಲಿ ಬರೆದಿದ್ದ ಒಂದು ಕರಪತ್ರ ನಮ್ಮ ಮರು ಓದಿಗಾಗಿ…

ಕರಪತ್ರ ಕೃಪೆ- ಶಂಭಯ್ಯ)

ತೀರ್ಥರೂಪ ಸಮಾನರಾದ ಉಪಕುಲಪತಿಗಳಿಗೆ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-3.
ತಾ॥ 5-9-1983 ರಂದು ದಲಿತ ವಿದ್ಯಾರ್ಥಿ ಒಕ್ಕೂಟವು ಸಭೆ ಸೇರಿ ಕೆಳಗಿನ ಅಂಶಗಳನ್ನು ಚರ್ಚಿಸಿ, ತಮಗೆ ವಿನಂತಿಸಲು ನಿರ್ಧರಿಸಲಾಯ್ತು.
(1) ವಿಶ್ವವಿದ್ಯಾನಿಲಯವು ನಡೆಸುವ ಹಾಸ್ಟೆಲ್‌ಗಳಲ್ಲಿ ಊಟದ ಬಿಲ್ಲು ಮುನ್ನೂರು ರೂಪಾಯಿಗೂ ಹೆಚ್ಚು ಬರುತ್ತಿರುವುದರಿಂದ ಬಡ ವಿದ್ಯಾರ್ಥಿಗಳು ಬೀದಿಪಾಲಾಗುತ್ತಾರೆ. ತಿಂಗಳೊಂದಕ್ಕೆ ಊಟಕ್ಕೆ ಮುನ್ನೂರು ರೂಪಾಯಿ ಹಣಕಟ್ಟಬಲ್ಲ ಸಿರಿವಂತರು ಎಲ್ಲಾದರೂ ಬದುಕಬಲ್ಲರು. ಅದಕ್ಕಾಗಿ ಹಾಸ್ಟೆಲ್‌ಗಳನ್ನು ಬಡವಿದ್ಯಾರ್ಥಿಗಳಿಗಾಗಿ ನಡೆಸಿ ಎಂದು ವಿನಂತಿಸುವೆವು. ಆದ್ದರಿಂದ,
ಬೇಡಿಕೆ : ರಾಗಿ ಹಿಟ್ಟು ಸೊಪ್ಪಿನ ಸಾರು ಹಾಸ್ಟೆಲ್ ಊಟವಾಗಲಿ.
(2) ಹಳ್ಳಿಗಾಡಿನ ದಲಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಸೀಟು ಸಿಗದಿದ್ದಲ್ಲಿ, ಓದು ನಿಲ್ಲಿಸಿ ಊರು ಸೇರಬೇಕಾಗುತ್ತದೆ. ನಗರಗಳಲ್ಲು ಇನ್ನೂ ಇರುವ ಅನಾಗರಿಕ ಜಾತೀಯತೆಯಿಂದಾಗಿ ದಲಿತರಿಗೆ ಮನೆಮಠ ಸಿಗದ ಪರಿಸ್ಥಿತಿ ಇದೆ. ಆದ್ದರಿಂದ,
ಬೇಡಿಕೆ : ಹಾಸ್ಟೆಲ್ ಸೀಟಲ್ಲಿ ಶೇಕಡಾ 50ರಷ್ಟು ದಲಿತರಿಗೆ ಮೀಸಲಾಗಿರಲಿ.
ಮೇಲಿನ ಎರಡೂ ಬೇಡಿಕೆಗಳನ್ನು ಈಡೇರಿಸಿ ಎಂದು ಪ್ರಾರ್ಥಿಸುತ್ತೇವೆ. ಈಡೇರದಿದ್ದಲ್ಲಿ ಅನಿವಾರ್ಯವಾಗಿ ಸತ್ಯಾಗ್ರಹಕ್ಕೆ ನಮ್ಮನ್ನು ತಾವು ದೂಡುತ್ತೀರಿ. ಆಗಲೂ ಶಾಂತಿಯುತವಾಗಿ ಅತಿಥಿ ಗೃಹ ಮತ್ತು ವಿಭಾಗದ ರೂಮುಗಳಲ್ಲಿ ಹಾಗೂ ವಾರ್ಡನ್, ಡೀನ್, ಕುಲಪತಿಗಳ ಮನೆಗಳನ್ನು ನಮ್ಮ ಮಾತೃಪಿತೃಗಳ ಮನೆಗಳೆಂದು ಭಾವಿಸಿ, ಅಲ್ಲಿ ವಾಸಿಸುತ್ತಾ ಅಂಬಲಿ ಕಾಯಿಸಿಕೊಂಡು ಕುಡಿದು ನಮ್ಮ ಓದು ಮುಂದುವರಿಸುತ್ತೇವೆ.
ಈ ಶಾಂತಿ ಚಳವಳಿಗೆ ವಿಶ್ವವಿದ್ಯಾನಿಲಯವಾಗಲಿ, ಪೊಲೀಸರಾಗಲಿ ಭಂಗತಂದರೆ ಹಾಸ್ಟೆಲ್‌ನಲ್ಲಿ ಸೀಟುಸಿಗದೆ ಊರಿಗೆ ಹೋಗುವ ಬದಲು ಜಾಮೀನು ಕೊಡದೆ ಜೈಲಲ್ಲಿ ಎರಡು ವರ್ಷಗಳನ್ನು ಕಳೆಯಲು ನಿಶ್ಚಯಿಸಿದ್ದೇವೆ. ತಾವು ಮೇಲಿನ ನಮ್ಮ ಎರಡೂ ಬೇಡಿಕೆಗಳನ್ನು ಈಡೇರಿಸಿ ಅಥವಾ ನಮ್ಮನ್ನು ಜೈಲಿಗೆ ಕಳಿಸಿ ಎಂದು ಪ್ರಾರ್ಥಿಸುವೆವು.
ತಮ್ಮ ವಿಶ್ವಾಸಿಗಳು
ದಲಿತ ವಿದ್ಯಾರ್ಥಿ ಒಕ್ಕೂಟ, ಮೈಸೂರು,