* ದೇಮಾನೊಂದಿಗೆ ದೆಹಲಿಗೆ!- ಪ್ರೊ.ಕೆ. ಸುಮಿತ್ರಾಬಾಯಿ

 

[ಪ್ರೊ.ಕೆ.ಸುಮಿತ್ರಾಬಾಯಿಯವರ ಬಾಳ ಕಥನ ” ಸೂಲಾಡಿ ಬಂದೋ ತಿರುತಿರುಗೀ” ಕೃತಿಯು, ಮೈಸೂರಿನ ಅಭಿರುಚಿ ಪ್ರಕಾಶನದಿಂದ 2018ರಲ್ಲಿ ಮುದ್ರಣಗೊಂಡಿದ್ದು, ಅದರ ಕೆಲ ಭಾಗ the state.news ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಅದು… ನಮ್ಮಬನವಾಸಿಯ ಓದುಗರಿಗಾಗಿ…]

ಇಸವಿ 1974ರಲ್ಲಿ ಮೈಸೂರಿನ CIIL ಉದ್ಯೋಗಕ್ಕಾಗಿ ದೆಹಲಿಯ ಯುಪಿಎಸ್‍ಸಿ ಸಂದರ್ಶನಕ್ಕೆ ದೇಮಾ ಹೋಗಬೇಕಾಗಿ ಬಂದಾಗ ದೆಹಲಿಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದೆಂದು ಖುಷಿಯಿಂದ ನಾನೂ ಜೊತೆಯಾಗಿ ಹೊರಟೆ. ಎರಡು ಹಗಲು ಎರಡು ರಾತ್ರಿಗಳ ಕಾಲ ರೈಲು ಪ್ರ್ರಯಾಣ. ದೆಹಲಿ ತಲುಪಿದ ದಿನವೇ ಸಂದರ್ಶನವೇನೊ ಮುಗಿಯಿತು. ಆದರೆ ದೇಮಾ ಕೇಳಿದ ಸರಳ ಪ್ರಶ್ನೆಗೆ ಉತ್ತರಿಸಲಿಲ್ಲ ಎಂದನು. ವರ್ಣಮಾಲೆಯ ಸ್ವರ, ವ್ಯಂಜನಗಳು ಕನ್ನಡದಲ್ಲಿ ಎಷ್ಟು ಎಂದು ಇಂಗ್ಲಿಷ್‍ನಲ್ಲಿ (ಪ್ರೈಮರಿ ಮಕ್ಕಳಿಗೆ ಕೇಳುವ ಹಾಗೆ ) ಕೇಳಿದರಂತೆ! ಈ ಪ್ರಶ್ನೆಯನ್ನು ಈಗ ಕೇಳಿದರೂ ಇವನು ಉತ್ತರಿಸಲಾರ! ಈ ಸಂದರ್ಶನದಲ್ಲಿ ದೇಮಾ ನಾ-ಪಾಸ್ ಆದನು. ಮತ್ತೇನು ಆಗಬೇಕಿತ್ತು? ನಾನಿದ್ದರೂ ಪಾಸು ಮಾಡುತ್ತಿರಲಿಲ್ಲ. ದೇಮಾ ಗೊತ್ತಲ್ಲ, ಇದನ್ನು ಅವಮಾನ ಎಂದುಕೊಳ್ಳದೆ ಸಂದರ್ಶನದ ವಿವರಗಳನ್ನು ಕೇಳಿದವರಿಗೆಲ್ಲ ಹೇಳುತ್ತಿದ್ದನು. ಇದನ್ನು ಕೇಳಿದ ಸ್ಕಾಲರ್ ಒಬ್ಬರು (ವಿಸಿಯಾಗಿ ಈಗ ನಿವೃತ್ತರು) ಲಂಕೇಶ್‍ರ ಬಳಿ, ಮಹದೇವ್‍ಗೆ ಕನ್ನಡದ ಸ್ವರ ವ್ಯಂಜನಗಳೇ ಗೊತ್ತಿಲ್ಲ ಅಂದರಂತೆ. ಅದಕ್ಕೆ ಲಂಕೇಶ್- ಅವ್ನ ರೀತಿ ಒಂದು ವಾಕ್ಯ ನಿನಗೆ ಬರೆಯಾಕಾಗಲ್ಲ… ನಿಮಗೆಲ್ಲ ಗೊತ್ತಿರೋದು ಸ್ವರ ವ್ಯಂಜನಗಳು ಅಷ್ಟೇ ಎಂದು ಸಿಡುಕಿದರಂತೆ. ಮುಂದೆ ಪಾಸಾದ ಅನ್ನಿ.

ಮತ್ತಿನ್ನೇನು? ಮೊದಲು, ಹಳೆ ದೆಹಲಿಯಲ್ಲಿರುವ ಕುತುಬ್ ಮೀನಾರ್ ಗೋಪುರ ನೋಡಲು ಹೋದೆವು. ಈಗ ಇರುವ ಮೀನಾರ್ಗಿಂತಲೂ ಬೃಹತ್ ಆಗಿರುವ ಗೋಪುರ ಕಟ್ಟಲು ಆಯ ಹಾಕಿ 5-6ಸಾಲು ಕಲ್ಲುಗಳ ವೃತ್ತವಿದ್ದು ಅದನ್ನು ಕಟ್ಟುವ ಕಾರ್ಯ ಅಲ್ಲಿಗೇ ನಿಂತುಹೋಗಿರುವುದನ್ನು ಗಮನಿಸಿದೆ. ಮೀನಾರ್ ತುಂಬ ಮೋಹಕ ಗೋಪುರ. ಇದರ ಹೊರಮೈ ಮೇಲೆ ಗಾರೆಯಿಂದ ಸುಂದರವಾದ ಅರೇಬಿಕ್ ಅಕ್ಷರಗಳನ್ನು ಕೆತ್ತಿರುವುದು ಗಮನ ಸೆಳೆಯಿತು. ಹಿಂದೂ ಶೈಲಿಯಲ್ಲಿರುವ ಕೆಲವು ಚಿತ್ರಗಳನ್ನೂ ಗುರುತಿಸಿದೆ. ಹಿಂದೂ ಇಸ್ಲಾಮಿಕ್ ಸಂಯೋಗದಂತೆ ಇಡೀ ಗೋಪುರ ಕಾಣಿಸಿತು. ಸರತಿಯ ಸಾಲಿನಲ್ಲಿ ಸ್ವಲ್ಪಹೊತ್ತು ನಿಂತು ಆ ಗೋಪುರದ ಒಳಗಡೆ ಹೋದೆವು. ಆ ಗೋಪುರದೊಳಗೆ ಹಾವಿನ ರೀತಿ ನುಲಿದುಕೊಂಡ ಮೆಟ್ಟಿಲುಗಳನ್ನು ಹತ್ತಿ ಗೋಪುರದ ತುದಿ ತಲುಪಿದೆವು. ಅಷ್ಟೆತ್ತರದಲ್ಲಿ ನಿಂತು ಇಡೀ ದೆಹಲಿಯನ್ನು ನೋಡುವುದು ಮೈ ಮರೆಸಿತು. ದೇಮಾನ ಕೈ ಹಿಡಿದುಕೊಂಡು ನಿಧಾನವಾಗಿ ಚಿಕ್ಕ ಕಟಕಟೆಯ ಹಾದಿಯಲ್ಲಿ ನಡೆದಾಡಿದ್ದು ಒಂದು ಸುಂದರ ನೆನಪಾಗಿ ನನ್ನೊಳಗೆ ಉಳಿದಿದೆ. ಯುವತಿಯರ ಗುಂಪೊಂದು ಗೋಪುರದ ತುದಿಗೆ ಹೋಗುವ ಮೆಟ್ಟಿಲುಗಳನ್ನು ಹತ್ತುತ್ತಿರುವಾಗ ಯುವಕರ ಗುಂಪೊಂದು ಆ ಯುವತಿಯರ ಮೇಲೆ ಬಿದ್ದು ಏನೇನೋ ಅವಾಂತರಗಳಾದುವಂತೆ. ಆವಾಗಲಿಂದ ಗೋಪುರದ ತುದಿಗೆ ಹೋಗುವುದಕ್ಕೆ ನಿಷೇಧಿಸಲಾಗಿದೆಯಂತೆ.

ಆನಂತರ ತಾಜ್‍ಮಹಲ್ ನೋಡಲು ಆಗ್ರಾಕ್ಕೆ ರೈಲಿನಲ್ಲಿ ಪ್ರಯಾಣಿಸಿದೆವು. ಅಂದು ಹುಣ್ಣಿಮೆಯ ಬೆಳದಿಂಗಳಿತ್ತು. ರೈಲು ನಿಲ್ದಾಣದಿಂದ ಐತಿಹಾಸಿಕ ತಾಜ್‍ಮಹಲ್ ನೋಡಲು ಸೈಕಲ್ ರಿಕ್ಷಾ ಬಿಟ್ಟರೆ ಬೇರೆ ಯಾವುದೇ ಅನುಕೂಲಗಳಿರಲಿಲ್ಲ. ಟ್ಯಾಕ್ಸಿ ನಮಗೆ ದುಬಾರಿ ಆಗುತ್ತಿತ್ತು. ಒಬ್ಬ ಸೈಕಲ್ ರಿಕ್ಷಾವಾಲ ಗಂಟು ಬಿದ್ದನು. ಒಬ್ಬ ಮನುಷ್ಯ ತುಳಿಯುವ ಸೈಕಲ್ ರಿಕ್ಷಾದಲ್ಲಿ ಪ್ರಯಾಣ ಮಾಡುವುದು ದೇಮಾಗೆ ಇಷ್ಟವಿರಲಿಲ್ಲ. ನಮಗೆ ಸೈಕಲ್‍ರಿಕ್ಷಾ ಬೇಡ, ನಾವು ಬೇರೆ ವ್ಯವಸ್ಥೆಗೆ ಹೋಗೋಣ ಎಂದನು. ಆ ರಿಕ್ಷಾವಾಲ ನಮಗೆ ದಂಬಾಲು ಬಿದ್ದು, ತಾನು ಜೋಪಾನವಾಗಿ ಕರೆದುಕೊಂಡು ಹೋಗ್ತೇನೆ… ಬಹಳ ಬೇಗ ನಿಮ್ಮನ್ನು ತಾಜ್‍ಮಹಲ್ ತಲುಪಿಸುತ್ತೇನೆ ಎಂದನು. ಆಗ ದೇಮ ಸ್ಕೂಲ್‍ನಲ್ಲಿದ್ದಾಗ ಹಿಂದಿ ಮಾಧ್ಯಮ ಪಾಸು ಮಾಡಿದ್ದ ಆತ್ಮವಿಶ್ವಾಸದಲ್ಲಿ ಹಿಂದಿಯಲ್ಲೆ- ಹಂ ಬಿ… ಆದ್ಮೀ… ತುಂಬೀ ಆದ್ಮೀ… ಎಂದು ಹೇಳುವಷ್ಟರಲ್ಲಿ ಅವನ ಹಿಂದಿ ಕೈ ಕೊಡ್ತು. ನೀ ಹೇಳು ಮಿತ್ರೀ ಎಂದನು. ನಾನು ಕೂಡ ಅವನು ಹೇಳಿದ ಪದಗಳನ್ನೇ ಹೇಳಿ ಉರ್ದು ಮಿಶ್ರಿತ ಹಿಂದಿಯಲ್ಲಿ- ಕೈ ಸೆ ಹೋಗಾ ಸಾಬ್…. ತಾಜ್ ಬಹೊತ್ ದೂರ್…. ಹೈನಾ… ತುಮ್ ಕೊ ಬಹುತ್ strain ಹೊತಾ ಅಂದೆ. ಈ ಕೋತ್‍ಗಳು ಏನ್ ಹೇಳ್ತಿದ್ದಾವೋ ಕಾಣ್ಣಲ್ಲಪ್ಪ ಎಂಬ ಧೋರಣೆಯಿಂದ ಆತ- ಆವೋ ಸಾಬ್ ಹಮ್ ಜಲ್ದಿ ಜಲ್ದಿ ಚಲೇಂಗೇ ಎಂದನು. ಮತ್ತೆ ದೇಮಾ ಹೇಳಿದ- ಹಮ್ ಬಿ….. ಆದ್ಮಿ….. ತುಂಬಿ ಆದ್ಮೀ….. ಏ ಸೈಕಲ್ ನಹೀ ಚಾಹಿಯೇ….. ಗೋಡಾಕ ಗಾಡೀ ಚಾಹಿಯೇ, ಆದ್ಮೀಕ ನಹೀ ಎಂದು ರೇಗುವ ದನಿಯಲ್ಲಿ ಹೇಳಿದ. ಯಾಕೊ ಮಾತು ಫಜೀತಿ ಕಡೆಗೆ ವಾಲುವುದನ್ನು ಕಂಡು, ಓಕೆ ಎಂದಂದು ದೇಮಾನ ಕಡೆ ದುರುದುರನೆ ನೋಡಿದೆ. ಅಲ್ಲಿಗೆ ಮೂರೂ ಜನರ ಭಾಷಾ ಪರದಾಟಕ್ಕೆ ತೆರೆಬಿತ್ತು.

ಬಿಳಿಯ ಅಮೃತ ಶಿಲೆಯ ತಾಜ್‍ಮಹಲ್ ನಿಜಕ್ಕೂ ಅತ್ಯದ್ಭುತ. ಅದನ್ನು ಕಣ್ಣೊಳಕ್ಕೆ ಸೆಳೆದುಕೊಳ್ಳುವುದಷ್ಟೇ ನನ್ನ ಕಾಯಕವಾಯಿತು. ಇಡೀ ಮಹಲ್ ಕಲ್ಲರಳಿ ಹೂವಾಗಿಸಿದಂತಿದೆ. ಕಣ್ಣು ಗುಡ್ಡೆಗಳು ನೋಯುವಷ್ಟು ನೋಡಿದರೂ ನೋಡುವುದನ್ನು ನಿಲ್ಲಿಸಲಿಲ್ಲ. ಆನಂತರ ನೆಲಮಾಳಿಗೆಯಲ್ಲಿರುವ ಮಮ್ತಾಜಳ ಸಮಾಧಿಯನ್ನು ನೋಡಿದೆವು. ಸಮಾಧಿ ಕೂಡ ಅಷ್ಟೇ ಕಲಾತ್ಮಕ. ಇಬ್ಬರೂ ಒಂದೆರಡು ಫೋಟೋಗಳನ್ನು ತೆಗೆಸಿಕೊಂಡೆವು. ಆ ಫೋಟೊದಲ್ಲಿ ನಾನು ಮುನಿಸಿಕೊಂಡವಳಂತೆ ಕೂತಿರುವುದಾಗಿ ದೇಮಾ ಈಗಲೂ ರೇಗಿಸುತ್ತಿರುತ್ತಾನೆ. ಆನಂತರ ಮತ್ತೆ ಆಗ್ರಾದಿಂದ ಡೆಲ್ಲಿಗೆ ವಾಪಸ್ ಬಂದೆವು. ಆದರೆ ನಾವು ಆಗ್ರಾದಿಂದಲೇ ಬೆಂಗಳೂರಿಗೆ ರೈಲು ಹತ್ತಬಹುದಿತ್ತು ಎಂದು ಆಮೇಲೆ ತಿಳಿದು, ಒಳ್ಳೆ ದುಪ್ಪೆಗಳ ಹಾಗೆ ದುಡ್ಡು, ಟೈಮ್ ಎರಡನ್ನೂ ವೇಸ್ಟ್ ಮಾಡಿಕೊಂಡಂತಾಯಿತು.

ದೆಹಲಿಯಿಂದ ಹೊರಡುವ ದಖನಿ ಎಕ್ಸ್‍ಪ್ರೆಸ್ ರೈಲಿಗೆ ಒಂದು ಅಂದಾಜಿನಲ್ಲಿ ನಿಲ್ದಾಣ ತಲುಪಿದೆವು ಅದಾಗಲೇ ರೈಲು ಹೊರಡುವ ಸೂಚನೆಯ ಗಂಟೆ ಬಾರಿಸಿತು. ಕಿಟ್‍ಗಳ ಸಮೇತ ಇಬ್ಬರೂ ಏದುಸಿರು ಬಿಡುತ್ತಾ ಕಾಲಿಗೆ ಸಿಕ್ಕಿದ ಬೋಗಿಯೊಳಕ್ಕೆ ತೂರಿಕೊಂಡೆವು ಆ ಕ್ಷಣಕ್ಕೆ ದೇಮಾನಿಗೆ ಎದುರಿಗಿದ್ದ ಟೀಸ್ಟಾಲ್‍ನಲ್ಲಿ ನೇತುಹಾಕಿದ್ದ ಇಂಗ್ಲಿಷ್ ದಿನಪತ್ರಿಕೆ ಕಣ್ಣಿಗೆ ಬಿದ್ದಿದ್ದೇ ತಡ, ನೀನು ಒಳಗೆ ಕೂತಿರು, ಒಂದೇ ನಿಮಿಷಕ್ಕೆ ಆ ಪೇಪರ್ ತರ್ತೀನಿ ಎಂದು ದೌಢಾಯಿಸಿದನು. ಆ ಬೋಗಿಯ ಉದ್ದಕ್ಕೆ ಲಗ್ಗೇಜ್‍ಗಳನ್ನು ಎಳೆದುಕೊಂಡು ಅತ್ತ-ಇತ್ತ ವಾಲಾಡ್ತಾ ನಡೆದುಕೊಂಡು ಹೋಗತೊಡಗಿದೆ. ಎಲ್ಲಾ ಸೀಟುಗಳ ಮೇಲೆ ಅವರವರ ಬ್ಯಾಗ್‍ಗಳನ್ನು ಇಟ್ಟು ಎಲ್ಲೋ ಹೋಗಿದ್ದರು. ಪ್ರಯಾಣಿಕರ್ಯಾರೂ ಇರಲಿಲ್ಲ. ಬೋಗಿಯ ಕಡೆಯಲ್ಲಿ ಯಾರೂ ಇಲ್ಲದಿರುವುದನ್ನು ಕಂಡು ನಿರಾಳವಾಗಿ ಕಿಟಕಿಯ ಪಕ್ಕ ಕೂತೆನು. ಎರಡು ನಿಮಿಷದಲ್ಲಿ ರೈಲು ನಿಧಾನಕ್ಕೆ ಚಲಿಸಲು ಆರಂಭಿಸಿತು. ಆಗ ದಢದಢನೆ ಮಿಲಿಟರಿಯವರ ದಂಡು ನಾನಿದ್ದ ಬೋಗಿಯೊಳಕ್ಕೆ ನುಗ್ಗಿ ಬಂತು. ಅವರನ್ನು ಗಾಬರಿಯಿಂದ ನೋಡತೊಡಗಿದೆ. ನಾನು ಕೂತಿದ್ದ ಸೀಟು ತನ್ನದೆಂದು ಒಬ್ಬ ಸೈನಿಕ ಹಿಂದಿಯಲ್ಲಿ ಹೇಳಿದ. ಮತ್ತೊಬ್ಬ ಹಿಂದಿಯಲ್ಲಿ, ಇದು ಮಿಲ್ಟ್ರೀ ರಿಸರ್ವ್ ಬೋಗಿ… ನೀನು ನಿನ್ನ ರಿಸರ್ವೇಷನ್ ಚೆಕ್ ಮಾಡು ಎಂದನು. ಅದಕ್ಕೆ ನಾನು My husband is due to come now, he will take care of it… ಅಂದೆನು. ಕೆಲವು ಸೈನಿಕರು ಆಶ್ಚರ್ಯದಿಂದ ನನ್ನನ್ನು ನೋಡುತ್ತಿದ್ದರು. ನಾನು Can we sit in this compartment? ಎಂದುದಕ್ಕೆ ಓ ಯಸ್ ಎಂದು ಮೂರನೆಯ ಬರ್ತ್‍ನಲ್ಲಿದ್ದವನಿಂದ ಹಿಡಿದು ಅಕ್ಕಪಕ್ಕ ಕೂತಿದ್ದ ಸೈನಿಕರು ತಮ್ಮ ಕಣ್ಣುಗಳನ್ನು ತುಂಟತನದಿಂದ ಮಿಂಚಿಸಿದರು. ಯಾಕೋ ಭಯವಾಗಲು ಶುರುವಾಯಿತು. ದೇಮಾನ ಸುಳಿವಿಲ್ಲ. ರೈಲಿನ ವೇಗ ಹೆಚ್ಚಾದಂತೆ ನನ್ನೆದೆ ಢವಢವನೆ ಹೊಡೆದುಕೊಳ್ಳಲು ಆರಂಭಿಸಿತು. ಕುಳಿತಿರುವುದು ಕಷ್ಟವಾಗಿ ಎದ್ದು ಬಾಗಿಲ ಬಳಿಗೆ ಹೋದೆ. ನನ್ನ ಗಾಬರಿ ಆತಂಕ superlative ಡಿಗ್ರಿಯಲ್ಲಿ ಹೊರಳಾಡಿತು. ಕಾಣದ ಊರು… ಪರಿಚಯವಿಲ್ಲದ ಜನರು… ಗುಂಟ್‍ಕಪಿಗಳಂತೆ ಹಲ್ಲು ಕಿರಿಯುವ ಸೈನಿಕರು… ಕಡೆಗೆ ಏನೂ ತೋಚದೆ ಗಾಡಿ ನಿಲ್ಲಿಸಲು ಚೈನ್ ಎಳೆಯಲು ಮುಂದಾದೆ. ಆ ಕೂಡ್ಲೆ ಗಾರ್ಡ್ ನನ್ನನ್ನು ತಡೆದು- don’t do it ಎಂದು ಗದರಿದರು. Please sir… stop the train, my husband is still there on the Flat form ಎಂದು ಗೋಗರೆದೆ. ಆದರೂ ಆ ಮಹಾಶಯನ ಮನಸ್ಸು ಕರಗಲಿಲ್ಲ. ಆನಂತರ ಚೈನ್ ಎಳೆಯಲು ಅವಕಾಶವಿಲ್ಲ ಅಂದ್ರೆ ಇನ್ನು ಉಳಿದಿರೋದು ಒಂದೇ ದಾರಿ ಎಂದು ರೈಲಿಂದ ಆಚೆಗೆ ಜಂಪ್ ಮಾಡಲು ನಿರ್ಧರಿಸಿದೆ. ಚಲಿಸುವ ರೈಲಿನಿಂದ ಜಂಪ್ ಮಾಡಬೇಕೆಂದರೆ ರೈಲಿನಷ್ಟೇ ವೇಗವಾಗಿ ನೆಲದ ಮೇಲೆ ನಿಲ್ಲದೆ ಓಡಬೇಕೆಂದು ಅಪ್ಪ ನಮಗೆ ತಿಳಿಸಿಕೊಟ್ಟಿದ್ದರು. ಹೀಗೆ ನಿರ್ಧರಿಸಿ ಬಾಗಿಲತ್ತ ಭರ್ರನೆ ಹೊರಟೆ. ಅಲ್ಲಿಗೂ ಆ ಗಾರ್ಡ್ ನನ್ನ ಮನದಿಂಗಿತವನ್ನರಿತವನಂತೆ ಬಾಗಿಲಿಗೆ ಅಡ್ಡಕ್ಕೆ ನಿಂತು-you can’t do it ಎಂದು ನುಡಿದು ಅದೇನೋ ಹಿಂದಿಯಲ್ಲಿ ಗೊಣಗಿಕೊಳ್ಳುತ್ತಿದ್ದನು. ಗಂಡ ಅಂತಾಳೆ… ಅವನು ಕೈಕೊಟ್ಟು ಓಡಿ ಹೋಗಿರಬೇಕು ಅಂತ ಅವನು ಅಂದುಕೊಂಡಂತೆ ಭಾಸವಾಯಿತು. ಅಸಹನೀಯವಾದ ಕೋಪ ತಾಪದೊಂದಿಗೆ ವಾಪಸ್ ಬಂದು ಕೂತೆನು. ಸೈನಿಕರು ಗುಸಗುಸನೆ ಮಾತಾಡತೊಡಗಿದರು. ಆಗ ದಿಢೀರನೆ ಸಿಖ್ ಧರ್ಮಕ್ಕೆ ಸೇರಿದ ಟಿಕೆಟ್ ಇನ್ಸ್‍ಪೆಕ್ಟರ್ ಸೈನಿಕರ ಟಿಕೆಟ್‍ಗಳನ್ನು ಚೆಕ್ ಮಾಡಿದ ನಂತರ ನನ್ನ ಟಿಕೇಟ್ ಕೇಳಿದರು. The tickets are with my husband sir ಎಂದು ಹೇಳಿದೆ. ಆತ where is your husband? ಎಂದು ಅನುಮಾನದಿಂದ ಮೇಲಿಂದ ಕಾಲ್ತನಕ ನನ್ನನ್ನೇ ನೋಡಿದನು. ಆಗ ನಾನು I am not telling lies sir, my father is also a railway employee  ಎಂದೆ. ಆಗ ಅವರು ನನ್ನ ಕಣ್ಣುಗಳನ್ನೇ ನೋಡುತ್ತ what is his name? ಎಂದು ಕೇಳಿದರು. His name is K.Krishnaiah sir, right now working as the station master of Mysore Station ಎಂದೆ. ಆ ಟಿ.ಸಿಯ ಮುಖದ ಗಂಟುಗಳು ಮರೆಯಾದವು.

ಇಷ್ಟೆಲ್ಲಾ ಆದ ಮೇಲೆ ಆ ಟಿ.ಸಿಯನ್ನು ಸುತ್ತುವರೆದಿದ್ದ ಸೈನಿಕರನ್ನು ತೂರಿಕೊಂಡು ನಮ್ಮನೆ ಏಣಿ (ನಾನಿಟ್ಟ ಅಡ್ಡ ಹೆಸರು) ಬರುವುದು ಕಾಣಿಸಿತು. ಇವನ ಮುಖ ನೋಡಿದ್ದೆ ತಡ ನನ್ನ ಕೋಪ ಉಕ್ಕುಕ್ಕಿ ಏರಿತು. ಆ ಟಿ.ಸಿಗೆ ನನ್ನ ಗಂಡ ಎಂದು ಪರಿಚಯಿಸಿದೆ. ಆಗ ಅವನು ದೇಮಾನ ಕಡೆಗೆ ಒಂದು ನೋಟ ಬಿಸಾಕಿದ. ದೇಮ ಕೂಡ್ಲೆ ತನ್ನ ಜೇಬಿಗೆ ಕೈ ಹಾಕಿ ಟಿಕೆಟ್ ನೀಡಿದನು. ಪುಣ್ಯಕ್ಕೆ ಟಿಕೇಟ್‍ಗಳು ಅವನ ಜೇಬಲ್ಲೆ ಇದ್ದವು. ಎಲ್ಲವೂ ಸರಿಯಾಯ್ತು. ಆನಂತರ ನಮ್ಮ ಕಾಯ್ದಿರಿಸಿದ್ದ ಸೀಟ್ ಹುಡುಕಿ ಹೋಗಿ ಕೂತ ಮೇಲೂ ಕೋಪ ಹಿಂಗದೆ ದೇಮಾನ ಕಡೆ ದುರುಗುಟ್ಟಿಕೊಂಡು ನೋಡಿದೆ. ಸಾರಿ ಮಿತ್ರೀ… ಈ ರೈಲಿಗೆ ಎಲ್ಲಿಂದ ಬೇಕಾದ್ರೂ ಹತ್ತಬಹುದು. ನಾನು ತುಂಬಾ ಮುಂದಿನ ಬೋಗಿಯಲ್ಲಿ ಹತ್ತಿಕೊಂಡೆ… ಉದ್ದಕ್ಕೂ ನೀನು ಇಲ್ಲಿರಬಹುದು… ಅಲ್ಲಿರಬಹುದು ಅಂತ ಹುಡುಕಾಡಿಕೊಂಡು ಬರುವುದಕ್ಕೆ ಹತ್ತತ್ರ ಅರ್ಧಗಂಟೆಯಾಗಿರಬೇಕು ಅಲ್ವಾ? ಎಂದನು ಮುಗ್ಧನಂತೆ! ಅಂದ್ರೆ ಇಡೀ ರೈಲಿನೊಳಗಿದ್ದ ಹೆಣ್ಣುಗಳನ್ನೆಲ್ಲ ಸರ್ವೆ ಮಾಡಿಕೊಂಡು ಬಂದೆಯಾ? ಅಂತ ಕೇಳಬೇಕೆನ್ನಿಸಿತು. ನಿನ್ನ ಜೊತೆ ಬಂದೆನಲ್ಲ ಅದೇ ನಾ ಮಾಡಿದ ಮೊದಲ ತಪ್ಪು ಎಂದಷ್ಟೇ ಕುದಿಯುತ್ತಾ ಹೇಳಿದೆ. ಅದಾಗಲೇ ಅನುಭವಿಸಿದ್ದ ಕೋಪ ತಾಪ ಆತಂಕ ಭಯ ಎಲ್ಲವೂ ನನ್ನನ್ನು ತೀವ್ರವಾಗಿ ಘಾಸಿಗೊಳಿಸಿದ್ದ ಕಾರಣ ಇವನ ಮುಂದೆ ಕಿನ್ನರಿ ಬಾರಿಸಲು ಚೈತನ್ಯ ಸಾಲದಾಗಿತ್ತು.