ದೇಸಿ ಪರಂಪರೆಯ ಸಮರ್ಥ ಆವಿಷ್ಕಾರ ‘ಕುಸುಮಬಾಲೆ’- ಡಾ.ಭಾಲಚಂದ್ರ ನೇಮಾಡೆ

[ದೇವನೂರ ಮಹಾದೇವ ಅವರ ‘ಕುಸುಮಬಾಲೆ’ಯನ್ನು ರಾಜಶ್ರೀ ಜಯರಾಮ ಅವರು ಮರಾಠಿಗೆ  ಅನುವಾದಿಸಿದ್ದಾರೆ.  ಈ ಕೃತಿಗೆ ಮರಾಠಿಯ ಹಿರಿಯ ಲೇಖಕ ಡಾ. ಭಾಲಚಂದ್ರ ನೇಮಾಡೆ ಬರೆದಿರುವ ಮುನ್ನುಡಿಯ ಕನ್ನಡರೂಪ ಇಲ್ಲಿದೆ.  ಲೇಖಕ ಚಂದ್ರಕಾಂತ ಪೋಕಳೆ ಅವರು ಅನುವಾದಿಸಿರುವ ಈ ಬರಹ, ಕನ್ನಡದ ಮಹತ್ವದ ಕೃತಿಯೊಂದರನ್ನು ಸೋದರ ಭಾಷೆಯ ಲೇಖಕ ಹೇಗೆ ನೋಡುತ್ತಾನೆ ಎನ್ನುವುದಕ್ಕೆ ಉದಾಹರಣೆಯಾಗಿಯೂ, ಕನ್ನಡ ಮತ್ತು ಮರಾಠಿಯ ದಲಿತ ಲೋಕದಲ್ಲಿ ಇರುವ ಸಾಮ್ಯತೆಗಳ ಕುರುಹಿನ ರೂಪದಲ್ಲೂ ಮುಖ್ಯವಾದುದು. ಈ ಮುನ್ನುಡಿಯು 05/10/2015 ರ ಪ್ರಜಾವಾಣಿ, ಸಾಪ್ತಾಹಿಕ ಪುರವಣಿ ಕೃಪೆ ]

 

 

 

ದೇವನೂರ ಮಹಾದೇವ ಅವರ ‘ಕುಸುಮಬಾಲೆ’ಯು ಮರಾಠಿಗೆ ಬಂದಿದ್ದರಿಂದ ಕನ್ನಡದಲ್ಲಿಯ ಒಂದು ಬಹುಚರ್ಚಿತ ಕಾದಂಬರಿಯ ಪರಿಚಯ ನಮಗಾದಂತೆ ಆಗುತ್ತದೆ. ರಾಜಶ್ರೀ ಜಯರಾಮ ಅವರು ಮಾಡಿದ ಈ ಭಾಷಾಂತರದಿಂದಾಗಿ ಮರಾಠಿ ದಲಿತ ಸಾಹಿತ್ಯದ ಪ್ರಾಂತವು ಮತ್ತಷ್ಟು ಸಮೃದ್ಧಗೊಂಡಿತು. ಕಳೆದ 25 ವರ್ಷಗಳಿಂದ ‘ಕುಸುಮಬಾಲೆ’ಯ ಶ್ರೇಷ್ಠತ್ವ ಕೇಳಲು ಸಿಗುತ್ತಿತ್ತು. ಮೊದಲಿಗೆ ಈ ಕಾದಂಬರಿಯನ್ನು ಮೈಸೂರಿನ ದಕ್ಷಿಣದ ಕಡೆಯ ನಂಜನಗೂಡಿನ ಪ್ರಾದೇಶಿಕ ಆಡುನುಡಿಯಲ್ಲಿ ಬರೆಯಲಾಯಿತು. ಹೊಸ ದಲಿತ ಆಶಯವಿರುವ ಈ ಕಾದಂಬರಿಯು ಆ ಕಾಲದಲ್ಲಿ ಕನ್ನಡ ಭಾಷಿಕರಿಗೂ ಆ ಆಡುನುಡಿಯಿಂದಾಗಿ ದೂರದ್ದೆನಿಸಿತು. ಆನಂತರ ಎಲ್‌. ಬಸವರಾಜು ಅವರು ಮಾಡಿದ ಅದರ ಲಯಬದ್ಧ ಸ್ವರೂಪ ಪ್ರಕಟಗೊಂಡ ಬಳಿಕ ಅದಕ್ಕೆ ಅಪಾರ ಜನಪ್ರಿಯತೆ ಲಭಿಸಿತು.

ಖರೆಯೆಂದರೆ, ಆ ಕಾಲ ಕನ್ನಡ ಭಾಷೆಯ ಸುವರ್ಣ ಕಾಲವಾಗಿತ್ತು. ಹೊಸ ಹೊಸ ಸೃಜನಶೀಲ ಕೃತಿಗಳು ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದವು. ಕನ್ನಡದಲ್ಲಿ ಹೊಸ ಹಾದಿಯನ್ನು ನಿರ್ಮಿಸುವುದು ಸುಲಭವಾಗಿರಲಿಲ್ಲ. ಆದರೆ ದೇವನೂರ ಮಹಾದೇವ ಎಂಬ ಉಪೇಕ್ಷಿತ ಸಮಾಜದ ಹೊಸ ತಾಕತ್ತಿನ ಲೇಖಕರು ತನ್ನ ಸೀಮಿತ ಆಡುನುಡಿಯಲ್ಲಿ ‘ಕುಸುಮಬಾಲೆ’ಯನ್ನು ಬರೆದು ದೇಸಿ ಪರಂಪರೆಯ ಸಮರ್ಥ ಆವಿಷ್ಕಾರವನ್ನು ಮಾಡಿ ಏಕೈಕ ಅಗ್ರಸ್ಥಾನವನ್ನು ಪಡೆದರು. ಕನ್ನಡ ದಲಿತ ಸಾಹಿತ್ಯದ ಆರಂಭ ಇಲ್ಲಿಂದಲೇ ಅತ್ಯಂತ ಪ್ರಭಾವಶಾಲಿಯಾಗಿ ಆಯಿತು.

ದೇವನೂರ ಮಹಾದೇವ ಅವರ ಪರಿಸರ ನಿಷ್ಠ ಭಾಷಾಶೈಲಿ, ಸಮಾಜದಲ್ಲಿಯ ವಸ್ತುಸ್ಥಿತಿಯ ಜ್ವಲಂತ ಆಶಯ ಮತ್ತು ದಮನಿತ ವಿದ್ರೋಹದ ಆಶಯ ಸೂತ್ರದಿಂದಾಗಿ, ಪ್ರಾಯಃ ಉಚ್ಚ ವರ್ಣದ ಸಾಹಿತ್ಯ–ವ್ಯವಹಾರದಲ್ಲಿ ‘ಕುಸುಮಬಾಲೆ’ಯು ಕ್ರಾಂತಿಕಾರಕವೆನಿಸಿತು. ಈ ಕಾದಂಬರಿಯಲ್ಲಿಯ ವಿದ್ರೋಹದ ಮಾರ್ಗವು ಮರಾಠಿಗೆ ಹೊಸತು ಎನಿಸುವಂತಹದು. ಮರಾಠಿಯಲ್ಲಿ ಪ್ರಾಯಃ ಮಾರ್ಕ್ಸ್‌ವಾದಿ ಮತ್ತು ಅಂಬೇಡ್ಕರ್‌ವಾದಿ ಸ್ತ್ರೋತ್ರಗಳಿಂದ ವೃದ್ಧಿಗೊಂಡ ವಿಚಾರಕ್ಕಿಂತ, ದೇವನೂರ ಮಹಾದೇವರ ವಿದ್ರೋಹವು ಕಡಿಮೆ ರಾಜಕೀಯ ಮತ್ತು ಅಧಿಕ ಸಾಮಾಜಿಕ ಹಾಗೂ ಅದಕ್ಕಿಂತಲೂ ಅಧಿಕ ದೇಸಿವಾದಿಯಾಗಿದೆ. ಕರ್ನಾಟಕದಲ್ಲಿಯ ಸಮೃದ್ಧ ಭಕ್ತಿ ಮತ್ತು ವಚನ ಪರಂಪರೆ, ಹಾಗೆಯೇ ಜಾನಪದ ಮತ್ತು ಭಾಷಾ ಸಮೃದ್ಧಿಯು ಹೆಜ್ಜೆ ಹೆಜ್ಜೆಗೂ ಅರಿವನ್ನು ತಂದುಕೊಡುವಂತಹದಾಗಿದೆ.

ರಾಜಶ್ರೀ ಜಯರಾಮ ಅವರು ‘ಕುಸುಮಬಾಲೆ’ಯ ಭಾಷಾಂತರವನ್ನು ಬೇಕೆಂತಲೇ ಕೋಲ್ಹಾಪುರದ ಆಡುನುಡಿಯಲ್ಲಿ ಮಾಡಿದಂತಿದೆ. ಮೂಲದ ಕನ್ನಡದಲ್ಲಿ ನಂಜನಗೂಡಿನ ಆಡುನುಡಿಯ ಈ ಪರ್ಯಾಯವು ಮರಾಠಿ ಓದುಗರಿಗೆ ಎಷ್ಟರಮಟ್ಟಿಗೆ ರುಚಿಸಬಹುದೋ ಹೇಳಲು ಬರುವಂತಿಲ್ಲ. ನಮ್ಮ ದೇಶದಲ್ಲಿ ದಲಿತ ವರ್ಗವೂ ಸಹ ಏಕ ಸಂಘವಾಗಿಲ್ಲ. ‘ಕುಸುಮಬಾಲೆ’ಯಲ್ಲಿಯ ಕರ್ನಾಟಕದಲ್ಲಿಯ ದಲಿತ ಸಮುದಾಯ ಮರಾಠಿ ಭಾಷಾಂತರದಲ್ಲಿ ವ್ಯಕ್ತ ಮಾಡಿದ ಸಮುದಾಯವು ಒಂದೇ ಬಗೆಯದಾಗಿರಲಿಕ್ಕಿಲ್ಲ. ಆದರೆ ಈ ಇಬ್ಬರ ಶೋಷಣೆಯು ಒಂದೇ ಬಗೆಯದು, ಶೋಷಣೆಯ ರೀತಿಯೂ ಒಂದೇ ಬಗೆಯದ್ದಾಗಿರಬೇಕು. ಅದರಿಂದಾಗಿ ಲೇಖಕನ ವಿದ್ರೋಹದ ರೀತಿಯೂ ಅಧಿಕ ಪ್ರಭಾವಿಯಾಗಬಹುದಾಗಿದೆ. ಕರ್ನಾಟಕದ ಜನರ ಆಚಾರ, ಸಾಂಸ್ಕೃತಿಕ ಪ್ರತೀಕಗಳ ಮತ್ತು ನುಡಿಗಟ್ಟುಗಳ ಮರಾಠಿ ಪರ್ಯಾಯವೂ ಸಹ ಅನುವಾದಕಿಗೆ ಸಮಾನ ವಾರಸುದಾರಿಕೆಯಿಂದಾಗಿ ಲಭಿಸುವ ಸಾಧ್ಯತೆಯಿದೆ. ‘ಕುಸುಮಬಾಲೆ’ಯಂತಹ ಯಾವುದೇ ಶ್ರೇಷ್ಠ ದರ್ಜೆಯ ಲಲಿತ ಕೃತಿಯ ಭಾಷಾಂತರದಲ್ಲಿ ಈ ಸಮಸ್ಯೆ ಅನಿವಾರ್ಯವಾಗಿರುತ್ತದೆ. ಏಕೆಂದರೆ ಅದೊಂದು ವಿಶಿಷ್ಟ ಮನುಷ್ಯನ, ಸಮುದಾಯದ, ಭಾಷಿಕ ಸಮೂಹದ, ವಿಶಿಷ್ಟ ಕಾಲದ ಪ್ರಾತಿನಿಧಿಕ ಅಭಿವ್ಯಕ್ತಿಯಾಗಿರುತ್ತದೆ. ಭಾಷಾಂತರಕಾರನ ಸತ್ತ್ವಪರೀಕ್ಷೆಯೂ ಇದರಲ್ಲೇ ಇದೆ.

ಹಿಂದೂ ಸಮಾಜದಲ್ಲಿ, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಪ್ರಬಲವಾಗಿರುವ ಸತ್ತಾಧಾರಿ ವರ್ಗದ ವಿರುದ್ಧ/ ಜಾತಿ ವಿರುದ್ಧ ವಿದ್ರೋಹವನ್ನು ಮಾಡುವ ಮೊದಲು ಸಾಹಿತಿಗೆ, ವಿಶೇಷವಾಗಿ ಕಾದಂಬರಿಕಾರನಿಗೆ ಒಂದು ವರ್ಗದ ಆದರ್ಶ, ರೂಢಿ, ಜಗತ್ತನ್ನು ನೋಡುವ ದೃಷ್ಟಿ ಮತ್ತು ಭಾಷೆಯೂ ಸಹ ಒಟ್ಟೂ ಗ್ರಾಮ ಸಂಸ್ಥೆಯ ವಾಸ್ತವದಲ್ಲಿ ಖರೇ ಗೊತ್ತಿದ್ದರಷ್ಟೇ ಸಾಲದು, ಈ ಸಂಪೂರ್ಣ ವಾಸ್ತವದ ಅರಿವನ್ನು ಕಾದಂಬರಿಯ ಸಂರಚನೆಯಲ್ಲಿ ಅಭಿವ್ಯಕ್ತ ಮಾಡಬೇಕಾಗುತ್ತದೆ. ವಿದ್ರೋಹದ ವಿಶೇಷ ಕಥನ ತಂತ್ರವನ್ನು ನಿರ್ಮಾಣ ಮಾಡಬೇಕಾಗುತ್ತದೆ. ಪ್ರತೀಕ, ಪ್ರತಿಮೆ, ಶೈಲಿ, ಭಾಷೆಯ ಬೈಗಳೂ ಸಹ ವಿಶಿಷ್ಟ ವಾಕ್ಯ ರಚನೆಗಳ ಆಯ್ಕೆಯನ್ನು ತುಂಬ ಪರಿಶ್ರಮಪಟ್ಟು ಸಿದ್ಧಪಡಿಸಬೇಕಾಗುತ್ತದೆ. ಏಕೆಂದರೆ ಕಾದಂಬರಿ ಎಂಬ ಕಥನ ಪ್ರಕಾರವನ್ನು ಒಂದು ಸಾಮಾಜಿಕ ದಸ್ತಾವೇಜು ಎಂದು ಭಾವಿಸಲಾಗುತ್ತದೆ. ಇದರದೇ ಒಂದು ಭಾಗವಾಗಿ ಕಾದಂಬರಿಕಾರನ ಬಳಿಯಲ್ಲಿ ಸರ್ವಸಮಾವೇಶಕ ಉದಾರ ವೃತ್ತಿ ಮತ್ತು ಸಕಲ ಸಮಾಜ ಘಟಕಗಳ ಬಗೆಗೆ ಸಹಾನುಭೂತಿ ಇರಬೇಕಾಗುತ್ತದೆ. ‘ಕುಸುಮಬಾಲೆ’ಯಲ್ಲಿ ದೇವನೂರ ಮಹಾದೇವರ ಈ ಎಲ್ಲ ಮನೋಧರ್ಮ ವ್ಯಕ್ತಗೊಂಡಿದೆ.

ಅಕ್ಕಮ್ಮಳಂತಹ ಸವರ್ಣರಲ್ಲಿಯ ಒಬ್ಬ ಅಭಾಗಿನಿ ವಿಧವೆಯನ್ನು ಊರ ಹೊರಗೆ ದಬ್ಬುವುದೂ ಸಹ ಒಂದು ಬಗೆಯ ದಲಿತತ್ವದ್ದೇ ಆವಿಷ್ಕಾರವಾಗಿದೆ. ಅವಳದೇ ನಾಲ್ಕನೇ ತಲೆಮಾರಿನ ಕುಸುಮಳ ಚೆನ್ನನೆಂಬ ದಲಿತ ತರುಣನೊಂದಿಗೆ ನಡೆದ ಸುಪ್ತ ಸಂಯೋಗದಿಂದಾದ ಕೊನೆಯೂ ಸಹ ಅಂಥದ್ದೇ ಆವಿಷ್ಕಾರವಾಗಿದೆ. ಕುಸುಮಳ ಮೇಲಿನ ಅಘೋರಿ ಅತ್ಯಾಚಾರ ಮತ್ತು ಸುಳಿವು ಸಿಗದೆ ಮಾಡಿದ ಕೊಲೆ– ಇದೆಲ್ಲವೂ ಯಾವ ಅಮಾನುಷ ಪಾತಳಿಯಲ್ಲಿ ಹಿಂದೂ ಸಮಾಜದಲ್ಲಿ ಇಂದಿಗೂ ನಡೆಯುತ್ತದೆಯೋ, ಅಂಥ ಸಂಪೂರ್ಣ ವ್ಯವಸ್ಥೆಯ ಮೇಲೆ ಭಾಷ್ಯ ಮಾಡುವದು ಕಾದಂಬರಿಕಾರನ ಹೊಣೆಯಾಗಿರುತ್ತದೆ.

ಅವನು ಕೇವಲ ದಲಿತ ಜಾತಿಯ ಪ್ರತಿನಿಧಿಯಾಗಿರುವದಿಲ್ಲ, ಆದರೆ ಮಾನವತಾವಾದಿಯ ವಿಶ್ಲೇಷಕನೂ ಆಗಿರುತ್ತಾನೆ. ದೇವನೂರ ಮಹಾದೇವರ ಮೌಲಿಕತ್ವವೂ ಪ್ರತಿಯೊಂದು ಸ್ತರದಲ್ಲಿ ಕಾಣಬರುತ್ತದೆ. ಚೆನ್ನನೂ ಆಕಸ್ಮಿಕವಾಗಿ ಮಾಯವಾಗಿದ್ದಾನೆ; ಈ ಅಂತಃಸೂತ್ರದಲ್ಲಿಯ ಸ್ಫೋಟಕತ್ವವನ್ನು ಅವರು ಅತ್ಯಂತ ಕಡಿಮೆ ವರ್ಣನೆಯಿಂದ, ಮಿತ ಭಾಷೆಯಲ್ಲಿ ಮತ್ತು ಸಂಯಮದಿಂದ ವ್ಯಕ್ತ ಮಾಡಿದ್ದಾರೆ. ಅವನ ಕೊಲೆಯಾದ ಬಳಿಕ ಅವನು ಎಲ್ಲಾದರೂ ಓಡಿಹೋಗಿರಬಹುದೇ ಎಂದು ಎಲ್ಲೆಲ್ಲಿಂದಲೋ ವದಂತಿಗಳು ಬರುತ್ತವೆ. ಅವನು ಹೆಸರು ಮತ್ತು ಜಾತಿಯನ್ನು ಬದಲಾಯಿಸಿ ಮುಂಬೈಯಲ್ಲಿ ಮಹತ್ವದ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾಗವು ಸರ್ವ ಸಾಧಾರಣ ಪಾತಳಿಯಲ್ಲಿ ವಿಡಂಬನೆಯ ಕೆಲಸ ಮಾಡುತ್ತದೆ. ಆದರೆ ಅವನ ಖಿನ್ನ, ಅಸಹಾಯಕ ತಾಯಿ–ತಂದೆಯರು ಮಾತ್ರ ಅವನನ್ನು ಭೇಟಿಯಾಗಲು ಎಂದಾದರೂ ಹೋಗೋಣ ಎಂದೇ ಸ್ವಪ್ನ ರಂಜನೀಯವಾದ ಮಾತು ಆಡುತ್ತಾರೆ.

ಈ ಚಿಕ್ಕ ಪ್ರಸಂಗದ ಮೂಲಕ ದೇವನೂರ ಅವರು ದಲಿತರ ಉದಾಸ ಮತ್ತು ನಿಸತ್ತ್ವ ಬದುಕಿನ ಅತ್ಯಂತ ಯಾತನಾಮಯ ಪರಿಣಾಮವನ್ನು ಅಪರಿಮಿತ ದಮನ ಕಥನ ತಂತ್ರದ ಮೂಲಕ ರೂಪಿಸುತ್ತಾರೆ. ಇದು ದೇವನೂರ ಮಹಾದೇವ ಅವರ ಕಾದಂಬರಿಕಾರರಾಗಿ ಗುಣಾತ್ಮಕತೆಯ ಉತ್ಕರ್ಷಬಿಂದು ಎನ್ನಲಡ್ಡಿಯಿಲ್ಲ. ವಿಷಾದದ ಇಷ್ಟು ಆಳವಾದ ಅನುಭವ ಕಥನ ಸಾಹಿತ್ಯದಲ್ಲಿ ಅಪರೂಪಕ್ಕೆ ಓದಲು ಸಿಗುತ್ತದೆ.

ಈ ಲೇಖಕನಿಗೆ ಜಾತಿಯ ಸಂಘರ್ಷದಲ್ಲಾಗಲಿ, ವರ್ಗ ಕಲಹದಲ್ಲಾಗಲಿ ಆಸಕ್ತಿಯಿಲ್ಲ. ಮುಖ್ಯ ಪ್ರವಾಹದಿಂದ ಬೇರ್ಪಟ್ಟ ಸವರ್ಣ, ದಲಿತ, ಸ್ತ್ರೀ–ಪುರುಷ, ಅಗಸೆಯ ಹೊರಗಿನ ಅಥವಾ ಒಳಗಿನ ಎಲ್ಲ ಪಾತ್ರಗಳಿಗೆ ದುರ್ಭಾಗ್ಯದ ಜೀವನವನ್ನು ಸಾಗಿಸಬೇಕಾಗುತ್ತದೆ ಎಂಬ ವಿಶಾಲ ದೃಷ್ಟಿಯನ್ನು ಓದುಗನಿಗೆ ತಂದುಕೊಡುವುದರಲ್ಲಿ ‘ಕುಸುಮಬಾಲೆ’ಯ ಯಶಸ್ಸು ಅಡಗಿದೆ. ಇಂಥ ರೋಗಗ್ರಸ್ತ ವಾತಾವರಣದಿಂದಾಗಿ ಅದರಲ್ಲಿ ವ್ಯವಹರಿಸುವ ಬದುಕಿಗೆ ವಕ್ರ ಆಕಾರ ಪ್ರಾಪ್ತವಾಗುತ್ತದೆ.

ಜಾತಿ ಭೇದವನ್ನು ತಾವು ಒಪ್ಪುವದಿಲ್ಲ ಎನ್ನುವ ಬ್ರಾಹ್ಮಣ ಮಧ್ವಾಚಾರ್ಯ ಗುರು ಮೈಸೂರಿನ ಒಬ್ಬ ಬ್ರಾಹ್ಮಣ ತರುಣಿಯು ದಲಿತ ಯುವಕನೊಂದಿಗೆ ಮದುವೆ ಮಾಡಿಕೊಂಡಿದ್ದಕ್ಕೆ ನಿಷೇಧ ವ್ಯಕ್ತ ಮಾಡುತ್ತಾರೆ. ಅದೇ ಕಾಲಕ್ಕೆ ಅವನ ಸ್ವಂತ ಮಗಳು ಮೂವತ್ತರ ವಯಸ್ಸಿನವಳಾಗಿದ್ದರೂ, ಲಗ್ನ ಮಾಡುವ ಮುನ್ನ ಜಾತಿಯ ವರನನ್ನೇ ಹುಡುಕಲು ತಿಳಿಸುತ್ತಾರೆ. ಯಾಡೇ ಗೌಡನಂಥವರು ಮೋಸ ಮತ್ತು ಚಾಣಾಕ್ಷತನದಿಂದಾಗಿ ದರ್ಪಿಷ್ಟರಾಗಿಬಿಡುತ್ತಾರೆ. ಗುರುಸಿದ್ಧ ಮಾವನಂಥವರು ಬೂಟಾಟಿಕೆ ಮತ್ತು ನಿರ್ಲಜ್ಜ ಚಾಲಾಕಿತನದಿಂದ ಬದುಕುತ್ತಿರುತ್ತಾರೆ. ತುರಮ್ಮಾ, ಕೆಂಪಿ ಮತ್ತು ಈರಿಯಂತಹ ಹೆಂಗಸರು ಮೂಢನಂಬಿಕೆ, ಮಾಟ ಮಂತ್ರಗಳ ಸಹಾಯದಿಂದ ತಾಳಿ ಉಳಿಯುತ್ತಾರೆ.

ನಾಗರಾಜ ಮಾಸ್ತರನಂತಹ ದಲಿತ ಮುಖಂಡರು ಧೂರ್ತತನದಿಂದ ತಮ್ಮ ನಾಯಕತ್ವವನ್ನು ಉಳಿಸಿಕೊಳ್ಳುತ್ತಾರೆ. ಅಮಾಸನು ಹೊಟ್ಟೆ ತುಂಬಿಸಿಕೊಳ್ಳಲು ಹೊರಗೆ ಇಟ್ಟ ಹೆಂಗಸರ ಮುಟ್ಟಿನ ಸೀರೆಯನ್ನು ಕದ್ದೊಯ್ದು ಮಾರುತ್ತಾನೆ. ಅವನ ತಲೆಯಲ್ಲಿ ಊರ ಹೆಂಗಸರ ಮುಟ್ಟಿನ ಅವಧಿಯ ಕ್ಯಾಲೆಂಡರ್‌ ಇರುತ್ತದೆ. ದಲಿತ ಚಳವಳಿಯ ಆಂದೋಲಕರ ಡಾಂಭಿಕತನ, ಮತ್ಸರ ಮತ್ತು ಅನೈತಿಕ ವರ್ತನೆಯನ್ನು ದೇವನೂರ ಮಹಾದೇವರು ಎಷ್ಟು ತಟಸ್ಥವಾಗಿ ಮತ್ತು ಕಳಕಳಿಯಿಂದ ತರಾಟೆಗೆ ತೆಗೆದುಕೊಳ್ಳುತ್ತಾರೆ ಎಂದರೆ, ಆ ಶೈಲಿಯು ಮರಾಠಿ ವಾಚಕರಿಗೆ ಹೊಸದು ಮತ್ತು ಶ್ರೇಷ್ಠ ದರ್ಜೆಯದು ಎನಿಸುವದರಲ್ಲಿ ಎರಡು ಮಾತಿಲ್ಲ.

ರಾಜಶ್ರೀ ಜಯರಾಮ ಅವರು ಸಂಪೂರ್ಣ ಕಥನ ತಂತ್ರವನ್ನು ಯಥಾವತ್ತಾಗಿ ಮರಾಠಿಗೆ ತಂದಿದ್ದಾರೆ. ಕಾದಂಬರಿಯ ಉಪೋದ್ಘಾತದಲ್ಲಿ ಅಕ್ಕಮ್ಮನ ದುರ್ದೈವದ ಭೂತಕಾಲವನ್ನು ಮಂಡಿಸಿದ ಬಳಿಕ ಅಲ್ಲಮಪ್ರಭುವಿನ ‘ಎಲ್ಲಿಂದ ಎಲ್ಲಿಗೆ ಸಂಬಂಧವಯ್ಯಾ’ ಎಂಬ ಶ್ರೇಷ್ಠ ವಚನದಿಂದ ಕಾದಂಬರಿಯು ಆರಂಭಗೊಳ್ಳುತ್ತದೆ. ಈ ವಚನದ ಪ್ರಭಾವ ಕಾದಂಬರಿಯ ಕೊನೆಯವರೆಗೆ ನೆನಪಾಗುತ್ತಲೇ ಇರುತ್ತದೆ; ಅಷ್ಟು ಅದು ಹೃದಯಸ್ಪರ್ಶಿಯಾಗಿದೆ. ನಮ್ಮ ದೇಶದಲ್ಲಿ ವಿದ್ರೋಹದ ಸನಾತನ ಪರಂಪರೆ ಸಹ ಇದೆ. ಲೇಖಕನ ಮೂಲ ಸಹ ಈ ಪ್ರಾಚೀನ ಪರಂಪರೆಯಲ್ಲಿದೆ.

ಆರಂಭಕ್ಕೆ ಊರ ಹೊರಗೆ ಕತ್ತಲೆಯಲ್ಲಿ ಸೇರಿದ ಜೋತೆಮ್ಮಂದಿರ (ಮನೆಯಲ್ಲಿ ಉರಿಸಿದ ದೀಪಗಳು ರಾತ್ರಿಯ ಸಮಯದಲ್ಲಿ ಒಂದೆಡೆ ಸೇರುತ್ತವೆ ಎಂಬ ನಂಬಿಕೆಯಿದೆ, ಈ ಜ್ಯೋತಿಗಳ ಸಭೆಯನ್ನು ಇಲ್ಲಿ ಲೇಖಕ ಘಟನೆ ನಡೆದಂತೆ ವಿವರಿಸಲು ಬಳಸುತ್ತಾನೆ) ಒಗಟಿನ ದೇಶಿ ಭಾಷೆಯಲ್ಲಿ ಕಾದಂಬರಿಯ ಆಶಯ ಸೂತ್ರವು ಅನಾವರಣಗೊಳ್ಳುತ್ತದೆ. ಈ ಜೋತೆಮ್ಮಗಳು ಬೇರೆ ಬೇರೆ ಸ್ತರದಲ್ಲಿಯ ಮನೆಯವರಾಗಿದ್ದೂ ಅಭಾಗಿಗಳಾಗಿದ್ದಾರೆ. ಅವರ ಒರಟು ಶೈಲಿಯಲ್ಲಿ ಒಬ್ಬ ಅಭಾಗಿನಿಯ ಕಥೆಯನ್ನು ಹೇಳುತ್ತಾ ಇರುತ್ತಾರೆ. ದುಃಖದ ಬಹುಸ್ತರೀಯ ಈ ಸ್ತ್ರೋತವು ‘ಕುಸುಮಬಾಲೆ’ಯಲ್ಲಿಯ ಕಠೋರ ವಾಸ್ತವದ ಹಿನ್ನೆಲೆಯನ್ನು ಕೊನೆಯವರೆಗೆ ಉಳಿಸಿಕೊಳ್ಳುತ್ತದೆ.

ದೇವನೂರ ಮಹಾದೇವ ಅವರು ತಮ್ಮ ಗದ್ಯ ಕಥನಕ್ಕಾಗಿ ಸತತ ಮೌಖಿಕತೆಯ, ಜಾನಪದದ ದೇಶಿ ಶೈಲಿಯನ್ನು ಅತ್ಯಂತ ಪ್ರಭಾವಶಾಲಿಯಾಗಿ ಬಳಸಿದ್ದಾರೆ. ನುಡಿಗಟ್ಟು, ಬಯ್ಗಳು, ನಾಣ್ಣುಡಿಗಳ ಭಾಷಿಕ ಸೌಂದರ್ಯವು ಮೂಲ ಕನ್ನಡ ನಂಜನಗೂಡಿನ ಆಡುಮಾತಿನಲ್ಲಿ ಅದೆಷ್ಟು ಸೌಂದರ್ಯ ಪೂರ್ಣವಾಗಿರಬಹುದು ಎಂಬ ಕಿಂಚಿತ್ತಾದರೂ ಕಲ್ಪನೆಯು ರಾಜಶ್ರೀ ಜಯರಾಮ ಅವರ ಕೋಲ್‍ಹಾಪುರದ ಆಡುಮಾತಿನಲ್ಲಿ ಬರುತ್ತದೆ. ‘ಉದಾಸೀನ ತುಂಬಿದ ಕತ್ತಲೆ’, ‘ಕಣ್ಣೊಳಗಿನ ಒಣಗಿದ ತೇವ’ ಈ ಪ್ರತಿಮೆಗಳ ಸಾಮರ್ಥ್ಯವು ಭಾಷಾಂತರದಲ್ಲೂ ಅರಿವಿಗೆ ಬರುವಷ್ಟು ಅದು ಮೂಲ ಆಡುನುಡಿಯಲ್ಲಿ ಏಕ ಜೀವಗೊಂಡಿರಬೇಕು. ಹಿಂದೆ ಯಾವಾಗಲೋ ಅರಮನೆಯಲ್ಲಿರುವ ಮಂಚವು, ಅದರ ಮೇಲೆ ಸೋಮಪ್ಪ ಮಲಗಿರುವಾಗ ತನ್ನ ಅದ್ಭುತ ಪ್ರವಾಸವನ್ನು ಹೇಳುತ್ತದೆ. ಧ್ವನ್ಯಾರ್ಥ–ವ್ಯಂಗ್ಯಾರ್ಥದ ಕಥಾನಕದ ವಿವಿಧ ಮಗ್ಗಲುಗಳಲ್ಲಿ ವ್ಯಕ್ತಮಾಡುತ್ತದೆ. ಮತ್ತು ಕಥಾನಕ ಸಹ ಅಷ್ಟೇ ವೇಗದಿಂದ ಮುಂದೆ ಸರಿಯುತ್ತದೆ. ಹೀಗೆ ಅಸಲೀ ಜಾನಪದ ಕಥನ ಶೈಲಿಯ ಐತಿಹಾಸಿಕ ಕಾಲವನ್ನು ಕಾದಂಬರಿಯ ಕಾಲದೊಂದಿಗೆ ಜೋಡಿಸುವ ಮೌಲಿಕ ಕಥನ ತಂತ್ರವನ್ನು ಲೇಖಕನು ಖಾಸಾ ದೇಸಿ ಪರಂಪರೆಯಂತೆ ಬಳಸಿದ್ದಾನೆ.

ಹಿಂದೂಸ್ತಾನದ ಸಮಾಜದಲ್ಲಿ ದಲಿತತ್ವವು ಶಾಶ್ವತ ಸ್ವರೂಪದ ಅವಸ್ಥೆಯಾಗಿ ಅಥವಾ ಮೌಲ್ಯವಾಗಿ ಇಲ್ಲ. ಇಂದಲ್ಲ ನಾಳೆ ಅದನ್ನು ಮುಗಿಸಲು ನಾವು ಕಟಿಬದ್ಧರಾಗಿದ್ದೇವೆ. ದಲಿತತ್ವ ಹೋಗಬಹುದು. ಆದರೆ ದಲಿತ ಸಂಸ್ಕೃತಿಯನ್ನು ಪೂರ್ತಿ ಹೋಗಲಾಡಿಸುವುದು ದುಸ್ತರವಾಗಬಹುದು– ಎನ್ನುವುದು ಮರಾಠಿ ಓದುಗನಿಗೆ ಕಳೆದ ಅರ್ಧ ಶತಕದ ಸಾಮಾಜಿಕ ಸ್ಥಿತ್ಯಂತರವನ್ನು ಕಂಡು ಗಮನಕ್ಕೆ ಬಂದಿದೆ. ಈ ಪರಿಸ್ಥಿತಿಯೂ ಸರಿಯಾಗಿ ಗ್ರಹಿಕೆಗೆ ಬರಲು ದೇವನೂರ ಮಹಾದೇವ ಅವರ ‘ಕುಸುಮಬಾಲೆ’ಯು ತುಂಬ ಉಪಯುಕ್ತವಾಗಬಲ್ಲದು.