ಮಧುಚಂದನ್ ತನ್ನ ಜನರ ಬದುಕು ಸಹ್ಯ ಮಾಡಲು ಬಂದಿದ್ದಾರೆ- ದೇವನೂರ ಮಹಾದೇವ

(ಮಂಡ್ಯದ ಸರ್ವೋದಯ ಪಕ್ಷದ ಅಭ್ಯರ್ಥಿಯಾಗಿ 19.4.2023ರಂದು ಮಧುಚಂದನ್ ಎಸ್.ಸಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ, ಪಕ್ಷದ ಹಿರಿಯರಾದ ದೇವನೂರ ಮಹಾದೇವ ಅವರು ನೆರೆದ ಸಭೆಯನ್ನು ಉದ್ದೇಶಿಸಿ ಆಡಿದ ಮಾತುಗಳ ಬರಹ ರೂಪ)
ಸಾಮಾನ್ಯವಾಗಿ ನಾನು, ಚುನಾವಣೆಯ ಟ್ರೆಂಡ್‌ಗಳ ಬಗ್ಗೆ ತಿಳಿದುಕೊಳ್ಳಲು ಯಾವುದೇ ಪಕ್ಷಕ್ಕೆ ಸೇರದೆ ಇರುವವರಲ್ಲಿ ವಿಚಾರಿಸುತ್ತೇನೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಬಗ್ಗೆ ಹತ್ತಾರು ಜನರನ್ನು ವಿಚಾರಿಸಿದೆ. ಬಹುತೇಕ ಮತದಾರರ ಅಭಿಪ್ರಾಯದಂತೆ- ಈ ಸಲ ಮಂಡ್ಯದಲ್ಲಿ ತ್ರಿಕೋನ ಸ್ಪರ್ಧೆ- ಎಂದಾಗಿತ್ತು. ಕಾಂಗ್ರೆಸ್‌, ಜೆಡಿಎಸ್‌, ಸರ್ವೋದಯ ಕರ್ನಾಟಕ ಪಕ್ಷ ಸಮಬಲದಲ್ಲಿ ಸೆಣಸಾಡುತ್ತಿವೆ ಎಂದು ಹೆಚ್ಚು ಜನ ಹೇಳಿದರು. ಬಿಜೆಪಿ ಬಗ್ಗೆ ಕೇಳಿದ್ದಕ್ಕೆ ನಾಲ್ಕನೇ ಸ್ಥಾನ ಅಂದರು. ನನಗೆ ಆಶ್ಚರ್ಯ, ಸಮಾಧಾನ ಆಯ್ತು. ಮತದಾರರು ಎಚ್ಚೆತ್ತಿದ್ದಾರೆ ಅನ್ನಿಸಿತು. ಭಾರತ ಮಾತೆ ಕಣ್ಣು ಬಿಟ್ಟಳು ಅನ್ನಿಸಿತು.
ಮತದಾರರ ನಾಡಿಮಿಡಿತ ಬಲ್ಲ ತಜ್ಞರು ಹೇಳುವಂತೆ ಎಲ್ಲಿ ತ್ರಿಕೋನ ಸ್ಪರ್ಧೆ ಅಥವಾ ಚತುಷ್ಕೋನ ಸ್ಪರ್ಧೆ ಇರುತ್ತದೊ ಅಲ್ಲಿ, ಸಮಾಜಮುಖಿ ಹೋರಾಟದ ಹಿನ್ನೆಲೆಯ ಸ್ಪರ್ಧಿ ಆಯ್ಕೆ ಆಗುವ ಸಾಧ್ಯತೆ ಹೆಚ್ಚು ಅನ್ನುತ್ತಾರೆ.
ಈ ಹಿನ್ನೆಲೆಯಲ್ಲಿ ನೋಡಿದಾಗ, ಗೆಳೆಯ ಮಧುಚಂದನ್‌ ಹಣ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಈತ ಫಾರಿನ್‌ನಲ್ಲೆ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇತರರಂತೆ ಸಂಭ್ರಮಿಸಿ ಇರಬಹುದಿತ್ತು. ತಾನು ಹುಟ್ಟಿದ ಊರನ್ನು ಮರೆತು ಬದುಕಬಹುದಿತ್ತು. ಈ ಮಧುಚಂದನ್‌, ತಾನು ಹುಟ್ಟಿದ ಊರು, ಮಂಡ್ಯದ ಮಣ್ಣಿನ ವಾಸನೆ, ಇಲ್ಲಿನ ಬೆಳೆಗಳ ಸೊಬಗು, ಇಲ್ಲಿ ಜನರ ಬದುಕು ಬವಣೆಗಳಲ್ಲಿ ಜೊತೆಗೂಡಲು ಬಂದಿದ್ದಾರೆ. ತನ್ನ ಜನರ ಬದುಕನ್ನು ಸಹ್ಯ ಮಾಡಲು ಬಂದಿದ್ದಾರೆ. ಈ ದಿಕ್ಕಲ್ಲಿ ಈಗಾಗಲೇ ಕ್ರಿಯಾಶೀಲರಾಗಿದ್ದಾರೆ. ಈ ಗುಣಕ್ಕಾಗಿಯೇ ಮಂಡ್ಯ ವಿಧಾನಸಭಾ ಕ್ಷೇತ್ರದ ಮಧುಚಂದನ್‌ ಮತ್ತು ಮೇಲುಕೋಟೆ ಕ್ಷೇತ್ರದ ದರ್ಶನ್‌ ಪುಟ್ಟಣ್ಣಯ್ಯ ಈ ಇಬ್ಬರನ್ನೂ ಅಪಾರ ಮೆಚ್ಚಿಗೆಯಿಂದ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತೇನೆ.
ನಾವು ನೆನಪಿಟ್ಟುಕೊಳ್ಳಬೇಕು- ಯಾವ ಅಧಿಕಾರ, ಸ್ಥಾನ ಪಡೆಯದಿದ್ದರೂ ಮಧು ಚಂದನ್‌ ತನ್ನ ಗೆಳೆಯರ ಸಹಕಾರದೊಡನೆ ಮಾಡಿರುವ ಕೆಲಸ ಕಾರ್ಯಗಳು ಒಂದೆರಡು ಅಲ್ಲ, ಲೆಕ್ಕವಿಲ್ಲದಷ್ಟು. ಉದಾಹರಣೆಗೆ- ಕೀರೆಮಡಿ ಕೂಟ, ಸಾವಯವ ರೈತ ಕೂಟಗಳನ್ನು ಸುಮಾರು 120ಕ್ಕೂ ಹೆಚ್ಚು ಹಳ್ಳಿಗಳಲ್ಲಿ ರಚಿಸಿದ್ದಾರೆ. ಹೆಚ್ಚಾಗಿ ತುಂಡು ಭೂಮಿ ರೈತರು. ಹತ್ತಾರು ಸಾವಿರ ಜನರು ಈ ಪ್ರಯೋಗದಿಂದ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಜೊತೆಗೆ ದಾನಿಗಳಿಂದ ನಾಟಿ ಹಸುಗಳನ್ನು ಪಡೆದು ಅದನ್ನು ಆಧಾರವಿಲ್ಲದ ಇಂತಹ ಹಳ್ಳಿಗಾಡಿನ ಜನರಿಗೆ ನೀಡುವ ಮೂಲಕ ಅವರ ಬದುಕಿಗೆ ಘನತೆ, ಸ್ವಾವಲಂಬನೆ ತಂದು ಕೊಟ್ಟಿದ್ದಾರೆ. ಇದು ನಿಜಕ್ಕೂ ಸದ್ದಿಲ್ಲದ ಕ್ರಾಂತಿ!
ಇನ್ನೂ ಒಂದು ಉದಾಹರಣೆ- ಮಂಡ್ಯ ಆರ್ಗ್ಯಾನಿಕ್‌ ಸಂಸ್ಥೆ ಸ್ಥಾಪಿಸಿ, ಸಾವಯವ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನ ಮಾಡಿ ಮಾರಾಟ ವ್ಯವಸ್ಥೆಯನ್ನು ಮಾಡಿ ರೈತರಿಗೆ ಸ್ವಲ್ಪವಾದರೂ ಅವರ ಬೆವರಿಗೆ ಬೆಲೆ ಸಿಗುವಂತಾಗಲು ಆಸರೆಯಾಗಿದ್ದಾರೆ. ಇದಲ್ಲದೆ ಮಂಡ್ಯ ಆರ್ಗ್ಯಾನಿಕ್ ಸಂಸ್ಥೆ ಸುಮಾರು 500ಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ನೀಡಿದೆ. ಪರೋಕ್ಷವಾಗಿ ಅನೇಕಾನೇಕ ರೈತಾಪಿಗೆ ನೇರವಾಗಿದ್ದಾರೆ. ಮಂಡ್ಯ ಜನತೆ ಬೇರಡೆಗೆ ಗುಳೆ ಹೋಗದಂತೆ ತಡೆದಿದ್ದಾರೆ. ಇದೇನು ಸಾಮಾನ್ಯವಾದ ಕೆಲಸವಲ್ಲ. ಜೊತೆಗೆ ಈ ನೆಲದ ಗ್ರಾಮೀಣ ಆಟದ ಸೊಗಸನ್ನು ಕಾಪಾಡಿಕೊಳ್ಳಲು ಕಬ್ಬಡಿ ಕೂಟವನ್ನೂ ಹುಟ್ಟುಹಾಕಿದ್ದಾರೆ. ತನ್ನನ್ನು ಜನ ಸಮುದಾಯಕ್ಕೆ ಅರ್ಪಿಸಿಕೊಂಡವರು ಮಾತ್ರ ಹೀಗೆಲ್ಲಾ ಇಷ್ಟೆಲ್ಲಾ ಮಾಡಲು ಸಾಧ್ಯ.
ಹಾಗೇ ಮಧುಚಂದನ್‌, ಎಲ್ಲರ ಗಮನವನ್ನು ತನ್ನತ್ತ ಸೆಳೆದಿದ್ದಾರೆ. ತನ್ನ ಕ್ಷೇತ್ರದ ಜನತೆಯ ಉದ್ಯೋಗಕ್ಕಾಗಿ ತನ್ನ ಉದ್ಯೋಗ ತ್ಯಜಿಸಿ ಬಂದು ದುಡಿಯುತ್ತಿದ್ದಾರೆ. ಜನರನ್ನು ಸ್ವಾವಲಂಬಿಗಳನ್ನಾಗಿಸಲು ತಳಪಾಯ ಹಾಕುತ್ತಿದ್ದಾರೆ. ಇವರಲ್ಲಿ ಬಣ್ಣ ಬಣ್ಣದ ಮಾತುಗಳಿಲ್ಲ. ಇವರ ಕೆಲಸ ಕಾರ್ಯ ಕ್ರಿಯೆಗಳು ಮಾತಾಡುತ್ತಿವೆ. ಎಷ್ಟೋ ಜನರಿಗೆ ತಿಳಿದಿಲ್ಲ. ಅಮೆರಿಕದ ಹಾರ್ವಡ್‌ ವಿಶ್ವವಿದ್ಯಾನಿಲಯದಲ್ಲಿ ಮಂಡ್ಯ ಆರ್ಗ್ಯಾನಿಕ್‌ ಕಾರ್ಯವೈಖರಿಯ ಬಗ್ಗೆ ಒಂದು ಪಾಠ ಇದೆ! ಮಂಡ್ಯ ಹಿರಿಮೆಯ ಕಿರೀಟಕ್ಕೆ ಒಂದು ನವಿಲುಗರಿ ಸಿಕ್ಕಿಸಿದಂತಾಗಿದೆ.
ಮಧುಚಂದನ್‌ರಂತಹ ಅಪರೂಪದ ರಚನಾತ್ಮಕ ರಾಜಕಾರಣಿ ಆಯ್ಕೆಯಾಗುವುದು ಮಂಡ್ಯಕ್ಕೆ ಮಾತ್ರವಲ್ಲ; ರಾಜ್ಯಕ್ಕೆನೆ ಅವಶ್ಯವಿದೆ. ಮಧುಚಂದನ್‌ ಎಂಬ ಕಾಯಕಯೋಗಿಗೆ ಮತನೀಡಿ ಗೆಲ್ಲಿಸಿದರೆ ಅದು ಮತದಾರರು ಗೆದ್ದಂತೆ.