ನಿನಗೇ ಸೋದರ, ಇದು ನಿನಗೆ- ದೇವನೂರ ಮಹಾದೇವ

(ಆಫ್ರಿಕಾ ಮೂಲದ ಕವಿ- ಡೇವಿಡ್ ಡೈಪ್ ಅವರ ಕವನವನ್ನು ದೇವನೂರ ಮಹಾದೇವ ಅವರು ಅನುವಾದಿಸಿದ್ದು, 1972ರ ಜನಪ್ರಗತಿ ದೀಪಾವಳಿ ಸಂಚಿಕೆಯಲ್ಲಿ ಪ್ರಕಟವಾಗಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ. ಪದ್ಯ ಕೃಪೆ- ಪಾರ್ವತೀಶ)


ನೀನು
ಬಾಗುತ್ತ
ನೀನು
ಕೂಗುತ್ತ
ನೀನೂ
ಸಾಯುವೆ
ಅದರ ಹಾಗೆ
ಒಂದು ದಿನ
ಯಾಕೆ ಏನು ಎತ್ತ ಗೊತ್ತಿಲ್ಲದೆ.

ನೀನು
ಹೆಣಗುತ್ತ
ನೀನು
ಬೇರೊಬ್ಬರ ಕುರಿತು
ಗಹನ ಗಮನಿಸುತ್ತ ಕಳೆದರಷ್ಟು ವರುಷ
ನೀನು
ಕಾಣೆ-ನಿನ್ನ ಕಣ್ಣೊಳಗೆ ಕ್ಷಣವಾದರೂ ನಗು.

ನೀನು
ನನ್ನ ಒಡಹುಟ್ಟಿದವನು
ನಿನ್ನ ಮುಖ ತುಂಬ
ತುಂಬಿಕೊಂಡಿದೆ ಭಯ ಮತ್ತೂ ಜರ್ಝರಿತ
ಸೋದರ,
ಸಿಡಿದೆದ್ದು ಕೂಗು- ‘ಇಲ್ಲಾ ಇಲ್ಲ’