ಜನ ಕಪ್ಪು ಹಣದ ಪೂಜೆಗೆ ನಿಂತಿದ್ದಾರೆ!-ದೇವನೂರ ಮಹಾದೇವ

[ಹಿರಿಯ ಪತ್ರಕರ್ತರಾದ ದಯಾಶಂಕರ ಮೈಲಿಯವರು 12.5.2011ರ ಕನ್ನಡಪ್ರಭ ಪತ್ರಿಕೆಗಾಗಿ ಈ ಹಿಂದೆ ಮಾಡಿದ್ದ ದೇವನೂರ ಮಹಾದೇವ ಅವರ ಸಂದರ್ಶನ ನಮ್ಮ ಮರು ಓದಿಗಾಗಿ… ]

 


ಸ್ವತಃ ರೈತನಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ಸೂಕ್ಷ್ಮ ಸಂವೇದನಶೀಲ ಬರಹಗಾರರಾದ ದೇವನೂರ ಮಹಾದೇವ ಅವರು ಹೋರಾಟಗಾರರು ಕೂಡ. ದಲಿತ ಮತ್ತು ರೈತ ಸಂಘಟನೆಗಳನ್ನು ಹುಟ್ಟು ಹಾಕಿ ಬೆಳೆಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದವರ ಪೈಕಿ ದೇವನೂರ ಮಹಾದೇವರೂ ಒಬ್ಬರು. ಹೀಗೆ ರೈತರು ಮತ್ತು ದಲಿತರ ನೋವಿಗೆ ಈಗಲೂ ಎಲೆಮರೆಕಾಯಿಯಂತೆ ಸ್ಪಂದಿಸುತ್ತಿರುವ ದೇವನೂರ ಅವರು ಮಾನವ ಸಹಜ ಪ್ರೀತಿ ಹಾಗೂ ಪ್ರೇಮವನ್ನು ಶೋಷಿತ ಜನಾಂಗಗಳಿಗೆ ತೋರುವ ಸೌಮ್ಯ ಸಾಹಿತಿ. ಇತ್ತೀಚೆಗೆ ಅವರು ಸಾಹಿತ್ಯಕ್ಷೇತ್ರಕ್ಕೆ ಸಲ್ಲಿಸಿದ ಕಾಯಕಕ್ಕೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಈ ಸಂದರ್ಭದಲ್ಲಿ ದೇವನೂರ ‘ಕನ್ನಡ ಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಸಮಾಜದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತ್ರವಲ್ಲದೆ ಸಮಸ್ಯೆಗಳಿಗೆ ಕಾರಣ, ಅವುಗಳನ್ನು ಬೇರು ಸಮೇತ ಕಿತ್ತು ಹಾಕಬಹುದಾದ ಸಾಧ್ಯತೆಗಳ ಬಗ್ಗೆಯೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಪ್ರಶ್ನೆ; ಇವತ್ತಿನ ಸಮಾಜ, ರಾಜಕಾರಣ ದಿಕ್ಕು ದೆಸೆಯಿಲ್ಲದೇ ಸಾಗುತ್ತಿದೆ ಎಂದೆನಿಸಿದೆಯೇ?
ದೇಮ; ಸಮಾಜ, ರಾಜಕಾರಣ ಏನೂ ಆಗಿಲ್ಲ. ಆದರೆ ಅದರಲ್ಲಿ ಇರುವವರು ಅನೈರ್ಮಲ್ಯಗೊಳಿಸುತ್ತಿದ್ದಾರೆ ಅಷ್ಟೆ. ಇವತ್ತು ಜನ ಪೂಜೆ ಮಾಡುತ್ತಿರುವುದು ಕಪ್ಪು ಹಣವನ್ನು. ಕಪ್ಪು ಹಣ ಎಲ್ಲಿರುತ್ತದೆಯೋ ಅದು ಪೂಜ್ಯಸ್ಥಳ ಆಗುತ್ತಿದೆ. ದುರಂತ ಅಂದ್ರೆ ಮಠಗಳು, ಕೆಲ ದೇವಾಲಯಗಳು ಕಪ್ಪು ಹಣದ ಪೂಜಾ ಸ್ಥಳಗಳಾಗಿ ಬಿಡುತ್ತಿವೆ. ಹಾಗಾಗಿ ಜನ, ರಾಜಕಾರಣಿಗಳು ಕಪ್ಪು ಹಣವನ್ನು ಪೂಜಿಸಲಿಕ್ಕೆ ಮುಗಿಬೀಳುತ್ತಿದ್ದಾರೆ. ಕಪ್ಪು ಹಣಕ್ಕೆ ಪೂಜಾ ಸ್ಥಾನ ಸಿಕ್ಕಿರುವುದರಿಂದ ಅದಕ್ಕೆ (ಕಪ್ಪು ಹಣ) ಮದ ನೆತ್ತಿಗೇರಿ ರಾಜಕೀಯ ನಡೆಸಲಿಕ್ಕೂ ಕೈ ಹಾಕುತ್ತಿದೆ.

ಪ್ರಶ್ನೆ; ಇದನ್ನು ತಡೆಯುವುದು ಹೇಗೆ?
ದೇಮ; ಸಿಂಪಲ್… ಕಪ್ಪು ಹಣ ದರ್ಬಾರ್ ಮಾಡುವುದನ್ನು ತಡೆಯುವುದು, ಆ ಶಕ್ತಿ ಜನರ ವಿವೇಕದಲ್ಲಿ ಇದೆ. ಜಾತ್ಯತೀತತೆ ಗುಣದಲ್ಲಿದೆ.

ಪ್ರಶ್ನೆ; ಬಿಜೆಪಿ ನಿಮಗೆ ಅಸಹನೀಯ ಏಕೆ?
ದೇಮ; ಹಿಂದಿನ ಎಲ್ಲಾ ಸರ್ಕಾರಗಳಲ್ಲೂ ಭ್ರಷ್ಟಾಚಾರ ಇತ್ತು. ಜಾತೀಯತೆಯೂ ಇರಲಿಲ್ಲ ಅಂತ ಅಲ್ಲ. ಆದರೆ ಅವು ಅಲ್ಪಸ್ವಲ್ಪ ನಾಚಿಕೆ ಪಟ್ಟುಕೊಂಡು ಒಳಗೊಳಗೆ ಮಾಡ್ತಾ ಇದ್ದವು. ಬಿಜೆಪಿಯವರು ನಾಚಿಕೆ ಬಿಟ್ಟು ಭಾರತಾಂಬೆ ಸೇವೆ ಅಂಥ ಭ್ರಷ್ಟಾಚಾರ, ಜಾತೀಯತೆ ಮಾಡ್ತಾ ಇದ್ದಾರೆ. ಸಂಕೋಚ, ಅಳುಕು ಏನೂ ಇಲ್ಲದೇ ಮಾಡ್ತಾ ಇದ್ದಾರೆ. ಇದನ್ನು ಸಾರ್ವಜನಿಕ ಜೀವನದಲ್ಲಿ ಯಾವ ಎಗ್ಗು ಇಲ್ಲದೇ ಅನುಸರಿಸಲಾಗುತ್ತಿದೆ ಎಂಬುದಕ್ಕೆ ಬೇಲೆಕೇರಿ ಪ್ರಕರಣ ಸಾಕ್ಷಿ. ಮೊದಲೂ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಆದರೆ ಬೇರೆ ಕಡೆ ಅಕ್ರಮ ಸಂಗ್ರಹಿಸುವುದನ್ನು ತಡೆಯುವ ಹೊಣೆ ಸರ್ಕಾರದ್ದು. ಅದರಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇದು ಯಾವ ಸರ್ಕಾರ? ಸರ್ಕಾರ ಇದೆಯೇ?

ಪ್ರಶ್ನೆ; ಅನಂತಕುಮಾರ್ ಅವರು ಸಿಎಂ ಆಗಿದ್ದರೆ ಭ್ರಷ್ಟಾಚಾರ ತಡೆಯುವುದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರಾ?
ದೇಮ; ಮುಖ್ಯಮಂತ್ರಿ ಯಡಿಯೂರಪ್ಪನವರು ಹುಂಬ ಮತ್ತು ಭ್ರಷ್ಟ. ಹಾಗಾಗಿ ಯಡಿಯೂರಪ್ಪ ತತ್‍ಕ್ಷಣದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಆದರೆ ಅನಂತಕುಮಾರ್ ಚಾಣಕ್ಷ. ಚಾಣಕ್ಷತನ ಮತ್ತು ಹುಂಬತನಗಳ ಪೈಕಿ ಹುಂಬತನ ಉತ್ತಮ ಆಗಬಹುದು.

ಪ್ರಶ್ನೆ; ಮಠಗಳ ಕಾರ್ಯವೈಖರಿ, ಮಠಾಧೀಶರ ನಡವಳಿಕೆ ಬಗ್ಗೆ ಟೀಕೆ, ಟಿಪ್ಪಣಿ ವ್ಯಕ್ತವಾಗುತ್ತಿದೆ. ನೀವು ಕೂಡ ಮಠಗಳನ್ನು ಟೀಕೆ ಮಾಡಿದ್ದೀರಿ.
ದೇಮ; ಹಿಂದೆ ನಡೆದಿದ್ದ ಘಟನೆ ಪ್ರಸ್ತಾಪ ಮಾಡಿ ಮಠಗಳನ್ನು ಟೀಕಿಸಿದ್ದೆ. ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡರು ಮಠಾಧೀಶರೊಬ್ಬರ ಜಯಂತಿ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ, ಭಗವತ್ಪಾದಕರು ಎಂದೇಳುವ ಬದಲು ಭಯೋತ್ಪಾದಕರು ಎಂದು ಸಂಬೋಧಿಸಿದರು. ಆಗ ಪಕ್ಕದಲ್ಲಿ ಇದ್ದವರು ಕಿವಿಯಲ್ಲಿ ನೀವು ಹೇಳುತ್ತಿರುವುದು ಸರಿಯಲ್ಲಾ ಎಂದು ಹೇಳಿದರು. ಆಗ ಗೌಡರು, ಗೊತ್ತು, ಗೊತ್ತು… ಅಂತ ಹೇಳಿ ಭಯೋತ್ಪಾದಕರು ಅಂತಲೇ ಹೇಳುತ್ತಿದ್ದರು. ಅವರಿಗೆ ಅರ್ಥ ಗೊತ್ತಿದ್ದರೂ ಬೇಕು ಅಂತ ಹೇಳುತ್ತಿದ್ದಾರೋ ಅಥವಾ ನನ್ನ ತರಹ ನಾಲಿಗೆ ಹೊರಳದೆ ಉಚ್ಚರಣೆಯಲ್ಲಿ ತಪ್ಪಾಗುತ್ತಿತ್ತೋ ನನಗೆ ಗೊತ್ತಿಲ್ಲ. ಆದರೆ ನನಗೆ ಆಶ್ಚರ್ಯ ಅಂದ್ರೆ… ಅವರ ನಾಲಿಗೆಯಲ್ಲಿ ಮಚ್ಚೆ ಇರಬಹುದೇನೋ ಅವರು ಹಿಂದೆ ಹೇಳಿದ್ದು ಈಗ ನಿಜ ಆಗುತ್ತಿದೆ!

ಪ್ರಶ್ನೆ; ಹೇಗೆ?
ದೇಮ; ಈಗ ಮಠಾಧೀಶರು ಆಡುತ್ತಿರುವ ಮಾತುಗಳು, ಅವರು ಹೊಂದಿರುವ ರಾಜಕೀಯ ನಂಟು, ಠೇಂಕಾರ ನೋಡಿದ್ರೇ ಭಯ ಆಗುತ್ತಿದೆ. ಆಸ್ತಿ ಒತ್ತುವರಿ ನೋಡಿದ್ರೇ ಭಯೋತ್ಪಾದಕತೆ ಕಾಣಿಸುತ್ತಿದೆ.

ಪ್ರಶ್ನೆ; ಭಾರತದಲ್ಲಿ ಇರುವ ಜಾತಿ ಪದ್ಧತಿ ನಿಜವಾದ ಭಯೋತ್ಪಾದನೆ ಅಲ್ಲವಾ?
ದೇಮ; ಜಾತಿಯ ಕಟ್ಟುಪಾಡು ಮುರಿಯುವ ವಾತಾವರಣ ನಿರ್ಮಾಣ ಆಗಬೇಕಾಗಿದೆ. ಜಾತಿ ಎಂಬ ಭೂತ, ರಕ್ತ ಕುಡಿಯಲು ಹಾತೊರೆಯುತ್ತಿದೆ. ಇದು ಹಿಂದೂ ಧರ್ಮದ ಅಂತರ್ಗತ ಭಯೋತ್ಪಾದನೆ. ಹಾಗಾಗಿ ಹಿಂದೂ ಧರ್ಮದಲ್ಲಿ ಧರ್ಮವೇ ಇಲ್ಲ. ಅಂಬೇಡ್ಕರ್ ಅವರನ್ನು ಹೆಚ್ಚಾಗಿ ದಲಿತರು ನೆನಪಿಸಿಕೊಳ್ಳುತ್ತಿದ್ದಾರೆ. ಆದರೆ ಬೆಳಗ್ಗೆ ಎದ್ದೊಡನೆ ಭಾರತದ ಎಲ್ಲಾ ಜಾತಿಯ ಮಹಿಳೆಯರು ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳಬೇಕು.

ಪ್ರಶ್ನೆ; ಏಕೆ?
ದೇಮ; ಮಹಿಳೆಯರು ತಾವು ಹೂ ಮುಡಿಯುವ ಮೊದಲು ಅಂಬೇಡ್ಕರ್ ಭಾವಚಿತ್ರಕ್ಕೊಂದು ಹೂ ಇಡಬೇಕು. ಮಹಿಳೆಯರ ಹಿತಾಸಕ್ತಿಗಾಗಿ ತನ್ನ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟವರು ಅಂಬೇಡ್ಕರ್. ಯಾವ ಮಹಿಳೆ ಮತ್ತು ನಾಯಕರೂ ಇಂಥ ದೃಢ ನಿರ್ಧಾರವನ್ನು ಮಹಿಳೆಯರ ಹಿತಕ್ಕಾಗಿ ತೆಗೆದುಕೊಂಡಿಲ್ಲ. ಮಹಿಳೆ ಆಸ್ತಿ ಹಕ್ಕು, ವಿಚ್ಛೇದನ ಹಕ್ಕು ಮತ್ತು ವಾರಸುದಾರರ ನಿರ್ಧಾರ ಇತ್ಯಾದಿಗಳ ಹಿಂದೂ ಕೋಡ್ ಬಿಲ್ ಅನ್ನು ಕಾನೂನು ಸಚಿವರಾಗಿ ತರಲಿಕ್ಕೆ ಅಂಬೇಡ್ಕರ್ ಪ್ರಯತ್ನಪಟ್ಟರು. ಅದಕ್ಕೆ ಯಥಾಸ್ಥಿತಿವಾದಿಗಳು ಅವಕಾಶ ಕೊಡದಿದ್ದಾಗ ಮಂತ್ರಿ ಸ್ಥಾನಕ್ಕೆ ಅಂಬೇಡ್ಕರ್ ರಾಜೀನಾಮೆ ನೀಡ್ತಾರೆ. ಅವತ್ತು ಅಂಬೇಡ್ಕರ್ ನೆಟ್ಟ ಬೀಜಗಳು ಮತ್ತು ಅವರ ತ್ಯಾಗದ ಫಲಗಳಿಂದಾಗಿ ಇಂದು ಮಹಿಳೆಯರಿಗೆ ಅನೇಕ ಸವಲತ್ತುಗಳು ಸಿಕ್ಕಿವೆ. ಜೊತೆಗೆ ಕಾರ್ಮಿಕರು ಇಂದು ಅನುಭವಿಸುತ್ತಿರುವ ಸವಲತ್ತುಗಳು ಅಂಬೇಡ್ಕರ್ ಪ್ರಯತ್ನದ ಫಲ. ಆದರೆ ಅಂಬೇಡ್ಕರ್ ಅವರನ್ನು ಮಹಿಳೆಯರು ಮತ್ತು ಕಾರ್ಮಿಕರು ನೆನಪಿಸಿಕೊಳ್ಳುವುದು ಕಂಡು ಬರುತ್ತಿಲ್ಲ. ಹೀಗೆ ಕೃತಜ್ಞತೆ ಇಲ್ಲದಿರುವುದು ಮತ್ತು ಎಚ್ಚರವಿಲ್ಲದ ದುಸ್ಥಿತಿ ಎಂದು ತಿಳಿಯುತ್ತದೆ.

ಪ್ರಶ್ನೆ; ಹಾಗಾದರೆ ಮಹಿಳೆಯರ ಹಿತಾಸಕ್ತಿಯ ನಿಜವಾದ ಹೋರಾಟಗಾರರು ಯಾರು?
ದೇಮ; ನನ್ನ ಪ್ರಕಾರ ವಚನಕಾರರು, ಜ್ಯೋತಿ ಬಾಫುಲೆ ಮತ್ತು ಅಂಬೇಡ್ಕರ್.

ಪ್ರಶ್ನೆ; ಅಣ್ಣ ಹಜಾರೆ ಅವರ ಹೋರಾಟ ಬಗ್ಗೆ…
ದೇಮ; ನಾನು ಏನೂ ಬೆಳಕು ಕಾಣದೇ ಕುಳಿತಿದ್ದೆ. ಏಕಂದ್ರೆ ಇಲ್ಲಿ ಹಣ ಮತದಾರರನ್ನು, ಮಂತ್ರಿಗಳನ್ನು ಮತ್ತು ಜನತಂತ್ರ ವ್ಯವಸ್ಥೆಯನ್ನು ಅಷ್ಟೇ ಏಕೆ ನ್ಯಾಯಾಂಗವನ್ನೂ ಕೊಂಡುಕೊಳ್ಳುವ ವಿದ್ಯಮಾನ ನಮ್ಮ ಕಣ್ಮುಂದೆ ನಡೆಯುತ್ತಿರುವುದು. ಇಷ್ಟಾದರೂ ವಿದ್ಯಾರ್ಥಿ ಯುವಜನತೆ ತಮಗೆ ಸಂಬಂಧವೇ ಇಲ್ಲ ಎಂಬಂತೆ ಇದ್ದಾರೆ. ಸಂಘಟನೆಗಳು ಜಡ ಮತ್ತು ದುರ್ಬಲ ಆಗುತ್ತಿರುವುದು. ಇಂಥ ಪರಿಸ್ಥಿತಿಯಲ್ಲಿ ಜನಲೋಕಪಾಲ ಮಸೂದೆಯ ಹೋರಾಟ ಭಾರತದುದ್ದಕ್ಕೂ ಗಾಳಿ ಬೀಸಿತು. ಇಲ್ಲಿ ಲೋಕಪಾಲ ಮಸೂದೆಗಿಂತಲೂ ಚೈತನ್ಯ ಮತ್ತು ಜೀವವಾಗಿ ಕಂಡಿದ್ದು ಮಹಿಳೆಯರು ಮತ್ತು ಯುವಜನತೆ ಸಮುದ್ರದ ಅಲೆಗಳಂತೆ ಎದ್ದು ಪ್ರತಿಕ್ರಿಯಿಸಿದ್ದು ನನಗೆ ದೊಡ್ಡ ಭರವಸೆ ಅನಿಸಿತು. ಸಮಯ ಬಂದರೆ ಮಕ್ಕಳು ತಮ್ಮ ರಾಜ್ಯವನ್ನು ಕಟ್ಟಿಕೊಳ್ಳಬಲ್ಲರು ಎಂಬ ದೊಡ್ಡ ಆಸೆ ಹುಟ್ಟಿಸಿದೆ.

ಪ್ರಶ್ನೆ; ಹಜಾರೆ ಅವರ ಭ್ರಷ್ಟಾಚಾರ ವಿರೋಧದಲ್ಲಿ ನೀವೇಕೆ ಭಾಗವಹಿಸುತ್ತಿಲ್ಲ?
ದೇಮ; ಕಳೆದ 3 ತಿಂಗಳಿನಿಂದ ಹಿರಿಯರಾದ ಎಚ್.ಎಸ್.ದೊರೆಸ್ವಾಮಿ, ಎ.ಕೆ.ಸುಬ್ಬಯ್ಯ, ಎಂ.ಎನ್.ವೆಂಕಟಾಚಲಯ್ಯ, ರಮೇಶ್‍ಕುಮಾರ್, ಪಾಟೀಲ ಪುಟ್ಟಪ್ಪ ಅವರಂಥ ಪ್ರಮುಖರೊಡನೆ ಸೇರಿ ಕರ್ನಾಟಕ ಜನಜಾಗೃತಿ ವೇದಿಕೆಯಡಿ ಹೋರಾಟ ಮಾಡುವ ಪ್ರಯತ್ನ ನಡೆದಿದೆ. ನಮ್ಮೆಲ್ಲರ ಬೆಂಬಲ ಅಣ್ಣ ಹಜಾರೆ ಅವರಿಗಿದೆ.

ಪ್ರಶ್ನೆ; ಏನ್ ಸಾರ್… ಇತ್ತ ಯಡಿಯೂರಪ್ಪನವರೂ ಭ್ರಷ್ಟಾಚಾರ ವಿರೋಧಿ ಅಂತಾರೆ. ಮಾಜಿ ಸಿ.ಎಂ. ಕುಮಾರಸ್ವಾಮಿ ಭ್ರಷ್ಟಾಚಾರದ ವಿರುದ್ಧ ರಣಕಹಳೆ ಊದುತ್ತೇನೆ ಅಂತಾರೆ. ಕಾಂಗ್ರೆಸ್ ಕೂಡ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡ್ತೀನಿ ಅನ್ನುತ್ತಿದೆ?
ದೇಮ; ಭ್ರಷ್ಟಾಚಾರದಿಂದ ಮಾಡಿದ ಹಣವನ್ನು ಭ್ರಷ್ಟಾಚಾರ ಉಚ್ಛಾಟನೆ ಮಾಡಲು ಬಳಸೋದಾದ್ರೆ ಸ್ವಾಗತ.

ಪ್ರಶ್ನೆ; ಪ್ರಸ್ತುತ ಎದ್ದು ಕಾಣುವ ಆತಂಕಗಳೇನು?
ದೇಮ; ಮಲಗಿರುವ ಜಾತಿ ಪದ್ಧತಿ, ಹಿಂದೂ ಭಯೋತ್ಪಾದನೆ, ಸಾಮಾಜಿಕ ಆಸ್ತಿ ಸಾರ್ವಜನಿಕರಿಗೆ ತಮ್ಮದಲ್ಲ ಅನ್ನಿಸಿರೋದು, ಜನತಂತ್ರ ವ್ಯವಸ್ಥೆ ಮಾರಾಟದ ಸರಕಾಗಿರುವುದು. ಅಭಿವೃದ್ಧಿ ಮತ್ತು ಸಮಾನತೆ ಎರಡೂ ಒಂದೇ ರಥದ ಚಕ್ರಗಳು ಎಂಬ ವಿವೇಕ ಇಲ್ಲದಿರುವುದು.