[ಮೈಸೂರಿನ ಎನ್‌ಟಿಎಂ ಶಾಲೆ ವಿವಾದ ಕುರಿತು ಸಂಸದ ವಿ.ಶ್ರೀನಿವಾಸಪ್ರಸಾದ್ ಹಾಗೂ ದೇವನೂರ ಮಹಾದೇವ ಅವರ ಹೇಳಿಕೆಗಳು

[ಮೈಸೂರಿನ ಎನ್‌ಟಿಎಂ ಶಾಲೆ ವಿವಾದ ಕುರಿತು ಸಂಸದ ವಿ.ಶ್ರೀನಿವಾಸಪ್ರಸಾದ್ ಹಾಗೂ ದೇವನೂರ ಮಹಾದೇವ ಅವರ ಹೇಳಿಕೆಗಳು ಮೈಸೂರಿನ ಆಂದೋಲನ ಪತ್ರಿಕೆಯಲ್ಲಿ[18.3.2022] ಪ್ರಕಟವಾಗಿದ್ದು ಮರು ಓದಿಗಾಗಿ ಇಲ್ಲಿದೆ]
ಎನ್‌ಟಿಎಂಎಸ್ ಒಡೆದ ಜಾಗದಲ್ಲೇ ಮರು ನಿರ್ಮಾಣವಾಗಲಿ: ಶ್ರೀನಿವಾಸಪ್ರಸಾದ್ 
ಮೈಸೂರು: ಶ್ರೀ ರಾಮಕೃಷ್ಣ ಆಶ್ರಮ ಮತ್ತು ಮಹಾರಾಣಿ ಮಾದರಿ ಶಾಲೆ (ಎನ್‌ಟಿಎಂಎಸ್) ಹೋರಾಟ ಸಮಿತಿ ಮಾಡಿಕೊಂಡಿದ್ದ ಸಂಧಾನದ ಒಪ್ಪಂದದಂತೆ ಈಗಿರುವ ಸ್ಥಳದಲ್ಲೇ ಒಡೆದು ಹಾಕಿರುವ ಶಾಲೆಯ ಮರು ನಿರ್ಮಾಣವಾಗಬೇಕು ಎಂದು ನಾನು ಬಯಸುತ್ತೇನೆ. ಆ ಮೂಲಕ ವಿವೇಕ ಸ್ಮಾರಕ ವಿವಾದಗ್ರಸ್ತವಾಗಿ ಉಳಿಯದೆ ಎಲ್ಲ ಜನರ ಸಹೃದಯದ ಸ್ಮಾರಕವಾಗಬೇಕಿದೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದ ಮಹಾತಪಸ್ವಿ ಸ್ವಾಮಿ ವಿವೇಕಾನಂದರ ಸ್ಮಾರಕ ಮೈಸೂರು ನಗರದ ಸಕಲ ಜನರ ಪ್ರೀತಿಪೂರ್ವಕ ಸಂಕೇತವಾಗಿರಬೇಕು ಎಂಬುದು ಒಂದು ಆದರ್ಶದ ಸಂಗತಿ. ನನ್ನ ಸಮಕ್ಷಮದಲ್ಲೇ ಸುತ್ತೂರು ಶ್ರೀಗಳ ಸಹಕಾರದಿಂದ ಎರಡು ತಿಂಗಳ ಹಿಂದೆ ನಮ್ಮ ಮನೆಯಲ್ಲಿ ಉಭಯ ಪಕ್ಷಗಳ ಜೊತೆ ಸಂಧಾನ ಸಭೆಯನ್ನು ಡಾ.ನಂದೀಶ್ ಹಂಚೆ ಸಹಕಾರದೊಂದಿಗೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ರಾಮಕೃಷ್ಣ ಆಶ್ರಮದ ಪ್ರತಿನಿಧಿಗಳಾಗಿ ಡಿ.ಮಾದೇಗೌಡ, ವಕೀಲ ಅರುಣ್ ಕುಮಾರ್ ಹಾಗೂ ಹೋರಾಟ ಸಮಿತಿಯ ಪ್ರತಿನಿಧಿಗಳಾಗಿ ಪ.ಮಲ್ಲೇಶ್, ಸ.ರ.ಸುದರ್ಶನ, ಪುರುಷೋತ್ತಮ, ಎಂ.ಮೋಹನಕುಮಾರಗೌಡ ಮತ್ತು ಕೆ.ಬಸವರಾಜು ಭಾಗವಹಿಸಿದ್ದರು.
ನಾನು ಮೊದಲು ಮಾತನಾಡಿ, ಶಾಲೆಯನ್ನು ಎದುರುಗಡೆಯ ಮಹಾರಾಣಿ ಶಿಕ್ಷಣ ಕಾಲೇಜಿನ ಆವರಣಕ್ಕೆ ಸ್ಥಳಾಂತರ ಮಾಡುವ ಆಶ್ರಮದ ಸಲಹೆಯನ್ನು ಪ್ರಸ್ತಾಪಿಸಿ, ನಂತರ ಸುತ್ತೂರು ಶ್ರೀಗಳ ಸ್ಥೂಲ ಸಲಹೆಯನ್ನು ಆಧರಿಸಿ, ‘ಶಾಲೆಯೂ ಉಳಿಯಲಿ, ಸ್ವಾರಕವೂ ಆಗಲಿ’ಎಂಬ ಹೋರಾಟ ಸಮಿತಿಯ ಉದ್ದೇಶದಂತೆ ರೂಪಿಸಲಾಗಿದ್ದ ರಾಜೀ ಸೂತ್ರವನ್ನು ವಿವರಿಸಿ ಹೇಳಿದೆ. ಆ ಸೂತ್ರದ ಪ್ರಕಾರ ನಾರಾಯಣಶಾಸ್ತ್ರಿ ರಸ್ತೆಯಿಂದ ಈಗಿರುವ ಶಾಲೆಯ ಜಾಗದಲ್ಲಿ ಶೇಕಡಾ ಐವತ್ತರಷ್ಟು (ಉದ್ದಗಲದಲ್ಲಿ ಹತ್ತಿಪ್ಪತ್ತು ಹೊಂದಾಣಿಕೆಗೆ ಅವಕಾಶ ಬಿಟ್ಟು) ಅದರ ಹಿಂದಿನ ಸುಮಾರು ಶೇಕಡಾ ಐವತ್ತರಷ್ಟು ಜಾಗವನ್ನು ವಿವೇಕ ಸ್ಮಾರಕಕ್ಕೆ ಬಳಸಿಕೊಳ್ಳುವುದು. ಶಾಲೆ ಈಗ ಇರುವ ವಿಸ್ತೀರ್ಣದಲ್ಲಿ ೧೨ ಕೊಠಡಿಗಳ ಒಂದು ಮಹಡಿಯ ಕಟ್ಟಡವನ್ನು ಕಟ್ಟುವುದು ಎಂದಾಗಿತ್ತು. ಉದ್ದೇಶಿತ ಕಟ್ಟಡದ ರೇಖಾಚಿತ್ರವನ್ನು  ನಂದೀಶ್ ಹಂಚೆ ಮಂಡಿಸಿದರು. ಮೊದಲು ಕಾವೇರಿದ ಚರ್ಚೆ ನಡೆದರೂ ಈ ರಾಜಿ ಒಪ್ಪಂದಕ್ಕೆ ರಾಮಕೃಷ್ಣ ಆಶ್ರಮದ ಪರವಾಗಿ ಡಿ.ಮಾದೇಗೌಡ ಮತ್ತಿತರರು ಹಾಗೂ ಹೋರಾಟ ಸಮಿತಿಯ ಪರವಾಗಿ ಪ.ಮಲ್ಲೇಶ್ ಮತ್ತಿತರರು ಒಪ್ಪಿಗೆ ನೀಡಿದರು. ಮಾದೇಗೌಡರು ಒಂದು ಹೆಜ್ಜೆ ಹೋಗಿ ಎಲ್ಲವನ್ನೂ ನಿಮಗೆ ಬಿಡುವುದಾಗಿ ಹೇಳಿದ್ದರು. ಜತೆಗೆ ಶಾಲೆಯನ್ನು ಸಣ್ಣದಾಗಿ ಕಟ್ಟಡ ಎದ್ದು ಕಾಣುವಂತೆ ಸ್ವಾರಕದ ಒಂದು ಭಾಗವಾಗಿ ನಿರ್ಮಿಸಬೇಕು ಎಂದೂ ಪ್ರತಿಪಾದಿಸಿದ್ದರು. ಅನಂತರ ನಾಲೈದು ದಿನಗಳಲ್ಲಿ ನಂದೀಶ್ ಹಂಚೆ ಕರಾರುವಾಕ್ಕಾಗಿ ನಕ್ಷೆ ಸಿದ್ಧಪಡಿಸಿದ ನಂತರ ಪರಿಶೀಲಿಸಿ ಒಮ್ಮತದಿಂದ ಸಾರ್ವಜನಿಕರ ಮುಂದಿಡುವುದೆಂದು ತೀರ್ಮಾನಿಸಲಾಗಿತ್ತು.
ಆದರೆ ಇದಾಗುತ್ತಿದ್ದಂತೆಯೇ ನಾನು ಬೆಂಗಳೂರಿಗೆ ಹೋಗಿ ಅನಿರ್ವಾರ್ಯ ಕಾರಣಗಳಿಂದ ಒಂದು ತಿಂಗಳೂ ಮೀರಿ  ಅಲ್ಲೇ ಉಳಿಯಬೇಕಾಗಿ ಬಂದುದರಿಂದ ಈ ಪ್ರಕ್ರಿಯೆ ಮುಂದುವರಿಯಲಿಲ್ಲ. ಅಷ್ಟರಲ್ಲಿ ಸರ್ಕಾರ ಶಾಲೆಯನ್ನು ಎದುರುಗಡೆಯ ಮಹಾರಾಣಿ ಕಾಲೇಜಿಗೆ ಸ್ಥಳಾಂತರಿಸಿದೆ. ಈ ಆದೇಶಕ್ಕೆ ಮುಂಚೆ ಸರ್ಕಾರದ ಮುಂದೆ ರಾಜೀ ಒಪ್ಪಂದವನ್ನು ಸಲ್ಲಿಸಿದ್ದರೆ ಅದರಂತೆಯೇ ಆದೇಶ ಮಂಡಿಸುತ್ತಿತ್ತು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಎನ್‌ಟಿಎಂ ಶಾಲೆ; ಶ್ರೀನಿವಾಸ ಪ್ರಸಾದ್- ಸುತ್ತೂರು ಶ್ರೀ, ಅಚಲವಾಗಿ ನಿಲ್ಲಬೇಕು
-ದೇವನೂರ ಮಹಾದೇವ
 ಸಂಸದ ಶ್ರೀ ಶ್ರೀನಿವಾಸ್ ಪ್ರಸಾದ್ ಅವರು ಎಂಟಿಎಂ ಐತಿಹಾಸಿಕ ಶಾಲೆ ಹಾಗೂ ವಿವೇಕಾನಂದ ಸ್ಮಾರಕ ವಿವಾದದ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಇದು ನಿಜಕ್ಕೂ ಅಭಿನಂದನಾರ್ಹ. ಎರಡು ಮೂರು ತಿಂಗಳ ಹಿಂದೆಯೇ, ಶಾಲಾ ಮತ್ತು ಸ್ಮಾರಕ ವಿವಾದ ಬಗೆಹರಿಸಲು “ಶಾಲೆಯೂ ಉಳಿಯಲಿ, ಸ್ಮಾರಕವೂ ಆಗಲಿ” ಎಂಬ ಉದಾತ್ತವಾದ ಸಮನ್ವಯೀ ರಾಜಿ ಸೂತ್ರವನ್ನು ಸ್ವಯಂ ಸುತ್ತೂರು ಶ್ರೀಯವರೇ ಸಲಹೆ ನೀಡಿದ್ದರು. ಈ ರಾಜಿ ಸೂತ್ರದಂತೆ ಶಾಲೆ ಮತ್ತು ಸ್ಮಾರಕಕ್ಕೆ ತಲಾ ಅರ್ಧ ಅರ್ಧ ಭಾಗವನ್ನು ವಿಂಗಡಿಸಿ ಒಂದು ನಕ್ಷೆಯನ್ನು ರಚಿಸಲಾಗಿತ್ತು. ಇದನ್ನು ಶ್ರೀ ಶ್ರೀನಿವಾಸ್ ಪ್ರಸಾದ್ ಅವರ ಸಮ್ಮುಖದಲ್ಲಿ ರಾಮಕೃಷ್ಣಾಶ್ರಮದ ಪ್ರತಿನಿಧಿಗಳಾಗಿ ಶ್ರೀ ಬಿ.ಮಾದೇಗೌಡ ಮತ್ತಿತರರು ಹಾಗೂ ಶಾಲಾ ಹೋರಾಟದ ಪ್ರತಿನಿಧಿಗಳಾಗಿ ಶ್ರೀ ಪ.ಮಲ್ಲೇಶ್ ಮತ್ತಿತರರು ಭಾಗವಹಿಸಿ ಸುದೀರ್ಘ ಚರ್ಚಿಸಿ ಅಂತಿಮವಾಗಿ ಸುತ್ತೂರು ಶ್ರೀಯವರ ಸೂತ್ರಕ್ಕೆ ಎರಡೂ ಕಡೆಯವರೂ ಒಪ್ಪಿಗೆ ನೀಡಿದ್ದರು.
ಸುತ್ತೂರು ಶ್ರೀಗಳು ಹಾಗೂ ಸಂಸದ ಶ್ರೀ ಶ್ರೀನಿವಾಸ್ ಪ್ರಸಾದ್ ಅವರ ಮಾತನ್ನು ಗೌರವಿಸಿ ಶಾಲಾ ಹೋರಾಟ ಸಮಿತಿಯು ಸುಪ್ರೀಂ ಕೋರ್ಟ್‍ನಲ್ಲಿ ಶ್ರೀ ಪ್ರಶಾಂತ್ ಭೂಷಣ್‍ರ ಮೂಲಕ ಸಿದ್ಧಪಡಿಸಿದ್ದ ತಡೆಯಾಜ್ಞೆ ಅರ್ಜಿಯನ್ನು ಮುಂದುವರಿಸದಂತೆ ನೋಡಿಕೊಂಡಿತು. ಏಕೆಂದರೆ ಒಪ್ಪಂದದಂತೆ ನಡೆದುಕೊಳ್ಳಲು, ಮಾತಿಗೆ ತಪ್ಪದಿರಲು, ವಚನಭ್ರಷ್ಟರಾಗದಿರಲು ಹಾಗೂ ರಾಮಕೃಷ್ಣ ಆಶ್ರಮದವರು ವಚನಭ್ರಷ್ಟ ಆಗುವುದಿಲ್ಲ ಎಂಬ ನಂಬಿಕೆಯಿಂದ.
ಆದರೆ ರಾಮಕೃಷ್ಣ ಆಶ್ರಮದವರು ನಂಬಿಕೆದ್ರೋಹ ಮಾಡಿದರು. ಉಲ್ಟಾ ಹೊಡೆದರು. ಅದೂ ಯಾರಿಗೆ? ಸುತ್ತೂರು ಶ್ರೀಗಳು ಹಾಗೂ ಶ್ರೀ ಶ್ರೀನಿವಾಸ್ ಪ್ರಸಾದ್ ಅವರಿಗೇನೆ ನಂಬಿಕೆದ್ರೋಹ ಮಾಡಿದರು! ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಸುತ್ತೂರು ಶ್ರೀಗಳು ಹಾಗೂ ಶ್ರೀ ಶ್ರೀನಿವಾಸ್ ಪ್ರಸಾದರ ಮಾತುಗಳನ್ನು ಒಪ್ಪಿ, ಆ ಒಪ್ಪಿದ ಮಾತನ್ನು ಉಳಿಸಿಕೊಳ್ಳದೆ, ಗೌರವಿಸದೆ, ಕಾಲುಕಸ ಮಾಡುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ಈ ರೀತಿ ಮಾಡಿದ ರಾಮಕೃಷ್ಣ ಆಶ್ರಮದವರು ಬಹುಶಃ ಬೇರೆ ರಾಜ್ಯದವರು ಇರಬೇಕು ಅಥವಾ ಈ ರಾಜ್ಯದವರಾಗಿದ್ದರೆ ಅಕ್ಷಮ್ಯ.
“ಸಂಧಾನದ ಒಪ್ಪಂದದಂತೆಯೇ ಈಗಿರುವ ಸ್ಥಳದಲ್ಲೇ ಒಡೆದು ಹಾಕಿರುವ ಶಾಲೆಯ ಮರು ನಿರ್ಮಾಣವಾಗಬೇಕು. ಈ ಮೂಲಕ ವಿವೇಕ ಸ್ಮಾರಕ ವಿವಾದಗ್ರಸ್ತವಾಗಿ ಉಳಿಯದೆ ಎಲ್ಲಾ ಜನರ ಸಹೃದಯ ಸ್ಮಾರಕವಾಗಬೇಕಾಗಿದೆ” ಎಂದು ಸಂಸದ ಶ್ರೀ ಶ್ರೀನಿವಾಸ ಪ್ರಸಾದ್ ಕಳಕಳಿಯಿಂದ ಒತ್ತಾಯಿಸಿದ್ದಾರೆ. ಇದು ಅಸಾಧ್ಯವೇನಲ್ಲ. ಇದಕ್ಕಾಗಿ ಸುತ್ತೂರು ಶ್ರೀಗಳು ಹಾಗೂ ಶ್ರೀ ಶ್ರೀನಿವಾಸ್ ಪ್ರಸಾದ್‍ರು ಅಚಲವಾಗಿ ನಿಲ್ಲಬೇಕಾಗಿದೆ. ಇದು ಈ ಈರ್ವರ ಹೊಣೆಗಾರಿಕೆಯೂ ಕೂಡ ಹೌದು.