ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ -18 //ವರಹಳ್ಳಿ ಆನಂದ//

[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “‘ಮುಸ್ಲಿಮರೊಡನೆ ಪಿಸುಮಾತು” ಬರಹದ ವಾಚನ ವರಹಳ್ಳಿ ಆನಂದ ಅವರಿಂದ.]

 

 

                                    ಮುಸ್ಲಿಮರೊಡನೆ ಪಿಸುಮಾತು
         
‘ಲೋ ಹೊಲೆಮಾದಿಗ…’
‘ಏ ಸಾಬೀ…’
ಇಂಥಾ ಮಾತುಗಳು ಇಂದಿನ ವಸ್ತುಸ್ಥಿತಿಯೊಳಗೆ ರಕ್ತದಂತೊ ಅಥವಾ ಚರ್ಮದಂತೊ ಇವೆ. ‘ಲೋ ಹೊಲೆ ಮಾದಿಗಾ’ ಅಂದಾಗ ಹೊಲೆಮಾದಿಗನು ಅವಮಾನಿತನಾಗಿ ಕುಗ್ಗುವನು. ‘ಏ ಸಾಬಿ’ ಎಂದಾಗ ಮುಸ್ಲಿಮನು ಅನುಮಾನಿತನಾಗಿ ಕುಗ್ಗುವನು. ಇಂಥಾ ಮಾತುಗಳು ಅವರ ಮನಸ್ಸಿನ ತಳದ ಕೊನೆಯ ಪದರದವರೆಗೂ ಮುಟ್ಟಿ ಗಾಯಮಾಡಿ ನಿದ್ದೆಯಲ್ಲೂ ನರಳಾಡಿಸುವುದು. ಹೀಗಾಗಿ ಆ ಈ ಜನಾಂಗಗಳೆರಡೂ ಇಂದಿನ ವ್ಯವಸ್ಥೆಯ ಜೀವನ ರೀತಿಯಲ್ಲಿ ಮೈಮನಸ್ಸು ಮುದುರಿಕೊಂಡು ಪಾಲ್ಗೊಳ್ಳುತ್ತಿರುವುವು. ಇವರು ಗರಿಗೆದರಿ ಸಂಪೂರ್ಣ ಮನಸ್ಸಿನಿಂದ ಹಾರಾಟ ನಡೆಸಿದ್ದಿಲ್ಲ. ದಲಿತರನ್ನು ಅವಮಾನಿತರನ್ನಾಗಿಸಿಯೂ ಮುಸ್ಲಿಮರನ್ನು ಅನುಮಾನಿತರನ್ನಾಗಿಸಿಯೂ ಇಟ್ಟು ಇಂದಿನ ವ್ಯವಸ್ಥೆ ಅವರನ್ನು ತನ್ನೊಳಗೆ ಸೇರಿಸಿಕೊಳ್ಳದೆ ಒಂದು ಗೊತ್ತಾದ ದೂರದಲ್ಲಿ ಆಚೆ ಇಟ್ಟು ನಡೆಯುವುದು ಅದರ ಲಕ್ಷಣವಾಗಿದೆ.

ಹಾಗಾದರೆ ಏನರ್ಥ? ದೊಡ್ಡ ದೊಡ್ಡ ನಾಯಕರು ಇಂದಿನ ವ್ಯವಸ್ಥೆಯಲ್ಲೂ ಆ ಈ ಜನಾಂಗಗಳಲ್ಲು ಇರುವರಲ್ಲ? ಹಾಗಾದರೆ ಏನರ್ಥ? ಸ್ವಲ್ಪವೇ ಕಣ್ಣು ತೆರೆದು ನೋಡಿ- ಈ ಎರಡೂ ಜನಾಂಗಗಳ ಪ್ರತಿನಿಧಿಗಳು ಎಂಥೆಂಥಾ ಸ್ಥಾನಗಳಲ್ಲಿ ಇರುವರು? ಹಲ್ಲು ಇಲ್ಲದ ಆದರೆ ಹೆಸರಿಗೆ ದೊಡ್ಡದಾಗಿರುವ ಸ್ಥಾನಗಳಲ್ಲಿ ಇದ್ದಿರುವರು. ತಮ್ಮ ಹಲ್ಲನ್ನು ಕಳಚಿಟ್ಟು ತದನಂತರ ದೊಡ್ಡ ಸ್ಥಾನದಲ್ಲಿ ಪವಡಿಸುವರು. ಅವರು ಮರೆತು ಹಲ್ಲಾಡಿಸಿದರೂ ಆ ದೊಡ್ಡ ಸ್ಥಾನವನ್ನು ಕಳೆದುಕೊಳ್ಳುವರು!

ಇಂದಿನ ವ್ಯವಸ್ಥೆಯು ಆ ಈ ಜನಾಂಗಗಳ ನಾಯಕರ ದೇಹಕ್ಕೆ ಪಂಪು ಹೊಡೆದು ಊದಿಸಿ ಇದನ್ನು ಆಯಾಯ ಜನಾಂಗಗಳಿಗೆ ತೋರಿಸಲು ಇಟ್ಟುಕೊಂಡಂತಹ ಸರಕುಗಳಾಗಿವೆ. ಹೀಗೆ ಇಂದಿನ ವ್ಯವಸ್ಥೆ ಎರಡೂ ಜನಾಂಗಗಳ ಆಯ್ದ ವ್ಯಕ್ತಿಗಳನ್ನು ಉಬ್ಬಿಸಿ ತನ್ನ ಕೈಯಲ್ಲಿ ಇಟ್ಟುಕೊಂಡು ಆಡಿಸುತ್ತಾ ಬಂದಿರುವುದು. ಇದರಿಂದಾಗಿ ಈ ಎರಡೂ ಜನಾಂಗಗಳ ಮಹಾಜನತೆ ಇದ್ದಲ್ಲೇ ಇದ್ದು ನಿದ್ದೆಯಲ್ಲಿದೆ.

ದಲಿತರಂತೇ ಮುಸ್ಲಿಮರೂ ನಿದ್ದೆ ಮಾಡುತ್ತಿರುವ ಜನಾಂಗ ಎಂಬ ಕಾರಣಕ್ಕೊ, ದಲಿತರಂತೆ ಮುಸ್ಲೀಮರೂ ಮಾನಸಿಕ ನರಳಾಟಕ್ಕೆ ತುತ್ತಾದವರು ಎಂಬ ಕಾರಣಕ್ಕೊ, ದಲಿತರೂ ಮುಸ್ಲೀಮರೂ ಉಪನಿಷತ್ ಕಾಲದ ಋಷಿ ಮುನಿಗಳ ಆಹಾರ ಸ್ವೀಕರಿಸುವ ಕಾರಣಕ್ಕಾಗೊ, ದಲಿತರಂತೆಯೇ ಮುಸ್ಲಿಮರು ದೇಶವ್ಯಾಪ್ತಿ ಜನತೆ ಎಂಬ ಕಾರಣಕ್ಕೊ, ದಲಿತರೊಡನೆ ಇನ್ಯಾರೊ ಕುಸ್ತಿ ಮಾಡದಿದ್ದಾಗ ಮುಸ್ಲಿಮರಾದರೂ ತಮ್ಮೊಡನೆ ಕುಸ್ತಿ ಮಾಡುವರೆಂಬ ಕಾರಣಕ್ಕೊ, ದಲಿತರಂತೆಯೇ ಮುಸ್ಲೀಮರಿಗೂ ಮಕ್ಕಳು ಜಾಸ್ತಿ ಎಂಬ ಕಾರಣಕ್ಕಾಗೋ,
ಕಾರ್ಖಾನೆ ಉತ್ಪಾದಿಸುವ ಕೊಳಚೆ ಪ್ರದೇಶಗಳಿಗೆ ಬಂದರೆ ಈ ಕಡುಬಡತನದ ದವಡೆಗೆ ಎಸೆಯಲ್ಪಟ್ಟವರು ದಲಿತರಂತೆಯೇ ಮುಸ್ಲಿಮರೂ ಹೆಚ್ಚು ಎಂಬ ಕಾರಣಕ್ಕಾಗಿಯೊ, ಎಚ್ಚೆತ್ತ ದಲಿತರು ಹಿಂದೂ ಧರ್ಮವನ್ನು ದ್ವೇಷಿಸುವುದರಿಂದ ಶತ್ರುವಿನ ಶತ್ರು ಮಿತ್ರ ಎಂಬ ಕಾರಣಕ್ಕಾಗಿಯೊ, ದಲಿತರನ್ನು ಕುಗ್ಗಿಸುವ ಅಸ್ಪೃಶ್ಯತಾ ಆಚರಣೆ ಮುಸ್ಲಿಮರಲ್ಲಿ ಅಷ್ಟಾಗಿ ಇಲ್ಲ, ಇದ್ದರೂ ಹಿಂದೂಗಳಲ್ಲಿದ್ದಂತೆ ರಕ್ತಗತವಾದುದ್ದಲ್ಲ, ಹಿಂದೂ ಸಮಾಜದಲ್ಲಿ ಪ್ರತಿಷ್ಠೆ ಉಳಿಸಿಕೊಳ್ಳಲೊ ಆರ್ಥಿಕ ಅನುಕೂಲಕ್ಕಾಗಿಯೊ ಇರುವಂಥದ್ದು ಎಂಬ ಕಾರಣಕ್ಕಾಗೋ ದಲಿತ ಜನತೆ ಮುಸ್ಲಿಮರೊಡನೆ ಹೆಚ್ಚೆಚ್ಚು ಹೊಂದಿಕೊಳ್ಳಬಹುದಾದ ಸಮುದಾಯವಾಗಿದೆ.

ಆದ್ದರಿಂದ, ಬಹುತೇಕ ಗರೀಬರನ್ನು ಒಳಗೊಂಡ ಈ ಸಮುದಾಯಗಳ ಎಚ್ಚೆತ್ತವರು ಹಾಗೂ ಜಾತಿರಹಿತ ಸಮಾಜಕ್ಕಾಗಿ ಹೋರಾಡುವವರು ಜೊತೆಗೂಡಿ ಯತ್ನಿಸುವುದರ ಮೇಲೂ ಜಾತಿರಹಿತ, ವರ್ಗರಹಿತ ಸಮಾಜದ ದೂರ ನಿಂತಿದೆ.