ನಮ್ಮ ದರ್ಶನ್ ಪುಟ್ಟಣ್ಣಯ್ಯ -ದೇವನೂರ ಮಹಾದೇವ

[ರೈತಸಂಘದ ವತಿಯಿಂದ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದಲ್ಲಿ ನಡೆಸುತ್ತಿರುವ “ಜನಮನ ದರ್ಶನ’ ಪಾದಯಾತ್ರೆಯಲ್ಲಿ 8.3.2023ರಂದು ಭಾಗವಹಿಸಿದ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಅಕ್ಷರ ರೂಪ]
ಮೇಲುಕೋಟೆ ಕ್ಷೇತ್ರ ನನಗೆ ಚಿರಪರಿಚಿತ. ಗೆಳೆಯ ಪುಟ್ಟಣ್ಣಯ್ಯ ಜೊತೆ ಇಲ್ಲಿ ಸುತ್ತಾಡಿದ್ದೇನೆ. ಪುಟ್ಟಣ್ಣಯ್ಯನವರ ಎರಡು ಚುನಾವಣೆಗಳ ಸಂದರ್ಭದಲ್ಲಿ ಈ ಕ್ಷೇತ್ರದ ಮೂಲೆ ಮೂಲೆ ಓಡಾಡಿದ್ದೇನೆ. ಇದರ ಜೊತೆಗೆ ನನ್ನ ಪತ್ನಿ ಸುಮಿತ್ರಾ ಅವರ ತಂದೆಯ ಊರು ತಾಳಶಾಸನ. ಹಾಗಾಗಿ ಈ ಕ್ಷೇತ್ರದ ಜನರ ಜೊತೆ ನನಗೆ ಭಾವನಾತ್ಮಕ ಸಂಬಂಧವೂ ಇದೆ.
ನಾನು ಪುಟ್ಟಣ್ಣಯ್ಯ ಅವರ ಜತೆ ಸರ್ವೋದಯ ಕರ್ನಾಟಕ ಪಕ್ಷ ಕಟ್ಟಲು ರಾಜ್ಯದ ತುಂಬಾ ಸುತ್ತಾಡಿದ್ದೇನೆ. ಅವರು ಎಲ್ಲೇ ಇರಲಿ, ಅವರು ನೆನಪಿಸಿಕೊಳ್ಳುತ್ತಿದ್ದುದು ಅವರ ಊರ ಕಡೆಯ ತಿಂಡಿ-ತೀರ್ಥ. ಇದು ಒಂದೊಂದು ಸಲ ತಮಾಷೆಯಾಗಿಯೂ ಕಾಣುತ್ತಿತ್ತು. “ನೀವು ಏನೇ ಹೇಳಿ, ನಮ್ಮ ಕಡೆ ಮಾಡುವ ಬೋಂಡಾ, ಕೈಮಾ ಇಡೀ world ನಲ್ಲೆ ಎಲ್ಲೂ ಇಲ್ಲ” ಅಂತಿದ್ದರು. ಆಗ ಒಂದು ಮಗುವಿನಂತೆ ಕಾಣುತ್ತಿದ್ದರು. ಮಹಿಳೆಯರ ಕಷ್ಟ ಕಾರ್ಪಣ್ಯ ನೆನಪಿಸಿಕೊಂಡಾಗಲಂತು ‘ನಮ್ಮ ಮಹಿಳೆಯರ ಶ್ರಮ ಮತ್ತು ಸಹನೆಗೆ ಅವರ ಪಾದ ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳಬೇಕೆನಿಸುತ್ತದೆ’ ಅಂತಿದ್ದರು. ಮತ್ತು ರೈತರ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗುತ್ತಿದ್ದರು. ಜನರಿಗೆ ಶುದ್ಧ ಕುಡಿಯುವ ನೀರು, ಭೂಮಿತಾಯಿ ತಂಪಾಗಿಸಲು ನೀರು ಅಂತ ಕನಸಿನಲ್ಲೂ ಹೇಳುತ್ತಿದ್ದರು. ಪುಟ್ಟಣ್ಣಯ್ಯನವರ ಹೃದಯದೊಳಗೆ ಬಸವಣ್ಣ ವಾಸವಾಗಿದ್ದರು. ಹಾಗಾಗಿ ಅವರು ‘ಕಾಯಕ ಪ್ರಶಸ್ತಿ’ ಚಲಾವಣೆಗೆ ತಂದಿದ್ದರು. “ಈಗ ವಿಶ್ವಸುಂದರಿ ಸ್ಪರ್ಧೆಯಲ್ಲಿ ಕೊನೆಗೆ ಗದ್ದೇಲಿ ನಾಟಿ ಹಾಕೋ ಪರೀಕ್ಷೆ ಇಡಲಿ. ಯಾರಪ್ಪ ಗೆಲ್ಲೋದು? ನಮ್ಮ ಹಳ್ಳಿ ರೈತಾಪಿ ಹೆಣ್ಣು ಮಕ್ಕಳಲ್ವಾ? ಅವರೇ ತಾನೇ ವಿಶ್ವಸುಂದರಿ!” ಅಂತಿದ್ದರು. ಜೀವಂತಿಕೆಯಿಂದ ತುಂಬಿ ತುಳುಕುತ್ತಿದ್ದ ಪುಟ್ಟಣ್ಣಯ್ಯ ನೆನಪು ಹಸಿರೇ ಉಸಿರು ಎಂಬಂತಿದೆ.
ನಾನು ಮೇಲುಕೋಟೆ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲೂ ಕೂಡ ದರ್ಶನ್ ಪುಟ್ಟಣ್ಣಯ್ಯಗೆ ಪ್ರಚಾರ ಮಾಡಿದ್ದೇನೆ. ಆಗ ಎಲ್ಲಿಗೆ ಹೋಗಲಿ, ಒಂದು ಪ್ರಶ್ನೆ ಎದುರಾಗುತ್ತಿತ್ತು. ಏನಪ್ಪ ಅಂದರೆ, “ದರ್ಶನ್ ಪುಟ್ಟಣ್ಣಯ್ಯ ಗೆದ್ದರೂ ಅಮೆರಿಕಾದಿಂದಲೇ ಬಂದು ಹೋಗುತ್ತಾನಂತೆ, ಸೋತರೆ ಬರುವುದಿಲ್ಲವಂತೆ”- ಇದು ಮನೆ ಮಾತಾಗಿತ್ತು. ಆ ಹುಡುಗ ತನ್ನ ಇಕ್ಕಟ್ಟನ್ನು ಜನರ ಮುಂದೆ ಹೇಗೆ ಮುಂದಿಟ್ಟು ಮನದಟ್ಟು ಮಾಡಲು ಸಾಧ್ಯ? ದರ್ಶನ್ ಒದ್ದಾಟವನ್ನು ಕಣ್ಣಾರೆ ಕಂಡು ನೊಂದಿದ್ದೇನೆ. ಅಲ್ಲಿ ಅಮೆರಿಕಾದಲ್ಲಿ ಆತ ಉದ್ಯಮಿ. ಅಮೆರಿಕಾದಲ್ಲಿ ತನ್ನ ಕಂಪನಿ ಮಾರಾಟ ಮಾಡಿದ ಮಾಲಿಕನು ಎರಡು ಮೂರು ವರ್ಷಗಳ ಕಾಲ ತಾನು ಮಾರಾಟ ಮಾಡಿದ ತನ್ನ ಕಂಪನಿಯಲ್ಲೆ ಕಾರ್ಯ ನಿರ್ವಹಿಸುತ್ತ ಕಂಪನಿಯ ಒಳಗುಟ್ಟನ್ನು ಕೊಂಡುಕೊಂಡವನಿಗೆ ಮನದಟ್ಟು ಮಾಡಬೇಕು. ಇದು ಅಲ್ಲಿನ ಪರಿಪಾಠ. ಇದನ್ನ ಹೇಗಪ್ಪಾ ಜನರಿಗೆ ಅರ್ಥ ಮಾಡಿಸಿಕೊಡಬೇಕು? ಹೇಗೆ ಹೇಳಬೇಕೆಂದು ತಿಳಿಯದೆ ಆ ಹುಡುಗ ಒದ್ದಾಡಬೇಕಾಯಿತು. ಆ ಚುನಾವಣೆಯಲ್ಲಿ ಸೋಲೂ ಆಯ್ತು.
ದರ್ಶನ್ ಸೋತಿದ್ದಕ್ಕೆ ಕಾರಣವೇನು? ತುಂಬಾ ಯೋಚನೆ ಮಾಡಿದ್ದೇನೆ. ಅಮೆರಿಕಾದಿಂದ ಕ್ಷೇತ್ರಕ್ಕೆ ಬರುವುದಿಲ್ಲ ಎಂಬ ಸುಳ್ಳೇ ಬಹುತೇಕ ದರ್ಶನ್ ಸೋಲಿಗೆ ಕಾರಣ. ಆ ಚುನಾವಣೆಯಲ್ಲಿ ಸುಳ್ಳು ಗೆದ್ದಿತು. ಸುಳ್ಳು ಗೆಲ್ಲಬಾರದಿತ್ತು.
ಈಗ ದರ್ಶನ್ ಅಮೆರಿಕಾದಲ್ಲಿದ್ದ ತನ್ನ ಕಂಪನಿಯನ್ನು ಮಾರಾಟ ಮಾಡಿ ಅಮೆರಿಕಾದಿಂದ ಸಂಪೂರ್ಣ ಬಿಡುಗಡೆಯಾಗಿ ತನ್ನ ಜನಸಮುದಾಯದ ಕಷ್ಟಸುಖಗಳೊಡನೆ ಬೆರೆತುಕೊಳ್ಳಲು ಊರಿಗೆ ಬಂದಿದ್ದಾನೆ. ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾನೆ. ಈ ಸುಳ್ಳಿನ ಪ್ರಪಂಚದಲ್ಲಿ ಮತ್ತೆ ಏನೇನು ಸುಳ್ಳು ಹಬ್ಬಿಸುತ್ತಾರೋ ಗೊತ್ತಿಲ್ಲ. ಆದರೆ ಇಲ್ಲಿನ ಭಾವನಾತ್ಮಕವಾದ ಜನಸಮುದಾಯದ ನಾಡಿ ಮಿಡಿತ ನೋಡಿದರೆ ದರ್ಶನ್ ಗೆಲುವು ಖಚಿತ ಎಂದೇ ಅನ್ನಿಸುತ್ತದೆ. ಇದಕ್ಕೆ ಕಾರಣ ಇದೆ. ಕಳೆದ ಚುನಾವಣೆಯಲ್ಲಿ ದರ್ಶನ್ಗೆ ಬೆಂಬಲವಾಗಿ ಹರಿದು ಬಂದ ಯುವಶಕ್ತಿ ಈ ಚುನಾವಣೆಯಲ್ಲಿ ಹೆಚ್ಚಾಗಿರುವುದು ಎದ್ದು ಕಾಣುತ್ತದೆ. ಬಹುತೇಕ ಮಹಿಳೆಯರೂ ದರ್ಶನ್ ಗೆಲುವನ್ನೆ ಬಯಸುತ್ತಿದ್ದಾರೆ. ಇದು ಒಳ್ಳೆಯ ಶಕುನ.
ದರ್ಶನ್ ಇಲ್ಲಿಗೆ ಬಂದ ಮೇಲೆ ಮೂರ್ನಾಲ್ಕು ಸಲ ನಾನು ಚರ್ಚೆ ಮಾಡಿದ್ದೇನೆ. ದರ್ಶನ್ ಸ್ವಭಾವ ಹಾಗೂ ಆಲೋಚನೆಗಳು ಹೇಗಿವೆ ಎಂದು ತಿಳಿದುಕೊಳ್ಳುವುದಕ್ಕೆ. ಆತ ಪ್ರಾಮಾಣಿಕ ಅನ್ನಿಸಿತು. ತನ್ನ ಹೃದಯದ ಮಾತುಗಳನ್ನ ನುಡಿಯುತ್ತಾನೆ. ಥಳಕು ಇಲ್ಲ. ಇನ್ನು ಆಲೋಚನೆಗೆ ಬಂದರೆ- ಈತ ಪುಟ್ಟಣ್ಣಯ್ಯ ಹಾಗೂ ನನ್ನ ಆಲೋಚನೆಗಳಿಗಿಂತಲೂ ಸ್ವಲ್ಪ ಮುಂದೆ ಇದ್ದಾನೆ ಎಂತಲೇ ಅನ್ನಿಸಿತು. ಈತನದು ಹೆಚ್ಚಾಗಿ ರಚನಾತ್ಮಕ ರಾಜಕಾರಣ ಅನ್ನಿಸಿತು. ದರ್ಶನ್ ಜೊತೆಗಿನ ಚರ್ಚೆಯಲ್ಲಿ ಕಂಡು ಬಂದ ಆತನ ರಚನಾತ್ಮಕ ನೋಟಗಳನ್ನು ತಮ್ಮ ಮುಂದಿಡುತ್ತಿರುವೆ.
ದರ್ಶನ್ ಮೊದಲು ಹೇಳಿದ್ದು- ಮಕ್ಕಳ ಗುಣಮಟ್ಟ ಶಿಕ್ಷಣದ ಬಗ್ಗೆ ಉಸ್ತುವಾರಿ ಸಮಿತಿ. ಹಾಗೇ ಪ್ರಾಥಮಿಕ ಆರೋಗ್ಯದ ಬಗ್ಗೂ ಉಸ್ತುವಾರಿ ಸಮಿತಿ. ಅಕ್ರಮ ಗಣಿಗಾರಿಕೆಯಿಂದ ಹಿಡಿದು ಎಲ್ಲಾ ಅಕ್ರಮಗಳ ತಡೆಗೆ ಉಸ್ತುವಾರಿ ಸಮಿತಿ. ಮೇಲುಕೋಟೆ ಕ್ಷೇತ್ರದಲ್ಲಿ ಬೆಳೆದ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲ. ರಾಮನಗರ, ಮದ್ದೂರು, ಬೆಂಗಳೂರಿನ ಸಾಗಣಿಕೆ ಮಾಡಬೇಕು. ಇದಕ್ಕೆ ಬದಲಾಗಿ ಕ್ಷೇತ್ರದಲ್ಲೆ ಮಾರುಕಟ್ಟೆ ಮಾಡಬೇಕು. ಮಾರುಕಟ್ಟೆ ಮಾಡಿದರಷ್ಟೇ ಸಾಲದು, ಮಂಡ್ಯ ಆರ್ಗಾನಿಕ್ ಸಹಕಾರಿ ಮಾದರಿಯಲ್ಲಿಯೇ ದವಸ ಧಾನ್ಯಗಳನ್ನು ಗುಣಮಟ್ಟದ ಹಿಟ್ಟು ಮಾಡಿ ಮಾರಾಟ ಮಾಡುವ ಪರಿಪಾಠ ರೂಢಿಸಿಕೊಳ್ಳಬೇಕು. ಅದಕ್ಕೆ ಪೂರಕ ವ್ಯವಸ್ಥೆ ಮಾಡಬೇಕು. ಮಾರುಕಟ್ಟೆ ವ್ಯವಸ್ಥೆ ಮಾಡಬೇಕು. ಯಾರು ನಿರುದ್ಯೋಗಿಗಳಾಗಬಾರದು, ಗೃಹ ಕೈಗಾರಿಕೆಗಳನ್ನು ಸ್ಥಳೀಯ ಕಚ್ಛಾವಸ್ತುಗಳಿಗೆ ತಕ್ಕಂತೆ ಸ್ಥಾಪಿಸಬೇಕು. ಇದನ್ನು ಹೇಳುವಾಗ ತಮಿಳುನಾಡು ಮಾದರಿ, ದರ್ಶನ್ ಮನಸ್ಸಲ್ಲಿತ್ತು. ಸ್ತ್ರೀಶಕ್ತಿ ಸಂಘದ ಬಗ್ಗೆ ಹೇಳುವಾಗ ಆಂಧ್ರ ಪ್ರದೇಶದ ಸಂಘಟನೆ, ದರ್ಶನ್ ಮನಸ್ಸಲ್ಲಿ ಇತ್ತು. ಹೀಗೆ ದೇಶ ವಿದೇಶಗಳ ಪ್ರಯೋಗಗಳು ಆತನ ಕಂಪ್ಯೂಟರ್ ತುಂಬಾ ತುಂಬಿಕೊಂಡಿವೆ. ದರ್ಶನ್ ಮಿದುಳೊಳಗೂ ಇವಿವೆ ತುಂಬಿಕೊಂಡಿವೆ. ಇವುಗಳನ್ನು ಮೇಲುಕೋಟೆ ಕ್ಷೇತ್ರದಲ್ಲಿ ಬಿತ್ತನೆ ಮಾಡಲು ದರ್ಶನ್ ಉಳುಮೆಗೆ ತನ್ನನ್ನು ಅರ್ಪಿಸಿಕೊಂಡಿದ್ದಾನೆ. ಇದುವರೆಗೂ ನಾನು ಒಂದಿಷ್ಟು ಸ್ಯಾಂಪಲ್ಗಳನ್ನು ಹೇಳಿದೆ ಅಷ್ಟೆ.
ಇಲ್ಲಿ ಕಂಡು ಬರುವ ಸಂಗತಿಗಳೇನು? ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಪ್ರಾಥಮಿಕ ಕಾಳಜಿ, ಸ್ವಾವಲಂಬನೆ, ಜನ ಸಮುದಾಯದ ಘನತೆಯ ಬದುಕು, ಉದ್ಯೋಗ ಸೃಷ್ಟಿ, ಮನುಷ್ಯರಿಗೂ ಬೆಳೆಗಳಿಗೂ ನ್ಯಾಯಯುತವಾದ ಬೆಲೆ, ಅಕ್ರಮಗಳ ತಡೆಗಟ್ಟುವಿಕೆ ಇಂಥವುಗಳೇ ಇವೆ. ಇದು ಏನನ್ನು ಹೇಳುತ್ತದೆ. ಈತ ಕೇವಲ ರಾಜಕಾರಣಿ ಮಾತ್ರ ಅಲ್ಲ. ಜನನಾಯಕ. Statesman ಅಂತಾರಲ್ಲ ಆ ರೀತಿ. ತಾನು ತನ್ನ ಬಂಧು ಬಳಗವು ಎಲ್ಲವನ್ನೂ ಕಬ್ಜಾ ಮಾಡಿಕೊಂಡು ಬದುಕಬೇಕೆನ್ನುವ ಇಂದಿನ ಪುಡಾರಿ ರಾಜಕಾರಣ ನೋಡಿದಾಗ ದರ್ಶನ್ ಭಿನ್ನವಾಗಿ ನಿಲ್ಲುತ್ತಾನೆ. ಈತ ಜನಪರ ಕಾಯ್ದೆ ತರುವ ಸಾಮರ್ಥ್ಯದ ಶಾಸಕನಾಗುತ್ತಾನೆ ಅನ್ನಿಸುತ್ತದೆ. ಇದೇ ರೀತಿಯಲ್ಲೇ ಮಂಡ್ಯದ ಮಧುಚಂದನ್ರ ರಚನಾತ್ಮಕ ರಾಜಕಾರಣವೂ ಇದೆ. ಇವರಿಗೆ ಸಾರಥಿಯಂತೆ ಪ್ರಸನ್ನಗೌಡ ಇದ್ದಾರೆ. ಇವರು ಸರ್ವೋದಯ ಕರ್ನಾಟಕದ ‘ಹೊಸ ಮುಖ ಹೊಸ ರಾಜಕಾರಣ’ಕ್ಕೆ ಹೇಳಿ ಮಾಡಿಸಿದಂತಿದ್ದಾರೆ. ಈಗ ಹೊಸ ನಾಯಕತ್ವದಲ್ಲಿ ಸರ್ವೋದಯ ಕರ್ನಾಟಕ ಆರಂಭಿಸಿದ ಮೇಲೆ ರಾಜ್ಯದ ಉದ್ದಗಲಕ್ಕೂ ಇಂಥವರೇ ಕೂಡಿಕೊಳ್ಳುತ್ತಿದ್ದಾರೆ. ಬಹುಶಃ ನಾಳೆ ಇವರದು.
ಈಗ ಈ ಹೊಸ ರಾಜಕಾರಣದ ಹೊಸ ಮುಖಗಳಿಗೆ ಒಂದು ಕಿವಿಮಾತು. ಪುಟ್ಟಣ್ಣಯ್ಯ ತನ್ನ ಕ್ಷೇತ್ರದಲ್ಲಿರುವ ಕಡೆಗಣಿಸಲ್ಪಟ್ಟ ಜನಸಮೂಹಗಳನ್ನು, ಅಲ್ಪಸಂಖ್ಯಾತರನ್ನು, ಹೇಳುವವರು ಕೇಳುವವರು ಇಲ್ಲದವರನ್ನು ‘ಇವ ನಮ್ಮವ’ ಎಂದು ಅಪ್ಪಿಕೊಳ್ಳುತ್ತಿದ್ದರು. ಅವರ ಕಷ್ಟಸುಖಕ್ಕೂ ಧ್ವನಿಯಾಗುತ್ತಿದ್ದರು. ಇದನ್ನು ಈಗಲಿಂದಲೇ ಹೊಸ ರಾಜಕಾರಣದಿಂದ ನಾನು ನಿರೀಕ್ಷಿಸುತ್ತೇನೆ.