ಜೈಲಿನಲ್ಲಿ ಕಳೆದ ವರ್ಷಗಳನ್ನು ಯಾರು ಮರಳಿಸುತ್ತಾರೆ? -ಸಿ. ಎನ್. ರಾಮಚಂದ್ರನ್

jail
ಅಮೆರಿಕಾದ ಮಸಾಚುಸೆಟ್ಸ್ ಪ್ರಾಂತ್ಯದಲ್ಲಿ, 1980ರಲ್ಲಿ ಕ್ಯಾಥರೀನ್ ಆರ್. ಬ್ರೌ ಎಂಬ ಮಹಿಳೆಯ ಕೊಲೆಯಾಗುತ್ತದೆ. ಮೂರು ವರ್ಷಗಳ ನಂತರ ಪೋಲೀಸರಿಗೆ ಅಪರಾಧಿಯು ಸಿಕ್ಕಿ, ನ್ಯಾಯಾಲಯದಲ್ಲಿ ಅವನು ಕೊಲೆ ಮಾಡಿದನೆಂಬುದು ಸಾಬೀತಾಗಿ ಅವನಿಗೆ ಆಜೀವ ಕಾರಾಗೃಹದ ಶಿಕ್ಷೆಯಾಗುತ್ತದೆ. ಆದರೆ ಅವನು ನಿರಪರಾಧಿಯೆಂದು ನಂಬುವ ಅವನ ಅಕ್ಕ ನ್ಯಾಯಶಾಸ್ತ್ರವನ್ನು ಅಧ್ಯಯನ ಮಾಡಿ, ಕೋರ್ಟ್‍ನಲ್ಲಿ ಮರು ವಿಚಾರಣೆಗೆ ಆಗ್ರಹಿಸುತ್ತಾಳೆ. ಮರು ವಿಚಾರಣೆಯಲ್ಲಿ ಪೋಲೀಸರು ಡಿಎನ್‍ಎ ಪರೀಕ್ಷೆಯನ್ನೂ ತಿರುಚಿದ್ದರೆಂಬುದು ಸಾಬೀತಾಗಿ, ಅವನು ನಿರಪರಾಧಿಯೆಂದು ನ್ಯಾಯಾಲಯವು ತೀರ್ಮಾನಿಸುತ್ತದೆ. 20 ವರ್ಷಗಳ ನಂತರ ಆ ವ್ಯಕ್ತಿ, ಕೆನೆತ್ ವಾಟರ್ಸ್, ಜೈಲಿನಿಂದ ಹೊರಗೆ ಬಂದಾಗ ನಡೆದ ಪತ್ರಿಕಾ ಗೋಷ್ಠಿಯಲ್ಲಿ ‘ಈ ಇಪ್ಪತ್ತು ವರ್ಷಗಳನ್ನು ನನ್ನ ತಮ್ಮನಿಗೆ ಯಾರು ಮರಳಿಸುತ್ತಾರೆ?’ ಎಂದು ಕೆನೆತ್‍ನ ಅಕ್ಕ, ಬೆಟ್ಟಿ ವಾಟರ್ಸ್ ಅಳುತ್ತಾ ಪ್ರಶ್ನಿಸುತ್ತಾಳೆ.
ಈ ಬಗೆಯ ಪ್ರಶ್ನೆಗಳನ್ನು ಇತ್ತೀಚೆಗೆ ನಾವು ಭಾರತದಲ್ಲಿ ಮತ್ತೆ ಮತ್ತೆ ಕೇಳುತ್ತಿದ್ದೇವೆ: ಮಾಲೆಗಾವ್ ಸ್ಫೋಟದ ಸಂದರ್ಭದಲ್ಲಿ ಬಂಧಿಸಲ್ಪಟ್ಟು, ಹತ್ತು ವರ್ಷಗಳ ಜೈಲುವಾಸದ ನಂತರ ನಿರಪರಾಧಿಗಳೆಂದು ಕೆಲವು ವಾರಗಳ ಹಿಂದೆ ಬಿಡುಗಡೆಯಾದ ಎಂಟು ಮುಸ್ಲಿಮ್ ತರುಣರು; ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಬಂಧಿಸಲ್ಪಟ್ಟು ನಾಲ್ಕೂವರೆ ವರ್ಷಗಳ ಜೈಲುವಾಸದ ನಂತರ ನಿರಪರಾಧಿಗಳೆಂದು ಬಿಡುಗಡೆಯಾದ ಹುಬ್ಬಳ್ಳಿಯ ಮುಸ್ಲಿಮ್ ಯುವಕರು; ಎಮರ್ಜೆನ್ಸಿ ಕಾಲದಲ್ಲಿ ವಿನಾ ಕಾರಣ ಬಂಧಿಸಲ್ಪಟ್ಟ ಸಾವಿರಾರು ನಿರಪರಾಧಿಗಳು (ನಕ್ಸಲೈಟ್ ಎಂಬ ಸಂಶಯದ ಮೇಲೆ ಬಂಧಿಸಲ್ಪಟ್ಟ ಕೇರಳದ ರಾಜನ್ ಎಂಬ ವಿದ್ಯಾರ್ಥಿ ಜೈಲಿನಲ್ಲಿಯೇ ಕೊಲ್ಲಲ್ಪಟ್ಟನು); ಇತ್ಯಾದಿ. ಇಂತಹ ಉದಾಹರಣೆಗಳೊಡನೆ, ಕೇವಲ ಸಂಶಯದ ಮೇಲೆ ಕರ್ನಾಟಕದ/ ಇತರ ರಾಜ್ಯಗಳ ಜೈಲುಗಳಲ್ಲಿ ವರ್ಷಗಟ್ಟಲೆ ಕೊಳೆಯುತ್ತಿರುವ ಸುಮಾರು 1-1.50 ಲಕ್ಷ ವಿಚಾರಣಾಧೀನ (ಅಂಡರ್ ಟ್ರಯಲ್) ಕೈದಿಗಳನ್ನೂ ಸೇರಿಸಿದರೆ, ‘ನಿರಪರಾಧಿಯೆಂದು ಘೋಷಿಸಿದ ಮಾತ್ರಕ್ಕೆ ನ್ಯಾಯ ದೊರಕಿದಂತಾಗುತ್ತದೆಯೆ?’ ಎಂಬ ಪ್ರಶ್ನೆ ಎಲ್ಲೆಡೆಯೂ ನಮ್ಮನ್ನು ತಿವಿಯುತ್ತದೆ.
ವ್ಯಕ್ತಿಯೊಬ್ಬನು/ಳು ಸಂಶಯದ ಮೇಲೆ ಬಂಧಿಸಲ್ಪಟ್ಟು ಅನೇಕ ವರ್ಷಗಳ ನಂತರ ನಿರಪರಾಧಿಯೆಂದು ಬಿಡುಗಡೆಯಾಗಿ ಸೆರೆಮನೆಯಿಂದ ಹೊರಗೆ ಬರುವ ವೇಳೆಗೆ ಅವನ/ ಅವಳ ಕೆಲಸ, ವೃತ್ತಿ, ಸಾಂಸಾರಿಕ ಜೀವನ, ಹಣ ಎಲ್ಲವನ್ನೂ ಅವನು/ಳು ಕಳೆದುಕೊಂಡಿರುತ್ತಾನೆ/ಳೆ. ನಿರಪರಾಧಿಯೆಂದು ಕೋರ್ಟ್ ತೀರ್ಮಾನಿಸಿದ್ದರೂ ಅವನ/ಳ ಕುಟುಂಬವೂ ಸೇರಿದಂತೆ ಇಡೀ ಸಮಾಜ ಅವನನ್ನು/ ಅವಳನ್ನು ಸಂಶಯದಿಂದಲೇ ನೋಡುತ್ತದೆ. ಬಂಧನಕ್ಕೆ ಮೊದಲು ಇದ್ದಂತಹ ಬದುಕು ಅವರಿಗೆ ಕನಸಾಗುತ್ತದೆ. ಜೈಲಿನಲ್ಲಿ ಕಳೆದ ಕಾಲವನ್ನಂತೂ ಅವರಿಗೆ ಯಾರೂ ಮರಳಿಸಲಾಗುವುದಿಲ್ಲ; ಆದರೆ ಆರ್ಥಿಕವಾಗಿ ಅಥವಾ ಮತ್ತಾವುದಾದರೂ ರೂಪದಲ್ಲಿ ಅವರಿಗೆ ಪರಿಹಾರ ಸಿಗುವ ಸಾಧ್ಯತೆಗಳಿವೆಯೆ?
ಅಮೆರಿಕಾದ 51 ಪ್ರಾಂತ್ಯಗಳ ಪೈಕಿ 21 ಪ್ರಾಂತ್ಯಗಳಲ್ಲಿ ಪರಿಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನುಗಳಿಲ್ಲ; ಆದರೆ, ನ್ಯೂಯಾರ್ಕ್ ಸೇರಿದಂತೆ ಉಳಿದ ಪ್ರಾಂತ್ಯಗಳಲ್ಲಿ ಪರಿಹಾರಕ್ಕೆ ಸಂಬಂಧಿಸಿದಂತೆ ಭಿನ್ನ ಭಿನ್ನ ಕಾನೂನುಗಳಿವೆ. ಕೆನಡಾದ ಯಾವ ಪ್ರಾಂತ್ಯದಲ್ಲಿಯೂ ತನ್ನ ತಪ್ಪಿಲ್ಲದೆ ಶಿಕ್ಷೆಗೆ ಒಳಗಾಗುವ ವ್ಯಕ್ತಿಗೆ ಪರಿಹಾರ ಕೊಡುವ ಕಾನೂನು ಇಲ್ಲ; ಆದರೆ ನಿರಪರಾಧಿಯೆಂದು ಘೋಷಿಸಲ್ಪಟ್ಟ ವ್ಯಕ್ತಿಯು ಅನಂತರ ತಾನೇ ಆಯಾಯಾ ರಾಜ್ಯ ಸರಕಾರಗಳ ವಿರುದ್ಧ ‘ನಿರ್ಲಕ್ಷ್ಯದಿಂದ ಕೂಡಿದ ತನಿಖೆ,’ ಅಥವಾ ‘ದುರುದ್ದೇಶದಿಂದ ಕೂಡಿದ ತನಿಖೆ’ ಎಂದು ಸಿವಿಲ್ ಮೊಕದ್ದಮೆಯನ್ನು ನ್ಯಾಯಾಲಯಗಳಲ್ಲಿ ಹೂಡಿ ಗೆಲ್ಲಬೇಕಾಗುತ್ತದೆ.
ಭಾರತದಲ್ಲಿಯೂ ನೇರವಾಗಿ ಪರಿಹಾರಕ್ಕೆ ಸಂಬಂಧಿಸಿದಂತೆ ಯಾವ ಕಾನೂನೂ ಇಲ್ಲ. ಆದರೆ, ಆಗಿಂದಾಗ್ಗೆ ಸುಪ್ರೀಮ್ ಕೋರ್ಟ್ ನೀಡುವ ತೀರ್ಪುಗಳು ಮೂಲಭೂತ ಹಕ್ಕುಗಳಿಗೆ ಧಕ್ಕೆಯುಂಟಾದಾಗ ಸಂಬಂಧಿಸಿದ ನ್ಯಾಯಾಲಯಗಳೇ ಪರಿಹಾರವನ್ನೂ ನಿರ್ಧರಿಸಬಹುದು ಎಂಬುದನ್ನು ದೃಢಪಡಿಸಿವೆ. ಮೊಟ್ಟ ಮೊದಲ ಪರಿಹಾರವನ್ನು ನ್ಯಾಯಾಲಯವು ನಿರ್ಧರಿಸಿದ್ದು ರುಡಾಲ್ ಸಹ (Rudal Sah) ಮೊಕದ್ದಮೆಯಲ್ಲಿ (1983). ಪತ್ನಿಯನ್ನು ಕೊಂದ ಆಪಾದನೆಯ ಮೇಲೆ 14 ವರ್ಷಗಳ ಕಾಲ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸಿದ ನಂತರ ನಿರಪರಾಧಿಯೆಂದು ಬಿಡುಗಡೆಯಾದಾಗ, ಅವನು ತನಗಾದ ಅನ್ಯಾಯಕ್ಕಾಗಿ ಪರಿಹಾರ ಬೇಕೆಂದು ಬಿಹಾರ್ ಸರಕಾರದ ವಿರುದ್ಧ ಮೊಕದ್ದಮೆಯನ್ನು ಹೂಡಿದನು. ‘ಸಂವಿಧಾನದ 32ನೆಯ ಕಲಮಿನನ್ವಯ ಅವನ ಬಂಧನ ಕಾನೂನಿಗೆ ವಿರುದ್ಧ ಮತ್ತು ಸರಕಾರ ಅವನಿಗೆ ಪರಿಹಾರ ನೀಡಬೇಕು’ ಎಂದು ಸುಪ್ರೀಮ್ ಕೋರ್ಟ್ ತೀರ್ಪು ನೀಡಿತು. ಇಲ್ಲಿ ಪರಿಹಾರ ಅಗಣ್ಯವಾಗಿದ್ದರೂ, ನಿರಪರಾಧಿಗಳಿಗೆ ಪರಿಹಾರ ನೀಡುವುದು ಸರಕಾರದ ಕರ್ತವ್ಯ ಎಂಬ ತತ್ವ ಸ್ಥಾಪಿಸಲ್ಪಟ್ಟಿತು; ಆದುದರಿಂದ ‘ಸರಕಾರದ ಹೊಣೆಗಾರಿಕೆ ಮತ್ತು ಪರಿಹಾರ’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಇದೊಂದು ಮಹತ್ವದ ಮೈಲಿಗಲ್ಲು. ಅನಂತರ, ನೀಲಬತಿ ಬೆಹ್ರಾ ಮೊಕದ್ದಮೆಯ (1993) ಸಂದರ್ಭದಲ್ಲಿ ಪರಿಹಾರವನ್ನು ನಿರ್ಧರಿಸುವ ಕಾನೂನಾತ್ಮಕ ಚೌಕಟ್ಟನ್ನು ಸುಪ್ರೀಮ್ ಕೋರ್ಟ್ ಕಟ್ಟಿಕೊಟ್ಟಿತು. ಒರಿಸ್ಸಾ ಪ್ರಾಂತ್ಯದ ಒಂದು ನಗರದಲ್ಲಿ ನೀಲಬತಿ ಎಂಬ ಮಹಿಳೆಯ 22 ವರ್ಷದ ಮಗನನ್ನು ಸಂಶಯದ ಮೇಲೆ ಪೋಲೀಸರು ಬಂಧಿಸಿದರು; ಮಾರನೆಯ ದಿನ ಅವನ ಶವ ರೇಲ್ವೇ ಹಳಿಗಳ ಮೇಲೆ ಬಿದ್ದಿತ್ತು. ಈ ಕೃತ್ಯಕ್ಕೆ ಸರಕಾರವೇ ಹೊಣೆಯೆಂದು ಒರಿಸ್ಸಾ ಸರಕಾರವನ್ನು ಪ್ರತಿವಾದಿಯಾಗಿಸಿ, ನೀಲಬತಿ ಮೊಕದ್ದಮೆ ಹೂಡಿದಳು. ಅನೇಕ ವರ್ಷಗಳ ಕಾಲ ನಡೆದ ಈ ವಿಚಾರಣೆ ಕೊನೆಗೆ ಸುಪ್ರೀಮ್ ಕೋರ್ಟ್ ತಲಪಿ, ಅಲ್ಲಿ ಸರಕಾರವೇ ಈ ಸಾವಿಗೆ ಹೊಣೆ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪುಕೊಟ್ಟಿತು. ಈ ಸಂದರ್ಭದಲ್ಲಿ ಅನೇಕ ಪ್ರಮುಖ ತತ್ವಗಳನ್ನು ನ್ಯಾಯಾಲಯವು ಪ್ರತಿಷ್ಠಾಪಿಸಿತು: (1) ಸಂವಿಧಾನದ 21ನೆಯ ಕಲಮಿನನ್ವಯ ಪ್ರತಿಯೊಬ್ಬ ಪ್ರಜೆಗೂ ಇರುವ ಮೂಲಭೂತ ಹಕ್ಕುಗಳಿಗೆ ಧಕ್ಕೆಯುಂಟಾದಾಗ ಸೂಕ್ತ ಪರಿಹಾರವನ್ನು ಕೊಡುವುದು ಸರಕಾರದ/ಸರಕಾರಗಳ ಕರ್ತವ್ಯ. (2) ಇನ್ನೂ ಮುಖ್ಯವಾಗಿ, ಪೋಲೀಸ್, ಸೇನೆ, ಅಧಿಕಾರಿಗಳು ಇತ್ಯಾದಿ ತನ್ನ ಪ್ರತಿನಿಧಿಗಳ (ಏಜೆಂಟ್ಸ್) ಮೂಲಕ ಘಟಿಸುವ ಅಪರಾಧಗಳಿಗೆ ಸರಕಾರಗಳೇ ಹೊಣೆಯಾಗುತ್ತವೆ. (3) ಅತಿ ಮುಖ್ಯವಾಗಿ, ಸರಕಾರಗಳಿಂದ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಜೆಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಆಯಾಯಾ ಸರಕಾರಗಳಿಗೆ ‘Sovereign Immunity’ ’ (ರಾಜನಿಗಿರುವ / ಇಂದು ರಾಷ್ಟ್ರಗಳಿಗಿರುವ ರಕ್ಷಣೆ) ಎಂಬ ಸೂತ್ರದ ಆಧಾರದ ಮೇಲೆ ರಕ್ಷಣೆ ಸಿಗುವುದಿಲ್ಲ.
ವಿಶ್ವಸಂಸ್ಥೆಯು ರೂಪಿಸಿರುವ ‘ಯೂನಿವರ್ಸಲ್ ಡೆಕ್ಲರೇಷನ್ ಆಫ್ ಹ್ಯೂಮನ್ ರೈಟ್ಸ್’ನ 10ನೆಯ ಕಲಮು ಹೀಗೆ ಘೋಷಿಸುತ್ತದೆ: “ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಮೂಲಭೂತ ಹಕ್ಕು-ಬಾಧ್ಯತೆಗಳಿಗೆ ಚ್ಯುತಿಯುಂಟು ಮಾಡುವ ಕ್ರಿಮಿನಲ್ ಮೊಕದ್ದಮೆಗಳ ಸಂದರ್ಭಗಳಲ್ಲಿ ಸ್ವತಂತ್ರ ಹಾಗೂ ಪೂರ್ವಗ್ರಹಗಳಿಲ್ಲದ ಸಂಸ್ಥೆಯಿಂದ ನಿಷ್ಪಕ್ಷಪಾತವಾದ ಸಾರ್ವಜನಿಕ ವಿಚಾರಣೆಯನ್ನು ಪಡೆಯುವ ಹಕ್ಕಿದೆ.” ಇದೇ ನೆಲೆಯಲ್ಲಿ ಎಲ್ಲಾ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿಯುವ ‘ಇಂಟನ್ರ್ಯಾಶನಲ್ ಕವ್‍ನಂಟ್ ಆನ್ ಹ್ಯೂಮನ್ ಸಿವಿಲ್ ಅಂಡ್ ಪೊಲಿಟಿಕಲ್ ರೈಟ್ಸ್,’ ‘ಯೂರೋಪಿಯನ್ ಕನ್ವೆನ್ಶ್ವನ್ ಆನ್ ಹ್ಯೂಮನ್ ರೈಟ್ಸ್,’ ‘ ಅಮೆರಿಕನ್ ಕನ್ವೆನ್ಶನ್ ಆನ್ ಹ್ಯೂಮನ್ ರೈಟ್ಸ್,’ ಇತ್ಯಾದಿ ವಿಶ್ವಾದ್ಯಂತ ಅನೇಕ ತತ್ವಗಳು ಜಾರಿಯಲ್ಲಿವೆ. ಮುಖ್ಯವಾಗಿ ‘ಸಾಮಾಜಿಕ ಹಾಗೂ ರಾಜಕೀಯ ಹಕ್ಕುಗಳನ್ನು ಕುರಿತ ಅಂತಾರಾಷ್ಟ್ರೀಯ ಒಪ್ಪಂದ’ಕ್ಕೆ 2007ರಲ್ಲಿ ಭಾರತವೂ ತನ್ನ ಒಪ್ಪಿಗೆಯನ್ನು ಸೂಚಿಸುವ ಸಹಿ ಹಾಕಿದೆ. ಆದರೂ ಧರ್ಮ, ರಾಷ್ಟ್ರ, ಇತ್ಯಾದಿಗಳ ಹೆಸರಿನಲ್ಲಿ ಸುಳ್ಳು ಆಪಾದನೆಗಳು, ಸಂಶಯಾಧಾರಿತ ಬಂಧನ, ದಶಕಗಳ ಪರ್ಯಂತ ವಿಚಾರಣೆ ನಡೆಯದಿರುವುದು ಇತ್ಯಾದಿ ಕಾರಣಗಳಿಂದ ಅಮಾಯಕ ಪ್ರಜೆಗಳು ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ನಾವು ಚಿಂತಿಸಬೇಕಾದದ್ದು ಕೇವಲ ಪರಿಹಾರದ ಪ್ರಶ್ನೆಯಲ್ಲ, ಇಂತಹ ಬರ್ಬರ ಸ್ಥಿತಿ ಒಂದು ನಾಗರಿಕ ರಾಷ್ಟ್ರದಲ್ಲಿ ಏಕೆ ಉದ್ಭವವಾಗುತ್ತದೆ ಎಂಬುದು. ಈ ಪರಿಸ್ಥಿತಿಗೆ ಅನೇಕ ಜಟಿಲ ಕಾರಣಗಳಿದ್ದರೂ ಮುಖ್ಯವಾದ ಕೆಲವನ್ನಾದರೂ ಹೀಗೆ ಗುರುತಿಸಬಹುದು. ಎಲ್ಲಾ ಕಾಲಘಟ್ಟಗಳಲ್ಲಿಯೂ ಎದ್ದು ಕಾಣುವ ಒಂದು ಕಾರಣವೆಂದರೆ, ಪಕ್ಷ ರಾಜಕಾರಣ. ಎಲ್ಲಾ ರಾಜಕೀಯ ಪಕ್ಷಗಳೂ ಅಧಿಕಾರದಲ್ಲಿರುವಾಗ, ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಹಾಗೂ ಬಲಪಡಿಸಿಕೊಳ್ಳಲು ಇತರ ಪಕ್ಷಗಳ/ ತಮ್ಮ ವೈಚಾರಿಕತೆಯನ್ನು ಒಪ್ಪದ ಪ್ರಜೆಗಳನ್ನು ‘ಅನ್ಯ’ರಂತೆ ಕಂಡು ಅವರನ್ನು ಕಲ್ಪಿತ ಕಾರಣಗಳಿಗಾಗಿ ಹಿಂಸಿಸುತ್ತವೆ. ಎರಡನೆಯ ಕಾರಣವೆಂದರೆ, ಯಾವುದೇ ಒಂದು ಸಮಾಜದಲ್ಲಿ ಎಲ್ಲಾ ಸಮುದಾಯಗಳೂ ಭಿನ್ನ ಧರ್ಮ-ವರ್ಣ-ಜಾತಿ-ಆಹಾರ ಪದ್ಧತಿಗಳ ಸಮುದಾಯಗಳನ್ನು ‘ಅನ್ಯ’ರಂತೆ ಕಂಡು, ಅವರನ್ನು ಭೀತಿ-ಸಂಶಯಗಳಿಂದ ನೋಡುವುದು. ದುಷ್ಕೃತ್ಯವೊಂದು ಘಟಿಸಿದಾಗ, ಕೂಡಲೇ ಈ ‘ಅನ್ಯ’ರ ವಿರುದ್ಧ ಸಂಶಯವುಂಟಾಗುತ್ತದೆ; ಈ ಸಂಶಯವನ್ನು ಬೇಜವಾಬ್ದಾರಿಯುತ ಮುದ್ರಣ-ವಿದ್ಯುನ್ಮಾನ ಮಾಧ್ಯಮಗಳು ನಿರ್ಲಜ್ಜೆಯಿಂದ ‘ಸಾಕ್ಷ್ಯ’ವನ್ನಾಗಿಸಿ, ‘ಅಪರಾಧಿ’ಗಳನ್ನು ಕೂಡಲೇ ಬಂಧಿಸುವ ಒತ್ತಡವನ್ನು ಅಧಿಕಾರದಲ್ಲಿರುವ ಸರಕಾರಗಳ ಮೇಲೆ ಹೇರುತ್ತವೆ; ಸರಕಾರಗಳು ಪೋಲೀಸ್-ಗುಪ್ತದಳಗಳಿಗೆ ಈ ಒತ್ತಡವನ್ನು ವರ್ಗಾಯಿಸುತ್ತವೆ ಮತ್ತು ಅವರುಗಳು ಸಮಾಜದಲ್ಲಿರುವ ‘ಅನ್ಯ’ರಲ್ಲಿ ಬಡ-ನಿರಕ್ಷರ ವ್ಯಕ್ತಿಗಳನ್ನು ಬಂಧಿಸುತ್ತಾರೆ; ಬಂಧಿತರು ಅನಿರ್ದಿಷ್ಟಾವಧಿ ಬಂಧನದಲ್ಲಿ ನರಳುತ್ತಾರೆ. ಖೇದದ ಸಂಗತಿಯೆಂದರೆ, ಹೆಚ್ಚಿನ ಸಂದರ್ಭಗಳಲ್ಲಿ ಬಂಧನಕ್ಕೊಳಗಾಗುವವರು ಬಡವರು ಹಾಗೂ ಅನಕ್ಷರಸ್ಥರು. ಇಂದಿನ ನ್ಯಾಯಪದ್ಧತಿಯಲ್ಲಿ ಆರ್ಥಿಕ/ ಅಧಿಕಾರದ ಬಲವಿದ್ದವರು ಮಾತ್ರ ‘ಪ್ರಭಾವಿ’ ವಕೀಲರನ್ನು ನೇಮಿಸಿಕೊಂಡು ನ್ಯಾಯಕ್ಕಾಗಿ ಹೋರಾಡಬಹುದು; ಬೆಳಿಗ್ಗೆ ಒಂದು ನ್ಯಾಯಾಲಯದಿಂದ ಅಪರಾಧಿಯೆಂದು ತೀರ್ಮಾನಿಸಲ್ಪಟ್ಟವನು ಅದೇ ದಿನ ಸಾಯಂಕಾಲದ ಹೊತ್ತಿಗೆ ಮತ್ತೊಂದು ನ್ಯಾಯಾಲಯದಿಂದ ಜಾಮೀನು ಪಡೆಯಬಹುದು –ಆರ್ಥಿಕವಾಗಿ ಪ್ರಬಲವಾಗಿದ್ದರೆ.
ಭಿನ್ನ ಪಕ್ಷ- ಧರ್ಮ-ವರ್ಣ-ವರ್ಗಗಳಿಗೆ ಸೇರಿದವರನ್ನು ‘ಅನ್ಯ’ರಂತೆ ಕಾಣುವುದು ಹಾಗೂ ಅವರ ಬಗ್ಗೆ ನಮ್ಮ ಸುಪ್ತಪ್ರಜ್ಞೆಯಲ್ಲಡಗಿರುವ ಸಂಶಯ-ಅಸಹನೆಗಳೇ ಈ ಬಗೆಯ ಅಮಾನವೀಯ ಪರಿಸ್ಥಿತಿಗೆ ಕಾರಣ ಎಂಬುದು ನಮ್ಮೆಲ್ಲರ ಒಡಲನ್ನೂ ಸುಡಬೇಕಾದ ಸತ್ಯ.
*************