ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ-6 // ಗಿರಿಜಾ ದಿನಕರ್//

(ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “ಗಂಡಭೇರುಂಡ ಪಕ್ಷಿ ಕಥೆ” ಬರಹದ ವಾಚನ ಗಿರಿಜಾ ದಿನಕರ್ ಅವರಿಂದ)
                                                      “ಗಂಡಭೇರುಂಡ ಪಕ್ಷಿ ಕಥೆ”
ಎಲ್ಲೋ ಎಂದೋ ಓದಿದ ಗಂಡಭೇರುಂಡ ಪಕ್ಷಿಯ ಕಥೆಯು ನನ್ನ ತಲೆಯಲ್ಲಿ ಆಗಾಗ ಹಾರಾಡುತ್ತಿರುತ್ತದೆ. ಆ ಗಂಡಭೇರುಂಡ ಪಕ್ಷಿ ಹಾರುತ್ತ ವಿಹರಿಸಿಕೊಂಡು ಬಂದು ಒಂದು ನದೀ ದಡದಲ್ಲಿ ಕೂತು, ಅದರ ಒಂದು ತಲೆ ಒಂದು ಕಡೆ, ಇನ್ನೊಂದು ತಲೆ ಇನ್ನೊಂದು ಕಡೆ ನೋಡುತ್ತ ಆನಂದಿಸುತಿಹುದು. ಅಷ್ಟರಲ್ಲಿ ಆ ಹರಿಯೋ ನದೀಲಿ ತೇಲುತ್ತ ಒಂದು ಫಲವು ಆ ಪಕ್ಷಿ ನೋಡಿತೋ ಎಂಬಂತೆ ದಡಕ್ಕೆ ಬಂದು ನಿಂತಿತು. ಇದ ಕಂಡ ಆ ಪಕ್ಷಿಯ ಒಂದು ತಲೆಯು ಇನ್ನೇನು ಆ ಫಲವನ್ನು ಕುಕ್ಕಿ ತಿನ್ನಬೇಕು ಅನ್ನುವಷ್ಟರಲ್ಲಿ, ಆ ಪಕ್ಷಿಯ ಇನ್ನೊಂದು ತಲೆಯು ‘ನಿಲ್ಲಿಸು ತಿನ್ನಬೇಡ’ ಎಂದಿತು. ತೊಗಟೆಗೆ ಕೊಕ್ಕು ಸಿಕ್ಕಿಸಿದ್ದ ಈ ತಲೆಯು, ಸುರಿಯುವ ಜೊಲ್ಲು ಉಗತು ‘ಯಾಕೆ ತಿನ್ನಬಾರದು?’ ಎಂದು ಕಿಡಿ ಕಿಡಿಯಾಗಿ ಕೇಳಿತು. ಇನ್ನೊಂದು ತಲೆಯು ಇನ್ನಷ್ಟು ಕಿಡಿಯಾಗಿ
‘ಯಾಕೆ ಅಂದರೆ? ನಾನೂ ತಿನ್ನಬಾರದೆ?’
‘ಮೊದಲು ನೋಡಿದ್ದು ನಾನಲ್ಲವೆ?’
‘ನಮ್ಮ ದೇಹ ಒಂದೇ ಅಲ್ಲವೆ?’
‘ದೇಹ ಒಂದೇ ಆದರೂ ತಿನ್ನುವ ಬಾಯಿ ಬೇರೆ ಬೇರೆ ಅಲ್ಲವೆ?’
-ಹೀಗೆ ವಾಗ್ವಾದ ನಡೆದು ಮೊದಲು ಹಣ್ಣು ಕಂಡ ಆ ತಲೆಯೇ ಪೂರ್ತ ಹಣ್ಣು ತಿಂದಿತು. ಅದು ತಿನ್ನುವುದನ್ನು ನೋಡಲಾಗದೆ ಕಣ್ಣು ಮುಚ್ಚಿಕೊಂಡಿದ್ದ ಈ ತಲೆಯು ಕಣ್ಣು ತೆರೆದರೆ ಕಂಡದ್ದೇನು? ಇನ್ನೊಂದು ಫಲವು ನದೀಲಿ ತೇಲಿಕೊಂಡು ಬರುತಲಿದೆ. ಮೊದಲು ಹಣ್ಣು ತಿಂದಿದ್ದ ಆ ತಲೆಯು ‘ಅದನ್ನು ತಿನ್ನಬೇಡ ವಿಷಫಲ’ ಎಂದಿತು. ಇದರಿಂದ ಈ ತಲೆಗೆ ಸಂತೋಷವೇ ಆಗಿ ‘ನನ್ನ ಬಾಯಿ ನನ್ನ ತಲೆ, ನಾನು ತಿಂತೇನೆ ನಿಂಗೇನು?’ ಎಂದಾಗ, ಆ ತಲೆಯು ‘ನೀನೇ ತಿಂದರೂ ನಮ್ಮ ದೇಹ ಒಂದೇ ಅಲ್ಲವೇ?’ ಅಂದುದಕ್ಕೆ ಈ ತಲೆಯು ‘ದೇಹ ಒಂದಾದರೂ ತಿನ್ನುವ ಬಾಯಿ ಬೇರೆ ಬೇರೆ ಅಲ್ಲವೆ?’ ಎಂದು ಹಣ್ಣನ್ನು ತಿಂದೇ ತಿಂದಿತು.
ಹೀಗೆ ತಿಂದಾದ ಮೇಲೆ ಇಡೀ ದೇಹಕ್ಕೆ ಬೆಂಕಿ ಕೆಂಡವ ಸುರಿದಂತಾಗಿ ಆ ಉರಿಗೆ ದೇಹ ವಿಲಿ ವಿಲಿ ಒದ್ದಾಡಿ ಮತ್ತು ಕೊನೆಯದಾಗಿ ಆ ಪಕ್ಷಿಯು ಸತ್ತಿತು.
ಪ್ರೀತಿಯ ಸ್ನೇಹಿತರೇ ಕೇಳಿ, ಅಸ್ಪೃಶ್ಯತೆಗೆ ದೇಹ ಒಂದೇ ಆದರೂ ತಲೆ ನೂರೆಂಟು. ಎಡಗೈ, ಬಲಗೈ, ಈ ಎಡಗೈ ಹೆಬ್ಬೆರಳು, ಕಿರುಬೆರಳು, ಬಲ ಹೆಬ್ಬೆರಳು, ಕಿರುಬೆರಳು ಹೀಗೆ ನೂರೆಂಟು. ಸ್ವಾರ್ಥ ದಲಿತ ರಾಜಕಾರಣಿಗಳು ಹೊಣೆಗೇಡಿ ದಲಿತ ನೌಕರರು ತಮ್ಮ ಅಹಂ, ಅಧಿಕಾರಕ್ಕಾಗಿ ಇರುವ ಭಿನ್ನತೆಯನ್ನು ಹೆಚ್ಚಿಸುತ್ತಿರುವರು. ಆದರೆ ನೆನಪಿರಲಿ, ಗಂಡಭೇರುಂಡ ಪಕ್ಷಿಯಂತೆ ಸಾಯುವವರು ಒಟ್ಟಿಗೆ ದೇಹವಾದ ನಾವು. ಕಾಲಾವಕಾಶವಿರುವಾಗಲೇ ಊರಾಚೆ ಬಿದ್ದಿರುವ, ಊರಾಚೆಗೆ ಎಸೆಯಲ್ಪಡುತ್ತಿರುವ ಸಣ್ಣ ಪುಟ್ಟ ಜಾತಿಗಳೊಳಗಿನ ಭಿನ್ನತೆಯನ್ನು ಮೊದಲು ಕಿತ್ತೆಸೆದರೆ ಮಾತ್ರ ನಮ್ಮ ಉಳಿವು.
ಈಗ ಗಂಡಭೇರುಂಡ ಕತೆಯು ನಿಮ್ಮ ತಲೆಯೊಳಗೆ ಹಾರಾಡಲಿ.