ಪದ್ಮಶ್ರೀ ಅಮಾಸ – ಮಹಾದೇವರಿಗೆ ಪ್ರಶಸ್ತಿ ಬಂದುದು-ಪ್ರೊ. ರಾಜೇಂದ್ರ ಚೆನ್ನಿ

rajendra chenni photo[ಮಹಾದೇವ ಅವರಿಗೆ 2011ರಲ್ಲಿ ಪದ್ಮಶ್ರೀ ಪ್ರಶಸ್ತಿ ಬಂದ ಸಂದರ್ಭದಲ್ಲಿ ವಿಮರ್ಶಕರಾದ ಪ್ರೊ.ರಾಜೇಂದ್ರ ಚೆನ್ನಿ ಅವರು ಬರೆದ ಲೇಖನ.]
                                                                                                                                                                                                           
ದೇವನೂರು ಮಹಾದೇವರಿಗೆ ಪದ್ಮಶ್ರೀ ಪ್ರಶಸ್ತಿ ಬಂದ ಸುದ್ದಿ ಪ್ರಸಾರವಾದಕೂಡಲೇ ನಾವೆಲ್ಲ ನಿರೀಕ್ಷಿಸಿದಂತೆ ಅವರು ಭೂಗತರಾಗಿದ್ದರು. ಹೀಗಾಗಿ ನಾವು – ಅಂದರೆ ಅವರ ಅಭಿಮಾನಿಗಳ ಸಂಘದ ಖಾಯಂ ಸದಸ್ಯರು – ಒಬ್ಬರನ್ನೊಬ್ಬರು ಅಭಿನಂದಿಸಿಕೊಂಡೆವು. ಯಾವ ಕಾನೂನಿನ ಪ್ರಕಾರವೂ ನೋಂದಾಯಿತವಾಗಲಾರದ ಅರಾಜಕ ಓದುಗರ ಸಂಘವಿದಾಗಿದೆ. ಒಂದು ಸಾರಿ ಸಭೆಯೊಂದರ ಅಧ್ಯಕ್ಷತೆ ವಹಿಸಿದ ಮಹಾದೇವರು ಅಲ್ಲಿ ಶುರುವಾದ ಚರ್ಚೆ, ಗೊಂದಲಗಳನ್ನು ನೋಡಿ ‘ನಾನು ಇದ್ದಲ್ಲಿ ಅರಾಜಕತೆ ತಂತಾನೆ ಶುರುವಾಗುತ್ತದೆ’ ಎಂದು ವಿಪರೀತ ಖುಷಿಪಟ್ಟಿದ್ದರು. ಕನ್ನಡದ ದುರ್ದೈವವೆಂದರೆ ಪ್ರತಿಭಾವಂತ ಬರಹಗಾರರು ಪ್ರಭಾವಿಗಳು ಆದಾಗ ನಾಡಿನುದ್ದಕ್ಕೂ ಅವರ ಮತದ ಗಿಂಡಿಮಾಣಿಗಳು, ಅವರು ಕಟ್ಟುವ ಮಾಫಿಯಾದ ಜ್ಯೂನಿಯರ್ ಡಾನ್‍ಗಳು ಹಾಗೂ ಉನ್ಮತ್ತ ದರ್ವೇಶಿಗಳನ್ನು ಅಪಾರ ಸಂಖ್ಯೆಯಲ್ಲಿ ಉತ್ಪಾದಿಸತೊಡಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಮಾಜವಿಜ್ಞಾನಿಯೊಬ್ಬನ ಸುತ್ತ ಹುಟ್ಟಿಕೊಂಡಿರುವ   cultನ ಉಗ್ರ ಹಿಂಬಾಲಕರನ್ನು ನೋಡಿ ನಾನಂತೂ ತತ್ತರಿಸಿಹೋಗಿದ್ದೇನೆ. ಚಿಕ್ಕವನಿದ್ದಾಗ ಧಾರವಾಡದಲ್ಲಿ ಎಲ್ಲಮ್ಮನ ಭಕ್ತೆಯರಾದ ಜೋಗತಿಯರು ಭಿಕ್ಷೆ ಹಾಕುವವರೆಗೂ ಉಗ್ರವಾದ ಕಣ್ಣುಗಳಿಂದ ಹೆದರಿಸುತ್ತಿದ್ದಾಗ ಅನಿಸುತ್ತಿದ್ದ ಭೀತಿಯನ್ನೇ ಈತನ ಹಿಂಬಾಲಕರು ವೈಚಾರಿಕ ವಲಯದಲ್ಲಿ ಪ್ರಯೋಗಿಸುತ್ತಿದ್ದಾರೆ. ಇದೆಲ್ಲಾ ಯಾಕೆ ಹೇಳಿದೆನೆಂದರೆ ಸಾಹಿತ್ಯ ಕೊಡುವ ಸವಲತ್ತೆಂದರೆ ಅದರ ಓದಿನ ಮೂಲಕ ನಾವು ಕಂಡುಕೊಳ್ಳುವ ಸ್ವಾಯತ್ತತೆ. ಪಂಪ, ಅಲ್ಲಮ, ಕುವೆಂಪು ಅವರೊಂದಿಗೆ ನಮ್ಮ ಸ್ವತಂತ್ರ ನೆಲೆಗಳಲ್ಲಿ ನಿಂತುಕೊಂಡು ಹೆಗಲ ಮೇಲೆ ಕೈಹಾಕಿ ಮಾತನಾಡುವ ಸ್ವಚ್ಛಂದ ವಾಸ್ತವಿಕ ಸಮಾಜದಲ್ಲಿ ಇರುವ ಇಕ್ಕಟ್ಟುಗಳು, ಆಕ್ರಮಣಶೀಲವಾದ ಸಂಕಥನಗಳು ಮನಸ್ಸುಗಳನ್ನು ಮುರುಟಿಸಿ ಬುದ್ಧಿಯನ್ನು ಸೀಮಿತಗೊಳಿಸಿ ಇನ್ನೊಬ್ಬರ ಗುಲಾಮನನ್ನಾಗಿಸುತ್ತವೆ. ಇದಾವುದೂ ಇಲ್ಲದ ಆರೋಗ್ಯಕರವಾದ ಅರಾಜಕತೆಗಾಗಿಯೇ ನಾವು ಸಾಹಿತ್ಯವನ್ನು ಇಷ್ಟು ಹಚ್ಚಿಕೊಳ್ಳುತ್ತೇವೆಯಲ್ಲವೆ? ಆದರೆ ಅಂತಃಕರಣ ಮಾತ್ರ ಇರಬೇಕಾದ ಸಾಹಿತ್ಯದ ವಲಯದಲ್ಲಿ ಕೂಡ ಪ್ರಭಾವಿ ಬರಹಗಾರರ ಅಧಿಕಾರ ಕೇಂದ್ರಗಳು ಹುಟ್ಟಿಕೊಂಡು ಸಮಾಜದಲ್ಲಿರುವ ಯಾವತ್ತೂ ವಿಕೃತಿಗಳನ್ನು ಇಲ್ಲಿಯೂ ಅನುಕರಿಸತೊಡಗುತ್ತಾರೆ. ಹಾಗೆ ಆಗದೇ ಇರುವಂಥ ಸಾಂಸ್ಕøತಿಕ ವ್ಯಕ್ತಿತ್ವವನ್ನು ಇಷ್ಟೊಂದು ವರ್ಷ ಮಯ್ಗೆಡದಂತೆ ಕಾಪಾಡಿಕೊಂಡ ಮಹಾದೇವ ಕನ್ನಡ ಸಂಸ್ಕøತಿಯ ಆರೋಗ್ಯಕ್ಕೆ ಮುಖ್ಯ ಕಾರಣವಾಗಿದ್ದಾರೆ. ತಮ್ಮ ಏಕಾಂತ, ನಾಚಿಕೆ, ದಾಕ್ಷಿಣ್ಯ, ಯಾರು ಯಾವ ವರಸೆ ಹಾಕಿದರೂ ತಮ್ಮ ಬಾಯಿಂದ ಇನ್ನೊಬ್ಬರ ಮಾತನ್ನು ಆಡುವುದಿಲ್ಲ ಎನ್ನುವ ಜಿಗುಟುತನ ಇವುಗಳಿಂದಾಗಿ ಮಹಾದೇವ ಇಂದಿಗೂ ಸಹಜವಾಗಿದ್ದಾರೆ. ಇದರಿಂದಾಗಿ ಕನ್ನಡದ ದಲಿತ ಬರಹ, ದಲಿತ ಸಂಸ್ಕøತಿ ರಾಜಕಾರಣಿಗಳಿಗೆ ಆಗಿರುವ ಅಪಾರವಾದ ಪ್ರಯೋಜನಗಳ ಬಗ್ಗೆ ಯೋಚಿಸುತ್ತಿದ್ದೇನೆ. ಇಂಗ್ಲಿಷ್ ಬಾರದ ಮಹಾದೇವರು ಅಮೆರಿಕಕ್ಕೆ ಹೋದಾಗ ‘ಅಮೇರಿಕದಲ್ಲಿ ಅಮಾಸ’ ಎಂದುಕೊಂಡು ಖುಷಿಪಟ್ಟಿದ್ದ ನಾನು ಈಗ ಅವರಿಗೆ ಪ್ರಶಸ್ತಿ ಬಂದಿರುವಾಗ ‘ಪದ್ಮಶ್ರೀ ಅಮಾಸ’ ಅಂದರೆ ಹೇಗನಿಸುತ್ತಿದೆಯೆಂದು ಖುಷಿಪಡುತ್ತಿದ್ದೇನೆ.

 

ದಲಿತ ಸಂಕಥನಗಳಿಗೆ (discourses) ಇರುವ ದೊಡ್ಡ ಅಪಾಯವೆಂದರೆ ಸವರ್ಣೀಯ ಮತ್ತು ಮೇಲುವರ್ಗದ ಗ್ರಹಿಕೆಗಳನ್ನು ಗೊತ್ತಿಲ್ಲದೇ ಒಪ್ಪಿಕೊಂಡುಬಿಡುವುದು. ಈ ಗ್ರಹಿಕೆಗಳು ಒಂದು ಕಡೆಗೆ ದಲಿತ ಸಮುದಾಯಗಳಿಗೆ ಯಾವ ವರ್ಣದಲ್ಲೂ ಜಾಗವಿಲ್ಲದಂತೆ ಮಾಡಿ ಅವರನ್ನು ಸಮಾಜ, ಭಾಷೆ ಹಾಗೂ ಸಂಸ್ಕøತಿಗಳಿಂದ ‘ಅದೃಶ್ಯ’ಗೊಳಿಸಿಬಿಡುತ್ತವೆ. ಅವರುಗಳಿಗೆ ಯಾವ ಪ್ರಾತಿನಿಧ್ಯವೇ ಇಲ್ಲದಂತೆ ಮಾಡುತ್ತವೆ. ಸಾವಿರಾರು ವರ್ಷಗಳವರೆಗೆ ಮಲ ಹೊರುವ ಮುಂತಾದ ಅಶೌಚ ಕೆಲಸಗಳನ್ನು ಮಾಡುವ ದೇಹಗಳ ಹೊರತಾಗಿ ಇವರಿಗೆ ಅಸ್ತಿತ್ವವೇ ಇಲ್ಲವೆನ್ನುವಂಥ ಧರ್ಮ, ಸಂಸ್ಕೃತಿ, ಭಾಷೆಗಳನ್ನು ಸವರ್ಣೀಯರು ರಚಿಸಿಕೊಂಡರು. ಭಕ್ತಿ ಪರಂಪರೆಗಳಲ್ಲಿ, ಅದು ಕೂಡಾ ಆ ಪರಂಪರೆಗಳು ಸಾಂಸ್ಥೀಕರಣಗೊಂಡು ವೈದಿಕ ಪರಂಪರೆಗಳೊಂದಿಗೆ ರಾಜೀಕಬೂಲಿ ಮಾಡಿಕೊಳ್ಳುವವರೆಗೆ ಮಾತ್ರ, ದಲಿತರ ಅಸ್ತಿತ್ವದ ಬಗ್ಗೆ ಅಲ್ಲಲ್ಲಿ ಚಿಂತನೆಯಿದೆ. ಇನ್ನೊಂದು ಕಡೆಗೆ ಕಾಲಕ್ರಮೇಣವಾಗಿ ಸವರ್ಣೀಯ ಗ್ರಹಿಕೆಗಳಲ್ಲಿ ಒಂದಿಷ್ಟು ಮಾನವೀಯತೆ, ನ್ಯಾಯಬದ್ಧತೆಗಳು ಪ್ರವೇಶ ಮಾಡಿದ ಮೇಲೆ ದಲಿತರನ್ನೂ ಶೋಷಿತರನ್ನಾಗಿ ನೋಡುವ, ಜಾತಿ ವ್ಯವಸ್ಥೆಯ ಬಲಿಪಶುಗಳನ್ನಾಗಿ ನೋಡುವ, ಅನುಕಂಪದ ವಸ್ತುಗಳನ್ನಾಗಿ ನೋಡುವ ಗ್ರಹಿಕೆಗಳು ಹುಟ್ಟಿಕೊಂಡವು.ಆದರೆ, ಇಂಥ ಗ್ರಹಿಕೆಗಳು ಕೂಡ ದಲಿತರನ್ನು ಸವರ್ಣೀಯರ ‘ಅನ್ಯ’ರನ್ನಾಗಿ ರಚಿಸಿಕೊಂಡು ನೋಡುತ್ತಿವೆಯೇ ಹೊರತು ದಲಿತ ಅಸ್ತಿತ್ವದ ಅನನ್ಯತೆಯನ್ನು ಗುರುತಿಸುವುದಿಲ್ಲ. ಹೀಗಾಗಿ ಇಂಥ ‘ಸಹಾನುಭೂತಿಪರ’ ನಿಲುವುಗಳಿಂದ ದಲಿತ ಅಸ್ತಿತ್ವವನ್ನು ನೋಡುವುದು ಕೂಡ ಅದನ್ನು ಇಕ್ಕಟ್ಟಿಗೆ ಸಿಕ್ಕಿಸುವ ಕೆಲಸವಾಗಿಬಿಡುತ್ತದೆ. ಈ ಇಕ್ಕಟ್ಟುಗಳ ಆಚೆಗೆ ದಲಿತ ಸಮುದಾಯಗಳು ತಮ್ಮ ಅಸ್ತಿತ್ವವನ್ನು ತಾವೇ ತಮ್ಮ ನುಡಿಗಟ್ಟಿನಲ್ಲಿ ನಿರ್ವಚಿಸಿಕೊಂಡು ಬಂದಿವೆ. ತಮ್ಮದೇ ಆದ ಸಮಗ್ರವಾದ,   self sufficientಆದ, ಸ್ವಾಯತ್ತ ವಿಶ್ವಗಳನ್ನು ರಚಿಸಿಕೊಂಡಿವೆ. ಇದರಲ್ಲಿರುವ ಲೋಕಗ್ರಹಿಕೆ, ಮನುಷ್ಯ ಸಂಬಂಧಗಳ ಸ್ವರೂಪದ ಕಲ್ಪನೆ, ಮನುಷ್ಯ-ಪ್ರಕೃತಿಗಳ ಸಂಬಂಧದ ಕಲ್ಪನೆ, ತಮಗೆ ಬೇಕಾದ ಆದರೆ ಇನ್ನೂ ಸೃಷ್ಟಿಯಾಗಿರದ ಸಮಾಜದ ಕಲ್ಪನೆ ಇವೆಲ್ಲವೂ ಸೇರಿ ನೇಯ್ಗೆಗೊಂಡಿವೆ. ಸವರ್ಣೀಯ ಪ್ರಜ್ಞೆ ಈ ದಲಿತ ವಿಶ್ವವನ್ನು ಅದು ತನ್ನ ವಿಶ್ವದಿಂದ ಹೇಗೆ ಭಿನ್ನವಾಗಿದೆಯೆಂದು ವಿವರಿಸಬಲ್ಲದೇ ಹೊರತು ಅದರಲ್ಲಿ ಸಂಪೂರ್ಣವಾಗಿ ಪ್ರವೇಶಿಸಲಾರದು. ದೇವನೂರು ಮಹಾದೇವರಂಥ ಶ್ರೇಷ್ಠ ಸೃಜನಶೀಲ ಪ್ರತಿಭೆ ತನ್ನ ಅಗಾಧವಾದ ರೂಪಕಶಕ್ತಿಯಿಂದ, ಭಾಷೆ ಮತ್ತು ಅದರ ಹಿಂದಿನ ಗ್ರಹಿಕೆಗಳನ್ನು ಮುರಿದುಕಟ್ಟುವ ಸಾಮಥ್ರ್ಯದಿಂದ ಹಾಗೂ ಸಾಹಿತ್ಯಸಂಪ್ರದಾಯದಲ್ಲಿ ರೂಢಿಯಲ್ಲಿರುವ ಕಥನಕ್ರಮಗಳನ್ನು ಭಗ್ನಗೊಳಿಸುವ ಮೂಲಕ ಈ ದಲಿತ ವಿಶ್ವವನ್ನು ಮೂರ್ತಗೊಳಿಸಿ ತೋರಿಸಬಲ್ಲದು; ದಲಿತ ಅನುಭವವನ್ನು ಅದರ ಮೂಲ ಆಕೃತಿಗಳೊಂದಿಗೆ ಅದರ ಸಹಜ ಶರೀರದೊಂದಿಗೆ ಪುನಃಸೃಷ್ಟಿಸಬಲ್ಲದು.

 

ಇದು ಸಾಧ್ಯವಾಗಬೇಕಾದರೆ, ದಲಿತ ಬರಹಗಾರನಿಗೆ ತಾನು ಈಗಾಗಲೇ ಸಾಹಿತ್ಯವೆನ್ನುವ ಸವರ್ಣೀಯ ಸಾಂಸ್ಕೃತಿಕ ಸಂಸ್ಥೆಯೊಂದರ ಭಾಗವಾಗಿದ್ದರೂ ಕೂಡ, ಸವರ್ಣೀಯ ಸಂಕಥನಗಳಲ್ಲಿ ಪ್ರವೇಶ ಮಾಡಿದ್ದರೂ ಕೂಡ, ದಲಿತ ಅನುಭವದ ಅನನ್ಯತೆಯನ್ನು ಒಂದು ತೀವ್ರವಾದ ಅಂತರ್ಮುಖತೆಯೊಂದಿಗೆ (passionate inwardness) ಶೋಧಿಸುವ ಅಪೂರ್ವವಾದ ಏಕಾಗ್ರತೆ ಬೇಕಾಗುತ್ತದೆ. ಈಗಾಗಲೇ ಮಾನ್ಯತೆ ಪಡೆದ ಕಥನಕ್ರಮಗಳು ಪ್ರಭಾವಿಯಾಗಿರುವದರಿಂದ ಅವು ಯಾವುದೇ ಅನುಭವವನ್ನು ಕಥಿಸಬಲ್ಲವು ಎನ್ನುವ ಪ್ರಭಾವಿಗುಣವನ್ನು ಬೆಳೆಸಿಕೊಂಡಿರುತ್ತವೆ. ಆದರೆ, ಈ ಕಥನಕ್ರಮಗಳು ಕೂಡ ದಲಿತ ಅನುಭವದ ಅನನ್ಯತೆಯನ್ನು ಮೊಟಕುಗೊಳಿಸುತ್ತವೆಯಾದ್ದರಿಂದ ವಿಭಿನ್ನ ಕಥನಕ್ರಮಗಳನ್ನು ಶೋಧಿಸುವ ಸೃಜನಶೀಲತೆಯೂ ದಲಿತ ಬರಹಗಾರನಿಗೆ ಬೇಕಾಗುತ್ತದೆ. ಇದೆಲ್ಲವೂ ದೇವನೂರು ಮಹಾದೇವರಿಗೆ ಸಾಧ್ಯವಾಗಿದ್ದರಿಂದ ಕನ್ನಡ ದಲಿತ ಸಾಹಿತ್ಯಕ್ಕೆ ಇತರ ಭಾಷಾ ಸಾಹಿತ್ಯದ ದಲಿತ ಬರಹಗಳಲ್ಲಿ ಕಾಣದ ವಿಶಿಷ್ಟ ಪ್ರಭೆಯೊಂದು ಲಭ್ಯವಾಗಿದೆ.ಇದು ಕೇವಲ ಮಹಾದೇವರ ವೈಯಕ್ತಿಕ ಸಾಧನೆಯಲ್ಲ. ಅನೇಕ ಪ್ರತಿಭಾವಂತ ದಲಿತ ಬರಹಗಾರರು ಏಕಕಾಲಕ್ಕೆ ಬರೆಯುತ್ತಿರುವುದು ಸುದೈವದ ಸಂಗತಿಯಾಗಿದೆ. ಮಹಾದೇವರು ಸುಲಭವಲ್ಲದ, ಸದಾ ಎಚ್ಚರವನ್ನು ಉನ್ನತ ಮಟ್ಟದ ಸೃಜನಶೀಲತೆಯನ್ನು ಅಪೇಕ್ಷಿಸುವ ಕಷ್ಟದ ದಾರಿಯನ್ನು ತೋರಿಸಿಕೊಟ್ಟರು. ಉದಾಹರಣೆಗೆ ಹೇಳುವುದಾದರೆ, ಬಹುಪಾಲು ದಲಿತ ಬರಹಗಳು ವಾಸ್ತವವಾದಿ ಕಥನ ಸಂಪ್ರದಾಯವನ್ನು ನೆಚ್ಚಿಕೊಂಡು ಬಂದವು. ಮರಾಠಿ ಭಾಷೆಯಲ್ಲಿ ಬಂದ ದಲಿತ ಆತ್ಮಚರಿತ್ರೆಗಳ ಅಗಾಧವಾದ ಶ್ರೀಮಂತಿಕೆಯಿಂದಾಗಿ ಆನಂತರದ ದಲಿತ ಬರಹಗಾರರಿಗೆ ತಮ್ಮ ಅನುಭವಗಳನ್ನು ಇದ್ದದ್ದು ಇದ್ದ ಹಾಗೆ ಅಂದರೆ ವಾಸ್ತವವಾದಿ ಕಥನಗಳ ಮೂಲಕ ಹೇಳಬೇಕು; ಹೀಗೆ ಹೇಳಿದರೆ ಮಾತ್ರ ಅದು ಸಾಚಾ (authentic) ಆಗಲು ಸಾಧ್ಯವೆನ್ನುವ ನಂಬಿಕೆ ಬಂದಿತು. ಆದರೆ ‘ದ್ಯಾವನೂರು’ ಸಂಗ್ರಹದ ಒಂದೆರಡು ಕತೆಗಳನ್ನು ಬಿಟ್ಟರೆ ಮಹಾದೇವರು ವಾಸ್ತವವಾದಿ ಕಥನದ ಇಕ್ಕಟ್ಟಿನಿಂದ ದೂರ ಬಂದರು. ಬದಲಾಗಿ ಮೌಖಿಕ ಕಥನ, ಜಾನಪದ ಕಥನ, ಪುರಾಣ, ಕಾವ್ಯ ಇವುಗಳ ಮಾದರಿಯನ್ನು ಹೋಲುವ ವಾಸ್ತವವಾದಿಯಲ್ಲದ ಕಥನಕ್ರಮಗಳನ್ನು ಅನ್ವೇಷಿಸಿದರು. ನನ್ನ ದೃಷ್ಟಿಯಲ್ಲಿ ಇದು ದಲಿತ ಬರಹಕ್ಕೆ ದೊರೆತ ಅತಿ ಮಹತ್ವದ ಪಲ್ಲಟ. ವಾಸ್ತವವಾದಿ ಕಥನದ ಮೂಲಗಳನ್ನು ಹುಡುಕುತ್ತಾ ಹೋದರೆ ಅದು ಕೊನೆಗೆ ನಮ್ಮನ್ನು ಪಶ್ಚಿಮದ ಬಹುಪ್ರಬಲವಾದ ವೈಚಾರಿಕ ಸಂಪ್ರದಾಯಗಳಿಗೆ ಕೊಂಡೊಯ್ಯುತ್ತದೆ. ಪಶ್ಚಿಮವು ಸರಿಸುಮಾರು 17ನೇ ಶತಮಾನದ ಕೊನೆಯ ಭಾಗದಿಂದ ಆರಂಭವಾದ ಜ್ಞಾನಪರ್ವದ (enlightenment) ಯುಗದಿಂದ ಒಂದು ಬಲವಾದ ಲೋಕಗ್ರಹಿಕೆಯನ್ನು ಪ್ರತಿಪಾದಿಸುತ್ತಾ ಬಂದಿದೆ. ಇದರ ಪ್ರಕಾರ ಇಂದ್ರಿಯಗಮ್ಯವಾದ ಅನುಭವ ಮಾತ್ರ ಸತ್ಯವಾದುದು; ಇದೇ ವಿಜ್ಞಾನಕ್ಕೂ ಆಧಾರವಾದುದು. ಅಲ್ಲದೇ ಈ ಅನುಭವವನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ತರ್ಕದ ಆಧಾರ ಸಾಕು. 18ನೇ ಶತಮಾನದಲ್ಲಿ ಇಂಗ್ಲಿಷ್ ಕಾದಂಬರಿ ಪ್ರವರ್ಧಮಾನಕ್ಕೆ ಬಂದಾಗ ಸತ್ಯದ ಈ ಪರಿಕಲ್ಪನೆ ಸಾಮಾಜಿಕ ವಾಸ್ತವವಾಗಿ ಪರಿವರ್ತಿತವಾಯಿತು. ಅಂದರೆ, ಕಾದಂಬರಿಯು ಕಣ್ಣಿಗೆ ಕಾಣುವ ಸಾಮಾಜಿಕ ವಾಸ್ತವವನ್ನು ಕನ್ನಡಿಸುವ ಮಾಧ್ಯಮವಾಯಿತು. ಸಾಹಿತ್ಯದ ಇನ್ನೆಲ್ಲ ಪ್ರಕಾರಗಳಿಗಿಂತ ಕಾದಂಬರಿ ಪ್ರಕಾರವು ಸಾಮಾಜಿಕ ವಾಸ್ತವವನ್ನು ಸತ್ಯಕ್ಕೆ ಹತ್ತಿರವಾಗುವಂತೆ ಅದನ್ನು ತೋರಿಸುವ ಜವಾಬ್ದಾರಿಯನ್ನು ಹೊರಬೇಕಾಯಿತು. ಇದರಿಂದ ಮುಂದಿನ 19ನೇ ಶತಮಾನದ ಇಂಗ್ಲಿಷ್ ಹಾಗೂ ಯುರೋಪಿಯನ್ ಕಾದಂಬರಿ ಸಾಮಾಜಿಕ-ವಾಸ್ತವಿಕ ಕಾದಂಬರಿಯಾಯಿತು. ಅಲ್ಲದೇ ಆ ಶತಮಾನದ ದಾಖಲೆಯೂ ಆಯಿತು.ಸುದೈವದಿಂದ ವಾಸ್ತವವಾದವನ್ನು ಮೀರಿದ ತಂತ್ರಗಳನ್ನು ಪ್ರಯೋಗಿಸುವ ಕಾದಂಬರಿಕಾರರೂ 18ನೇ ಶತಮಾನದಿಂದಲೇ ಬರೆಯುತ್ತಿದ್ದರು. ಆದರೂ ಕಾದಂಬರಿಯಲ್ಲಿ ವಾಸ್ತವವಾದದ ಪ್ರಭಾವವು ಒಂದಲ್ಲ ಒಂದು ರೀತಿಯಲ್ಲಿ ಮುಂದುವರೆಯಿತು. 1960 ದಶಕದಿಂದ ಮುನ್ನೆಲೆಗೆ ಬಂದ ಸ್ಪ್ಯಾನಿಷ್ ಭಾಷೆಯಲ್ಲಿ ಬರೆಯಲಾದ ಮಾಂತ್ರಿಕ ವಾಸ್ತವತಾವಾದ (magic realism) ಅದರ ಹಿಡಿತವನ್ನು ಸಡಿಲಿಸಿ ವಾಸ್ತವದ ಬಗೆಗಿನ ಪರಿಕಲ್ಪನೆಗಳನ್ನೇ ಬದಲಾಯಿಸಿತು. ವಾಸ್ತವ, ಫ್ಯಾಂಟಸಿ, ಕಲ್ಪನೆ ಇವುಗಳನ್ನು ಸ್ಚಚ್ಛಂದದಿಂದ ಬೆರೆಸುವ ಹೊಸ ಕಥನಕ್ರಮವು ಹುಟ್ಟಿಕೊಂಡಿತು. ಇದೆಲ್ಲ ಕೇವಲ ಕಾದಂಬರಿ ಪ್ರಕಾರದಲ್ಲಿ ಕಂಡುಬಂದ ನವೀನ ಪ್ರಯೋಗಶೀಲತೆಯೆಂದು ಯುರೋಪಿಯನ್ ವಿಮರ್ಶೆ ಮೊದಲು ಅಂದುಕೊಂಡಿತು. ಆದರೆ ನಿಜವೆಂದರೆ ಯುರೋಪಿನ ಪ್ರಬಲವಾದ ಅನುಭವಗ್ರಹಿಕೆ ಮಾದರಿಯನ್ನು ಧಿಕ್ಕರಿಸುವ, ವಿಭಿನ್ನ ಲೋಕಗ್ರಹಿಕೆಯಲ್ಲಿ ಹುಟ್ಟಿದ ಕಥನಕ್ರಮವಿದಾಗಿತ್ತು. ಮಾರ್ಕೆಜ್‍ನಂಥ ಬರಹಗಾರ ಕಾಲ, ಚರಿತ್ರೆ, ಪ್ರಗತಿ ಇವೆಲ್ಲವುಗಳ ಬಗ್ಗೆ ಯುರೋಪು ಇಟ್ಟುಕೊಂಡ ಪರಿಕಲ್ಪನೆಗಳನ್ನು ಬುಡಮೇಲು ಮಾಡುವ ಕಥನಗಳನ್ನು ಬರೆಯುತ್ತಾನೆ.

 

ಕನ್ನಡದ ದಲಿತ ಬರಹಗಾರರಿಗೆ ಮಾಂತ್ರಿಕ ವಾಸ್ತವವಾದವನ್ನು ಹೊರಗಿನಿಂದ ತರುವ ಅವಶ್ಯಕತೆ ಇರಲಿಲ್ಲ. ಶಿಷ್ಟ ಸಾಹಿತ್ಯ ಸಂಪ್ರದಾಯದ ಆಚೆಗೆ ನಮ್ಮ ಸಮಾಜದಲ್ಲಿ ಜೀವಂತವಾಗಿ ಇರುವ ಮೌಖಿಕ, ಜಾನಪದ ಕಥನಗಳಲ್ಲಿ, ಜನಪದ ಕಾವ್ಯ ಪುರಾಣಗಳಲ್ಲಿ ವಾಸ್ತವವಾದವನ್ನು ತಿರಸ್ಕರಿಸುವ ಕಥನಕ್ರಮಗಳು ಲಭ್ಯವಿದ್ದವು. ಮಹಾದೇವ ಮುಖ್ಯವಾಗಿ ‘ಮಲೆಮಾದೇಶ್ವರ ಕಾವ್ಯ’, ‘ಮಂಟೆಸ್ವಾಮಿ ಕಾವ್ಯ’, ಜನಪದ ಕತೆಗಳು ಹಾಗೂ ಕನ್ನಡದ ಚಂಪೂ ಪರಂಪರೆಯ ಸಾಧ್ಯತೆಗಳನ್ನು ಬಳಸಿಕೊಂಡು ಹೊಸ ಕಥನಕ್ರಮವನ್ನು ರಚಿಸಿಕೊಂಡರು. ಇದರ ಸ್ವರೂಪದ ಬಗ್ಗೆ ನಾನು ಹಲವಾರು ಲೇಖನಗಳಲ್ಲಿ ವಿಸ್ತಾರವಾಗಿ ಬರೆದಿದ್ದೇನೆ. ಮುಖ್ಯವಾಗಿ ಪ್ರಸ್ತಾಪ ಮಾಡಬೇಕಾದ ವಿಷಯವೆಂದರೆ ಮಹಾದೇವರ ಬರಹ ಕನ್ನಡ ಕಥನವನ್ನು ವಾಸ್ತವವಾದದ ಸೆರೆಮನೆಯಿಂದ ಬಿಡುಗಡೆಗೊಳಿಸಿತು. ‘ಕುಸುಮಬಾಲೆ’ಯ ಬಹುಮುಖಿ ಬರಹವು print-capitalism ಎಂದು ಕರೆಯಲಾಗುವ ಘಟ್ಟದಿಂದ ಆರಂಭಗೊಂಡ ಪ್ರಕಾರಗಳ ವಿಭಜನೆಯನ್ನು (ಅಂದರೆ ಕಾವ್ಯ-ಕಥನ, ಗದ್ಯ-ಕಾವ್ಯ) ಮುರಿದುಹಾಕಿ ಬಹುಮುಖಿಯಾದ ಕಥನಕ್ರಮವನ್ನು ರಚಿಸಿಕೊಳ್ಳುತ್ತದೆ. ಇದು ಒಂದು ಕಡೆಗೆ ಅತ್ಯಂತ ನವೀನ ಪ್ರಯೋಗಶೀಲತೆಯಾಗಿ ಕಂಡರೆ ಇನ್ನೊಂದು ಕಡೆಗೆ ನಮ್ಮ ಸಂಸ್ಕೃತಿಯ ದಮನಿತ ಲೋಕಗಳ ಅಭಿವ್ಯಕ್ತಿ ಕ್ರಮಗಳಿಗೆ (ಪ್ರಧಾನವಾಗಿ ಮೌಖಿಕ ಅಭಿವ್ಯಕ್ತಿ ಕ್ರಮಗಳಿಗೆ) ಮರಳುವುದೂ ಆಗುತ್ತದೆ.ಅದಕ್ಕೆ ‘ಕುಸುಮಬಾಲೆ’ಯನ್ನು ಪೂರ್ವಿಕನಾದ ಮಲೆಮಾದೇಶ್ವರನಿಗೆ ಅರ್ಪಿಸಲಾಗಿದೆ. ಮಹಾದೇವರ ಈ ಆಯ್ಕೆಯ ಇನ್ನೊಂದು ಮಹತ್ವಪೂರ್ಣ ಪುರಾಣವೂ ಇದೆ. ವಸಾಹತುಶಾಹಿಯ ಮೂಲಕ ನಮ್ಮ ಸಾಹಿತ್ಯ ಪರಂಪರೆಯನ್ನು ಪ್ರವೇಶಿಸಿದ ವಾಸ್ತವವಾದಿ ಕಾದಂಬರಿಯು ಪ್ರಬಲವಾದ ಮಾದರಿಯಾಗಿಬಿಟ್ಟಿತ್ತು( modular form). ಈ ಯಜಮಾನ ಮಾದರಿಯನ್ನೂ ಅವರು ಪಲ್ಲಟಗೊಳಿಸಿ ‘ದೇಸೀ’ ಎಂದು ಕರೆಯಬಹುದಾದ ಕಥನಕ್ರಮಗಳನ್ನು ಮತ್ತೆ ಮುನ್ನೆಲೆಗೆ ತಂದರು. ಅಷ್ಟರಮಟ್ಟಿಗೆ ಕನ್ನಡ ಕಥನದ ನಿರ್ವಸಾಹತೀಕರಣವು ಸಾಧ್ಯವಾಯಿತು. ಇಂಥ ಕಥನಕ್ರಮಗಳನ್ನು ಮಹಾದೇವ ಶೋಧಿಸಿದ್ದು ಒಂದು ಖಚಿತವಾದ ಉದ್ದೇಶಕ್ಕಾಗಿ. ಅದೇನೆಂದರೆ, ನಮ್ಮ ದಮನಿತ ಲೋಕಗಳ ಸೃಜನಶೀಲ ಕಲ್ಪನಾಶಕ್ತಿಯನ್ನು ಬಿಡುಗಡೆಗೊಳಿಸುವುದು. ದಲಿತ ಲೋಕದ ಅನನ್ಯ ಅನುಭವಲೋಕಗಳು ತಮ್ಮ ಸಂಪೂರ್ಣ ಶರೀರದೊಂದಿಗೆ ಅವತರಿಸುವಂತೆ ಮೊದಲು ಈ ಬಗೆಯ ಕಥನಕ್ರಮದ ಪಲ್ಲಟವು ಅತ್ಯವಶ್ಯಕವಾಗಿತ್ತು. ಇಲ್ಲದಿದ್ದರೆ ನಿಗಿನಿಗಿ ಕೆಂಡದಂಥ ಅನುಭವಗಳನ್ನು ಒಡಲಲ್ಲಿಟ್ಟುಕೊಂಡ ದಲಿತ ಸಮುದಾಯಗಳು ಸವರ್ಣೀಯ ಅಭಿವ್ಯಕ್ತಿ ಕ್ರಮಗಳನ್ನೇ ಅನುಕರಿಸುತ್ತಾ ತಮ್ಮ ನೈಜ ಅನುಭವಕ್ಕೆ ತಾವೇ ಎರವಾಗುತ್ತಿದ್ದವು. ದಲಿತ ಸಾಹಿತ್ಯದ ಕೊಂಚ ಮೊದಲು ಹುಟ್ಟಿದ ಬಂಡಾಯ ಚಳುವಳಿ ಹೋರಾಟ, ಶೋಷಣೆ ಇವುಗಳ ಬಗ್ಗೆ ಸರಳವಾದ ಗ್ರಹಿಕೆಗಳನ್ನು ಪ್ರತಿಪಾದಿಸಿದ್ದು ಮಾತ್ರವಲ್ಲ ದಮನಿತ ವರ್ಗಗಳ ಅನುಭವಗಳ ಸಮಗ್ರ ಅಭಿವ್ಯಕ್ತಿಗಾಗಿ ಹೊಸ ಕಥನಕ್ರಮಗಳು ಬೇಕೆನ್ನುವುದನ್ನು ಗಮನಿಸಲಿಲ್ಲ. ಅದರ ಪ್ರಭಾವದಲ್ಲಿ ಹೊರಬಂದ ಬಂಡಾಯಪರ ದಲಿತ ಕಾವ್ಯಕ್ಕೆ ಒಂದು ಅವಶ್ಯಕವಾದ ಆದರೆ ಸೀಮಿತವಾದ ಸಾಂಸ್ಕೃತಿಕ ಪಾತ್ರವಿತ್ತು. ಮಹಾದೇವರ ಸೃಜನಶೀಲ ಒಳನೋಟಗಳಿಂದಾಗಿ ಕನ್ನಡ ದಲಿತ ಸಾಹಿತ್ಯ ಅನೇಕ ಹೊಸ ಸಾಧ್ಯತೆಗಳನ್ನು ಕಂಡುಕೊಂಡಿತು. (ಅಂದ ಹಾಗೆ ನನ್ನ ಈ ವ್ಯಾಖ್ಯಾನವನ್ನು ಅಕಸ್ಮಾತ್ತಾಗಿ ಮಹಾದೇವರು ಓದಿದರೆ ಗಾಬರಿಯಾಗಿ ಛೆ, ಛೆ, ನಾನಿದನೆಲ್ಲ ಮಾಡಿಲ್ಲ ಎಂದು ಮುದುಡಿಕೊಳ್ಳುತ್ತಾರೆ! ಆದರೆ ಸೃಜನಶೀಲತೆಯನ್ನು ಕೇವಲ ಬರಹಗಾರರ ‘ಮುಗ್ಧ’ ವಿವರಣೆಗಳ ಮೂಲಕ ನೋಡಲಾಗುವುದಿಲ್ಲ. ಅದನ್ನು ಚಾರಿತ್ರಿಕ ಚೌಕಟ್ಟುಗಳಲ್ಲಿಟ್ಟೇ ನೋಡಬೇಕಾಗುತ್ತದೆ).

 

ಇದೆಲ್ಲ ಸಾಧ್ಯವಾದದ್ದು ದಲಿತ ಸಂಘರ್ಷ ಸಮಿತಿಯು ನಡೆಸಿದ ಸಾಂಸ್ಕೃತಿಕ ಹೋರಾಟಗಳಿಂದಲೇ. ದಲಿತ ಅಸ್ತಿತ್ವದ ಗುರುತು (identity) ಮತ್ತು ಸಾಂಸ್ಕೃತಿಕ ಸ್ವಾಭಿಮಾನದ ಈ ಚಳುವಳಿ ದಲಿತ ಜನಾಂಗಗಳಲ್ಲಿ ಹುಟ್ಟುಹಾಕಿದ ಆತ್ಮವಿಶ್ವಾಸ ಹಾಗೂ ಹೋರಾಟದ ಕ್ರಿಯಾಶೀಲತೆ ಆಧುನಿಕ ಕನ್ನಡ ಸಮಾಜದ ಅತ್ಯಂತ ಮಹತ್ವಪೂರ್ಣ ಪಲ್ಲಟವನ್ನು ತಂದಿತು. ದಲಿತ ಅಸ್ತಿತ್ವದ ಅನನ್ಯತೆಗೆ ರಾಜಕೀಯ ಶಕ್ತಿ ಕೊಡಲು ಅಂಬೇಡ್ಕರ್ ಮಾಡಿದ ಹೋರಾಟದ ಮಾದರಿಯಲ್ಲಿ ಈ ಚಳುವಳಿ ಆ ಅನನ್ಯತೆಗೆ ಸಾಂಸ್ಕೃತಿಕ ಸ್ವರೂಪವನ್ನು ಕೊಡುವ ಹೋರಾಟವನ್ನು ಆರಂಭಿಸಿತು. ಕೃಷ್ಣಪ್ಪನವರ ನೇತೃತ್ವದಲ್ಲಿ ಬಹುಬೇಗನೇ ಈ ಚಳುವಳಿ ಭೂರಹಿತ ರೈತ ಕಾರ್ಮಿಕರಾದ ದಲಿತರ ಸಮಸ್ಯೆ, ದಲಿತ ಮಹಿಳೆಯ ಮೇಲಿನ ಅತ್ಯಾಚಾರ, ದಲಿತ ಸಂಸ್ಕೃತಿಯ ಅವಹೇಳನದ ವಿರುದ್ಧ ಸಂಘಟಿತ ಹೋರಾಟ ಮುಂತಾದ ಮಹತ್ವಪೂರ್ಣ ವಿಷಯಗಳನ್ನು ಎತ್ತಿಕೊಂಡು ಪ್ರಬುದ್ಧವಾಗಿ ಬೆಳೆಯಿತು.ಇಂದು ಈ ಚಳುವಳಿ ಛಿದ್ರವಾಗಿ ಹೋಗಿದೆ ಎನ್ನುವಾಗಲೇ ನಾನು ಇದನ್ನು ಬರೆಯುತ್ತಿರುವ ಇಂದಿನ ‘ಪ್ರಜಾವಾಣಿ’ಯಲ್ಲಿ (12-2-2011) ಒಬ್ಬ ದಲಿತ ಯುವತಿ, ದಲಿತರ ಸಂಘ ನಮ್ಮೂರಲ್ಲಿದ್ದಾಗ ಹೀಂಗೆ ಯಾವ ಮಗನು ಮಾತಾಡಂಗಿರ್ಲಿಲ್ಲ” ಇಂದಿಗೂ ಹೇಳುತ್ತಾಳೆ ಎನ್ನುವುದನ್ನು ಗಮನಿಸಬೇಕು. ತನ್ನೆಲ್ಲ ಅವನತಿಗಳ ಮಧ್ಯೆ ದಲಿತ ಸಂಘರ್ಷ ಸಮಿತಿ ಹುಟ್ಟಿಸುವ ಆತ್ಮವಿಶ್ವಾಸ ದಲಿತ ಜನಾಂಗಗಳ ಮೇಲೆ ಶಾಶ್ವತವಾದ ಪರಿಣಾಮವನ್ನು ಮಾಡಿದೆ ಎನ್ನುವುದು ನಿಶ್ಚಿತ. ಈ ಚಳುವಳಿಯನ್ನು ಕಟ್ಟಿ ಬೆಳೆಸುವುದರಲ್ಲಿ ಮಹಾದೇವರ ಪಾತ್ರ ಬಹಳ ದೊಡ್ಡದು. ಆರಂಭದ ದಿನಗಳಲ್ಲಿಯೇ ಕೃಷ್ಣಪ್ಪ, ಸಿದ್ಧಲಿಂಗಯ್ಯ ಮತ್ತು ಮಹಾದೇವರಂಥ ಸೂಕ್ಷ್ಮ ಸಂವೇದನೆಯ ಹಾಗೂ ಸಾಹಿತಿಗಳ ಮುಂದಾಳತ್ವ ಪಡೆದದ್ದು ಡಿಎಸ್‍ಎಸ್‍ನ ಸುದೈವವಾಗಿತ್ತು. ಚಳುವಳಿಗಳನ್ನು ವ್ಯಕ್ತಿಗಳ ಕೊಡುಗೆಯಾಗಿ ನೋಡುವುದು ನನಗೆ ಸಮ್ಮತವಲ್ಲವಾದರೂ ಸಾಮಾಜಿಕ ಚಳುವಳಿಗಳಲ್ಲಿ ವ್ಯಕ್ತಿತ್ವಗಳೂ ಮುಖ್ಯವಾಗುತ್ತವೆ. ತಾವು ಮೂವರು ವಹಿಸಿದ ಪಾತ್ರಗಳ ಬಗ್ಗೆ ಮಹಾದೇವರೇ ಬರೆದ ಲಘುಶೈಲಿಯ ಟಿಪ್ಪಣಿಯನ್ನು ನೋಡಬಹುದು. ಮಹಾದೇವರು ದಲಿತ ಚಳುವಳಿಗೆ ಒಂದು ವಿಶಾಲವಾದ ಸಾಂಸ್ಕೃತಿಕ ಆಯಾಮವನ್ನು ನೀಡಿದರು. ಅದಕ್ಕೆ ಸಾಹಿತ್ಯಕ ಸಾಂಸ್ಕೃತಿಕ ವಲಯದಲ್ಲಿ ಅಧಿಕೃತತೆಯನ್ನು ತಂದುಕೊಟ್ಟರು.ತಮ್ಮ ಪ್ರಾಮಾಣಿಕತೆಯಿಂದಾಗಿ ಚಳುವಳಿಯ ಚಿಂತನೆ ಹಾಗೂ ಕ್ರಿಯೆಗಳು ಪೆಡಸಾಗದಂತೆ, ಜಡವಾಗದಂತೆ ಪ್ರಯತ್ನಿಸಿದರು.ಗಾಂಧಿ ಸಿನಿಮಾ ನೋಡಿದ್ದರ ಬಗ್ಗೆ ಬರೆದು ಗಾಂಧಿ-ಅಂಬೇಡ್ಕರ್‍ರನ್ನು ಎರಡು ವಿರುದ್ಧ ಧ್ರುವಗಳನ್ನಾಗಿ ನೋಡುವ ಕ್ರಮದಲ್ಲಿ ಪಲ್ಲಟ ತಂದರು. ಆನಂತರ ಬಂದ ಡಿ.ಆರ್.ಅವರ ‘ಉರಿವ ಚಮ್ಮಾಳಿಗೆ” ಈ ಕ್ರಮವನ್ನು ಮುಂದುವರೆಸಿತು. ಆದರೆ ಹೀಗೆ ಮಾಡುತ್ತಲೇ ಗಾಂಧಿ ಆಕಾಶಕ್ಕೆ ಮೂರುಗೇಣು ಕಮ್ಮಿ ಎಂದೂ ಖಚಿತವಾಗಿ ಹೇಳಿದರು. ಬಂಡಾಯವೆಂದರೆ ‘ಬಂಡೆಗಲ್ಲಲ್ಲಿ ಚಿಗುರು ಮೂಡಿಸುವ ಕೆಲಸ’ವೆಂದು ಹೇಳಿ ದಲಿತ ಬಂಡಾಯ ಚಳುವಳಿಗಳ ಸಂಬಂಧವನ್ನು ಕುದುರಿಸಿದರು. ಸಾವಿರಾರು ವರ್ಷಗಳ ಕನ್ನಡ ಸಾಹಿತ್ಯ ಪರಂಪರೆಯ ವಿಮರ್ಶೆಯು ಅದು ಎಷ್ಟರಮಟ್ಟಿಗೆ ದಮನಿತ ವರ್ಗಗಳ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿದೆಯೆನ್ನುವ ಪ್ರಶ್ನೆಯನ್ನು ಕೇಳಿಕೊಂಡಿರಲಿಲ್ಲ. ಸಾಹಿತ್ಯವೆನ್ನುವ ಸಂಸ್ಥೆ ಯಾವ ಅನುಭವಲೋಕಗಳನ್ನು ಹೊರಗಿಟ್ಟಿದೆ ಎನ್ನುವ ಪ್ರಶ್ನೆಯನ್ನು ಕೇಳಿರಲಿಲ್ಲ. ಅದನ್ನು ಒರಟಾಗಿ ಹಾಗೂ ಪ್ರಾಮಾಣಿಕವಾಗಿ ಬಸವಲಿಂಗಪ್ಪನವರು ‘ಕನ್ನಡ ಸಾಹಿತ್ಯವನ್ನು ಬೂಸಾ’ ಎಂದು ಕರೆದು ಎತ್ತಿದರು. ಮಹಾದೇವ ಸಾಹಿತ್ಯ ಪರಂಪರೆಯಲ್ಲಿ ಮಾನವಪರ ಮೌಲ್ಯಗಳನ್ನು ಶೋಧಿಸುವುದೆಂದರೆ ‘ಹೆಣದ ರಾಶಿಯಲ್ಲಿ ಜೀವ ಹುಡುಕುವ ಕೆಲಸ’ ಎಂದು ವರ್ಣಿಸಿ ಈ ಪ್ರಶ್ನೆಗೆ ಸ್ಪಂದಿಸಿದರು. ಹೀಗೆ ತಮ್ಮ ಸಂಕ್ಷಿಪ್ತವಾದ ಆದರೆ ಅಪಾರ ಅರ್ಥವಂತಿಕೆಯ ರೂಪಕಕೇಂದ್ರಿತ ಹೇಳಿಕೆಗಳಿಂದ ಮಹಾದೇವ ಕನ್ನಡ ಸಮಾಜದ ಬಹುಮುಖ್ಯ ಸಂವಾದಗಳಲ್ಲಿ ಭಾಗಿಯಾಗುತ್ತ ಬಂದಿದ್ದಾರೆ.“ ಜಾಗತೀಕರಣ ವ್ಯಾಪಾರವಲ್ಲ; ಅದು ಯುದ್ಧ” “ಮಾಹಿತಿ ತಂತ್ರಜ್ಞಾನ ನರಭಕ್ಷಕ ತಂತ್ರಜ್ಞಾನ”…ಇವು ನಮ್ಮ ಕಾಲದ ರಾಜಕೀಯದ ‘ನಿರ್ಲಜ್ಯತನ’ ಹೀಗೆ ಇತ್ತೀಚಿನ ಸಂವಾದಗಳಲ್ಲಿ ತಮ್ಮ ಒಳನೋಟಗಳನ್ನು ಸೇರಿಸಿದ್ದಾರೆ.

 

‘ಬೆತ್ತಲೆ ಸೇವೆ ಯಾಕೆ ಕೂಡದು’ ಎಂದು ಬ್ರಾಹ್ಮಣ ಬುದ್ಧಿಜೀವಿವರ್ಗ ವಾದಿಸಿದಾಗ “ಬೆತ್ತಲೆ ಸೇವೆಯನ್ನು ನೋಡುವವರೂ ಬೆತ್ತಲೆಯಾಗಿದ್ದರೆ ಸರಿ” ಎನ್ನುವ ಮೂಲಕ ಆ ವಾದಕ್ಕೆ ತೆರೆ ಎಳೆದರು.(ತೀರಾ ಇತ್ತೀಚಿನ ಮಡೆಸ್ನಾನ ವಿವಾದದ ಬಗ್ಗೆ ‘ದಲಿತರು ಉಂಡ ಎಲೆಗಳ ಮೇಲೆ ಬ್ರಾಹ್ಮಣರು ಉರುಳಾಡಿದರೆ ಆಗಬಹುದೇನೋ” ಎನ್ನುತ್ತಾರೆಂದು ಕಾಯುತ್ತಿದ್ದೇನೆ!) ಹೀಗೆ ನಮ್ಮ ಪ್ರಮುಖ ವಾಗ್ವಾದಗಳಲ್ಲಿ ಮಹಾದೇವರು ಮಾಡುತ್ತ ಬಂದಿರುವ interactions ಸಾಂಸ್ಕೃತಿಕವಾಗಿ ಬಹಳ ಮಹತ್ವಪೂರ್ಣವಾಗಿವೆ. ಅಲ್ಲದೆ ಅಕ್ಯಾಡೆಮಿಕ್ ಅಲ್ಲದ, ಭಾರವಲ್ಲದ ರೂಪಕನಿಷ್ಠ ಮಾತುಗಳಲ್ಲಿ ಇಷ್ಟೆಲ್ಲಾ ವಿಷಯಗಳ ಬಗ್ಗೆ ಚಿಂತಿಸಬಹುದೆಂದು ತೋರಿಸಿ ಪರ್ಯಾಯವಾದ ವೈಚಾರಿಕ ನುಡಿಗಟ್ಟನ್ನು ಅವರು ರೂಪಿಸಿದ್ದಾರೆ. ಇದು ಚಾಲ್ತಿಯಲ್ಲಿರುವ ವೈಚಾರಿಕ ನುಡಿಗಟ್ಟಿನಿಂದ ಬಹಳ ಭಿನ್ನವಾಗಿರುವುದರಿಂದಾಗಿ ಇದರ ಪ್ರಖರ ವೈಚಾರಿಕತೆಯನ್ನು ನಾವಿಂದೂ ಗುರುತಿಸಿಲ್ಲ.

 

ಇದೆಲ್ಲಾ ಹೇಳುವಾಗ ಮಹಾದೇವರ ವ್ಯಕ್ತಿತ್ವ ಹಾಗೂ ಡಿ.ಎಸ್.ಎಸ್.ನಲ್ಲಿ ವಹಿಸಿದ ಪಾತ್ರಗಳ ಬಗ್ಗೆ ಅತ್ಯಂತ ಕಟುವಾದ ಅಭಿಪ್ರಾಯಗಳಿವೆ ಎನ್ನುವುದನ್ನೂ ನಾನು ಬಲ್ಲೆ. ಇವರ ಎಡಬಿಡಂಗಿತನದಿಂದಾಗಿ ಡಿ.ಎಸ್.ಎಸ್ ಹೋಳಾಯಿತು, ಕೃಷ್ಣಪ್ಪನವರ ಹೋರಾಟ ಸೋತಿತು ಎಂದು ಗಟ್ಟಿಯಾಗಿ ನಂಬಿರುವ ಒಂದು ದೊಡ್ಡ ಗುಂಪು ಇದೆ. ಸಾಹಿತ್ಯಕ ವಲಯದಲ್ಲಿ ಪ್ರಭಾವಿಯಾದವರ ಸಾನಿಧ್ಯದಿಂದಾಗಿ ತಮ್ಮ radical ಗುಣ ಕಳೆದುಕೊಂಡರು ಎನ್ನುವ ಸಂಶಯವೂ ಅನೇಕರಲ್ಲಿದೆ. ಅವರ ಎಚ್ಚರದ ಕಲಾತ್ಮಕತೆಯು ದಲಿತ ಅನುಭವದ ಹಿಂಸೆಯನ್ನು ಮರೆಮಾಚಿ ಅದನ್ನು ನವಿರಾಗಿ ಮಂಡಿಸುತ್ತದೆ ಎನ್ನುವ ಗಂಭೀರ ಓದುಗರೂ ಇದ್ದಾರೆ. ದಲಿತ ಚಳುವಳಿಗಳೂ ಸೇರಿದಂತೆ 70, 80ರ ದಶಕದ ಸಾಮಾಜಿಕ ಚಳುವಳಿಗಳ ವಸ್ತುನಿಷ್ಠವಾದ ಚಾರಿತ್ರಿಕ ಅಧ್ಯಯನ ಇದುವರೆಗೆ ನಡೆದಿಲ್ಲವಾದ್ದರಿಂದ ಅವುಗಳ ಸೋಲಿನ ಹೊಣೆಯನ್ನು ಅವುಗಳ ನೇತಾರರ ವ್ಯಕ್ತಿತ್ವದ ಮೇಲೆ ಹೊರೆಸಲಾಗುತ್ತಿದೆ. ನನಗೆ ತೋರುವ ಹಾಗೆ ಈ ಚಳುವಳಿಗಳಿಗೆ ಇದ್ದ ಸಾಂಸ್ಕೃತಿಕ ಜೀವಂತಿಕೆಗೆ ಸಮಾನವಾದ ರಾಜಕೀಯ ಕ್ರಿಯಾಶೀಲತೆ ಇರಲಿಲ್ಲ. ಆದ್ದರಿಂದ ಅವು ಪ್ರಜ್ಞೆಯಲ್ಲಿ ಬದಲಾವಣೆಗಳನ್ನು ತರುವುದರಲ್ಲಿ ಸಫಲವಾದವೇ ಹೊರತು ಸಮಾಜದ ರಚನೆಗಳಲ್ಲಿ, ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರಲಾಗಲಿಲ್ಲ. ಇದನ್ನು ಅರ್ಥಮಾಡಿಕೊಳ್ಳದಿದ್ದರೆ ಅವುಗಳ ಸೋಲಿನ ಜವಾಬ್ದಾರಿಯನ್ನು ಒಬ್ಬ ವ್ಯಕ್ತಿಯ ಮೇಲೆ ಹೊರೆಸುವುದು ಸುಲಭವಾಗುತ್ತದೆ. ದಲಿತ ಚಳುವಳಿ ಒಡೆದು ತುಂಡಾಗಿರುವುದು ಮಾತ್ರ ನಮ್ಮ ಕಾಲದ ಅತಿದೊಡ್ಡ ಸಾಂಸ್ಕೃತಿಕ ದುರಂತವಾಗಿದೆ.

 

ನನಗೆ ಮಹಾದೇವರು ಮುಖ್ಯರಾಗುವುದು ಅವರು ಸೃಷ್ಟಿಸಿದ ಅನನ್ಯವಾದ ಕಥನಗಳಿಂದಾಗಿ. ಒಟ್ಟಾರೆ 180ಕ್ಕೂ ಕಡಿಮೆ ಪುಟಗಳ ಸೃಜನಶೀಲ ಸಾಹಿತ್ಯವನ್ನು ರಚಿಸಿರುವ ಮಹಾದೇವರು ದಲಿತ ಲೋಕವನ್ನು(cosmos) ಕಟ್ಟಿಕೊಟ್ಟಿರುವ ರೀತಿ ಅಪೂರ್ವವಾದುದು. ‘ಗ್ರಸ್ತರು’, ‘ಒಂದು ದಹನದ ಕಥೆ’ ಈ ಮುಂತಾದ ಕತೆಗಳ ವ್ಯಗ್ರತೆಯಿಂದ, ‘ಒಡಲಾಳ’ದ ಸಾಕವ್ವನ ಮನೆಯ ಅದ್ಭುತ ನಿಬಿಡ ಮನುಷ್ಯ ಪ್ರಪಂಚದವರೆಗೆ, ‘ಕುಸುಮಬಾಲೆ’ಯ ಹಲವು ಅವ್ವಂದಿರ ಸಹನೆ ಹಾಗೂ ಪ್ರೀತಿಯಿಂದ ಚೆನ್ನನ ತಂದೆ-ತಾಯಿಯರ ಮುಗ್ಧ ದುರಂತಮಯ ಪ್ರೀತಿಯವರೆಗೆ ಹೀಗೆ ಮನುಷ್ಯಜೀವಿಗಳ ಅನುಭವಗಳು ಒಂದು ಸಂಕೀರ್ಣವಾದ ಸಿಂಫನಿ (symphony)ಯಾಗಿ ಅವರ ಕಥನಲೋಕವು ನನಗೆ ಕಂಡಿದೆ. ದುಷ್ಟ ಕಮೀಷನರ್, ಗೋಡೆಯ ಮೇಲಿನ ನವಿಲುಗಳು, ದೇವದೂತೆಯಾಗಿ ಮಾರ್ಪಡುವ ಸಾಕವ್ವ, ಕದ್ದ ಕಡಲೆಕಾಯಿಯನ್ನು ಕೂತು ತಿನ್ನುವ ದಲಿತ ಕುಟುಂಬದ ‘ಯಜ್ಞ’ ಇವೇ ಮುಂತಾದ ಅದ್ಭುತ ರೂಪಕಗಳ ಮೂಲಕ ದಲಿತಲೋಕದ ಅವಮಾನ, ಶೋಷಣೆಗಳ ಜೊತೆಗೆ ಅದರ ಜೀವಂತಿಕೆ, ಕ್ರಿಯಾಶೀಲತೆಯನ್ನು ದರ್ಶಿಸಿದ್ದಾರೆ. ಮೇಲಿನ ಕೇರಿಯವರ ಜಡಗಟ್ಟಿಸುವ ಸಂಕಥನಗಳಿಂದಾಚೆಗೆ ತನ್ನದೇ ಸ್ವಾಯತ್ತತೆಯುಳ್ಳ ದಲಿತ ವಿಶ್ವವನ್ನು ವಿವರಿಸುವ ಕಥನಕ್ರಮಗಳನ್ನು ಶೋಧಿಸಿದ್ದಾರೆ. ಇದಕ್ಕಿಂತ ದೊಡ್ಡದನ್ನು ಏನು ಮಾಡಬಹುದು?

 

ಪದ್ಮಶ್ರೀ ಅಮಾಸನಿಗೆ ಅಭಿನಂದನೆಗಳು.