ನಿರಂಕುಶಮತಿಗೊಂದು ನೈತಿಕ ನೆಲೆ ಒದಗಿಸಿದ ಕವಿ-ಪ್ರಸನ್ನ

ನೋಯುತ್ತಿರುವ ಹಲ್ಲಿನೆಡೆಗೆ ನಾಲಗೆಯು ಹೊರಳುವಂತೆ ನನ್ನ ವಿಚಾರಗಳು ಸೃಜನಶೀಲತೆಯ ಬಿಕ್ಕಟ್ಟಿನೆಡೆಗೆ ಮತ್ತೆ ಮತ್ತೆ ಹೊರಳುತ್ತಿವೆ. ಸೃಜನಶೀಲತೆ, ಸೃಜನಾತ್ಮಕತೆ, ಕಲಾತ್ಮಕತೆ ಅಥವಾ ಕಾವ್ಯವೃತ್ತಿ, ಯಾವುದೇ ಹೆಸರಿನಿಂದ ಕರೆಯಿರಿ ನೀವು, ಅದು ಎದುರಿಸುತ್ತಿರುವ ಬಿಕ್ಕಟ್ಟು ಮಾತ್ರ ತೀವ್ರ ಸ್ವರೂಪದ್ದು. ಮೇಲ್ನೋಟಕ್ಕೆ ಬಿಕ್ಕಟ್ಟಿದೆ ಎಂದು ಕಾಣದೆ ಹೋಗಬಹುದು, ಸೃಜನಶೀಲ ವೃತ್ತಿಗಳಿಗೆ ಯಂತ್ರನಾಗರಿಕತೆ ಕೊಡುತ್ತಿರುವ ‘ದುಬಾರಿ ಕೂಲಿಯ’ ಫಲವಾಗಿ ಕಾಣದೆ ಹೋಗಬಹುದು. ಆದರೆ ಅದು ಇದೆ, ಸಿಡಿಯಲಿರುವ ಅಗ್ನಿಪರ್ವತದಂತೆ ಆಳದಲ್ಲಿ ಬುಸುಗುಡುತ್ತಿದೆ.

ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಹಲವು ಸಾಹಿತಿ, ಕಲಾವಿದರು ಕಾವ್ಯವೃತ್ತಿಗೇ ಬೆನ್ನು ತಿರುಗಿಸಿ ನಡೆದಿದ್ದಾರೆ. ಬೆನ್ನು ತಿರುಗಿಸಲಾಗದ, ಒಳಗೂ ಉಳಿಯಲಾಗದ ಕೆಲವರು ಮಾದಕ ವ್ಯಸನಿಗಳಾಗಿ ಹತಭಾಗ್ಯರಾಗಿದ್ದಾರೆ.  ಬೆನ್ನು ತಿರುಗಿಸುವಲ್ಲಿ ಯಶಸ್ವಿಯಾದವರು ಸಾಮಾಜಿಕ ಕಾರ್ಯಗಳತ್ತ ತಿರುಗಿದ್ದಾರೆ. ಲಾಭದಾಯಕ ವೃತ್ತಿಯೊಂದನ್ನು ತೊರೆದು ಸಾಮಾಜಿಕ ಕಾರ್ಯದತ್ತ ಹೊರಳುವುದೆಂದರೆ ಆರ್ಥಿಕ ಹಿಂಜರಿತ ಅನುಭವಿಸಬೇಕಾಗುತ್ತದೆ  ಎಂಬುದು ನಿಜವಾದರೂ, ಹಾಗೆ ಹೊರಳಿದವರಿಗೆ ಮಹತ್ತರವಾದ ಒಂದು ಅರಿವಾಗಿದೆ.

ಸಾಹಿತ್ಯ ಹಾಗೂ ಕಲೆಗಳ ಕ್ಷೇತ್ರಕ್ಕೆ ಸೀಮಿತವಾದ ‘ಹಲ್ಲುನೋವು’ ಎಂದು ತಾವು ತಿಳಿದದ್ದು ಸಮಾಜದ ಆಳ ಅಗಲಗಳನ್ನು ವ್ಯಾಪಿಸಿರುವ ಗಂಭೀರವಾದ ಕಾಯಿಲೆಯೆಂದು ಅವರಿಗೆ ಅರಿವಾಗಿದೆ. ತಾವು ನಡೆಸುತ್ತಿರುವ ಸಾಮಾಜಿಕ ಕಾರ್ಯದಿಂದಾಗಿ ಸಮಾಜ ಬದಲಾಗುತ್ತದೆಯೋ ಬಿಡುತ್ತದೆಯೋ ತಮಗಂತೂ ಮನಶ್ಶಾಂತಿ ಸಿಗುತ್ತಿದೆ ಎಂದು ಅರಿವಾಗಿದೆ.

ಇತ್ತ, ಸೃಜನಶೀಲ ವೃತ್ತಿಗಳಲ್ಲಿ ಅನಿವಾರ್ಯವಾಗಿ ಉಳಿದಿರುವವರಿಗೆ, ಪಂಜರದೊಳಗಣ ಸುಂದರ ಗಿಳಿಗಳು ತಾವು, ಮಾರುಕಟ್ಟೆಯ ಅಧೀನಕ್ಕೊಳಪಟ್ಟವರು, ಮನರಂಜನೆಯೆಂಬ ಪದಾರ್ಥವನ್ನು ಉತ್ಪಾದಿಸುವ ಕಾರಖಾನೆಗಳ ದುಬಾರಿ ಕೂಲಿಯಾಳುಗಳು ಎಂದು ಅರಿವಾಗತೊಡಗಿದೆ. ಅಥವಾ ಸರ್ಕಾರಿ ಕೃಪಾಪೋಷಿತ ಮಂಡಳಿಗಳ ‘ಅರೆವೃತ್ತಿ’ ಸೃಜನಶೀಲರು ತಾವು, ತಮ್ಮ ಅಭಿವ್ಯಕ್ತಿ ಎಂಬುದು ಅರ್ಥಹೀನ ಪ್ರಶಸ್ತಿಗಳ ಮೂಲಕ ಅಳೆಯಲಾಗುತ್ತಿರುವ ಸಾಮಾಜಿಕ ಬಂಜೆತನ ಎಂದು ಅರಿವಾಗತೊಡಗಿದೆ. ಅರಿವೇ ಇರದ ಕೂಲಿಯಾಳುಗಳೂ ಇದ್ದಾರೆ ಈ ಕ್ಷೇತ್ರದಲ್ಲಿ.

ಇದು ಇಂದಿನ ಪರಿಸ್ಥಿತಿ. ಇದರ ಪರಿಹಾರಾರ್ಥವಾಗಿ ಕನ್ನಡ ನವೋದಯ ಚಳವಳಿಯ ವಿಚಾರಗಳು ಮತ್ತೆ ಮತ್ತೆ ನನಗೆ ನೆನಪಾಗತೊಡಗಿವೆ. ಅದರಲ್ಲೂ ಮುಖ್ಯವಾಗಿ, ನವೋದಯ ಚಳವಳಿಯ ಪ್ರಣಾಳಿಕೆ ಎಂದೇ ನಾನು ಪರಿಗಣಿಸುವ, ಕುವೆಂಪು ಅವರ ‘ನಿರಂಕುಶಮತಿಗಳಾಗಿರಿ’ ಲೇಖನ ನೆನಪಾಗತೊಡಗಿದೆ. ಆ ಲೇಖನವನ್ನು  ಮುಂದಿಟ್ಟುಕೊಂಡು ಸೃಜನಶೀಲತೆಯ ಬಗೆಗೆ ಕೆಲವು ವಿಚಾರಗಳನ್ನು ಮಂಡಿಸ ಬಯಸುತ್ತೇನೆ. ‘ನಿರಂಕುಶಮತಿಗಳಾಗಿರಿ’ ಲೇಖನದಲ್ಲಿ ಕುವೆಂಪು ಎರಡು ಪದಗಳನ್ನು- ಪರಿಕಲ್ಪನೆಗಳು ಅನ್ನಿ ಬೇಕಿದ್ದರೆ, ಪ್ರಧಾನವಾಗಿ ಬಳಸುತ್ತಾರೆ. ಅವುಗಳೆಂದರೆ ಮತಿ ಹಾಗೂ ಮತ.

ಮತಿಯೆಂದರೆ ನಿಮಗೆಲ್ಲ ತಿಳಿದೇ ಇರುವಂತೆ ಅರಿವು, ಬುದ್ಧಿ, ವಿಚಾರ. ಮತವೆಂದರೆ ನಿಷ್ಠೆ; ಮತೀಯನಿಷ್ಠೆ,  ಸೈದ್ಧಾಂತಿಕನಿಷ್ಠೆ, ಪಕ್ಷನಿಷ್ಠೆ ಇತ್ಯಾದಿ. ಕವಿಯ ಪ್ರಕಾರ ಮತವೆಂಬುದು ಮತಿಗೆ ಹಾಕಿದ ಮಿತಿಯಾಗಿದೆ; ನೈತಿಕ ಮುಖವಾಡ ತೊಡಬಲ್ಲ ಹಾಗೂ ಆ ಕಾರಣದಿಂದಾಗಿ ಅಪಾಯಕಾರಿಯಾಗಬಲ್ಲ ಮಿತಿಯಾಗಿದೆ. ಅರಿವಿಗೆ ಅಂಕುಶ ಹಾಕದಿರು ಎಂದು ಅವರು ಯುವಕರಿಗೆ ಕರೆ ಕೊಡುತ್ತಾರೆ. ಹೆದರದೆ ವಿಚಾರ ಮಾಡು, ಸ್ವಚ್ಛಂದ ಆಕಾಶದಲ್ಲಿ ಹಕ್ಕಿ ಹಾರುವಂತೆ, ಅರಿವೆಂಬ ರೆಕ್ಕೆ ಪಟಪಟಿಸುತ್ತ ವೈಚಾರಿಕ ಆಕಾಶದಲ್ಲಿ ಹಾರು ನೀನು ಎಂದು ಯುವಕರನ್ನು ಹುರಿದುಂಬಿಸುತ್ತಾರೆ. ಇತ್ತ ಮತದ ಟೀಕೆ ಮಾಡುತ್ತ, ಅತಿಯಾದ ಮತನಿಷ್ಠೆಯೇ ಮೂಢನಂಬಿಕೆ ಎಂದು ತಿರಸ್ಕರಿಸುತ್ತಾರೆ.

ಆದರೆ, ಕವಿ ನೈತಿಕತೆಯನ್ನು ತಿರಸ್ಕರಿಸುವುದಿಲ್ಲ, ಅತಿಯಾದ ಮತನಿಷ್ಠೆಯನ್ನು ಮಾತ್ರವೇ ತಿರಸ್ಕರಿಸುತ್ತಾರೆ. ನೈತಿಕತೆಯ ಹೆಸರಿನಲ್ಲಿ ವಿಚಾರಕ್ಕೆ ಮಿತಿ ಹಾಕುವುದನ್ನು ತಿರಸ್ಕರಿಸುತ್ತಾರೆ. ನೈತಿಕತೆಯೆಂದರೆ  ಮತನಿಷ್ಠೆಯಲ್ಲ ಎಂದು ನಂಬುವ ಅವರು, ನೈತಿಕತೆ ನಡೆಯಲ್ಲಿದೆ ಅರ್ಥಾತ್ ಆಚಾರದಲ್ಲಿದೆ ಎಂದು ತಿಳಿಯುತ್ತಾರೆ. ಹಾಗೆಂದೇ ಗ್ರಾಮಸೇವೆ ಮಾಡಿರಿ ಎಂದು ಯುವಕರಿಗೆ ಕರೆ ಕೊಡುತ್ತಾರೆ. ಕವಿಯ ಪ್ರಕಾರ ಗ್ರಾಮ ಸೇವೆಯೇ ಅಂದಿನ ಸಂದರ್ಭಕ್ಕೆ ಸೂಕ್ತವಾದ ನೈತಿಕಮಿತಿ.

ಅವರು ‘ನಿರಂಕುಶಮತಿಗಳಾಗಿರಿ’ ಲೇಖನ ಬರೆದದ್ದು ಸ್ವಾತಂತ್ರ್ಯಪೂರ್ವದಲ್ಲಿ: ಭಾರತೀಯರೆಲ್ಲ ಒಂದಾಗಿ ವಸಾಹತುಶಾಹಿ ಗುಲಾಮಗಿರಿಯ ವಿರುದ್ಧ ಬಂಡೆದ್ದ ಕಾಲಘಟ್ಟದಲ್ಲಿ; ಹೊಸ ವಿಚಾರಗಳು ದೇಶವನ್ನು ರೂಪಿಸುತ್ತಿದ್ದ ಕಾಲಘಟ್ಟದಲ್ಲಿ. ಹಳ್ಳಿಗೆ ತೆರಳಿ ಎಂದು ವಿದ್ಯಾವಂತ ಯುವಕರಿಗೆ ಕರೆ ಕೊಡುವಲ್ಲಿ ಆಗ ಕವಿಗೆ ಎರಡು ಕಾರಣಗಳಿದ್ದವು.

ಯುವಕರು ವೈಚಾರಿಕ ಅಸ್ತ್ರ ಬಳಸಿ ಗ್ರಾಮೀಣ ಜನರ ಮೂಢನಂಬಿಕೆಯನ್ನು ಹರಿಯಬೇಕು ಎಂಬುದು ಮೊದಲ ಕಾರಣವಾದರೆ, ಗ್ರಾಮಗಳ ಶ್ರಮಸಹಿತ ಸರಳ ಬದುಕಿನಿಂದ ಪ್ರಭಾವಿತರಾಗಿ ತಮ್ಮ ಆಚಾರವನ್ನು ಅವರು ರೂಪಿಸಿಕೊಳ್ಳಬೇಕು ಎಂಬುದು ಎರಡನೆಯ ಕಾರಣವಾಗಿತ್ತು. ಎರಡನೆಯ ಕಾರಣವು ‘ನಿರಂಕುಶಮತಿಗಳಾಗಿರಿ’ ಲೇಖನದಲ್ಲಿ ಧ್ವನಿತವಾಗಿಲ್ಲ ನಿಜ. ಆದರೆ ಅವರ ಸೃಜನಶೀಲ ಬರವಣಿಗೆಗಳ ಕೇಂದ್ರದಲ್ಲಿರುವ ಆಶಯವದು. ಹೂವಯ್ಯನ ಆಶಯವದು.

‘ನಿರಂಕುಶಮತಿಗಳಾಗಿರಿ’ ಲೇಖನದ ಮಹತ್ವ ಇಲ್ಲಿಗೇ ನಿಲ್ಲುವುದಿಲ್ಲ. ಮತಿಯನ್ನು ಆಧುನಿಕ ಯುಗಕ್ಕೆ ಕರೆತಂದು ನಿಲ್ಲಿಸುತ್ತಾರೆ ಕುವೆಂಪು.  ಹಾಗೆ ತಂದು ನಿಲ್ಲಿಸಿ ವೈಚಾರಿಕತೆಯನ್ನು ವೈಜ್ಞಾನಿಕತೆ ಎಂದು ನಿರ್ವಚಿಸುತ್ತಾರೆ. ವೈಜ್ಞಾನಿಕವಾದ ಮತಿ ಹಾಗೂ ಗ್ರಾಮಸೇವೆಯೆಂಬ ನೈತಿಕ ಮಿತಿ ಇದು ಕುವೆಂಪು ರೂಪಿಸಿದ ‘ಫಾರ್ಮುಲ’. ‘ನಿರಂಕುಶಮತಿಗಳಾಗಿರಿ’ ಲೇಖನದ ಕ್ರಾಂತಿಕಾರಿ ಗುಣವಿರುವುದು ಈ ಸಂಯೋಜನೆಯಲ್ಲಿಯೇ ಹೊರತು ಕೇವಲ ನಿರಂಕುಶಮತಿಯಲ್ಲಲ್ಲ.

ಯುವಕರಿಗೆ ಕವಿಯು ನೀಡಿದ ಈ  ‘ಫಾರ್ಮುಲ’ ಸೃಜನಶೀಲರಿಗೂ ಅನ್ವಯಿಸುತ್ತದೆ, ಇಪ್ಪತ್ತೊಂದನೆಯ ಶತಮಾನದ ‘ಯಂತ್ರಚಾಲಿತ’ ಸೃಜನಶೀಲರಿಗೆ ಕೊಂಚ ಹೆಚ್ಚಾಗಿಯೇ ಅನ್ವಯಿಸುತ್ತದೆ. ಏಕೆಂದರೆ ನಂತರದ ಎಲ್ಲ ಸೃಜನಶೀಲ ಚಳವಳಿಗಳೂ ಕೇವಲ ನಿರಂಕುಶಮತಿಯನ್ನು ಹೊಗಳಿದವು.
ಲೇಖನದಲ್ಲಿ ಯಂತ್ರನಾಗರಿಕತೆಯ ಪ್ರಸ್ತಾಪವಿಲ್ಲ ನಿಜ. ಆದರೆ ಅವರ ಇತರೆ ಬರಹಗಳಲ್ಲಿ ಇದೆ. ಯಂತ್ರನಾಗರಿಕತೆಯೆಂದರೆ ಯಂತ್ರಪ್ರಣೀತ ಜೀವನಶೈಲಿ ಅಥವಾ ಯಂತ್ರಾಚಾರ. ಯಂತ್ರನಾಗರಿಕತೆ ಒಂದು ಜೀವನಶೈಲಿಯೇ ಹೊರತು ವೈಚಾರಿಕತೆಯಲ್ಲ. ಕವಿಯು ಆಧುನಿಕ ವೈಚಾರಿಕತೆಯನ್ನು ಸ್ವೀಕರಿಸುತ್ತಾರೆ, ಆಧುನಿಕ ಜೀವನಶೈಲಿಯನ್ನು ತಿರಸ್ಕರಿಸುತ್ತಾರೆ. ನಾವು, ಆಧುನಿಕ ಜೀವನಶೈಲಿಯನ್ನು ಸ್ವೀಕರಿಸಿದ್ದೇವೆ ಮಾತ್ರವಲ್ಲ, ಆಧುನಿಕ ಜೀವನಶೈಲಿಯೇ ವೈಚಾರಿಕತೆ ಎಂದು ಭ್ರಮಿಸಿದ್ದೇವೆ.

ಯಂತ್ರನಾಗರಿಕತೆ ಮತಿಹೀನ ನಾಗರಿಕತೆ. ಅದೊಂದು ಅನಾಚಾರ. ಕುವೆಂಪು ನಂತರದ ದಶಕಗಳಲ್ಲಿ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿರುವ ಸಂಗತಿಯಿದು. ಯಂತ್ರಗಳ ಬಗೆಗೆ ನಾವು ತೋರಿಸುತ್ತಿರುವುದು ಮತನಿಷ್ಠೆಯನ್ನು, ಮೂಢನಂಬಿಕೆಯನ್ನು. ಇದುವೇ ನಮ್ಮ ಬಿಕ್ಕಟ್ಟು. ನಾವು ನಿವಾರಿಸಬೇಕಿರುವುದು ಒಂದು ಮೂಢನಂಬಿಕೆಯನ್ನಲ್ಲ, ಎರಡೆರಡು ಮೂಢನಂಬಿಕೆಗಳನ್ನು. ಹಳೆಯ ಕಂದಾಚಾರ ಹಾಗೂ ಹೊಸ ಯಂತ್ರಾಚಾರ ಎರಡನ್ನೂ ನಿವಾರಿಸಬೇಕಿದೆ ನಾವು! ಹಾಗೆ ಮಾಡಿದ್ದೇವೆಯೇ? ಮೊದಲಿಗೆ ನವ್ಯ ಚಳವಳಿಯನ್ನು ಪರಿಗಣಿಸೋಣ.

ನವ್ಯ ಚಳವಳಿ ನಿರಂಕುಶಮತಿಯನ್ನು ಸ್ವೀಕರಿಸಿತು. ಮಾತ್ರವಲ್ಲ, ಉಗ್ರರೂಪದಲ್ಲಿ ಸ್ವೀಕರಿಸಿತು. ಮತಿಯ ನಿರಂಕುಶತೆ ಎಂಬುದು ಅಲ್ಲಿ ವೈಯಕ್ತಿಕತೆ, ವ್ಯಕ್ತಿನಿಷ್ಠೆ ಹಾಗೂ ಪ್ರಯೋಗಶೀಲತೆಗಳ ರೂಪು ತಾಳಿತು. ಸಮಾಜನಿಷ್ಠೆಗೆ ಬದಲಾಗಿ ವ್ಯಕ್ತಿನಿಷ್ಠೆ, ಪರಂಪರೆಗೆ ಬದಲಾಗಿ ಪ್ರಯೋಗಶೀಲತೆ ಬಂದವು. ಪಶ್ಚಿಮದ ಅತಿಯಾದ ಪ್ರಭಾವದಿಂದ ಬಳಲಿದ ನವ್ಯ ಚಳವಳಿಯು ಮಹತ್ತರವಾದ ಹಲವು ಸಾಧನೆಗಳನ್ನೇನೋ ಮಾಡಿತು, ಆದರೆ ತನ್ನ ಸೈದ್ಧಾಂತಿಕ ದ್ವಂದ್ವಕ್ಕೆ ತಾನೇ ಬಲಿಯಾಯಿತು. ನವ್ಯದ ಪರಿಧಿಯಿಂದ ಗ್ರಾಮಗಳು ಹಾಗೂ ಗ್ರಾಮಸ್ಥರು ಬಿಡಿ, ಒಟ್ಟಾರೆ ಪ್ರಜೆಗಳೇ ಮರೆಯಾಗಿ ಹೋದರು.

ನವ್ಯರ ಅತಿದೊಡ್ಡ ದ್ವಂದ್ವ ಯಂತ್ರನಾಗರಿಕತೆಯೇ ಆಗಿತ್ತು. ಬಿಸಿತುಪ್ಪವಾಗಿ ಅದು ಅವರ ಬಾಯಿ ತುಂಬಿಕೊಂಡಿತ್ತು. ಉಗುಳಲೂ ಆಗದೆ ನುಂಗಲೂ ಬಾರದೆ ನಲುಗಿದರು ನವ್ಯರು. ಯಂತ್ರನಾಗರಿಕತೆಯ ಬಗೆಗಿನ ಕಸಿವಿಸಿಯನ್ನೇನೊ ಅವರು ಅಭಿವ್ಯಕ್ತಿಸಿದರು. ಆದರೆ, ಪರ್ಯಾಯ ಜೀವನಶೈಲಿಯೊಂದನ್ನು ಕಟ್ಟುವ ಕೆಲಸಕ್ಕೆ ಅವರ ಕೃತಿಗಳು ಕೈ ಹಚ್ಚಲೇ ಇಲ್ಲ. ನೀರೊಲೆಯ ಹಂಡೆಯಲ್ಲಿ ಬೇಯುತ್ತಿರುವ ಆಮೆ ತಾನು ಎಂಬಂತಹ ಶಕ್ತಿಶಾಲಿ ರೂಪಕಗಳನ್ನೇನೊ ಸೃಷ್ಟಿಸಿದರು. ಆದರೆ, ಸಾಮಾಜಿಕ ಕಾರ್ಯದಿಂದ ದೂರವೇ ಉಳಿದರು. ಸಮಾಜಕಾರಣ ಹಾಗೂ ರಾಜಕಾರಣ ‘ಇತರರ’ ಜವಾಬ್ದಾರಿ, ಇತರರು ಭ್ರಷ್ಟರಾಗಿದ್ದಾರೆ ಎಂಬ ಅನಗತ್ಯ ಅಸಹಾಯಕತೆ  ನವ್ಯರನ್ನು ಕಾಡಿತು. ಈ ಎಲ್ಲ ಕಾರಣಗಳಿಂದಾಗಿ ನವ್ಯ ಚಳವಳಿ ಯಂತ್ರಾರಣ್ಯರೋದನ ಮಾತ್ರವೇ ಆಗಿ ಉಳಿಯಿತು.

ನಂತರ ಬಂದ ಸಮುದಾಯ, ಬಂಡಾಯ, ದಲಿತ ಸಾಹಿತ್ಯ, ಸ್ತ್ರೀಸಾಹಿತ್ಯ ಇತ್ಯಾದಿ ಚಳವಳಿಗಳು ಮರಳಿ ಸಮಾಜಮುಖಿಯೇನೋ ಆದವು, ಆದರೆ ಕುವೆಂಪು ‘ಫಾರ್ಮುಲ’ ಸ್ವೀಕರಿಸಲಿಲ್ಲ. ಅವರ ಸೈದ್ಧಾಂತಿಕ ಬದ್ಧತೆಯು ಕ್ರಮೇಣವಾಗಿ ಅವರ ಮತಿಗೆ ಅಂಕುಶ ಹಾಕಿತು. ಯಂತ್ರಪರ ನಿಲುವು ಅವರ ಆಚಾರವನ್ನು ಕೆಡಿಸಿತು. ಇದೊಂದು ದುರಂತವೇ ಸರಿ. ಏಕೆಂದರೆ ಅವರಲ್ಲಿ ಅನೇಕರು ಗ್ರಾಮಗಳಿಂದ ಬಂದವರಾಗಿದ್ದರು, ಬಡತನ ಕಂಡವರಾಗಿದ್ದರು. ಅವರು ಹೊಸ ನೀರಾಗಿದ್ದರು. ಸರಳ ಜೀವನಶೈಲಿ ಹಾಗೂ ಗ್ರಾಮೀಣ ಹಿನ್ನೆಲೆಗಳು ಅವರಿಗೆ ಸಹಜವಾಗಿತ್ತು. ಆದರೆ, ರೋಗಿ ಬಯಸಿದ್ದೂ ಹಾಲು ಅನ್ನ ವೈದ್ಯ ಸೂಚಿಸಿದ್ದೂ ಹಾಲು ಅನ್ನ ಎಂಬಂತೆ, ಮೊದಲೇ ನಗರಮುಖಿಗಳಾಗಿದ್ದ ಈ ಪ್ರತಿಭೆಗಳನ್ನು ಯಂತ್ರನಾಗರಿಕತೆಯ ಕಡೆಗೆ ಮತ್ತಷ್ಟು ತಳ್ಳಿದವು ಚಳವಳಿಗಳು.

ಕಾಲ ಮಿಂಚಿಲ್ಲ. ನಿರಂಕುಶಮತಿ ಹಾಗೂ ಅಂಕುಶಕ್ಕೊಳಪಟ್ಟ ಜೀವನಶೈಲಿಯನ್ನು ಈಗಲೂ ಈ ಚಳವಳಿಗಳು ಸ್ವೀಕರಿಸಿದರೆ ಇವರ ಸೃಜನಶೀಲತೆ ಮರುಕಳಿಸುತ್ತದೆ ಎಂದು ನಾನು ನಂಬುತ್ತೇನೆ.

ಇಲ್ಲಿ ಬಲಪಂಥದ ಪ್ರಸ್ತಾಪ ಮಾಡಲಿಕ್ಕೆ ಹೋಗಿಲ್ಲ ನಾನು. ಏಕೆಂದರೆ ಅಧಿಕೃತ ಸೃಜನಶೀಲ ಚಳವಳಿಯಾಗಿ ಅದು ಬಂದೇ ಇಲ್ಲ. ಪ್ರತಿಕ್ರಿಯಿಸುತ್ತಿರುತ್ತದೆ ಅಷ್ಟೆ. ಕಿರಿಕಿರಿ ಮಾಡುತ್ತಿರುತ್ತದೆ. ಈಗ, ರಾಜಕೀಯ ಅಧಿಕಾರ ಸಿಕ್ಕ ನಂತರ, ಅಧಿಕೃತಗೊಳ್ಳುವ ಪ್ರಯತ್ನ ನಡೆದಿದೆ. ಬಲಪಂಥ ಅತ್ತಟ್ಟಿಗಿರಲಿ. ಮೊದಲು ನಾವು ನಮ್ಮ ತಪ್ಪನ್ನು ಒಪ್ಪಿಕೊಳ್ಳುವ ಆತ್ಮವಿಶ್ವಾಸ ತೋರಿಸೋಣ. ನೂರು ಮತಗಳನ್ನಾಚೆ ಅಟ್ಟು ದೂರ ಎಂಬ ಕವಿಯ ಮಾತನ್ನು ನಾವು ಹೊಸದೊಂದು ಮತವಾಗಿ ಸ್ವೀಕರಿಸಿದೆವೆಯೇ ಹೊರತು ನಿರಂಕುಶಮತಿಗಳಾಗಲಿಲ್ಲ. ಧಾರ್ಮಿಕ ಮತಾಂಧತೆಯನ್ನು ತೊರೆದು ಜಾತ್ಯತೀತ ಮತಾಂಧತೆಗೆ ಮತಾಂತರಗೊಂಡೆವು ನಾವು.

ನಿರಂಕುಶಮತಿ! ಸುಂದರವಾದ ಪದಪುಂಜ! ಆದರೆ ದೇಹವಿರದೆ ಮತಿ ಇರಲಾರದು. ಭೂಮಿ ಇರದೆ ಆಕಾಶಕ್ಕೆ ಬೆಲೆ ಬರಲಾರದು. ನೆಲೆಯಿರದೆ ಹಾರಾಟ ಸಾಧ್ಯವಾಗಲಾರದು. ಗ್ರಾಮಕ್ಕೆ ತೆರಳಿರಿ ಎಂದು ಕುವೆಂಪು ನೀಡಿದ ಕರೆ ಗ್ರಾಮಸ್ಥರ ಮೌಢ್ಯ ಹರಿಯಲಿಕ್ಕಾಗಿ ಮಾತ್ರವಲ್ಲ, ನಮ್ಮದೇ ಸೃಜನಾತ್ಮಕ ಮೌಢ್ಯ ಹರಿಯಲಿಕ್ಕಾಗಿ ಕೂಡ ಇಂದು ಅತ್ಯಗತ್ಯವಾಗಿದೆ.