ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ -9 //ಗೌತಮ್ ದೇವನೂರ್//

[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “ನಾನು ಗಾಂಧಿ ಚಿತ್ರ ನೋಡಿದೆ ಅಥವಾ ಆಕಾಶಕ್ಕೆ ಎರಡು ಗೇಣು ಕಮ್ಮಿ” ಬರಹದ ವಾಚನ ಗೌತಮ್ ದೇವನೂರ್ ಅವರಿಂದ.]

 

 

                         “ನಾನು ಗಾಂಧಿ ಚಿತ್ರ ನೋಡಿದೆ ಅಥವಾ ಆಕಾಶಕ್ಕೆ ಎರಡು ಗೇಣು ಕಮ್ಮಿ”

1
ನಾನು ಗಾಂಧಿ ಚಿತ್ರ ನೋಡಿದೆ. ದ.ಸಂ.ಸ ಈ ಚಿತ್ರವನ್ನು ಬಹಿಷ್ಕರಿಸಿರುವುದರಿಂದ ಈ ರೀತಿಯಾಗಿ ಹೇಳಬೇಕಾಗಿ ಬಂದಿದೆ. ಹೀಗಾಗಿ ನಾನು ಗಾಂಧಿ ಚಿತ್ರ ನೋಡಿರುವುದು ನಮ್ಮ ರಾಜ್ಯ ಸಂಚಾಲಕ ಬಿ.ಕೃಷ್ಣಪ್ಪರಾದಿಯಾಗಿ ಗೆಳೆಯರಿಗೆ ಬೇಸರವಾಗಿರುತ್ತದೆ, ಆದರೆ ಆಶ್ಚರ್ಯವಾಗಿರುವುದಿಲ್ಲ. ಯಾಕೆಂದರೆ ಈ ಅಶಿಸ್ತಿನ ಮಹಾದೇವ ಬಹಿಷ್ಕರಿಸಿದ್ದರೂ ಬಹಿಷ್ಕಾರಕ್ಕೆ ಅವನು ಒಳಗಾಗುವವನಲ್ಲ ಅಂತ ಅವರು ಮೊದಲೇ ಅಂದುಕೊಂಡಿರಲೂಬಹುದು. ‘ಹಾಳಾಗಲಿ, ಅವ ಬೇಕಾದರೆ ಗುಟ್ಟಾಗಿ ನೋಡಿಕೊಳ್ಳಲಿ, ಅದನ್ನೂ ಯಾಕೆ ಬರೆದ, ಬರೆದು ಯಾಕೆ ಸಂಘಟನೆಯಲ್ಲಿ ಗಲಿಬಿಲಿ ಉಂಟುಮಾಡಿದ’ ಎಂಬ ಸಿಟ್ಟು ಅವರಲ್ಲೀಗ ಉಂಟಾಗಿರಬೇಕು. ಅವರಿಗೆ ಏನೇ ಆಗಿರಲಿ ಬೇಸರವೋ, ಕೋಪವೋ, ಸಂಘಟನೆಗೆ ನುಂಗಲಾರದ ತುತ್ತೋ, ಏನೇ ಆಗಿರಲಿ ನಾನು ಬರೆಯಲೇಬೇಕು ಅನ್ನಿಸಿದೆ, ಬರೆಯುತ್ತಿದ್ದೇನೆ.
ಮೊದಲನೆಯದಾಗಿ, ಗಾಂಧಿ ಚಿತ್ರ ಬಹಿಷ್ಕರಿಸುವುದ ನಾನು ಬಯಸಿರಲಿಲ್ಲ. ವಿರೋಧಿಸಿದರೂ ನನ್ನ ಮಾತು ನಡೆಯುವ ಸ್ಥಿತಿಯಲ್ಲಿರಲಿಲ್ಲ. ಬಹಿಷ್ಕಾರ ಬಹುಮತದ ನಿರ್ಣಯವಾಗಿತ್ತು. ಹಾಗಿದ್ದೂ ನಮ್ಮ ಗೋವಿಂದಯ್ಯ, ಯಾವ ಸಿನಿಮಾ ಬಂದರೂ ಬಿಡದೆ ನೋಡುವ ಗೋವಿಂದಯ್ಯ, ಗಾಂಧಿ ಚಿತ್ರ ಬಂದಾಕ್ಷಣವೇ ಬೆಂಗಳೂರಿಗೆ ಹೋಗಿ ಕದ್ದು ಎರಡು ಸಲ ನೋಡಿಬಿಟ್ಟಿದ್ದನು. ಮೈಸೂರಿಗೆ ಗಾಂಧಿ ಚಿತ್ರ ಬಂದಾಗ ಲೋಕಸಭಾ ಸದಸ್ಯ ಶ್ರೀನಿವಾಸ್ ಪ್ರಸಾದ್‍ರ ತಮ್ಮ ರಾಮಸ್ವಾಮಿ ಮೊದಲೇ ಟಾಕಿಸ್ ಮಾಲೀಕನನ್ನ ನಡುಗಿಸಿ, ಇನ್ನು ಯಾವ ರೀತಿ ಪ್ರತಿಭಟಿಸಬೇಕೆಂದು ನನ್ನ ಬಳಿ ಬಂದರು. ಸರಳವಾದ ನೇರವಾದ ದುಡುಕು ಸ್ವಭಾವದ ರಾಮಸ್ವಾಮಿ, ಆತನ ಗುಂಪು ದುಡುಕಿ ಎಲ್ಲಿ ಟಾಕೀಸನ್ನೇ ಚಚ್ಚಿ ಹಾಕಿಬಿಡುತ್ತದೊ ಎಂಬ ಆತಂಕ ನನಗೆ ಉಂಟಾಗತೊಡಗಿತು. ಆಗ ನಮ್ಮ ರಾಜ್ಯ ಸಂಚಾಲಕ ಕೃಷ್ಣಪ್ಪನವರು ಮೈಸೂರಿನಲ್ಲಿದ್ದರು. ಪರಿಸ್ಥಿತಿ ವಿವರಿಸಿದೆ. ಆಂಧ್ರದಲ್ಲೋ ಮದ್ರಾಸಲ್ಲೋ ಚಿತ್ರಮಂದಿರದೊಳಗೆ ಹಾವು ಬಿಟ್ಟಿದ್ದು ನನಗೆ ಗಾಬರಿ ತರಿಸಿತ್ತು. ಅದಾಗಲೇ ಬೆಂಗಳೂರಿನಲ್ಲಿ ಪ್ರತಿಭಟಿಸಿದ್ದರಿಂದ ಪ್ರತಿಭಟನೆ ಸಾಂಕೇತಿಕವಾದುದರಿಂದ ಇಲ್ಲೂ ಮಾಡುವುದು ಅನಗತ್ಯ ಎಂದೆ. ಅದಕ್ಕೆ ಕೃಷ್ಣಪ್ಪನವರು ‘ಮಾಡಲಿ ಬಿಡಯ್ಯ, ಗಲಾಟೆ ಆದರೆ ಆಗುತ್ತೆ, ನೀನು ಯಾಕೆ ತಡೆಯುತ್ತೀ?’ ಎಂದರು. ನನ್ನ ಗಾಬರಿ ಹೆಚ್ಚಿತು. ನಾನು ರಾಮಸ್ವಾಮಿ ಬಳಿ ಬಂದು ‘ಟಾಕೀಸಿಗೆ ಏನೂ ಜಖಂ ಮಾಡಬೇಡಿ-ಅಂಬೇಡ್ಕರ್ ಇಲ್ಲದ ಗಾಂಧಿ ಅಪೂರ್ಣ ಎಂದಷ್ಟೇ ಹೇಳಿ’ ಎಂದು ಇಪ್ಪತ್ತು ಸಲ ವಿನಂತಿಸಿ ಬೆಂಗಳೂರಿಗೆ ಹೊರಟೆ. ಬೆಂಗಳೂರಿನಲ್ಲಿ ಇದ್ದರೂ ಏನಾಗಿರುತ್ತದೋ ಎಂಬ ಕಿಡಿ ನನ್ನನ್ನು ಸುಡುತ್ತಿತ್ತು.
2
ಇನ್ನು ಗಾಂಧಿ ಚಿತ್ರದ ಬಗ್ಗೆ: ಒಂದು ಮಿತಿಯೊಳಗೆ ಗಾಂಧಿಯನ್ನೇ ಕೇಂದ್ರವಾಗಿಸಿಕೊಂಡು ಗಾಂಧಿಯನ್ನಷ್ಟೇ ತೆಗೆದಿರುವ ಚಿತ್ರವಿದು. ಗಾಂಧಿ ಬಿಟ್ಟು ಉಳಿದವರೆಲ್ಲಾ ಇಲ್ಲಿ ಇಲ್ಲವಾಗಿದ್ದಾರೆ. ಗಾಂಧಿ ಪಾತ್ರಧಾರಿಯಂತೂ ಗಾಂಧಿಯೇ ಆಗಿಬಿಟ್ಟು ಎಲ್ಲೂ ಅಭಿನಯಿಸಿಯೇ ಇಲ್ಲ. ಗಾಂಧಿ ಅನುಯಾಯಿಗಳಾದ ನೆಹರೂ, ಪಟೇಲರುಗಳು ಕಮಂಗಿಗಳಾಗಿ ಕೊನೆಗೆ ಅಧಿಕಾರದಾಹಿಗಳಾಗಿ, ಇಂದಿರಾ ಗಾಂಧಿಯವರೂ ಇಷ್ಟಪಡದಷ್ಟು ಚೆನ್ನಾಗಿ ಮೂಡಿವೆ. ಜಿನ್ನಾರ ಅಭಿನಯ ಚೆನ್ನಾಗಿದ್ದು, ಅಂಬೇಡ್ಕರರ ದುಃಖದಾಳವನ್ನು ಅರಿಯದವ ಅಂಬೇಡ್ಕರ್‍ನ್ನು ಚಿತ್ರಿಸಿದ್ದರೆ ಜಿನ್ನರಂತಾಗಿಬಿಡುತ್ತಿದ್ದು, ಚಿತ್ರದಲ್ಲಿ ಅಂಬೇಡ್ಕರ್ ಇಲ್ಲದಿದ್ದುದು ಒಂದು ರೀತೀಲಿ ಒಳ್ಳೆಯದಾಯಿತು ಅನ್ನಿಸಿತು. ಅಲ್ಲದೆ ಗಾಂಧಿ ಕಾಲದ ಮುಖ್ಯರಾದ ವಿನೋಬಾ, ಸುಭಾಷ್‍ಚಂದ್ರಬೋಸ್, ಜೆ.ಪಿ, ಲೋಹಿಯಾ ಮುಂತಾದ ಪಾತ್ರಗಳೂ ಚಿತ್ರದಲ್ಲಿಲ್ಲ, ಇದ್ದರೂ ಅದು ಯಕಶ್ಚಿತ್ ಹಾಗಾಗಿ ಅಂಬೇಡ್ಕರ್ ಇಲ್ಲದಿರುವಿಕೆ ಆ ಚಿತ್ರದ ಗತಿ ಅಷ್ಟೆ. ಆದರೆ ಸಾಮಾಜಿಕವಾಗಿ ಕೆಳಸ್ತರದತ್ತ ಗಾಂಧಿ ಚಲಿಸುವಂತಾಗಿ ಗಾಂಧಿ ಮಹಾತ್ಮನಾಗುವಲ್ಲಿ ಅಂಬೇಡ್ಕರರ ಅದಮ್ಯ ಚೇತನವೂ ಕಾರಣ ಎಂಬುದರಲ್ಲೇನೂ ನನಗೆ ಈಗಲೂ ಅನುಮಾನವಿಲ್ಲ.
ಇದನ್ನೆಲ್ಲಾ ಯೋಚಿಸುತ್ತಾ, ಆ ಕಾಲದಲ್ಲಿ ನಾನು ಇದ್ದಿದ್ದರೆ ಯಾರ ಕಡೆ ಇರುತ್ತಿದ್ದೆ ಎಂದು ನನ್ನ ತಲೆ ತಿಂದಿತು. ಅದೆಷ್ಟೋ ಯೋಚಿಸಿದರೂ ನಿಲುಕದೆ ತಳಮಳಿಸಿದೆ. ನಿದ್ದೆಯಲ್ಲೂ ಈ ಚಿಂತೆ ನನ್ನನ್ನು ಬಿಡುತ್ತಿರಲಿಲ್ಲ. ಎದ್ದಾಗ, ನಾನು ಗಾಂಧಿ ಜೊತೆ ಇದ್ದೂ- ಅಂಬೇಡ್ಕರರನ್ನು ಅರ್ಥಮಾಡಿಕೊಳ್ಳಬೇಕೆಂದು, ಗಾಂಧಿಯೊಡನೆ ಅಂಬೇಡ್ಕರರ ಪರವಾಗಿ ವಾದಿಸುತ್ತಿದ್ದೆನೇನೋ ಎನಿಸಿತು. ಆದರೆ ಗಾಂಧಿಯು ಮತಾಂತರದ ಬಗ್ಗೆ ಪೇಜಾವರರಂತೆ ಚಡಪಡಿಸುವುದನ್ನು ಕಂಡಾಗ ಕಸಿವಿಸಿಯಾಗಿ ನಾನು ಹಿಂಸೆಯನ್ನು ಅನುಭವಿಸಬೇಕಾಗಿ ಬರುತ್ತಿತ್ತು!

3
ಗಾಂಧಿಯದು ಭೂಮಿಯಂತೆ ಒಂದು ಕ್ಷಣವೂ ನಿಲ್ಲದೆ ಚಲಿಸುವ ಚೇತನವು. ಈ ಚೇತನವನ್ನು ನಿರ್ದೇಶಕ ಹೇಗೆ ಅದ್ಭುತವಾಗಿ ಹಿಡಿದಿದ್ದಾನೆಂದರೆ- ಮೋಹನದಾಸನು ಮೊದಲು ಕೆಂಪು ಮನುಷ್ಯನನ್ನು ಅನುಕರಿಸಲು ಹೋಗಿ ಆ ಪ್ರಯಾಣದಲ್ಲಿ ಕ್ರೂರವಾಗಿ ಆಚೆಗೆ ತಳ್ಳಿಸಿಕೊಂಡು ಅವಮಾನಿತನಾಗಿ ಬಿದ್ದಾಗ, ಆತನ ಆತ್ಮಕ್ಕೆ ಆಚೆ ಬಿದ್ದಿರುವ ಅಸ್ಪೃಶ್ಯ ಆತ್ಮಗಳು ಸೇರಿಕೊಂಡು ಅಸ್ಪೃಶ್ಯತನದ ಬೀಜ ಅವನ ಎದೆಗೆ ಬಿದ್ದಂತಾಗಿ ಮಹಾತ್ಮ ಆಗಲು ಆರಂಭಿಸುತ್ತಾನೆ. ಕೇವಲ ಈ ಒಂದು ಅವಮಾನಕ್ಕೆ ಆ ಮೋಹನದಾಸನು ‘ಮಹಾತ್ಮಾಗಾಂಧಿ’ಯಾಗಿ ಪರಿವರ್ತನೆಗೊಳ್ಳುವುದಾದರೆ ದೇಹವಿಡೀ, ಜೀವನವಿಡೀ ಅವಮಾನದಿಂದಲೇ ಮಾಡಲ್ಪಟ್ಟ ಅಸ್ಪೃಶ್ಯ ಬೆಳೆದರೆ ಅದೆಷ್ಟು ಎತ್ತರಕ್ಕೆ ಬೆಳೆಯಬಹುದೆಂಬುದು ನನ್ನ ಊಹೆ ಅಳತೆಗಳಿಗೆ ನಿಲುಕದಷ್ಟು ಎತ್ತರದ್ದಾಗಿಬಿಟ್ಟಿತು.
ಆಫ್ರಿಕಾದಲ್ಲಿ ಕರಿಯನಾದ ಮೋಹನ್‍ದಾಸ್‍ಗೆ ಆ ಕರಿಯತನವೇ ಅವನಿಗೆ ದಿಕ್ಕು ತೋರಿಸುತ್ತದೆ. ಸಹನೆ, ದೃಢತೆ, ಅಹಿಂಸೆ ಇವುಗಳೊಡನೆ ಎದುರಾಳಿಯನ್ನು ಮನುಷ್ಯನನ್ನಾಗಿಸುವ ಅಪೂರ್ವತೆ, ಇದರೊಟ್ಟಿಗೇ ಹೊಸತಾಗಿ ಸಹಜೀವನ ಕಟ್ಟುವ ಒಳಗಣ್ಣು ಗಾಂಧಿಗೆ ಅಲ್ಲುಂಟಾಗುತ್ತದೆ. ಆ ಕಾಗದ ಸುಡುವ ಸಂದರ್ಭದಲ್ಲಿ ಮೋಹನದಾಸ್ ಗಾಂಧಿಗೆ ಬಿಳಿ ಪೊಲೀಸ್ ಹೊಡೆದೂ ಸುಸ್ತಾಗಿ ಗಾಂಧಿಯ ನಿರ್ಲಿಪ್ತ ಕಾಯಕಕ್ಕೆ ಆ ಕ್ರೂರ ಪೊಲೀಸ್‍ನಲ್ಲೂ ‘ಮಾನವ ಇಣುಕುವುದ’ರ ಎಳೆಯೇ ಗಾಂಧಿಯನ್ನು ಮುಂದೆ ನಡೆಸಿಕೊಂಡು ಹೋಗುತ್ತದೆ.
ಆಮೇಲೆ ಮೋಹನ್‍ದಾಸ್ ಗಾಂಧಿ ಮೊದಲನೆಯ ದರ್ಜೆಯ ಗುಜರಾತಿಯಾಗಿ ಭಾರತಕ್ಕೆ ಬಂದು ಆತನ ಪಯಣದಲ್ಲಿ ರೈಲು ನಿಂತಾಗ- ಉಟ್ಟ ಸೀರೆಯನ್ನೇ ಒಗೆದುಕೊಳ್ಳುತ್ತಿದ್ದ ಹೆಂಗಸಿಗೆ ತನ್ನ ಪೇಟ ಬಿಚ್ಚಿಕೊಟ್ಟು ಎರಡನೆಯ ದರ್ಜೆಯ ಭಾರತೀಯನಾಗುತ್ತಾನೆ. ಅಲ್ಲಿಂದ ಚಂಪಾರಣ್ಯವೂ ಆತನಿಗೆ ಲಂಗೋಟಿ ಮಾತ್ರದಷ್ಟು ಉಳಿಸಿಕೊಟ್ಟು ಮೂರನೆಯ ದರ್ಜೆಗೆ ಇಳಿಸಿ ಮಹಾತ್ಮನನ್ನಾಗಿಸುತ್ತದೆ, ಮೋಹನದಾಸ್ ಕರಮಚಂದ ಗಾಂಧಿಯು ಮಹಾತ್ಮಾ ಗಾಂಧಿಯಾಗುತ್ತಾರೆ.
ಮಾನವ ಒಂದು ಜೀವಿತದಲ್ಲಿ ಇಷ್ಟೆಲ್ಲಾ ಆಗುವುದು ಒಂದು ಪವಾಡವೆ. ತನ್ನ ಒಂದು ದೇಹದಲ್ಲಿ ಇಷ್ಟೆಲ್ಲಾ ರೂಪಾಂತರವಾದ ಗಾಂಧಿ ತನ್ನ ಜೀವಿತವ ಪ್ರಯೋಗಕ್ಕಿಟ್ಟುಕೊಂಡ ಗಾಂಧಿ ಅಸ್ಪೃಶ್ಯ ಸ್ಥಿತಿಯೇ ಆಗುವುದಿಲ್ಲ. ‘ಬಗ್ಗೆ’ಯಿಂದ ಗಾಂಧಿ ‘ಅದಾ’ಗುವುದಿಲ್ಲ. ಅಸ್ಪೃಶ್ಯ ಆಗಲು ಮುಂದಿನ ಜನ್ಮ ಬಯಸುತ್ತಾರೆ.
‘ಭಾರತ ಎರಡಾಗುವುದಾದರೆ ನನ್ನ ಹೆಣದ ಮೇಲಾಗಬೇಕೆಂದು ನುಡಿದ ಗಾಂಧಿ ತಮ್ಮ ನುಡಿಯನ್ನು ಉಳಿಸಿಕೊಂಡಿದ್ದರೆ ಕ್ರಿಸ್ತನಮಟ್ಟಕ್ಕೆ ಮುಟ್ಟುತ್ತಿದ್ದರು’ ಎನ್ನುವ ಡಾ.ಲೋಹಿಯಾರ ಮಾತಿನ ಸತ್ಯತೆ- ಅಂದರೆ, ಗಾಂಧಿಯ ಈ ಒಂದು ಕೊರತೆ ಮತ್ತು ಗಾಂಧಿ ಈ ನಾಡ ತಳದ ಮಾನವ ಅಸ್ಪೃಶ್ಯನಾಗಲು ಅದಕ್ಕಾಗಿ ಮುಂದಿನ ಜನ್ಮ ಆಶಿಸುವುದು-ಈ ಎರಡೂ ಕೊರತೆಯಿಂದಾಗಿ ನಮ್ಮ ಯುಗದ ಎತ್ತರದ ಪುರುಷ ಗಾಂಧಿಯ ಎತ್ತರ, ಆಕಾಶ ಮುಟ್ಟಲು ಎರಡು ಗೇಣು ಕಮ್ಮಿ ಎಂಬಂತೆ ಕಾಣಿಸುತ್ತದೆ.

4
ನಾನು ಅಹಿಂಸೆಯ ಪರವಾಗಿದ್ದು ಉದ್ವಿಗ್ನತೆಯ ದಲಿತ ಸ್ನೇಹಿತರೊಡನೆ- ‘ಅಂಬೇಡ್ಕರ್ ಕೂಡಾ ಅಹಿಂಸೆಯನ್ನು ಹಿಡಿದಿದ್ದರು. ಅದಕ್ಕೇ ಅವರು ಬೌದ್ಧರಾದುದು’ ಎಂದು ಒಪ್ಪಿಸುತ್ತಿದ್ದೆ. ಆದಾಗ್ಯೂ ಅನೇಕರು ಒಪ್ಪುತ್ತಿರಲಿಲ್ಲ. ಆಗ ವಾಸ್ತವತೆ ಉದಾಹರಣೆ ಕೊಟ್ಟು ಅಂದರೆ- ‘ನೋಡಿ, ನಾವು ಅಸ್ಪೃಶ್ಯರು ಕಮ್ಮಿ ಸಂಖ್ಯೆಯಲ್ಲಿದ್ದೇವೆ. ಪೊಲೀಸು, ಮಿಲಿಟರಿ ಎದುರಿಸುವುದು ಆಗದ ಮಾತು. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಅಕ್ಕಪಕ್ಕದ ವಾಸಿಗಳಾದ ಸವರ್ಣೀಯರು ನಾವು ಇರುವುದನ್ನೇ ಸಹಿಸರು. ಹೀಗಿರುವಾಗ ನಾವು ಹಿಂಸೆ ಹಿಡಿದರೆ ನಮಗೆ ಉಳಿಗಾಲವಿಲ್ಲ’ ಎಂದು ತಂತ್ರವಾಗಿಯಾದರೂ ಅಹಿಂಸೆ ಒಪ್ಪಿಸಲು ಹೆಣಗುತ್ತಿದ್ದೆ. ಗಾಂಧಿ ಚಿತ್ರ ನೋಡಿದ ಮೇಲೆ ನನ್ನ ಈ ತಂತ್ರವಾದವೂ ತಪ್ಪೆನಿಸಿತು. ಚಳವಳಿಕಾರರು ಪೊಲೀಸರನ್ನು ಕೊಂದಾಗ, ನೆಹರೂ, ಪಟೇಲ್, ಜಿನ್ನಾರು ವಿರೋಧಿಸಿದರೂ ಗಾಂಧಿ ಉಪವಾಸ ಮಾಡಿ, ಚಳವಳಿ ಹಿಂತೆಗೆದುಕೊಂಡದ್ದು ನನ್ನನ್ನು ಬದಲಿಸಿತು. ಬಿಳಿ ನ್ಯಾಯಾಧೀಶ ಕರಿಯ ಗಾಂಧಿಗೆ ಎದ್ದು ನಿಂತಿತ್ತು. ನನಗಾಗ ಅಹಿಂಸೆ ತಂತ್ರವಲ್ಲ, ಅದು ಬದುಕು ಅನ್ನಿಸಿತು.

5
ಸಾಹಿತ್ಯ ಲೋಕದ ಮಂದಣ್ಣ ಉರುಫ್ ಗಾಂಧಿ ಗೋವಿಂದಯ್ಯ ‘ಹೇಗಿದೆ ಗಾಂಧಿ’ ಎಂದು ನಗಾಡಿದನು. ಅದಕ್ಕೆ ನಾನು ‘ಸಾಯಲು ಮಾನಸಿಕವಾಗಿ ದೃಢವಾಗಿ ಸಿದ್ಧವಾದವನು ಮಾತ್ರ ಗಾಂಧಿಯಾಗಬಲ್ಲ’ ಎಂದೆ. ಅಹಿಂಸಾವಾದಿಯಾದ ಗಾಂಧಿಯ ದೇಹದ ಒಂದು ರೋಮದಲ್ಲೂ ಹೇಡಿತನದ ಸುಳಿವು ಇಲ್ಲದಿರುವುದು ನನ್ನನ್ನು ನಡುಗಿಸಿತು. ಹೇಡಿಯಾದವನು ಅಹಿಂಸಾವಾದಿಯಾಗುವುದು ಅಸಾಧ್ಯ ಎಂಬ ನಿಜವೂ ಅರಿವಾಗಿ ಬೆವರಿಸಿತು. ಇಂಥ ಗಾಂಧಿಯನ್ನು ಅಪಾರ್ಥಗೊಳಗಾಗಿಸಿದ ಸೈತಾನ… ಅಥವಾ ನಮ್ಮ ಹೇಡಿತನವೇ ಆ ಸೈತಾನ ಆಗಿರಬೇಕು. ನಮ್ಮ ದಲಿತ ಸ್ನೇಹಿತರ ಕಣ್ಣೂ ಗಾಂಧಿಯ ಬಗ್ಗೆ ಸಂಪೂರ್ಣವಾಗಿ ಮುಚ್ಚಿಕೊಂಡಿರದಿದ್ದರೆ, ಕಸ್ತೂರಿ ಬಾ ಅವರು ಅಸ್ಪೃಶ್ಯ ಮೂಲದವನ ಮಲ ಎತ್ತಲು ನಿರಾಕರಿಸಿದಾಗ, ಗಾಂಧಿಯು ತನ್ನನ್ನೇ ತಾನು ಕಳೆದುಕೊಂಡು ಉದ್ವಿಗ್ನನಾಗಿ ಮನೆಯಿಂದಲೇ ತನ್ನ ಪತ್ನಿಯನ್ನು ದೂಡುವ ಚಿತ್ರ ಕಣ್ಮುಂದೆ ಕಾಣುತ್ತಿತ್ತು.

6
ದಲಿತ ಸಂಘರ್ಷ ಸಮಿತಿಗೆ ತನ್ನದೇ ರೂಪಿಲ್ಲದೆ ತನ್ನದೇ ದಾರಿಯಿಲ್ಲದೆ ದಿಕ್ಕೆಡುತ್ತಿದೆ. ಮೊನ್ನೆ ದೇವಲಾಪುರದ ಕಾಡು ಸಂಬಂಧಿಸಿ, ದಲಿತ ಸಂಘದ ಸ್ನೇಹಿತರು ನಡೆಸಿದ ಧರಣಿಯಲ್ಲಿ ಕಾಡಿನ ಅಧಿಕಾರಿಯನ್ನು ಸಿಕ್ಕಾ ಪಟ್ಟೆ ಬೈದು ಆತನನ್ನು ಕುಪಿತಗೊಳಿಸಿದರು ಎಂದು ಕೇಳಿದೆ. ಇದು ಅನಗತ್ಯವಾಗಿತ್ತು. ದೇವಲಾಪುರದ ಭೂ ಚಳವಳಿಯು ಕಾಡಿಗೆ ವಿರೋಧವಲ್ಲ. ರೆವಿನ್ಯೂ ಭೂಮಿಯೆಂದಾಗಿ ದಾಖಲಾತಿ ಸಿಕ್ಕಿದ್ದರಿಂದಲೇ ಆರಂಭವಾದ ಚಳವಳಿ ಅದು. ಆ ಕಾಡಿನ ಅಧಿಕಾರಿಗಳ ಹತ್ತಿರ, ಹಾಗೆ ಸರ್ಕಾರದ ಹತ್ತಿರ ‘ರೆವಿನ್ಯೂ ಭೂಮಿಯೆಂದು ಗರೀಬರು ಬಂದಾಗ ಅದ ಕಾಡು ಭೂಮಿ ಮಾಡುತ್ತಿ? ಕಾಡು ಭೂಮಿಯನ್ನು ಒತ್ತರಿಸುವ ಭೂಮಾಲೀಕರಿಗೆ ಅದ ರೆವಿನ್ಯೂ ಭೂಮಿ ಮಾಡುತ್ತಿ? ಹೊಟ್ಟೆಗಿಲ್ಲದ ನಮ್ಮ ಹೊಟ್ಟೆಯನ್ನೇಕೆ ತುಳಿಯುತ್ತೀ? ನಿನ್ನ ನಿಜ ಏನು?’- ಎಂದಷ್ಟೇ ಕೇಳಿದ್ದರೆ ಸಾಕಾಗಿತ್ತು. ಆಗ ಅಧಿಕಾರಿಯೂ, ಸರ್ಕಾರವೂ ಕನಿಷ್ಠ ಯೋಚಿಸುವಂತಾದರೂ ಆಗುತ್ತಿತ್ತು. ಅವು ತಮ್ಮನ್ನು ತಾವು ಮುಟ್ಟಿನೋಡಿಕೊಳ್ಳುತ್ತಿದ್ದವು.
ಅದಕ್ಕಾಗೆ, ನಮ್ಮ ದಸಂಸ ವಿಭಾಗ ಸಂಚಾಲಕರು ದ್ವೇಷ, ಅನುಮಾನದ ಪ್ರವೃತ್ತಿ ಉಳ್ಳವರಾದ್ದರಿಂದ ಅವರಿಗೆ ‘ದಯವಿಟ್ಟು ಗಾಂಧಿ ಚಿತ್ರ ನೋಡಿ’ ಎಂದು ಎರಡು ಸಲ ವಿನಂತಿಸಿದೆ. ಹಾಗೆಯೇ ಇನ್ನೊಬ್ಬ ಕಾಂಗೈ ಗೂಂಡಾಗಿರಿಯಿಂದ ಪರಿವರ್ತಿತನಾಗಿ ದಲಿತ ಸಂಘವ ಸೇರಿ ದಿನದಿನಕ್ಕೂ ಬೆಳೆಯುತ್ತ ದಲಿತ ಸಂಘದ ನಾಯಕನಾಗುತ್ತಿರುವ ಕೋಟೆಯ ಬೆಟ್ಟಯ್ಯ ಎಂಬ ಚೈತನ್ಯದ ಸೆಲೆಯಂತಿರುವ ಹುಡುಗನಿಗೂ ಸಿಕ್ಕಾಗ ಗಾಂಧಿ ಚಿತ್ರ ನೋಡು ಎಂದು ಹೇಳಬೇಕೆಂದಿರುವೆ. ನನ್ನೆಲ್ಲ ದಲಿತ ಸಂಘದ ಗೆಳೆಯರಿಗೂ ನಾನು ಹೇಳುವುದು ಹೀಗೆಯೇ.

7
ಯಾಕೆಂದರೆ ನಮಗಿನ್ನೂ ಸ್ವಾತಂತ್ರ್ಯ ಎಂಬುದು ಬಂದಿಲ್ಲ. ನಮಗೆ ವಿಮೋಚನೆಯು ಆಗಬೇಕಾಗಿದೆ. ಗಾಂಧಿಯು ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದದ್ದು ಒಂದು ರೀತೀಲಿ ಸುಲಭದ್ದು. ಗಾಂಧಿಯೊಡನೆ ಸಮಸ್ತ ಜನರಿದ್ದರು ಮತ್ತು ಈ ನೆಲದವನಲ್ಲದವ ವೈರಿಯಾಗಿದ್ದನು. ಆದರೆ ನಮ್ಮ ಇರುವಿಕೆಯನ್ನು ಸಹಿಸದಿರುವ ಸವರ್ಣೀಯ ಜನಸ್ತೋಮವ ಗೆಲ್ಲುತ್ತ ಅದರ ಮನ ವಶಮಾಡಿಕೊಳ್ಳುತ್ತ ನಾವು ನಮ್ಮ ವಿಮೋಚನೆ ಕಡೆಗೆ ನಡೆಯಬೇಕಾಗಿದೆ. ನಮ್ಮೊಡನೆಯೂ ಒಂದಿಷ್ಟು ಸವರ್ಣೀಯರೂ ಬರಬಹುದು. ಇಂಥದ್ದರಲ್ಲಿ ಹೀಗಿರುವಾಗ ನಮ್ಮ ಬಿಡುಗಡೆಗೆ ಅನೇಕ ಸ್ವಾತಂತ್ರ್ಯ ಹೋರಾಟಗಳು ಜರುಗಬೇಕಾಗುತ್ತದೆ. ಇಂಥದ್ದರಲ್ಲಿ ಹೀಗಿರುವಾಗ ನಮ್ಮ ವಿಮೋಚನೆಗಾಗಿ ಸಾವಿರಾರು ರೀತಿಗಳನ್ನು ನಾವು ತಡಕಬೇಕಾಗಿದೆ. ಇಂಥದ್ದರಲ್ಲಿ ಹೀಗಿರುವಾಗ ಗಾಂಧಿಯೂ ನಮಗೆ ದಿಕ್ಕಾಗಬಹುದು.