ದೇವನೂರು ಕುಸುಮಬಾಲೆ, ದಕ್ಕಿದಷ್ಟು ಬೆರಗು- ಯು.ಮಹೇಶ್ವರಿ

[ಡಾ.ಮಹೇಶ್ವರಿ.ಯು ಅವರು ಕುಸುಮಬಾಲೆ ಕುರಿತು ಬರೆದ ಬರಹ ಅವರ ‘ಮಧುರವೇ ಕಾರಣ’ ಎಂಬ ಲೇಖನಗಳ ಸಂಕಲನದಲ್ಲಿ ದಾಖಲಾಗಿದೆ. ಬರಹ ನಮ್ಮ ಮರು ಓದಿಗಾಗಿ…]

Screenshot_2017-02-08-13-04-10

ಹೊಗಳಿಕೆ ತೆಗಳಿಕೆಗಳ ಎರಡು ಅತಿಗಳ ಮಧ್ಯೆ ಸಿಲುಕಿದ ನಿಷ್ಪಾಪಿ ಕೃತಿ ಕುಸುಮಬಾಲೆ ಇಷ್ಟು ವರುಷಗಳ ಬಳಿಕವೂ ಈಗಷ್ಟೇ ಹುಟ್ಟಿದ ಕೂಸಿನಂತೆ ಹೊಸತಾಗಿಯೇ ಇರುವುದರಿಂದ ಅದರ ಬಗ್ಗೆ ಕೆಲವು ಮಾತುಗಳನ್ನು ಬರೆಯಲು ಅಕ್ಕರೆ ಮೂಡುತ್ತದೆ. ಮಗುವಿನ ಮುಗ್ಧ ಬೆರಗು ಹಾಗೂ ಅನುಭಾವಿಯ ಕಿರುನಗು-ಎರಡನ್ನೂ ಒಳಗೊಂಡ ಈ ಕೃತಿ ಜೀವನ ಪ್ರೀತಿಯ ಗಾಢಸ್ಪರ್ಶವೂ ಹೌದು. ವಸ್ತು, ತಂತ್ರ ಮತ್ತು ಶೈಲಿಗಳಲ್ಲಿ ಹೊಚ್ಚಹೊಸತನವನ್ನು ಮೆರೆದು ವಿಮರ್ಶೆ ಮಾನದಂಡಗಳಿಗೆ ಸವಾಲು ಹಾಕಿದ ಇದು ಸುಲಭ ಗ್ರಾಹ್ಯದಲ್ಲವೆಂದೂ ದಲಿತ ವಿರೋಧಿಯಾದ ನಿಲುವನ್ನು ಹೊಂದಿದೆಯೆಂದೂ ಬಹಳಷ್ಟು ವಾದ ವಿವಾದಗಳು ನಡೆದಿದ್ದವು. ಅವುಗಳನ್ನೆಲ್ಲ ಉಲ್ಲೇಖಿಸ ಹೋಗದೆ ತೆರೆದ ಮನಸ್ಸಿನ ಓದಿಗೆ ದಕ್ಕಿದ ಅನುಭವದ ಮೆಲುಕುಗಳನ್ನು, ಹೊಳಹುಗಳ ತುಣುಕುಗಳನ್ನು ಹಂಚಿಕೊಳ್ಳುವುದು ಈ ಬರಹದ ಉದ್ದೇಶ.
ಕುಸುಮಬಾಲೆ ಕೃತಿಯ ಮೊದಲಿಗೆ ಇದರೊಳಗೆ ಕಾಣಿಸುವ ಮುಖ್ಯ ಎಳೆಗಳನ್ನು ಲೇಖಕರು ಕೆಲವು ಸಾಲುಗಳಲ್ಲಿ ನೀಡಿದ್ದಾರೆ. ಈ ಕೀಲಿಕೈಯನ್ನು ಹಿಡಿದು ನಾವು ಪ್ರವೇಶಿಸಿದರೆ ಒಂದು ಸಮಗ್ರತೆಯಲ್ಲಿ ಓದಿಕೊಳ್ಳುವ ಪ್ರಯತ್ನ ಸಫಲವಾಗಬಹುದು. ಸಂಗ್ರಹ ಗುಣದಿಂದಲೂ ಕಾವ್ಯಾತ್ಮಕ ಅಭಿವ್ಯಕ್ತಿಯಿಂದಲೂ ಸುಲಭವಾಗಿ ಬಿಟ್ಟುಕೊಡದ ಕೃತಿಯನ್ನು ದೂರೀಕರಿಸದೆ ಮರಳಿ ಯತ್ನವ ಮಾಡಿ ಗೆದ್ದರೆ-ಅನೇಕ ಸಾಲುಗಳನ್ನು ನಾಲಿಗೆ ಮೆಲುಕಾಡುತ್ತಿರುತ್ತದೆ.

ಅಕ್ಕಮಹಾದೇವಮ್ಮ ಗಂಡ ಸತ್ತು ತೌರಿಗೆ ಹೋದವಳು ಅಪ್ಪ ಸತ್ತ ಹನ್ನೆರಡು ತಿಂಗಳಿಗೆ ಹುಟ್ಟಿದವನೆಂಬ ಅಪವಾದದ ಕಂದ ಯಾಡನೊಂದಿಗೆ ಆರು ವರುಷದ ಬಳಿಕ ಭಾವಮೈದುನರಲ್ಲಿ ಪಾಲು ಕೇಳಲು ಬಂದು ತಿರಸ್ಕೃತಳಾದದ್ದು ಹಾಗೂ ತಿರಸ್ಕರಿಸಲ್ಪಟ್ಟ ಆ ತಾಣದಲ್ಲೆ ನೆಲೆ ನಿಂತ ಸಾಹಸವನ್ನು ಮೆರೆದದ್ದು ಒಂದು ಎಳೆ. ಆ ಯಾಡ ಕಂದನೇ ದೊಡ್ಡವನಾಗಿ ದೊಡ್ಡಮನೆಯ ಒಡೆಯನೂ ಆಗುವ ಪವಾಡ ಹಾಗೂ ಆತನ ದೇಸೀ ಚಾಣಾಕ್ಷತೆ ಇನ್ನೊಂದು ಎಳೆ. ಯಾಡನ ಮಗ ಸೋಮಪ್ಪ ಊರಿಗೆ ದೊಡ್ಡವನಾಗಿದ್ದು ಅವನ ಮಗಳು ಕುಸುಮ ಮತ್ತು ಹೊಲಾರ ಚೆನ್ನನ ನಡುವಿನ ಗುಪ್ತ ಸಂಬಂಧವು ವಿವಾಹಿತೆಯಾದ ಆಕೆಗೆ ಹುಟ್ಟಿದ ಮಗುವಿನ ಬಣ್ಣದ ಮೂಲಕ ಬಯಲಾಗಿ ಅರಿವಾಗದ ರೀತಿಯಲ್ಲಿ ಚೆನ್ನನ ಕೊಲೆಯಾಗುವುದು ಮತ್ತೊಂದು ಎಳೆ. ಕಿಚ್ಚು ಹಾಯಿಸೊ ಹಬ್ಬದ ಸಡಗರ, ಉಳ್ಳವರಿಗೆ ಒಂದು ವಿಧವಾದರೆ ಇಲ್ಲದವರಿಗೆ ಅಭಾವದ ಹಾಗೂ ಸಾವಿನ ಜೊತೆ ಮುಗಿಯದ ಯುದ್ಧ. ಕೆಂಪಿಗೆ ಹುಟ್ಟಿದ ಕಂದನನ್ನು ಉಳಿಸಿಕೊಳ್ಳಲು ತೂರಮ್ಮಜ್ಜಿಯ ಏಕಾಗ್ರತೆ ಸೆಣಸಾಟ ಹಾಗೂ ಸವೆದು ಮೂಳೆಚಕ್ಕಳವಾಗಿದ್ದ ತನ್ನ ಕಂದನನ್ನು ಬದುಕಿಸಲು ಈರಿಯ ವಿಫಲ ಪ್ರಯತ್ನ-ಇವು ಕೃತಿಯ ಮತ್ತೊಂದು ಮಹತ್ವದ ಎಳೆ. ಚೆನ್ನನ ಕೊಲೆ ಅರಿಯದ ಹೆತ್ತವರು ಅವನ ಕುರಿತಾಗಿ ಕಟ್ಟುವ ಕನಸುಗಳು ಆ ಮುಗ್ಧತೆಯಲ್ಲಿ ಇಟ್ಟುಕೊಳ್ಳುವ ನಿರೀಕ್ಷೆಗಳು ಒಂದು ಸಮುದಾಯಕ್ಕೆ ಹಬ್ಬುವ ಪರಿ ಇನ್ನೊಂದು ಎಳೆ. ಭೂತವರ್ತಮಾನಗಳ ನಡುವೆ ಲೀಲಾಜಾಲವಾಗಿ ಜೀಕುವ ಕೃತಿಯಲ್ಲಿ ವ್ಯಕ್ತವಾಗುವ ಸಂಬಂಧದ ಆಶಯ-ಈ ಎಲ್ಲ ಎಳೆಗಳನ್ನು ಬೆಸೆಯುವ ಮುಖ್ಯತಂತು. ಕೃತಿಯ ಮೊದಲಿಗೆ ಲೇಖಕರು ಕೊಟ್ಟಿರುವ `ಎತ್ತಣ ಮಾಮರ ಎತ್ತಣ ಕೋಗಿಲೆ’ ಎಂಬ ಅಲ್ಲಮನ ವಚನ ಈ ಆಶಯವನ್ನು ಮುನ್ನುಡಿಯುತ್ತದೆ. ಕೃತಿಯ ಸಂವಿಧಾನದ ದೃಷ್ಟಿಯಿಂದ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಸೋಮಪ್ಪರ ಕಾಲದ ಘಟನೆಯಿಂದ ಆರಂಭಗೊಳ್ಳುವ ಕೃತಿ ಕೊನೆಗೊಳ್ಳುವುದೂ ಅದೇ ಘಟನೆಗೆ ಸಂಬಂಧಿಸಿದ ಪರಿಣಾಮದಲ್ಲಿ. ಇದರ ಮಧ್ಯೆ ಸರಿದು ಹೋಗುವ ವರ್ತಮಾನ ಕಾಲ ಸ್ವಲ್ಪವೇ ಆಗಿದ್ದರೂ ಭೂತಕಾಲದ ಬದುಕಿನೊಂದಿಗೆ ಬೆಸೆದು ಅದನ್ನು ಹೆಣೆದಿರುವ ಕೌಶಲ ಅನನ್ಯ. ಏಕವಾಕ್ಯದಲ್ಲೆ ಎರಡನ್ನೂ ಬೆಸೆಯುವ ರೀತಿಯು (ಉದಾ;ಈ ವ್ಯಾಳದಲ್ಲಿ/ಆಕಾಲದಲ್ಲಿ-ಎಂಬಂತಹ ಪ್ರಯೋಗಗಳಲ್ಲಿ ಅಥವಾ-ಜೀವಾತ್ಮನು ಸೋಮಪ್ಪರ ಘಟವನ್ನು ಸೇರುವುದಕ್ಕೂ ಮೊದಲು-ಎಂಬಂತಹ ವಾಕ್ಯಗಳಲ್ಲಿ) ಕನ್ನಡದಲ್ಲಿ ಅಪೂರ್ವವಾದದ್ದು.

ಅಕ್ಕಮಹಾದೇವಮ್ಮನನ್ನು, ಪಾಲಿನ ಅವಳ ಬೇಡಿಕೆಯನ್ನು ಬಸಪ್ಪಸೋಮಿ ಸಿದ್ದೂರರು ತಿರಸ್ಕರಿಸಲು ಕಾರಣ ಅವಳು ಹಡೆದ ಕೂಸು ಅನೈತಿಕದ್ದಾಗಿರುವುದರಿಂದ ಪಾಲಿಗೆ ಅನರ್ಹ-ಎಂಬುದಕ್ಕೆ. ಆದರೆ ಬಿಸುಟಲ್ಲೆ ನೆಲೆಯಾದ ಅಕ್ಕಮಹಾದೇವಮ್ಮ ತನ್ನ ಯಾಡಕಂದನೊಂದಿಗೆ ಬದುಕನ್ನು ಕುದುರಿಸಿ ಹೋಟೆಲು ವ್ಯಾಪಾರದ ಮೂಲಕ ಹೊಟ್ಟೆಹೊರೆಯುತ್ತಿದ್ದುದು. ಯಾಡ ಕಂದನೆ ತನ್ನ ದೇಸೀಜಾಣ್ಮೆಯಿಂದ ಮುಂದೆ ಊರಿಗೆ ದೊಡ್ಡವನಾದ ಯಾಡೇಗೌಡನಾಗುವುದು, ಆ ಯಾಡೇಗೌಡನ ಮಗ ಸೋಮಪ್ಪನ ಮಗಳು ಕುಸುಮ ಹೊಲಾರ ಚೆನ್ನನನ್ನು ಕೂಡಿದ್ದು ಅನೈತಿಕವೆಂದು ಚೆನ್ನನನ್ನು ನಿವಾರಿಸುವ ಕಾರ್ಯಕ್ಕೆ ಕಾರಣವಾಗುವುದು-ಕೃತಿಯ ಬಹು ಮುಖ್ಯವಾದ ದುರಂತ ವ್ಯಂಗ್ಯವಾಗಿದೆ. ನಿರಾಕರಣೆ ಹಾಗೂ ಕ್ರೌರ್ಯದ ಪರಿಭಾಷೆ ಮೀಟುವ ದುರಂತ ಶ್ರುತಿ ಗಾಢವಾದುದು.

ಪ್ರೀತಿ, ಅಂತಃಕರಣ, ಕರುಳಬಳ್ಳಿಯ ಸಂಬಂಧವೇ ಮನುಷ್ಯ ಸಂಬಂಧಗಳಿಗೆ ಗಟ್ಟಿ ನೆಲೆಯಾಗಿದ್ದರೂ ಅದಿಲ್ಲದ, ದ್ವೇಷ, ಮಾತ್ಸರ್ಯಗಳ ಕುರೂಪಿ ಸಂಬಂಧವು ಬದುಕಿನಲ್ಲಿ ಇರುವಂಥಾದ್ದೆ. ಗಾರಸಿದ್ಮಾವನನ್ನು ಕಟ್ಟಿಹಾಕಿ ಹೊಡೆಯುವ ಪ್ರಕರಣ ಅಂತಹ ಒಂದು ಮುಖವನ್ನು ತೋರಿಸುತ್ತದೆ. ತೂರಮ್ಮಜ್ಜಿ ಕೆಂಪಿಯ ಮಗುವನ್ನು ತನ್ನ ಪರಾಣ ಕೊಟ್ಟು ಉಳಿಸುವ ಪ್ರಸಂಗದ ಏಕಾಗ್ರತೆ,, ಈರಿ ತನ್ನ ಕುಡಿಯನ್ನು ಉಳಿಸಿಕೊಳ್ಳಲು ತೋರುವ ಶ್ರದ್ಧೆ, ಚೆನ್ನನ ಅಪ್ಪ-ಅಮ್ಮ ಅವನ ಬಗ್ಗೆ ಕಟ್ಟಿಕೊಳ್ಳುವ ಕನಸಿನ ಮುಗ್ಧತೆ-ಹೃದಯವನ್ನು ಆದ್ರ್ರಗೊಳಿಸುವ ನೆಲೆಗಳು. ಅಲ್ಲಮನ ವಚನವು `ಎತ್ತಣಿಂದೆತ್ತ ಸಂಬಂಧವಯ್ಯಾ’ ಎಂದು ಸಾರುತ್ತ ಸಂಬಂಧದ ಆಶಯವನ್ನು ಪ್ರಶ್ನಿಸುವ ಮೂಲಕ ಅದು ಬೇರೆ ಇದು ಬೇರೆ ಎಂದು ಗುರುತಿಸುವಂತೆ ಕಂಡು ಬಂದರೂ ಅಲೌಕಿಕವಾದ ಅದ್ವೈತ ಸಂಬಂಧವನ್ನು ಅನುಭಾವಿ ನೆಲೆಯಲ್ಲಿ ಸೂಚಿಸುತ್ತದಲ್ಲ? ಹಾಗೆಯೇ ಈ ಕೃತಿಯಲ್ಲಿ ಬರುವ ಬೇರೆ ಅನೇಕ ವಿಚಾರಗಳ ಜೊತೆಯಲ್ಲಿ-ಒಂದಲ್ಲ ಒಂದು ಸಂಬಂಧವನ್ನು ಹೇಳುತ್ತಾ ಬೀಡಿಯಾಚನೆ ಮಾಡುವ ಚೆನ್ನನ ಅಪ್ಪ ಕೊಲೆಗೀಡಾದ ತನ್ನ ಮಗನ ವಿಚಾರ ಅರಿಯದ ಮುಗ್ಧತೆಯಲ್ಲಿ `ಸಂಬಂಜ ಎನ್ನೋದು ದೊಡ್ಡದು ಕನಾ’-ಎಂದು ಕನವರಿಸುವುದು ಕೂಡ ಆ ಕ್ಷಣದ ಅರ್ಥಕ್ಕಿಂತ ಬೇರೆಯೇ ಅರ್ಥವನ್ನು ಧ್ವನಿಸುತ್ತದೆ.

ಜೋತಮ್ಮದೀರು ಒಂದೆಡೆ ಸೇರಿ ಸುಖದುಃಖ ಮಾತಾಡಿಕೊಳ್ಳುವುದು ಈ ದೃಷ್ಟಿಯಿಂದ ಮುಖ್ಯವಾಗುತ್ತದೆ. ಹೇಳುವ ಕೇಳುವ ಮೌಖಿಕ ಪಂರಪರೆಯ ಕಥನಕ್ರಿಯೆಯಲ್ಲಿ ಕೂಡ ಒಂದು ಸಂಬಂಧ ಹುಟ್ಟಿಕೊಳ್ಳುತ್ತದೆ ಎನ್ನುವುದು ಗಮನಾರ್ಹ, ದೊಡ್ಡೋರ ಹಟ್ಟಿಯ, ಹಾರುವರ ಮನೆಯ, ಹೊಲಾರಮಾರಿಗುಡಿಯ, ತೊರಾರ ಹಟ್ಟಿಯ-ಹೀಗೆ ಬೇರೆ ಬೇರೆ ಮನೆಗಳ ಜೋತಮ್ಮಂದಿರು (ಜ್ಯೋತಿಗಳು) ಒಂದೆಡೆ ಸೇರುವುದು, ಜಾತಿ ವರ್ಗಗಗಳನ್ನು ಕೇರ್‍ಮಾಡದೆ ಮಾತನಾಡುವುದು ವಾಸ್ತವ ಸಮಾಜದಲ್ಲಿ ಕಾಣುವ ಜಾತಿಭೇದದ ವರ್ಗಭೇದದ ವ್ಯವಸ್ಥೆಗೆ ವೈದೃಶ್ಯವನ್ನೊಡ್ಡುತ್ತದೆ. ಅವರಾಡುವ ಮಾತುಕತೆಯ ವಿವರಗಳಲ್ಲಿ ಮದುವೆ ಎಂಬ ಸಾಮಾಜಿಕ ವ್ಯವಸ್ಥೆ ಕೊಡಮಾಡುವ ಔಪಚಾರಿಕ ಸಂಬಂಧವನ್ನು ಗುಪ್ತವಾಗಿ ಉಲ್ಲಂಘಿಸಿ ಚೆನ್ನನ ಜೊತೆಯ ನೈಸರ್ಗಿಕ ಸಂಬಂಧದಲ್ಲಿ ಮಗುವನ್ನು ಹಡೆಯುವ ಕುಸುಮ, ಗಂಡನಿಂದ  ತಿರಸ್ಕೃತಳಾದ ಬಗ್ಗೆ ಒಟ್ಟು ಅವಳ ಸ್ಥಿತಿಗತಿಗಳ ಬಗೆಗೆ-ಅನುಕಂಪದ ಎಳೆ ವ್ಯಕ್ತವಾಗುತ್ತದೆ. ಅವಳ ಅನೈತಿಕ ಸಂಬಂಧ ದೊಡ್ಡ ವಿಷಯ ಅಲ್ಲ. “ಎಲ್ಲರೂ ಮಾಡೋ ಯಥಾರ್ಥನೆ ಹೇಳ್ತಳ’’ ಎಂದು ಹಾರೂವರ ಮನೆಯ ಜೋತಮ್ಮ ಹೇಳುವುದು ಗಮನಾರ್ಹ.

ಸೋಮಪ್ಪರ ಜೀವಾತ್ಮನಿಗೆ ಮಂಚ ಕತೆ ಹೇಳುವ ಪ್ರಕ್ರಿಯೆ ಕೂಡ ಜಾನಪದ ಜಗತ್ತಿನಲ್ಲಿ ಬಹಳ ಸಹಜವಾಗಿರುವ ಕಥನಕ್ರಿಯೆಯಯನ್ನು ಲೇಖಕರು ರಚನಾತಂತ್ರವಾಗಿ ಬಳಸಿಕೊಂಡದ್ದರ ಇನ್ನೊಂದು ನಿದರ್ಶನ. ಮಂಚ ಬಣ್ಣಿಸುವ ಸ್ವಕಥನದಲ್ಲಿ ಯಾಡ ಉತ್ತರೋತ್ತರ ಹೊಂದಿದ ಕತೆಯು ಬೆಸೆದುಕೊಳ್ಳುತ್ತದೆ. ಅದರೊಂದಿಗೆ ಮನುಷ್ಯ ಸಂಬಂಧಗಳ ಕೆಲವು ಮುಖಗಳೂ ಅನಾವರಣಗೊಳ್ಳುತ್ತವೆ. ತಾಯಿ ತೂರಮ್ಮನಿಗೆ ಮಗಳು ಕೆಂಪಿ ಮತ್ತು ಅಳಿಯ ಕಿಟ್ಟಯ್ಯನ ವೈವಾಹಿಕ ಸಂಬಂಧ ಮುರಿದು ಬೀಳುವುದು ಬೇಕಿಲ್ಲ. ಆದರೆ ಗಂಡಾಗಿ ಕಿಟ್ಟಯ್ಯ ಕೆಂಪಿಗೆ ತೃಪ್ತಿಕೊಡುವವನಲ್ಲ, ಅವಳ ಬಸಿರಲ್ಲಿ ಒಂದು ಆರೋಗ್ಯಪೂರ್ಣ ಕುಡಿಯನ್ನು ಕೊನರಿಸುವವನಲ್ಲ ಎಂದರಿತಾಗ ಆ ಸಂಬಂಧದ ಬಗ್ಗೆ ಖೇದಗೊಳ್ಳುವಳು. ಕೆಂಪಿಯ ವಿವಾಹಬಾಹಿರ ಸಂಬಂಧವನ್ನು ಕ್ಷಮ್ಯವೆಂದು ತಿಳಿಯುವಳು. ತನ್ನ ಕುಡಿಗೊಂದು ಕುಡಿ ಆಗಿ ವಂಶ ಬೆಳಗಬೇಕೆಂಬ ದೃಢಸಂಕಲ್ಪದ ತೂರಮ್ಮ ಮಾತೃದೇವತೆಯಾಗಿ ಜೀವನ ಪ್ರೀತಿಯ ಸಂಕೇತವಾಗುವಳು.

`ರಂಜನೆಯು ಹಸಿವ ಮೆಟ್ಟಿ ನಿಲ್ಲುವ ಸನ್ನಿವೇಶ’ವೆಂದು ಕೃತಿಯಲ್ಲಿ ಪ್ರಸ್ತಾಪಗೊಂಡಿರುವ ಕೆಂಪಿ-ಕಿಟ್ಟಯ್ಯನ ಪ್ರಸಂಗ ಹಾಗೂ ಅಕ್ಕಮಹಾದೇವಮ್ಮ-ಬಸಪ್ಪಸೋಮಿ ಸಿದ್ದೂರರ ಪ್ರಸಂಗ-ಇವುಗಳನ್ನು ಗಮನಿಸುವಾಗ ಮನುಷ್ಯನಿಗೆ ಹಸಿವಿನ ಸಮಸ್ಯೆ ಇದ್ದಂತೆಯೇ ನಗುವಿನ ಅಭಾವದ ಸಮಸ್ಯೆ ಅಥವಾ ನಗಲಾರದ ಸಮಸ್ಯೆಯೂ ಇದೆ ಎನಿಸುತ್ತದೆ. ಹಾಗಾಗಿಯೇ ನಗುವನ್ನು ಧಾರಾಳವಾಗಿ ಕೊಟ್ಟ ಯಾಡನಿಗೆ ಮಂಚವು ದಕ್ಕುವ ಸನ್ನಿವೇಶವು ಒಂದು ಪ್ರಹಸನದಂತೆ ಕಂಡರೂ ತಾತ್ವಿಕ ಆಳವನ್ನು ಪಡೆದಿದೆಯೆನಿಸುತ್ತದೆ. ನಗಿಸುವ, ನಗುವ ಈ ಸಂಬಂಧವು ಕೂಡ ಮನುಷ್ಯ ಬದುಕಿಗೆ ಅನಿವಾರ್ಯವಾದದ್ದೆ. ಸಾಬರು ಹೇಳುವ ಚೆನ್ನನ ಕತೆ ಸಮುದಾಯದಲ್ಲಿ ಹಬ್ಬುವ ಪರಿ, Fantasy ಯಲ್ಲಿ ವಾಸ್ತವವನ್ನು ಮರೆಯುವ ಈ ಬಗೆ ಕೂಡ ರಂಜನೆಯ ಹಸಿವನ್ನು ಮೆಟ್ಟಿ ನಿಲ್ಲುವ ಇನ್ನೊಂದು ರೂಪ. ಅಂತಹ ಅನಿವಾರ್ಯತೆಗೆ ಶರಣಾಗುವ ಮನುಷ್ಯರ ಬಗೆಗೆ ತುಡಿಯುವ ಲೇಖಕರ ಸಂವೇದನೆ ವಿಶಿಷ್ಟವಾದದು.

ವರ್ಣಸಂಘರ್ಷಕ್ಕೆ ಕಾರಣವನ್ನು ತರ್ಕಿಸುವ ಕುರಿಯಯ್ಯನ ನನ್ನಿಯ ಪ್ರಸಂಗವು ದಲಿತ ಸಂಘದ ಮೆರವಣಿಗೆಯ ಮುನ್ನಾದಿನ ನಡೆದುಹೋಗುವುದು. ತೊರಾರ ಹಟ್ಟಿ ಜೋತಮ್ಮನು `ವಸಿಚಿಟುಕು ಮುಳ್ಳಾಡಿಸುವ’ ತುಂಟ ಉದ್ದೇಶದಿಂದ ಕುರಿಯಯ್ಯನ ಮೈತುಂಬಿದ ಪರಿಣಾಮ ಎನ್ನುವಂತೆ ಅದು ಕಾದಂಬರಿಯಲ್ಲಿ ನಿರೂಪಿತವಾಗಿದೆ. ಇಡೀ ಪ್ರಸಂಗವನ್ನು ಸ್ವತಃ ಕಾದಂಬರಿಕಾರರ `ಚಿಟುಕು ಮುಳ್ಳಾಡಿಸುವ’ ಉದ್ದೇಶದ್ದಾಗಿ ತಿಳಿದುಕೊಳ್ಳುವುದರಲ್ಲಿ ಅಡ್ಡಿಯೇನಿಲ್ಲವೆನಿಸುತ್ತದೆ. ಚೆನ್ನನ ಅಪ್ಪ ಹೇಳುವಂತಹ ಗುಳ್ಳೆನರಿ ಲಿಂಗ ಕಟ್ಟಿಸಿಕೊಂಡ ಕತೆಯು ಕೂಡ ಸಾಂದರ್ಭಿಕವಾಗಿ ಸ್ವರಕ್ಷಣೆಯ ನೆಲೆಯಲ್ಲಿ ಮೂಡಿ ಬಂದು ಶುದ್ಧ ದೇಸೀ ವಿವರಣೆಯಾಗಿ ಸ್ವೀಕರಿಸಿದರೆ ಸಾಕೆನಿಸುತ್ತದೆ.

ಬಿ.ಎ. ಎಂಬ ಎರಡಕ್ಷರ ಕಲಿತ ಚೆನ್ನನ ಚಿತ್ರ ದುರ್ಬಲವಾಗಿ ಕಾಣಿಸಿ ಅವನಿಗೆ ತನ್ನವರ ಕುರಿತು ಮೂಡುವ ಶಿಷ್ಟ ಮುಜುಗರಗಳು, ಗಾರಸಿದ್ಮಾವನಂಥವರ ರೂಕ್ಷಚರ್ಯೆಗಳಿಗೆ, ನಿರುಮ್ಮಳತೆಗೆ ವೈದೃಶ್ಯವಾಗುತ್ತದೆ. ದಲಿತಸಂಘದ ಮೆರವಣಿಗೆ ಒಟ್ಟಿನಲ್ಲಿ ಮೂಡಿಸುವ ಸನ್ನಿವೇಶ ವ್ಯಂಗ್ಯ (Sittuational irony) ) ಅಪೂರ್ವವಾದುದು. ಡಾಕ್ಟರು Contradiction ಎಂಬ ಪದವನ್ನು ಉಚ್ಚರಿಸಲಾಗದೆ ತೊಡರುವುದು ಒಟ್ಟಾರೆಯಾಗಿ ತುಂಬಿರುವ Contradictionನ್ನು ಧ್ವನಿಪೂರ್ಣವಾಗಿ ಚಿತ್ರಿಸುತ್ತದೆ. ಗಾರಸಿದ್ಮಾವ ಅಂಬೇಡಿಕರ್ ಫೋಟೋಗೆ ಶರಣು ಘೊಷಿಸಿ ಕಾಯಿ ಒಡೆಯುವುದು, ಮೆರವಣಿಗೆ ಸಾಗುತ್ತಾ ಇರುವಾಗ ಕೆಂಪಿಯನ್ನು ಕಂಡು ಕೆಲವರಿಗೆ ದೃಢಕೆಟ್ಟುಹೋಗುವುದು. ಮೆರವಣಿಗೆಯ ಸಂಭ್ರಮಕ್ಕೆ ನೀರವತೆಯನ್ನು ಅಥವಾ ರೊಚ್ಚನ್ನು ತಂದುಕೊಡಬಹುದಾಗಿದ್ದ ಕೊಲೆಗೀಡಾದ ಚೆನ್ನನ ಅನುಪಸ್ಥಿತಿ ಅವನ ತಂದೆಯ ಹೊರತಾಗಿ ಯಾರನ್ನೂ ಕಾಡದೆ ಇದ್ದುದು- ಈ ಮುಂತಾದ ಅಂಶಗಳು ಮುಖಂಡರ ಮತ್ತು ಸಮೂಹದ ಮಧ್ಯೆ ಸಂವಹನದ ಸೋಲನ್ನು ಧ್ವನಿಸುತ್ತವೆ.

ಮುಟ್ಟಿನ ಸೀರೆಯನ್ನು ಕದ್ದು ಸಾಬರಿಗೆ ಒಪ್ಪಿಸುವ ಕಾಯಕದ ಅಮಾಸನಿಗೆ, ಈಗಾಗಲೆ ಕೊಲೆಯಾದ ಚೆನ್ನನ ಕುರಿತು ಅವರು ಹೇಳುವ ಕಟ್ಟುಕತೆಗಳನ್ನು ಕಣ್ಣರಳಿಸಿ ಕೇಳುವುದರಲ್ಲಿ ಆನಂದವಿದೆ. ಆದರೆ ಆತನೂ ಬಲಿಪಶುವಾಗಬಹುದಾದ್ದರ ಕ್ರೂರವ್ಯಂಗ್ಯದ ಸೂಚನೆಯನ್ನು ಅಲ್ಲಿ ಗುರುತಿಸಬಹುದು. ಅಮಾಸ ತಾನು ಕದ್ದ ಮಾಲುಗಳನ್ನು ಸಾಬರಿಗೊಪ್ಪಿಸುವ ಸಾಬರು ಸೀರೆ ವಿತರಣೆಗಾಗಿ ಲಾರಿಗಟ್ಟಲೆ ಸೀರೆಯನ್ನು ಊರಿಗೆ ದೊಡ್ಡವರಾದ ಸೋಮಪ್ಪರಿಗೆ ತಲುಪಿಸುವ ಈ ಪ್ರಕ್ರಿಯೆಯಲ್ಲಿ ಒಂದು ಸಂಬಂಧವನ್ನು ಕಾಣಲು ಕೃತಿ ಕಣ್ಸನ್ನೆ ಮಾಡುತ್ತದೆ.

ಕ್ರಿಯಾ ಮುಗಿಸಿದ ಜೋತಮ್ಮದೀರು ಸುಖದುಃಖ ಮಾತಾಡಿಕೊಳ್ಳಲು ಒಂದೆಡೆ ಸೇರುತ್ತಾರೆ. ಅಂದರೆ duty ಅಥವಾ ಕ್ರಿಯೆ ಎನ್ನುವುದು ಮುಖ್ಯವಾಗುತ್ತದೆ. ಕಾಲನಿಗೂ ಅವನ ಡ್ಯೂಟಿ   ಇದೆ. ಸೋಮಪ್ಪರ ಆಯುಷ್ಯದ ಗೆರೆಯನ್ನು ಖಚಿತವಾಗಿ ನೋಡಿಕೊಳ್ಳುವ, ಕರಾರುವಕ್ಕಾಗಿ ತನ್ನ ಕರ್ತವ್ಯವನ್ನು ನಿಭಾಯಿಸುವ ಕಾಲನ ಕರ್ತವ್ಯಪ್ರಜ್ಞೆಯ ಬಗೆಗೆ ಬರುವ ಮಾತುಗಳು ಹೊಣೆಗಾರಿಕೆಯ ಕುರಿತಾದ ಎಚ್ಚರವನ್ನು ಸೂಚಿಸುತ್ತದೆ. ಸೋಮಪ್ಪರ ಜೀವಾತ್ಮನಿಗೆ ಕೂಡ ಅವರು ನಿದ್ರಿಸಿದಾಗ ಮಾತ್ರ ಬಿಡುವು.

ಚೆನ್ನನ ಕೊಲೆಗೆ ಏಕೈಕ ಸಾಕ್ಷಿಯಾದ ತೊರಾರ ಮುದುಕಿಯನ್ನು ಕೊಲೆ ಮಾಡಿದ ಕ್ರೌರ್ಯದ ಬಗೆಗೂ ಕಾದಂಬರಿಯ ಉಪಸಂಹಾರ ಭಾಗದಲ್ಲಿ ಸೂಚನೆ ಇದೆ. ಕುಸುಮಳ ಹುಚ್ಚು ಚೆನ್ನನ ದುರಂತ ಇವುಗಳನ್ನೆಲ್ಲ ಗರ್ಭೀಕರಿಸಿಕೊಂಡ ಕೃತಿ ಒಟ್ಟಾರೆಯಾಗಿ ಹೊಮ್ಮಿಸುವ ದಾರ್ಶನಿಕವ್ಯಂಗ್ಯ ಬಹಳ ಅಪೂರ್ವದ್ದು. ಈ ಕಾದಂಬರಿಯ ಅನನ್ಯತೆ ಅದು ಸಾಂಪ್ರದಾಯಿಕತೆಗೆ ಸಡ್ಡು ಹೊಡೆಯುವ ಕ್ರಮದಲ್ಲಿ ಕಾಣಿಸುತ್ತದೆ. ವರ್ಣಸಂಕರದ ಆಶಯ ಮುನ್ನೆಲೆಗೆ ಬಂದು ಪರಿಶುದ್ಧತೆಯ ಕಲ್ಪನೆಯೇ ವ್ಯಂಗ್ಯವೀಕ್ಷಣೆಗೆ ಒಳಗಾಗುವುದು ಒಂದು ಉದಾಹರಣೆ. ಕೃತಿಯ ನಾಯಕ ಸಂಭಾವಿತನಾಗಿರಬೇಕೆಂಬ ರೂಢಿಯ ಕಲ್ಪನೆಗೆ ವೃತಿರಿಕ್ತವಾದ, ಬದುಕುವ ಬುದ್ಧಿವಂತಿಕೆಯ ಯಾಡನ ಪಾತ್ರ ಚಿತ್ರಣವೂ ಈ ಧೋರಣೆಯದೆ. ತನ್ನ ದೇಸೀ ಚಾಣಾಕ್ಷತೆಯಿಂದಲೇ ತನ್ನನ್ನು ತಾನು ಉದ್ಧರಿಸಿಕೊಳ್ಳುವ ಯಾಡ ಹಾಗೂ ಸರಿ-ತಪ್ಪು ಅಥವಾ ಪಾಪ-ಪುಣ್ಯಗಳ ರೂಢಿಯ ಕಲ್ಪನೆಯನ್ನು ತಿರಸ್ಕರಿಸುವ ಗಾರಸಿದ್ಮಾವ, ಮುಟ್ಟಿನ ಸೀರೆಗಳನ್ನು ಕದ್ದು ಸಾಬರಿಗೊಪ್ಪಿಸುವ ಕಾಯಕದ ಅಮಾಸ, ಹುಣಸೆಬೀಜಗಳನ್ನು ಸೇರು ಪಾವಲಿ ಥಳ್ಕಾಗಿ ಮಾರುವ ದಂಧೆಯಲ್ಲಿ ಸಾಬರೊಂದಿಗೆ ಶಾಮೀಲಾಗುವ ಕಿಟ್ಟಯ್ಯ, ಇವರಲ್ಲದೆ ರೂಪಾಯಿ ನೋಟಿನಲ್ಲಿ ಮುದ್ರಿತವಾದ ಗಾಂಧಿಮಹಾತ್ಮನ ಆದರ್ಶದ ತಲೆಗೆ ಹೊಡೆಯುವ ಕಾಯಕದ ಕಳ್ಳನೋಟಿನ ಆಸಾಮಿಗಳು- ಈ ಎಲ್ಲ ಪಾತ್ರಗಳನ್ನು ಕಾದಂಬರಿ ಕೇವಲ ಚಿತ್ರಿಸುತ್ತದೆ ಹೊರತು, ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಕಾಣುವ ಮೌಲ್ಯಪ್ರಜ್ಞೆಯ ಧೋರಣೆಯಿಂದ ಅಲ್ಲ. `ಕುಸುಮಬಾಲೆ’ಯಲ್ಲಿ ಗದ್ಯವಾಕ್ಯಗಳ ಸಾಮಾನ್ಯ ನಿಯಮವನ್ನು ಮೀರಿ ಬಳಕೆಯಾದ ಸಾಲುಗಳು, ಕಾವ್ಯದಂತಹ ಭಾವಾದ್ರ್ರ ತುಣುಕುಗಳು-ಒಂದು ವಿಶಿಷ್ಟ ಚಂಪೂಕಾವ್ಯದ ಮೆರುಗಿನಲ್ಲಿ ಹೊಮ್ಮುವ ಮಾಮೂಲಿಯಲ್ಲದ ಬಂಡಾಯದ ಒಳಧ್ವನಿಗೆ ಉಚಿತವಾದ ಹೊರಮೈಯನ್ನು ಕೊಟ್ಟಿವೆಯೆನ್ನಬಹುದು. “ಪರ್ಸಾದನು… ಎದುರೂಗ ಕೂತಿತ್ತು’’ (ಪು.5) “ಕಿತ್ತರೂ ಯಾಡನು ಹೊಟ್ಟ ಒಳಗಿದ್ದಂತೆ ಅವ್ವಗೆ ಅಂಟಿತು’’ (ಪು.11) ಎಂಬಂತಹ ವಾಕ್ಯಗಳಲ್ಲಿ ಉದ್ದೇಶಪೂರ್ವಕ ವ್ಯಾಕರಣೋಲಂಘನೆಯನ್ನು ಕಾಣಬಹುದು. ಜೋಲ್ಲು ಸುರಿಸುವ ಬುದ್ಧಿಮಾಂಧ್ಯ ಮಗು ಪರ್ಸಾದ ಮನುಷ್ಯ ರೂಪವನ್ನು ಹೊಂದಿದ್ದೂ ಸೊಂಟಕ್ಕೆ ಅಂಟಿಕೊಂಡಿದ್ದ ಯಾಡ ಆ ವಯಸ್ಸಿನ ಆ ಹಂತದಲ್ಲಿ ಪ್ರಾಣಿಚರ್ಯೆಗಿಂತ ಮಿಗಿಲಾದ ಮನುಷ್ಯಚರ್ಯೆಯನ್ನು ಕಾಣಿಸಲು ಸಾಧ್ಯವಿಲ್ಲ. ದೇವನೂರರ ಶೈಲಿ ಇಂತಹ ಸೂಕ್ಷ್ಮಗಳನ್ನೊಳಗೊಂಡು ತನ್ನದೇ ವ್ಯಾಕರಣವನ್ನೊಳಗೊಂಡಿರುವುದನ್ನು ಗಮನಿಸಬೇಕಾಗುತ್ತದೆ.

ಅನೇಕ ಸನ್ನಿವೇಶಗಳಲ್ಲಿ ನಾವು ಕಾಣುವಂತೆ ತನ್ನನ್ನು ತಾನು ಪರಿಹಾಸ್ಯಕ್ಕೀಡು ಮಾಡುವ ಸಾಮರ್ಥ್ಯವು ಮೀರಿನಿಂತು ನೋಡುವ ದೃಷ್ಟಿಗೆ ಮಾತ್ರ ಸಾಧ್ಯ. ತನ್ನನ್ನೂ ತನ್ನವರನ್ನೂ ಒಟ್ಟು ಮನುಷ್ಯರನ್ನೂ ಪ್ರೀತಿ ಬೆರೆತ ವ್ಯಂಗ್ಯದಿಂದ ಕಾಣುತ್ತ ಜನಪದರಲ್ಲಿ ಜನಪದವಾಗಿ ನಿರೂಪಿಸಿದ ಬಗೆಯನ್ನು ದೇವನೂರರ ಈ ಕೃತಿಯಲ್ಲಿ ಕಾಣುತ್ತೇವೆ. ಅದನ್ನು ಬೆದಕುತ್ತ ಹೋದರೆ ಅವರವರ ಪಾಲಿಗೆ ದಕ್ಕಿದಷ್ಟು ಬೆರಗು, ಹೇಳಿದಷ್ಟೂ ಹೇಳದ್ದು ಬಾಕಿ ಉಳಿಯುತ್ತದೆ.