ಬಾಲ್ಯ ಬಂಧನದಿಂದ ಪಾರಾಗಲಿ ಬಾಲೆಯರು-ಪಿ. ಓಂಕಾರ್


                                                          child marriage

ಹನ್ನೆರಡು ವರ್ಷದ ಹಿಂದೆ. ಹತ್ತನೆ ತರಗತಿಯನ್ನು ಶೇ.69 ಅಂಕಗಳೊಂದಿಗೆ ಪಾಸು ಮಾಡಿದ್ದ ಬೆಂಗಳೂರಿನ ಹದಿನಾಲ್ಕರ ಬಾಲೆಗೆ ಎಲ್ಲರಂತೆ ಓದನ್ನು ಮುಂದುವರಿಸುವ ಅದಮ್ಯ ಹಂಬಲ. ಆದರೆ,ಹೆತ್ತವರಿಗೆ ಮಗಳನ್ನು ಮದುವೆ ಮಾಡಿ ಕೈ ತೊಳೆದುಕೊಳ್ಳುವ ಆತುರ. ಮೂವತ್ತೈದು ದಾಟಿದ್ದ ಸೋದರ ಮಾವನೇ ವರ. ಬಾಲಕಿಯ ಅಮ್ಮನಿಗೆ ಮಗಳು ತನ್ನ ತವರು ಸೇರಬೇಕೆಂಬ ಹಠ. ಮದುವೆ ಮಾಡಿದ್ರೆ ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಆಕೆ ಎಚ್ಚರಿಸಿದರೆ, ಒಪ್ಪಲಿಲ್ಲ ಅಂದ್ರೆ ನಾವೆಲ್ಲರೂ ಸಾಯ್ತೀವಿ ಎಂಬುದು ಅಮ್ಮನ ಪ್ರತಿ ಬೆದರಿಕೆ. ಬಾಲಕಿ ಮಾಂಗಲ್ಯ ಬಂಧನಕ್ಕೆ ಎಳೆಯ ಕೊರಳನ್ನೊಡ್ಡಿದಳು. ಅಜ್ಜಿ ಮನೆಯಾದರೂ ಅತ್ತೆ ಮನೆಯ ಹಿಂಸೆ ತಪ್ಪಲಿಲ್ಲ. ಕಾಲೇಜಿಗೆ ಸೇರಿಸುವ ಭರವಸೆಯೂ ಈಡೇರಲಿಲ್ಲ. ಆಷಾಢದಲ್ಲಿ ತವರಿಗೆ ಬಂದ ‘ಬಾಲ ವಧು’ ಮನೆ ತೊರೆದಳು.‘‘ಸಾಯಲ್ಲ. ಏನನ್ನಾದರು ಸಾಸಿ ಮನೆಗೆ ಬರುವೆ’’ಎಂದು ಪತ್ರ ಬರೆದಿಟ್ಟಿದ್ದಳಾದರು,ಹೊರಟಿದ್ದು ಸಾವಿಗೆ ಶರಣಾಗಲೆಂದೇ !

ತಾನು ಓದಿದ ಹೈಸ್ಕೂಲು ಸಮೀಪದ ಕೆರೆ ದಂಡೆ ಮೇಲೆ ತಲೆ ಸುತ್ತಿ ಬಿದ್ದಿದ್ದವಳನ್ನು ಶಿಕ್ಷಣ ಸಂಸ್ಥೆಯ ಸಿಬ್ಬಂದಿ ರಕ್ಷಿಸಿ, ಸ್ವಯಂ ಸೇವಾ ಸಂಘಟನೆಯೊಂದರ ಮಡಿಲಿಗೆ ಒಪ್ಪಿಸಿದರು. ಕಠಿಣ ಪರಿಶ್ರಮದ ಮಧ್ಯೆ ಓದುವ ಕನಸು ಅರಳಿತು. ಏಳು ವರ್ಷದ ನಂತರ, ಎಲ್‌ಎಲ್‌ಬಿ ಅಂತಿಮ ಹಂತದಲ್ಲಿದ್ದಾಗಲಷ್ಟೆ ಹೆತ್ತವರ ಮುಖ ನೋಡಿದ್ದು. ಗಂಡ ಎನ್ನಿಸಿಕೊಂಡಿದ್ದವನು ಮತ್ತೊ
ಂದು ಮದುವೆಯಾಗಿ ಮಕ್ಕಳನ್ನು ಪಡೆದಿದ್ದ. ಒಲ್ಲದ ಮದುವೆಯಲ್ಲಿ ಕಳೆದು ಹೋಗಲಿದ್ದ ತನ್ನ ಭವಿಷ್ಯವನ್ನು ತಾನೇ ಬದಲಿಸಿಕೊಂಡವಳು ಎರಡೂವರೆ ವರ್ಷದಿಂದ ವಕೀಲಿಕೆ ಮಾಡುತ್ತಿದ್ದರೂ ಗುರುತನ್ನು ಬಹಿರಂಗ ಪಡಿಸಲಿಚ್ಚಿಸಳು.‘‘ನನ್ನ ಪಾಲಿಗೆ ಬಾಲ್ಯವೆ ಇರಲಿಲ್ಲ. ಪಡಬಾರದ ಕಷ್ಟಪಟ್ಟೆ. ಚುಚ್ಚು ಮಾತು,ಕೆಟ್ಟ ನೋಟಗಳು ಮನಸ್ಸನ್ನಿರಿದವು. ನನಗಿಂತ ಕಡು ಕಷ್ಟದಲ್ಲಿದ್ದವರು,ಬಾಲ ವಿಧವೆಯರನ್ನು ಕಂಡು ನನ್ನದೇನೂ ಹೆಚ್ಚಲ್ಲ ಅನ್ನಿಸಿದ್ದಿದೆ. ಕನಸುಗಳಿನ್ನೂ ಬಾಕಿ ಇವೆ. ನನ್ನಂತೆ ಸಂಕಟಕ್ಕೆ ತುತ್ತಾದವರಿಗೆ ನೆರವಾಗುವಂತ ಅಕಾರಿಯಾಗಬೇಕು. ನಂತರ ನನ್ನ ಬದುಕಿನ ಕತೆಯನ್ನು ಬಹಿರಂಗ ಹೇಳಿಕೊಳ್ಳುವೆ’’ಎಂದು ಶಪಥ ತೊಟ್ಟಳು ಈ ಅನಾಮಿಕೆ.

ಹೆತ್ತ ಮಕ್ಕಳ ಭಷ್ಯವನ್ನು ಬಾಲ್ಯದಲ್ಲೆ ಕೊಂದು, ಮದುವೆಯ ಬಂಧನಕ್ಕೆ ನೂಕುವ ಎಲ್ಲರ ಆತ್ಮವನ್ನು ತಟ್ಟುವಂತಿದೆ ಈ ದಿಟ್ಟೆಯ ಕತೆ. ಸಾಮಾಜಿಕ ಪರಿವರ್ತನಾ ಜನಾಂದೋಲನ ಹಾಗೂ ‘ಮಕ್ಕಳ ಹಕ್ಕುಗಳು ಮತ್ತು ನೀವು’ ಸಂಸ್ಥೆಗಳು ಈಚೆಗೆ ಪ್ರಕಟಿಸಿದ ವರದಿ ಸಾಮಾಜಿಕ ಪಿಡುಗಿನ ಇನ್ನೊಂದು ಮುಖವನ್ನು ತೆರೆದಿಟ್ಟಿದೆ. ಹಲವು ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಬಾಲ್ಯವಿವಾಹಗಳಲ್ಲಿ ಶೇ.29ರಷ್ಟು ವಿಚ್ಛೇದನದಲ್ಲಿ ಅಂತ್ಯಗೊಳ್ಳುತ್ತಿವೆ. 11 ರಿಂದ 13 ವಯಸ್ಸಿನ ಬಾಲಕಿಯರ ಮದುವೆಗಳಲ್ಲಿ ಶೇ.39ರಷ್ಟು ವಿಚ್ಛೇದನ ಇಲ್ಲವೆ ಬಾಲ ವೈಧವ್ಯ ಸಂಭವಿಸುತ್ತಿದೆ. ನಂಜನಗೂಡಿನ ಅಂಗನವಾಡಿ ಕಾರ‌್ಯಕರ್ತೆ ತನ್ನ ಮಗಳ ಕುರಿತು ನಿರ್ಭಾವುಕವಾಗಿ ಹೇಳಿದ್ದನ್ನು ಕೇಳಿ:‘‘ಆಕೆಗೆ 14 ತುಂಬುತ್ತಿದ್ದಂತೆ ಮದುವೆ ಮಾಡಿದೆವು. ಎರಡು ವರ್ಷದಲ್ಲಿ ಎರಡು ಮಕ್ಕಳಾದವು. ಮೂರನೆ ವರ್ಷ ಆಕೆಯ ಗಂಡ ರಸ್ತೆ ಅಪಘಾತದಲ್ಲಿ ಮೃತಪಟ್ಟ’’. ಪ್ರಾಪ್ತ ವಯಸ್ಸಿಗೆ ಬರುವ ಮೊದಲೆ ಪುಟ್ಟ ವಿಧವೆ ಬದುಕಿನ ಮುಕ್ಕಾಲು ಸಂಕಟ ಅನುಭವಿಸಿದ್ದಾಳೆ. ಆಕೆ ಪಾಲಿಗೆ ಉಳಿದಿರುವ ಜವಾಬ್ದಾರಿ ಅತ್ತೆ ಮನೆಯಲ್ಲಿ ದುಡಿಮೆ,ಮಕ್ಕಳನ್ನು ಬೆಳೆಸುವುದು.

ಇದು ಒಬ್ಬಿಬ್ಬರ ಕತೆಯಷ್ಟೆ ಅಲ್ಲ. ದ.ಕನ್ನಡ, ಉಡುಪಿಯಂತ ಜಿಲ್ಲೆಗಳ ಹೊರತು ಉಳಿದೆಲ್ಲಡೆ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿದರೆ ನೂರಾರು ಹೆಣ್ಮಕ್ಕಳ ಮುಖದಲ್ಲಿ ನೋವಿನ ಗೆರೆಗಳು ಢಾಳಾಗಿ ಗೋಚರಿಸುತ್ತಿವೆ. ಮೈಸೂರಿನಂತ ಸಾಂಸ್ಕೃತಿಕ ಪ್ರದೇಶದ ಸೆರಗಿನಲ್ಲಿಯೇ ಪಿಡುಗು ಜೀವಂತ. ಸಮೀಕ್ಷೆ ಪ್ರಕಾರ ಕಲಬುರ್ಗಿ, ರಾಯಚೂರು,ಕೊಪ್ಪಳ ಜಿಲ್ಲೆಗಳಲ್ಲಂತೂ ಶೇ.70ಕ್ಕಿಂತ ಹೆಚ್ಚು ಮದುವೆಗಳು ಬಾಲ್ಯವಿವಾಹ. ತಮ್ಮದಲ್ಲದ ತಪ್ಪಿಗಾಗಿ ಬಾಲ್ಯದ ಸೊಗಸನಿಂದ ವಂಚಿತರು, ಆಡುವ ವಯಸ್ಸಲ್ಲಿ ಮಕ್ಕಳನ್ನು ಹೆತ್ತು ಅನಾರೋಗ್ಯಕ್ಕೆ ತುತ್ತಾದವರು, ಕುಡಿತ ಇತ್ಯಾದಿ ಕಾರಣಕ್ಕೆ ಗಂಡ ಜೀವ ಬಿಟ್ಟರೂ ‘ಗಂಡನನ್ನು ತಿಂದುಕೊಂಡವಳು’ ಎಂಬ ಕಟಕಿಗೆ, ಕೌಟುಂಬಿಕ ಹಿಂಸೆ,ಲೈಂಗಿಕ ದೌರ್ಜನ್ಯಕ್ಕೆ  ಜೀವನ ಪರ‌್ಯಂತ ಗುರಿಯಾಗುವವರು, ಮಾರಾಟದ ಸರಕಾಗಿ ಪರಿಣಮಿಸಿದವರು…ಹೀಗೆ ಒಳಗೇ ಸುಟ್ಟುಕೊಳ್ಳುವ ಈ ಅಭಾಗಿನಿಯರ ನಿಟ್ಟುಸಿರು ಯಾರ ಒಳಗನ್ನೂ ಸುಡುತ್ತಿಲ್ಲ. ಅಧ್ಯಯನ ಆಸಕ್ತಿಯಿಂದ ಉ.ಕರ್ನಾಟಕದ ಹಲವೆಡೆ ಸಂಚರಿಸಿದ ಮಳೆಯರು ಮತ್ತು ಮಕ್ಕಳ ಹಕ್ಕು ಹೋರಾಟಗಾರ್ತಿ ರೂಪಾ ಹಾಸನ ಅವರ ಪ್ರಕಾರ, ಅಲ್ಲಿ ಮಾತಿಗೆ ತೊಡಗುವ ಹೆಣ್ಮಕ್ಕಳಲ್ಲಿ ಹಲವರು ತಮ್ಮ ಗಂಡನ ಕುರಿತು ಹೇಳುವ ಒಂದೇ ಪದ ‘ತೊರೆದು ಹೋಗ್ಯಾನ್ರೀ’.ಬದುಕು ಮುರಿದು ಬಿದ್ದಿದೆ ಎನ್ನುವುದಕ್ಕಿಂತ ಗಂಭೀರ ಕಷ್ಟಗಳ ಬೆಂಕಿಯಲ್ಲಿ ಬಿದ್ದಿರುವ ಈ ಹೆಣ್ಮಕ್ಕಳು ಗಂಡನೆನಿಸಿಕೊಂಡಿದ್ದವನು ತಮ್ಮನ್ನು ನಡು ನೀರಿನಲ್ಲಿ ಕೈ ಬಿಟ್ಟು ಹೋಗಿದ್ದನ್ನು ಸಲೀಸು ಹೇಳಿ,ದೈನಂದಿನ ಉಸಾಬರಿಯಲ್ಲಿ ತೊಡಗಿಸಿಕೊಳ್ಳುವಷ್ಟು ಮನಸ್ಸನ್ನು ಕಗ್ಗಲ್ಲು ಮಾಡಿಕೊಂಡಿದ್ದಾರೆ.

ನಿಜ, ಪ.ಜಾತಿ,ಪಂಗಡ,ಬುಡಕಟ್ಟು ಮತ್ತು ಹಿಂದುಳಿದ ಜನ ಸಮುದಾಯಗಳ ಬಡ ಕುಟುಂಬಗಳಲ್ಲಿ ಈ ಸಮಸ್ಯೆಹೆಚ್ಚು. ಅನಕ್ಷರತೆ,ಬಡತನ,ನಂಬಿಕೆ,ಮೌಢ್ಯ,ಮಗಳ ಮದುವೆ ಮಾಡಿ ಜವಾಬ್ದಾರಿ ಇಳಿಸಿಕೊಳ್ಳುವ ಬೇಜವಾಬ್ದಾರಿ ಮನಸ್ಥಿತಿ ಇದಕ್ಕೆ ಕಾರಣ. ದಶಕಗಳಿಂದಲೂ ಹಲವು ಮಹನೀಯರು ಧ್ವನಿ ಎತ್ತಿದ್ದಾರೆ. ಕಾನೂನನ್ನು ಕಠಿಣ ಗೊಳ್ಳುತ್ತಲೇ ಇದೆ.ಜಾಗೃತಿ ಪ್ರಯತ್ನಗಳೂ ನಡೆಯುತ್ತಿವೆ. ಆದರೂ,ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆಯಂತೆ ವಿಶ್ವದಲ್ಲಿ ನಿತ್ಯ ಸುಮಾರು 39 ಸಾವಿರ ಬಾಲ್ಯವಿವಾಹ ನಡೆಯುತ್ತಿವೆ.ಯುನಿಸ್ೆ ಪ್ರಕಾರ 20 ರಿಂದ 24 ವಯಸ್ಸಿನ ವಿವಾಹಿತ ಮಳೆಯರಲ್ಲಿ ಶೇ.47ಕ್ಕಿಂತ ಹೆಚ್ಚಿನವರು ಅಪ್ರಾಪ್ತ ವಯಸ್ಸಿನಲ್ಲೇ ಕೊರಳೊಡ್ಡಿದವರು. ಕರ್ನಾಟಕದಲ್ಲಿ ಈ ಪ್ರಮಾಣ ಶೇ.50.2ಕ್ಕಿಂತ ಹೆಚ್ಚು ಎನ್ನುತ್ತದೆ ಡಿಎಲ್ಎಚ್‌ಎ್ ಸಮೀಕ್ಷೆ. ಈ ಪೈಕಿ ಗ್ರಾಮೀಣರೆ (ಶೇ.54.3)ಹೆಚ್ಚು. ಇದರಲ್ಲಿ ಶೇ.29 ರಿಂದ 30ರಷ್ಟು ಹೆಣ್ಮಕ್ಕಳು ವಿಚ್ಛೇದನಕ್ಕೆ ಇಲ್ಲವೆ ಬಾಲ ವೈಧವ್ಯಕ್ಕೆ ತುತ್ತಾಗುತ್ತಾರೆನ್ನುವುದು ಗಂಭೀರ ಸಂಗತಿ. ಆದರೆ,ಕುರುಳ ಕುಡಿಗಳನ್ನೆ ನೋವಿಗೆ ಧಾರೆ ಎರೆಯುವ ಕಡುಬಡವರ ಮೇಲೆ ಕೇಸು ಹಾಕಿ ಬಂಸಿದರೆ ಗುಬ್ಬಿ ಮೇಲೆ ಬ್ರಹ್ಮಾಸ ಪ್ರಯೋಗಿಸಿದಂತಾಗುತ್ತದೆಂದು ಅಕಾರಿಗಳು ಮುಚ್ಚಳಿಕೆ ಬರೆಸಿಕೊಂಡು ಬಿಡುತ್ತಾರೆ. ಹೀಗೆ ಬರೆದುಕೊಟ್ಟವರೆ ರಾತ್ರೋರಾತ್ರಿ ಕದ್ದು ಮುಚ್ಚಿ ಮದುವೆ ಮಾಡಿ ಕೈ ತೊಳೆದುಕೊಳ್ಳುವುದೂ ಇದೆ. ಈ ವಿಷಯದಲ್ಲಿ ಏನು ಮಾಡಿದರೂ ಅಮಾನವೀಯ ಎನ್ನಿಸುವ ಸಂದಿಗ್ಧತೆ.

ಕಾನೂನು ಅಸದಿಂದಷ್ಟೆ ಇಂಥ ಸಾಮಾಜಿಕ ಪಿಡುಗಿಗೆ ಉತ್ತರ ಕಂಡುಕೊಳ್ಳಲಾಗದೆನ್ನುವುದು ಇದರರ್ಥ.ಈ ಹಿನ್ನೆಲೆಯಲ್ಲಿ ಮೈಸೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ‘ವಿಧವಾ ಮರು ವಿವಾಹ’ ಪ್ರಯೋಗಕ್ಕೆ ಮುಂದಾಗಿದೆ.‘‘ಅಂಗನವಾಡಿ ಶಿಕ್ಷಕಿಯರು,ಬಿಸಿಯೂಟ ಕಾರ‌್ಯಕರ್ತೆಯರೂ ಸೇರಿ ಜಿಲ್ಲೆಯಲ್ಲಿ ಶೇ.10ರಿಂದ 20ರಷ್ಟು ಸಣ್ಣ ವಯಸ್ಸಿನ ವಿಧವೆಯರು, ವಿಚ್ಛೇದಿತ ಮಳೆಯರಿದ್ದಾರೆ. ಇವರ ಬದುಕಿನಲ್ಲಿ ಭರವಸೆಯನ್ನು ಮರು ಅರಳಿಸುವ ಉದ್ದೇಶ ನಮ್ಮದು’’ಎನ್ನುತ್ತಾರೆ ಇಲಾಖೆ ಉಪ ನಿರ್ದೇಶಕಿ ಕೆ.ರಾಧಾ. ಉನ್ನತಾಕಾರಿಗಳ ಒಪ್ಪಿಗೆ ಪಡೆದು ಪ್ರಕಟಣೆ ಹೊರಡಿಸುತ್ತಿದ್ದಂತೆ ಹನ್ನೆರಡಕ್ಕೂ ಹೆಚ್ಚು ಜನರು ‘ನಾವು ಸಿದ್ಧ’ ಎಂದು ಅರ್ಜಿ ಸಲ್ಲಿಸಿದ್ದಾರೆ. ಅಭಾಗಿನಿಯರ  ವಯಸ್ಸು,ಮಕ್ಕಳು,ಪೋಷಕರ ಹಿನ್ನೆಲೆಯ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಂಗನವಾಡಿ ಶಿಕ್ಷಕಿ, ಸಹಾಯಕಿಯರನ್ನು ನೇಮಿಸಿಕೊಳ್ಳುವಾಗ ಚಿಕ್ಕ ವಯಸ್ಸಿನ ವಿಧವೆಯರಿಗೆ ಆದ್ಯತೆ ನೀಡಿ, ಅವರ ಮರು ವಿವಾಹಕ್ಕೆ ಪೋಷಕರ ಮನವೊಲಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.

ಸಿಂಗಲ್ ಪೇರೆಂಟಿಂಗ್, ಲೀವಿಂಗ್ ಟುಗೆದರ್ ಕಲ್ಪನೆಗಳು ವಿಸ್ತರಿಸುತ್ತಿರುವ,ಹೆಣ್ಣು ಸಬಲೆ ಎಂದು ಸ್ವಯಂ ನಿರೂಪಿಸುತ್ತಿರುವ ಕಾಲದಲ್ಲಿ ಆಕೆಗೆ ಮದುವೆಯೆ ಅಂತಿಮ ಸತ್ಯವಲ್ಲ ಎನ್ನುವುದು ನಿಜ. ಸಣ್ಣ ಪ್ರಾಯದಲ್ಲೆ ವಿಧವೆಯಾದ ತಮ್ಮ ಮಗಳು/ ಸೊಸೆಗೆ ತಾವೇ ಮುಂದೆ ನಿಂತು ಮದುವೆ ಮಾಡಿಸಿ,ವಿಶಾಲ ಮನೋಭಾವ ಮೆರೆದ ಪೋಷಕರೂ ನಮ್ಮಲ್ಲಿದ್ದಾರೆ. ಆದರೆ,
ಹಲವು ಚೌಕಟ್ಟಿನ ಗ್ರಾಮೀಣ ಸಾಮಾಜಿಕ ಸಂದರ್ಭದಲ್ಲಿ ಇಂಥೆಲ್ಲ ಸುಧಾರಣೆಯ ಬೀಜ ಬಿತ್ತುವುದು ಸುಲಭವೇನಲ್ಲ. ಆದ್ದರಿಂದ, ಪುಟ್ಟ ವಿಧವೆಯರ ಸೃಷ್ಟಿಗೆ ಕಾರಣವಾದ ಪಿಡುಗಿಗೆ ‘ವಿಧವಾ ಮರು ವಿವಾಹ’ವನ್ನು ಪ್ರತೌಷಧವನ್ನಾಗಿಸುವ ಈ ಪ್ರಯೋಗ ಸರ್ಕಾರದ ಕಾರ‌್ಯಕ್ರಮವಾಗಿ ಎಲ್ಲೆಡೆ ವಿಸ್ತರಿಸಿ,ಪ್ರೋತ್ಸಾಹದಾಯಕ ಯೋಜನೆಗಳನ್ನು ಪ್ರಕಟಿಸಿದರೆ ಪರಿಣಾಮಕಾರಿ ಎನ್ನಿಸಬಹುದು. ಜೊತೆಗೆ,‘‘ಹೆಣ್ಮಕ್ಕಳು ಹೊರೆ ಎನ್ನುವಂತ ಸ್ಥಿತಿ ಇರಬಾರದು. ಹಳ್ಳಿಗಳಲ್ಲಿ ಗುಡಿ ಕೈಗಾರಿಕೆ, ವೃತ್ತಿ ತರಬೇತಿ ಮೂಲಕ ಆರ್ಥಿಕ ಸ್ವಾವಲಂಭನೆ ಸಾಧಿಸಿದರೆ ಸಮಸ್ಯೆಗೆ ಉತ್ತರ ದೊರೆತೀತು. ವಿಧವೆಯರು,ವಿಚ್ಛೇದಿತೆಯರ ಸ್ವಾವಲಂಭನೆಯೂ ಸಾಧ್ಯವಾಗಬಹುದು’’ಎನ್ನುತ್ತಾರೆ ರೂಪ ಹಾಸನ. ಜೂ.23ರಂದು ನಡೆದ 6ನೇ  ಅಂತಾರಾಷ್ಟ್ರೀಯ ವಿಧವೆಯರ ದಿನಾಚರಣೆಯ ಧ್ಯೇಯ ವಾಕ್ಯ‘ಎಂದಿಗೂ ಒಂಟಿಯಲ್ಲ’. ಹಲವು ನೆಲೆಯ ಸುಧಾರಣಾ ಕ್ರಮಗಳ ಮೂಲಕ ಈ ಧ್ಯೇಯವನ್ನು ನಿಜವಾಗಿಸಲು ವ್ಯವಸ್ಥೆ ಒಟ್ಟು ಪ್ರಯತ್ನ ಹಾಕಬೇಕು.

ಆರಂಭದಲ್ಲಿ ಉಲ್ಲೇಖಿಸಿದ ಅನಾಮಿಕೆಯ ಕತೆಯನ್ನು ಕೇಳದೆಯೂ, ‘ಸೋದರ ಮಾವ’ನಿಗೆ ರಾತ್ರೋರಾತ್ರಿ ಕೊರಳೊಡ್ಡಿದ್ದ ಹುಣಸೂರು ತಾಲೂಕಿನಲ್ಲಿ ಬಾಲಕಿಯೊಬ್ಬಳು ಈಚೆಗೆ ಹೇಗೋ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಕಾರಿಯನ್ನು ಸಂಪರ್ಕಿಸಿ ಒತ್ತಾಯದ ಬಾಲ್ಯವಿವಾಹ ಬಂಧನದಿಂದ ಬಿಡುಗಡೆ ಪಡೆದು ಓದಿನೆಡೆಗೆ ಮುಖ ಮಾಡಿದ್ದಾಳೆ. ಗ್ರಾಮೀಣ ಪ್ರದೇಶದ ಶಾಲೆ, ಕಾಲೇಜುಗಳಲ್ಲಿ ಅರಿವು ಮತ್ತು ‘ಬಾಲ್ಯಬಂಧನ’ದಿಂದ ತಪ್ಪಿಸಿಕೊಳ್ಳುವ ಹೊರ ದಾರಿಗಳನ್ನು ದೊಡ್ಡ ಮಟ್ಟದಲ್ಲಿ ಪಸರಿಸಿದರೆ,ನಮ್ಮ ನಡುವೆ ಇಂಥ ಮತ್ತಷ್ಟು ದಿಟ್ಟೆಯರು ಕಾಣಿಸಿಕೊಂಡಾರು.