ಅಧಿಕಾರದ ಗದ್ದುಗೆಗೇರಿ ಆಡಳಿತದ ಚುಕ್ಕಾಣಿ ಹಿಡಿಯಲು ತತ್ವ, ಸಿದ್ಧಾಂತಗಳನ್ನು ಗಾಳಿಗೆ ತೂರುವ ರಾಜಕೀಯ ನೇತಾರರಲ್ಲಿ ಮಾತು ಮತ್ತು ಕೃತಿಗಳ ನಡುವೆ ಅಂತರವಿಲ್ಲದೆ ಬದುಕುತ್ತಿರುವ ಅನೇಕ ನಾಯಕರು ನಮ್ಮ ನಡುವೆ ಇದ್ದಾರೆ.
ಬಿಹಾರದ ಮುಖ್ಯ ಮಂತ್ರಿ ನಿತಿಶ್ ಕುಮಾರ್ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಒಂದಾದ ತ್ರಿಪುರಾದ ಮುಖ್ಯ ಮಂತ್ರಿ ಮಾಣಿಕ್ ಸರ್ಕಾರ್ ಇಂತಹವರಲ್ಲಿ ಪ್ರಮುಖರು. ಮಾಣಿಕ್ ಸರ್ಕಾರ್ ರವರ ಬದುಕು ಇಡೀ ಜಗತ್ತಿನ ರಾಜಕೀಯ ರಂಗಕ್ಕೆ ಮಾದರಿಯನಿಸುವಂತಹದ್ದು.  ತ್ರಿಪುರಾ ರಾಜ್ಯದಲ್ಲಿ ಎಡರಂಗದ ಸಿ.ಪಿ.ಐ. ( ಎಂ) ಪಕ್ಷದ ವತಿಯಿಂದ ನಾಲ್ಕನೆಯ ಬಾರಿಗೆ ಮುಖ್ಯ ಮಂತ್ರಿಯಾಗಿರುವ ಮಾಣಿಕ್ ಸರ್ಕಾರ್ ಅತ್ಯಂತ ಸರಳ ಹಾಗೂ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ನಡುವಳಿಕೆಯಿಂದ ದೇಶದಲ್ಲಿ ಮನೆ ಮಾತಾಗಿದ್ದಾರೆ. ಮುಖ್ಯ ಮಂತ್ರಿಯ ಹುದ್ದೆಗೆ ನೀಡಲಾಗುವ ಐವತ್ತು ಸಾವಿರ ವೇತನದಲ್ಲಿ ಕೇವಲ ಐದು ಸಾವಿರ ರೂಪಾಯಿಗಳನ್ನು ತಮ್ಮ ವೈಯಕ್ತಿಕ ಖರ್ಚಿಗಾಗಿ ಪಡೆದು, ಉಳಿದ ಹಣವನ್ನು ಪಕ್ಷಕ್ಕೆ ದೇಣಿಗೆಯಾಗಿ ನೀಡುತ್ತಿದ್ದಾರೆ.

ನಾಲ್ಕು ಬಾರಿ ಮುಖ್ಯ ಮಂತ್ರಿಯಾದರೂ ಸಹ ಸ್ವಂತ ಮನೆ, ಕಾರು, ಬಂಗಲೆ, ನಿವೇಶನ ಏನನ್ನೂ ಹೊಂದದ ಇವರು ಪತ್ನಿಯ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ನಾಲ್ಕು ವರ್ಷದ ಹಿಂದೆ ಹನ್ನೊಂದು ಸಾವಿರ ಇದ್ದ  ಮಾಣಿಕ್ ಸರ್ಕಾರ್ ರವರ ಬ್ಯಾಂಕ್ ಬ್ಯಾಲೆನ್ಸ್ ಇದೀಗ ಹದಿನಾರು ಸಾವಿರದ ನೂರಿಪ್ಪತ್ತು ರೂಪಾಯಿಗೆ  ಏರಿದೆ.

ಪತ್ನಿ ಪಾಂಚಾಲಿ ಭಟ್ಟಾಚಾರ್ಯರವರು ಸ್ಥಳಿಯ ಕಾಲೇಜು ಒಂದರಲ್ಲಿ  ಉಪನ್ಯಾಸಕಿಯಾಗಿ ದುಡಿದು ಇತ್ತೀಚೆಗೆ ನಿವೃತ್ತಿಯಾಗಿದ್ದಾರೆ. ಅವರ ವೇತನಲ್ಲಿ ಜೀವನ ನಡೆಸುತ್ತಿದ್ದ ಸರ್ಕಾರ್ ರವರು ತಮ್ಮ ಪತ್ನಿಗೆ ನಿವೃತ್ತಿಯಾದ ನಂತರ ಬಂದ ಹಣದ ವಿವರ ಮತ್ತು ನಿವೃತ್ತಿ ವೇತನದ ವಿವರಗಳನ್ನು ತಮ್ಮಿಬ್ಬರ ಬ್ಯಾಂಕಿನ ಉಳಿತಾಯ ಖಾತೆ ನಂಬರ್ ಜೊತೆ ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ. ( ಅಗರರ್ತಲಾ ನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಯುಕೊ ಬ್ಯಾಂಕ್ ಖಾತೆಗಳು)  ಕೇವಲ ಒಂದು ಅವಧಿಗೆ ಶಾಸಕನಾದರೆ ಸಾಕು, ನಾಲ್ಕು ತಲೆಮಾರು ಜೀವನವಿಡಿ ಕೂತು ಉಣ್ಣುವಷ್ಟು ಸಂಪತ್ತನ್ನು ಆರು ವರ್ಷಗಳಲ್ಲಿ ಅಕ್ರಮವಾಗಿ ಸಂಪಾದನೆ ಮಾಡುವ ನಮ್ಮ ಜನಪ್ರತಿನಿಧಿಗಳೆಲ್ಲಿ? ಹಾಗೂ ಹದಿನೆಂಟು ವರ್ಷಗಳ ಕಾಲ ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದು ಕೊಂಡು, ಹತ್ತು ಗ್ರಾಂ ನ ಚಿನ್ನದ ಉಂಗುರ ಮತ್ತು ಹದಿನಾರು ಸಾವಿರ ರೂಪಾಯಿ ಹಣ ಹೊಂದಿರುವ ಮಾಣಿಕ್ ಸರ್ಕಾರ್ ಎಲ್ಲಿ? ಇದು ಕೇವಲ ಗಿಮಿಕ್ ಅಥವಾ ಪ್ರಚಾರಕ್ಕಾಗಿ ಬದುಕುತ್ತಿರುವ ಬದುಕಲ್ಲ.

ನಮಗೆ ಎಡ ಪಕ್ಷಗಳ ಬಗ್ಗೆ ಅಥವಾ ಅಲ್ಲಿನ ನಾಯಕರ ತತ್ವ ಸಿದ್ಧಾಂತಗಳ ಕುರಿತು ಸಾವಿರ ತಕರಾರುಗಳಿರಬಹುದು ಇಲ್ಲವೆ, ಪ್ರಶ್ನೆಗಳಿರಬಹುದು. ನಾವುಗಳು ಅವರ ಸೈದ್ಧಾಂತಿಕ ನಿಲುವುಗಳನ್ನು ಪ್ರಶ್ನಿಸುವ ಹಾಗೆ ಅವರ ವೈಯಕ್ತಿಕವಾದ ಶುದ್ಧ ಚಾರಿತ್ರ್ಯದ ಬದುಕನ್ನು ಪ್ರಶ್ನಿಸುವ ಯಾವ ನೈತಿಕ ಹಕ್ಕುಗಳು ನಮಗಿಲ್ಲದಂತೆ ಅವರು ಬದುಕುತ್ತಿದ್ದಾರೆ. ಭಾರತದ ಎಡಪಕ್ಷಗಳ ಬಹುತೇಕ ನಾಯಕರ ಬದುಕು ನಮಗೆ ಮಾದರಿಯಾಗಿದೆ. ಹರಿಕಿಶನ್ ಸಿಂಗ್ ಸುರ್ಜಿತ್, ಇ.ಎಂ,ಎಸ್.ನಂಬೂದರಿಪಾಡ್, ಜ್ಯೋತಿಬಸು, ಹೀಗೆ ನೂರಾರು ಮಂದಿಯನ್ನು ನಾವು ಉದಾಹರಿಸಬಹುದು. ಇಂತಹವರ ಶುದ್ಧಚಾರಿತ್ರ್ಯದ ನಡಿಗೆಯನ್ನು ಅನುಕರಿಸುತ್ತಿರುವ ಎಡಪಕ್ಷಗಳ ನಾಯಕರಲ್ಲಿ ಮಾಣಿಕ್ ಸರ್ಕಾರ್ ಬಹು ಮುಖ್ಯರಾದವರು.
1949 ರ ಜನವರಿ 22 ರಂದು ತ್ರಿಪುರಾ ರಾಜ್ಯದ ಉದಲ್ ಪುರದಲ್ಲಿ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮಾಣಿಕ್ ಸರ್ಕಾರ್ ಗೆ ಯಾವುದೇ ರಾಜಕೀಯ ಹಿನ್ನಲೆ ಇರಲಿಲ್ಲ. ಇವರ ತಂದೆ ಅಮೂಲ್ಯ ಸರ್ಕಾರ್ ಟೈಲರ್ ವೃತ್ತಿ ಮಾಡುತ್ತಿದ್ದರು. ತಾಯಿ ಅಂಜಲಿ ಸರ್ಕಾರ್ ರವರು ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದರು. ಉದಮ್ ಪುರದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ ಮಾಣಿಕ್ ಸರ್ಕಾರ್ ರವರು ಪದವಿ ತರಗತಿಗಾಗಿ ಅಗರ್ತಲಾ ನಗರದ ಮಹಾರಾಜ್ ಬೀರ್ ಬಿಕ್ರಮ್ ಕಾಲೇಜಿಗೆ ಸೇರ್ಪಡೆಯಾದ ನಂತರ ವಿದ್ಯಾರ್ಥಿ ನಾಯಕನಾಗಿ ಹೊರಹೊಮ್ಮಿದರು. 1968 ರಲ್ಲಿ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ ಸಂಘಟನೆಯ ಮೂಲಕ ಎಡಪಂಥೀಯ ಚಳುವಳಿ ಮೂಲಕ ಗುರಿತಿಸಿಕೊಂಡ ಇವರು,1967 ರಲ್ಲಿ ತ್ರಿಪುರಾ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೇಸ್ ಸರ್ಕಾರದ ವಿರುದ್ಧ ಹೋರಾಡುತ್ತಾ ರಾಷ್ಟ್ರ ಮಟ್ಟದ ನಾಯಕರ ಗಮನ ಸೆಳೆದರು. 1972 ರಲ್ಲಿ ತ್ರಿಪುರಾ ರಾಜ್ಯದ ಸಿ.ಪಿ.ಐ.( ಎಂ) ನ ಘಟಕದ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿ ನಂತರ ಕಾರ್ಯದರ್ಶಿಯಾಗಿಯೂ ಸಹ ಸೇವೆ ಸಲ್ಲಿಸಿದರು. 1980 ರಲ್ಲಿ ಪ್ರಥಮ ಬಾರಿಗೆ ಅಗರ್ತಲಾ ನಗರದ ವಿಧಾನ ಸಭಾ ಕ್ರೇತ್ರದಿಂದ  ತ್ರಿಪುರಾ ವಿಧಾನ ಸಭೆಗೆ ಶಾಸಕರಾಗಿ ಆಯ್ಕೆಯಾದರು. 1983 ರಿಂದ 1993 ರವರೆಗೆ ಶಾಸಕರಾಗಿ ಆಯ್ಕೆಯಾಗುವುದರ

ಜೊತೆಗೆ ತ್ರಿಪುರಾ ಮಾರ್ಕ್ಸ್ವಾದಿ ಕಮ್ಯೂನಿಷ್ಟ್ ಪಕ್ಷದ ಕಾರ್ಯದರ್ಶಿಯಾಗಿಯೂ ಸಹ ದುಡಿದ ಮಾಣಿಕ್ ಸರ್ಕಾರ್ ತಮ್ಮ ಬದುಕಿನುದ್ದಕ್ಕೂ ಕೈ ಮತ್ತು ಬಾಯಿ ಎರಡನ್ನೂ ಶುದ್ಧವಾಗಿಟ್ಟುಕೊಂಡು ಬದುಕಿದವರು. 1998 ರ ಮಾರ್ಚ್ ತಿಂಗಳಿನಲ್ಲಿ ತಮ್ಮ ನಲವತ್ತೊಂಬತ್ತನೆಯ ವಯಸ್ಸಿನಲ್ಲಿ ತ್ರಿಪುರಾ ಮುಖ್ಯ ಮಂತ್ರಿ ಹುದ್ದೆಗೇರಿದ ಮಾಣಿಕ್ ಸರ್ಕಾರ್ ಎಂದಿಗೂ ಮತ್ತೇ ಹಿಂತಿರುಗಿ ನೋಡಲಿಲ್ಲ. ಯಾವ ರಾಜಕೀಯ ಬಿರುಗಾಳಿಯೂ ಅವರನ್ನು ಅಲುಗಾಡಿಸಲಿಲ್ಲ.
ರಾಜಕೀಯ ಪಕ್ಷಗಳ ತತ್ವ ಸಿದ್ಧಾಂತಗಳನ್ನು ಮತ್ತು ಜಾತಿ, ಧರ್ಮಗಳ ಎಲ್ಲೆಯನ್ನು ಮೀರಿ ಅಲ್ಲಿನ ಜನ ಮಾಣಿಕ್ ಸರ್ಕಾರ್ ಅವರನ್ನು ಪ್ರೀತಿಸುತ್ತಿದ್ದಾರೆ. ಅವರ ಪತ್ನಿ ಎಂದಿಗೂ ರಕ್ಷಣೆಗಾಗಿ ಅಂಗರಕ್ಷಕರನ್ನಾಗಲಿ, ಓಡಾಟಕ್ಕೆ ಸರ್ಕಾರಿ ವಾಹನಗಳನ್ನು ಬಳಸಿದವರಲ್ಲ, ಸದಾ ಅಟೋರಿಕ್ಷಾದಲ್ಲಿ ಓಡಾಡಿದವರು. ಮಾಣಿಕ್ ಸರ್ಕಾರ್ ಕೂಡ ಸೇವೆಯ ಅವಧಿಯನ್ನು ಹೊರತು ಪಡಿಸಿದರೆ ವಾಹನ ಬಳಸುವುದಿಲ್ಲ. ಈ ದಿನ ನಮ್ಮ ನಡುವಿನ ಮುಖ್ಯಮಂತ್ರಿಗಳು ವಿದೇಶಿ ಕಾರಿನಲ್ಲಿ ಹಿಂದೆ ಮುಂದೆ ಹತ್ತಾರು ಕಾರುಗಳ ಜೊತೆ , ಹೆಲಿಕಾಪ್ಟರ್ ನಲ್ಲಿ ಓಡಾಡುತ್ತಿರುವುದನ್ನು ಮಾಣಿಕ್ ಸರ್ಕಾರ್ ಬದುಕಿನ ಜೊತೆ ಹೋಲಿಸಿದಾಗ ನಮಗೆ ಸಗಣಿ ಹುಳುಗಂತೆ ಕಾಣುತ್ತಾರೆ. ಅಧಿಕಾರಕ್ಕಿಂತ ಜನರ ಪ್ರೀತಿ ಮತ್ತು ಗೌರವ ಹಾಗೂ ಆತ್ಮ ಸಾಕ್ಷಿಯ ನಡುವಳಿಕೆ ಮುಖ್ಯ ಎಂದು ನಂಬಿಕೊಂಡಿರುವ ಮಾಣಿಕ್ ಸರ್ಕಾರ್ ಅವರ ಬದುಕನ್ನು ನೋಡಿ, ನಮ್ಮ ಜನಪ್ರತಿನಿಧಿಗಳು ಕಲಿಯುವುದು ಸಾಕಷ್ಟಿದೆ.