“ಬಾಪೂ”ಬಹುಮಾಧ್ಯಮ ರಂಗಪ್ರಸ್ತುತಿಗಾಗಿ, ದೇವನೂರ ಮಹಾದೇವ ಅವರ ಮಾತುಗಳು-ಸಂದರ್ಶಕರು: ಎನ್.ಎಸ್.ಶಂಕರ್

[ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಾಗಿ “ಬಾಪೂ” ಎಂಬ ವಿಶಿಷ್ಟ ಮತ್ತು ಅಪರೂಪದ ಬಹುಮಾಧ್ಯಮ ರಂಗಪ್ರಸ್ತುತಿ ಪ್ರದರ್ಶನಗೊಂಡಿತು. ಅದರ ಪರಿಕಲ್ಪನೆ, ರಚನೆ ಮತ್ತು ನಿರ್ದೇಶನ ಚಿಂತಕರೂ ಹಾಗೂ ಖ್ಯಾತ ಪತ್ರಕರ್ತರೂ ಆದ ಎನ್.ಎಸ್.ಶಂಕರ್ ಅವರದು. ಆ ರಂಗಪ್ರಸ್ತುತಿಗಾಗಿ, ಎನ್.ಎಸ್.ಶಂಕರ್ ಅವರು ದೇವನೂರ ಮಹಾದೇವ ಅವರನ್ನು ಮಾತನಾಡಿಸಿದ್ದು, ಅದರ ಕೆಲ ತುಣುಕುಗಳು ಇಲ್ಲಿದೆ.  ನಮ್ಮ ಬನವಾಸಿಗಾಗಿ ವಿಡಿಯೋ ನೀಡಿದ  ಎನ್.ಎಸ್.ಶಂಕರ್ ಅವರಿಗೆ ಕೃತಜ್ಞತೆಗಳು]


ರಂಗಪ್ರಸ್ತುತಿಯ ಉದ್ದೇಶ ಕುರಿತ ಮಾಹಿತಿ;

ಯಾಕೆ?
ಇಡೀ ಯುಗವನ್ನೇ ತಮ್ಮ ನಡಿಗೆಯಿಂದ ಆವರಿಸಿದ್ದರು ಮಹಾತ್ಮ ಗಾಂಧಿ. ಆದರೆ ಸ್ವಾತಂತ್ರ್ಯ ಹತ್ತಿರವಾದಾಗ ಅವರು ತಮ್ಮ ಅನುಯಾಯಗಳ ಪಾಲಿಗೇ ದೂರದ ತತ್ವವಾಗಿ ಹೋದರು ಎನ್ನುತ್ತದೆ ಚರಿತ್ರೆ. ನಾಡು ಅವರನ್ನು ಪೂಜಿಸಿತು; ಆದರೆ ಅವರ ಹಾದಿಯಲ್ಲಿ ಹೆಜ್ಜೆ ಇಡಲು ನಿರಾಕರಿಸಿತು. ಚರಿತ್ರೆ ಎಷ್ಟೆಂದರೂ ನಿಷ್ಕರುಣಿ….
ಆದರೆ ವರ್ತಮಾನ ಇನ್ನೂ ನಿಷ್ಕರುಣಿ. ಇಂದು ಗಾಂಧಿ ತಮ್ಮದೇ ನಾಡಿನಲ್ಲಿ ಅಪ್ರಸ್ತುತರಷ್ಟೇ ಅಲ್ಲ, ಅಪರಿಚಿತರೂ ಆಗಿಹೋಗಿದ್ದಾರೆ. ರಸ್ತೆಯ ಮೂಲೆಯಲ್ಲೊಂದು ಪುತ್ಥಳಿ, ಗೋಡೆ ಮೇಲೊಂದು ಫೋಟೋ, ವರ್ಷಕ್ಕೊಮ್ಮೆ ನೆನೆಯುವ ಬಡಿವಾರ... ಇಷ್ಟೇ. ಇದರಾಚೆಗೆ ಯಾರಿಗೂ ಬೇಕಿಲ್ಲ, ಗೊತ್ತೂ ಇಲ್ಲ.
ಆದರೆ…
ಲೋಕವಿಡೀ ಒಂದು ಪ್ರಶ್ನೆಯಾಗಿದ್ದಾಗ ಉತ್ತರವಾಗಿ ಬಂದಿದ್ದು ಗಾಂಧೀಜಿ. ಆಗಷ್ಟೇ ಅಲ್ಲ, ಈಗಲೂ ನಮ್ಮ ಅನೇಕ ಸಂಕಟಗಳಿಗೆ ಬಾಪೂಜಿಯೇ ಉತ್ತರ.
ನಮ್ಮ ಕಾಲದ ಮೂಲ ಬಿಕ್ಕಟ್ಟುಗಳೇನು, ಅವಕ್ಕೆ ಗಾಂಧೀಜಿ ಹೇಗೆ ಪರಿಹಾರವಾಗಬಲ್ಲರು ಎಂಬುದೇ ಪ್ರಸಕ್ತ ರಂಗಪ್ರಯೋಗದ ಮೂಲ ಹುಡುಕಾಟ.

ಹೇಗೆ?
ಇದೊಂದು ಅಪರೂಪದ ಬಹುಮಾಧ್ಯಮ ರಂಗಪ್ರಸ್ತುತಿ. ಅಂದರೆ ಕಲಾವಿದರು ರಂಗದ ಮೇಲೆ ಬಂದು, ಗಾಂಧಿಯನ್ನೂ ಒಳಗೊಂಡಂತೆ ಹಲವು ಪಾತ್ರಗಳನ್ನು ದೃಶ್ಯ ರೂಪದಲ್ಲಿ ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸುವುದು ಪ್ರಯೋಗದ ಒಂದು ಭಾಗ. ಇದಲ್ಲದೆ ರಂಗದ ಮೇಲಿರಿಸಿದ ತೆರೆಯ ಮೇಲೆ ಪೂರಕ ದೃಶ್ಯಾವಳಿಗಳೂ ನಡುನಡುವೆ ಮೂಡಲಿವೆ. (Audio visual projection). ಈ ಬಹುಮಾಧ್ಯಮಗಳ ಮೂಲಕವೇ ಗಾಂಧೀಜಿ ಎಂಬ ‘ಪವಾಡ’ವನ್ನು ಅರ್ಥೈಸುವ ಪ್ರಯತ್ನವಿದು.
ಇದು ರಾಷ್ಟ್ರಪಿತನ ಜೀವನಚರಿತ್ರೆಯಲ್ಲ. ‘ಗಾಂಧಿವಾದ’ದ ಪ್ರತಿಪಾದನೆಯೂ ಅಲ್ಲ. ಆದರೆ ನಮ್ಮ ಕಾಲದ ಸವಾಲುಗಳಿಗೆ ಗಾಂಧೀಜಿ ಮಾರ್ಗದಲ್ಲಿ ಉತ್ತರ ಅರಸುವ ಪ್ರಯತ್ನ. ಬಾಪೂ ಬದುಕಿ ತೋರಿದ ಮುಖ್ಯ ತತ್ವಗಳ ವಿಶದೀಕರಣ. ಈ ರಂಗಪ್ರಸ್ತುತಿ, ಮುಖ್ಯವಾಗಿ ನಾಲ್ಕು ಕಾಳಜಿಗಳ ಮೂಲಕ ಮಹಾತ್ಮನನ್ನು ನಮ್ಮೆದೆಯೊಳಕ್ಕೆ ಕರೆದುಕೊಳ್ಳಲು ಹವಣಿಸುತ್ತದೆ. ಆ ತತ್ವಗಳೆಂದರೆ:

–    ಅಹಿಂಸೆ ಮತ್ತು ಸತ್ಯಾಗ್ರಹ

–    ಹಿಂದೂ ಮುಸ್ಲಿಂ ಏಕತೆ

–    ಅಸ್ಪೃಶ್ಯತೆ ನಿವಾರಣೆ

–    ನಮ್ಮ ಬದುಕಿನ ಶೈಲಿ ಹೇಗಿರಬೇಕು

ಎನ್.ಎಸ್ಶಂಕರ್

ಈ ವಿಶಿಷ್ಟ ರಂಗಪ್ರಸ್ತುತಿಯನ್ನು ಬರೆದು ನಿರ್ದೇಶಿಸುತ್ತಿರುವ ಎನ್.ಎಸ್. ಶಂಕರ್, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಂದೆ ತಾಯಿ ಇಬ್ಬರಿಂದಲೂ ಎಳವೆಯಲ್ಲೇ ಗಾಂಧಿ ಸ್ಮೃತಿಯ ಬಳುವಳಿ ಪಡೆದವರು.
ಬರಹಗಾರ, ಚಿಂತಕ, ಪತ್ರಕರ್ತ ಹಾಗೂ ಚಿತ್ರ ನಿರ್ದೇಶಕರಾದ ಶಂಕರ್, ಪ್ರಜಾವಾಣಿ, ಲಂಕೇಶ್ ಪತ್ರಿಕೆ, ಸುದ್ದಿ ಟಿವಿ ಮುಂತಾಗಿ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ದಶಕಗಳ ಕಾಲ ದುಡಿದವರು. ನಿರ್ದೆಶಕರಾಗಿ ಮೂರು ಚಲನಚಿತ್ರಗಳು, ನಾಲ್ಕು ಧಾರಾವಾಹಿಗಳು, ಸುಮಾರು ಒಂದು ನೂರು ಸಾಕ್ಷ್ಯಚಿತ್ರ, ಕಿರುಚಿತ್ರಗಳನ್ನು ತಯಾರಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದವರು. ಬರಹಗಾರರಾಗಿ ಈವರೆಗೆ 19 ಬಹುಚರ್ಚಿತ ಕೃತಿಗಳನ್ನು ಪ್ರಕಟಿಸಿದ್ದಾರೆ ಕೂಡ.
ಪ್ರಸ್ತುತ ಬಾಪೂ’- ಅವರ ವರ್ಷಗಳ ಕನಸಿನ ಫಲ.
ಬಾಪೂಜಿ ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ನಮ್ಮ ನೆರವಿಗೆ ಧಾವಿಸಬೇಕಿದೆ ಎಂಬ ತುರ್ತಿನಲ್ಲಿ ಈ ಬಾಪೂ ರೂಪುಗೊಂಡಿದೆ.