‘ಪ.ಮಲ್ಲೇಶ್’ ಎಂಬ ಉತ್ಕಟ ಕ್ರಿಯಾಶೀಲ… – ದೇವನೂರ ಮಹಾದೇವ

(29.1.2023ರಂದು  ಮೈಸೂರಿನಲ್ಲಿ ನಡೆದ ಹಿರಿಯ ಸಮಾಜವಾದಿ ಪ.ಮಲ್ಲೇಶ್ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ದೇಮ ಅವರು ಆಡಿದ ಮಾತುಗಳು. ಫೋಟೋ ಕೃಪೆ- ವರಹಳ್ಳಿ ಆನಂದ)

 

 

ಪ.ಮಲ್ಲೇಶ್ ಉತ್ಕಟವಾದ ಕ್ರಿಯಾಶೀಲರಾಗಿದ್ದರು. ಇಂತಹ ಕ್ರಿಯಾಶೀಲ ವ್ಯಕ್ತಿಗಳು ಇಲ್ಲವಾದಾಗ ಖಾಲಿ ವಾತಾವರಣ ಉಂಟಾಗುತ್ತದೆ. ಪ.ಮಲ್ಲೇಶ್ ಕಾಲವಶರಾದಾಗ ಇದಾಯ್ತು. ಇದೇ ರೀತಿ ಕೆ.ರಾಮದಾಸ್ ನಿಧನರಾದಾಗ ಕೂಡ. ಹಾಗೇ ಒಂಟಿ ಸಲಗದಂತೆ ನುಗ್ಗುತ್ತಿದ್ದ ಆಲನಹಳ್ಳಿ ಕೃಷ್ಣ ಇಲ್ಲವಾದಾಗಲೂ ಹೀಗಾಯ್ತು. ನನ್ನ ಒಡನಾಟ ಇವರೊಡನೆ ಹೆಚ್ಚಿತ್ತು.

ನಾನು ಪಿಯುಸಿ ಫೇಲಾದಾಗ ಸಮಾಜವಾದಿ ಚಳವಳಿಯೊಡನೆ ಒಂದಾದೆ. ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ‘ಮಾನವ’ ಮಾಸಪತ್ರಿಕೆ ಮಲ್ಲೇಶರ ಮಯೂರ ಮುದ್ರಣಾಲಯದಲ್ಲೇ ಮುದ್ರಿತವಾಗುತ್ತಿತ್ತು. ನಾನು ‘ಮಾನವ’ದಲ್ಲಿ ತುಂಬಾ ತೊಡಗಿಸಿಕೊಂಡಿದ್ದೆ. ಮಲ್ಲೇಶರೊಡನೂ ನನ್ನ ಸಂಬಂಧ ನಿಕಟವಾಯ್ತು. ಪ್ರೆಸ್‍ನಲ್ಲಿ ಆಗಾಗ ಚರ್ಚೆ ಸಂವಾದ ನಡೆಯುತ್ತಿತ್ತು. ಅಲ್ಲಿ ಮಲ್ಲೇಶರ ಜಗಳ, ಅವರ ಪ್ರೀತಿ, ಆಮೇಲೆ ಅವರ ಯದ್ವಾತದ್ವಗಳನ್ನು ಹತ್ತಿರದಿಂದ ಕಂಡಿದ್ದೇನೆ.
ಒಂದು ಫೋಟೋ ಇದೆ- ಅದರಲ್ಲಿ ಮಲ್ಲೇಶ್ ಕುಪಿತರಾಗಿ ಆಕ್ರೋಶಭರಿತರಾಗಿದ್ದಾರೆ. ಪಕ್ಕದಲ್ಲಿ ನಾನು ಕೈ ಕಟ್ಟಿಕೊಂಡು, “ಇವರು ಬಾಯಿಬಿಟ್ಟರೆ ಗಾಂಧಿ ಗಾಂಧಿ ಅಂತಾರೆ, ನೋಡಿದರೆ ಹೀಗೆ, ಇವರಿಗೆ ಹೇಗಪ್ಪಾ ಹೇಳುವುದು?’ ಅಂತ ಅಸಹಾಯಕನಾಗಿ ನಿಂತಿದ್ದೇನೆ. ಹಾಗೇನೆ ಒಂಟಿಯಾಗಿದ್ದಾಗ ಒಂದು ಮಗುವಿನಂತೆ ಇರುತ್ತಿದ್ದರು. ಎಷ್ಟೊಂದು ಮಾನವೀಯ ಅನ್ನಿಸುತ್ತಿತ್ತು.
ಬಹುಶಃ ಹೀಗಿರುವುದರಿಂದಲೇ ಯಾವುದೇ ಹೋರಾಟಕ್ಕೂ ಇಲ್ಲ ಅನ್ನದೇ ನುಗ್ಗುತ್ತಿದ್ದರು. ಮಲ್ಲೇಶ್ –‘ಹೋರಾಟಗಳ ಸಖ’ ಎಂಬಂತೆ ಇದ್ದರು. ಅವರು ಇದ್ದರು ಎಂದರೆ ಸಮಸ್ಯೆಗಳು ಬಗೆಹರಿಯುತ್ತಲೂ ಇದ್ದವು. ಕೆಲವು ಸಲ ಕೌಶಲ ಇಲ್ಲದ ಅವರ ನಿರ್ವಹಣೆ ವೈಖರಿಯಿಂದಾಗಿ ಬಿಗಡಾಯಿಸಿಕೊಳ್ಳುತ್ತಲೂ ಇದ್ದವು. ಏನೇ ಆಗಲಿ, ಮಲ್ಲೇಶ್ ಜಗ್ಗದೇ ಕುಗ್ಗದೇ ಮುನ್ನಡೆಯುವ ಗುಣದವರಾಗಿದ್ದರು.
ಡಾ.ಪ್ರಭುಶಂಕರ ಅವರ ಒಂದು ಜೋಕ್ ಮಲ್ಲೇಶ್‍ರ ಬಗ್ಗೆ ಜನಪ್ರಿಯವಾಗಿದೆ. ಮೈಸೂರಲ್ಲಿ ಇಂಗ್ಲೀಷ್ ಬೋರ್ಡ್‍ಗಳಿಗೆ ಟಾರ್ ಬಳಿದಿರುವುದನ್ನು ಕಂಡರೆ ಪ್ರಭುಶಂಕರ್ ಅವರು, ‘ಓಹ್ ಮೈಸೂರಿಗೆ ಮಲ್ಲೇಶ ಬಂದಿದ್ದಾನೆ ಎಂದು ಕಾಣುತ್ತದೆ’ ಎನ್ನುತ್ತಿದ್ದರು! ಮಲ್ಲೇಶರ ಕನ್ನಡ ಪ್ರೇಮ ಅವರ ಹೃದಯದ ಒಳಗಿಂದ ಉಕ್ಕುತ್ತಿತ್ತು. ಅದು ಇಂದು, ಅವರ ರಚನಾತ್ಮಕ ಸಾಹಸವಾದ ನೃಪತುಂಗ ಕನ್ನಡ ಶಾಲೆಯ ಕನಸು, ವಾಸ್ತವವಾಗಿ ಎಲ್ಲರ ಮುಂದಿದೆ. ಇಲ್ಲಿ ಮಲ್ಲೇಶರ ಜೀವವೋ ಆತ್ಮವೋ ಜೀವಂತವಾಗಿದೆ ಎಂತಲೇ ನನಗನ್ನಿಸುತ್ತದೆ.
ಕೊನೆಯದಾಗಿ ಒಂದು ನೆನಪನ್ನು ಮರೆಯಲು ಆಗುತ್ತಿಲ್ಲ. ಮಲ್ಲೇಶರು ನಿಧನರಾದ ದಿನ ಚಿರನಿದ್ರೆಯಲ್ಲಿರುವ ತನ್ನ ತಂದೆಯನ್ನು ನೋಡಲಾಗದೇ, ಅವರ ಕೊನೆಯ ಮಗಳಾದ ಸವಿತಾ -ದಿಕ್ಕೆಟ್ಟವಳಂತೆ ನಡೆಯುತ್ತಿದ್ದಳು. ಆಕೆಗೆ ತನ್ನ ತಂದೆಯ ಪ್ರಾಣದ ಜೊತೆಗೆ ಇರುವುದಕ್ಕೆ ಒಂದು ದಾರಿಯೂ ಇದೆ. ಆಕೆಯ ಅಪ್ಪ ರೂವಾರಿಯಾಗಿ ಕಟ್ಟಿದ ನೃಪತುಂಗ ಶಾಲೆಯ ಜೊತೆಗೆ ತನ್ಮಯವಾದರೆ, ಆಕೆಗೆ ಅಲ್ಲಿ ತನ್ನಪ್ಪ ಕಾಣಿಸಿಕೊಳ್ಳಲೂಬಹುದು. ಅದಕ್ಕಾಗಿ ಆಕೆ “ತನ್ನಪ್ಪ ಬದುಕಿದ್ದಷ್ಟು ಕಾಲ ಬದುಕುವೆ… ನೃಪತುಂಗ ಕನ್ನಡ ಶಾಲೆ ವಿಸ್ತರಿಸಲು ಅದರಲ್ಲಿ ಒಂದಾಗುವೆ” ಎಂಬ ನಿರ್ಧಾರ ತೆಗೆದುಕೊಳ್ಳುವುದರಲ್ಲಿದೆ.