ಬೆಟ್ಟಕ್ಕೆ ಸೀರೆ ಉಡಿಸುವಲ್ಲಿ… – ದೇವನೂರ ಮಹಾದೇವ

(ಮೈಸೂರಿನ “ಚಾಮುಂಡಿ ಬೆಟ್ಟ ಉಳಿಸಿ” ಆಂದೋಲನವು 2022ರ ಏಪ್ರಿಲ್ 3 ರಂದು, ದುಂಡು ಮೇಜಿನ ಸಭೆ ನಡೆಸಲಿದ್ದು, ಅದರ ಅಂಗವಾಗಿ ವಿವಿಧ ಗಣ್ಯರ ಅಭಿಪ್ರಾಯ  ಕೇಳಿ ದಾಖಲಿಸಿದ್ದು, ದೇವನೂರ ಮಹಾದೇವ ಅವರು ನೀಡಿದ ಹೇಳಿಕೆ ಹೀಗಿದೆ.)

‘ಪರಿಸರ’ ಅಂದರೆ ಮನುಷ್ಯನ ಸುತ್ತಮುತ್ತಲು ಎಂದು ಧ್ವನಿಸುತ್ತದೆ. ಈ ಗ್ರಹಿಕೆಯನ್ನೇ ಬದಲಿಸಿಕೊಳ್ಳಬೇಕೇನೊ ಎಂದು ನನಗನ್ನಿಸುತ್ತದೆ. ‘ಪ್ರಕೃತಿ-ಪರಿಸರ’ (ಜೀವಸಂಕುಲ) ಎಂದುಕೊಂಡರೆ ಮನುಷ್ಯನೂ ‘ಪ್ರಕೃತಿ-ಪರಿಸರ’(ಜೀವಸಂಕುಲ)ದಲ್ಲಿ ಉಳಿದೆಲ್ಲಾ ಜೀವಿಗಳಂತೆ ತಾನೂ ಒಂದು ಎಂಬಂತೆ ಗ್ರಹಿಸುತ್ತಾನೆ. ಈಗ ಚಾಮುಂಡಿ ಬೆಟ್ಟಕ್ಕೆ ಬಂದರೆ, ಮೈಸೂರು ನಗರ ಮತ್ತು ಅಲ್ಲಿನ ಮನುಷ್ಯರು ಚಾಮುಂಡಿ ಬೆಟ್ಟವನ್ನು ತಮ್ಮ ‘ಸ್ವತ್ತು’ ಎಂದು ಭಾವಿಸುತ್ತದೆ. ಆದರೆ ಚಾಮುಂಡಿಬೆಟ್ಟ? ಮೈಸೂರು ನಗರ ಮತ್ತು ಅಲ್ಲಿನ ಜೀವಿಗಳನ್ನು ತನ್ನ ದೇಹದ, ಜೀವದ ಭಾಗ ಅಂದುಕೊಂಡಿರಬಹುದಲ್ಲ? ಜೀವಸಂಕುಲದ ಗ್ರಹಿಕೆಯ ಆದಿವಾಸಿಗಳು, ಮೂಲ ನಿವಾಸಿಗಳು ಹೀಗೆ ಅನುಭವಿಸಿ ಭಾವಿಸುತ್ತಾರೆ ಎಂದು ಅಂದುಕೊಂಡಿದ್ದೇನೆ. ಬಹುಶಃ ಇದು ಹೊಕ್ಕಳುವಿನಿಂದ ಕಾಣುವ ಪರಿ. ಈ ಎತ್ತರಕ್ಕೆ ನಾವು ಬೆಳೆಯಬೇಕಾಗಿದೆ.
ಒಟ್ಟಿನಲ್ಲಿ, ‘ಪ್ರಕೃತಿ-ಪರಿಸರ’ದಿಂದ ಬೇರ್ಪಟ್ಟ ಮನುಷ್ಯ, ಜಗತ್ತನ್ನು ಹಾಗೂ ಈ ಗ್ರಹವನ್ನು ತನ್ನ ಕೈಅಳತೆಗೆ ತೆಗೆದುಕೊಂಡು ಆಳ್ವಿಕೆ ನಡೆಸುವ ದಾಹಕ್ಕೆ ಬಿದ್ದು ‘ಪ್ರಕೃತಿ-ಪರಿಸರ’ವನ್ನು ಬೇಯಿಸುತ್ತಿದ್ದಾನೆ. ತಾನೂ ಬೇಯುತ್ತಿದ್ದಾನೆ. ಬುದ್ಧನ ಒಂದು ಮಾತು– ‘ತೃಷ್ಣಾ (Craving) ದುಃಖಕ್ಕೆ ಕಾರಣ’ ಅಂತ. ಇದು ಕನ್ನಡದಲ್ಲಿ ‘ಅತಿಯಾಸೆ (ದಾಹ) ದುಃಖಕ್ಕೆ ಕಾರಣ’ ಅಂತಾಗುತ್ತದೆ. ಇಂದು ಎಲ್ಲವೂ ಅತಿಯಾಗಿ ದುಃಖವೂ ಅತಿಯಾಗುತ್ತಿದೆ.