ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ -19 // ಶ್ರಾವಣಿ ಚಿಕ್ಕಮಗಳೂರು//

[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “‘ಲಯವಿಡಿದು” ಬರಹದ ವಾಚನ ಶ್ರಾವಣಿ ಚಿಕ್ಕಮಗಳೂರು ಅವರಿಂದ.]

 


 

                                                               ಲಯವಿಡಿದು

ಒಂದು
ನಾನು ಅಮೆರಿಕಕ್ಕೆ ಬಂದಾಗ ಇಂಗ್ಲಿಷ್ ಉಚ್ಚಾರಣೆ ತುಂಬಾ ಕಷ್ಟವೆನಿಸಿ ಕಕ್ಕಾಬಿಕ್ಕಿ ಆಗುತ್ತಿತ್ತು. ನಾನೊಮ್ಮೆ ನಮ್ಮ ತಂಡದವರೇ ಆದ ಜಮೈಕಾದ ಕ್ರಿಸ್ಟಿನ್ ಅವರ ವಾಚನಕ್ಕೆ ಹೋದೆ. ಅವರು ಮಾತಾಡುತ್ತಿದ್ದ ರೀತಿ ನಾನು ಬೇರೊಂದು ದೇಶದಲ್ಲಿದ್ದೇನೆಂಬ ಭಾವನೆಯನ್ನೆ ತೊಡೆದುಹಾಕಿತು. ನನಗೆ ಟ್ರೇಸಿಚಾಪ್‍ಮನ್‍ಳ ಇಂಗ್ಲಿಷ್ ಗೀತೆ ‘ಫಾಸ್ಟ್ ಕಾರ್’ ನೆನಪಾಯ್ತು. ನನ್ನ ಮಗಳು ಈ ಹಾಡನ್ನು ಬಲವಂತವಾಗಿ ಕೇಳಿಸಿದ್ದಳು. ಅದು ನಮ್ಮ ಜಾನಪದ ಗೀತೆಗಳಿಗೆ ಹತ್ತಿರವಾಗಿತ್ತು. ಇದು ಮನಸ್ಸಿಗೆ ಬಂದಾಗ, ನಮಗೆ ಭಾರತೀಯರಿಗೆ ಇಂಗ್ಲಿಷಿನಲ್ಲಿ ನಮ್ಮದೇ ಆದ ಒಂದು ಲಯವಿಲ್ಲವೇನೊ ಎಂದು ಅನ್ನಿಸತೊಡಗಿತು. ನಂತರ ನನ್ನ ಕಾದಂಬರಿ ಇಂಗ್ಲಿಷ್ ಅನುವಾದದ ವಾಚನಕ್ಕಾಗಿ ಜಮೈಕಾದ ಲಯ ಪ್ರಯತ್ನಿಸಿದೆ. ಇದು ನನ್ನ ವಾಚನವನ್ನು ಸರಾಗ ಹಾಗೂ ಸಹಜಗೊಳಿಸಿತು.

ಭಾರತದ ನಮ್ಮ ಇಂಗ್ಲೀಷ್ ಕಲಿಕೆಯಲ್ಲಿ, ಅಮೆರಿಕ ಅಥವಾ ಬ್ರಿಟೀಷರ ನುಡಿಲಯವನ್ನು ಅನುಕರಿಸುತ್ತಾ ಇಂಗ್ಲಿಷ್ ಉಚ್ಚಾರಣೆಯ ತೊಡಕಿನಲ್ಲಿ ಸಿಕ್ಕಿ ಬಿದ್ದಿದ್ದೇವೆ ಎಂದು ಅನ್ನಿಸಿತು. ಹಾಗಾಗಿ ಭಾಷೆಯ ಸಂವಹನದಲ್ಲಿನ ಅಂಗಾಂಗ ಚಲನೆ, ಧ್ವನಿ, ಶೈಲಿ ಹಾಗೂ ಏರಿಳಿತಗಳನ್ನು ಕಳೆದುಕೊಂಡುಬಿಡುತ್ತೇವೆ. ನಾವು ಪ್ರಜ್ಞಾಪೂರ್ವಕವಾಗಿ ಪದಗಳನ್ನು ಒಪ್ಪಿಸುತ್ತಿರುತ್ತೇವೆ. ಇದರೊಡನೆ, ನಾವು ಇಂಗ್ಲಿಷ್ ಮಾತನಾಡುತ್ತಿರುವಾಗಲೆಲ್ಲಾ ಆ ವ್ಯಾಕರಣ ನಮ್ಮ ಮನಸ್ಸನ್ನು ತುಂಬಿ ಕೊಂಡಿರುತ್ತದೆ. ವ್ಯಾಕರಣವನ್ನು ಮರೆತು ಲಯ ಹಿಡಿದು ಇಂಗ್ಲಿಷಿನೊಡನೆ ನಾವು ಒಡನಾಡಬೇಕಾಗಿದೆಯೇನೊ.

ಎರಡು
ನನ್ನ ಮೊಮ್ಮಗ ಅರವಿಂದ್ ಲಕ್ನೋದಿಂದ ಬಂದಾಗ ಅವನು ಹಿಂದಿಯನ್ನು ಉಸಿರಾಡಿದಷ್ಟು ಸರಾಗ ಮಾತಾಡುತ್ತ, ನನಗೋ ಇವನು ಇಷ್ಟು ಬೇಗ ಹೇಗೆ ಕಲಿತ ಎಂದು ಸೋಜಿಗವಾಗಿತ್ತು. ನಾನು ಏನಾರು ಕೇಳಿದರೆ ‘ತೂ ಪಾಗಲ್ ಹೋಗಯಾ ಕ್ಯಾ’ ಅನ್ನುತ್ತಿದ್ದ. ನಾನು ಯಾವುದಕ್ಕೂ ಇರಲಿ, ಮುಂದೆ ಇವನೊಡನೆ ಮಾತಾಡ್ತ ಹಿಂದಿ ಕಲಿಯಬಹುದು ಅಂತ ‘30 ದಿನಗಳಲ್ಲಿ ಹಿಂದಿ ಕಲಿಯಿರಿ’ ತಂದು ಓದತೊಡಗಿದೆ. ಇದನ್ನು ಕಂಡು ಅರವಿಂದ್ ತನ್ನ ಕೆನ್ನೆಗುಳಿ, ಕಣ್ಣುಗಳಲ್ಲಿ ನಗು ತಂದುಕೊಂಡು ‘ಏನ್ ಮಾಡ್ತಾ ಇದ್ದೀಯ’ ಅಂದ. ‘ಹಿಂದಿ ಕಲೀತಾ ಇದ್ದೀನಿ’ ಅಂದೆ. ‘ಈ ರೀತಿ ಎಲ್ಲಾ ಕಲಿಯೋಕೆ ಆಗಲ್ಲ’ ಅಂದ. ‘ನೀನು ಹೇಗೆ ಕಲಿತೆ?’ ಅಂದೆ. ‘ಲಕ್ನೋದಲ್ಲಿ ನನ್ನ ಗೆಳೆಯರು ಮಾತಾಡುವುದನ್ನ ಸುಮ್ಮನೆ ಕೇಳಿಸಿಕೊಳ್ತಾ ಇದ್ದೆ. ಹೀಗೆ ಕೇಳಿಸಿಕೊಳ್ತಾ ಸುಮಾರು ದಿನ ಆದ ಮೇಲೆ ಒಂದು ದಿನ ನನಗೇ ಬಂತು’ ಅಂದ. ಅವನು ಕೇಳಿಸಿಕೊಳ್ಳುತ್ತಿದ್ದುದು ಆ ಭಾಷೆಯ ಏರಿಳಿತ ಲಯ ಆಲಿಸುತ್ತ ಅದರೊಳಗಿನ ಪದ, ಅದಕ್ಕಂಟಿರುವ ಅರ್ಥ ತಂತಾನೆ ಆಯ್ತೆ?

ಮೂರು
ಪತ್ರಿಕೆಗಳಲ್ಲಿ ಒಂದು ವರದಿ ಬಂದಿತ್ತು. ತಾಯಿಯ ಗರ್ಭದೊಳಗಿರುವ ಶಿಶು ತನ್ನ ತಾಯಿ ಮಾತಿನ ಭಾವಕ್ಕೆ ಸ್ಪಂದಿಸುತ್ತದಂತೆ. ಈ ಸ್ಪಂದನ ತಾಯಿ ಮಾತಿನ ಏರಿಳಿತ ಲಯಕ್ಕೆ ತಕ್ಕಂತೆ ಇರುತ್ತದಂತೆ.

ನಾಲ್ಕು
ಆಗತಾನೇ ಹುಟ್ಟುವ ಕಾವ್ಯದೊಳಗೂ ಜೀವಾಡುವ ರೀತಿ ಹೀಗೇ ಇರಬಹುದೆ?