ಮುಂದಿದೆ: ಮೆಗಾಲೂಟಿಯ ಮಾರಿಹಬ್ಬ-ನಾಗೇಶ್ ಹೆಗಡೆ

31 ವರ್ಷಗಳ ಹಿಂದಿನ ಮಾತು: “ಪಶ್ಚಿಮಘಟ್ಟ ಉಳಿಸಿ” ಹೆಸರಿನ ಮಹಾ ಪಾದಯಾತ್ರೆ 1987ರ ಅಕ್ಟೊಬರ್‍ನಲ್ಲಿ ಆರಂಭವಾಗಿತ್ತು. ಕೇರಳದಿಂದ ಹೊರಟವರು ಕರ್ನಾಟಕದ ಮೂಲಕ ಗೋವಾಕ್ಕೆ ಸೇರಬೇಕು. ಗುಜರಾತಿನಿಂದ ಹೊರಟ ಇನ್ನೊಂದು ಜನಧಾರೆ ಮಹಾರಾಷ್ಟ್ರದ ಮೂಲಕ ಗೋವಾ ತಲುಪಿ ಅಲ್ಲಿ ಎಲ್ಲರ ಸಂಗಮವಾಗಬೇಕಿತ್ತು. ಕೇರಳದಿಂದ ಹೊರಟ ತಂಡ ಸರಿಯಾಗಿ ಕಾವೇರಿ ತೀರ್ಥೋದ್ಭವದ ಸಂದರ್ಭಕ್ಕೆ ಭಾಗಮಂಡಲಕ್ಕೆ ಬಂದಿತ್ತು. ಅವರನ್ನು ಜೊತೆಗೂಡಲೆಂದು ಕನ್ನಡಿಗರು ಸಾವಿರ ತೊರೆಗಳಂತೆ ಭಾಗಮಂಡಲದಲ್ಲಿ ಸೇರಿದ್ದರು. ಅದೇತಾನೆ 85 ವರ್ಷ ಪೂರೈಸಿದ ಡಾ. ಶಿವರಾಮ ಕಾರಂತರು ಆ ಬೃಹತ್ ಸಮಾವೇಶದ ಸ್ವಾಗತ/ ಬೀಳ್ಕೊಡುಗೆ ಭಾಷಣ ಮಾಡುತ್ತಿದ್ದರು.
“ಇಷ್ಟು ವರ್ಷ ಈ ಘಟ್ಟ ಪ್ರದೇಶಕ್ಕೆ ಮನುಷ್ಯರು ಹಾರೆ, ಕೊಡಲಿಗಳಿಂದ ಘಾಸಿ ಮಾಡ್ತಾ ಇದ್ದರು. ಅದನ್ನೆಲ್ಲ ಪ್ರಕೃತಿ ಸಹಿಸಿಕೊಂಡಿತ್ತು. ಈಗ ಹಾಗಲ್ಲ. ಸಾವಿರ ಮನುಷ್ಯರ ಕೆಲಸವನ್ನು ತಾನೊಬ್ಬನೇ ಮಾಡಬಲ್ಲ ಯಂತ್ರಗಳು ಬಂದಿವೆ. ನಿಸರ್ಗ ಸಂಹಾರದ ಕೆಲಸ ಇನ್ನು ಸಾವಿರ ಪಟ್ಟು ಹೆಚ್ಚಾಗಲಿದೆ. ಅಷ್ಟೇ ಅಲ್ಲ, ಈ ಯಂತ್ರಗಳಿಂದಾಗಿ ಬಡವ-ಶ್ರೀಮಂತರ ನಡುವಣ ವ್ಯತ್ಯಾಸವೂ ಸಾವಿರ ಪಟ್ಟು ಹೆಚ್ಚಾಗಲಿದೆ…”
ಅವರ ಕಂಚಿನ ಕಂಠದ ಆ ಮಾತುಗಳು ಮುಂದಿನಿಡೀ ತಿಂಗಳು ಕಾಲ ಘಟ್ಟಸಾಲಿನ ಅರಣ್ಯ-ಕಣಿವೆಗಳಲ್ಲಿ ಪ್ರತಿಧ್ವನಿಸುತ್ತಲೇ ಇತ್ತು. ಭಾಗಮಂಡಲ, ಚೇರಂಬಾಣೆ, ಮೂಡಿಗೆರೆ, ತೀರ್ಥಹಳ್ಳಿ, ಹೆಗ್ಗೋಡು ಮೂಲಕ ಹಾಡು, ಲಾವಣಿ, ಬೀದಿನಾಟಕಗಳ ಜಾಥಾ ಸಾಗುತ್ತಿದ್ದಾಗ ಅಲ್ಲಲ್ಲಿನ ದೊಡ್ಡ ಊರುಗಳ ಸಭೆಗಳಲ್ಲಿ ಚಿಕ್ಕದೊಡ್ಡ ಭಾಷಣಕಾರರೆಲ್ಲ ಕಾರಂತರ ಮಾತುಗಳನ್ನೇ ಮತ್ತೆ ಮತ್ತೆ ಹೇಳುತ್ತಿದ್ದರು.
*
ಈಗ 2010ಕ್ಕೆ ಬರೋಣ: ಮಾಧವ ಗಾಡ್ಗೀಳ್ ಸಮಿತಿಯ ಸದಸ್ಯರು ಗೋವಾ ಸಮೀಕ್ಷೆಗೆ ಹೋಗಿದ್ದರು. ಅಲ್ಲಿ ಗಣಿಗಾರಿಕೆಯಲ್ಲಿ ತೊಡಗಿದ ಬೃಹತ್ ಯಂತ್ರಗಳ ತಖ್ತೆ ನಡೆಸಿದ್ದರು. ಒಟ್ಟು 1650 ಜೆಸಿಬಿಗಳು ಕೆಲಸ ಮಾಡುತ್ತಿದ್ದವು. ಅವುಗಳಲ್ಲಿ ನೋಂದಣಿ ಮಾಡಿಕೊಂಡವು ಎಷ್ಟೆಂದು ನೋಡಿದಾಗ ಕೇವಲ 150 ಯಂತ್ರಗಳು. ಇನ್ನುಳಿದವೆಲ್ಲ ಅನಧಿಕೃತವಾಗಿ ಗುಡ್ಡಬೆಟ್ಟಗಳನ್ನು ಕೆತ್ತುತ್ತಿದ್ದವು.
*
ಮೂರನೆಯ ಘಟ್ಟ: ಮಡಿಕೇರಿಯಲ್ಲಿ 2013ರಲ್ಲಿ ನಡೆದ 80ನೇ ಸಾಹಿತ್ಯ ಸಮ್ಮೇಳನದ ಸಂದರ್ಭ. ಅಧ್ಯಕ್ಷ ನಾ. ಡಿಸೋಜರು ತಮ್ಮ ಭಾಷಣದಲ್ಲಿ ಕೊಡಗಿನ ಹಾಗೂ ಇಡೀ ಪಶ್ಚಿಮಘಟ್ಟಗಳ ನಿಸರ್ಗಸಿರಿಯ ವರ್ಣನೆ ಮಾಡುತ್ತಿದ್ದರು. “ಇದಕ್ಕೆ ಯುನೆಸ್ಕೊ ವಿಶ್ವಮಾನ್ಯತೆ ನೀಡಲು ಹೊರಟಾಗ ರಾಜಕಾರಣಿಗಳು ವಿರೋಧ ಮಾಡಿದರು. ಪರಿಸರ ಇರುವುದೇ ನಮಗಾಗಿ ಅನ್ನುವ ಧೋರಣೆಯಲ್ಲಿ ಬೇಕಾಬಿಟ್ಟಿ ನಾಶ ಮಾಡುತ್ತಿರುವಾಗ ನಮ್ಮನ್ನು ಎಚ್ಚರಿಸಲು ಕಸ್ತೂರಿ ರಂಗನ್ ವರದಿ ಬಂದಿದೆ..” ಎಂದಿದ್ದೇ ತಡ, ಸ್ಥಳೀಯ ರಾಜಕೀಯ ನಾಯಕರು ವೇದಿಕೆಗೆ ನುಗ್ಗಿದರು. ‘ಅಧ್ಯಕ್ಷರು ತಮ್ಮ ಮಾತನ್ನು ಹಿಂತೆಗೆದುಕೊಳ್ಳಬೇಕು, ಕ್ಷಮೆ ಯಾಚಿಸಬೇಕು’ ಎಂದು ಪಟ್ಟು ಹಿಡಿದರು. ಮೂರು ದಿನಗಳ ಸಮ್ಮೇಳನದ ಮುಕ್ತಾಯದ ಸಂದರ್ಭದಲ್ಲಿ ‘ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು’ ಎಂದು ತೀರ್ಮಾನಿಸಲಾಯಿತು. ಸಮ್ಮೇಳನಾಧ್ಯಕ್ಷರ ಅಭಿಪ್ರಾಯಕ್ಕೆ ವಿರುದ್ಧವಾದ ನಿರ್ಣಯ ಕೈಗೊಂಡ ವಿಶಿಷ್ಟ ಘಟನೆಯಾಗಿ ಅದು ದಾಖಲಾಯಿತು.
*
ಕೇರಳ, ಕೊಡಗು, ಸಕಲೇಶಪುರದಲ್ಲಿನ ಪ್ರಳಯಾಂತಕ ಭೂಕುಸಿತ ಮತ್ತು ನೆರೆಹಾವಳಿಯ ಈಗಿನ ಸಂದರ್ಭದಲ್ಲಿ ನಾನಾ ಪ್ರಶ್ನೆಗಳನ್ನು ಕೇಳಲಾಗುತ್ತಿದೆ: ಪಶ್ಚಿಮಘಟ್ಟ ಪ್ರದೇಶದಲ್ಲಿ ಪ್ರಕೃತಿಯ ಈ ಪರಿಯ ಕೋಪ ವಿಕೋಪಕ್ಕೆ ಕಾರಣಗಳೇನು? ಹಿಂದೆಲ್ಲ ಇದಕ್ಕಿಂತ ಜೋರು ಮಳೆ ಬಂದಿದ್ದರೂ ಇಷ್ಟೆಲ್ಲ ಅನಾಹುತ ಆಗಿರಲಿಲ್ಲವಲ್ಲ… ಇದಕ್ಕೆ ತಪ್ಪಿತಸ್ಥರು ಯಾರು? ಹವಾಮಾನ ವಿಜ್ಞಾನಿಗಳು ಮುನ್ಸೂಚನೆ ಯಾಕೆ ಕೊಡಲಿಲ್ಲ? ಇಂಥದ್ದು ಮತ್ತೆ ಸಂಭವಿಸದಂತೆ ತಡೆಯಲು ಸಾಧ್ಯವೆ? ಗಾಡ್ಗೀಳ್ ಅಥವಾ ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಇವೆಲ್ಲ ಸರಿಹೋಗುತ್ತವೆಯೆ -ಹೀಗೆಂದು ಅನೇಕರು ಕೇಳುತ್ತಿದ್ದಾರೆ.
ನಿಸರ್ಗದ ವಿದ್ಯಮಾನಗಳು ಈ ಯಾವ ಪ್ರಶ್ನೆಗೂ ನೇರ ಉತ್ತರ ಕೊಡುವಷ್ಟು ಸರಳವಾಗಿಲ್ಲ. ಹಿಂದೆಯೂ ಸರಳವಾಗಿರಲಿಲ್ಲ. ಈಗಂತೂ ಅವು ದಿನದಿನಕ್ಕೆ ಇನ್ನಷ್ಟು ಸಂಕೀರ್ಣವಾಗುತ್ತಿವೆ. ಜಗತ್ತಿನಲ್ಲಿ ಇಂಥ ಅದೆಷ್ಟೊ ಅನಿರೀಕ್ಷಿತ ವಿದ್ಯಮಾನಗಳು ನಡೆಯುತ್ತಿವೆ. ಈಗಂತೂ ನೆರೆಹಾವಳಿಯ ದಿನಗಳು. ರಾಜಸ್ತಾನದ ಮರುಭೂಮಿ, ಉತ್ತರಾಖಂಡದ ಗುಡ್ಡಗಾಡು, ಹಿಮಾಚಲ ಪ್ರದೇಶದ ಹಿಮನಾಡು, ಬಿಹಾರದ ಬಯಲುಭೂಮಿ, ಮಧ್ಯಪ್ರದೇಶದ ಕಣಿವೆಕೊಳ್ಳ, ಉತ್ತರಪ್ರದೇಶದ ಜೌಗುಭೂಮಿ ಎಲ್ಲ ಕಡೆ ಜಡಿಮಳೆ, ಜಡಿನೆರೆ ನುಗ್ಗುತ್ತಿದೆ. ಇಂಡೊನೇಶ್ಯ, ಜಪಾನ್, ಚೀನಾ, ಪೆರು, ಕೆನ್ಯಾ ಅಲ್ಲೆಲ್ಲ ಇಂಥದ್ದೇ ಉತ್ಪಾತ ಸಂಭವಿಸುತ್ತಿವೆ. ಸುಂಟರಗಾಳಿ, ಬರ, ಹಿಮಕುಸಿತ, ಕಾಡಿನ ಬೆಂಕಿಯಂಥ ದುರ್ಘಟನೆಗಳ ಸರಮಾಲೆ ಬೇರೆ. ನಮ್ಮಲ್ಲಿ ಗುಡ್ಡಬೆಟ್ಟಗಳಲ್ಲೂ ಜನಸಾಂದ್ರತೆ ಜಾಸ್ತಿ ಇರುವುದರಿಂದ ಮತ್ತು ಮಾಧ್ಯಮಗಳ ಕಾಲ್ಕೆಳಗೇ ಭೂಮಿ ಕುಸಿದಿದ್ದರಿಂದ ಆತಂಕ, ಆಕ್ರಂದನ ಹೆಚ್ಚಿದೆ.
ವಿಜ್ಞಾನಿಗಳು ಏನಂತ ನೋಡುತ್ತಾರೆ? ಸೂಪರ್ ಕಂಪ್ಯೂಟರ್‍ಗಳ ಮುನ್ಸೂಚನೆಯನ್ನೂ ಪಲ್ಟಿ ಹೊಡೆಸಿ ಅನಿರೀಕ್ಷಿತ ವಿಪ್ಲವಗಳು ಸಂಭವಿಸುತ್ತಿವೆ. ಭೂಮಿಯ ತಾಪಮಾನ ಜಾಸ್ತಿ ಆಗುತ್ತಿರುವುದರಿಂದ ಅಷ್ಟದಿಕ್ಪಾಲಕರೂ ದಿಕ್ಕೆಟ್ಟಂತೆ ವರ್ತಿಸುತ್ತಿದ್ದಾರೆ. ಸಮುದ್ರದ ತಾಪಮಾನ ಏರುತ್ತಿದೆ. ನೆಲದ ತಾಪಮಾನ ಏರುತ್ತಿದೆ. ಹಿಮಖಂಡಗಳು ಕರಗಿ ಅಲ್ಲಿನ ತಳದ ಕರ್ರಗಿನ ಹಾಸುಬಂಡೆಗಳೂ ಬಿಸಿಯಾಗುತ್ತಿವೆ. ಭೂಮಿ ತನ್ನನ್ನು ತಾನು ತುಸು ಅವಸರದಲ್ಲಿ ತಂಪು ಮಾಡಿಕೊಳ್ಳಲೆಂದು ಸಮುದ್ರಕ್ಕೂ ಐಸ್ ಚೆಲ್ಲುತ್ತಿರುವಂತೆ ತೋರುತ್ತಿದೆ. ಎಲ್ಲೋ ಮೇಘಸ್ಫೋಟ, ಇನ್ನೆಲ್ಲೋ ಹಿಮಕುಸಿತ, ಮತ್ತೆಲ್ಲೋ ಚಂಡಮಾರುತ. ನಾವು ಕಂಬಳಿ ಹೊದ್ದು ಬೆಚ್ಚನ್ನ ನಿದ್ದೆಯಲ್ಲಿದ್ದಾಗ ಸೆಕೆ ಹೆಚ್ಚಾದರೆ ಹೊದಿಕೆಯನ್ನು ಆಚೀಚೆ ಸರಿಸಿ, ಕೈಕಾಲನ್ನು ಹೊರಕ್ಕೆಳೆದೋ ಮೈಯನ್ನು ಮಗುಚಿಕೊಂಡೋ ಮುಲುಗುತ್ತೇವಲ್ಲ. ಹಾಗೇನೋ ಇರಬೇಕು.
ಕಳೆದ ಐವತ್ತು ವರ್ಷಗಳಿಂದ ನಾವು ಮಾಡುತ್ತಿರುವ ಭಾನಗಡಿಗಳ ಲೆಕ್ಕ ಇಡಲು ಸಾಧ್ಯವೆ? ಎಷ್ಟೊಂದು ನದಿಗಳನ್ನು ತಿರುಗಿಸಿ, ಅಡ್ಡಡ್ಡ ಹರಿಸಿ ನೀರಾವಿಯನ್ನು ಆಕಾಶಕ್ಕೆ ತೂರುತ್ತಿದ್ದೇವೆ. ಸಮುದ್ರಗಳನ್ನೇ ಒಣಗಿಸುತ್ತಿದ್ದೇವೆ. ಭೂತಳಕ್ಕೆ ಪಾತಾಳಗರಡಿ ಹಾಕಿದಂತೆ ತೈಲವನ್ನೂ ನೀರನ್ನೂ ಅನಿಲವನ್ನೂ ಖನಿಜಗಳನ್ನೂ ಮೇಲೆತ್ತಿ ತೂರುತ್ತಿದ್ದೇವೆ. 730 ಕೋಟಿ ಜನರು ಐಷಾರಾಮಿ ಬದುಕಿನ ಅಹರ್ನಿಶಿ ಜಾಹೀರಾತುಗಳ ಮಧ್ಯೆ ಸುಂದರ ಕಂದರಗಳಲ್ಲೂ ಕೊಳಕಿನ ಪರ್ವತ ನಿರ್ಮಿಸುತ್ತ ಭೋಗದ ಗದ್ದಲದಲ್ಲಿ ಮೈಮರೆತಿದ್ದೇವೆ. ಭಾರತದ ನಾಲ್ಕೂ ದಿಕ್ಕಿಗೆ ಅಲಾರ್ಮ್ ಮೊಳಗಿದೆ. ಹಿಂದೆ ಮುಂಬೈ, ಚೆನ್ನೈ, ಕೇದಾರನಾಥ; ಇಂದು ಕೊಡಗಿನ ದೇವರ ಕಾಡು, ಅದರಾಚಿನ ದೇವರ ನಾಡು ತತ್ತರಿಸುತ್ತಿವೆ. ನಾಳೆ ನಮ್ಮ ಪಾಳಿ ಇದ್ದೀತು.
1924ರಲ್ಲಿ, ಮತ್ತೆ 2009ರಲ್ಲಿ ಜುಲೈ- ಆಗಸ್ಟ್ ನಲ್ಲಿ ಇದಕ್ಕಿಂತ ಜಾಸ್ತಿ ಮಳೆ ಬಿದ್ದಿತ್ತು ಎನ್ನುವವರಿದ್ದಾರೆ. ತಿಂಗಳ ಲೆಕ್ಕಾಚಾರದಲ್ಲಿ ಇದ್ದೀತು. ಆದರೆ ವಾರದ ಲೆಕ್ಕಾಚಾರದಲ್ಲಿ ಇಷ್ಟೊಂದು ದಟ್ಟ ಸುರಿದಿದ್ದು? ಮೇಘಸ್ಫೋಟ ಯಾಕಾಗುತ್ತದೆ ಎಂದರೆ ನೆಲದ ತಾಪ ಜಾಸ್ತಿಯಾದಾಗ, ಬಿಸಿಗಾಳಿ ಮೇಘವನ್ನು ಮೇಲಕ್ಕೆ ಎತ್ತುತ್ತದೆ. ಸಮುದ್ರದಿಂದ ಒತ್ತರಿಸಿ ಬರುವ ಮೋಡಗಳಿಗೆ ಮಳೆ ಸುರಿಸಲು ಆಗುವುದಿಲ್ಲ. ಅವು ಮೇಲಕ್ಕೆ ಇನ್ನೂ ಮೇಲಕ್ಕೆ ಹೋದಂತೆಲ್ಲ ಅಲ್ಲಿ ಇನ್ನಷ್ಟು ಮೇಘಗಳು ದಟ್ಟಣಿಸುತ್ತವೆ. ಒಮ್ಮೆಗೇ ಜಾಸ್ತಿ ತಂಪಾಗಿ, ಜಾಸ್ತಿ ತೂಕ ತಾಳಲಾರದೆ ಢಮಾರೆಂದು ಧುಮ್ಮಿಕ್ಕುತ್ತವೆ. ತಳಕಳಚಿ ಸುರಿಯುವ ಹಿಟ್ಟಿನ ಮೂಟೆಯ ಹಾಗೆ. ಪಶ್ಚಿಮಘಟ್ಟಗಳು ಗಟ್ಟಿ ಇದ್ದಂತೆನಿಸಿದ್ದರೂ ಅವು ಭಾರತದ ಅತ್ಯಂತ ಪುರಾತನ ಶಿಥಿಲ ಶಿಲೆಗಳು. ಕಳೆದ ಮುನ್ನೂರು ಕೋಟಿ ವರ್ಷಗಳಿಂದ ಹತ್ತಾರು ಸಾವಿರ ಕಿಲೊಮೀಟರ್ ದೂರದವರೆಗೆ ಹೊಟ್ಟೆ ಹೊಸೆಯುತ್ತ, ಮಧ್ಯ ಭಾರತವನ್ನು ರಷ್ಯ ಕಡೆ ತಳ್ಳುತ್ತ, ಸಮುದ್ರದ ಹೂಳನ್ನೆಲ್ಲ ಒಟ್ಟುತ್ತ ಹಿಮಾಲಯವನ್ನು ಸೃಷ್ಟಿಸುತ್ತ ಸಾಗಿ ಬಂದಿವೆ. ಒಡಲಿನ ಬಿರುಕು, ಮೈಮೇಲಿನ ಗೀರು- ತರಚು ಗಾಯಗಳನ್ನು ಮುಚ್ಚಿಕೊಳ್ಳಲೆಂದು ಮಣ್ಣಿನ ದಪ್ಪ ಪದರವನ್ನು ಗುಡ್ಡದಂಚಿನಲ್ಲಿ, ಕೊಳ್ಳದಲ್ಲಿ ಪೇರಿಸಿಕೊಂಡಿವೆ. ಅವು ಸುಲಭಕ್ಕೆ ತೊಳೆದು ಹೋಗದಂತೆ ದಟ್ಟ ಗಿಡಮರ ಬೆಳೆಸಿಕೊಂಡಿವೆ. ನಾವು ಗರಗಸ, ಜೆಸಿಬಿ, ಸಿಡಿಮದ್ದು, ಡ್ರಿಲ್ಲಿಂಗ್ ರಿಗ್ಗು ಬಳಸಿ, ಸಮತೋಲವನ್ನು ಹದಗೆಡಿಸಿದೆವು. ಕೃಷಿ ವಿಸ್ತರಣೆ, ಗಣಿಗಾರಿಕೆ, ಅಣೆಕಟ್ಟು, ಸುರಂಗ, ಸೇತುವೆ, ಪವರ್ ಲೈನ್, ಪ್ರವಾಸೀಧಾಮ, ವಿಲಾಸೀಧಾಮ, ನಗರ ವಿಸ್ತರಣೆ, ಅಕ್ರಮ ವಲಸೆ, ರೆಸಾರ್ಟ್, ಹೋಮ್‍ಸ್ಟೇ… ಧ್ವಂಸಕಾರ್ಯ ಒಂದೆ ಎರಡೆ?


ಗಾಡ್ಗೀಳ್ ಸಮಿತಿ ಹೇಳಿದ್ದು ಇಷ್ಟೆ: ಅಲ್ಲಿನ ಸೂಕ್ಷ್ಮ ಪರಿಸರಕ್ಕೆ ಗೌರವ ಕೊಡಿ. ನಗರಮಾದರಿಯ ಸುಖ ಸವಲತ್ತುಗಳಿಗೆ, ಕಾಂಕ್ರೀಟ್ ಮಹಡಿಗಳಿಗೆ, ಗ್ರಾನೈಟ್ ಗೋಡೆಗಳಿಗೆ ಮಿತಿ ಹಾಕಿ. ನಗರದ ಶೋಕಿಗಳನ್ನು ಗ್ರಾಮಕ್ಕೆ ತರಬೇಡಿ. ಹಿಂದಿನವರಂತೆ ನಿಮ್ಮ ಸಹಜ ಬದುಕಿಗೆ ಬೇಕಿದ್ದಷ್ಟು ಕಲ್ಲು, ಮಣ್ಣು, ಮರ, ಮರಳನ್ನು ಬಳಸಿ; ಆದರೆ ಅವುಗಳನ್ನು ದೋಚಿ ನಗರಗಳಿಗೆ ಸಾಗಿಸಲು ಬಿಡಬೇಡಿ. ಬೇಕಾಬಿಟ್ಟಿ ಭೂಪರಿವರ್ತನೆ ಮಾಡಬೇಡಿ. ನಿಸರ್ಗದ ಸೂಕ್ಷ್ಮ ನಿಯಮಗಳನ್ನು ಹಿರಿಯರಿಂದ, ಮೂಲನಿವಾಸಿಗಳಿಂದ ಕಲಿಯಿರಿ. ನದಿಮೂಲಗಳನ್ನು ರಕ್ಷಿಸಿ. ಮೀನು ಹಿಡಿಯಲು ಡೈನಮೈಟ್ ಬಳಸಬೇಡಿ. ಆಗಾಗ ‘ಮರಳು ರಜೆ’ ಘೋಷಣೆ ಮಾಡಿ. ಈ ವರದಿಯನ್ನು ನಿಮ್ಮ ಸ್ಥಳೀಯ ಭಾಷೆಗೆ ತರ್ಜುಮೆ ಮಾಡಿಸಿಕೊಂಡು ಪಂಚಾಯತ್ ಮಟ್ಟದಲ್ಲಿ ಚರ್ಚಿಸಿ ನೀವೇ ನಿಯಮ ಹಾಕಿಕೊಳ್ಳಿ. ಎಳೆಯರಿಗೆ ಪರಿಸರ ಸಂರಕ್ಷಣೆಯ, ಸುಸ್ಥಿರ ಬದುಕಿನ ಪಾಠ ಹೇಳಿ. -ಇಷ್ಟೇ ಗಾಡ್ಗೀಳ್ ಸಮಿತಿ ಹೇಳಿದ್ದು. ಆದರೆ ಆಗಿದ್ದು ಬೇರೆ. ವರದಿಯನ್ನು ಓದುವ ಮೊದಲೇ ಅದರಲ್ಲಿ ಹಾಗಿದೆ, ಹೀಗಿದೆ, ‘ಸಂಕ ಹಾಕುವಂತಿಲ್ಲ. ಬಾವಿ ಕೊರೆಯುವಂತಿಲ್ಲ, ಸ್ಥಳೀಯ ನಿವಾಸಿಗಳನ್ನು ಶಿಲಾಯುಗಕ್ಕೆ ತಳ್ಳುವ ಹುನ್ನಾರ ಇದು’ ಎಂದೆಲ್ಲ ಕೆಲವು ಔದ್ಯಮಿಕ ಗುತ್ತಿಗೆದಾರರು, ಆಡಳಿತ ಕಚೇರಿಗಳ ಕಡತಪಂಡಿತರು ಟೀಕಿಸಿದರು. ಆ ಹಿತ್ತಾಳೆಕಿವಿಯ ಮಾತು ದಿಲ್ಲಿಗೂ ಹೋಗಿ, ಇಡೀ ವರದಿ ಕಸದ ಬುಟ್ಟಿಗೆ ಸೇರಿತು. ಬದಲಿಗೆ ಅದರದ್ದೇ ದುರ್ಬಲ ರೂಪವೊಂದು ಕಸ್ತೂರಿ ರಂಗನ್ ವರದಿಯಾಗಿ ಬಂತು. ಅದನ್ನೂ ತರ್ಜುಮೆ ಮಾಡದೆ, ಶಾಸನ ಸಭೆಯಲ್ಲಿ ಚರ್ಚಿಸದೆ ‘ಸಾರಾ ಸಗಟಾಗಿ’ ತಿರಸ್ಕರಿಸಲು ರಾಜಕಾರಣಿಗಳು ಪಕ್ಷಾತೀತವಾಗಿ ಕೈ ಎತ್ತಿದರು. ದೋಚುಕೋರರಿಗೆ ಭರ್ಜರಿ ಜಯ ಸಿಕ್ಕಿತು (ಅಂಥ ಜಯಕ್ಕೆ ಇಂಗ್ಲಿಷ್‍ನಲ್ಲಿ ‘ಲ್ಯಾಂಡ್‍ಸ್ಲೈಡ್ ವಿಕ್ಟರಿ’ ಎನ್ನುತ್ತಾರೆ). ನಿಸರ್ಗವೂ ಲ್ಯಾಂಡ್‍ಸ್ಲೈಡ್ ಮೂಲಕವೇ ತನ್ನ ಶಕ್ತಿ ಪ್ರದರ್ಶನ ಮಾಡಿದೆ! ಆದರೆ ಮುಖಂಡರ ಮೇಲೆ ಮುನಿಸಿಕೊಳ್ಳುವ ಬದಲು ಅದು ಮತದಾರರನ್ನು ಚಚ್ಚುತ್ತಿದೆ.
ಈಗಿನ ಸಂಕಟ ಸರಮಾಲೆಯ ನಂತರ ಇನ್ನಷ್ಟು ತೊಂದರೆಗಳು ಬರಲಿವೆ. ಹಳ್ಳ, ಕೆರೆಕೊಳ್ಳಗಳೆಲ್ಲ ಮಾಯವಾಗಿವೆ. ಬೇಸಿಗೆಯಲ್ಲಿ ನೀರಿನ ಅಭಾವ, ಮುಂದಿನ ಮಳೆಗಾಲದಲ್ಲಿ ನೀರಿಗೆ ಸ್ಥಳಾಭಾವ. ಈಗೇನೋ ದೇಶವಿದೇಶಗಳಿಂದ ನೆರವಿನ ಪ್ರವಾಹವೇ ಹರಿದು ಬರುತ್ತಿದೆ. ಆದರೆ ಅವೆಲ್ಲ ತಾತ್ಕಾಲಿಕ. ಮಳೆ ಮುಗಿದ ನಂತರ ಮಣ್ಣೆತ್ತುವವರು, ಮನೆ ಕಟ್ಟುವವರು, ಬಡಗಿಗಳು, ಗಾರೆಯವರು, ನಲ್ಲಿ ಫಿಟ್ಟರ್‍ಗಳು, ಲೈನ್‍ಮನ್‍ಗಳು, ಬಾವಿ ತೋಡುವವರು -ಇಂಥ ಲಕ್ಷಾಂತರ ಶ್ರಮಜೀವಿಗಳು ಬೇಕಾಗುತ್ತಾರೆ. ಶತ್ರುವಿಲ್ಲದ ಈ ಸಮರಕ್ಕೆ ಶಸ್ತ್ರಗಳಿಲ್ಲದ ಕಾಲಾಳುಗಳು ಬೇಕಿದ್ದಾರೆ. ಎಲ್ಲಿಂದ ಬಂದಾರು ಅವರೆಲ್ಲ? ಕೂಲಿ ಮಾಡಬಲ್ಲ ಗಟ್ಟಿರಟ್ಟೆಯ ಯುವಜನರೆಲ್ಲ ನಗರ ಸೇರಿದ್ದಾರೆ. ಒಂದಿಡೀ ವರ್ಷ ಕಾಲೇಜುಗಳನ್ನೆಲ್ಲ ಮುಚ್ಚಿಸಿ ಸಂತ್ರಸ್ತರ ನೆರವಿಗೆ ಬರಿಗೈ ಸೈನ್ಯವನ್ನು ಕಳಿಸಲು ಸಾಧ್ಯವೆ? ಏನಿಲ್ಲ, ನಗರಗಳಿಂದ ಯಂತ್ರಗಳು ಬರಬೇಕಷ್ಟೆ.
ಅಲ್ಲಿಗೆ ಈ ಕತೆ ಹೊರಟಲ್ಲಿಗೇ ಮತ್ತೆ ಸೇರುತ್ತದೆ. ಕಾರಂತರು ಹೇಳಿದ್ದಕ್ಕಿಂತ ದೊಡ್ಡ ಸಂಖ್ಯೆಯಲ್ಲಿ ಜೆಸಿಬಿ, ಕ್ರೇನ್, ಡಂಪ್‍ಟ್ರಕ್, ಫೋರ್ಕ್‍ಲಿಫ್ಟ್, ಡ್ರಿಲ್ಲಿಂಗ್ ರಿಗ್, ಕಾಂಕ್ರೀಟ್ ಮಿಕ್ಸರ್, ಸ್ಕೂಪರ್ ಯಂತ್ರಗಳ ಸೈನ್ಯವೇ ಬರಲಿದೆ. ಡೀಸೆಲ್, ಡಾಂಬರು, ಸಿಮೆಂಟು, ಮರಳು, ಕಬ್ಬಿಣದ ಕಂಬಿಗಳ ದಿಬ್ಬಣದಿಂದಾಗಿಯೇ ಛಿದ್ರಗೊಂಡ ಪ್ರಕೃತಿ ಅದು. ಅಲ್ಲಿ ಮತ್ತೆ ನಾಗರಿಕ ಸಾಮ್ರಾಜ್ಯದ ಮರುಸ್ಥಾಪನೆಗೆಂದು ಡಬಲ್ ದಿಬ್ಬಣ ಬರಲಿದೆ. ಮುಂದಿನ ಮೂರು ವರ್ಷಗಳ ಕಾಲ ಮೆಗಾಲೂಟಿಯ ಮಾರಿಹಬ್ಬ ನಡೆಯಲಿದೆ; ಜಿಡಿಪಿ ಏರಲಿದೆ. ಅದೇತಾನೆ, ಅಭಿವೃದ್ಧಿಯ ಈ ಅಂಧಯುಗದ ಅಳತೆಗೋಲು?