ಮೇಲುಕೋಟೆ ಕ್ಷೇತ್ರದ ಕನಸು ನನಸಾಗಬೇಕು – ದೇವನೂರ ಮಹಾದೇವ

[ಸರ್ವೋದಯ ಕರ್ನಾಟಕ ಪಕ್ಷದ ಮೇಲುಕೋಟೆ ಕ್ಷೇತ್ರದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರು 20.4.2023ರಂದು ನಾಮಪತ್ರ ಸಲ್ಲಿಸಿದಾಗ ಜೊತೆಗಿದ್ದ ದೇವನೂರ ಮಹಾದೇವ ಅವರು ನಂತರ ಆಡಿದ ಮಾತುಗಳ ಅಕ್ಷರ ರೂಪ]
ಇವತ್ತು ಪಾಂಡವಪುರಕ್ಕೆ ಬಂದು ನಾನು ಮಾಡಿದ ಮೊದಲ ಕೆಲಸ, ಪಾಂಡವಪುರದ ಸರ್ಕಾರಿ ಪದವಿ ಕಾಲೇಜಿನ ಪರಿಸ್ಥಿತಿ ಹೇಗಿದೆ ಅಂತ ನೋಡಕ್ಕೆ ಹೋಗಿದ್ದೆ. ಮಾರ್ಕೆಟ್ ಜಾಗದಲ್ಲಿ ಇಕ್ಕಟ್ಟಿನಲ್ಲಿ ಸಿಕ್ಕಿದಂತೆ ಕಾಲೇಜು ಇದೆ. ನೋಡಿ ನನಗೆ ತುಂಬಾ ದುಃಖ ಆಯ್ತು. ನನ್ನ ದುಃಖಕ್ಕೆ ಕಾರಣವಿದೆ. ನನಗೆ ಗೊತ್ತಿರುವಂತೆ 2018ರಲ್ಲೆ ಪುಟ್ಟಣ್ಣಯ್ಯ ಅವರ ಪ್ರಯತ್ನದಿಂದ ನೂತನ ಸುವ್ಯವಸ್ಥಿತ ಡಿಗ್ರಿ ಕಾಲೇಜಿಗಾಗಿ ಎರಡೂವರೆ ಕೋಟಿ ಬಿಡುಗಡೆಯಾಗಿತ್ತು. ಬಿಡುಗಡೆಯಾಗಿದ್ದ ಹಣ ಹಿಂದಕ್ಕೆ ಹೋಗಿದೆ! ಜೊತೆಗೆ ಇದರ ಕಟ್ಟಡಕ್ಕಾಗಿ ಎಂಟೂವರೆ ಎಕರೆ ಪ್ರದೇಶ ಶಂಭನಹಳ್ಳಿ ರಸ್ತೆಯಲ್ಲಿ ಖರೀದಿಯಾಗಿತ್ತು. ಹೀಗಿದ್ದೂ ಪಾಂಡವಪುರ ಸರ್ಕಾರಿ ಪದವಿ ಕಾಲೇಜು ಇಕ್ಕಟ್ಟಿನಲ್ಲಿ ಉಸಿರುಕಟ್ಟಿದಂತೆ ಇರಲು ಕಾರಣ ಯಾರು? ಸರ್ಕಾರಿ ಉಚಿತ ಶಿಕ್ಷಣದ ಕತ್ತು ಹಿಚುಕುತ್ತಿರುವವರು ಯಾರು? ಎಲ್ಲರಿಗೂ ಗೊತ್ತು, ತಮ್ಮ ಸ್ವಂತ ಶಿಕ್ಷಣ ಸಂಸ್ಥೆ ಲಾಭಕ್ಕಾಗಿ ಯಾರು ರಕ್ಷಕರಾಗಬೇಕಿತ್ತೋ ಅವರೇ ಭಕ್ಷಕರಾಗಿದ್ದಾರೆ. ತಾನು, ತನ್ನ ಕುಟುಂಬದವರೇ ಗುಳುಂ ಮಾಡಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರಿನಲ್ಲಾದರೂ ಸಂಸ್ಥೆ/ಕಂಪನಿ ಕಟ್ಟಿದ್ದರೆ ಸಾರ್ವಜನಿಕರು ಹಕ್ಕು ಚಲಾಯಿಸಬಹುದಿತ್ತು. ಈಗ ಅದೂ ಇಲ್ಲ. ಯಾಕೆಂದರೆ ಸ್ವಂತಕ್ಕೆ ಗುಳುಂ ಮಾಡಿದ್ದಾರೆ. ಮೇಲುಕೋಟೆ ಕ್ಷೇತ್ರದ ಜನತೆ ಇಂಥವನ್ನು ಕಡೆಗಣಿಸದೇ ಕಣ್ಣಿಟ್ಟು ನೋಡಬೇಕು. ಪ್ರಶ್ನಿಸಬೇಕು.
ಅಮೇರಿಕಾದಿಂದ ದರ್ಶನ್ ತನ್ನ ಕ್ಷೇತ್ರದಲ್ಲೇ ಉಳಿಯಬೇಕು ಅಂತ ಬಂದಿಳಿದಾಗ ನಾನು ಮೊದಲು ಆತನಿಗೆ ಒಂದು ವಿಚಿತ್ರ ಪ್ರಶ್ನೆ ಇಟ್ಟೆ. ‘ದರ್ಶನ್ ನೀವು ಯಾವ ಕೆಲಸ ಮಾಡುವುದಿಲ್ಲ?’ ಎಂದು ಕೇಳಿದೆ. ಅದಕ್ಕೆ ದರ್ಶನ್- ‘ನನ್ನ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಹೆಸರಲ್ಲಿ ಮೊದಲನೆಯದಾಗಿ, ಕಲ್ಲು ಗಣಿಗಾರಿಕೆ ಮಾಡುವ ಕ್ರಷರ್ ಕಂಪನಿ ಮಾಡುವುದಿಲ್ಲ. ಎರಡನೆಯದು ನನ್ನ ತಂದೆಯ ಹೆಸರಲ್ಲಿ ಕನ್ಸ್ಟ್ರಕ್ಷನ್ ಕಂಪನಿ ಕಟ್ಟಿ, ಸರ್ಕಾರಿ ಗುತ್ತಿಗೆ ಕೆಲಸ, ಕಾರ್ಯಗಳನ್ನು ನಾನು, ನನ್ನ ಕುಟುಂಬ ಸದಸ್ಯರು ಮಾಡುವುದಿಲ್ಲ. ಮೂರನೆಯದಾಗಿ -ನಾನಾಗಲಿ, ನನ್ನ ಕುಟುಂಬದವರಾಗಲಿ ನಮ್ಮದೇ ಖಾಸಗಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ, ಅದನ್ನು ಊರ್ಜಿತಗೊಳಿಸಲು ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವುದಿಲ್ಲ. ಇನ್ನೂ ಒಂದಿಷ್ಟು ಇಂಥವೇ ಇವೆ ಅಣ್ಣ’ ಅಂದರು. ಇವು ದರ್ಶನ್ ಪ್ರಾಮಾಣಿಕ ಮಾತುಗಳಾಗಿದ್ದವು. ಇಂಥ ಮಾತುಗಳು ಚುನಾವಣಾ ಪ್ರಣಾಳಿಕೆಯ ತಳಪಾಯ ಅನ್ನಿಸಿತು.
“ಹಾಗಾದರೆ ಏನೇನು ಮಾಡಬೇಕು ಅಂತಿದ್ದೀಯಪ್ಪ?” ಅಂದೆ. ದರ್ಶನ್ ಮೊದಲ ಉತ್ತರ- “ಅಣ್ಣಾ, ನನ್ನ ಅಪ್ಪ ಅಮೇರಿಕಾಕ್ಕೆ ಬಂದಾಗಲೂ ಅವರ ದೇಹ ಅಲ್ಲಿರುತ್ತಿತ್ತು. ಆದರೆ ಅವರ ಮನಸ್ಸು ಮೇಲುಕೋಟೆ ಕ್ಷೇತ್ರದಲ್ಲೇ ಸಂಚರಿಸುತ್ತಿತ್ತು. ಯಾವಾಗಲೂ ‘ಮಂಡ್ಯದ ಬೆಳೆಗಳಿಗೆ ನೀರುಣಿಸಬೇಕು’ ಅಂತಿದ್ದರು. ‘ನನ್ನ ಜನಗಳ ರೋಗ ರುಜಿನಗಳಿಗೆ ಬಹುಪಾಲು ಕಾರಣ -ಕುಡಿಯುವ ನೀರು. ಎಲ್ಲಾ ಮನೆಮನೆಗಳಲ್ಲೂ ಶುದ್ಧವಾದ ಕುಡಿಯುವ ನೀರು ಸಿಗುವಂತಾಗಬೇಕು’ ಅಂತಿದ್ದರು. ಇದನ್ನು ನಾನು ಮೊದಲ ಆದ್ಯತೆಯಿಂದ ಮಾಡುವೆ’ ಎಂದರು. ಮುಂದೆ ಉಳಿದುದೆಲ್ಲಾ ನಮಗೆ ಗೊತ್ತೇ ಇದೆ. ದರ್ಶನ್ ಆದ್ಯತೆಗಳಾದ ಉಚಿತ ಶಿಕ್ಷಣ, ಉನ್ನತೀಕರಿಸಿದ ಹಳ್ಳಿಗಾಡಿನ ಆಸ್ಪತ್ರೆ, ರೈತರ ಬೆಳೆಗಳಿಗೆ ಬೆಲೆ, ಮೇಲುಕೋಟೆ ಕ್ಷೇತ್ರದಲ್ಲೇ ರೈತರ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ, ದವಸ ಧಾನ್ಯಗಳ ಮೌಲ್ಯವರ್ಧನೆ ಮಾಡಿ ರೈತರ ಉತ್ಪನ್ನಗಳಿಗೆ ಸ್ವಲ್ಪವಾದರೂ ಹೆಚ್ಚಿನ ಬೆಲೆ ಸಿಗುವಂತೆ ಮಾಡಿ ದುಡಿಮೆಯ ಬೆವರಿಗೆ ಗೌರವ ಸಲ್ಲಿಸುವುದು… ಇತ್ಯಾದಿ ಇತ್ಯಾದಿ.. ಇವುಗಳೆಲ್ಲವನ್ನೂ ದರ್ಶನ್ ಕ್ಷೇತ್ರದ ಜನಸಮುದಾಯದೊಡನೆ ಹಂಚಿಕೊಂಡಿದ್ದಾರೆ. ನಿಮಗೇ ಹೆಚ್ಚು ತಿಳಿದಿದೆ.
ಈಗ ನಾನು ಇಡೀ ಮೇಲುಕೋಟೆ ಕ್ಷೇತ್ರಕ್ಕೆ- ‘ನಿನ್ನ ಕನಸೇನು?’ ಅಂತ ಪ್ರಶ್ನೆ ಕೇಳಿದರೆ- “ನನ್ನ ಕನಸು ದರ್ಶನ್” ಅಂತ ಹೇಳುತ್ತದೆ. ದರ್ಶನ್ ಗೆಲ್ಲಲೇಬೇಕು. ಮೇಲುಕೋಟೆ ಕ್ಷೇತ್ರದ ಕನಸು ನನಸಾಗಬೇಕು.