ನಾಗರೀಕ ಸಮಾಜ ಭಾರತ್ ಜೋಡೋ ಯಾತ್ರೆ ಏಕೆ ಬೆಂಬಲಿಸಬೇಕು?-ದೇವನೂರ ಮಹಾದೇವ

[ “ಭಾರತ್ ಜೋಡೋ ಯಾತ್ರೆ” ಬೆಂಬಲವಾಗಿ 28.9.2022ರಂದು ಮೈಸೂರಿನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ದೇವನೂರ ಮಹಾದೇವ ಅವರ ಮಾತುಗಳು….ಫೋಟೋ ಕೊಡುಗೆ-ಅಭಿಷೇಕ್ ವೈ.ಎಸ್.]
ನಾವೆಲ್ಲರೂ ಗಮನಿಸಿದಂತೆ ಭಾರತದ ಗಣರಾಜ್ಯದ ಮೌಲ್ಯಗಳು ಹಿಂದೆಂದೂ ಆಗದಷ್ಟು ಹಾನಿಗೊಳಗಾಗ್ತಿವೆ. ಹಿಂದೆ ಇಂದಿರಾಗಾಂಧಿ ಎಮರ್ಜೆನ್ಸಿ ಹೇರಿದಾಗ ಪ.ಮಲ್ಲೇಶ್, ನಾನೂ ಮತ್ತು ಹಲವರು ಸೇರಿ ಇಂದಿರಾರ ವಿರುದ್ಧದ ಹೋರಾಟಕ್ಕೆ ದನಿಯಾಗಿ ಜೆಪಿ ಚಳವಳಿಯನ್ನು ಮೈಸೂರಿನಲ್ಲಿ ಸಾಕಾರಗೊಳಿಸಿದ್ದೆವು. ಅದರ ಉದ್ದೇಶ ಭಾರತದ ಪ್ರಜಾತಂತ್ರ ಸರ್ವಾಧಿಕಾರದ ವಿರುದ್ಧ ಸಾಗ್ತಿದೆ ಅನ್ನೋದಾಗಿತ್ತು. ಆದ್ರೆ ಇವತ್ತು ಸರ್ವಾಧಿಕಾರ ಬಂದಾಗಿದೆ. ಶಾಸಕಾಂಗದಲ್ಲಿ ಅವ್ರನ್ನ ಕೇಳೋರಿಲ್ಲ‌. ನ್ಯಾಯಾಂಗವೂ ದುರ್ಬಲವಾಗ್ತಿದೆ‌. ಮಾಧ್ಯಮವನ್ನಂತೂ ಕೊಂಡ್ಕೊಂಡಿದಾರೆ‌‌. ಅಂದ್ರೆ ಸರ್ವಾಧಿಕಾರ ಬಂದಾಗಿದೆ!
ಆಗ ಇಂದಿರಾರನ್ನ ಸೋಲಿಸಲು ಬಿಜೆಪಿ ಮತ್ತಿತರ ಎಲ್ಲ ಪಕ್ಷಗಳು ನಮ್ಮಂತೆ ನಿಂತಿದ್ದವು. ಇವತ್ತು ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ಸಿನೊಂದಿಗೆ ಸೇರಿ ಹೋರಾಡಿದರೆ ತಪ್ಪಿಲ್ಲ. ನಾವೀಗ ಹೋರಾಡಲೇಬೇಕು. ಕಾಂಗ್ರೆಸ್ ಈಗ ಜಡ! ಅದಕ್ಕೆ ಈ ಯಾತ್ರೆಯ ಮೂಲಕ ನವಯುವಕರ ಸೇರ್ಪಡೆಯಾಗಿ ಜೀವ ಬಂದರೂ ಬರಬಹುದು. ಅದು ನಮ್ಮ ಆಶಯ ಅಷ್ಟೆ. ಅದೇನಾದ್ರೂ ಆಗ್ಲಿ‌ ನಾವು ಕಾಂಗ್ರೆಸ್ ಪಕ್ಷಕ್ಕಾಗಿ ಈ ಯಾತ್ರೆಗೆ ಬೆಂಬಲ ಕೊಡ್ತಿಲ್ಲ. ನಮ್ಮ ಬೆಂಬಲ- ಜಾತಿ, ಧರ್ಮ, ಗಡಿ, ಭಾಷೆ ಮೊದಲಾದ ಭಾವನಾತ್ಮಕ ವಿಷಯಗಳಿಂದ ಒಡೆದು ಛಿದ್ರವಾಗಿರುವ ಭಾರತವನ್ನು ಜೋಡಿಸುವುದಷ್ಟೆ‌. ಇಂತಹ ಕಾರ್ಯ ಯಾರು ಮಾಡಿದರೂ ನಮ್ಮ ಬೆಂಬಲವಿದೆ‌. ಈ ಮಣ್ಣಿಗೊಂದು ಕೂಡುವಿಕೆಯ ಗುಣವಿದೆ‌!